ಸುಸ್ಥಿರ ಪ್ರವಾಸೋದ್ಯಮವನ್ನು ಆಂಗ್ಲ ಭಾಷೆಯಲ್ಲಿ Sustainable ಎಂದು ಕರೆಯುತ್ತಾರೆ Sustainable   ಎಂಬ ಆಂಗ್ಲ ಪದವು Subinene ಎಂಬ ಫ್ರೆಂಚ್ ಪದದಿಂದ ಹುಟ್ಟಿಕೊಂಡಿದೆ. Sustaine ಎಂದರೆ ಬೆಂಬಲಿಸು, ಪೋಷಿಸು, ಎತ್ತಿ ನಿಲ್ಲಿಸು, ಸಂರಕ್ಷಿಸು ಅಥವಾ ತಾಳಿಕೊಳ್ಳು ಎಂದರ್ಥ. ಆದರೆ ಪ್ರವಾಸೋದ್ಯಮವು ಕುಂಠಿತಗೊಳ್ಳಲು ಕಾರಣಗಳನ್ನು ಹುಡುಕಿ ಅವುಗಳಿಗೆ ಪರಿಹಾರ ನೀಡಿ ಬೆಳೆಸುವುದು ಎಂದರ್ಥ. ಇನ್ನೊಂದು ಅರ್ಥದಲ್ಲಿ ಪ್ರಾಕೃತಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಪನ್ಮೂಲಗಳನ್ನು ಜವಾಬ್ದಾರಿಯಿಂದ ರಕ್ಷಿಸಿ ಅವುಗಳನ್ನು ಮುಂದಿನ ತಲೆಮಾರಿಗೆ ನಿರಂತರವಾಗಿ ಬಳಸುವಂತೆ ಮಾಡಿ ಉಳಿಸಿ, ಬೆಳೆಸಿ ಹಾಗೂ ಸಂರಕ್ಷಿಸುವುದೇ ಸುಸ್ಥಿರ ಪ್ರವಾಸೋದ್ಯಮ ಎಂದು ಕರೆಯಲಾಗಿದೆ. ಏಕೆಂದರೆ ನೈಸರ್ಗಿಕ ಸಂಪನ್ಮೂಲಗಳು ಬಹುಬೇಗನೆ ಅವನತಿಯನ್ನು ಹೊಂದುತ್ತವೆ. ಹೀಗಾಗಿ ಅವುಗಳನ್ನು ರಕ್ಷಿಸುವ ಹೊಣೆ ಪ್ರವಾಸೋದ್ಯಮದ ಮೇಲಿದೆ. ಮಾನವನ ದುರಾಸೆಯಿಂದ ದಿನೇ ದಿನೇ ಕ್ಷೀಣಿಸುತ್ತಿರುವ ನಿಸರ್ಗವನ್ನು ಭದ್ರಪಡಿಸಬೇಕಿದೆ.

ಜಾಗತಿಕ ಪ್ರವಾಸೋದ್ಯಮ ಸಂಸ್ಥೆಯು ಸುಸ್ಥಿರ ಪ್ರವಾಸೋದ್ಯಮವನ್ನು ಈ ಕೆಳಗಿನಂತೆ ವ್ಯಾಖ್ಯಾನಿಸಿದೆ. ಪ್ರಾಕೃತಿಕ, ಸಾಂಸ್ಕೃತಿಕ ಹಾಗೂ ಇತರೆ ಪ್ರವಾಸೋದ್ಯಮ ಸಂಪನ್ಮೂಲಗಳನ್ನು ಪ್ರಸಕ್ತ ಸಮಾಜದ ಹಿತ, ಲಾಭ ಹಾಗೂ ಅಗತ್ಯಗಳನ್ನು ಈಡೇರಿಸುವುದರೊಂದಿಗೆ ಭವಿಷ್ಯದವರ ಉಪಯೋಗಕ್ಕಾಗಿ ರಕ್ಷಿಸುವುದು ಎಂದರ್ಥ. ಇಂದಿನವರ ಬೇಡಿಕೆಗಳನ್ನು ಅಪಾಯವಾಗದಂತೆ ಈಡೇರಿಸಿ ಮುಂದಿನವರ ಬೇಡಿಕೆಗಳಿಗೆ ಸ್ಪಂದಿಸುವುದು ಸುಸ್ಥಿರ ಪ್ರವಾಸೋದ್ಯಮದ  ಗುರಿಯಾಗಿದೆ.

ಸುಸ್ಥಿರ ಪ್ರವಾಸೋದ್ಯಮವನ್ನು “ಸಂರಕ್ಷಣಾ ಪ್ರವಾಸೋದ್ಯಮ” ಎಂದು ಕರೆಯುತ್ತಾರೆ. ಅಂದರೆ ಈ ಪ್ರವಾಸೋದ್ಯಮ ಸ್ಥಳಿಯರ ರೂಢಿ ಸಂಪ್ರದಾಯಗಳನ್ನು ಗೌರವಿಸುತ್ತಾ ಪರಿಸರದ ಕಾಳಜಿಯನ್ನು ಹೊಂದುವುದಾಗಿದೆ. ನೈಸರ್ಗಿಕ ಪ್ರದೇಶದಲ್ಲಿ ಜವಾಬ್ದಾರಿತವಾದ ಪ್ರವಾಸ ಕೈಗೊಳ್ಳುವುದನ್ನು ಸುಸ್ಥಿರ ಪ್ರವಾಸೋದ್ಯಮ ಎಂದು ಕರೆಯಬಹುದಾಗಿದೆ.

ಭಾರತದ ಪ್ರವಾಸೋದ್ಯಮ ಉದ್ಯಮವು ಹಣದ ಉತ್ಪಾದನೆಯಲ್ಲಿ ವಿಶ್ವದ ಎರಡನೇ ಅತಿ ದೊಡ್ಡ ದೇಶವಾಗಿದೆ. ಇದು 2022ರಲ್ಲಿ ಜಾಗತಿಕ GDPಗೆ ಸರಿಸುಮಾರು 7.6% ಕೊಡುಗೆ ನೀಡಿದೆ. 2030ರ ವೇಳೆಗೆ ಜಾಗತಿಕ GDPಯಲ್ಲಿ ಸರಿಸುಮಾರು 11.3% ರಷ್ಟು ಬೆಳವಣಿಗೆಯೊಂದಿಗೆ 1.8 ಶತಕೋಟಿ ಪ್ರವಾಸಿಗರನ್ನು ನಿರೀಕ್ಷಿಸುವುದಾಗಿದೆ.

 ಈ ಸುಸ್ಥಿರ ಎಂಬ ಪದವು 1980 ರಿಂದ ಈಚೆಗೆ ಬಳಕೆಯಲ್ಲಿ ಬಂದಿತು. ದೇಶದ ಸ್ಮಾರಕಗಳ ನಾಶ ಹಾಗೂ ಪರಿಸರಕ್ಕೆ ಉಂಟಾಗುತ್ತಿದ್ದ ಹಾನಿಯನ್ನು ಮನಗಂಡು 1987ರಲ್ಲಿ ವಿಶ್ವಸಂಸ್ಥೆಯ ಪರಿಸರ ಹಾಗೂ ಅಭಿವೃದ್ಧಿ ಸಮಾವೇಶವು ಬ್ರಂಟ್‌ಲ್ಯಾಂಡ್‌ ವರದಿಯ ಮೂಲಕ ಸುಸ್ಥಿರ ಅಭಿವೃದ್ಧಿ ಮಾರ್ಗವನ್ನು ಜನಪ್ರಿಯಗೊಳಿಸಿತು.

ಸುಸ್ಥಿರ ಪ್ರವಾಸೋದ್ಯಮದ ನೀತಿ ಸಂಹಿತೆ/ ಸುಸ್ಥಿರ ಪ್ರವಾಸೋದ್ಯಮದ ಅಭಿವೃದ್ಧಿಯ ವಿಧಾನಗಳು

(Methods of Sustainable Tourism Development)

ಪ್ರವಾಸೋದ್ಯಮವು 20ನೇ ಶತಮಾನದ ಅಂತ್ಯದ ವೇಳೆಗೆ ಯೋಜನಾರಹಿತವಾಗಿ, ಅನಿಮಿತವಾಗಿ ಹಾಗೂ ಯಾವುದೇ ಮುಂದಾಲೋಚನೆ ಇಲ್ಲದೆ ಬೆಳೆದು ಬಂದು ಅನೇಕ ಸಮಸ್ಯೆಗಳನ್ನು ತಂದೊಡ್ಡಿದೆ. ಇದರಿಂದ ಪರಿಸರದ ಮೇಲೆ ಪ್ರವಾಸೋದ್ಯಮ ಪ್ರತಿಕೂಲ ಪರಿಣಾಮವನ್ನು ಬೀರಿದೆ. ಪರಿಸರವಾದಿಗಳು ಇದನ್ನು ʻʻಸೃಜನಾತ್ಮಕ ವಿನಾಶ” ಎಂದು ಕರೆದರು. ಹೀಗಾಗಿ ಪ್ರವಾಸೋದ್ಯಮಕ್ಕೆ ಯೋಜನಾಬದ್ಧವಾದ ಮಾರ್ಗವನ್ನು ಅಳವಡಿಸಲಾಯಿತು. ಪ್ರವಾಸೋದ್ಯಮದ ಅಭಿವೃದ್ಧಿಯ ಕೆಲವು ವಿಧಾನಗಳು ಹೀಗಿವೆ.

    1. ಸಾಕಷ್ಟು ಪ್ರಮಾಣದಲ್ಲಿ ಪ್ರವಾಸಿ ಸ್ಥಳಗಳಿಗೆ ಪ್ರವಾಸಿಗರು ಭೇಟಿನೀಡುವುದರಿಂದ ಪರಿಸರದ ಮೇಲೆ ಯಾವ ಪರಿಣಾಮಗಳು ಉಂಟಾಗುತ್ತವೆ ಎಂಬುದರ ಕುರಿತು ಜನರಿಗೆ ಮನವರಿಕೆ ಮಾಡಿಕೊಡುವುದು.

     2. ಪ್ರವಾಸೋದ್ಯಮದ ಮೂಲ ಆಕರ್ಷಣೆಯೆಂದರೆ ಅದು ಪರಿಸರ. ಪರಿಸರವೇ ಇಲ್ಲವೆಂದಾದರೆ ಪ್ರವಾಸೋದ್ಯಮ ಎಲ್ಲಿದೆ?. ಹಾಗಾಗಿ ಪ್ರವಾಸಿಗರಿಗೆ ಪರಿಸರ ಕಾಳಜಿಯ ಬಗ್ಗೆ ಅರಿವು ಮೂಡಿಸಬೇಕು. ಜೀವವೈವಿಧ್ಯತೆ ಹಾಳಾಗದಂತೆ ನೋಡಿಕೊಳ್ಳಬೇಕು ಎಂಬುದನ್ನು ಶಿಕ್ಷಣದ ಮೂಲಕ ಜಾಗೃತಿ ಮೂಡಿಸಬೇಕು.

     3. ಸ್ಟಾಕ್ ಹೋಂನಲ್ಲಿ ವಿಶ್ವಸಂಸ್ಥೆಯ ಮಾನವ ಪರಿಸರ ಕುರಿತ ಸಮ್ಮೇಳನವು ನಡೆಯಿತು. ಈ ಸಮ್ಮೇಳನದಲ್ಲಿ ಮಾನವ ಜೀವನ ಹಾಗೂ ಪರಿಸರ ಗುಣಮಟ್ಟವನ್ನು ಹೆಚ್ಚಿಸಲು ವಿಶ್ವ ಸಾಂಸ್ಕೃತಿಕ ಪರಂಪರೆಯ ಅಗತ್ಯತೆಯನ್ನು ಗುರುತಿಸಲಾಯಿತು. ಅಂದರೆ ಪ್ರವಾಸಿ ತಾಣಗಳಿಗೆ ಅವು ಒದಗಿಸುವ ಮೂಲಸೌಕರ್ಯ ಹಾಗೂ ಅದರ ಸಾಮರ್ಥ್ಯ ಅನುಸಾರ ಗರಿಷ್ಟ ಬೇಟಿ/ಸಂದರ್ಶನ ನಿಗದಿಗೊಳಿಸುವುದು. ಉದಾ: ವಿಜಾಪುರದ ಗೋಲಗುಂಬಜ್ ಒಂದು ದಿನಕ್ಕೆ 5000 ಪ್ರವಾಸಿಗಳಿಗೆ ಸಂದರ್ಶನ ಹಾಗೂ ಆತಿಥ್ಯ ನೀಡುವ ಸಾಮರ್ಥ್ಯ ಹೊಂದಿದ್ದರೆ 5,000 ಪ್ರವಾಸಿಗರನ್ನು ಮಾತ್ರ ದಿನವೊಂದಕ್ಕೆ ಸಂದರ್ಶನ ನೀಡಲು ಅವಕಾಶ ನೀಡಬೇಕೆ ಹೊರತು, 10,000 ಪ್ರವಾಸಿಗರಿಗೆ ಅಲ್ಲ. ಪ್ರವಾಸಿ ತಾಣಗಳಲ್ಲಿ ಈ ಕ್ರಮಗಳನ್ನು ಅನುಸರಿಸುವುದು ಸೂಕ್ತವಾದದ್ದು.

     4. ಗ್ರಾಮೀಣ ಪ್ರದೇಶಗಳಿಂದ ಹಿಡಿದು ನಗರ ಪ್ರದೇಶಗಳವರೆಗೆ ಹೆಚ್ಚು ಹೆಚ್ಚು ಕಾಡುಗಳನ್ನು ಬೆಳೆಸಬೇಕು, ವನಮಹೋತ್ಸವವನ್ನು ಆಚರಿಸುವ ಮೂಲಕ ಪರಿಸರದ ಬಗ್ಗೆ ಕಾಳಜಿ ವಹಿಸುವುದು.

     5. ಪ್ರವಾಸಿ ತಾಣಗಳ ಜನದಟ್ಟಣೆಯನ್ನು ಕಡಿಮೆ ಮಾಡಲು ಏಕಕಾಲದಲ್ಲಿ ಹಲವಾರು ಪ್ರವಾಸಿ ತಾಣಗಳನ್ನು ಸ್ಥಾಪಿಸಿ ಅಲ್ಲಿ ಮೂಲಸೌಕರ್ಯವನ್ನು ಕಲ್ಪಿಸಿ ಪ್ರವಾಸಿಗರು ಚದುರಿ ಹೋಗುವಂತೆ ಮಾಡಬೇಕು. ಅಂದರೆ ಪ್ರತಿಯೊಂದು ಪ್ರವಾಸಿ ತಾಣಗಳು ತಮ್ಮ ಮೂಲಸೌಕರ್ಯಗಳಿಂದ ಕಂಗೊಳಿಸುವಂತೆ ಮಾಡಿ ಪರಿಸರದ ಮೇಲೆ ಒಂದೇ ಕಡೆಗೆ ಒತ್ತಡ ಬೀಳದಂತೆ ತಡೆಯಬೇಕು.

     6. ಉದ್ಯಾನವನಗಳಲ್ಲಿ ಪ್ರವಾಸಿಗರು ಅಡ್ಡಾದಿಡ್ಡಿಯಾಗಿ ಓಡಾಡುವುದರಿಂದ ಪ್ರಾಕೃತಿಕ ಸೌಂದರ್ಯ ಮಾಸಿಹೋಗುತ್ತದೆ. ಇದನ್ನು ತಡೆಯಲು ಪ್ರವಾಸೋದ್ಯಮ ಇಲಾಖೆಯು ಕಾಲುದಾರಿಗಳನ್ನು ನಿರ್ಮಿಸಿ ಪಾದಾಚಾರಿಗಳು ಅದೇ ಮಾರ್ಗಗಳಲ್ಲಿ ಸಂಚರಿಸುವಂತೆ ಮಾರ್ಗದರ್ಶನ ನೀಡಬೇಕು. ಕೆಲವು ಪ್ರವಾಸಿ ಸ್ಥಳಗಳಲ್ಲಿ ಗುರುತು ಕಂಬಗಳನ್ನು ನೆಡಲಾಗುತ್ತದೆ. ಆ ಪ್ರಕಾರವಾಗಿಯೇ ಪ್ರವಾಸಿಗರು ಸಂಚರಿಸಬೇಕು. ಸೂಚನಾ ಫಲಕಗಳನ್ನು ಅಲ್ಲಲ್ಲಿ ಹಾಕುವ ಮೂಲಕ ಪ್ರವಾಸಿಗರ ಅತಿರೇಕವನ್ನು ತಡೆಯಬೇಕು.

     7. ಕೆಲವು ಪ್ರವಾಸಿ ತಾಣಗಳಿಗೆ ಋತುಮಾನಗಳಿಗೆ ಅನುಗುಣವಾಗಿ ಪ್ರವೇಶಾವಕಾಶವನ್ನು ನೀಡಬೇಕು. ಏಕೆಂದರೆ ಸರ್ವಋತುಗಳಲ್ಲಿ ಪ್ರವಾಸಿಗರಿಗೆ ಅವಕಾಶ ನೀಡಿದರೆ ಪ್ರವಾಸಿ ಕೇಂದ್ರಗಳು ತಮ್ಮ ಸೌಂದರ್ಯವನ್ನು ಕಳೆದುಕೊಳ್ಳುತ್ತವೆ. ಪ್ರವೇಶ ಸ್ಥಳಗಳಲ್ಲಿ ಗರಿಷ್ಠ ಮಟ್ಟದ ದರಗಳನ್ನು ನಿಗದಿಪಡಿಸಬೇಕು.

     8. ಪ್ರವಾಸೋದ್ಯಮದ ಯೋಜನೆಯನ್ನು ಜಾರಿಗೊಳಿಸುವಾಗ ಹಸಿರು ಪರಿಸರವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.

     9. ಅತಿಯಾದ ವಾಹನಗಳ ದಟ್ಟಣೆಯನ್ನು ತಡೆಯಲು ವಾಹನಗಳು ಸರದಿ ಸಾಲಿನಲ್ಲಿ ಬರುವಂತೆ ಕ್ರಮ ವಹಿಸಬೇಕು.

     10. ಐತಿಹಾಸಿಕ ಹೆಸರು ಪಡೆದ ಬೀಚ್‌ಗಳು, ಜಲಪಾತಗಳು, ಗಿರಿಧಾಮಗಳು ಹಾಗೂ ನೈಸರ್ಗಿಕ ತಾಣಗಳಲ್ಲಿ ಅಕ್ರಮ ಕಟ್ಟಡಗಳನ್ನು ನಿರ್ಮಿಸಿದಂತೆ ತಡೆಯೊಡ್ಡಬೇಕು. ಶುದ್ಧ ಕುಡಿಯುವ ನೀರು, ಶೌಚಾಲಯ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ನೀಡಬೇಕು.

     11. ಪ್ರವಾಸಿಗರು ಪ್ರವಾಸಿ ಕೇಂದ್ರಗಳಿಗೆ ಬರುವಾಗ ಪ್ಲಾಸ್ಟಿಕ್ ಚೀಲ, ಆಹಾರ ಪಟ್ಟಣ, ನೀರಿನ ಬಾಟಲ್, ಟೀ ಕಪ್ಪುಗಳು, ಚಾಕೋಲೇಟ್ ಹಾಗೂ ಐಸ್ ಕ್ರೀಂಗಳನ್ನು ತರದಂತೆ ನಿರ್ಬಂಧ ಇರಬೇಕು.

    12. ಪ್ರವಾಸಿ ಕೇಂದ್ರಗಳಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು.

     13. ಪ್ರವಾಸಿ ಕೇಂದ್ರಗಳಲ್ಲಿ ನಿರುಪಯುಕ್ತ ವಸ್ತುಗಳನ್ನು ಬೇಗನೆ ವಿಲೇವಾರಿ ಮಾಡಲು ಅನುಕೂಲವಾಗುವಂತೆ ಕಡಿಮೆ ಪ್ರಮಾಣದ ಪ್ರವಾಸಿಗರಿಗೆ ಅವಕಾಶ ಕಲ್ಪಿಸಬೇಕು.

     14. ಪ್ರವಾಸೋದ್ಯಮದಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರು ಸೂಕ್ತ ತರಬೇತಿಯನ್ನು ಪಡೆದವರು ಆಗಿರಬೇಕು.

     15. ಪ್ರವಾಸಿಗರು ತಾವು ಹೋಗುವ ಸ್ಥಳದ ರೂಢಿ, ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ಗೌರವಿಸಬೇಕು.

     16. ಪ್ರವೇಶ ದ್ವಾರಗಳಲ್ಲಿ ವಾಹನಗಳನ್ನು ತಡೆಯುವ ತಡೆಗಳನ್ನು ನಿರ್ಮಿಸುವುದು.

     17. ಪ್ರವಾಸಿ ಕೇಂದ್ರಗಳಲ್ಲಿ ಪ್ರಾಣಿ-ಪಕ್ಷಿಗಳು ಹೆಚ್ಚಿರುವಂತೆ ಹಾಗೂ ವನಸ್ಪತಿ ಹೂಗಳು ಹೆಚ್ಚಿರುವ ಹಾಗೆ ಕ್ರಮ ಕೈಗೊಳ್ಳಬೇಕು.

     18. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಪರಿಸರ ರಕ್ಷಣೆಗೆ ಮುಂದಾಗಬೇಕು.

     19. ಸ್ಥಳೀಯರು ಪರಿಸರ ರಕ್ಷಣೆಗೆ ಮುಂದಾಗಬೇಕು.