ಪ್ರವಾಸೋದ್ಯಮ ಹಾಗೂ ಪ್ರವಾಸಿಗರ ನಡುವೆ ಅವಿನಾಭಾವ ಸಂಬಂಧವಿದೆ. ಏಕೆಂದರೆ ಪ್ರವಾಸ ಉದ್ಯಮವು ಪ್ರವಾಸಿಗರನ್ನು ಅವಲಂಬಿಸಿದೆ. ಪ್ರವಾಸಿಗರಲ್ಲದೆ ಪ್ರವಾಸೋದ್ಯಮವು ನಡೆಯಲಾರದು. ಪ್ರವಾಸಿಗರು ಎಂಬ ಪದವು ಆಂಗ್ಲ ಭಾಷೆಯ Turists ಎಂದಾದರೆ ಪ್ರವಾಸೋದ್ಯಮ ಎಂಬ ಪದವು ಆಂಗ್ಲ ಭಾಷೆಯಲ್ಲಿ Turism ಎಂದು ಅರ್ಥವಾಗುತ್ತದೆ. ಈ ಎರಡೂ ಪದಗಳು ಲ್ಯಾಟಿನ್ ಭಾಷೆಯ Tour ಎಂಬ ಪದದಿಂದ ಉತ್ಪತ್ತಿಯಾಗಿದೆ. Tour ಎಂಬ ಲ್ಯಾಟಿನ್ ಪದವು ಲ್ಯಾಟಿನ್ ಪದವಾದ “ ಟೋರನಸ್ʼʼ ಎಂಬ ಪದದಿಂದ ಬಂದಿದೆ. ಟೋರನಸ್ ಎಂದರೆ ಸುತ್ತಾಟ ಮಾಡುವುದು ಅಥವಾ ಚಲಿಸುವುದು ಎಂದಾಗುತ್ತದೆ. ಸರಳವಾಗಿ ಹೇಳಬೇಕೆಂದರೆ ಪ್ರವಾಸೋದ್ಯಮ ಎಂದರೆ ವ್ಯಕ್ತಿಗಳು ತಾವು ವಾಸ ಮಾಡುವ ಸ್ಥಳದಿಂದ ಮನರಂಜನೆ, ವಿಶ್ರಾಂತಿ, ವ್ಯಾಪಾರ, ಶಿಕ್ಷಣ, ಆರೋಗ್ಯ, ಧಾರ್ಮಿಕ ಅಥವಾ ಇತರ ಉದ್ದೇಶಗಳ ಸಲುವಾಗಿ ತಾತ್ಕಾಲಿಕವಾಗಿ ಬೇರೆ ಸ್ಥಳಗಳಿಗೆ ಹೋಗುವುದು. ಅಂದರೆ ಪ್ರವಾಸಿಗನು ಬೇರಡೆ ಹೋದಾಗ ಅಲ್ಲಿ ಶಾಶ್ವತವಾಗಿ ನೆಲೆನಿಲ್ಲದೆ ಆದಾಯ ಗಳಿಸುವ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವುದನ್ನು ಮಾಡದಿರುವುದಾಗಿದೆ. Tour and Turist ಎಂಬ ಎರಡು ಪದಗಳು 1800 ರಲ್ಲಿ ಪ್ರಥಮ ಬಾರಿಗೆ ಬಳಕೆಯಲ್ಲಿ ಬಂದವು. ಆಂಗ್ಲ ಭಾಷೆಯಲ್ಲಿ ಟ್ರ್ಯಾವೆಲ್ ಎಂದರೆ ಸಂಕಷ್ಟ ಅಥವಾ ಯಾತನೆ ಎಂದರ್ಥ. ಅಂದರೆ ಹಿಂದಿನ ಕಾಲದಲ್ಲಿ ಸಾರಿಗೆ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣದಿಂದ ಪ್ರಯಾಣ ತುಂಬಾ ಕಷ್ಟದಿಂದ ಕೂಡಿತ್ತು. ಎಂದು ಹೇಳಲಾಗಿದೆ. ಹೀಗಾಗಿ ಪ್ರಯಾಣವೆಂದರೆ ಅದು ನರಕ ಸದೃಶ್ಯವಾಗಿತ್ತು. ಈ ಕಾರಣದಿಂದ ಟ್ರ್ಯಾವೆಲ್ ಎಂಬ ಶಬ್ದವು ಹುಟ್ಟಿಕೊಂಡಿತು. 1800ರ ವೇಳೆಗೆ ಥಾಮಸ್ ಪೇಜ್ ಎಂಬುವರು ಟೂರಿಸ್ಟ್ ಎಂಬ ಪದವನ್ನು ಪ್ರವಾಸಿಗ ಎಂಬ ಪದಕ್ಕೆ ಸರಿಸಾಟಿಯಾಗಿ ಬಳಸಿದರು. ತದನಂತರ ಎಲ್ಲಾ ಪ್ರವಾಸಿ ಚಟುವಟಿಕೆಗಳನ್ನು ಸೇರಿಸಿ ಟೂರಿಸಂ ಎಂಬ ಪದವನ್ನು ಬಳಕೆಯಲ್ಲಿ ತರಲಾಯಿತು. ಆಕ್ಸ್ಫರ್ಡ್ ಶಬ್ದಕೋಶದ ಪ್ರಕಾರ ಪ್ರವಾಸಿಗ ಎಂದರೆ ʻʻವ್ಯಕ್ತಿಯೊಬ್ಬನು ಕುತೂಹಲ ಅಥವಾ ಮೋಜಿಗಾಗಿ ಪ್ರಯಾಣ ಮಾಡುವವನು ಎಂದರ್ಥ.
ವ್ಯಾಖ್ಯೆಗಳು
ಪ್ರವಾಸ, ಪ್ರವಾಸಿ ಹಾಗೂ ಪ್ರವಾಸೋದ್ಯಮದ ತಾಂತ್ರಿಕ ವ್ಯಾಖ್ಯಾನಗಳ ಬಗ್ಗೆ ಸಾಮಾನ್ಯ ಗ್ರಹಿಕೆ ಇರುವುದಾದರೂ ಅವುಗಳ ವ್ಯಾಖ್ಯಾನದ ವ್ಯಾಪ್ತಿ ಬಹಳ ವಿಶಾಲವಾಗಿದೆ. ಪ್ರವಾಸೋದ್ಯಮದ ಕುರಿತು ವಿವಿಧ ಪಂಡಿತರು ಹಾಗೂ ಅಂತರಾಷ್ಟ್ರೀಯ ಸಂಸ್ಥೆಗಳು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಅವುಗಳನ್ನು ಈ ಕೆಳಗಿನಂತೆ ನೋಡಬಹುದಾಗಿದೆ.
1.ಹ್ರನ್ಜಿಕರ್ ಹಾಗೂ ಕ್ರಾಪ್ರವರ ಪ್ರಕಾರ: ಪ್ರವಾಸೋದ್ಯಮವೆಂದರೆ ನಿವಾಸಿಯಲ್ಲದ ವ್ಯಕ್ತಿಗಳು ಪ್ರಯಾಣ ಮಾಡುವುದು ಹಾಗೂ ಶಾಶ್ವತವಾಗಿ ನೆಲೆಯೂರದೆ ಆದಾಯ ಗಳಿಕೆ ಉದ್ದೇಶವನ್ನು ಚಟುವಟಿಕೆಯಾಗಿ ಹೊಂದಿರದ ಪರಿಸ್ಥಿತಿಯನ್ನು ಪ್ರವಾಸೋದ್ಯಮ ಎಂದು ಕರೆದಿದ್ದಾರೆ.
- ಯುನೈಟೆಡ್ ನೇಶನ್ಸ್ ವರ್ಲ್ಡ್ ಟೂರಿಸಂ ಆರ್ಗನೈಜೇಷನ್: ʻʻಪ್ರವಾಸೋದ್ಯಮವೆಂದರೆ ವ್ಯಕ್ತಿಗಳು ತಮ್ಮ ಸಾಮಾನ್ಯ ಪರಿಸರದ ಹೊರಗಿನ ಸ್ಥಳಗಳಿಗೆ ಮನರಂಜನೆ, ವ್ಯಾಪಾರ ಅಥವಾ ಇತರೆ ಉದ್ದೇಶಗಳಿಗಾಗಿ ಒಂದು ವರ್ಷದ ಅವಧಿಗೆ ಪ್ರಯಾಣಿಸಿ ವಾಸಿಸುವ ಚಟುವಟಿಕೆಗಳಾಗಿವೆ.
- ವೆಬ್ ಸ್ಟರ್ ವಿಶ್ವಕೋಶದ ಪ್ರಕಾರ: ಸಂಭಾವನೆಯ ಉದ್ದೇಶವನ್ನು ಹೊಂದಿರದ ಒಬ್ಬ ವ್ಯಕ್ತಿ ತಾನು ವಾಸವಾಗಿದ್ದ ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಹೋಗಿ ವಿಶ್ರಾಂತಿಯ ಸಮಯವನ್ನು ವಿನೋದಕ್ಕಾಗಿ ಕಳೆಯುವವನು ಪ್ರವಾಸಿಗ ಎಂದು ಹೇಳಿದ್ದಾರೆ.
- ಪ್ರವಾಸಿಗರ ಅಗತ್ಯಗಳನ್ನು ಪೂರೈಸುವ ವಸ್ತುಗಳು ಹಾಗೂ ಸೇವೆಗಳ ಮೂಲಕ ಆದಾಯ ಹಾಗೂ ಉದ್ಯೋಗವನ್ನು ಸೃಷ್ಟಿಸುವ ಕೈಗಾರಿಕೆಯೆ ಪ್ರವಾಸೋದ್ಯಮವಾಗಿದೆ.
- ಹರ್ಮನ್ ವಿ ಶುಲಾರ್ಡ್ರವರ ಪ್ರಕಾರ: ಒಂದು ಗೊತ್ತಾದ ಪ್ರದೇಶಕ್ಕೆ ವಿದೇಶಿಯರು ಹೋಗಿ ಅಲ್ಲಿ ತಾತ್ಕಾಲಿಕವಾಗಿ ವಾಸಿಸಿ ನಂತರ ಅಲ್ಲಲ್ಲಿ ತಿರುಗಾಡಿ ಬರುವ ಎಲ್ಲಾ ಪ್ರಕ್ರಿಯೆಗಳನ್ನು ಪ್ರವಾಸೋದ್ಯಮ ಎಂದು ಕರೆಯುವರು.
- 1937ರಲ್ಲಿ ಸಂಯುಕ್ತ ರಾಷ್ಟ್ರಸಂಘವು ಪ್ರವಾಸೋದ್ಯಮದ ವ್ಯಾಖ್ಯಾನವನ್ನು ಈ ರೀತಿಯಾಗಿ ಮಾಡಿತು. ಒಬ್ಬ ವ್ಯಕ್ತಿ ತಾನು ವಾಸಮಾಡಿದ ನಾಡನ್ನು ಹೊರತುಪಡಿಸಿ ಬೇರೆ ನಾಡಿನಲ್ಲಿ ಕನಿಷ್ಠ 24 ಗಂಟೆಗಿಂತಲೂ ಅಧಿಕ ಸಮಯದವರೆಗೆ ಪ್ರಯಾಣಿಸಿದರೆ ಅದು ಅವನನ್ನು ಪ್ರವಾಸಿಗ ಎಂದು ಕರೆಯುವರು.
- ಡಾ|| ಜಿವಾದಿನ್ ಜೋವಿಯಾಕೆ ಸಾಂಸ್ಕೃತಿಕ ಅಗತ್ಯಗಳನ್ನು ಈಡೇರಿಸಿಕೊಳ್ಳಲು ವಿಹಾರ ಮತ್ತು ವಿರಾಮದಂತ ಸಾಮಾಜಿಕ ಚಲನೆಯನ್ನು ಪ್ರವಾಸೋದ್ಯಮ ಎಂದು ಕರೆಯುವರು.
- ಸಿ.ಪಿ ಕೂಪರ್ರವರ ಪ್ರಕಾರ: ಪ್ರವಾಸಿಗನು ತನ್ನ ಮೂಲ ವಾಸ ಸ್ಥಳದಿಂದ ಗಮ್ಯ ಸ್ಥಳಗಳಿಗೆ ತಾತ್ಕಾಲಿಕವಾಗಿ ಹೋಗಿ ತಾತ್ಕಾಲಿಕವಾಗಿ ವಾಸ್ತವ್ಯ ಹೂಡಿದರೆ ಅದನ್ನು ಪ್ರವಾಸೋದ್ಯಮ ಎನ್ನುವರು.
- ರಾಬಿನ್ ಸನ್ ಹೇಳಿದಂತೆ: ಬಹು ಆಕರ್ಷಕವಾದ ಮತ್ತು ಕಡಿಮೆ ಖರ್ಚಿನ ಹಾಗೂ ವಿಶೇಷ ಸೌಲಭ್ಯಗಳ ಭೌಗೋಳಿಕ ಸುಂದರವಾದ ಸ್ಥಳಗಳಿಗೆ ಜನರು ಮನಸೋತು ಹೋಗುವುದನ್ನು ಪ್ರವಾಸೋದ್ಯಮ ಎಂದು ಕರೆಯುವರು.
- ವಿಶ್ವಸಂಸ್ಥೆಯ ಪ್ರಕಾರ ವೃತ್ತಿ ಸಂಭಾವನೆಯ ಕಾರಣಕ್ಕಾಗಿ ಒಬ್ಬ ವ್ಯಕ್ತಿ ಯಾವುದೇ ಪ್ರದೇಶಕ್ಕೆ ಭೇಟಿ ನೀಡದೆ. ತನ್ನ ಸ್ವಸ್ಥಳದಿಂದ ಅನ್ಯ ಸ್ಥಳಕ್ಕೆ ತಾತ್ಕಾಲಿಕವಾಗಿ ಹೋಗಿ ಬರುವುದನ್ನು ಪ್ರವಾಸೋದ್ಯಮ ಎಂದು ಕರೆಯಲಾಗುತ್ತದೆ.
- WTO ದ ಪ್ರಕಾರ ವ್ಯಕ್ತಿಯೊಬ್ಬನು ವಿರಾಮ ವ್ಯಾಪಾರ ಹಾಗೂ ಇನ್ನಿತರ ಉದ್ದೇಶಗಳಿಗಾಗಿ ಒಂದು ವರ್ಷದ ಒಳಗೆ ತನ್ನ ವಾಸ ಸ್ಥಳದಿಂದ ಹೋಗಿ ಬೇರೆ ಪ್ರದೇಶದಲ್ಲಿ ತಾತ್ಕಾಲಿಕವಾಗಿ ತಂಗಿ ಬರುವ ಚಟುವಟಿಕೆಗಳನ್ನು ಪ್ರವಾಸೋದ್ಯಮ ಎಂದು ಕರೆಯುವರು.
- ಕಾರ್ಡಿಪ್ ಪ್ರಕಾರ: ವ್ಯಕ್ತಿಯೊಬ್ಬನು ತಾನು ವಾಸಮಾಡುವ ಸ್ಥಳದಿಂದ ಹೊರಗೆ ಹೋಗಿ ತನಗೆ ಮನಸ್ಸಿಗೆ ಬಂದ ಚಟುವಟಿಕೆಗಳಲ್ಲಿ ಪಾಲ್ಗೊಂಡು ಬರುವುದನ್ನು ಪ್ರವಾಸೋದ್ಯಮ ಎಂದು ಕರೆದಿದ್ದಾರೆ.
ಪ್ರಯಾಣದ ಸ್ವರೂಪ (Nature of Travel )
ಪ್ರಯಾಣದ ಸ್ವರೂಪವನ್ನು ಈ ಕೆಳಗಿನಂತೆ ಚರ್ಚಿಸಲಾಗಿದೆ.
- ವಿರಾಮವನ್ನು ಪಡೆದುಕೊಳ್ಳಲು ಒಬ್ಬ ವ್ಯಕ್ತಿ ಪ್ರವಾಸವನ್ನು ಕೈಗೊಳ್ಳುತ್ತಾನೆ.
- ತಾನು ವಾಸಿಸುವ ಸ್ಥಳದಿಂದ ಪ್ರವಾಸಿಗನು ಬಹಳ ದೂರದವರೆಗೆ ಪ್ರಯಾಣ ಮಾಡುತ್ತಾನೆ.
- ಪ್ರವಾಸಿಗನಾದವನು ಸಂತೋಷಕ್ಕಾಗಿ, ವಿರಾಮಕ್ಕಾಗಿ, ಆನಂದಕ್ಕಾಗಿ, ಆತ್ಮತೃಪ್ತಿಗಾಗಿ, ಮನರಂಜನೆಯನ್ನು ಪಡೆಯಲು ಹಾಗೂ ಮೋಜಿಗಾಗಿ ಪ್ರವಾಸವನ್ನು ಕೈಗೊಳ್ಳುವ ಉದ್ದೇಶವನ್ನು ಹೊಂದಿದವನಾಗಿರುತ್ತಾನೆ.
- ಒಬ್ಬ ಪ್ರವಾಸಿಯು ತನ್ನ ವಾಸಸ್ಥಳದಿಂದ ಬೇರೆ ಕಡೆಗೆ ಹೋಗಿ ಕನಿಷ್ಠ 24 ಗಂಟೆಗಿಂತಲೂ ಕಡಿಮೆ ಇಲ್ಲದಂತೆ ತಂಗಬೇಕು.
- ಪ್ರವಾಸಿಗನು ಸಂಬಳದ ಗಳಿಕೆಗಾಗಿ, ವೃತ್ತಿಯನ್ನು ಪಡೆಯಲು ಹಾಗೂ ಶಾಶ್ವತವಾಗಿ ಬೇರಡೆ ಹೋಗಿ ನೆಲೆಸುವಂತಹ ಉದ್ದೇಶವನ್ನು ಹೊಂದಿದವನಾಗಿರಕೂಡದು.
- ಪ್ರವಾಸಿಗರು ತಾನು ವಾಸಮಾಡುವ ಸ್ಥಳದಿಂದ ಹೊರಟು ಬೇರೆ ಸ್ಥಳದಲ್ಲಿ ತಾತ್ಕಾಲಿಕವಾಗಿ ತಂಗಿರಬೇಕು. ಜೊತೆಗೆ ತನ್ನ ಸ್ವಂತ ಹಣವನ್ನು ಖರ್ಚು ಮಾಡಬೇಕು.
- ಪ್ರವಾಸಿಗನು ತಾನು ಉದ್ಯೋಗ ಮಾಡುವ ಸ್ಥಳದಿಂದ ಒಂದು ವರ್ಷಕ್ಕಿಂತ ಕಡಿಮೆ ಇರುವ ಅವಧಿಗೆ ದೂರ ಹೋಗಿ ಸಂದರ್ಶನ ಮಾಡಿ ಬರಬೇಕು.
- ವೃತ್ತಿ ಮಾಡುವ ಉದ್ದೇಶಕ್ಕಾಗಿ ಹಾಗೂ ಶಾಶ್ವತವಾಗಿ ಬೇರೆ ಸ್ಥಳದಲ್ಲಿ ನೆಲೆ ನಿಲ್ಲಲು ಪ್ರವಾಸಿಗರು ಪ್ರಯಾಣ ಮಾಡಬಾರದು.
- ಪ್ರವಾಸಿಗನು ನಿವಾಸರಹಿತನಾಗಿದ್ದು ಬೇರೆಯವರ ವಸತಿಗೃಹದಲ್ಲಿ ತಂಗುತ್ತಾನೆ.
- ತನ್ನ ಉದ್ದೇಶ ಈಡೇರಿದ ನಂತರ ತನ್ನ ಸ್ವಸ್ಥಾನಕ್ಕೆ ಮರಳುವವನೇ ಪ್ರವಾಸಿಗನಾಗುತ್ತಾನೆ.
ಈ ಕೆಳಕಂಡ ವ್ಯಕ್ತಿಯು ಪ್ರವಾಸಿಗನಾಗಲಾರನು:
- ಪ್ರವಾಸಿಗನು 24 ಗಂಟೆಗಳ ಕಡಿಮೆ ಕಾಲ ಪ್ರಯಾಣಿಸಿ ಒಂದು ಕಡೆಯಲ್ಲಿ ವಾಸವಿದ್ದು ಮರಳಿ ಸ್ವಸ್ಥಾನಕ್ಕೆ ಬರುತ್ತಾನೆ.
- ಹಣ ಗಳಿಗೆಗಾಗಿ, ವ್ಯಾಪಾರ ಹಾಗೂ ವೃತ್ತಿ ಕಾರಣಕ್ಕಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸಿ ಬರುವವರು ಪ್ರವಾಸಿ ಎನಿಸಿಕೊಳ್ಳುವುದಿಲ್ಲ.
- ಸರ್ಕಾರಿ ಉದ್ಯೋಗದಿಂದ ನಿವೃತ್ತನಾಗಿ ವಿಶ್ರಾಂತಿಯನ್ನು ಪಡೆಯಲು ಹೋಗುವವರನ್ನು ಪ್ರವಾಸಿಗರು ಎಂದು ಕರೆಯಲಾಗದು.
- ಬೇರೆ ದೇಶಗಳಿಗೆ ಶಾಶ್ವತವಾಗಿ ನೆಲೆನಿಲ್ಲಲು ಪ್ರವಾಸ ಕೈಗೊಳ್ಳುವವರನ್ನು ಪ್ರವಾಸಿಗರು ಎಂದು ಪರಿಗಣಿಸಲಾಗುವುದಿಲ್ಲ.
- ವಿಹಾರಾರ್ಥಿಗಳು ಹಾಗೂ ವಲಸೆಗಾರರನ್ನು ಪ್ರವಾಸಿಗರು ಎಂದು ಹೇಳಲು ಸಾಧ್ಯವಿಲ್ಲ.
- ಹಂಗಾಮಿ ಅತಿಥಿಗಳು, ನೌಕೆಗಳಲ್ಲಿ ಸಂಚರಿಸುವವರು ಹಾಗೂ ರೈಲುಗಳಲ್ಲಿ ತಂಗುವವರನ್ನು ಪ್ರವಾಸಿಗರು ಎಂದು ಕರೆಯಲಾಗುವುದಿಲ್ಲ.
- ಸಂಶೋಧನೆ, ಶಿಕ್ಷಣ ಹಾಗೂ ಕರಾರಿನ ಮೇಲೆ ನೌಕರಿ ಮಾಡಲು ದೀರ್ಘಕಾಲದವರೆಗೆ ಬರುವ ಪ್ರವಾಸಿಗರನ್ನು ಪ್ರವಾಸಿಗರನ್ನಾಗಿ ಪರಿಗಣಿಸಲು ಬರುವುದಿಲ್ಲ.
ವಿದೇಶಿ ಪ್ರವಾಸಿಗರು
ಮನರಂಜನೆ, ರಜಾ ದಿನಗಳಲ್ಲಿ ಆನಂದದಿಂದ ಕಾಲಕಳೆಯುವಿಕೆ, ಸಂಶೋಧನೆ, ಅಧ್ಯಯನ, ಶಿಕ್ಷಣ, ಆರೋಗ್ಯ, ವಿರಾಮ, ಕೌಟುಂಬಿಕ ಸಮಾವೇಶ, ಕ್ರೀಡೆ, ಧಾರ್ಮಿಕ ಮೊದಲಾದ ಕಾರಣಗಳಿಗಾಗಿ ಪಾಸ್ಪೋರ್ಟ್ನ್ನು ಹೊಂದಿ ತನ್ನ ವಾಸಸ್ಥಳದಿಂದ ಅಥವಾ ದೇಶದಿಂದ ಹೊರಗೆ ಕನಿಷ್ಠ 24 ಗಂಟೆಗಳ ಕಾಲ ತಂಗುವವರನ್ನು ವಿದೇಶಿ ಪ್ರವಾಸಿಗರು ಎಂದು ಕರೆಯಬಹುದಾಗಿದೆ. ಆದರೆ ಭಾರತವು ಈ ಕೆಳಕಂಡವರನ್ನು ವಿದೇಶಿ ಪ್ರವಾಸಿಗರೆಂದು ಪರಿಗಣಿಸುವುದಿಲ್ಲ.
- ಗಡಿ ಭಾಗಗಳಲ್ಲಿ ವಾಸಮಾಡುವವರು.
- ಬೇರೆ ದೇಶಗಳಿಂದ ಭಾರತಕ್ಕೆ ಸಂಬಳಕ್ಕಾಗಿ ಕರಾರಿನ ಮೇಲೆ ಬರುವವರು.
- ಶಾಲಾ ವಿದ್ಯಾರ್ಥಿಗಳು ಹಾಗೂ ಈ ದೇಶದಲ್ಲಿ ವಾಸ ಮಾಡಲು ಇಚ್ಛಿಸಿ ಬರುವವರು.
- ವಿಹಾರಾರ್ಥಿಗಳಾಗಿ ಬಂದು ಕನಿಷ್ಠ 24 ಗಂಟೆಗಿಂತಲೂ ಕಡಿಮೆ ಅವಧಿಯವರೆಗೆ ತಂಗುವವರು ಒಂದು ಕಡೆ ಶಾಶ್ವತವಾಗಿ ನೆಲೆ ನಿಲ್ಲದ ಒಂದು ದೇಶದವರು. ಭಾರತದ ಮೂಲಕ ಹಾಯ್ದು ಹೋಗುವ ಸಂದರ್ಶಕರು ಪ್ರವಾಸಿಗರು ಎನಿಸಿಕೊಳ್ಳುವುದಿಲ್ಲ.
- ಒಬ್ಬ ವ್ಯಕ್ತಿ 24 ಗಂಟೆಗಿಂತಲೂ ಹೆಚ್ಚುಕಾಲ ಸಂಚರಿಸಿ ಆತ ಎಲ್ಲಿಯೂ ತಂಗದೆ ಒಂದು ದೇಶದ ಮೂಲಕ ಹಾಯ್ದು ಹೋದರೆ ಅವನು ಪ್ರವಾಸಿಗನಲ್ಲ.
- ಬಾಂಗ್ಲಾದೇಶ ಹಾಗೂ ಪಾಕಿಸ್ಥಾನಿಯ ರಾಷ್ಟ್ರೀಯರು.
- ಗಡಿಭಾಗದಲ್ಲಿ ನೆಲೆಸಿದ್ದವರು ಬೇರೆ ದೇಶದಲ್ಲಿ ಕೆಲಸ ನಿರ್ವಹಿಸುವಂಥವರು ಪ್ರವಾಸಿಗರು ಆಗಲಾರರು.
- ರಸ್ತೆಯ ಮೂಲಕ ಭಾರತಕ್ಕೆ ಬರುವ ನೇಪಾಳಿಯರು ಹಾಗೂ ಭೂತಾನಿಗಳು ಪ್ರವಾಸಿಗರು ಆಗಲಾರರು.