ಪುರಾತನ ಅವಶೇಷಗಳನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡುವುದನ್ನು ಪುರಾತತ್ವಶಾಸ್ತ್ರ ಎಂದು ಕರೆಯಲಾಗಿದೆ. ಭೂಮಿಯ ಮೇಲೆ ವಾಸ ಮಾಡಿದ ಮಾನವ ಸಮಾಜ ತಾನು ಬಾಳಿ ಬದುಕಿದ ಸಮಾಜದಲ್ಲಿ ತಾನು ಉಪಯೋಗಿಸುತ್ತಿದ್ದ ದಿನನಿತ್ಯದ ವಸ್ತುಗಳು, ನಂಬಿಕೆಗಳು, ಸಾಮಾಜಿಕ ಕುರುಹುಗಳು, ವಸ್ತ್ರಗಳು, ಆಭರಣಗಳು, ಸಲಕರಣೆಗಳು ಹಾಗೂ ಆಯುಧಗಳನ್ನು ಬಿಟ್ಟು ಹೋಗುತ್ತಾನೆ. ಈತ ಬಿಟ್ಟು ಹೋಗಿದ್ದ ಕುರುಹುಗಳು ಸ್ಪಷ್ಟ ಹಾಗೂ ಪರಿಪೂರ್ಣವಾಗಿರುತ್ತವೆ ಎಂದು ಹೇಳಲು ಬರುವುದಿಲ್ಲ. ಆದರೂ ಲಿಖಿತ ಆಧಾರಗಳು ಇಲ್ಲದಿದ್ದಾಗಲೂ ಸಹ ಕೆಲವು ವಿಶಿಷ್ಟ ಅಧ್ಯಯನಗಳ ವಿಧಾನದಿಂದ ಈ ಕುರುಹುಗಳನ್ನು ಒರೆಗಲ್ಲಿಗೆ ಹಚ್ಚಿ ಆಯಾ ಸಮಾಜದ ಸಂಸ್ಕೃತಿ ವಿವರಗಳನ್ನು ಅಸ್ಪಷ್ಟವಾಗಿ ಚಿತ್ರಿಸಲು ಸಾಧ್ಯ ಎಂಬ ಸಂಗತಿಗಳನ್ನು ಪುರಾತತ್ವಶಾಸ್ತ್ರ ಮನವರಿಕೆ ಮಾಡಿಕೊಡುತ್ತದೆ. ಪುರಾತತ್ವಶಾಸ್ತ್ರವು ಪ್ರಮುಖವಾಗಿ ಎರಡು ಭಾಗಗಳನ್ನು ಒಳಗೊಂಡಿದೆ. ಅವುಗಳೆಂದರೆ.
- ಜನಾಂಗ ವಿವರಣ ಪುರಾತತ್ವಶಾಸ್ತ್ರ
- ಸಮುದ್ರ ತಳದ ಪುರಾತತ್ವಶಾಸ್ತ್ರ
1. ಜನಾಂಗ ವಿವರಣ ಪುರಾತತ್ವ ಶಾಸ್ತ್ರ (Ethno Archaeology): ಜನಾಂಗ ವಿವರಣ ಪುರಾತತ್ವಶಾಸ್ತ್ರವು ಭಾರತದಲ್ಲಿ ಇತ್ತೀಚಿಗೆ ಹೆಚ್ಚು ಪ್ರಚಲಿತವಾಗುತ್ತಿದೆ. ಔದ್ಯೋಗಿಕ ಕ್ರಾಂತಿಯ ನಂತರ ಪ್ರಗತಿಯ ಪ್ರಭಾವಕ್ಕೆ ಸಿಲುಕಿ ನಲುಗದೆ ಸಂಪ್ರದಾಯ ಹಾಗೂ ಸಂಸ್ಕೃತಿಗಳನ್ನು ಶುದ್ಧವಾಗಿ ಉಳಿಸಿಕೊಂಡು ಬಂದಿರುವ ಆದಿವಾಸಿ ಜನಾಂಗದ ಮತ್ತು ವಲಸೆ ಜನಾಂಗಗಳ ಕುರಿತು ಅಧ್ಯಯನ ಮಾಡುವುದು ಪುರಾತತ್ವ ಶಾಸ್ತ್ರದ ಪ್ರಮುಖ ಗುರಿಯಾಗಿದೆ. ಹೀಗಾಗಿ ಪುರಾತತ್ವ ಅಧ್ಯಯನದಿಂದ ಗುಡ್ಡಗಾಡು ಜನರ ನಿಜವಾದ ಸಂಸ್ಕೃತಿಯ ದಾಖಲೆಗಳು ಬೆಳಕಿಗೆ ಬಂದಿವೆ. ಆದಿವಾಸಿ ಜನರು ಪ್ರಾಣಿಗಳನ್ನು ಬೇಟೆಯಾಡುವ ರೀತಿ, ವಾಸಸ್ಥಳಕ್ಕೆ ಗುಡಿಸಲುಗಳನ್ನು ಕಟ್ಟಿಕೊಳ್ಳುವ ಪರಿ, ಅವುಗಳ ಸಾಮಾಜಿಕ ರಚನೆ ಮೊದಲಾದವುಗಳನ್ನು ಅಧ್ಯಯನದಿಂದ ತಿಳಿದುಕೊಂಡು ಪುರಾತತ್ವ ಅವಶೇಷಗಳು ನೀಡುವ ಚಿತ್ರಗಳನ್ನು ಬಳಸಿಕೊಂಡು ನಿಖರವಾದ ಮಾಹಿತಿಯನ್ನು ವರದಿಯ ಮೂಲಕ ಹೊರಹಾಕುವುದು ಪುರಾತತ್ವ ಶಾಸ್ತ್ರದ ಮೊದಲ ಆದ್ಯತೆಯಾಗಿದೆ. ಡೆಕ್ಕನ್ ಕಾಲೇಜಿನ ಸಿಬ್ಬಂದಿಯು ಆಹಾರ್, ನಾವಾತೋಲಿ ಹಾಗೂ ತೆಕ್ಕಲಕೋಟೆ ಸ್ಥಳಗಳನ್ನು ಉತ್ಖನನ ಮಾಡುವುದರ ಜೊತೆಗೆ ಅದರ ಸುತ್ತಮುತ್ತ ವಾಸಿಸುತ್ತಿದ್ದ ಜನರ ಅಧ್ಯಯನವನ್ನು ಮಾಡಿದರು. ಮಧ್ಯಪ್ರದೇಶದ ಬಸ್ತರ ಪ್ರದೇಶದ ಜನಾಂಗಗಳು ಮತ್ತು ಒಡಿಸ್ಸಾದ ಬೋಡೋ ಜನಾಂಗಗಳ ಹಾಗೂ ಆಂಧ್ರದ ಯಾನಾಡಿ ಜನಾಂಗದ ಜೀವನ ಶೈಲಿಯ ಕುರಿತು ಸಹ ಅಧ್ಯಯನವನ್ನು ಮಾಡಲಾಗಿದೆ.
2. ಜಲತಳ ಪುರಾತತ್ವ ಶಾಸ್ತ್ರ(Marine Archaeology): ಜಲತಳ ಅಥವಾ ಸಮುದ್ರತಳ ಪುರಾತತ್ವಶಾಸ್ತ್ರ ಎಂದು ಕರೆಯಲಾಗುವ ಶಾಸ್ತ್ರವು ಸಮುದ್ರ ಹಾಗೂ ಸರೋವರಗಳ ತಳಭಾಗದಲ್ಲಿ ಕಂಡುಬರುವ ಪ್ರಾಚೀನ ನೆಲೆಗಳು ಹಾಗೂ ಮುಳುಗಡೆ ಹೊಂದಿರುವ ಹಡಗುಗಳನ್ನು ಗುರುತಿಸಿ ಅಧ್ಯಯನ ಮಾಡುತ್ತದೆ. ಜಲತಳ ಅಧ್ಯಯನವು ಪ್ರಾಚ್ಯವಸ್ತು ಅಧ್ಯಯನಕ್ಕಿಂತ ಭಿನ್ನವಾಗಿದೆ. ಇದು ಜಲತಳದ ನೆಲೆಯನ್ನು ಗುರುತಿಸುವ, ಉತ್ಖನನ ಮಾಡುವ ಹಾಗೂ ಪ್ರಾಚೀನ ಅವಶೇಷಗಳನ್ನು ದಾಖಲು ಮಾಡುವ ವಿಶಿಷ್ಟ ತಂತ್ರಗಳನ್ನು ʻʻ ಸ್ಕ್ಯೂಬಾ ಡೈವಿಂಗ್ʼʼ ಎಂಬ ತಂತ್ರಜ್ಞಾನದಿಂದ ರೂಪಿಸಿಕೊಳ್ಳಲಾಗಿದೆ. ಜಮೈಕಾದ ಪೋರ್ಟ್ ರಾಯಲ್ ಉತ್ಖನನಗಳು, ಉತ್ತರ ಸೈಪ್ರಸ್‌ನ ಕೈರೇನಿಯಾ ಹಡಗಿನ ಪುನಾರಚನೆ ಮುಂತಾದ ಸಾಧನೆಗಳು ಸ್ಕ್ಯೂಬಾ ಡೈವಿಂಗ್ ತಂತ್ರಜ್ಞಾನದಿಂದಲೇ ಪತ್ತೆ ಹಚ್ಚಲಾಯಿತು.
ಭಾರತದಲ್ಲಿಯೂ ಸಹ ಜಲತಳ ಪುರಾತತ್ವಶಾಸ್ತ್ರ ಇತ್ತೀಚೆಗೆ ಬೆಳಕಿಗೆ ಬಂದು ಅದರಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ಇದಕ್ಕಾಗಿ ಗೋವಾದಲ್ಲಿ ʻʻಭಾರತೀಯ ಸಾಗರ ಅಧ್ಯಯನ ಸಂಸ್ಥೆಯನ್ನು ಸ್ಥಾಪಿಸಲಾಗಿದೆʼʼ. ಇದು ʻʻಸಾಗರ ಪುರಾತತ್ವ ಘಟಕದ ಮೂಲಕ ಎಸ್. ಆರ್. ರಾವ್ ಅವರ ಅಧ್ಯಕ್ಷತೆಯಲ್ಲಿ ಭಾರತದ ಕರಾವಳಿ ಗುಂಟ ಸಂಶೋಧನೆ ಮಾಡಿ ಸುಮಾರು 200 ಹಡಗುಗಳು ಸಮುದ್ರದಲ್ಲಿ ಮುಳುಗಡೆಯಾದ ಕುರಿತು ನಿಖರ ಮಾಹಿತಿಗಳನ್ನು ಕಲೆ ಹಾಕಲಾಯಿತು. ನಂತರ ಗುಜರಾತಿನ ಕರಾವಳಿಯಲ್ಲಿ ದ್ವಾರಕಾ ನಗರದ ಅವಶೇಷಗಳನ್ನು ಗುರುತಿಸಲಾಗಿದೆ. 1983ರಲ್ಲಿ ಸ್ಕ್ಯೂಬಾ ಡೈವಿಂಗ್ ಮೂಲಕ ದ್ವಾರಕ ಹಾಗೂ ಬೇಟ್ ದ್ವಾರಕಗಳಲ್ಲಿ ಜಲತಳ ಅನ್ವೇಷಣೆ ಮಾಡಲು ಅರಬ್ಬಿ ಸಮುದ್ರದಲ್ಲಿ ಸುಮಾರು 10ಮೀಟರ್ ಆಳದಲ್ಲಿ ಇಳಿದು ಕಟ್ಟಡಗಳು ಹಾಗೂ ಕೋಟೆ ಕೊತ್ತಲುಗಳನ್ನು ಕಂಡು ಹಿಡಿಯಲಾಯಿತು. ಪ್ರಾಚೀನ ಕಾಲದ ತ್ರಿಕೋನಾಕಾರದ ಕಲ್ಲಿನ ಲಂಗರುಗಳು ಇಲ್ಲಿ ಪತ್ತೆಯಾಗಿವೆ. ಇವುಗಳು ಕ್ರಿಸ್ತಪೂರ್ವ 14 ನೇ ಶತಮಾನದ ಸೈಪ್ರಸ್ ಹಾಗೂ ಸಿರಿಯಾದ ಲಂಗರುಗಳನ್ನು ಹೋಲುತ್ತವೆ. ಬೇಟ್ ದ್ವಾರಕಾದಲ್ಲಿ ಸಿಕ್ಕ ಉತ್ತರ ಹರಪ್ಪಾ ಕಾಲದ ಮುದ್ರೆಯ ಮೇಲೆ ಮೂರು ತಲೆಯ ಪ್ರಾಣಿಯ ಚಿತ್ರವಿದೆ. ಇದು ಪರ್ಶಿಯನ್ ಕೊಲ್ಲಿಯ ಬೆಹ್ರನ್‌ನಲ್ಲಿ ದೊರಕಿರುವ ಮುದ್ರೆಗಳನ್ನು ಹೋಲುತ್ತದೆ. ಇಲ್ಲಿನ ಸಾಗರ ತಳದಲ್ಲಿ ದೊರೆತ ಮಣ್ಣಿನ ಪಾತ್ರೆಯ ಮೇಲೆ ವಿಕಸಿತ ಹರಪ್ಪ ನೆಲೆಯ ಲಿಪಿಯ ಚಿತ್ರವಿದೆ. ಈ ಎಲ್ಲಾ ಪುರಾತತ್ವ ವಸ್ತುಗಳು ಬೇಟ್ ದ್ವಾರಕಾ ನೆಲೆ ಕ್ರಿಸ್ತಪೂರ್ವ 1500 ರಷ್ಟು ಹಿಂದೆ ಅಸ್ತಿತ್ವದಲ್ಲಿದ್ದು ತದನಂತರ ಸಮುದ್ರ ಪಾತಳಿಯ ಹೆಚ್ಚಳದಿಂದ ಮುಳುಗಡೆಯಾಗಿರ ಬಹುದೆಂದು ಉಲ್ಲೇಖಿಸಲಾಗಿದೆ.
ಇದೇ ರೀತಿ ತಮಿಳುನಾಡು ಕಾವೇರಿಪಟ್ಲಂ ಪ್ರದೇಶದಲ್ಲಿ ಅನ್ವೇಷಣೆ ಮಾಡಿ ಅನೇಕ ಅವಶೇಷಗಳನ್ನು ಹೊರ ತಗೆಯಲಾಗಿದೆ.
ಆಳವಾಗಿಲ್ಲದ ಸಾಗರ ತಳದ ನೆಲೆಯನ್ನು ವ್ಯೋಮ್ ಛಾಯಾಚಿತ್ರದ ಸಹಾಯದಿಂದ ಕಂಡುಹಿಡಿಯ ಬಹುದಾಗಿದೆ. ಒಂದು ವೇಳೆ ಅಲ್ಲಿ ಹಡಗುಗಳು ಮುಳಗಡೆಯಾದ ಕುರುಹುಗಳು ಇದ್ದರೆ ವ್ಯೋಮ ಛಾಯಾಚಿತ್ರ ಅದನ್ನು ಸೆರೆಹಿಡಿದು ವರದಿ ಮಾಡುತ್ತದೆ. ಸಾಗರದ ಆಳ ಹೆಚ್ಚಿದಂತೆ ವ್ಯೋಮ ಛಾಯಾಚಿತ್ರವು ಕೆಲಸ ಮಾಡಲಾರದು.
ಸಾಗರದ ಆಳದಲ್ಲಿ ಮುಳುಗಡೆಯಾಗಿರುವ ವಸ್ತುಗಳನ್ನು ಕಂಡುಹಿಡಿಯಲು ಪ್ರತಿಧ್ವನಿ ನಿನಾದಕ ಮತ್ತು ಆಕಾಸ್ಟಿಕ್ ವ್ಯವಸ್ಥೆ ಎಂಬ ಎರಡು ವೈಜ್ಞಾನಿಕ ಸಾಧನಗಳು ಸಹಕಾರಿಯಾಗಿವೆ. ಹಡಗು ಮುಳುಗಡೆಯಾದ ಸ್ಥಳದ ಮೇಲೆ ಈ ಉಪಕರಣ ಹಾಯ್ದು ಹೋಗುವಾಗ ನಿನಾದಕ ಹೊರಡಿಸುವ ಪ್ರತಿಧ್ವನಿಯಲ್ಲಿ ತೀವ್ರ ಹೆಚ್ಚಳ ಕಂಡು ಬರುತ್ತದೆ. ಇದರಿಂದ ಸಮುದ್ರ ತಳದಲ್ಲಿನ ಹಡಗುಗಳ ಅವಶೇಷಗಳನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ.
ಸಮುದ್ರದಲ್ಲಿ ಪೂರ್ತಿ ಮುಳುಗಿಹೋಗಿರುವ ವಸ್ತುಗಳನ್ನು ಗುರುತಿಸುವುದಕ್ಕೆ ʻʻ ಓರ್ ಪ್ರೊ ಫೈಲರ್ʼʼ ಎಂಬ ಉಪಕರಣವನ್ನು ಬಳಕೆ ಮಾಡಲಾಗುತ್ತದೆ. ಈ ಉಪಕರಣವು ಎಷ್ಟು ಆಳದಲ್ಲಿ ಬೇಕಾದರೂ ತೂರಿಕೊಳ್ಳಬಲ್ಲದು. ಸಮುದ್ರದಲ್ಲಿ ಇನ್ನೂ ಹೆಚ್ಚಿನ ಆಳದಲ್ಲಿ ಮುಳುಗಿರುವ ವಸ್ತುಗಳನ್ನು ಪತ್ತೆ ಹಚ್ಚಲು ʻʻ ಬೂಮರ್ ಹಾಗೂ ಸ್ವಾರ್ಕರ್” ವ್ಯವಸ್ಥೆಯನ್ನು ಮಾಡಲಾಗುತ್ತದೆ. ಇವುಗಳು ತೀವ್ರವಾಗಿ ಶೋಧ ಕಾರ್ಯವನ್ನು ಮಾಡಿ ವಸ್ತುಗಳನ್ನು ಕಂಡು ಹಿಡಿಯುತ್ತವೆ.
ಹಾಗೆಯೇ ʻಸೈಡ್ ಸ್ಕ್ಯಾನ್ ಸೋನಾರ್ʼ ಎಂಬ ಉಪಕರಣವು ಸಮುದ್ರದ ತಳದಲ್ಲಿನ ವಸ್ತುಗಳ ಆಕೃತಿಗಳನ್ನು ಮತ್ತು ಅವುಗಳ ವಿಸ್ತಾರಗಳನ್ನು ಕಂಡುಹಿಡಿಯುವ ಪ್ರಮುಖ ಉಪಕರಣವಾಗಿದೆ. ಸರ್ವೇಕ್ಷಣ ಮಾಡುವ ಪಥದ ಎರಡೂ ಬದಿಗಳಲ್ಲಿನ ಲಕ್ಷಣಗಳನ್ನು ಸಹ ದಾಖಲು ಮಾಡುತ್ತದೆ. ಮುಳುಗಡೆಯಾಗಿರುವ ಹಡಗುಗಳು, ಲಂಗರುಗಳು ಹಾಗೂ ಕಟ್ಟಡ ರಚನೆಯ ಅವಶೇಷಗಳನ್ನು ಇದರ ಸಹಾಯದಿಂದ ದಾಖಲು ಮಾಡಿಕೊಳ್ಳಲಾಗುತ್ತದೆ.