1. ಪುರಾತತ್ವ ಶಾಸ್ತ್ರದ ಅರ್ಥ:

ಪುರಾತತ್ವ ಶಾಸ್ತ್ರವೆಂದರೆ ಮಾನವ ಸಮುದಾಯದ ಭೂತಕಾಲದ ಜೀವನವನ್ನು ಬೌದ್ಧಿಕ ಅವಶೇಷಗಳ  ಆಧಾರದಲ್ಲಿ ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಶಾಸ್ತ್ರ.

ಪುರಾತತ್ವಶಾಸ್ತ್ರವನ್ನು ಇಂಗ್ಲೀಷಿನಲ್ಲಿ ಆರ್ಕಿಯಾಲಜಿ (Archaeology)  ಎಂದು ಕರೆಯುತ್ತಾರೆ. Archaeology ಎಂಬ ಪದವು ಎರಡು ಗ್ರೀಕ್ ಪದಗಳಿಂದ ಬಂದಿದೆ.

Archaios (ಆರ್ಕಿಯೋಸ್‌) ಎಂದರೆ ಪ್ರಾಚೀನ ಅಥವಾ ಹಳೆಯ Logos  (ಲೋಗೋಸ್‌)  ಎಂದರೆ ಶಾಸ್ತ್ರ ಅಥವಾ ಅಧ್ಯಯನ.

Archaios ಎಂದರೆ ಪ್ರಾಚೀನ ಎಂದರ್ಥವಿದ್ದರೂ ಪ್ರಾಚೀನ ವಸ್ತು ಅಥವಾ ಅವಶೇಷ ಎಂಬ ಅರ್ಥದಲ್ಲಿ ಉಪಯೋಗಿಸಲಾಗುತ್ತಿದ್ದು ಒಟ್ಟಾರೆಯಾಗಿ ಪ್ರಾಚೀನ ವಸ್ತುಗಳ ಬಗ್ಗೆ ಮಾಡುವ ವೈಜ್ಞಾನಿಕ ಅಧ್ಯಯನವಾಗಿದೆ.

ಶೈಕ್ಷಣಿಕವಾಗಿ ಪುರಾತತ್ವಶಾಸ್ತ್ರವನ್ನು ಈ ರೀತಿ ಅರ್ಥೈಸಿಕೊಳ್ಳಬಹುದು. ಪುರಾತನ ಅವಶೇಷಗಳ ಶಾಸ್ತ್ರೀಯ ಅಧ್ಯಯನದಿಂದ ಮಾನವನ  ಗತಕಾಲದ ಸಂಸ್ಕೃತಿಯ ವಿವಿಧ ಮುಖಗಳನ್ನು ವಿವೇಚಿಸುವ ಶಾಸ್ತ್ರವೇ ಪುರಾತತ್ವಶಾಸ್ತ್ರ.

ಪುರಾತನ ಅಥವಾ ಹಿಂದಿನ ಅವಶೇಷಗಳೆಂದರೆ ಮಾನವನು ತಾನು ಜೀವಂತವಿದ್ದ ಕಾಲದಲ್ಲಿ ಬಳಸುತ್ತಿದ್ದ ಯಾವುದೇ ರೀತಿಯ ವಸ್ತುಗಳಾಗಿರಬಹುದು. ಉದಾಹರಣೆಗೆ ಅವನು ವಾಸವಿದ್ದ ಮನೆ,  ಗುಹೆ, ಅಲ್ಲಿ ಅವನು ರಚಿಸಿದ ಚಿತ್ರಗಳು, ಕಟ್ಟಡಗಳು, ದೇಗುಲಗಳು, ಪ್ರತಿಮೆ, ಮಡಿಕೆ, ಕಲ್ಲಿನ ಆಯುಧ, ಸಲಕರಣೆಗಳು, ಆಟಿಕೆಗಳು, ಶಾಸನಗಳು, ನಾಣ್ಯ, ಮುದ್ರೆ ಮುಂತಾದವು ಪ್ರಾಚ್ಯ ಅವಶೇಷಗಳ ಅಡಿ ಬರುತ್ತದೆ. ಇವುಗಳ ಮೂಲಕ ಆ ಕಾಲದ ಜನಜೀವನ ಮತ್ತು ಸಂಸ್ಕೃತಿಯನ್ನು ತಿಳಿಯಬಹುದು. ಅಂದರೆ ದೊರೆತ ಅವಶೇಷಗಳ ಕ್ರಮಬದ್ಧ ಮತ್ತು ವೈಜ್ಞಾನಿಕ ಅಧ್ಯಯನವೇ ಪುರಾತತ್ವ ಶಾಸ್ತ್ರ.

2.  ಪುರಾತತ್ವ ಶಾಸ್ತ್ರದ ವ್ಯಾಖ್ಯೆಗಳು

ಪುರಾತತ್ವಶಾಸ್ತ್ರಜ್ಞರಾದ ಡಾ. ಹೆನ್ರಿ ಅವರ ಪ್ರಕಾರ

ʻʻ  ಹಿಂದಿನ ಸತ್ಯಗಳನ್ನು ಕಂಡುಕೊಳ್ಳುವುದೇ ಪುರಾತತ್ವಶಾಸ್ತ್ರʼʼ

ಗ್ರಹಮ್‌ ಕ್ಲಾರ್ಕ್‌ ಅವರ ಪ್ರಕಾರ ʻʻಗತಕಾಲದ ಇತಿಹಾಸದ ಪುನರ್ ರಚನೆಗಾಗಿ ಪ್ರಾಚ್ಯ ವಸ್ತುಗಳ ಶಾಸ್ತ್ರೀಯ ಅಧ್ಯಯನವೇ ಪುರಾತತ್ವ ಶಾಸ್ತ್ರ.ʼʼ

ಎಚ್‌.ಡಿ ಸಂಕಾಲಿಯ ಅವರ ಪ್ರಕಾರ ʻʻಮಾನವನು ಭೂಮಿಯ ಮೇಲೆ ಕಾಣಿಸಿಕೊಂಡಾಗಿನಿಂದಲೂ ಅವನು ಕಾಲಾನುಕ್ರಮದಲ್ಲಿ ಬಿಟ್ಟು ಹೋದ ವಸ್ತುಗಳ ಅಧ್ಯಯನದಿಂದ ಮಾನವನ ಇತಿಹಾಸದ ನಿರ್ಮಾಣದ ಯತ್ನವೇ ಪುರಾತತ್ವಶಾಸ್ತ್ರʼʼ.

ಡೇವಿಡ್ ಹರ್ಟ್ಸ್ ಥಾಮಸ್:

ʻʻಪುರಾತತ್ವ ಶಾಸ್ತ್ರವು ನೀವು ಕಂಡುಕೊಳ್ಳುವುದಲ್ಲ ಅದು ನೀವು ಕಂಡುಕೊಳ್ಳುವುದು.ʼʼ

ಕೆತ್ಲಿನ್ ಕೆನ್ಯಾನ್

ಅವರ ಪ್ರಕಾರ ʻʻ ಪುರಾತತ್ವಶಾಸ್ತ್ರವು ಮಾನವ ಜನಾಂಗದ ಭೂತಕಾಲವನ್ನು ಅದರ ಭೌತಿಕ ಅಂಶಗಳಲ್ಲಿ ಕಂಡು ಹಿಡಿಯುವ ಮತ್ತು ಈ ಭೂತಕಾಲದ ಉತ್ಪನ್ನಗಳ ಅಧ್ಯಯನವಾಗಿದೆ.

ಶೈಕ್ಷಣಿಕವಾಗಿ ಪುರಾತತ್ವ ಶಾಸ್ತ್ರವನ್ನು ರೀತಿ ವ್ಯಾಖ್ಯಾನಿಸಬಹುದು

ʻʻ ಹಿಂದಿನ ಮಾನವ ಸಂಸ್ಕೃತಿಗಳು ಬಿಟ್ಟು ಹೋದ ಭೌತಿಕ ಅವಶೇಷಗಳನ್ನು ವ್ಯವಸ್ಥಿತವಾಗಿ ಹೊರತೆಗೆಯುವ ದಾಖಲಿಸುವ ಮತ್ತು ವಿಶ್ಲೇಷಿಸುವ ಮೂಲಕ ಗತಕಾಲದ ಮಾನವ ಜೀವನವನ್ನು ಅಧ್ಯಯನ ಮಾಡುವ ಶಾಸ್ತ್ರವೇ ಪುರಾತತ್ವ ಶಾಸ್ತ್ರʼʼ

3. ಪುರಾತತ್ವ ಶಾಸ್ತ್ರದ ಸ್ವರೂಪ

ಪುರಾತತ್ವಶಾಸ್ತ್ರವು ಮಾನವ ಇತಿಹಾಸದ ಅಧ್ಯಯನವನ್ನು ಭೌತಿಕ ಅವಶೇಷಗಳ ಆಧಾರದಲ್ಲಿ ನಡೆಸುವ ವೈಜ್ಞಾನಿಕ ಹಾಗೂ ಮಾನವೀಯ ಶಾಸ್ತ್ರವಾಗಿದೆ. ಇದು ಮಾನವ ಸಮುದಾಯಗಳ ಪುರಾತನ ಸಂಸ್ಕೃತಿ, ಸಮಾಜ, ಆರ್ಥಿಕ ವ್ಯವಸ್ಥೆ, ಧಾರ್ಮಿಕ ನಂಬಿಕೆಗಳು ಮತ್ತು ತಾಂತ್ರಿಕ ಅಭಿವೃದ್ಧಿಯನ್ನು ಅವಶೇಷಗಳು, ನಿರ್ಮಿತಿಗಳು, ಪರಿಸರ ಸಂಬಂಧಿತ ಸಾಕ್ಷ್ಯಗಳು ಹಾಗೂ ಭೂದೃಶ್ಯಗಳ ಮೂಲಕ ಪುನರ್‌ನಿರ್ಮಿಸಲು ಪ್ರಯತ್ನಿಸುತ್ತದೆ. ಪುರಾತತ್ವಶಾಸ್ತ್ರದ ಸ್ವರೂಪ ಬಹುಮುಖವಾಗಿದ್ದು, ವೈಜ್ಞಾನಿಕ ವಿಧಾನಗಳನ್ನೂ ವಿವರಣಾತ್ಮಕ ದೃಷ್ಟಿಕೋನವನ್ನೂ ಹೊಂದಿದೆ.

1. ಪುರಾತತ್ವಶಾಸ್ತ್ರವು ವೈಜ್ಞಾನಿಕ ಶಾಸ್ತ್ರ

ಪುರಾತತ್ವಶಾಸ್ತ್ರವು ಸಮೀಕ್ಷೆ, ಉತ್ಖನನ, ವರ್ಗೀಕರಣ, ದಿನಾಂಕ ನಿರ್ಧಾರ ಮತ್ತು ಪ್ರಯೋಗಾಲಯ ವಿಶ್ಲೇಷಣೆ ಮೊದಲಾದ ಕ್ರಮಬದ್ಧ ವೈಜ್ಞಾನಿಕ ವಿಧಾನಗಳನ್ನು ಅನುಸರಿಸುತ್ತದೆ. ಪದರಶಾಸ್ತ್ರ (Stratigraphy), ಕಾರ್ಬನ್ ಡೇಟಿಂಗ್‌ (Carbon Dating), GIS ನಕ್ಷೆ ನಿರ್ಮಾಣ ಇತ್ಯಾದಿ ತಂತ್ರಗಳು ಕಾಲಕ್ರಮವನ್ನು ನಿರ್ಧರಿಸಲು ಸಹಾಯಕವಾಗುತ್ತವೆ. ಈ ವೈಜ್ಞಾನಿಕ ವಿಧಾನಗಳು ಅಧ್ಯಯನಕ್ಕೆ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಒದಗಿಸುತ್ತವೆ.

2. ಪುರಾತತ್ವಶಾಸ್ತ್ರವು ಸಾಮಾಜಿಕ ವಿಜ್ಞಾನ

ಪುರಾತತ್ವಶಾಸ್ತ್ರವು ಮಾನವ ವರ್ತನೆ, ಸಾಮಾಜಿಕ ಸಂಘಟನೆ, ಆರ್ಥಿಕ ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಆಚರಣೆಗಳನ್ನು ಅಧ್ಯಯನ ಮಾಡುತ್ತದೆ. ಮಾನವರು ತಮ್ಮ ಪರಿಸರದೊಂದಿಗೆ ಹೇಗೆ ಸಂಬಂಧ ಹೊಂದಿದ್ದರು ಮತ್ತು ಸಮಾಜದ ರಚನೆ ಹೇಗೆ ರೂಪುಗೊಂಡಿತು ಎಂಬುದನ್ನು ಇದು ವಿಶ್ಲೇಷಿಸುತ್ತದೆ. ಈ ದೃಷ್ಟಿಯಿಂದ ಇದು ಮಾನವಶಾಸ್ತ್ರ, ಸಮಾಜಶಾಸ್ತ್ರ ಮತ್ತು ಇತಿಹಾಸಶಾಸ್ತ್ರಗಳೊಂದಿಗೆ ಸಂಪರ್ಕ ಹೊಂದಿದೆ.

3. ಪುರಾತತ್ವಶಾಸ್ತ್ರವು ಇತಿಹಾಸಾತ್ಮಕ ಶಾಸ್ತ್ರ

ಲಿಖಿತ ದಾಖಲೆಗಳಿಗಿಂತ ಭಿನ್ನವಾಗಿ, ಪುರಾತತ್ವಶಾಸ್ತ್ರವು ಮುಖ್ಯವಾಗಿ ಭೌತಿಕ ಸಾಕ್ಷ್ಯಗಳ ಮೇಲೆ ಅವಲಂಬಿತವಾಗಿದೆ. ಲಿಖಿತ ದಾಖಲೆಗಳಿಲ್ಲದ ಪೂರ್ವಇತಿಹಾಸದ ಕಾಲಘಟ್ಟಗಳ ಅಧ್ಯಯನದಲ್ಲಿ ಇದು ಅತ್ಯಂತ ಮಹತ್ವದ್ದಾಗಿದೆ. ಇತಿಹಾಸಕಾಲದಲ್ಲಿಯೂ ಪುರಾತತ್ವ ಸಾಕ್ಷ್ಯಗಳು ಸಾಹಿತ್ಯ ಮೂಲಗಳನ್ನು ಪೂರೈಸುತ್ತವೆ ಅಥವಾ ಕೆಲವೊಮ್ಮೆ ಅವುಗಳನ್ನು ತಿದ್ದುಪಡಿಗೂ ಒಳಪಡಿಸುತ್ತವೆ.

4. ಪುರಾತತ್ವಶಾಸ್ತ್ರದ ಅಂತರ್‌ ಶಾಖೀಯ ಸ್ವಭಾವ

ಪುರಾತತ್ವಶಾಸ್ತ್ರವು ಭೂಗರ್ಭಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಮಾನವಶಾಸ್ತ್ರ, ಪರಿಸರ ವಿಜ್ಞಾನ ಮತ್ತು ಭೌತಶಾಸ್ತ್ರ ಮುಂತಾದ ಹಲವು ಶಾಸ್ತ್ರಗಳ ಜ್ಞಾನವನ್ನು ಒಗ್ಗೂಡಿಸುತ್ತದೆ.

  • ಭೂಗರ್ಭಶಾಸ್ತ್ರವು ಮಣ್ಣಿನ ಪದರಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
  • ರಸಾಯನಶಾಸ್ತ್ರವು ದಿನಾಂಕ ನಿರ್ಧಾರ ತಂತ್ರಗಳಿಗೆ ನೆರವಾಗುತ್ತದೆ.
  • ಪ್ರಾಣಿಶಾಸ್ತ್ರ ಮತ್ತು ಸಸ್ಯಶಾಸ್ತ್ರವು ಎಲುಬುಗಳು ಮತ್ತು ಸಸ್ಯಾವಶೇಷಗಳನ್ನು ಗುರುತಿಸಲು ಸಹಾಯಕವಾಗುತ್ತವೆ.

ಹೀಗಾಗಿ ಪುರಾತತ್ವಶಾಸ್ತ್ರವು ಸ್ವಭಾವತಃ ಅಂತರ್ ಶಾಖೀಯವಾಗಿದೆ ಮತ್ತು ವಿವಿಧ ಜ್ಞಾನಶಾಖೆಗಳೊಂದಿಗೆ ಅಂತರ್‌ ಸಂಬಂಧವನ್ನು ಹೊಂದಿದೆ.

5. ಸಾಂಸ್ಕೃತಿಕ ಮತ್ತು ವಿವರಣಾತ್ಮಕ ಸ್ವಭಾವ

ಪುರಾತತ್ವಶಾಸ್ತ್ರವು ವಸ್ತುಗಳ ಪತ್ತೆಗಿಂತಲೂ ಅವುಗಳ ಅರ್ಥವನ್ನು ತಿಳಿಯುವ ಪ್ರಯತ್ನವಾಗಿದೆ. ಪತ್ತೆಯಾದ ಅವಶೇಷಗಳನ್ನು ಅವುಗಳ ಸಂದರ್ಭದೊಂದಿಗೆ ವಿಶ್ಲೇಷಿಸಿ, ಧಾರ್ಮಿಕ ನಂಬಿಕೆಗಳು, ಕಲಾತ್ಮಕ ಅಭಿವ್ಯಕ್ತಿ ಮತ್ತು ತಾಂತ್ರಿಕ ಪ್ರಗತಿಯನ್ನು ಅರ್ಥಮಾಡಿಕೊಳ್ಳಲಾಗುತ್ತದೆ.

6. ಕ್ಷೇತ್ರ ಮತ್ತು ಪ್ರಯೋಗಾಲಯ ಆಧಾರಿತ ಶಾಸ್ತ್ರ

ಪುರಾತತ್ವಶಾಸ್ತ್ರವು ಕ್ಷೇತ್ರಕಾರ್ಯ (ಸಮೀಕ್ಷೆ ಮತ್ತು ಉತ್ಖನನ) ಹಾಗೂ ಪ್ರಯೋಗಾಲಯ ಕಾರ್ಯ (ವಿಶ್ಲೇಷಣೆ, ಸಂರಕ್ಷಣೆ ಮತ್ತು ದಾಖಲೀಕರಣ) ಎರಡನ್ನೂ ಒಳಗೊಂಡಿದೆ. ಸರಿಯಾದ ದಾಖಲಾತಿ ಮತ್ತು ಸಂರಕ್ಷಣೆ ಪುರಾತತ್ವ ಅಧ್ಯಯನದ ಮುಖ್ಯ ಅಂಶಗಳಾಗಿವೆ.

7. ಸಂರಕ್ಷಣಾ ಕೇಂದ್ರೀಕೃತ ಶಾಸ್ತ್ರ

ಆಧುನಿಕ ಪುರಾತತ್ವಶಾಸ್ತ್ರವು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಒತ್ತು ನೀಡುತ್ತದೆ. ಸ್ಮಾರಕಗಳು, ಅವಶೇಷಗಳು ಮತ್ತು ಪುರಾತನ ಸಾಂಸ್ಕೃತಿಕ ಸ್ಥಳಗಳನ್ನು ಮುಂದಿನ ಪೀಳಿಗೆಗಳಿಗಾಗಿ ರಕ್ಷಿಸುವುದು ಇದರ ಪ್ರಮುಖ ಗುರಿಯಾಗಿದೆ.

 ಉಪಸಂಹಾರ:

ಪುರಾತತ್ವಶಾಸ್ತ್ರದ ಸ್ವರೂಪವು ವೈಜ್ಞಾನಿಕ, ಸಾಮಾಜಿಕ, ಇತಿಹಾಸಾತ್ಮಕ, ಅಂತರಶಾಖೀಯ ಮತ್ತು ವಿವರಣಾತ್ಮಕವಾಗಿದೆ. ಇದು ಭೌತಿಕ ಸಾಕ್ಷ್ಯಗಳ ಮೂಲಕ ಭೂತಕಾಲ ಮತ್ತು ವರ್ತಮಾನಗಳ ನಡುವೆ ಸೇತುವೆ ನಿರ್ಮಿಸುತ್ತದೆ. ಮಾನವ ಸಂಸ್ಕೃತಿಯ ನಿರಂತರತೆ ಮತ್ತು ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಪುರಾತತ್ವಶಾಸ್ತ್ರವು ಅತ್ಯಂತ ಪ್ರಮುಖವಾದ ಶಾಸ್ತ್ರವಾಗಿದೆ.

4. ಪುರಾತತ್ವ ಶಾಸ್ತ್ರದ ವ್ಯಾಪ್ತಿ

ಪೀಠಿಕೆ:

ಪುರಾತತ್ವ ಶಾಸ್ತ್ರ (Archaeology) ಎಂದರೆ ಮಾನವ ಇತಿಹಾಸ ಮತ್ತು ಸಂಸ್ಕೃತಿಯ ವಿಕಾಸವನ್ನು ಭೌತಿಕ ಅವಶೇಷಗಳ ಆಧಾರದ ಮೇಲೆ ಅಧ್ಯಯನ ಮಾಡುವ ವೈಜ್ಞಾನಿಕ ವಿದ್ಯಾಶಾಖೆ. “Archaios” (ಪ್ರಾಚೀನ) ಮತ್ತು “Logos” (ಅಧ್ಯಯನ) ಎಂಬ ಗ್ರೀಕ್ ಪದಗಳಿಂದ ಉದ್ಭವಿಸಿದ ಈ ಶಾಸ್ತ್ರವು ಮಾನವ ಜೀವನದ ಮೂಲಗಳಿಂದ ಆಧುನಿಕ ಯುಗದವರೆಗಿನ ಸಾಂಸ್ಕೃತಿಕ ಪರಿವರ್ತನೆಯನ್ನು ವಿಶ್ಲೇಷಿಸುತ್ತದೆ.

ಸಾಹಿತ್ಯ ಮೂಲಗಳು ಲಭ್ಯವಿಲ್ಲದ ಅಥವಾ ಅಪೂರ್ಣವಾಗಿರುವ ಸಂದರ್ಭಗಳಲ್ಲಿ ಪುರಾತತ್ವವೇ ಪ್ರಮುಖ ಇತಿಹಾಸ ಮೂಲವಾಗುತ್ತದೆ.

1. ಪುರಾತನ ಮಾನವ ಜೀವನದ ಅಧ್ಯಯನ : ಲಿಖಿತ ದಾಖಲೆಗಳಿಗಿಂತ ಮುಂಚಿನ ಕಾಲವನ್ನು ಪೂರ್ವ ಇತಿಹಾಸ ಎಂದು ಕರೆಯುತ್ತಾರೆ. ಈ ಅವಧಿಯ ಮಾನವರ ಜೀವನಶೈಲಿ, ಆಹಾರ ಪದ್ಧತಿ, ಉಪಕರಣಗಳ ಬಳಕೆ ಮತ್ತು ವಾಸಸ್ಥಾನಗಳನ್ನು ಪುರಾತತ್ವ ಅವಶೇಷಗಳ ಮೂಲಕ ತಿಳಿದುಕೊಳ್ಳಲಾಗುತ್ತದೆ. ಕಲ್ಲು ಯುಗದ ಉಪಕರಣಗಳು, ಗುಹಾಚಿತ್ರಗಳು ಮತ್ತು ಇನ್ನಿತರೆ ಅವಶೇಷಗಳು ಮಾನವ ವಿಕಾಸದ ಹಾದಿಯನ್ನು ಸ್ಪಷ್ಟಪಡಿಸುತ್ತವೆ.

2. ನಾಗರೀಕತೆಗಳ ಉದಯದ ಅಧ್ಯಯನ : ಸಿಂದೂ ಬಯಲಿನ ನಾಗರೀಕತೆ ಮುಂತಾದ ಪ್ರಾಚೀನ ನಾಗರಿಕತೆಗಳು ನಗರ ಯೋಜನೆ, ವಾಣಿಜ್ಯ ಮತ್ತು ಸಾಮಾಜಿಕ ವ್ಯವಸ್ಥೆಗಳ ಅಧ್ಯಯನಕ್ಕೆ ಮೂಲವಾಗಿವೆ. ನಗರ ವಿನ್ಯಾಸ, ನೀರಿನ ನಿರ್ವಹಣೆ ಮತ್ತು ಕೈಗಾರಿಕೆಗಳ ಬೆಳವಣಿಗೆ ಇವುಗಳಿಂದ ತಿಳಿಯುತ್ತದೆ.

3. ಉತ್ಕನನ(Excavation) ಮತ್ತು ಪದರಕ್ರಮದ(Stratigraphy) ಅಧ್ಯಯನ : ಪುರಾತತ್ವದಲ್ಲಿ ಉತ್ಕನನ ಪ್ರಮುಖ ವಿಧಾನವಾಗಿದೆ. ಭೂಮಿಯ ಪದರಗಳನ್ನು ಕ್ರಮಬದ್ಧವಾಗಿ ಅಧ್ಯಯನ ಮಾಡುವುದರಿಂದ ಕಾಲಕ್ರಮ ನಿರ್ಧಾರ ಸಾಧ್ಯವಾಗುತ್ತದೆ. ಪದರಕ್ರಮವು ವಸ್ತುಗಳ ಕಾಲನಿರ್ಣಯಕ್ಕೆ ಮೂಲಾಧಾರವಾಗಿದೆ.

4.  ದಿನಾಂಕ ನಿರ್ಧಾರ ತಂತ್ರಗಳ ಅಧ್ಯಯನ: ಕಾರ್ಬನ್-14 ಪರೀಕ್ಷೆ(Carbon Dating Method), ಥರ್ಮೊಲ್ಯೂಮಿನೆಸೆನ್ಸ್ ಹಾಗೂ ಡೆಂಡ್ರೋಕ್ರೋನಾಲಜಿ ಮುಂತಾದ ವೈಜ್ಞಾನಿಕ ವಿಧಾನಗಳಿಂದ ವಸ್ತುಗಳ ವಯಸ್ಸನ್ನು ನಿರ್ಧರಿಸಲಾಗುತ್ತದೆ.

5. ವಾಸಸ್ಥಾನ ಮತ್ತು ಸಮಾಧಿ ಅಧ್ಯಯನ : ವಾಸಸ್ಥಾನಗಳ ವಿನ್ಯಾಸ, ಸಮಾಧಿ ಪದ್ಧತಿಗಳು ಮತ್ತು ಸಂಸ್ಕಾರಗಳ ವಿಶ್ಲೇಷಣೆ ಸಮಾಜದ ಧಾರ್ಮಿಕ ನಂಬಿಕೆಗಳು ಮತ್ತು ಸಾಮಾಜಿಕ ರಚನೆಗಳ ಕುರಿತು ಮಾಹಿತಿಯನ್ನು ನೀಡುತ್ತದೆ. ಬೃಹತ್‌ ಶಿಲಾ ಯುಗ ಕಾಲದ ಸಮಾಧಿಗಳು ದಕ್ಷಿಣ ಭಾರತದಲ್ಲಿ ಪ್ರಮುಖ ಅಧ್ಯಯನ ಕ್ಷೇತ್ರವಾಗಿವೆ.

6. ಜೀವನೋಪಾಯ ಮತ್ತು ಆರ್ಥಿಕ ಚಟುವಟಿಕೆಗಳ ಅಧ್ಯಯನ :   ಕೃಷಿ ಉಪಕರಣಗಳು, ಮಣ್ಣಿನ ಪಾತ್ರೆಗಳು ಮತ್ತು ನಾಣ್ಯಗಳು ಆರ್ಥಿಕ ಚಟುವಟಿಕೆಗಳ ಕುರಿತು ತಿಳಿಸುತ್ತವೆ. ಉತ್ಪಾದನೆ, ವಿತರಣಾ ವ್ಯವಸ್ಥೆ ಮತ್ತು ವ್ಯಾಪಾರ ಜಾಲಗಳ ವಿಶ್ಲೇಷಣೆ ಪುರಾತತ್ವದ ವ್ಯಾಪ್ತಿಗೆ ಸೇರಿದೆ.

7.  ಪರಿಸರ ಪುರಾತತ್ವ (Environmental Archaeology)ದ ಅಧ್ಯಯನ : ಪರಿಸರ ಪುರಾತತ್ವವು  ಮಾನವ ಮತ್ತು ಪ್ರಕೃತಿ ನಡುವಿನ ಸಂಬಂಧವನ್ನು ಅಧ್ಯಯನ ಮಾಡುವ ವಿಭಾಗವಾಗಿದೆ. ಹವಾಮಾನ ಬದಲಾವಣೆ, ಮಣ್ಣಿನ ಸಂರಚನೆ ಮತ್ತು ಸಸ್ಯ-ಪ್ರಾಣಿ ಅವಶೇಷಗಳು ಮಾನವ ಜೀವನದ ಮೇಲೆ ಪರಿಸರದ ಪರಿಣಾಮವನ್ನು ತೋರಿಸುತ್ತವೆ.

8.  ಸಮುದ್ರ ಮತ್ತು ಜಲ ಪುರಾತತ್ವ ದ ಅಧ್ಯಯನ :  ಸಮುದ್ರದಡಿಯಲ್ಲಿ ದೊರೆಯುವ ಹಡಗು ಅವಶೇಷಗಳು ಮತ್ತು ಮುಳುಗಿದ ನಗರಗಳು, ವ್ಯಾಪಾರ ಹಾಗೂ ನಾವಿಕ ತಂತ್ರಜ್ಞಾನಗಳ ಅಧ್ಯಯನಕ್ಕೆ ಸಹಕಾರಿ. ಇದು ಪುರಾತತ್ವದ ವಿಸ್ತೃತ ಕ್ಷೇತ್ರವಾಗಿದೆ.

9. ಶಿಲ್ಪಕಲೆ ಮತ್ತು ವಾಸ್ತುಶಿಲ್ಪದ ಅಧ್ಯಯನ :   ದೇವಾಲಯಗಳು, ಅರಮನೆಗಳು ಮತ್ತು ಕೋಟೆಗಳ ಅವಶೇಷಗಳು ವಾಸ್ತುಶಿಲ್ಪದ ಅಭಿವೃದ್ಧಿಯನ್ನು ತೋರಿಸುತ್ತವೆ. ಶಿಲ್ಪಕಲೆ ಮತ್ತು ಚಿತ್ರಕಲೆ ಮಾನವನ ಸೃಜನಶೀಲತೆಯ ಸಾಕ್ಷಿಗಳಾಗಿವೆ.

10. ತಂತ್ರಜ್ಞಾನ ಅಭಿವೃದ್ಧಿಯ ಅಧ್ಯಯನ : ಲೋಹಶಿಲ್ಪ, ಮಣ್ಣಿನ ಪಾತ್ರೆಗಳ ತಯಾರಿ ಮತ್ತು ಕೈಗಾರಿಕಾ ಸಾಧನಗಳ ಅಧ್ಯಯನ ತಂತ್ರಜ್ಞಾನ ವಿಕಾಸವನ್ನು ಸೂಚಿಸುತ್ತದೆ. ಕಂಚು ಯುಗದಿಂದ ಲೋಹ ಯುಗದವರೆಗೆ ತಂತ್ರಜ್ಞಾನ ಬದಲಾವಣೆಗಳು ಪುರಾತತ್ವದ ವ್ಯಾಪ್ತಿಗೆ ಸೇರಿವೆ.

11. ಮಾನವಶಾಸ್ತ್ರ ಮತ್ತು ಭೂವಿಜ್ಞಾನದ ಅಧ್ಯಯನ : ಪುರಾತತ್ವಶಾಸ್ತ್ರವು ಮಾನವಶಾಸ್ತ್ರ, ಭೂವಿಜ್ಞಾನ ಮತ್ತು ರಸಾಯನಶಾಸ್ತ್ರದೊಂದಿಗೆ ಸಂಯೋಜಿತವಾಗಿದೆ. ಈ ಅಂತರಶಾಖಾ ವಿಧಾನವು ಸಮಗ್ರ ಇತಿಹಾಸ ನಿರ್ಮಾಣಕ್ಕೆ ಸಹಕಾರಿ.

12. ಡಿಜಿಟಲ್ ಪುರಾತತ್ವ : GIS ಎಂದರೆ ಭೌಗೋಳಿಕ ಮಾಹಿತಿ ವ್ಯವಸ್ಥೆ. ಇದು ಸ್ಥಳಸಂಬಂಧಿತ (spatial) ಡೇಟಾವನ್ನು ಸಂಗ್ರಹಿಸಿ, ವಿಶ್ಲೇಷಿಸಿ ಮತ್ತು ನಕ್ಷೆ ರೂಪದಲ್ಲಿ ಪ್ರದರ್ಶಿಸುವ ವ್ಯವಸ್ಥೆ. ಪುರಾತತ್ವದಲ್ಲಿ ಸ್ಥಳಗಳ ವಿಸ್ತಾರ, ವಾಸಸ್ಥಾನಗಳ ಹಂಚಿಕೆ, ನದಿ-ಪರ್ವತಗಳ ಸಂಬಂಧ ಮತ್ತು ವ್ಯಾಪಾರ ಮಾರ್ಗಗಳ ವಿಶ್ಲೇಷಣೆಗೆ GIS ಉಪಯೋಗವಾಗುತ್ತದೆ. ಅಲ್ಲದೇ  3D ಮಾದರೀಕರಣ ಮುಂತಾದ ತಂತ್ರಜ್ಞಾನಗಳು ಪುರಾತತ್ವ ಅಧ್ಯಯನವನ್ನು ಆಧುನಿಕಗೊಳಿಸಿವೆ.

13. ರಿಮೋಟ್ ಸೆನ್ಸಿಂಗ್ (Remote Sensing) : ರಿಮೋಟ್ ಸೆನ್ಸಿಂಗ್ ಎಂದರೆ ಭೂಮಿಯ ಮೇಲ್ಮೈಯನ್ನು ಉಪಗ್ರಹಗಳು, ವಿಮಾನಗಳು ಅಥವಾ ಡ್ರೋನ್‌ಗಳ ಮೂಲಕ ದೂರದಿಂದ ಪರಿಶೀಲಿಸುವ ವಿಧಾನ. ಮಣ್ಣಿನ ಬಣ್ಣ, ಸಸ್ಯಾವರಣ ಮತ್ತು ಭೂಪರಿವರ್ತನೆಗಳ ಆಧಾರದ ಮೇಲೆ ಭೂಗರ್ಭದಲ್ಲಿರುವ ಪುರಾತತ್ವ ಸ್ಥಳಗಳನ್ನು ಗುರುತಿಸಲಾಗುತ್ತದೆ. ಇದರಿಂದ ಭೂಗತ ನಗರಗಳ ಗುರುತು, ಕೃಷಿಭೂಮಿಯಡಿಯಲ್ಲಿ ಅವಿತಿರುವ ಕಟ್ಟಡ ಅವಶೇಷಗಳ ಪತ್ತೆ ಮುಂತಾದವು ಪುರಾತತ್ವ ಸಮೀಕ್ಷೆಗೆ ಪೂರ್ವಭಾವಿ ಮಾಹಿತಿ ಒದಗಿಸುತ್ತದೆ. ಡ್ರೋನ್ ತಂತ್ರಜ್ಞಾನವು ಹೆಚ್ಚಿನ ರೆಸಲ್ಯೂಷನ್ ಚಿತ್ರಗಳನ್ನು ಒದಗಿಸಿ ತೋಡುಗೈ ಕಾರ್ಯವನ್ನು ಸುಲಭಗೊಳಿಸಿದೆ.

ಉಪಸಂಹಾರ:  ಪುರಾತತ್ವ ಶಾಸ್ತ್ರದ ವ್ಯಾಪ್ತಿ ಅತ್ಯಂತ ವಿಶಾಲ ಮತ್ತು ಬಹುಮುಖವಾಗಿದೆ. ಇದು ಮಾನವ ನಾಗರಿಕತೆಯ ಮೂಲಗಳನ್ನು ಅನಾವರಣಗೊಳಿಸುವ ವೈಜ್ಞಾನಿಕ ವಿಧಾನವಾಗಿದೆ. ಪೂರ್ವ ಇತಿಹಾಸದಿಂದ ಆಧುನಿಕ ತಂತ್ರಜ್ಞಾನವರೆಗೂ ವ್ಯಾಪಿಸಿರುವ ಪುರಾತತ್ವ ಶಾಸ್ತ್ರವು ಇತಿಹಾಸ ನಿರ್ಮಾಣಕ್ಕೆ ಪ್ರಮುಖ ಆಧಾರವಾಗಿದೆ. ಪುರಾತತ್ವವು ಕೇವಲ ಉತ್ಕನನ ಶಾಸ್ತ್ರವಲ್ಲ; ಅದು ತತ್ವಚಿಂತನೆ, ವಿಧಾನಶಾಸ್ತ್ರ ಮತ್ತು ಅಂತರಶಾಖಾ ಸಂಯೋಜನೆಯ ಸಮಗ್ರ ಕ್ಷೇತ್ರವಾಗಿದೆ.

5.  ಪುರಾತತ್ತ್ವಶಾಸ್ತ್ರದ ಮಹತ್ವ

 1. ಪೂವ್ರೈತಿಹಾಸಿಕ ಕಾಲದ ಏಕೈಕ ಮೂಲ : ಪುರಾತತ್ತ್ವಶಾಸ್ತ್ರವು ಬರವಣಿಗೆಯಿಲ್ಲದ ಕಾಲದ ಬಗ್ಗೆ ತಿಳಿಯಲು ಅತ್ಯಂತ ಮುಖ್ಯವಾದ ಶಾಸ್ತ್ರವಾಗಿದೆ. ಪೂರ್ವೈತಿಹಾಸಿಕ ಮಾನವರು ಯಾವುದೇ ಲಿಖಿತ ದಾಖಲೆಗಳನ್ನು ಬಿಟ್ಟಿರಲಿಲ್ಲ.

ಆದರೆ ಅವರು ಉಪಯೋಗಿಸುತ್ತಿದ್ದ ವಿವಿಧ ಬಗೆಯ

  • ಕಲ್ಲು ಉಪಕರಣಗಳು
  • ಅವರು ಬರೆದ ಗುಹಾ ಚಿತ್ರಗಳು
  • ಅವರ ಎಲುಬುಗಳು
  • ಬೀಜಗಳು ಮತ್ತುಆ ಕಾಲದ ಮಣ್ಣು ಪದರಗಳ

ಅಧ್ಯಯನದಿಂದ ನಾವು ಅವರ ಜೀವನವನ್ನು ಅರ್ಥಮಾಡಿಕೊಳ್ಳುತ್ತೇವೆ.

ಆದ್ದರಿಂದ ಪುರಾತತ್ತ್ವಶಾಸ್ತ್ರವಿಲ್ಲದಿದ್ದರೆ ಮಾನವ ಇತಿಹಾಸದ ಆರಂಭಿಕ ಅಧ್ಯಾಯವು ಸಂಪೂರ್ಣವಾಗಿ ಅಜ್ಞಾತವಾಗಿರುತ್ತಿತ್ತು.

2. ಮಾನವ ವಿಕಾಸ ಮತ್ತು ಸಂಸ್ಕೃತಿಯ ಬೆಳವಣಿಗೆ : ಪುರಾತತ್ತ್ವಶಾಸ್ತ್ರವು ಮಾನವನು

  • ಕಾಡು ಜೀವನದಿಂದ ಕೃಷಿ ಜೀವನಕ್ಕೆ ಮತ್ತು ನಗರ ನಾಗರಿಕತೆಗೆ ಹೇಗೆ ಬದಲಾದನು ಎಂಬುದನ್ನು ತೋರಿಸುತ್ತದೆ. ಇದು ಕೇವಲ ದೈಹಿಕ ವಿಕಾಸವನ್ನಷ್ಟೇ ಅಲ್ಲ,
  • ಭಾಷೆಯ ಬೆಳವಣಿಗೆ
  • ಧರ್ಮದ ಉದ್ಭವ
  • ಕಲೆ ಮತ್ತು ಶಿಲ್ಪದ ಪ್ರಾರಂಭ
    ಇವನ್ನೂ ವಿವರಿಸುತ್ತದೆ.

3. ಭೂತಕಾಲದ ವೈಜ್ಞಾನಿಕ ಅಧ್ಯಯನ : ಪುರಾತತ್ತ್ವಶಾಸ್ತ್ರವು ಕೆಳಕಂಡ ವೈಜ್ಞಾನಿಕ ವಿಧಾನಗಳನ್ನು ಬಳಸುತ್ತದೆ:

  • ಕಾರ್ಬನ್ ದಿನಾಂಕ ನಿರ್ಣಯ(Carbon Dating/Carbon-೧೪)
  • ಮಣ್ಣು ಪದರಗಳ ವಿಶ್ಲೇಷಣೆ
  • DNA ಅಧ್ಯಯನ
  • ಲೋಹ ಮತ್ತು ಮಡಿಕೆಗಳ ರಾಸಾಯನಿಕ ಪರೀಕ್ಷೆ. ಇದರಿಂದ ಇತಿಹಾಸವನ್ನು ಊಹೆಗಳ ಮೇಲೆ ಅಲ್ಲ, ವಸ್ತುನಿಷ್ಠ ಸಾಕ್ಷ್ಯಗಳ ಮೇಲೆ ಆಧರಿಸಿ ಕಟ್ಟಬಹುದು.

4.  ಇತಿಹಾಸದ ಪರಿಶೀಲನೆ ಮತ್ತು ತಿದ್ದುಪಡಿ : ಲಿಖಿತ ಮೂಲಗಳು ಕೆಲವೊಮ್ಮೆ:

  • ರಾಜರನ್ನು ಅತಿಯಾಗಿ ಹೊಗಳುತ್ತವೆ
  • ಯುದ್ಧಗಳನ್ನು ಮಾತ್ರ ವರ್ಣಿಸುತ್ತವೆ
  • ಸಾಮಾನ್ಯ ಜನರನ್ನು ಕಡೆಗಣಿಸುತ್ತವೆ ಆದರೆ ಪುರಾತತ್ತ್ವಶಾಸ್ತ್ರವು:
  • ನಿಜಸ್ಥಿತಿಯನ್ನು ತೋರಿಸುತ್ತದೆ
  • ತಪ್ಪುಗಳನ್ನು ಸರಿಪಡಿಸುತ್ತದೆ
  • ಇತಿಹಾಸವನ್ನು ಸಮತೋಲನಗೊಳಿಸುತ್ತದೆ. ಹೀಗಾಗಿ, ಇದು ಇತಿಹಾಸಕ್ಕೆ ಪೂರಕ ಶಾಸ್ತ್ರವಾಗಿದೆ.

5. ಸಾಮಾಜಿಕ ವ್ಯವಸ್ಥೆಯ ಅರಿವು : ಪುರಾತತ್ತ್ವ ಸಾಕ್ಷ್ಯಗಳಿಂದ ಕೆಳಕಂಡ ವಿಷಯಗಳನ್ನು ತಿಳಿಯುತ್ತೇವೆ.

  • ಮನೆಗಳ ಗಾತ್ರ → ಆರ್ಥಿಕ ಸ್ಥಿತಿ
  • ಸಮಾಧಿಗಳ ವೈವಿಧ್ಯ → ವರ್ಗಭೇದ
  • ಉಪಕರಣಗಳು → ಉದ್ಯೋಗ. ಇದರಿಂದ ಹಳೆಯ ಸಮಾಜದ ರಚನೆ ಮತ್ತು ಜೀವನಮಟ್ಟ ತಿಳಿಯುತ್ತದೆ.

6. ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳು : ಪ್ರಾಚೀನ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ನಾಣ್ಯಗಳು, ಮಡಿಕೆಗಳು ಮತ್ತು ವಸ್ತುಗಳ ಮೂಲಕ:

  • ದೇಶೀಯ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ
  • ವಸ್ತು ವಿನಿಮಯ
  • ಕೈಗಾರಿಕಾ ಅಭಿವೃದ್ಧಿಯ ಬಗ್ಗೆ ಮಾಹಿತಿ ದೊರೆಯುತ್ತದೆ.

7. ಧಾರ್ಮಿಕ ಮತ್ತು ಸಾಂಸ್ಕೃತಿಕ ಅರಿವು :  ಮೂರ್ತಿಗಳು, ದೇವಾಲಯಗಳು, ಯಜ್ಞಕುಂಡಗಳು ಮತ್ತು ಸಮಾಧಿಗಳ ಮೂಲಕ:

  • ಧಾರ್ಮಿಕ ನಂಬಿಕೆಗಳು
  • ಪೂಜಾ ಪದ್ಧತಿಗಳು
  • ಸಂಸ್ಕೃತಿಯ ಬಗ್ಗೆ ತಿಳಿಯಬಹುದು.

8. ಪರಿಸರದ ಅರಿವು :  ಪುರಾತತ್ತ್ವಶಾಸ್ತ್ರವು: ಹಳೆಯ ಹವಾಮಾನ

  • ಪ್ರವಾಹ ಮತ್ತು ಬರ
  • ಕೃಷಿ ಪದ್ಧತಿಯ ಬಗ್ಗೆ ಅಧ್ಯಯನ ಮಾಡುತ್ತದೆ. ಇವು ನಾಗರಿಕತೆಗಳ ಏಳಿಗೆ ಮತ್ತು ಪತನಕ್ಕೆ ಹೇಗೆ ಕಾರಣವಾದವು ಎಂಬುದನ್ನು ವಿವರಿಸುತ್ತದೆ. ಇದು ಇಂದಿನ ಪರಿಸರ ಸಮಸ್ಯೆಗಳಿಗೆ ಪಾಠಗಳನ್ನು ನೀಡುತ್ತದೆ.

9. ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ : ಪುರಾತತ್ತ್ವಶಾಸ್ತ್ರವು ಪುರಾತನ ಸ್ಮಾರಕಗಳು ಮತ್ತು ವಸ್ತುಗಳನ್ನು ಗುರುತಿಸಿ ಸಂರಕ್ಷಿಸುತ್ತದೆ.

ಇದು:

  • ಪ್ರವಾಸೋದ್ಯಮ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.
  • ರಾಷ್ಟ್ರೀಯ ಹೆಮ್ಮೆ ಹಾಗೂ
  • ಸಾಂಸ್ಕೃತಿಕ ಗುರುತಾಗಿದ್ದು ಇವುಗಳನ್ನು ಬಲಪಡಿಸುತ್ತದೆ

10. ಕಲೆ ಮತ್ತು ವಾಸ್ತುಶಿಲ್ಪದ ವೈಜ್ಞಾನಿಕ ಅಧ್ಯಯನ : ಯಾವುದೇ ದೇಶದ ಕಲೆ ಮತ್ತು ವಾಸ್ತುಶಿಲ್ಪಕ್ಕೆ ತನ್ನದೇ ಆದ ಉಗಮ ಮತ್ತು ಇತಿಹಾಸ ಇರುತ್ತದೆ. ಅದು ವಿವಿಧ(ದೇಶೀಯ ಅಥವಾ ಪರದೇಶೀಯ) ಕಲೆ ಮತ್ತು ವಾಸ್ತುಶಿಲ್ಪದಿಂದ ಪ್ರಭಾವಿತವೂ ಆಗಿದ್ದು ಕೊಡುಕೊಳ್ಳುವಿಕೆ ನಿರಂತರವಾದ ಪ್ರಕ್ರಿಯೆಯಾಗಿರುತ್ತದೆ. ಇದು ಚಲನಶೀಲತೆಯ ಲಕ್ಷಣವೂ ಹೌದು. ಇವುಗಳ ವೈಜ್ಞಾನಿಕ ಅಧ್ಯಯನವನ್ನು ಪುರಾತತ್ವಶಾಸ್ತ್ರವು ಒಳಗೊಂಡಿದ್ದು ಅದರ ಮಹತ್ವವೂ ಆಗಿದೆ.

 11. ಶೈಕ್ಷಣಿಕ ಮತ್ತು ರಾಷ್ರೀಯ ಮಹತ್ವ : ಪುರಾತತ್ತ್ವಶಾಸ್ತ್ರವು:

  • ವಿದ್ಯಾರ್ಥಿಗಳಿಗೆ ಇತಿಹಾಸದ ಆಳವಾದ ಅರಿವು ನೀಡುತ್ತದೆ
  • ಸಂಶೋಧನೆಗೆ ಪ್ರೇರಣೆ ನೀಡುತ್ತದೆ
  • ರಾಷ್ಟ್ರೀಯ ಏಕತೆಯನ್ನು ಬಲಪಡಿಸುತ್ತದೆ

ಉಪಸಂಹಾರ : ಪುರಾತತ್ತ್ವಶಾಸ್ತ್ರವು ಮಾನವ ಇತಿಹಾಸದ ಆಧಾರ ಮತ್ತು ಜೀವಂತ ಸಾಕ್ಷಿಯಾಗಿದೆ. ಇದು ಪೂರ್ವೈತಿಹಾಸಿಕ ಕಾಲದಿಂದ ಇಂದಿನ ಕಾಲದವರೆಗೆ ಮಾನವ ಜೀವನದ ಎಲ್ಲಾ ಹಂತಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಇದು ಕೇವಲ ಹಳೆಯ ವಸ್ತುಗಳ ಅಧ್ಯಯನವಲ್ಲ;
ಮಾನವ ಸಮಾಜದ ವಿಕಾಸ, ಸಂಸ್ಕೃತಿ, ಆರ್ಥಿಕತೆ ಮತ್ತು ಪರಿಸರ ಸಂಬಂಧಗಳ ಸಮಗ್ರ ಅಧ್ಯಯನವಾಗಿದೆ.

ಆದ್ದರಿಂದ ಪುರಾತತ್ತ್ವಶಾಸ್ತ್ರವು ಇತಿಹಾಸ ಮತ್ತು ಸಮಾಜವನ್ನು ತಿಳಿಯಲು ಅತ್ಯಂತ ಅಗತ್ಯವಾದ ಶಾಸ್ತ್ರವಾಗಿದೆ.