ಭಕ್ತಿ ಆಂದೋಲನವು ಮಧ್ಯಯುಗೀನ ಭಾರತದಲ್ಲಿ ಉದ್ಭವಿಸಿದ ಪ್ರಮುಖ ಧಾರ್ಮಿಕ ಮತ್ತು ಸಾಮಾಜಿಕ ಚಳುವಳಿಯಾಗಿದೆ. ಈ ಚಳುವಳಿಯ ಮೂಲಕ ಸಂತರು ದೇವರ ಮೇಲಿನ ಭಕ್ತಿಯನ್ನು ಮುಖ್ಯವೆಂದು ಸಾರಿದರು. ಜಾತಿ ಭೇದ, ಅಸ್ಪೃಶ್ಯತೆ ಮತ್ತು ಮೂಢನಂಬಿಕೆಗಳನ್ನು ಖಂಡಿಸಿ ಸಮಾನತೆಯ ಸಂದೇಶವನ್ನು ನೀಡಿದರು. ಇದರಿಂದ ಸಮಾಜದಲ್ಲಿ ಹೊಸ ಚಿಂತನೆ ಮತ್ತು ನವೋದಯದ ವಾತಾವರಣ ನಿರ್ಮಾಣವಾಯಿತು.
1. ಹಿಂದೂ ಧರ್ಮ ಹಾಗೂ ಸಮಾಜದ ಪುನಶ್ಚೇತನ : ಇಸ್ಲಾಂ ಧರ್ಮದ ಪ್ರಸಾರ ಹಿಂದೂ ಧರ್ಮಕ್ಕೆ ದೊಡ್ಡ ಸವಾಲನ್ನು ಒಡ್ಡಿದ ಕಾಲದಲ್ಲಿ ಹಿಂದೂ ಸಂತರು ತಮ್ಮ ಧರ್ಮವನ್ನು ಸುಧಾರಿಸಿದರು. ಈ ಧರ್ಮ ಸುಧಾರಕರು ಹಿಂದೂ ಧರ್ಮ ಹಾಗೂ ಸಮಾಜದಲ್ಲಿ ನೆಲೆಗೊಂಡಿದ್ದ ಹಲವು ಅನಿಷ್ಠ ಪದ್ಧತಿಗಳನ್ನು ನಿವಾರಿಸಿ, ಹಿಂದೂ ಧರ್ಮವನ್ನು ಪುನಶ್ಚೇತನಗೊಳಿಸಿದರು. ಎಲ್ಲಾ ಸಂತರು ಜಾತಿ ಭೇದಗಳನ್ನು, ಅಸ್ಪೃಶ್ಯತೆಯನ್ನು, ಡಂಬಾಚಾರಗಳನ್ನು ಹಾಗೂ ಅಸಮಾನತೆಯನ್ನು ಖಂಡಿಸಿದರು. ಇವರ ಉದಾರ ದೃಷ್ಟಿಕೋನವು ಹಿಂದೂ ಸಮಾಜದಲ್ಲಿ ದೀನದಲಿತರಿಗೆ ನವೋದಯವನ್ನು ತಂದಿತು.
2. ಹಿಂದೂ-ಮುಸ್ಲಿಂ ಸಾಮರಸ್ಯ : ಕಬೀರ ಮತ್ತು ನಾನಕರು ಹಿಂದೂ ಮತ್ತು ಮುಸ್ಲಿಂ ಜನಾಂಗಗಳ ನಡುವಣ ಕಂದರವನ್ನು ನಿವಾರಿಸಿ, ಅವುಗಳ ನಡುವೆ ಸೌಹಾರ್ಧತೆಯನ್ನು ಮೂಡಿಸಲು ತುಂಬ ಶ್ರಮಿಸಿದರು. ಇವೆರಡೂ ಜನಾಂಗಗಳ ನಡುವಣ ದ್ವೇಷಾಸೂಯೆಗಳು ಕೆಲಮಟ್ಟಿಗೆ ಕಡಿಮೆಯಾದವು. “ದೇವನೊಬ್ಬ, ನಾಮ ಹಲವು”, “ರಾಮ ಅಲ್ಲಾ ಬೇರೆ ಅಲ್ಲ” ಎಂಬ ತತ್ತ್ವಗಳು ಪ್ರಚಾರ ಹೊಂದಿದವು. ಸಿಖ್ ಧರ್ಮವು ಹಿಂದೂ ಮುಸ್ಲಿಂ ಸಮನ್ವಯದ ಸಂಕೇತವಾಗಿದ್ದಿತು.
3. ಪ್ರಾದೇಶಿಕ ಭಾಷೆಗಳ ಸಾಹಿತ್ಯಾಭಿವೃದ್ಧಿ : ಭಕ್ತಿಪಂಥದ ಸುಧಾರಕರು ತಮ್ಮ ಪ್ರಾದೇಶಿಕ ಭಾಷೆಗಳ ಮೂಲಕ ಭೋಧನೆ ಹಾಗೂ ಬರವಣಿಗೆಯನ್ನು ಮಾಡಿದರು. ಜನ ಸಾಮಾನ್ಯರಿಗೆ ಅವರಾಡುವ ಭಾಷೆಯ ಮೂಲಕ ತಮ್ಮ ಸಂದೇಶವನ್ನು ಸಾರುವುದು ಅವರ ಗುರಿಯಾಗಿತ್ತು. ಇದರಿಂದಾಗಿ ಹಿಂದೆ ಕಡೆಗಣಿಸಲ್ಪಟ್ಟ ಭಾಷೆಗಳು ಅಭಿವೃದ್ಧಿ ಹೊಂದಿದ್ದಲ್ಲದೆ, ಮರಾಠಿ, ಗುಜರಾತಿ, ತೆಲುಗು, ಕನ್ನಡ, ಬಂಗಾಳಿ ಇನ್ನೂ ಮುಂತಾದ ದೇಶೀಯ ಭಾಷೆಗಳಲ್ಲಿ ಉನ್ನತವಾದ ಧಾರ್ಮಿಕ ಹಾಗೂ ದಾರ್ಶನಿಕ ಗ್ರಂಥಗಳನ್ನು ರಚಿಸಲಾಯಿತು.
4. ಸಮಾನತೆಯ ತತ್ವ : ಭಕ್ತಿಪಂಥದ ಸುಧಾರಕರು ಜಾತಿ ಮತ್ತು ಲಿಂಗ ಭೇದಗಳನ್ನು ಖಂಡಿಸಿ, ಸಮಾನತೆಯ ತತ್ವವನ್ನು ಪ್ರತಿಪಾದಿಸಿದ್ದರಿಂದ ಕೆಳವರ್ಗದ ಜನರ ಹಾಗೂ ಮಹಿಳೆಯರ ಸ್ಥಿತಿಗತಿ ಸ್ವಲ್ಪ ಮಟ್ಟಿಗೆ ಉತ್ತಮವಾದವು. ದೇವರ ದೃಷ್ಟಿಯಲ್ಲಿ ಎಲ್ಲ ಮಾನವರು ಸರಿಸಮಾನರೆಂಬ ಭಾವನೆಯನ್ನು ಜನರಲ್ಲಿ ಮೂಡಿಸಿದರು. ಜಾತಿಗಳನ್ನು ಆದರಿಸಿದ ಮೇಲು ಕೀಳೆಂಬ ಭಾವನೆ ಮತ್ತು ಧಾರ್ಮಿಕ ವಿಧಿ-ವಿಧಾನಗಳ ಬಿಗುವು ಶಿಥಿಲವಾಯಿತು.
5. ಮತಾಂತರ ಕಾರ್ಯದ ನಿಧಾನ : ಭಾರತಕ್ಕೆ ಇಸ್ಲಾಂ ಪ್ರವೇಶವಾದಂದಿನಿಂದ ಆಮಿಷಕ್ಕೆ, ಬಲಾತ್ಕಾರಕ್ಕೆ, ಆಕರ್ಷಣೆಗೆ ಅಥವಾ ಇನ್ಯಾವುದೋ ಕಾರಣದಿಂದ ಹಿಂದುಗಳು ಇಸ್ಲಾಂ ಧರ್ಮಕ್ಕೆ ಮತಾಂತರವಾಗ ತೊಡಗಿದರು. ಹಿಂದೂ ಧರ್ಮದ ಜಾತೀಯತೆಯ ಜಟಿಲತೆಯೂ ಇದಕ್ಕೆ ಕಾರಣವಾಗಿತ್ತು. ಇದಕ್ಕೆ ತಡೆಯೊಡ್ಡಲು ಹಿಂದೂ ಧರ್ಮವನ್ನು ಪರಿಷ್ಕರಿಸುವ ಸಂದರ್ಭದಲ್ಲೇ ಭಕ್ತಿಪಂಥಕ್ಕೆ ಮಹತ್ವ ದೊರೆಯಿತು. ಭಕ್ತಿಯ ಮೂಲಕವಾದರೂ ಮುಕ್ತಿಯ ಅವಕಾಶ ದೊರೆಯಿತು. ಭಕ್ತಿಪಂಥದ ಬಹುಜನಪ್ರಿಯತೆ ಇಸ್ಲಾಂ ಧರ್ಮಕ್ಕೆ ಆಕರ್ಷಣೆಗೆ ಒಳಗಾಗುವುದನ್ನು ಆದಷ್ಟು ತಪ್ಪಿಸಿತು. ಅಂದರೆ ಇಸ್ಲಾಂನ ಮತಾಂತರ ಕಾರ್ಯಕ್ಕೆ ತಡೆಯೊಡ್ಡಿದಂತಾಗಿ ನಿಧಾನಗತಿಯಲ್ಲಿ ಮುಂದುವರೆಯಿತಷ್ಟೆ.
6. ಬ್ರಾಹ್ಮಣರ ಪ್ರತಿಷ್ಠೆಗೆ ಪೆಟ್ಟು : ಭಕ್ತಿ ಪಂಥದಲ್ಲಿಯ ʻಭಕ್ತಿ’ಯ ಮಹತ್ವವು ಜಾತಿ, ಪಂಥ ಇತ್ಯಾದಿ ಪ್ರಭೇದಗಳನ್ನು ಮೀರಿದ್ದಿತು. ಇಲ್ಲಿಯವರೆಗೂ ಹಿಂದೂ ಧರ್ಮದ ಗುತ್ತಿಗೆ ಹಿಡಿದಿದ್ದ ಬ್ರಾಹ್ಮಣರನ್ನು ಮೀರಿ ಭಕ್ತಿ ಚಳುವಳಿಯು ಬೆಳೆಯಿತು. ಹಿಂದೂ ಧರ್ಮದ ನೇತೃತ್ವದ ಮೂಢನಂಬಿಕೆಗಳನ್ನು, ಕೆಟ್ಟ ಸಂಪ್ರದಾಯಗಳನ್ನು ಭಕ್ತಿಪಂಥವು ಖಂಡಿಸಿದುದರಿಂದ ಅವುಗಳ ನೇತೃತ್ವ ವಹಿಸುತ್ತಿದ್ದ ಬ್ರಾಹ್ಮಣರನ್ನು ಮೂಲೆಗುಂಪು ಮಾಡಿತೆಂದು ಹೇಳಬೇಕು. ಅವಿದ್ಯಾವಂತನಾದರೂ, ವೇದಾದ್ಯಯನವನ್ನು ಮಾಡದೆ ಇದ್ದರೂ, “ಭಕ್ತಿಯ ಮೂಲಕ ಮುಕ್ತಿಯ ಸೋಪಾನ” ವು ಬ್ರಾಹ್ಮಣರ ಜ್ಞಾನ ಪ್ರತಿಷ್ಠೆಗೆ ಪೆಟ್ಟಾಗಿ ಪರಿಣಮಿಸಿತು.
ಉಪಸಂಹಾರ:
ಭಕ್ತಿ ಚಳುವಳಿಯು ಭಾರತೀಯ ಇತಿಹಾಸದಲ್ಲಿ ಮಹತ್ವದ ಸ್ಥಾನವನ್ನು ಪಡೆದಿದೆ. ಇದು ಧಾರ್ಮಿಕ ಸುಧಾರಣೆ ಹಾಗೂ ಸಮಾಜದಲ್ಲಿ ಸೌಹಾರ್ದತೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿತು. ಭಕ್ತಿ, ಸಮಾನತೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಜನರಲ್ಲಿ ಬಿತ್ತಿತು. ಆದ್ದರಿಂದ ಭಕ್ತಿ ಆಂದೋಲನವು ಭಾರತದ ಸಾಂಸ್ಕೃತಿಕ ಪರಂಪರೆಯ ಮಹತ್ವದ ಅಧ್ಯಾಯವಾಗಿದೆ.