ಪೀಠಿಕೆ:

ಸಮಾಜಶಾಸ್ತ್ರದ ವ್ಯಾಪ್ತಿಯ ಕುರಿತು ವಿ.ಎಫ್.ಕ್ಯಾಲ್‌ಬರ್ಟನ್‌ರವರು “ಸಮಾಜಶಾಸ್ತ್ರದ ಒಂದು ಸ್ಥಿತಿಸ್ಥಾಪಕ ಸ್ವರೂಪವುಳ್ಳ ವಿಜ್ಞಾನವಾಗಿದೆ. ಅದರ ಇತಿಮಿತಿಗಳು ಎಲ್ಲಿಂದ ಪ್ರಾರಂಭವಾಗಿ ಎಲ್ಲಿ ಅಂತ್ಯಗೊಳ್ಳುತ್ತವೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಸಮಾಜಶಾಸ್ತ್ರವು ಸಾಮಾಜಿಕ ಮನೋವಿಜ್ಞಾನವಾಗಿ ಪರಿವರ್ತಿತವಾಗುವುದು. ಆರ್ಥಿಕ ಸಿದ್ಧಾಂತಗಳು ಸಾಮಾಜಿಕ ಸಿದ್ಧಾಂತಗಳಾಗಿ ಪರಿವರ್ತಿತವಾಗುವುದಾಗಲೀ, ಎಂತಹ ಘಟ್ಟದಲ್ಲಿ ಎಂದು ಖಚಿತಗೊಳಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಸಮಾಜಶಾಸ್ತ್ರದ ವ್ಯಾಪ್ತಿಯನ್ನು ವಿವರಿಸಲು ಸಮಾಜಶಾಸ್ತ್ರಜ್ಞರಲ್ಲಿ ಎರಡು ಪ್ರಮುಖ ಪಂಥಗಳಿವೆ. ಅವುಗಳೆಂದರೆ :

1)ಸಾಂಪ್ರದಾಯಿಕ ಪಂಥ (ಔಪಚಾರಿಕ ಪಂಥ)

2) ಸಮನ್ವಯ ಪಂಥ

1) ಸಾಂಪ್ರದಾಯಿಕ ಪಂಥ/ ಔಪಚಾರಿಕ ಪಂಥ (Formal School)

ಈ ಪಂಥದ ಪ್ರತಿಪಾದಕರು: ಪರ್ಡಿನೆಂಡ್ ಟೋನೀಸ್, ಮ್ಯಾಕ್ಸ್ ವೆಬರ್, ಸ್ಮಾಲ್, ರ್ವೀ ಕಾಂಟ್ಜಾರ್ಜ್ಸಿಮೆಲ್ ಮುಂತಾದವರು. ಇವರ ಪ್ರಕಾರ;

* ಸಮಾಜಶಾಸ್ತ್ರವು ಇತರೆ ಸಮಾಜ ವಿಜ್ಞಾನಗಳ ವಿಷಯವನ್ನು ವಿಭಿನ್ನ ದೃಷ್ಟಿಕೋನದಿಂದ ಅಧ್ಯಯನ ಮಾಡುತ್ತದೆ.

* ಸಮಾಜಶಾಸ್ತ್ರವು ಸಾಂಸ್ಕೃತಿಕ ಸ್ಥಿರತೆ ಮತ್ತು ಬದಲಾವಣೆಗೆ ಕಾರಣವಾದ ಸಂಗತಿಗಳನ್ನು ಮಾತ್ರ ಕಂಡು ಹಿಡಿಯಲು ಪ್ರಯತ್ನಿಸುತ್ತದೆ.

* ಸಾಮಾಜಿಕ ಸಂಬಂಧಗಳಾದ ಸ್ಪರ್ಧೆ, ಶ್ರಮ ವಿಭಜನೆ. ಅಧೀನತೆ ಇವುಗಳನ್ನು ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರಗಳು ತಮ್ಮ ಹಿನ್ನೆಲೆಯಲ್ಲಿ ಅಧ್ಯಯನ ಮಾಡುತ್ತವೆ. ಆದರೆ ಸಮಾಜಶಾಸ್ತ್ರವು ಈ ಸಾಮಾಜಿಕ ಸಂಬಂಧಗಳನ್ನು ಬೇರೆಯವರ ಪ್ರಭಾವಗಳಿಂದ ಹೊರತು ಪಡಿಸುವುದರ ಮೂಲಕ ಶುದ್ಧ ಸಾಮಾಜಿಕ ಅಧ್ಯಯನವನ್ನು ಮಾಡುತ್ತವೆ.

* ಸಾಂಪ್ರದಾಯಿಕ ಪಂಥದವರ ಪ್ರಕಾರ ಸಮಾಜಶಾಸ್ತ್ರವು ಸಾಮಾಜಿಕ ಸಂಬಂಧ, ಸಾಮಾಜೀಕರಣ, ಸಂಘ-ಸಂಸ್ಥೆಗಳು ಮುಂತಾದವುಗಳ ವರ್ಗೀಕರಣ ಮತ್ತು ನಿರೂಪಣೆಯನ್ನು ನೀಡುತ್ತವೆ.

* ಸಾಮಾಜಿಕ ಸಂಬಂಧಗಳ ಜೈವಿಕ ಸ್ವರೂಪದ ಅಧ್ಯಯನ ನಡವಳಿಕೆಗಳು ಚಟುವಟಿಕೆಗಳ ನಿಶ್ಚಿತ ಅಧ್ಯಯನವನ್ನು ಸಮಾಜಶಾಸ್ತ್ರ ಮಾಡುತ್ತದೆ.

* ಸಮಾಜಶಾಸ್ತ್ರವು ಪ್ರಮುಖವಾಗಿ ಸಾಮಾಜಿಕ ಸಂಬಂಧಗಳನ್ನು ಅದೃಶ್ಯ ಹಾಗೂ ಬಾಹ್ಯ ರೂಪದಲ್ಲಿ ಅಭ್ಯಸಿಸುತ್ತದೆ. ಇದು ಕೆಲವೇ ನಿರ್ದಿಷ್ಟ ಮಾನವ ಸಂಬಂಧಗಳನ್ನು ಮಾತ್ರ ಅಧ್ಯಯನ ಮಾಡುತ್ತವೆ.

* ಸಮಾಜಶಾಸ್ತ್ರವು ಸಾಮಾಜಿಕ ವರ್ತನೆ ಹಾಗೂ ಸಾಮಾಜಿಕ ಸಂಬಂಧಗಳ ಕಾರಣ ಪರಿಣಾಮಗಳನ್ನು ಕಂಡುಹಿಡಿಯುತ್ತದೆ.

* ಮಾನಸಿಕ ಅಂಶಗಳ ಸ್ವರೂಪಗಳ ವಿಶ್ಲೇಷಣೆಯು ಇದರ ಕಾರ್ಯವಾಗಿದೆ. ಐತಿಹಾಸಿಕ ಅಧ್ಯಯನ ಮಾಡುವುದಿಲ್ಲ.

* ಸಮಾಜಶಾಸ್ತ್ರ ಒಂದು ಶುದ್ಧಶಾಸ್ತ್ರವಾಗಿದ್ದು ಕೆಲವೊಂದು ನಿರ್ದಿಷ್ಟ ಮಾನವೀಯ ಬಾಂಧವ್ಯಗಳನ್ನು ಮಾತ್ರ ಅಭ್ಯಸಿಸುತ್ತದೆ. ಆದ್ದರಿಂದ ಸಾಮಾಜಿಕ ಸಂಬಂಧಗಳನ್ನು ಅಭ್ಯಸಿಸುವ ಏಕೈಕ ವಿಜ್ಞಾನವೆಂದರೆ ಸಮಾಜಶಾಸ್ತ್ರ.

ಟೀಕೆಗಳು:

ಔಪಾಚಾರಿಕ ಪಂಥದಿಂದಾಗಿ ಸಮಾಜಶಾಸ್ತ್ರದ ವ್ಯಾಪ್ತಿ ಸಂಕುಚಿತವಾಗಿದೆ. ಆದರೆ ಸಮಾಜಶಾಸ್ತ್ರವನ್ನು ಸಾಮಾಜಿಕ ಸಂಬಂಧಗಳ ಸಾಮಾನ್ಯ ರೂಪದಲ್ಲಿ ಮಾತ್ರವಲ್ಲದೇ ಖಚಿತವಾದ ಸಾಮಾಜಿಕ ಜೀವನದ ಅಂಶಗಳನ್ನು ಅಧ್ಯಯನ ಮಾಡುವುದು ಅನಿವಾರ್ಯವಾಗಿದೆ.

ಶುದ್ಧ ಸಮಾಜಶಾಸ್ತ್ರದ ಕಲ್ಪನೆ ಅಪ್ರಯೋಗಿಕವಾಗಿದೆ. ಯಾಕೆಂದರೆ ಖಚಿತ ಸಂಬಂಧಗಳನ್ನು ಬಿಟ್ಟು ಶುದ್ಧ ಸಾಮಾಜಿಕ ರೂಪಗಳನ್ನು ಅಧ್ಯಯನ ಮಾಡುವುದು ಅಸಾಧ್ಯವಾಗಿದೆ. ಸ್ಪರ್ಧೆಯ ಸ್ವರೂಪವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಆರ್ಥಿಕ ಸಂಗತಿಗಳು ಮತ್ತು ಸಂದರ್ಭಗಳ ನೆರವು ಅಗತ್ಯವಾಗಿದೆ.

ಸಮಾಜಶಾಸ್ತ್ರದ ವ್ಯಾಪ್ತಿಯಲ್ಲಿ ಧರ್ಮ, ಕಲೆ, ಕಾನೂನು ಮುಂತಾದ ವಿಷಯಗಳು ಬಂದಾಗ ಹೆಚ್ಚು ಶ್ರೀಮಂತವಾಗುತ್ತದೆ ಮತ್ತು ಪರಿಪೂರ್ಣತೆಗೆ ಕಾರಣವಾಗುತ್ತದೆ.

ಸಮಾಜದ ಸ್ವರೂಪ ಮತ್ತು ಸಂಬಂಧಗಳು ನಿರಂತರವಾಗಿ ಪರಿವರ್ತನೆಗೆ ಒಳಗಾಗುವುದರಿಂದ ಶುದ್ಧ ಸಂಬಂಧಗಳನ್ನು ಹುಡುಕುವುದರಲ್ಲಿ ಯಾವುದೇ ಅರ್ಥವಿಲ್ಲ.

ರೇಖಾ ಗಣಿತದ ಖಚಿತತೆಯನ್ನು ಸಮಾಜಶಾಸ್ತ್ರಕ್ಕೆ ಹೋಲಿಸಲು ಸಾಧ್ಯವಿಲ್ಲ. ಯಾಕೆಂದರೆ ಸಮಾಜಶಾಸ್ತ್ರದಲ್ಲಿ ಸಂಬಂಧಗಳ ಸ್ವರೂಪ ಅಸ್ಪಷ್ಟ ಮತ್ತು ಖಚಿತವಾಗಿಲ್ಲದಿರುವುದು ಕಂಡು ಬರುತ್ತದೆ. ಯಾವುದೇ ಶಾಸ್ತ್ರವು ಏಕಾಂಗಿಯಾಗಿ ಬೆಳೆಯಲಾರದು.

ಸಮಾಜಶಾಸ್ತ್ರವನ್ನು ಒಳಗೊಂಡು ಸಮಾಜಶಾಸ್ತ್ರ ಮಾತ್ರವಲ್ಲದೇ ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಕಾನೂನು ಇವೇ ಮೊದಲಾದವುಗಳು ಸಹ ಮಾನವನ ಸಂಬಂಧಗಳನ್ನು ಅಧ್ಯಯನ ಮಾಡುತ್ತದೆ. 

ಒಟ್ಟಾರೆ ಸಮಾಜಶಾಸ್ತ್ರವು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಮಾನವನ ಸಾಮಾಜಿಕ ಜೀವನವನ್ನು ಸಮಗ್ರವಾಗಿ ಅಧ್ಯಯನ ಮಾಡುವ ಶಾಸ್ತ್ರವಾಗಿದೆ. 

2) ಸಮನ್ವಯ ಪಂಥ (ಸಮನ್ವಯವಾದ/ಸಂಯೋಜಕವಾದ)(Synthetic School):

ಈ ಪಂಥದ ಪ್ರಮುಖ ಪ್ರತಿಪಾದಕರೆಂದರೆ ಫ್ರಾನ್ಸಿನ ಎಮಿಲಿಡರ್ಕಿಂ, ಇಂಗ್ಲೆಂಡಿನ ಹಾಬ್ಹೌಸ್, ಅಮೇರಿಕೆಯ ಸಾರೋಕಿನ್.”

ಸಮನ್ವಯವಾದವು ಸಮಾಜಶಾಸ್ತ್ರವನ್ನು ವಿಶಿಷ್ಟವಾದ ಸಮಾಜ ವಿಜ್ಞಾನಗಳ ಸಮನ್ವಯ ಅಥವಾ ಒಂದು ಸಾಮಾನ್ಯ ವಿಜ್ಞಾನವೆಂಬುದಾಗಿ ಪರಿಗಣಿಸಿದೆ. ಸಮಾಜಶಾಸ್ತ್ರದ ವ್ಯಾಪ್ತಿಯಲ್ಲಿ ಎಲ್ಲಾ ಸಾಮಾಜಿಕ ಶಾಸ್ತ್ರಗಳಲ್ಲಿ ವಿಶೇಷ ಸ್ಥಾನವಿದೆ ಎಂಬುದನ್ನು ಈ ಪಂಥದ ಪ್ರತಿಪಾದಕರು ಪ್ರತಿಪಾದಿಸಿದ್ದಾರೆ.

ಸಮನ್ವಯ ದೃಷ್ಟಿಯಲ್ಲಿ ಸಮಾಜಶಾಸ್ತ್ರವು ಒಂದು ಸಾಮಾನ್ಯ ವಿಜ್ಞಾನ, ಆದರೆ ಸಮಾಜದ ಸಮಗ್ರ ದರ್ಶನವನ್ನು ಮಾಡಿಸುವ ಒಂದು ಶಾಸ್ತ್ರ. ಇತರೆಲ್ಲ ವಿಜ್ಞಾನಗಳ ಫಲಿತಾಂಶವನ್ನು ಸಮಾಜಶಾಸ್ತ್ರವು ಕ್ರೋಡೀಕರಿಸಿ ಸಮನ್ವಯಗೊಳಿಸುತ್ತದೆ. ಆದ್ದರಿಂದ ಇದು ಸಮಾಜ ವಿಜ್ಞಾನಗಳ ಸಂಯೋಗವಾಗಿದೆ.

ಈ ಪಂಥದವರ ಪ್ರಕಾರ ಸಾಮಾಜಿಕ ಜೀವನದ ಸಮಗ್ರತೆಗೆ ಅನ್ವಯವಾಗುವಂತಹ ಸಾಮಾನ್ಯ ನಿಯಮಗಳನ್ನು ನಿರೂಪಿಸುವುದು ಈ ಶಾಸ್ತ್ರದ ಉದ್ದೇಶವಾಗಿದೆ.ಈ ರೀತಿ ಸಮನ್ವಯ ಪಂಥದ ಪ್ರತಿಪಾದಕರು ಸಮಾಜಶಾಸ್ತ್ರದ ವ್ಯಾಪ್ತಿಯನ್ನು ವಿಸ್ತಾರಗೊಳಿಸಿದ್ದಾರೆ.

ಸಮಾಜಶಾಸ್ತ್ರದ ವ್ಯಾಪ್ತಿಯ ಅಧ್ಯಯನದಲ್ಲಿ 3 ಮುಖ್ಯ ಅಂಶಗಳಿವೆ.

1) ಅನುಭವಾತ್ಮಕ ಅಧ್ಯಯನ: ಇದು ಪ್ರಸಕ್ತ ಸಾಮಾಜಿಕ ವಿಷಯಗಳು, ವಾಸ್ತವದಲ್ಲಿರುವ ಸಂಬಂಧಪಟ್ಟ ವಿಷಯಗಳ ಬಗ್ಗೆ ಸಮೀಕ್ಷೆ ನಡೆಸುತ್ತದೆ.

2) ಸಾಮಾಜಿಕ ತತ್ವಶಾಸ್ತ್ರ: ಇದು ಸವಿಸ್ತಾರವಾದ ರೀತಿಯಲ್ಲಿ ಸಾಮಾಜಿಕ ವ್ಯವಸ್ಥೆ ಹಾಗೂ ಜೀವನದ ಆದರ್ಶವನ್ನು ರೂಪಿಸುತ್ತದೆ.

3) ವ್ಯವಹಾರಿಕ ಸಮಾಜಶಾಸ್ತ್ರ: ಸಾಮಾಜಿಕ ತತ್ವಶಾಸ್ತ್ರದ ಜೀವನ ಆದರ್ಶಗಳನ್ನು ರೂಪಿಸಲು ಉಪಯೋಗಕರವಾದ ಸಲಹೆಗಳು ಬೇಕಾಗಿದ್ದು, ಅದನ್ನು ವ್ಯವಹಾರಿಕ ಸಮಾಜಶಾಸ್ತ್ರ ನೀಡುತ್ತವೆ. 

ಫ್ರೆಂಚ್ ಸಮಾಜಶಾಸ್ತ್ರಜ್ಞರಾದ ಎಮಿಲಿಡರ್ಕಿಂ ಅವರು ಸಮಾಜಶಾಸ್ತ್ರದ ವ್ಯಾಪ್ತಿಯನ್ನು ಕುರಿತಂತೆ ಈ ಕೆಳಕಂಡ ಮೂರು ವಿಭಾಗಗಳನ್ನು ಮಾಡಿದ್ದಾರೆ.

1. ಸಾಮಾಜಿಕರಚನಾತ್ಮಕಶಾಸ್ತ್ರ (Social Morphology): ಇದರಲ್ಲಿ ಸಾಮಾಜಿಕ ಜೀವನವನ್ನು ಭೌಗೋಳಿಕ ಹಿನ್ನಲೆಯಲ್ಲಿ ಅವಲೋಕಿಸಿ. ಅವುಗಳು ಮನುಷ್ಯನ ಸಾಮಾಜಿಕ ಜೀವನದ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಸುತ್ತದೆ.’

2. ಸಾಮಾಜಿಕಶರೀರಶಾಸ್ತ್ರ (Social physiology): ಇದರಲ್ಲಿ ಸಾಮಾಜಿಕ ಜೀವನದ ವಿಶಿಷ್ಟ ವಿಭಾಗಗಳಾದ ಧರ್ಮ, ಜಾತಿ, ಅರ್ಥವ್ಯವಸ್ಥೆ ಮುಂತಾದುವುಗಳನ್ನು ಪರಿಚಯ ಮಾಡಿಕೊಡಲಾಗುತ್ತದೆ. 

3. ಸಾಮಾನ್ಯಸಮಾಜಶಾಸ್ತ್ರ(General Sociology): ಸಾಮಾಜಿಕ ಜೀವನಕ್ಕೆ ಸಂಬಂಧಿಸಿದ ನಿಯಮಗಳನ್ನು ಸಾಮಾನ್ಯ ಸಮಾಜಶಾಸ್ತ್ರದಲ್ಲಿ ರೂಪಿಸಲಾಗುತ್ತದೆ. ಅಲ್ಲದೆ ಸಾಮಾಜಿಕ ನಿಯಂತ್ರಣ ಮತ್ತು ಬದಲಾವಣೆಗಳನ್ನು ವಿವರಿಸುತ್ತದೆ. 

ಅಲೆಕ್ಸ್ ಇಂಕೆಲೆಸ್ರವರ ಪ್ರಕಾರ: ಸಮಾಜಶಾಸ್ತ್ರದ ಅಧ್ಯಯನ ವಿಷಯಗಳು ಈ ಕೆಳಕಂಡಂತಿವೆ.

1. ಸಮಾಜಶಾಸ್ತ್ರೀಯವಿಶ್ಲೇಷಣೆ(Sociological Analysis): ಮಾನವನ ಸಂಸ್ಕೃತಿ ಮತ್ತು ಸಮಾಜ, ಸಮಾಜಶಾಸ್ತ್ರೀಯ ದೃಷ್ಟಿಕೋನ, ವೈಜ್ಞಾನಿಕ ವಿಧಾನ ಇವುಗಳನ್ನೊಳಗೊಂಡಿದೆ.

2. ಸಾಮಾಜಿಕಜೀವನದಪ್ರಾಥಮಿಕ ಘಟಕಗಳು (Primary Units of Social Life): ಸಾಮಾಜಿಕ ವರ್ತನೆಗಳು ಮತ್ತು ಸಂಬಂಧಗಳು, ವ್ಯಕ್ತಿತ್ವ, ಸಮೂಹಗಳು, ಸಮುದಾಯಗಳು, ಸಂಘಗಳು ಮತ್ತು ಸಂಘಟನೆಗಳು, ಜನಸಂಖ್ಯೆ ಮತ್ತು ಸಮಾಜ ಇವುಗಳನ್ನೊಳಗೊಂಡಿದೆ. 

3. ಪ್ರಮುಖಸಾಮಾಜಿಕಸಂಸ್ಥೆಗಳು (Main Social Institutions): ಕೌಟುಂಬಿಕ, ಆರ್ಥಿಕ, ರಾಜಕೀಯ, ಕಾನೂನಾತ್ಮಕ, ಧಾರ್ಮಿಕ, ಶೈಕ್ಷಣಿಕ ಮತ್ತು ಮನೋರಂಜನಾ ಸಂಸ್ಥೆಗಳನ್ನು ಅಧ್ಯಯನ ಮಾಡುತ್ತದೆ.

4. ಮೂಲಭೂತಸಾಮಾಜಿಕಪ್ರಕ್ರಿಯೆಗಳು (Fundamental Social Processes): ಸಹಕಾರ, ಸ್ಪರ್ಧೆ, ಘರ್ಷಣೆ, ಹೊಂದಾಣಿಕೆ, ಸಾಮಾಜಿಕ ಭೇದ, ಸಾಮಾಜಿಕ ಸ್ತರವಿನ್ಯಾಸ, ಸಾಮಾಜೀಕರಣ ಇವೇ ಮೊದಲಾದವುಗಳನ್ನು ಅಧ್ಯಯನ ಮಾಡುತ್ತದೆ.

ಕಾರ್ಲ್‌ಮನ್ ಹ್ಯಾಮ್ ರವರ ಸಮಾಜಶಾಸ್ತ್ರದ ವ್ಯಾಪ್ತಿಯ ಕುರಿತು ಸಮಾಜಶಾಸ್ತ್ರವನ್ನು ಎರಡು ಮುಖ್ಯ ಭಾಗಗಳನ್ನಾಗಿ ವಿಂಗಡಿಸಿದ್ದಾರೆ. 

1) ಸಾಮಾನ್ಯ ಸಮಾಜಶಾಸ್ತ್ರ: ಇದು ಎಲ್ಲಾ ಸಮಾಜಗಳಲ್ಲಿ ಸಾಮಾನ್ಯವಾಗಿರುವ ಒಟ್ಟಿಗೆ ಬಾಳಲು ಬೇಕಾಗಿರುವ ಅಂಶಗಳನ್ನು ವಿವರಿಸುತ್ತದೆ.

2) ಐತಿಹಾಸಿಕ ಸಮಾಜಶಾಸ್ತ್ರ: ಇದು ಸಮಾಜದ ಐತಿಹಾಸಿಕ ಅಂಶಗಳನ್ನು ಪರಿಶೀಲಿಸುತ್ತದೆ. ಅಲ್ಲದೆ ಸಮಾಜದ ಸಾಮಾನ್ಯ ಸ್ವರೂಪಗಳನ್ನು ಅಧ್ಯಯನ ಮಾಡುತ್ತದೆ. 

ಆಧುನಿಕ ಕಾಲದಲ್ಲಿ ಸಮಾಜಶಾಸ್ತ್ರವು ವಿವಿಧ ಶಾಖೆ ಮತ್ತು ಉಪಶಾಖೆಗಳಾಗಿ ಬೆಳವಣಿಗೆಯಾಗಿದೆ. ಅವುಗಳಲ್ಲಿ ಪ್ರಮುಖವಾದವುಗಳು

Urban Sociology, Rural Sociology, Industrial Sociology, Educational Sociology, Social Psychology, Sociology of Religion, Political Sociology, Sociology of Law, Sociology of Science and Invention.

ಸಮನ್ವಯ ಪಂಥವು ಸಮಾಜಶಾಸ್ತ್ರದ ವ್ಯಾಪ್ತಿಯನ್ನು ಬಹುವಾಗಿ ಹಿಗ್ಗಿಸಿದೆ. ಇದನ್ನು ಹಲವು ಸಮಾಜ ವಿಜ್ಞಾನಗಳ ಕಲಬೆರಕೆ, ಇದಕ್ಕೆ ಸ್ವತಂತ್ರವಾದ ಅಧ್ಯಯನದ ವಸ್ತುವೇ ಇಲ್ಲವೆಂದು ವಾದಿಸುವುದು ಸರಿಯಲ್ಲ. ಬೇರೆ-ಬೇರೆ ವಿಜ್ಞಾನಗಳಿಂದ ಹಲವಾರು ವಿಷಯಗಳನ್ನು ತನ್ನ ಕ್ಷೇತ್ರದಲ್ಲಿ ಬಳಸಿಕೊಂಡರೂ ಸಮಾಜಶಾಸ್ತ್ರಕ್ಕೆ ತನ್ನದೇ ಆದ ಸ್ವತಂತ್ರವಾದ ಅಸ್ತಿತ್ವವಿದ್ದು, ತ್ವರಿತ ಗತಿಯಲ್ಲಿ ನಿರಂತರವಾಗಿ ಬೆಳೆಯುತ್ತಿದೆ. 

ಉಪಸಂಹಾರ:

ಹೀಗೆ ಸಮಾಜಶಾಸ್ತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಎರಡು ಪಂಥಗಳಿವೆ. ಸಾಂಪ್ರದಾಯಿಕ ಪಂಥದವರು ಸಮಾಜಶಾಸ್ತ್ರವನ್ನು ವಿಶೇಷ ಮತ್ತು ಶುದ್ಧವೆಂದು ಪ್ರತಿಪಾದಿಸಿ ಮಿತಿಗೊಳಿಸಿದರೆ, ಸಮನ್ವಯ ಪಂಥದವರು ಅದನ್ನು ಹಿಗ್ಗಿಸಿದ್ದಾರೆ. ಪರಿಣಾಮವಾಗಿ ಉಳಿದ ಸಮಾಜ ವಿಜ್ಞಾನಗಳಿಗಿಂತಲೂ ಇದರ ಕ್ಷೇತ್ರವೂ ಹೆಚ್ಚು ವ್ಯಾಪಕ ಹಾಗೂ ಸಂಕೀರ್ಣವಾಗಿದೆ.