ಪೀಠಿಕೆ
ಪ್ರಪಂಚದ ಅತ್ಯಂತ ಹಳೆಯ ನಗರ ನಾಗರೀಕತೆಯಲ್ಲಿ ಸಿಂಧೂ ಕಣಿವೆ ನಾಗರಿಕತೆಯು ಒಂದಾಗಿದೆ. ಇದು ತನ್ನ ಜನರ ಮೌಲ್ಯಗಳು ಮತ್ತು ಕಾಳಜಿಗಳನ್ನು ಪ್ರತಿಬಿಂಬಿಸುವ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳಿಂದ ಶ್ರೀಮಂತವಾಗಿದೆ. ನಾವು ಮಾತೃ ದೇವತೆ, ಪಶುಪತಿ, ಪ್ರಕೃತಿಯ ಆರಾಧನೆಗಳು ಮತ್ತು ಶವ ಸಂಸ್ಕಾರ ಪದ್ಧತಿಗಳ ಮೂಲಕ ಅವರ ಧಾರ್ಮಿಕ ಜೀವನದ ಮಹತ್ವದ ಅಂಶಗಳನ್ನು ತಿಳಿಯುತ್ತೇವೆ.
ಧಾರ್ಮಿಕ ಜೀವನದ ಪ್ರಮುಖ ಅಂಶಗಳು
- ಮಾತೃದೇವತೆಯ ಆರಾಧನೆ
ಮಾತೃದೇವತೆ ಸಿಂಧೂ ಜನರ ಪ್ರಧಾನ ಆರಾಧನಾ ದೇವತೆಯಾಗಿದ್ದಿತು. ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿ ದೊರೆತಿರುವ ಸ್ತ್ರೀಮೂರ್ತಿಗಳು ಇದನ್ನು ಪುಷ್ಠಿಕರಿಸುತ್ತಿವೆ. ಮಾತೃದೇವತೆಯನ್ನು ಇವರು ಶಕ್ತಿ, ದುರ್ಗಿ, ಅಮ್ಮ ಹಾಗೂ ಅಂಬೆ ಎಂಬ ವಿವಿಧ ಹೆಸರುಗಳಿಂದ ಪೂಜಿಸುತ್ತಿದ್ದರು. ಮಾತೃ ದೇವತೆಯ ಆರಾಧನೆ, ಫಲವತ್ತತೆ ಮತ್ತು ಮಾತೃತ್ವದ ಸಂಕೇತವಾಗಿ ಪೂಜಿಸಲ್ಪಟ್ಟಿದೆ. ಈ ಆರಾಧನೆಯು ಅವರ ಸಮಾಜದಲ್ಲಿ ಮಹಿಳೆಯರ ಮಹತ್ವದ ಪಾತ್ರವನ್ನು ತೋರಿಸುತ್ತದೆ.
- ಪಶುಪತಿಯ ಆರಾಧನೆ
ಸಿಂಧೂ ಕಣಿವೆಯ ಧಾರ್ಮಿಕ ಆಚರಣೆಗಳಲ್ಲಿ ಪ್ರಮುಖ ವ್ಯಕ್ತಿ ಪಶುಪತಿ, ಆಗಾಗ್ಗೆ ಯೋಗಿ ಎಂದು ಚಿತ್ರಿಸಲಾಗಿದೆ. ಹರಪ್ಪಾ, ಮೊಹೆಂಜೋದಾರೋ ಮತ್ತು ಕಾಲಿಬಂಗನ್ನ ಮುದ್ರೆಗಳು ಪದ್ಮಾಸನದಲ್ಲಿ ಕುಳಿತಿರುವ ಮೂರು ಕೊಂಬಿನ ಯೋಗಿಯ ಚಿತ್ರಗಳನ್ನು ಬಹಿರಂಗಪಡಿಸುತ್ತವೆ. ಈ ಯೋಗಿಯು ತಲೆಯಲ್ಲಿ ಮೂರು ಕೊಂಬುಗಳನ್ನು ಹೊಂದಿದ್ದು ಕೈಯಲ್ಲಿ ತ್ರಿಶೂಲ ಹಾಗೂ ನಾಲ್ಕು ಕೈಗಳಿವೆ. .ಯೋಗಿಯ ಸುತ್ತಲೂ ವಿವಿಧ ಪ್ರಾಣಿಗಳು ಸುತ್ತುವರಿದಿದೆ. ವಿದ್ವಾಂಸರು ಈ ಯೋಗಿಯನ್ನು ʻಪಶುಪತಿ’ ಅಥವಾ ʻತ್ರಿಮೂರ್ತಿ’ ಎಂದು ಉಲ್ಲೇಖಿಸಿದ್ದಾರೆ.
- ಪ್ರಕೃತಿ ಮತ್ತು ಪ್ರಾಣಿಗಳ ಆರಾಧನೆ
ಸಿಂಧೂ ಜನರು ಪ್ರಕೃತಿ ಹಾಗೂ ಪ್ರಾಣಿಗಳ ಆರಾಧಕರಾಗಿದ್ದರು. ಅವರು ಅವುಗಳ ಬಗ್ಗೆ ಆಳವಾದ ಗೌರವವನ್ನು ಹೊಂದಿದ್ದರು, ಅವರು ಬೆಂಕಿ, ನದಿಗಳು, ಭೂಮಿ ಮತ್ತು ಆಕಾಶವನ್ನು ಪ್ರತಿನಿಧಿಸುವ ವಿವಿಧ ನೈಸರ್ಗಿಕ ದೇವತೆಗಳನ್ನು ಸಾಮಾನ್ಯವಾಗಿ ಭಯ ಮತ್ತು ಭಕ್ತಿಯ ಮಿಶ್ರಣದಿಂದ ಪೂಜಿಸಿದರು. ಗೂಳಿಯನ್ನು ಪವಿತ್ರವೆಂದು ಪರಿಗಣಿಸಿದ್ದರು. ಇದು ಶಕ್ತಿ ಮತ್ತು ಫಲವತ್ತತೆಯನ್ನು ಸಂಕೇತಿಸುತ್ತದೆ. ಪಾರಿವಾಳಗಳಂತಹ ಪಕ್ಷಿಗಳು ಸಹ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದ್ದವು, ಜೊತೆಗೆ ಅಶ್ವತ್ಥ ಮರವನ್ನು ಪವಿತ್ರ ಮರವೆಂದು ನಂಬಿದ್ದರು. ಇದು ಪ್ರಾಣಿಗಳು ಮತ್ತು ಪ್ರಕೃತಿಯೊಂದಿಗೆ ನಾಗರಿಕತೆಯ ಆಳವಾದ ಸಂಬಂಧವನ್ನು ಸೂಚಿಸುತ್ತದೆ, ಅಲ್ಲದೇ ಆಧ್ಯಾತ್ಮಿಕ ಅರ್ಥವನ್ನು ದ್ವನಿಸುತ್ತದೆ.
- ಶವಸಂಸ್ಕಾರದ ಆಚರಣೆಗಳು
ಸಿಂಧೂ ಕಣಿವೆ ನಾಗರಿಕತೆಯ ಜನರು ವಿಶಿಷ್ಟವಾದ ಶವಸಂಸ್ಕಾರ ಪದ್ಧತಿಗಳನ್ನು ಹೊಂದಿದ್ದರು. ಇದು ಜೀವನ, ಸಾವು ಮತ್ತು ಮರಣಾನಂತರದ ಜೀವನದ ಬಗ್ಗೆ ಅವರ ನಂಬಿಕೆಗಳನ್ನು ಪ್ರದರ್ಶಿಸುತ್ತದೆ. ಹರಪ್ಪಾದಲ್ಲಿ ಮಾರ್ಟಿಮರ್ ವೀಲರ್ ನೇತೃತ್ವದ ಉತ್ಖನನವು ಸತ್ತವರ ಸಂಸ್ಕಾರದ ಬಗ್ಗೆ ಅವರು ಅನುಸರಿಸುತ್ತಿದ್ದ ವಿವಿಧ ವಿಧಾನಗಳನ್ನು ತಿಳಿಸುತ್ತದೆ. ಇಲ್ಲಿ ಸುಮಾರು 67 ಗೋರಿಗಳನ್ನು ಉತ್ಕನನ ಮಾಡಿದ್ದು ಪ್ರತಿಯೊಂದು ಅಭ್ಯಾಸ ಯೋಗ್ಯವಾಗಿದೆ.
- ಸತ್ತನಂತರ ದೇಹಗಳನ್ನು ರಣಹದ್ದುಗಳು ಮತ್ತು ಕಾಗೆಗಳಿಗೆ ತಿನ್ನಲು ಬಿಡುತ್ತಿದ್ದರು. ಉಳಿದ ಮೂಳೆಗಳನ್ನು ನಂತರ ಸಮಾಧಿ ಮಾಡುತ್ತಿದ್ದರು.
- ಮತ್ತೆ ಕೆಲವು ಶವಗಳನ್ನು ಸುಡುತಿದ್ದರು. ಅದರ ಚಿತಾಭಸ್ಮವನ್ನು ಮಡಿಕೆಯಲ್ಲಿ ಇರಿಸಿ ನಂತರ ಅದನ್ನು ಸಮಾಧಿಯಲ್ಲಿ ಹೂಳುತ್ತಿದ್ದರು.
- ಕೆಲವು ದೇಹಗಳನ್ನು ಸಮಾಧಿ ಮಾಡುತ್ತಿದ್ದು, ನಂತರ ನಿರ್ದಿಷ್ಟ ವಿಧಿವಿಧಾನಗಳ ಪ್ರಕಾರ ದಹನ ಮಾಡುತ್ತಿದ್ದರು. ಒಂದೇ ಸಮಾಧಿಯಲ್ಲಿ ಎರಡು ದೇಹಗಳನ್ನು ಸುಡುವ ನಿದರ್ಶನಗಳನ್ನು ಲೋಥಾಲ್ನಲ್ಲಿ ಗಮನಿಸಬಹುದು.
ಈ ಅಭ್ಯಾಸಗಳು ಸಾವಿನ ಸಂಕೀರ್ಣ ತಿಳುವಳಿಕೆಯನ್ನು ಮತ್ತು ಮರಣಾನಂತರದ ಜೀವನದ ಬಗ್ಗೆ ಅವರ ನಂಬಿಕೆಯನ್ನು ಪ್ರತಿಬಿಂಬಿಸುತ್ತವೆ.
ಉಪಸಂಹಾರ
ಸಿಂಧೂ ಕಣಿವೆ ನಾಗರಿಕತೆಯ ಧಾರ್ಮಿಕ ಜೀವನವು ಪ್ರಕೃತಿಯೊಂದಿಗೆ ಆಳವಾಗಿ ಬೇರೂರಿರುವ ಸಂಪರ್ಕವನ್ನು ಪ್ರತಿಬಿಂಬಿಸುತ್ತದೆ. ಮಾತೃ ದೇವತೆ ಮತ್ತು ಪಶುಪತಿಯಂತಹ ದೇವತೆಗಳ ಆರಾಧನೆ ಮತ್ತು ಸಂಕೀರ್ಣ ಸಮಾಧಿ ಆಚರಣೆಗಳ ಮೂಲಕ ಅವರ ಧಾರ್ಮಿಕ ಜೀವನದ ವಿವಿಧ ಮಗ್ಗಲುಗಳ ಪರಿಚಯವಾಗುತ್ತದೆ. ಜೊತೆಗೆ ಇತಿಹಾಸದ ಅತ್ಯಂತ ಆಕರ್ಷಕ ಸಂಸ್ಕೃತಿಗಳ ಧಾರ್ಮಿಕ ಆಧ್ಯಾತ್ಮಿಕ ಪ್ರಪಂಚದ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಪಡೆಯುತ್ತೇವೆ.
CSS to this text in the module Advanced settings.