ಪರಿಶಿಷ್ಟ ಜಾತಿಗಳ ಜನರ ಹಿತಾಸಕ್ತಿಗಳನ್ನು ಕಾಪಾಡಲು ರಚನೆಗೊಂಡ ಸಂಸ್ಥೆಯಂದರೆ ಅದು ರಾಷ್ಟ್ರೀಯ ಪರಿಶಿಷ್ಟಜಾತಿಗಳ ಆಯೋಗ. ಪರಿಶಿಷ್ಟ ಜಾತಿಗಳ ಜನರು ಎದುರಿಸುತ್ತಿರುವ ಸಾಮಾಜಿಕ ಅಸಮಾನತೆ ಶೈಕ್ಷಣಿಕ ಹಿಂದುಳಿಕೆ, ಆರ್ಥಿಕ ದುಸ್ಥಿತಿ ಮತ್ತು ಸಾಂಸ್ಕೃತಿಕ ಹಿನ್ನೆಡೆಗಳನ್ನು ಗಮನದಲ್ಲಿಟ್ಟುಕೊಂಡ ಭಾರತ ಸರ್ಕಾರವು ಸಂವಿಧಾನದ 338 ನೇ ವಿಧಿಯನ್ವಯ ಪರಿಶಿಷ್ಟ ಜಾತಿಗಳ ಆಯೋಗವನ್ನು ರಚನೆ ಮಾಡಿದೆ. ಅದರ ಕಾರ್ಯವನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು.

ರಚನೆ: (Composition)

ಸಂವಿಧಾನದ 338ನೇ ವಿಧಿಯ ಪ್ರಕಾರ ಪ್ರಾರಂಭದಲ್ಲಿ ಪರಿಶಿಷ್ಟ ಜನರ ಹಿತಾಸಕ್ತಿಗಾಗಿ ವಿಶೇಷ ಅಧಿಕಾರಿಯ ನೇಮಕಕ್ಕೆ ಆಸ್ಪದ ನೀಡಲಾಗಿತ್ತು. ಅವರನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡದ ಆಯುಕ್ತರೆಂದು ಕರೆಯಲಾಗುತ್ತಿತ್ತು. 1985ರ ವೇಳೆಗೆ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಒತ್ತಡದ ಮೇರೆಗೆ ಸಂಸತ್ತು ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ಪಂಗಡದ ಆಯೋಗವನ್ನು ಏಕಸದಸ್ಯ ಆಯೋಗದಿಂದ ಬಹು ಸದಸ್ಯ ಆಯೋಗವನ್ನಾಗಿ ಮಾಡಲು ಮುಂದಾಯಿತು. ಪರಿಣಾಮವಾಗಿ 1990ರಲ್ಲಿ ಸಂವಿಧಾನದ 65 ತಿದ್ದುಪಡಿಯ ಮೂಲಕ ಬಹು ಸದಸ್ಯರನ್ನೊಳಗೊಂಡ ಆಯೋಗ ಅಸ್ತಿತ್ವಕ್ಕೆ ಬಂದಿತು. ಈ ಆಯೋಗವು ಒಬ್ಬ ಅಧ್ಯಕ್ಷ ಮತ್ತು ಒಬ್ಬ ಉಪಾಧ್ಯಕ್ಷ ಹಾಗೂ ಮೂರು ಜನ ಸದಸ್ಯರನ್ನು ಹೊಂದಿತು. 2003 ರಲ್ಲಿ ಸಂವಿಧಾನದ 89ನೇ ತಿದ್ದುಪಡಿಯ ಪ್ರಕಾರ 2004ರಲ್ಲಿ ಜಾರಿಗೆ ಬರುವಂತೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ ಮತ್ತು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಎಂಬುದಾಗಿ ಅವುಗಳನ್ನು ಬೇರ್ಪಡಿಸಲಾಯಿತು. ಪ್ರಸ್ತುತ 2004ರಲ್ಲಿ ಬೇರ್ಪಟ್ಟ ಆಯೋಗ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವು ಕನಿಷ್ಠ ೪ ಮತ್ತು ಗರಿಷ್ಠ 11 ಜನ ಸದಸ್ಯರನ್ನು ಹೊಂದಿದೆ. ಇವರನ್ನು ಭಾರತ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ. ಆಯೋಗದ ಸದಸ್ಯರಲ್ಲಿ ಕನಿಷ್ಠ ಒಬ್ಬರಾದರೂ ಮಹಿಳಾ ಸದಸ್ಯರಿರಬೇಕೆಂಬ ನಿಯಮವಿದೆ.

ಕಾರ್ಯಗಳು: (Functions) 

 ಪರಿಶಿಷ್ಟ ಆಯೋಗದ ಕಾರ್ಯಗಳು ಈ ಕೆಳಗಿನಂತಿವೆ

  1. ಸಂವಿಧಾನದಡಿಯಲ್ಲಿ ಪರಿಶಿಷ್ಟ ಜಾತಿಗಳಿಗೆ ಒದಗಿಸಲಾದ ಎಲ್ಲಾ ಸುರಕ್ಷತಾ ನಿಬಂಧನೆಗಳನ್ನು ತನಿಖೆ ಮಾಡಿ ಮೇಲ್ವಿಚಾರಣೆ ಮಾಡುವುದು.
  2. ಪರಿಶಿಷ್ಟ ಜಾತಿಗಳ ರಕ್ಷಣೆ ಹಾಗೂ ಹಕ್ಕುಗಳನ್ನು ಒದಗಿಸುವಲ್ಲಿ ವಂಚನೆಯಾಗಿದ್ದರೆ ಅದಕ್ಕೆ ಸಂಬಂಧಿಸಿದ ದೂರುಗಳು ಬಂದರೆ ಅವುಗಳನ್ನು ಸ್ವೀಕರಿಸುವುದು ಮತ್ತು ವಿಚಾರಣೆ ಮಾಡುವುದು.
  3. ಪರಿಶಿಷ್ಟ ಜಾತಿಗಳ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಲು ಶಿಫಾರಸ್ಸು ಮಾಡುತ್ತದೆ. ನಂತರ ಸಮುದಾಯದ ಕಲ್ಯಾಣ, ರಕ್ಷಣೆ ಹಾಗೂ ಪ್ರಗತಿಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಸಹ ಸೂಚಿಸುತ್ತದೆ.
  4. ಈ ಸಮುದಾಯಗಳ ಮೇಲ್ವಿಚಾರಣಾ ಚಟುವಟಿಕೆಗಳನ್ನು ನಿರ್ವಹಿಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುತ್ತದೆ. ಈ ನ್ಯಾಯಾಲಯಗಳು ತ್ವರಿತ ವಿಚಾರಣೆ ನಡೆಸಿ ಸ್ಥಳದಲ್ಲೇ ಪರಿಹಾರ ನೀಡುತ್ತವೆ.
  5. ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕಾಗಿ ಕೈಗೊಂಡ ಕ್ರಮಗಳ ಬಗ್ಗೆ ರಾಷ್ಟ್ರಪತಿಗಳಿಗೆ ನಿಯತಕಾಲಿಕವಾಗಿ ವರದಿ ಸಲ್ಲಿಸುವುದು.
  6. ಈ ಸಮುದಾಯದ ವಿಚಾರಣಾ ನ್ಯಾಯಾಲಯಗಳ ವಿಲೇವಾರಿ ದರಗಳನ್ನು ಸಹ ಆಯೋಗವು ಮೇಲ್ವಿಚಾರಣೆ ಮಾಡುತ್ತದೆ.

ಸಮಸ್ಯೆಗಳು: (Problems)

 ಆಯೋಗದಲ್ಲಿ ಹಲವಾರು ನ್ಯೂನತೆಗಳು ಇವೆ ಅವುಗಳೆಂದರೆ.

  1. ಆಯೋಗವು ತನಿಖೆಯನ್ನು ನಡೆಸುವ ಮತ್ತು ಕ್ರಮಗಳನ್ನು ಶಿಫಾರಸ್ಸು ಮಾಡುವ ಅಧಿಕಾರವನ್ನು ಹೊಂದಿದ್ದರೂ ಈ ಶಿಫಾರಸ್ಸುಗಳು ಬದ್ಧವಾಗಿಲ್ಲ.
  2. ಆಯೋಗವು ಈ ಸಮುದಾಯದ ಗಣ್ಯರಿಗೆ ಆದ್ಯತೆ ನೀಡಿ ಸಮುದಾಯದ ತಳ ವರ್ಗವನ್ನು ನಿರ್ಲಕ್ಷಿಸಿದೆ.
  3. ತೀರ್ಪು ನೀಡುವಲ್ಲಿ ಹಾಗೂ ವಿಚಾರಣೆ ಮಾಡುವಲ್ಲಿ ಆಯೋಗವು ತುಂಬಾ ವಿಳಂಬ ನೀತಿಯನ್ನು ಅನುಸರಿಸುತ್ತದೆ.
  4. ಕ್ರಿಮಿನಲ್ ತನಿಖೆಯ ವಿಷಯದಲ್ಲಿ ಆಯೋಗವು ಆಮೆಗತಿಯ ಕೆಲಸವನ್ನು ಮಾಡುತ್ತದೆ.
  5. ಸಂಸ್ಥೆಗಳ ಪ್ರಸರಣವು ಆಂತರಿಕ ಗೊಂದಲಗಳಿಂದ  ಕೂಡಿದೆ.

ಉಪಸಂಹಾರ

ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗವು ಪರಿಶಿಷ್ಟ ಜಾತಿಗಳ ಹಕ್ಕುಗಳನ್ನು ಕಾಪಾಡಲು ಮತ್ತು ಅವರ ಅಭಿವೃದ್ಧಿಗೆ ಪೂರಕವಾಗಿರುವ ಪ್ರಮುಖ ಸಂಸ್ಥೆಯಾಗಿದೆ. ಆದರೆ ಇದರ ಶಿಫಾರಸ್ಸುಗಳಿಗೆ ಬದ್ಧತೆ ಇಲ್ಲದಿರುವುದು ಹಾಗೂ ವಿಳಂಬ ನೀತಿ ಮುಂತಾದ ಸಮಸ್ಯೆಗಳು ಅದರ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸುತ್ತವೆ. ಇವುಗಳನ್ನು ಸರಿಪಡಿಸಿದಲ್ಲಿ ಆಯೋಗವು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಸಾಮಾಜಿಕ ನ್ಯಾಯ ಸಾಧನೆಗೆ ಸಹಾಯಕವಾಗಬಹುದು.