ಸಂಪ್ರದಾಯ ಪಂಥದ ಅರ್ಥಶಾಸ್ತ್ರ ಎಂಬ ಪದವನ್ನು ಮೊದಲ ಬಾರಿಗೆ ಕಾರ್ಲಮಾರ್ಕ್ಸ್ ರವರು ಉಪಯೋಗಿಸಿದರು. ಇವರ ಪ್ರಕಾರ ಡೇವಿಡ್ ರಿಕಾರ್ಡೋ ಮತ್ತು ಆತನಿಗಿಂತ ಹಿಂದಿನ ಅರ್ಥಶಾಸ್ತ್ರಜ್ಞರು ಸಂಪ್ರದಾಯ ಪಂಥಕ್ಕೆ ಸೇರುತ್ತಾರೆ. ಕಾರಣ ಅರ್ಥಶಾಸ್ತ್ರದ ತತ್ವಗಳನ್ನು ಇವರು ಮೊದಲ ಬಾರಿಗೆ ಪ್ರತಿಪಾದಿಸಿದ್ದು. ಇವರ ತತ್ವಗಳು ಒಂದಕ್ಕೊಂದು ಪೂರಕವು, ಹೋಲಿಕಾತ್ಮಕವಾಗಿಯೂ ಇರುವುದರಿಂದ ಇವರ ಅಭಿಪ್ರಾಯ ಮತ್ತು ಸಿದ್ಧಾಂತಗಳು ಸಂಪ್ರದಾಯಪಂಥದ ಸಿದ್ಧಾಂತಗಳೆಂದು ಕರೆಯಲ್ಪಡುತ್ತದೆ. ಆದರೆ ಜೆ.ಎಂ. ಕೇನ್ಸರವರು ಡೇವಿಡ್ ರಿಕಾರ್ಡೋ, ಜೆ.ಎಸ್. ಮಿಲ್. ಜೆ.ಬಿ. ಸೇ. ವಿಲಿಯಮ್ ಸೀನಿಯರ್, ಟಿ.ಆರ್.ಮಾಲ್ವಸ್ ಇವರುಗಳ ಜೊತೆಗೆ ಆಲೆಡ್ ಮಾರ್ಷಲ್, ಎ.ಸಿ.ಪಿಗು ಮುಂತಾದವರನ್ನು ಈ ಗುಂಪಿಗೆ ಸೇರಿಸಿ ಇವರುಗಳು ಪ್ರತಿಪಾದಿಸಿದ ತತ್ವಗಳು ಸಂಪ್ರದಾಯ ಪಂಥದ ತತ್ವಗಳು ಎಂದು ಕರೆಯುತ್ತಾರೆ.
ಸಂಪ್ರದಾಯ ಪಂಥದ ಅರ್ಥಶಾಸ್ತ್ರಜ್ಞರು ತಮ್ಮ ಆರ್ಥಿಕ ತತ್ವಗಳನ್ನು ವಿವೇಚಿಸುವಲ್ಲಿ ಈ ಕೆಳಗಿನ ಊಹೆಗಳನ್ನು ಮಾಡಿಕೊಂಡಿದ್ದಾರೆ.
1.ಪೂರ್ಣೋದ್ಯೋಗ:-
ಅಂದರೆ ಆರ್ಥಿಕತೆಯಲ್ಲಿ ಶ್ರಮ ಮತ್ತು ಸಂಪನ್ಮೂಲಗಳು ಸಂಪೂರ್ಣವಾಗಿ ಉತ್ಪಾದನೆಯಲ್ಲಿ ತೊಡಗಿರುತ್ತವೆ. ಆದ್ದರಿಂದಲೇ ನಿರುದ್ಯೋಗ ಮತ್ತು ಉತ್ಪಾದನೆಯ ಹೆಚ್ಚಳ ಸಾಧ್ಯವಿಲ್ಲ.
2.ಮುಕ್ತ ವ್ಯಾಪಾರ ನೀತಿ ಮತ್ತು ಸರಕಾರ ತಟಸ್ಥ ನೀತಿ:-
ಸಂಪ್ರದಾಯ ಪಂಥದ ಅರ್ಥಶಾಸ್ತ್ರಜ್ಞರು ಸರ್ಕಾರವು ಆರ್ಥಿಕ ಚಟುವಟಿಕೆಗಳಲ್ಲಿ ಯಾವುದೇ ರೀತಿಯ ಹಸ್ತಕ್ಷೇಪವನ್ನು ಮಾಡದೆ ತಟಸ್ಥ ನೀತಿಯನ್ನು ಅನುಸರಿಸುತ್ತದೆ ಹಾಗೂ ಸರ್ಕಾರವು ಮುಕ್ತ ವ್ಯಾಪಾರ ನೀತಿಯನ್ನು ಅನುಸರಿಸುತ್ತದೆ ಎಂದು ನಂಬಿರುತ್ತಾರೆ.
3.ಪರಿಪೂರ್ಣ ಪೈಪೋಟಿ:-
ಆರ್ಥಿಕತೆಯಲ್ಲಿ ಪೂರ್ಣೋದ್ಯೋಗ ಮತ್ತು ಮುಕ್ತ ವ್ಯಾಪಾರ ನೀತಿ ಇರುವುದರಿಂದ ಪೈಪೋಟಿಯು ಪರಿಪೂರ್ಣವಾಗಿರುತ್ತದೆ ಎಂದು ಸಂಪ್ರದಾಯ ಪಂಥದ ಅರ್ಥಶಾಸ್ತ್ರಜ್ಞರು ಭಾವಿಸಿದ್ದರು.
4.ಉಳಿತಾಯ ಮತ್ತು ಹೂಡಿಕೆಯ ಸಮಾನತೆ:-
ಅರ್ಥವ್ಯವಸ್ಥೆಯಲ್ಲಿ ಉಳಿತಾಯ ಮತ್ತು ಹೂಡಿಕೆಗಳು ಒಂದಕ್ಕೊಂದು ಪರಿಪೂರ್ಣವಾಗಿ ಸಮಾನವಾಗಿರುತ್ತವೆ ಎಂದು ಸಂಪ್ರದಾಯ ಪಂಥದವರು ನಂಬಿದ್ದರು. ಅವರ ಅಭಿಪ್ರಾಯದಲ್ಲಿ ಬಡ್ಡಿಯ ದರವು ಉಳಿತಾಯ ಮತ್ತು ಹೂಡಿಕೆಗಳ ನಡುವೆ ಸಮತೋಲನವನ್ನು ಏರ್ಪಡಿಸುವ ಅಂಶವಾಗಿದೆ.
5.ಸೇನ ಮಾರುಕಟ್ಟೆಯ ನಿಯಮ:-
ಸೇನ ನಿಯಮದ ಪ್ರಕಾರ ಪೂರೈಕೆಯು ತನ್ನದೆ ಆದ ಬೇಡಿಕೆಯನ್ನು ಸೃಷ್ಟಿಸುತ್ತದೆ. ಸಂಪ್ರದಾಯ ಪಂಥದ ಅರ್ಥಶಾಸ್ತ್ರವು ಈ ನಿಯಮದ ಮೇಲೆ ಆಧಾರಿತವಾಗಿದೆ.
6.ಬೆಲೆ ಮತ್ತು ಕೂಲಿಯ ನಮ್ಯತೆ:-
ಬೆಲೆ ಮತ್ತು ಕೂಲಿಯ ದರಗಳು ಸುಲಭವಾಗಿ ಬದಲಾಗುವ ಪ್ರವೃತ್ತಿಯನ್ನು ಹೊಂದಿರುವುದರಿಂದ ಪೂರ್ಣ ಉದ್ಯೋಗವನ್ನು ಸುಲಭವಾಗಿ ಸ್ಥಾಪಿಸಬಹುದು ಎಂಬುದು ಸಂಪ್ರದಾಯ ಪಂಥದವರ ನಂಬಿಕೆಯಾಗಿದೆ.
7.ನೈಜ ಅಂಶಗಳು:-
ಸಂಪ್ರದಾಯ ಪಂಥದ ಅರ್ಥಶಾಸ್ತ್ರಜ್ಞರು ಹಣರೂಪಿ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳದೆ ಕೇವಲ ನೈಜ ಅಂಶಗಳನ್ನು ಪರಿಗಣಿಸಿದ್ದಾರೆ.
ಸಂಪ್ರದಾಯ ಪಂಥದ ಉಳಿತಾಯ ಮತ್ತು ಹೂಡಿಕೆ ಸಿದ್ಧಾಂತ
ಈ ಸಿದ್ಧಾಂತವನ್ನು ಬಡ್ಡಿದರದ ಸಿದ್ದಾಂತ ಎಂದು ಕರೆಯಲಾಗುತ್ತದೆ. ಏಕೆಂದರೆ ಈ ಸಿದ್ದಾಂತದ ಮೇರೆಗೆ ಉಳಿತಾಯ ಮತ್ತು ಹೂಡಿಕೆಗಳ ಸಮತೋಲನದಿಂದ ಬಡ್ಡಿದರವು ನಿರ್ಧಾರವಾಗುತ್ತದೆ. ಸಂಪ್ರದಾಯ ಪಂಥದ ಅರ್ಥಶಾಸ್ತ್ರಜ್ಞರ ಅಭಿಪ್ರಾಯದಲ್ಲಿ ಬಡ್ಡಿದರವು ಬಂಡವಾಳನಿಧಿಗಳ ಉಪಯೋಗಕ್ಕಾಗಿ ಸಂದಾಯ ಮಾಡುವ ಬೆಲೆಯಾಗಿದೆ. ಇತರ ಯಾವುದೇ ಬೆಲೆಗಳಂತೆಯೇ ಬಡ್ಡಿದರವು ಸಹ ಬಂಡವಾಳದ ಬೇಡಿಕೆ ಮತ್ತು ಪೂರೈಕೆಯ ಒತ್ತಡಗಳಿಂದ ನಿರ್ಧಾರವಾಗುತ್ತದೆ.
ಬಂಡವಾಳದ ಬೇಡಿಕೆ
ಹೂಡಿಕೆಯ ಉದ್ದೇಶಕ್ಕಾಗಿ ಬಂಡವಾಳಕ್ಕೆ ಬೇಡಿಕೆ ಇರುತ್ತದೆ. ಹೂಡಿಕೆದಾರರು ವ್ಯಕ್ತಿಗಳಾಗಿರಬಹುದು, ಸಂಸ್ಥೆಗಳಾಗಿರಬಹುದು ಅಥವಾ ಸರ್ಕಾರವೇ ಆಗಿರಬಹುದು. ಬಂಡವಾಳದ ಬೇಡಿಕೆ ಮತ್ತು ಬಡ್ಡಿಯ ದರ ವ್ಯತಿರಿಕ್ತ ಸಂಬಂಧವನ್ನು ಹೊಂದಿವೆ. ಅಂದರೆ ಕಡಿಮೆ ಬಡ್ಡಿದರದಲ್ಲಿ ಅಧಿಕ ಮೊತ್ತದ ಬಂಡವಾಳಕ್ಕೆ ಬೇಡಿಕೆ ಇರುತ್ತದೆ ಮತ್ತು ಹೆಚ್ಚಿನ ಬಡ್ಡಿ ದರದಲ್ಲಿ ಕಡಿಮೆ ಬೇಡಿಕೆ ಇರುತ್ತದೆ. ಹೂಡಿಕೆ ಮಾಡಲಾದ ಬಂಡವಾಳಕ್ಕೆ ದೊರೆಯುವ ಪ್ರತಿಫಲವು ಇಳಿಮುಖ ಪ್ರತಿಫಲ ನಿಯಮಕ್ಕೆ ಒಳಪಟ್ಟಿರುವುದರಿಂದ ಬಂಡವಾಳವು ಕಡಿಮೆ ಬಡ್ಡಿ ದರದಲ್ಲಿ ದೊರೆಯುವಂತಿದ್ದರೆ ಮಾತ್ರ ಬಂಡವಾಳದಾರರು ಹೂಡಿಕೆಯನ್ನು ಕೈಗೊಳ್ಳಲು ಮುಂದಾಗುತ್ತಾರೆ. ಬಂಡವಾಳದ ಸೀಮಾಂತ ಉತ್ಪಾದಕತೆಯು ಬಡ್ಡಿದರಕ್ಕೆ ಸಮನಾದ ಹಂತದಲ್ಲಿ ಉದ್ಯಮಿಗಳು ಬಂಡವಾಳಕ್ಕೆ ಬೇಡಿಕೆಯನ್ನು ನಿಲ್ಲಿಸುತ್ತಾರೆ. ಏಕೆಂದರೆ ಆ ಬಳಿಕವು ಅವರು ಹೂಡಿಕೆಯನ್ನು ಕೈಗೊಂಡರೆ ದೊರೆಯುವ ಪ್ರತಿಫಲಕ್ಕಿಂತ ಬಡ್ಡಿಯ ದರವು ಅಂದರೆ ವೆಚ್ಚವು ಅಧಿಕವಾಗುವುದರಿಂದ ನಷ್ಟವು ಉಂಟಾಗುತ್ತವೆ.
ಬಂಡವಾಳದ ನೀಡಿಕೆ
ಬಂಡವಾಳದ ಪೂರೈಕೆಯು ಉಳಿತಾಯಗಾರರಿಂದ ನಡೆಯುತ್ತವೆ. ವ್ಯಕ್ತಿಗಳು, ಸಂಸ್ಥೆಗಳು, ಬ್ಯಾಂಕುಗಳು ಮತ್ತು ಸರ್ಕಾರ ಹಣವನ್ನು ಉಳಿತಾಯ ಮಾಡಿ ಬಂಡವಾಳವನ್ನು ಪೂರೈಕೆ ಮಾಡುತ್ತವೆ. ಬಡ್ಡಿಯ ದರವು ಅಧಿಕವಾಗಿರುವಾಗ ಹೆಚ್ಚಿನ ಪ್ರಮಾಣದಲ್ಲಿ ಉಳಿತಾಯಗಳನ್ನು ಮಾಡಲಾಗುತ್ತದೆ ಮತ್ತು ಬಡ್ಡಿಯ ದರವು ಕಡಿಮೆ ಇರುವಾಗ ಉಳಿತಾಯವು ಕಡಿಮೆಯಾಗುತ್ತದೆ.
ಬಂಡವಾಳದ ಬೇಡಿಕೆ ಮತ್ತು ಪೂರೈಕೆಗಳ ಸಮತೋಲನ
ಬಂಡವಾಳದ ಬೇಡಿಕೆ ಮತ್ತು ಪೂರೈಕೆಯ ಸಮತೋಲನವನ್ನು ಒಂದು ರೇಖಾಚಿತ್ರದ ಮೂಲಕ ತಿಳಿದುಕೊಳ್ಳಬಹುದು.
ರೇಖಾಚಿತ್ರದಲ್ಲಿ OX ಅಕ್ಷದಲ್ಲಿ ಬಂಡನಾಳದ ಬೇಡಿಕೆ ಮತ್ತು ಪೂರೈಕೆಯನ್ನು ಮತ್ತು OY ಅಕ್ಷದಲ್ಲಿ ಬಡ್ಡಿದರವನ್ನು ಅಳೆಯಲಾಗಿದೆ. II ಮತ್ತು SS ರೇಖೆಗಳು ಕ್ರಮವಾಗಿ ಹೂಡಿಕೆ ಮತ್ತು ಉಳಿತಾಯದ ರೇಖೆಗಳಾಗಿವೆ. ಉಳಿತಾಯ ಮತ್ತು ಹೂಡಿಕೆಯ ಮಟ್ಟ ಬಡ್ಡಿ ದರವನ್ನು ಅವಲಂಬಿಸಿದೆ. ಆದ್ದರಿಂದ ಬಡ್ಡಿದರವು ಇವುಗಳೆರಡನ್ನು ನಿರ್ಧರಿಸುವ ಅಂಶವಾಗಿದೆ. OR ಸಮತೋಲನದ ಬಡ್ಡಿಯ ದರ ಅಥವಾ ಸಹಜ ಬಡ್ಡಿಯ ದರ ಆಗಿರುತ್ತದೆ. ಬಂಡವಾಳದ ಬೇಡಿಕೆಯ ಮತ್ತು ಪೂರೈಕೆಯ ರೇಖೆಗಳು E ಬಿಂದುವಿನಲ್ಲಿ ಸಂಧಿಸಿರುವುದರಿಂದ OR ಸಮತೋಲನದ ಬಡ್ಡಿಯ ದರ ಮತ್ತು ON ಸಮತೋಲನದ ಬಂಡವಾಳದ ಪೂರೈಕೆ ಮತ್ತು ಬೇಡಿಕೆ ಆಗಿವೆ. ಉಳಿತಾಯ ಮತ್ತು ಹೂಡಿಕೆಯ ಸಮತೋಲನವು ಉದ್ಯಮ ಸ್ಥಿಮಿತತೆ ಮತ್ತು ಪೂರ್ಣೋದ್ಯೋಗ ಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ.
ಬಡ್ಡಿಯ ದರವು OR, ಗೆ ಏರಿದಾಗ ಬಂಡವಾಳದ ಬೇಡಿಕೆಯ ಪ್ರಮಾಣವು ONಗೆ ಇಳಿಯುತ್ತದೆ ಮತ್ತು ಬಂಡವಾಳದ ಪೂರೈಕೆಯ ಪ್ರಮಾಣವು ONಗೆ ಅಧಿಕಗೊಳ್ಳುತ್ತದೆ. ಅಂದರೆ ಬಡ್ಡಿಯ ದರದ ಹೆಚ್ಚಳದೊಡನೆ ಹೂಡಿಕೆಗಾಗಿ ಬಂಡವಾಳದ ಬೇಡಿಕೆಯು ಬಂಡವಾಳದ ಪೂರೈಕೆಗಿಂತ ಕಡಿಮೆ ಇರುತ್ತದೆ. ತದ್ವಿರುದ್ಧವಾಗಿ, ಬಡ್ಡಿಯ ದರವು OR, ಗೆ ಕುಸಿದಾಗ ಬಂಡವಾಳದ ಬೇಡಿಕೆಯು ON ಪ್ರಮಾಣಕ್ಕೆ ವಿಸ್ತರಿಸುತ್ತದೆ ಮತ್ತು ಬಂಡವಾಳದ ಪೂರೈಕೆಯು ON, ಮಟ್ಟಕ್ಕೆ ಇಳಿಯುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಬಡ್ಡಿಯ ದರದ ಕುಸಿತದೊಡನೆ ಹೂಡಿಕೆಗಾಗಿ ಬಂಡವಾಳದ ಬೇಡಿಕೆಯು ಬಂಡವಾಳದ ಪೂರೈಕೆಯ ಪ್ರಮಾಣಕ್ಕಿಂತ ಜಾಸ್ತಿಯಾಗುತ್ತದೆ. ಆ ಪ್ರಕಾರ, ಸಮತೋಲನದ ಬಡ್ಡಿಯ ದರದಲ್ಲಿ ಮಾತ್ರ ಉಳಿತಾಯ ಮತ್ತು ಹೂಡಿಕೆಯ ಸಮತೋಲನ ನೆಲೆಸುತ್ತದೆ. ಆ ಮೇರೆಗೆ ಈ ಮೇಲಿನ ರೇಖಾಚಿತ್ರದ ಮೂಲಕ ತಿಳಿದು ಬರುವ ಅಂಶವೇನೆಂದರೆ ಬಡ್ಡಿದರವು ಹೆಚ್ಚಿದಂತೆಲ್ಲಾ ಉಳಿತಾಯವು ಹೆಚ್ಚುತ್ತದೆ ಹಾಗೂ ಹೂಡಿಕೆಯು ಕಡಿಮೆಯಾಗುತ್ತದೆ. ಇದಕ್ಕೆ ಕಾರಣವೇನೆಂದರೆ ಬಡ್ಡಿದರದ ಹೆಚ್ಚಳವು ಉಳಿತಾಯಗಾರರಿಗೆ ಹೆಚ್ಚು ಆದಾಯವನ್ನು ಸೃಷ್ಟಿಸುವುದರಿಂದ ಉಳಿತಾಯಗಾರರು ಹೆಚ್ಚು ಉಳಿಸಲು ಯತ್ನಿಸುತ್ತಾರೆ. ಆದರೆ ಹೂಡಿಕೆದಾರರಿಗೆ ಇದು ಹೆಚ್ಚು ವೆಚ್ಚದಾಯಕವಾದುದರಿಂದ ಉಳಿತಾಯದ ಬೇಡಿಕೆ ಕಡಿಮೆಯಾಗುತ್ತದೆ. ಆದುದರಿಂದ ಉಳಿತಾಯವು ಹೂಡಿಕೆಗಿಂತ ಹೆಚ್ಚಿರುತ್ತದೆ. ಹೀಗೆ ಉಳಿತಾಯ ಮತ್ತು ಹೂಡಿಕೆಗಳ ನಡುವೆ ಅಸಮತೋಲನ ಉಂಟಾಗುತ್ತದೆ. ಅದೇ ರೀತಿ ಬಡ್ಡಿದರ ಕಡಿಮೆಯಾದರೆ ಹೂಡಿಕೆ ಹೆಚ್ಚಾದರೂ ಉಳಿತಾಯ ಹೆಚ್ಚುವುದಿಲ್ಲ. ಏಕೆಂದರೆ ಬಡ್ಡಿದರವು ಕಡಿಮೆ ಇರುವಾಗ ಜನರು ಕಡಿಮೆ ಪ್ರಮಾಣದಲ್ಲಿ ಉಳಿತಾಯ ಮಾಡುತ್ತಾರೆ. ಆದರೆ ಹೂಡಿಕೆದಾರರಿಗೆ ಇದು ಲಾಭದಾಯಕವಾದುದರಿಂದ ಹೆಚ್ಚು ಹೆಚ್ಚು ಉಳಿತಾಯದ ಹಣಕ್ಕಾಗಿ ಬೇಡಿಕೆ ಮಾಡತೊಡಗುತ್ತಾರೆ. ಪರಿಣಾಮವಾಗಿ ಉಳಿತಾಯ ಮತ್ತು ಹೂಡಿಕೆಗಳ ನಡುವೆ ಅಸಮತೋಲನ ಉಂಟಾಗುತ್ತದೆ. ಬಡ್ಡಿಯ ದರದಲ್ಲಿ ಸೂಕ್ತ ಬದಲಾವಣೆ ತರುವ ಮೂಲಕ ಈ ಅಸಮತೋಲವನ್ನು ನಿವಾರಿಸಬಹುದಾಗಿದೆ. ಆದ್ದರಿಂದ S=f(r), ಅಂದರೆ ಉಳಿತಾಯವು ಬಡ್ಡಿದರದ ಕ್ರಿಯೆಯಾಗಿದೆ. ಹಾಗೆಯೇ I=f(r), ಅಂದರೆ ಹೂಡಿಕೆಯು ಬಡ್ಡಿದರದ ಒಂದು ಕ್ರಿಯೆಯಾಗಿದೆ. ಹೀಗೆ ಉಳಿತಾಯ ಮತ್ತು ಹೂಡಿಕೆಗಳು ಬಡ್ಡಿದರದ ಕ್ರಿಯೆಗಳಾಗಿದ್ದು ಇವುಗಳ ನಡುವಿನ ಸಮತೋಲನವನ್ನು ಬಡ್ಡಿದರವು ನಿರ್ಧರಿಸುತ್ತದೆ.
ನಿರುದ್ಯೋಗಕ್ಕೆ ಸಂಪ್ರದಾಯ ಪಂಥದವರ ಪರಿಹಾರ (ಎ.ಸಿ. ಪಿಗೂರವರ ಕೂಲಿ ಕಡಿತ ನೀತಿ)
ಸಂಪ್ರದಾಯ ಪಂಥದವರ ಉದ್ಯೋಗ ಸಿದ್ಧಾಂತದಲ್ಲಿ ಪೂರ್ಣೋದ್ಯೋಗ ಇರುತ್ತದೆ ಎಂದು ಊಹಿಸಲಾಗಿದ್ದರೂ ಕೆಲವೊಮ್ಮೆ ನಿರುದ್ಯೋಗ ಸಮಸ್ಯೆ ಉಂಟಾಗಬಹುದು ಎಂದೂ ಸಹಾ ಭಾವಿಸಲಾಗಿದೆ. ಇದಕ್ಕೆ ವೇತನ ದರದಲ್ಲಿ ಹೆಚ್ಚಳ ಮತ್ತು ಕಾರ್ಮಿಕರಿಗಿರುವ ಬೇಡಿಕೆಯ ಪರಿಸ್ಥಿತಿಗಳೇ ಕಾರಣ. ಆ ಪ್ರಕಾರವಾಗಿ ಕಾರ್ಮಿಕರ ವೇತನ ದರದ ಹೆಚ್ಚಳವೇ ಕಾರ್ಮಿಕರ ಬೇಡಿಕೆ ಕಡಿಮೆಯಾಗುವುದಕ್ಕೆ ಕಾರಣ. ಇದರಿಂದಾಗಿ ನಿರುದ್ಯೋಗ ಮಟ್ಟವನ್ನು ತೆಗೆದುಹಾಕಿ ಪೂರ್ಣೋದ್ಯೋಗ ಮಟ್ಟವನ್ನು ಸಾಧಿಸಲು ‘ವೇತನದಲ್ಲಿ ಕಡಿತ ನೀತಿ’ಯನ್ನು (Wage Cut Policy) ಎ.ಸಿ. ಪಿಗೂರವರು ಮಂಡಿಸಿದ್ದಾರೆ. ಇದನ್ನೇ ಪಿಗೂರವರ ಪರಿಣಾಮ ಅಥವಾ ಪಿಗೂರವರ ‘ಕೂಲಿ ಕಡಿತ ನೀತಿ’ ಎಂದು ಕರೆಯಲಾಗಿದೆ. ಪಿಗೂರವರ ಪ್ರಕಾರ ವೇತನ ದರದಲ್ಲಿ ಉಂಟಾಗುವ ಕಡಿತವು ಪೂರ್ಣೋದ್ಯೋಗ ಮಟ್ಟವನ್ನು ಸಾಧಿಸಲು ಹಾಗೂ ನಿರುದ್ಯೋಗವನ್ನು ಹೊರದೂಡಲು ಸಾಧ್ಯವಾಗುತ್ತದೆ. ಈ ಅಂಶವನ್ನು ಒಂದು ರೇಖಾಚಿತ್ರದ ಮೂಲಕ ತಿಳಿದುಕೊಳ್ಳಬಹುದು.
ಈ ಮೇಲಿನ ರೇಖಾಚಿತ್ರದಲ್ಲಿ OX ಅಕ್ಷದಲ್ಲಿ ಉದ್ಯೋಗದ ಪ್ರಮಾಣವನ್ನು ಮತ್ತು OYಅಕ್ಷದಲ್ಲಿ ವೇತನ (ಕೂಲಿ) ದರವನು ವ್ಯಕ್ತಪಡಿಸಲಾಗಿದೆ. DD ಮತ್ತು SS ರೇಖೆಗಳು ಕ್ರಮವಾಗಿ ಕಾರ್ಮಿಕರ ಬೇಡಿಕೆ ಮತ್ತು ಪೂರೈಕೆ ರೇಖೆಗಳಾಗಿವೆ. ಪರಿಪೂಣಕ ಪೈಪೋಟಿ ಪರಿಸ್ಥಿತಿಯಲ್ಲಿ ಕೂಲಿಯ ದರವು OWನಷ್ಟು ಇದ್ದಾಗ ಕಾರ್ಮಿಕರ ಬೇಡಿಕೆ ಮತ್ತು ಪೂರೈಕೆಗಳು OL ನಷ ಆಗಿರುತ್ತವೆ. ಕಾರ್ಮಿಕರ ಬೇಡಿಕೆ ಮತ್ತು ಪೂರೈಕೆಗಳು E ಬಿಂದುವಿನಲ್ಲಿ ಸಮನಾಗಿರುತ್ತವೆ. ಒಂದು ವೇಳೆ ಕೂಲಿದರವು OWನಿಂದ OW ಗೆ ಹೆಚ್ಚಿದಾಗ ಕಾರ್ಮಿಕರ ಬೇಡಿಕೆಯು OLಗೆ ಕಡಿಮೆಯಾಗಿ, ಪೂರೈಕೆಯು OLಗೆ ಹೆಚ್ಚಾಗುತ್ತದೆ. ಇಲ್ಲಿ ಕಾರ್ಮಿಕರ ಪೂರೈಕೆಯು ಬೇಡಿಕೆಗಿಂತ ಹೆಚ್ಚಾಗಿ ನಿರುದ್ಯೋಗ ಪರಿಸ್ಥಿತಿ (LLಯಷ್ಟು) ಉಂಟಾಗುತ್ತದೆ. ಆದ್ದರಿಂದ ಪೂರ್ಣೋದ್ಯೋಗ ಮಟ್ಟವನ್ನು ಸಾಧಿಸಲು ಕೂಲಿದರದಲ್ಲಿ ಕಡಿತವನ್ನು (ಅಂದರೆ OW ನಿಂದ OWಗೆ) ಮಾಡುವುದರಿಂದ ಪುನಃ ಕಾರ್ಮಿಕರಿಗೆ ಬೇಡಿಕೆಯು ಹೆಚ್ಚಾಗಿ ಉದ್ಯೋಗದ ಪ್ರಮಾಣವನ್ನು ಹೆಚ್ಚಿಸಬಹುದಾಗಿದೆ. ಈ ಹಂತದಲ್ಲಿ ಕಾರ್ಮಿಕರಿಗೆ ಕೂಲಿದರವು ಕಡಿಮೆಯಾಗುವುದಾದರೂ ಉದ್ಯೋಗದ ಪ್ರಮಾಣವನ್ನು ಹೆಚ್ಚಿಸಿ ತನ್ಮೂಲಕ ಆದಾಯದ ಸೃಷ್ಟಿ ಮಾಡಬಹುದಾಗಿರುತ್ತದೆ. ಈ ರೀತಿಯಾಗಿ ನಿರುದ್ಯೋಗಕ್ಕೆ ಕೂಲಿದರದ ಹೆಚ್ಚಳ ಮತ್ತು ಕಾರ್ಮಿಕರ ಪೂರೈಕೆಯ ದರದಲ್ಲಿ ಹೆಚ್ಚಳಗಳು ಕಾರಣವಾಗಿದ್ದು, ಕೂಲಿದರವನ್ನು ಕಡಿತಗೊಳಿಸುವುದರ ಮೂಲಕ ಉದ್ಯೋಗ ಪ್ರಮಾಣವನ್ನು ಹೆಚ್ಚಿಸಿ ಪೂರ್ಣ ಉದ್ಯೋಗ ಮಟ್ಟವನ್ನು ಸಾಧಿಸಬಹುದಾಗಿದೆ ಎಂದು ಎ.ಸಿ. ಪಿಗೂ ರವರು ಅಭಿಪ್ರಾಯ ಪಟ್ಟಿದ್ದಾರೆ.
ಜೆ.ಬಿ.ಸೇ. ರವರ ಮಾರುಕಟ್ಟೆಯ ನಿಯಮ
ಸಂಪ್ರದಾಯ ಅರ್ಥಶಾಸ್ತ್ರಜ್ಞರ ಸಮಗ್ರ ಆರ್ಥಿಕ ನೀತಿಗೆ ಜೆ.ಬಿ. ಸೇರವರ ಮಾರುಕಟ್ಟೆಯ ನಿಯಮವು ಮೂಲಾಧಾರವಾಗಿದೆ. ಮುಕ್ತ ಆರ್ಥಿಕತೆಯಲ್ಲಿ ಪೂರ್ಣ ಉದ್ಯೋಗ ಮಟ್ಟವನ್ನು ಹೇಗೆ ಸಾಧಿಸಬಹುದು ಎಂಬುದನ್ನು ಫ್ರಾನ್ಸಿನ ಆರ್ಥಿಕ ತಜ್ಞರಾದ ಜೆ.ಬಿ. ಸೇರವರು ಪ್ರತಿಪಾದಿಸಿದ್ದಾರೆ. ಇದರ ವಿವರಣೆಯನ್ನು ‘ಸೇ’ರವರ ಮಾರುಕಟ್ಟೆಯ ನಿಯಮ ಎಂದು ಕರೆಯಲಾಗಿದೆ.
ಜೆ.ಬಿ. ಸೇರವರ ಪ್ರಕಾರ ಪೂರೈಕೆಯು ತನ್ನಷ್ಟಕ್ಕೆ ತಾನೇ ಬೇಡಿಕೆಯನ್ನು ಸೃಷ್ಟಿಸಿಕೊಳ್ಳುತ್ತದೆ. ಅಂದರೆ ಉತ್ಪಾದಿಸಲ್ಪಟ್ಟ ಸರಕು ಮತ್ತು ಸೇವೆಗಳಿಗೆ ಮಾರುಕಟ್ಟೆಯು ಸಹಜವಾಗಿ ಸಿಗುತ್ತದೆ. ಪ್ರತಿಯೊಬ್ಬ ಉತ್ಪಾದಕನು ತನ್ನ ವಸ್ತುಗಳಿಗೆ ಅನುಭೋಗಿಯನ್ನು (ಕೊಳ್ಳುವವನು) ಪಡೆದಿರುತ್ತಾನೆ. ವಿಶಾಲವಾಗಿ ಹೇಳುವುದಾದರೆ ಉತ್ಪಾದಿಸಲ್ಪಟ್ಟ ಸರಕುಗಳ ಪೂರೈಕೆಗೆ ಸಮನಾದ ಬೇಡಿಕೆಯು ಸೃಷ್ಟಿಯಾಗುತ್ತದೆ. ಆದ್ದರಿಂದಲೇ ಇವರ ಪ್ರಕಾರ ಆರ್ಥಿಕತೆಯಲ್ಲಿ ಉತ್ಪಾದನೆಯ ಅಧಿಕೃತೆ (ಹೆಚ್ಚಳ) ಮತ್ತು ನಿರುದ್ಯೋಗವು ಉದ್ಭವಿಸುವುದಿಲ್ಲ.
ಜೆ.ಬಿ. ಸೇರವರ ನಿಯಮದ ನಿರೂಪಣೆ
ಪೂರೈಕೆಯು ಬೇಡಿಕೆಯನ್ನು ಸೃಷ್ಟಿಸಿಕೊಳ್ಳುತ್ತದೆ. ಈ ನಿಯಮವನ್ನು ಹೀಗೆ ನಿರೂಪಿಸಬಹುದು. ಉತ್ಪಾದನಾ ವ್ಯವಸ್ಥೆಯಲ್ಲಿ ಸರಕುಗಳ ಪೂರೈಕೆಯು ಆದಾಯವನ್ನು ಸೃಷ್ಟಿಸುತ್ತದೆ. ಇಂತಹ ಆದಾಯವು ಅನುಭೋಗಿಗಳು ಅನುಭೋಗ ಸರಕುಗಳನ್ನು ಹೆಚ್ಚು ಹೆಚ್ಚು ಕೊಳ್ಳಲು ಸಹಾಯಕವಾಗುತ್ತದೆ. ಆದ್ದರಿಂದ ಸರಕುಗಳ ಬೇಡಿಕೆಯು ಅವರು ಗಳಿಸುವ ಆದಾಯಗಳಿಂದ ಸಾಧ್ಯ (ಉತ್ಪಾದನಾಂಗಗಳ ಬೆಲೆ). ಈ ಅಂಶವನ್ನು ಕೆಳಗಿನ ಉತ್ಪಾದನೆ, ಪೂರೈಕೆ, ಬೇಡಿಕೆ, ಆದಾಯ ಇವೇ ಮೊದಲಾದವುಗಳ ನಡುವಿನ ಸಂಬಂಧದ ಮೂಲಕ ತಿಳಿದುಕೊಳ್ಳಬಹುದು.
ಸರಕು & ಸೇವೆಗಳ ಒಟ್ಟು ಮೌಲ್ಯ
= ಉತ್ಪನ್ನ ರೂ 5,000
↑
→
ಕೂಲಿ, ಗೇಣಿ, ಬಡ್ಡಿ, ಲಾಭದ ರೂಪದಲ್ಲಿ ಉತ್ಪಾದನಾಂಗಗಳ ಆದಾಯದ ಮೌಲ್ಯ ರೂ. 5,000
↓
ಸರಕುಗಳ ಪೂರೈಕೆ ರೂ. 5,000
←
ಆರ್ಥಿಕತೆಯಲ್ಲಿನ ಆದಾಯದ (ಬೇಡಿಕೆಯ) ಸೃಷ್ಟಿ ರೂ. 5,000
ಸರಕು ಮತ್ತು ಸೇವೆಗಳ ಉತ್ಪನ್ನ 5,000 ರೂಗಳ ಮೌಲ್ಯಕ್ಕೆ ಸಮನಾಗಿದ್ದು 5,000 ರೂ ಮೌಲ್ಯದಷ್ಟು ಆದಾಯವನ್ನು ಸೃಷ್ಟಿಸುತ್ತದೆ. ಇವುಗಳು ಕೂಲಿ, ಗೇಣಿ, ಬಡ್ಡಿ ಮತ್ತು ಲಾಭಗಳ ರೂಪದಲ್ಲಿರುತ್ತದೆ. ಆದಾಯವು ಹೆಚ್ಚಿದಂತೆಲ್ಲಾ ಬೇಡಿಕೆಯು ಹೆಚ್ಚುವುದರಿಂದ ಬೇಡಿಕೆಗೆ ಸಮನಾದ ಸರಕು & ಸೇವೆಗಳನ್ನು ಉದ್ಯಮ ಘಟಕಗಳು ಪೂರೈಸುತ್ತವೆ. ಹೀಗೆ ಒಂದು ಅರ್ಥ ವ್ಯವಸ್ಥೆಯಲ್ಲಿ ಆದಾಯವು ಹೆಚ್ಚಿದಂತೆ ಅಪೂರ್ಣವಾಗಿ ಉಳಿದಿರುವ ಎಲ್ಲಾ ಉತ್ಪಾದನಾಂಗಗಳು ಉತ್ಪಾದನೆಯಲ್ಲಿ ತೊಡಗಿ ಆದಾಯವನ್ನು ಹೆಚ್ಚಿಸುತ್ತದೆ. ಆದುದರಿಂದ ಪೂರೈಕೆಯು ಬೇಡಿಕೆಗೆ ಸಮನಾಗಿರುತ್ತದೆ.
ಸಂಪ್ರದಾಯ ಪಂಥದ ವಿಮರ್ಶೆ
ಹತ್ತೊಂಬತ್ತನೆಯ ಶತಮಾನದ ಕೊನೆಯವರೆಗೆ ಸಂಪ್ರದಾಯ ಪಂಥದ ಆರ್ಥಿಕ ಸಿದ್ದಾಂತವು ವ್ಯಾಪಕ ಜನಮನ್ನಣೆಯನ್ನು ಗಳಿಸಿದ್ದಿತು. ಆದರೆ ಕಾಲ ಕಳೆದಂತೆ ಈ ಸಿದ್ದಾಂತವು ಹಲವಾರು ಟೀಕೆಗಳಿಗೆ ಒಳಪಟ್ಟಿದೆಯಲ್ಲದೆ ಈ ಸಿದ್ಧಾಂತದ ಪ್ರಾಯೋಗಿಕ ಅನ್ವಯತೆಯನ್ನು ಮತ್ತು ಔಚಿತ್ಯವನ್ನು ಪ್ರಶ್ನಿಸಲಾಗಿದೆ. ಪ್ರಮುಖವಾಗಿ ಜೆ.ಎಂ. ಕೇನ್ಸನು ಈ ಸಿದ್ಧಾಂತದ ಪ್ರಮುಖ ಟೀಕಾಕಾರನಾಗಿದ್ದಾನೆ. ಸಂಪ್ರದಾಯ ಪಂಥದ ಸಿದ್ಧಾಂತಕ್ಕೆ ಮಾಡಲಾಗಿರುವ ಟೀಕೆಗಳು ಈ ಕೆಳಗಿನಂತಿವೆ.
1. ಸಂಪ್ರದಾಯ ಪಂಥದ ಸಿದ್ಧಾಂತವು ಪರಿಪೂರ್ಣ ಪೈಪೋಟಿ ಕಲ್ಪನೆಯ ಮೇಲೆ ಆಧಾರಿತವಾಗಿದೆ. ಆದರೆ ವಾಸ್ತವವಾಗಿ ಅಪರಿಪೂರ್ಣ ಪೈಪೋಟಿಯ ಸನ್ನಿವೇಶವು ಅಸ್ಥಿತ್ವದಲ್ಲಿರುತ್ತದೆ.
2. ಸಂಪ್ರದಾಯ ಪಂಥದ ಚಿಂತಕರು ತಮ್ಮ ಸಿದ್ಧಾಂತದಲ್ಲಿ ನೈಜ ಕೂಲಿಯನ್ನು ಪರಿಗಣಿಸಿದ್ದಾರೆ ಮತ್ತು ಏಕಪಕ್ಷೀಯವಾಗಿ ಉದ್ಯಮಗಳ ಮಾಲೀಕರೇ ಏಕಪಕ್ಷೀಯವಾಗಿ ಕೂಲಿಯನ್ನು ನಿರ್ಧರಿಸುತ್ತಾರೆಂದು ಪ್ರತಿಪಾದಿಸಿದ್ದರು. ಆದರೆ ಮಾಲೀಕರು ಮತ್ತು ಕಾರ್ಮಿಕರ ನಡುವೆ ಚೌಕಾಸಿ ಮತ್ತು ಘರ್ಷಣೆಯ ಮೂಲಕ
3. ಕೂಲಿಯ ದರವು ನಿರ್ಧಾರವಾಗುತ್ತದೆ. ಅಷ್ಟೇ ಅಲ್ಲದೆ ಕೂಲಿಯು ನೈಜ ಕೂಲಿಯಾಗಿರದೆ ಹಣದ ರೂಪದಲ್ಲಿರುತ್ತದೆ. ಸಂಪ್ರದಾಯ ಪಂಥದ ಅರ್ಥಶಾಸ್ತ್ರಜ್ಞರು ಸರ್ಕಾರದ ಹಸ್ತಕ್ಷೇಪ ರಹಿತ ಮುಕ್ತ ಆರ್ಥಿಕ ನೀತಿ ಮತ್ತು ಮುಕ್ತ ವ್ಯಾಪಾರವನ್ನು (ಆಂತರಿಕ ಮತ್ತು ಬಾಹ್ಯ ವ್ಯಾಪಾರ) ವನ್ನು ಬೆಂಬಲಿಸಿದ್ದಾರೆ. ಆದರೆ ಆರ್ಥಿಕ ಚಟುವಟಿಕೆಗಳು
4. ಸುಗಮವಾಗಿ ಮತ್ತು ಪ್ರಗತಿಪರವಾಗಿ ನೆರವೇರಲು ಸರ್ಕಾರದ ನಾಯಕತ್ವ, ನಿಯಂತ್ರಣ ಮತ್ತು ಹಸ್ತಕ್ಷೇಪ ಅತ್ಯಗತ್ಯ ಅರ್ಥವ್ಯವಸ್ಥೆಯಲ್ಲಿ ಪೂರ್ಣೋದ್ಯೋಗವಿರುತ್ತದೆ ಎಂದು ಸಂಪ್ರದಾಯ ಪಂಥದ ಅರ್ಥಶಾಸ್ತ್ರಜ್ಞರು ನಂಬಿದ್ದರು. ಈ ಪೂರ್ಣೋದ್ಯೋಗದ ಕಲ್ಪನೆಯನ್ನು ಕೇನ್ಸನು ಅಲ್ಲಗಳೆದಿದ್ದಾನೆ. ಅವನ ಪ್ರಕಾರ ಆರ್ಥಿಕತೆಯಲ್ಲಿ ಪೂರ್ಣೋದ್ಯೋಗವು ಅಸ್ಥಿತ್ವದಲ್ಲಿರದೆ ಅರೆ ಉದ್ಯೋಗವಿರುತ್ತದೆ. ಆದಾಯ ಮತ್ತು ವೆಚ್ಚದ ನಡುವೆ ಅಂತರವಿರುವುದರಿಂದ ಪರಿಣಾಮಕಾರಿ ಬೇಡಿಕೆ ಕಡಿಮೆ ಇರುತ್ತದೆ. ಪರಿಣಾಮವಾಗಿ ಅರೆ ಉದ್ಯೋಗದ ಸ್ಥಿತಿ ಇರುತ್ತದೆ. ಪೂರ್ಣೋದ್ಯೋಗದ ಸ್ಥಿತಿ ಇರುತ್ತದೆ ಎಂದು ಭಾವಿಸಿದರೆ ನಮ್ಮ ಕಷ್ಟಗಳೆಲ್ಲವೂ ಪರಿಹಾರವಾದಂತೆ ಎಂದು ಕೇನ್ಸ್ ಹೇಳಿದ್ದಾನೆ.
5. ಪೂರೈಕೆಯು ತನ್ನದೆ ಆದಂತಹ ಬೇಡಿಕೆಯನ್ನು ಸೃಷ್ಟಿಸುತ್ತದೆ ಎಂಬ ಸೇನ ನಿಯಮವು ಕಟುವಾಗಿ ಟೀಕಿಸಲ್ಪಟ್ಟಿದೆ. ಜನರು ತಮ್ಮ ಆದಾಯದಲ್ಲಿ ಎಲ್ಲವನ್ನು ವೆಚ್ಚಮಾಡದೆ ಸ್ವಲ್ಪ ಭಾಗವನ್ನು ಉಳಿತಾಯ ಮಾಡುವುದರಿಂದ ಬೇಡಿಕೆಯ ಕೊರತೆಯು ಉಂಟಾಗುತ್ತದೆ. ಉತ್ಪಾದನೆಯು ಅದಕ್ಕೆ ತಕ್ಕನಾದ ಕೊಳ್ಳುವ ಶಕ್ತಿಯನ್ನು ಸೃಷ್ಟಿಸುವುದಿಲ್ಲ. ಪರಿಣಾಮವಾಗಿ ಉತ್ಪಾದನಾ ಬಾಹುಳ್ಯ ಮತ್ತು ನಿರುದ್ಯೋಗ ಸಾರ್ವತ್ರಿಕವಾಗಿರುತ್ತದೆ ಎಂದು ಕೇನ್ಸನು ಅಭಿಪ್ರಾಯ ಪಟ್ಟಿದ್ದಾನೆ.
6. ನಿರುದ್ಯೋಗಕ್ಕೆ ಪರಿಹಾರವಾಗಿ ಕೂಲಿ ಕಡಿತ ನೀತಿಯನ್ನು ಕೇನ್ನನು ಪ್ರಬಲವಾಗಿ ವಿರೋಧಿಸಿದ್ದಾನೆ. ಕೂಲಿಯ ಕಡಿತದಿಂದ ಕಾರ್ಮಿಕರ ಜೀವನ ಸ್ಥಿತಿ ಕೆಡುತ್ತದೆ. ಪರಿಣಾಮವಾಗಿ ಶ್ರಮದ ದಕ್ಷತೆ ಮತ್ತು ಉತ್ಪಾದನೆ ಕುಂಠಿತವಾಗುತ್ತವೆ ಎಂದು ಕೇನ್ಸನು ಹೇಳಿದ್ದಾನೆ. ಅವನು ನಿರುದ್ಯೋಗಕ್ಕೆ ಪರಿಹಾರವಾಗಿ ಕೂಲಿಯ ಕಡಿತಕ್ಕೆ ಬದಲಾಗಿ ಪರಿಣಾಮಕಾರಿ ಬೇಡಿಕೆಯ ಹೆಚ್ಚಳವನ್ನು ಶಿಫಾರಸ್ಸು ಮಾಡಿದ್ದಾನೆ.
7. ಉಳಿತಾಯ ಮತ್ತು ಹೂಡಿಕೆಗಳು ಪರಸ್ಪರ ಪರಿಪೂರ್ಣವಾಗಿ ಸಮನಾಗಿರುತ್ತವೆ ಮತ್ತು ಬಡ್ಡಿಯ ದರವು ಈ ಎರಡು ಅಂಶಗಳ ನಡುವೆ ಸಮನ್ವಯ ತರುತ್ತದೆ ಎಂಬ ಅಂಶವು ಕೂಡ ಕೇನ್ನನಿಂದ ಟೀಕಿಸಲ್ಪಟ್ಟಿದೆ. ಅವನ ಪ್ರಕಾರ ಉಳಿತಾಯ ಮತ್ತು ಹೂಡಿಕೆಗಳು ವಿವಿಧ ಜನರಿಂದ ವಿವಿಧ ವಿಧ ಉದ್ದೇಶಗಳಿಗಾಗಿ ಜರುಗುತ್ತವೆ. ಪರಿಣಾಮವಾಗಿ ಇವುಗಳ ನಡುವೆ ಅಸಮತೋಲನ ಏರ್ಪಡುವುದು ಸಾಮಾನ್ಯ ಸಂಗತಿಯಾಗಿದೆ. ಅಷ್ಟೆ ಅಲ್ಲದೆ ಉಳಿತಾಯ ಮತ್ತು ಹೂಡಿಕೆಗಳನ್ನು ನಿರ್ಧರಿಸುವ ಅಂಶಗಳು ಬೇರೆ ಬೇರೆಯಾಗಿವೆ. ಉಳಿತಾಯವು ಬಡ್ಡಿದರ, ಆದಾಯದ ಮಟ್ಟ, ದೈನಂದಿನ ವ್ಯವಹಾರಗಳ ವೆಚ್ಚ ಮತ್ತು ಭವಿಷ್ಯದ ನಿರೀಕ್ಷಣೆಗಳನ್ನು ಅವಲಂಬಿಸಿದ್ದರೆ ಹೂಡಿಕೆಯು ಬಂಡವಾಳದ ಸೀಮಾಂತ ದಕ್ಷತೆ ಮತ್ತು ಬಡ್ಡಿದರವನ್ನು ಅವಲಂಬಿಸಿರುತ್ತದೆ.)