ಮಾನವನ ಬಯಕೆಗಳನ್ನು ತೃಪ್ತಿಪಡಿಸುವ ವಸ್ತುವಿನ ಗುಣವನ್ನು ತುಷ್ಟಿಗುಣ ಎನ್ನಲಾಗುವುದು. ಎಲ್ಲಾ ಆರ್ಥಿಕ ಮತ್ತು ಆರ್ಥೀಕೇತರ ವಸ್ತುಗಳು ತುಷ್ಟಿಗುಣವನ್ನು ಹೊಂದಿರುತ್ತದೆ. ಯಾವುದೇ ವಸ್ತು ಅದು ಮಾನವನಿಗೆ ಉಪಕಾರಿಯಾಗಿರಬಹುದು ಅಥವಾ ಹಾನಿಕಾರಕವಾಗಿರಬಹುದು. ಮಾನವನ ಬಯಕೆಯನ್ನು ತೃಪ್ತಿಪಡಿಸುವ ಗುಣ ಹೊಂದಿದ್ದರೆ ಅದು “ತುಪ್ಪಿಗುಣ ಹೊಂದಿದೆ” ಎಂದು ಹೇಳಬಹುದು.

ಪ್ರೊ. ಟಾಸಗ್ ಅವರ ಪ್ರಕಾರ  ʻʻಆಸ್ತಿ ಅಥವಾ ಸಂಪತ್ತಿನ ಬಳಕೆಯಿಂದ ಮಾನವನು ತೃಪ್ತಿ ಅಥವಾ ಅನುಕೂಲಗಳನ್ನು ಪಡೆಯುತ್ತಿದ್ದರೆ ಅದನ್ನು ಅರ್ಥಶಾಸ್ತ್ರದಲ್ಲಿ ತುಷ್ಟಿಗುಣ ಎನ್ನಲಾಗುತ್ತದೆ”.

ಪ್ರೊ. ಬ್ರಿಗ್ಸ್ ಅವರ ಅಭಿಪ್ರಾತದಲ್ಲಿ “ತುಷ್ಟಿಗುಣವು ತೃಪ್ತಿಯ ಮಾಪನವಾಗಿದೆ”.

ಈ ದಿಸೆಯಲ್ಲಿ ತುಷ್ಟಿಗುಣ ಮತ್ತು ತೃಪ್ತಿಯ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಅತಿ ಅಗತ್ಯ. ತುಷ್ಟಿಗುಣ ಎಂದರೆ ನಿರೀಕ್ಷಿತ ತೃಪ್ತಿ ಮತ್ತು ತೃಪ್ತಿ ಎಂದರೆ ನಿಜವಾಗಿ ಪಡೆದ ತೃಪ್ತಿ, ಒಂದು ವಸ್ತುವನ್ನು ಅನುಭೋಗಿಸಿದ ಮೇಲೆ ಅನುಭೋಗಿಗೆ ತೃಪ್ತಿ ದೊರೆಯುತ್ತದೆ. ಅಂದರೆ ಅದರಿಂದ ತುಷ್ಟಿಗುಣ ದೊರೆಯಬಹುದೆಂದು ಯೋಚಿಸಿದ ನಂತರ ಅದನ್ನು ಅನುಭೋಗಿಸುತ್ತಾನೆ. ತುಷ್ಟಿಗುಣದಿಂದಾಗಿ ವಸ್ತುಗಳ ಅನುಭೋಗ ನಡೆಯುತ್ತದೆ. ತೃಪ್ತಿ ಎನ್ನುವುದು ಅನುಭೋಗದ ನಂತರದ ಪರಿಣಾಮವಾದರೆ ತುಷ್ಟಿಗುಣ ಎನ್ನುವುದು ಅನುಭೋಗದ ಮುಂಚಿನ ನಿರೀಕ್ಷೆಯಾಗಿರುತ್ತದೆ.

ತುಷ್ಟಿಗುಣದ ಲಕ್ಷಣಗಳು
1. ಮಾನಸಿಕವಾದುದು:

ತುಷ್ಟಿಗುಣವು ಮಾನಸಿಕವಾದುದು. ಅದನ್ನು ಅನುಭವಿಸಿ ತಿಳಿಯಬಹುದೇ ಹೊರತು ಕಣ್ಣಿನಿಂದ ನೋಡಲು ಸಾಧ್ಯವಿಲ್ಲ. ಅದು ಮನಸ್ಸಿನ ಒಳಗಿನ ಅನುಭವವೇ ಹೊರತು ಮತ್ತೇನೂ ಅಲ್ಲ. ತುಷ್ಟಿಗುಣ ಸಂಪೂರ್ಣ ಮಾನಸಿಕವಾದುದು.

2. ಸಾಪೇಕ್ಷವಾದುದು :

ತುಷ್ಟಿಗುಣವೆಂಬುದು ಸಾಪೇಕ್ಷವಾದುದು. ಅದು ವ್ಯಕ್ತಿಯಿಂದ ವ್ಯಕ್ತಿಗೆ, ಸ್ಥಳದಿಂದ ಸ್ಥಳಕ್ಕೆ ಮತ್ತು ಕಾಲದಿಂದ ಕಾಲಕ್ಕೆ ವ್ಯತ್ಯಾಸ ಹೊಂದುತ್ತದೆ. ಒಬ್ಬ ವ್ಯಕ್ತಿಗೆ ತುಷ್ಟಿಗುಣ ಎಲ್ಲಾ ಕಾಲದಲ್ಲಿ ಒಂದೇ ಆಗಿರುವುದಿಲ್ಲ. ಕೆಲವು ಸರಕುಗಳು ಕೆಲವರಿಗೆ ತೃಪ್ತಿ ನೀಡಬಹುದು. ಕೆಲವರಿಗೆ ನೀಡದೆಯೂ ಇರಬಹುದು. ಉದಾಹರಣೆಗೆ: ಧೂಮಪಾನ ಮಾಡುವ ಹವ್ಯಾಸದವನಿಗೆ ಸಿಗರೇಟ್ ತೃಪ್ತಿ ನೀಡುತ್ತದೆ, ಆದರೆ ಬೇರೆಯವರಿಗೆ ನೀಡುವುದಿಲ್ಲ.

ಉಪಯುಕ್ತತೆಗಿಂತ ಭಿನ್ನ:

ತುಷ್ಟಿಗುಣ ಉಪಯುಕ್ತತೆಗಿಂತ ಭಿನ್ನವಾದುದು. ಕೆಲ ಸರಕುಗಳು ತುಷ್ಟಿಗುಣ ಹೊಂದಿದ್ದರೂ ಉಪಯುಕ್ತತೆ ಹೊಂದಿರುವುದಿಲ್ಲ. ತುಷ್ಟಿಗುಣವಿದ್ದ ಸರಕಿನಲ್ಲಿ ಉಪಯುಕ್ತತೆ ಇರಲೇ ಬೇಕೆಂದೇನಿಲ್ಲ. ಮದ್ಯಪಾನ ಪ್ರಿಯರಿಗೆ ಮದ್ಯ, ಧೂಮಪಾನ ಪ್ರಿಯರಿಗೆ ಬೀಡಿ ಸಿಗರೇಟ್ ತುಷ್ಟಿಗುಣ ನೀಡುತ್ತವೆ. ಆದರೆ ಅವು ಉಪಯುಕ್ತತೆ ಹೊಂದಿರುವುದಿಲ್ಲ. ಮದ್ಯಪಾನ, ಧೂಮಪಾನ ಮಾಡುವುದು ಆರೋಗ್ಯಕ್ಕೆ ಹಾನಿಕಾರ.

4. ನೇರ ಮಾಪನ ಅಸಾಧ್ಯ:

ತುಷ್ಟಿಗುಣ ಸಂಪೂರ್ಣ ಮಾನಸಿಕ ಅಂಶವಾಗಿರುವುದರಿಂದ ಅದನ್ನು ನೇರವಾಗಿ ಮಾಪನ ಮಾಡುವುದು ಅಸಾಧ್ಯ ಮಾನಸಿಕ ಅಂಶಗಳನ್ನು ಪ್ರಮಾಣೀಕರಿಸಲು ಯಾವುದೇ ಮಾನದಂಡ ಲಭ್ಯವಿಲ್ಲ. ಇಷ್ಟಾಗಿಯೂ ಅದನ್ನು ಸಾಪೇಕ್ಷ ತುಲನೆ ಸಹಾಯದಿಂದ ಅಥವಾ ಸರಕಿಗೆ ಕೊಟ್ಟಬೆಲೆ ಸಹಾಯದಿಂದ ಪರೋಕ್ಷವಾಗಿ ಅಳೆಯುವುದು ಸಾಧ್ಯವಿದೆ. ಆದರೆ ನೇರ ಮಾಪನ ಅಸಾಧ್ಯ.

5. ಭೌತಿಕ ಅಸ್ತಿತ್ವವಿಲ್ಲ:

ತುಷ್ಟಿಗುಣವೆಂಬುದು ಯಾವುದೇ ಭೌತಿಕ ಸ್ವರೂಪ ಅಥವಾ ಅಸ್ತಿತ್ವ ಹೊಂದಿರುವುದಿಲ್ಲ. ಅದು ಸಂಪೂರ್ಣ ಮಾನಸಿಕವಾಗಿರುವುದರಿಂದ ಅದಕ್ಕೊಂದು ಗಾತ್ರವಾಗಲೀ, ಸ್ವರೂಪವಾಗಲೀ, ಬಣ್ಣವಾಗಲೀ ಅಥವಾ ವಾಸನೆಯಾಗಲೀ ಇರುವುದಿಲ್ಲ. ಅಂತರಿಕ ಭಾವನೆಯಾದ ಅದನ್ನು ಕಣ್ಣಿನಿಂದ ನೋಡುವುದು ಸಾಧ್ಯವಿಲ್ಲ.

6. ಬೇಡಿಕೆಯ ನಿರ್ಧಾರ :

ತುಷ್ಟಿಗುಣವು ಒಂದು ಸರಕಿಗಿರುವ ಬೇಡಿಕೆಯನ್ನು ನಿರ್ಧರಿಸುತ್ತದೆ. ಏಕೆಂದರೆ ಯಾವುದೇ ಸರಕಿನ ಬೇಡಿಕೆ ಅದರಲ್ಲಿರುವ ತುಷ್ಟಿಗುಣವನ್ನು ಅವಲಂಬಿಸಿರುತ್ತದೆ. ಸರಕಿನಿಂದ ನಿರೀಕ್ಷಿಸಲಾಗುವ ತೃಪ್ತಿ ಅಧಿಕವಿದ್ದಲ್ಲಿ ಅನುಭೋಗಿಗಳು ಆ ಸರಕನ್ನು ಅಧಿಕ ಪ್ರಮಾಣದಲ್ಲಿ ಕೊಳ್ಳಲು ಮುಂದಾಗುತ್ತಾರೆ.

7. ಬಯಕೆಯ ತೀವ್ರತೆಯನ್ನು ಅವಲಂಬಿಸಿರುತ್ತದೆ:

ತುಷ್ಟಿಗುಣವೆಂಬುದು ಒಬ್ಬ ಅನುಭೋಗಿಯ ಬಯಕೆಯ ತೀವ್ರತೆಯನ್ನು ಅವಲಂಬಿಸಿರುತ್ತದೆ. ಯಾವುದೇ ಒಂದು ಸರಕಿಗೆ ಅನುಭೋಗಿಯ ಬಯಕೆ ತೀವ್ರವಾಗಿದ್ದಲ್ಲಿ ಅದರಿಂದ ದೊರಕುವ ನಿರೀಕ್ಷಿತ ತೃಪ್ತಿ ಅಧಿಕವಾಗಿರುತ್ತದೆ.

8. ನೈತಿಕ ಮತ್ತು ಕಾನೂನಿನ ಕಟ್ಟುಪಾಡುಗಳು:

ತುಷ್ಟಿಗುಣಕ್ಕೆ ಯಾವುದೇ ನೈತಿಕ ಅಥವಾ ಕಾನೂನಿನ ಕಟ್ಟುಪಾಡುಗಳಿರುವುದಿಲ್ಲ. ಒಂದು ವಸ್ತುವಿನಿಂದ ತುಷ್ಟಿಗುಣ ಪಡೆಯಲು ಯಾವುದೇ ನೈತಿಕ ಅಥವಾ ಕಾನೂನಿನ ಕಟ್ಟುಪಾಡುಗಳಿಗೆ ಒಳಗಾಗುವ ಅವಶ್ಯಕತೆಯಿರುವುದಿಲ್ಲ.

9. ಬೆಲೆಯೊಂದಿಗೆ ಸಂಬಂಧ:

ತುಷ್ಟಿಗುಣವು ಸರಕಿನ ಬೆಲೆಯೊಂದಿಗೆ ಸಂಬಂಧ ಹೊಂದಿರುತ್ತದೆ. ಯಾವುದೇ ಸರಕಿಗೆ ಅನುಭೋಗಿ ನೀಡುವ ಬೆಲೆಯು ಅದರಿಂದ ನಿರೀಕ್ಷಿಸಿದ ತೃಪ್ತಿಯಿಂದ ನಿರ್ಧರಿಸಲ್ಪಟ್ಟಿರುತ್ತದೆ. ನಿರೀಕ್ಷಿತ ತೃಪ್ತಿ ಅಧಿಕವಿದ್ದಾಗ ಅನುಭೋಗಿ ಅಧಿಕ ಬೆಲೆ ನೀಡಲು ಮುಂದಾಗುತ್ತಾನೆ.

10. ಸಂತೋಷಕ್ಕಿಂತ ಭಿನ್ನ:

ಸರಕು ಮತ್ತು ಸೇವೆಗಳಲ್ಲಿ ಅಡಕವಾಗಿರುವ ತುಷ್ಟಿಗುಣವು ಸಂತೋಷದಾಯಕವಾಗಿರಲೇಬೇಕೆಂಬ ನಿಯಮವಿಲ್ಲ. ಕೆಲವು ವೇಳೆ ತುಷ್ಟಿಗುಣ ಹೊಂದಿರುವ ಸರಕನ್ನು ಅನುಭೋಗಿಸಿದಾಗ ಅಸಂತೋಷ ಪಡಬೇಕಾಗಲೂಬಹುದು. ಉದಾಹರಣೆಗೆ ಕೆಲ ಔಷಧ ಸಾಮಗ್ರಿಗಳು.

11. ತೃಪ್ತಿಗಿಂತ ಭಿನ್ನ:

ತುಷ್ಟಿಗುಣ ಮತ್ತು ತೃಪ್ತಿ ಒಂದೇ ಅಲ್ಲ, ತುಷ್ಟಿಗುಣವೆಂಬುದು ಒಂದು ವಸ್ತುವಿನಿಂದ ನಿರೀಕ್ಷಿಸಿದ ತೃಪ್ತಿ’ ಯಾಗಿದ್ದು ಅದು ಅನುಭೋಗಕ್ಕೆ ದಾರಿಯಾಗುತ್ತದೆ. ಆದರೆ ತೃಪ್ತಿಯೆಂಬುದು ಒಂದು ಸರಕನ್ನು ಅನುಭೋಗಿಸಿದ ನಂತರ ದೊರೆಯುವಂತಹದ್ದು ತೃಪ್ತಿಯೆಂಬುದು ಅನುಭೋಗದ ನಂತರದ ಪರಿಣಾಮವಾದರೆ ತುಷ್ಟಿಗುಣವೆಂಬುದು ಅನುಭೋಗದ ಮುಂಚಿನ ನಿರೀಕ್ಷೆಯಾಗಿರುತ್ತದೆ.