ಪ್ರಾಚೀನ ಭಾರತದಲ್ಲಿ ಮೌರ್ಯರ ಪತನಾನಂತರ ಪ್ರಾಬಲ್ಯಕ್ಕೆ ಬಂದಿದ್ದ ಕುಶಾನರು ಭಾರತದ ಸಾಂಸ್ಕೃತಿಕ ಕ್ಷೇತ್ರಕ್ಕೆ ಅಮೂಲಾಗ್ರ ಕೊಡುಗೆಗಳನ್ನು ಸಮರ್ಪಿಸಿದ್ದಾರೆ. ಧರ್ಮ, ಸಾಹಿತ್ಯ, ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಗಳಲ್ಲಿ ಅಸಾಧಾರಣ ಬೆಳವಣಿಗೆಗೆ ಕಾರಣರಾಗಿದ್ದಾರೆ. ಅವರ ಸಾಂಸ್ಕೃತಿಕ ಕೊಡುಗೆಗಳನ್ನು ಕೆಳಕಂಡಂತೆ ಅವಲೋಕಿಸಬಹುದು.
ಧರ್ಮ:
ಕುಶಾನರ ಕಾಲದಲ್ಲಿ ಬೌದ್ಧಪಂಥವು ಬೆಳವಣಿಗೆ ಹೊಂದಿ ಅಭ್ಯುದಯವನ್ನು ತಲುಪಿತ್ತು. ಕಾನಿಷ್ಕನು ಬೌದ್ಧ ಮತಾವಲಂಬಿಯಾಗಿದ್ದು ಚೌದ್ಧಧರ್ಮದ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದನು. ಇದರಿಂದಾಗಿ ಕಾನಿಷ್ಕನನ್ನು 2ನೇ ಬುದ್ಧನೆಂದೇ ಕರೆಯಲಾಗಿದೆ. ಬೌದ್ಧಪಂಥದ ಅಭಿವೃದ್ಧಿಗಾಗಿ ಕಾನಿಷ್ಕ ಕೈಗೊಂಡ ಕ್ರಮಗಳು ಅಪಾರ ಮತ್ತು ಅವಿಸ್ಮರಣೀಯ.
ಧರ್ಮದ ಶ್ರೇಯೋಭಿವೃದ್ಧಿಗಾಗಿ ಹಳೆಯ ಸಂಘರಾಮಗಳನ್ನು ದುರಸ್ಥಿಗೊಳಿಸಿದನು ಅನೇಕ ಹೊಸ ಸಂಘರಾಮಗಳ ನಿರ್ಮಾಣಕ್ಕೆ ಅಪಾರ ಪ್ರೋತ್ಸಾಹ ನೀಡಿದನು. ಮದ್ಯವಿಷ್ಯಾ, ಟಿಬೆಟ್, ಬರ್ಮ, ಜಪಾನ್, ಕೋರಿಯಾ ಹಾಗೂ ಚೀನಾ ಮುಂತಾದ ವಿದೇಶಗಳಿಗೆ ಧರ್ಮಪ್ರಸಾರಕರನ್ನು ಕಳುಹಿಸಿದ್ದನು.
4ನೇ ಬೌದ್ಧಸಮ್ಮೇಳನ:
ಬೌದ್ಧಪಂಥದ ಪ್ರಜ್ವಲತೆಗಾಗಿ ಕಾಶ್ಮೀರದ ಶ್ರೀನಗರದ ಬಳಿಯಿರುವ ಕುಂಡಲವನ ದಲ್ಲಿ 4ನೇ ಬೌದ್ಧ ಸಮ್ಮೇಳನವನ್ನು ಸಮಾವೇಶಗೊಳಿಸಿದ್ದನು. ಈ ಸಮ್ಮೇಳನವು ಕ್ರಿ.ಶ 100ರಲ್ಲಿ ನಡೆಯಿತು. ವಸುಮಿತ್ರನು ಈ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದನು. ಅಶ್ವಘೋಷನು ಉಪಾಧ್ಯಕ್ಷನಾಗಿದ್ದನು. ನಾಗಾರ್ಜುನ ಮತ್ತು ಪಾರ್ಶ್ವರಂತಹ ಬೌದ್ಧವಿದ್ವಾಂಸರುಗಳು ಆಗಮಿಸಿದ್ದರು.
ಈ ಸಮ್ಮೇಳನವು ಮಹತ್ವಪೂರ್ಣ ಸಾಧನೆಗಳನ್ನು ಮಾಡಿತು. ಅವುಗಳೆಂದರೆ :
1. ಬುದ್ಧನ ಉಪದೇಶಗಳನ್ನು ಸಂಕಲಿಸಿತು.
2. ಬೌದ್ಧ ಅನುಯಾಯಿಗಳಲ್ಲಿ ಉಂಟಾಗಿದ್ದ ಭಿನ್ನಾಭಿಪ್ರಾಯಗಳನ್ನು ತೊಡೆದುಹಾಕಿತು.
3. ಬೌದ್ಧ ಸಾಹಿತ್ಯವನ್ನು ಪುನರ್ ಪರಿಶೀಲಿಸಿ ತ್ರಿಪಿಠಕಗಳ ಮೇಲೆ ಮಹಾಬಾಷ್ಯ ವನ್ನುರಚಿಸಲಾಯಿತು. ಬೌದ್ಧ ಧರ್ಮದ ವಿಶ್ವಕೋಶದಂತೆ ಇರುವ ಇದನ್ನುʻಮಹಾವಿಭಾಶ’ ಎಂದೇ ಹೆಸರಿಸಲಾಗಿದೆ.
ಹೀನಯಾನ, ಮಹಾಯಾನ ಪಂಥಗಳು:
ಕಾನಿಷ್ಕನ ಆಳ್ವಿಕೆಯ ಕಾಲದಲ್ಲಿ ಬೌದ್ಧಪಂಥಕ್ಕೆ ಸಂಬಂಧಿಸಿದಂತೆ ಪ್ರಮುಖ ಬದಲಾವಣೆಗಳು ಕಂಡುಬಂದವು, ಈಗಾಗಲೆ ಹಿಂದೂ ಧಾರ್ಮಿಕ ತತ್ವಗಳಿಂದ ಪ್ರಭಾವಿತಗೊಂಡ ಬೌದ್ಧ ಪಂಥದ ಕೆಲವು ಅನುಯಾಯಿಗಳು ಬುದ್ಧನನ್ನು ದೈವತ್ವಕ್ಕೇರಿಸಿ ಮೂರ್ತಿಪೂಜೆ ಆರಂಭಿಸಿದರು. ಇವರನ್ನು ಮಹಾಯಾನ ಬೌದ್ಧಪಂಥದವರೆಂದು ಹೆಸರಿಸಲಾಯಿತು. ಬುದ್ಧನನ್ನು ಪೂಜಿಸದಿರುವ ಬೌದ್ಧಪಂಥೀಯರು ಹೀನಯಾನ ಪಂಥದವರೆಂದು ಕರೆದು ಕೊಂಡರು, ಕಾನಿಷ್ಕ ಮಹಾಯಾನ ಬೌದ್ಧ ಪಂಥವನ್ನು ಅವಲಂಬಿಸಿ ಅದಕ್ಕೆ ಅಪಾರ ಪ್ರೋತ್ಸಾಹ ನೀಡಿದನು. ಹೀಗಾಗಿ ಮಹಾಯಾನ ಪಂಥವು ಹೆಚ್ಚು ಅಭಿವೃದ್ಧಿಗೊಂಡಿತು. ಮಹಾಯಾನ ಬೌದ್ಧಪಂಥವು ಭಾರತ, ಮದ್ಯ ಏಷ್ಯಾ, ಟಿಬೇಟ್, ಚೀನಾ ಹಾಗೂ ಜಪಾನ್‌ಗಳಲ್ಲಿ ಪ್ರಬಲವಾದ ಧಾರ್ಮಿಕಪಂಥವಾಗಿ ಬೆಳೆಯಿತು. ಕಾನಿಷ್ಕನು ಬೌದ್ಧಪಂಥದ ಏಳಿಗೆಗಾಗಿ ಅಪಾರವಾಗಿ ಶ್ರಮಿಸಿದ್ದರಿಂದ ಧರ್ಮವು ಔನ್ನತ್ಯದ ಸ್ಥಿತಿಗೆ ಬರಲು ಕಾರಣವಾಯಿತು.
ಸಾಹಿತ್ಯ:
ಕುಶಾನರ ಕಾಲದಲ್ಲಿ ಸಾಹಿತ್ಯ ಕೂಡ ಹೆಚ್ಚು ಅಭಿವೃದ್ಧಿ ಹೊಂದಿತು. ಕುಶಾನ ದೊರೆಗಳು ಸಾಹಿತ್ಯಾಭಿಮಾನಿ ಗಳಾಗಿದ್ದು ಸಾಹಿತ್ಯದ ಬೆಳೆವಣಿಗೆಗೆ ಸಾಕಷ್ಟು ಪ್ರೋತ್ಸಾಹ ನೀಡಿದರು. ಇದರಿಂದಾಗಿ ಹಲವಾರು ಪ್ರಮುಖ ಕೃತಿಗಳು ರಚನೆಯಾದವು. ಕುಶಾನರ ಕಾಲದ ಪ್ರಮುಖ ಸಾಹಿತ್ಯಕ, ಧಾರ್ಮಿಕ ಕೃತಿಗಳು ಮತ್ತು ಅವುಗಳ ಐತಿಹಾಸಿಕ ಮೌಲ್ಯವನ್ನು ಅವಲೋಕಿಸಬಹುದು.
ಅಶ್ವಘೋಷ:
ಕಾನಿಷ್ಕನ ಆಸ್ಥಾನದಲ್ಲಿದ್ದ ‘ಅಶ್ವಘೋಷ’ ಕವಿಯಾಗಿ, ತತ್ವಜ್ಞಾನಿಯಾಗಿ, ನಾಟಕಕಾರನಾಗಿ, ಸಂಗೀತಗಾರನಾಗಿ ಪ್ರಖ್ಯಾತಿ ಹೊಂದಿದ್ದನು. ಇವನ ಪ್ರಮುಖ ಕೃತಿಗಳೆಂದರೆ :
1. ಬುದ್ಧಚರಿತ:
ಬುದ್ಧನ ಜೀವನ ಚರಿತ್ರೆಯ ಬಗ್ಗೆ ವಿವರಣೆ ನೀಡುತ್ತದೆ.
2. ಸೌಂದರಾನಂದ:
ಬುದ್ಧನ ಜೀವನದ ಪ್ರಮುಖ ಘಟನೆಗಳ ಬಗ್ಗೆ ವಿಶ್ಲೇಷಿಸುತ್ತದೆ.
3. ವಜ್ರಸೂಚಿ:
ಸಮಕಾಲೀನವಾಗಿದ್ದ ಜಾತಿಪದ್ಧತಿಯನ್ನು ಖಂಡಿಸುತ್ತದೆ.
4. ಸರಿಪುತ್ರಪ್ರಕರಣ:
ಇದು ನಾಟಕ ರೂಪದಲ್ಲಿದ್ದು ಸರಿಪುತ್ರ ಮತ್ತು ಮೊಗ್ಗಲ್ಲನರ ಮತಾಂತರದ ಬಗ್ಗೆ ವಿವರ ನೀಡುತ್ತದೆ. ಫ್ರೆಂಚ್ ವಿದ್ವಾಂಸ ‘ಸೆಲ್ವನ್‌ವಿ’ ಅಭಿಪ್ರಾಯಪಡುವಂತೆ ‘ಅಶ್ವಘೋಷನ ಸಾಹಿತ್ಯದ ಶ್ರೀಮಂತಿಕೆ ಮತ್ತು ವೈವಿಧ್ಯತೆಯು ನಮಗೆ ಮಿಲ್ಟನ್, ಗಯಟೆ, ಕಾಂಟ್, ವಾಲ್ವೇರ್’ ಮೊದಲಾದವರ ನೆನಪನ್ನು ಗಮನಕ್ಕೆ ತರುತ್ತದೆ. ಅಶ್ವಘೋಷನು ಕಾಳಿದಾಸ ಮತ್ತು ಭಾಸಕವಿಯಿಂದ ಪ್ರಭಾವಿತನಾಗಿರ ಬೇಕೆಂದು ಕೆಲವು ವಿದ್ವಾಂಸರ ಅಭಿಪ್ರಾಯ.
ನಾಗಾರ್ಜುನ : ಇವನ ಕೃತಿಗಳು:
1. ಶತಸಾಹಸಿಕ ಪ್ರಜ್ಞಾಪರಿಮಿತ
2. ಮಾಧ್ಯಮಿಕ ಸೂತ್ರ
3. ಸಹೃಲೇಖ
ನಾಗಾರ್ಜುನ ಕಾನಿಷ್ಕನ ಆಸ್ಥಾನದ ಮತ್ತೋರ್ವ ಪ್ರಖ್ಯಾತ ಕವಿ. ಮಹಾಯಾನ ಪಂಥದ ಪ್ರತಿಪಾದಕನಾದ ನಾಗಾರ್ಜುನ ಮಾದ್ಯಮಿಕ ಸೂತ್ರದಲ್ಲಿ ಸಾಪೇಕ್ಷ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾನೆ. ಪ್ರಜ್ಞಾಪರಿಮಿತ ವೇದಾಂತದ ಕೃತಿಯಾಗಿದೆ.
‘ಸಹೃಲೇಖ’ ಕೃತಿಯು ನಾಲ್ಕು ಆರ್ಯಸತ್ಯಗಳು ಮತ್ತು ಅಷ್ಟಾಂಗ ಸಿದ್ದಮಾರ್ಗಗಳನ್ನು ಕುರಿತು ವಿಶ್ಲೇಷಿಸುತ್ತದೆ. ಈ ಕೃತಿಯ ಸರ್ವೋತ್ಕೃಷ್ಟ ಅಂಶವೆಂದರೆ ಮಿತ್ರರು ಮತ್ತು ವೈರಿಗಳಲ್ಲಿ ಯಾವುದೇ ಭೇದಭಾವವನ್ನು ಮಾಡಬಾರದೆಂಬುದು. ನಾಗಾರ್ಜುನನ್ನು ಭಾರತದ ಮಾರ್ಟಿನ್ ಲೂಥರ್ ಮತ್ತು ಭಾರತದ ಐನ್ ಸ್ಟೈನ್ ಎಂದೇ ಕರೆಯಲಾಗಿದೆ. ನಾಗಾರ್ಜುನನ ವಿದ್ವತ್ತನ್ನು ಗಮನಿಸಿದ ಚೀನಿ ಯಾತ್ರಿಕ ಹ್ಯುಯನ್ ತ್ಸಾಂಗ್ ಹೇಳುವಂತೆ ‘ಜಗತ್ತಿನ ನಾಲ್ಲು ಜ್ಯೋತಿಗಳಲ್ಲಿ ನಾಗಾರ್ಜುನನು ಕೂಡ ಒಬ್ಬನಾಗಿದ್ದಾನೆ’.
ಚರಕ:
ಕುಶಾನರ ಕಾಲದಲ್ಲಿದ್ದ ಚರಕನು ಆಯುರ್ವೇದ ಔಷಧ ಶಾಸ್ತ್ರದ ಮಹಾನ್ ಪಂಡಿತನೆನಿಸಿದ್ದನು. ಇವನು ಕಾನಿಷ್ಕನ ಆಸ್ಥಾನದ ಪ್ರಖ್ಯಾತ ವೈದ್ಯನಾಗಿದ್ದನು. ಇವನು ‘ಚರಕಸಂಹಿತೆ’ ಯೆಂಬ ವೈದ್ಯಕೀಯ ಕೃತಿಯನ್ನು ರಚಿಸಿದ್ದಾನೆ. ಇದು ಕ್ರಿ.ಶ 7ನೇಶತಮಾನದಲ್ಲಿ ಪರ್ಶಿಯನ್ ಭಾಷೆಗೂ ಕ್ರಿಶ ೫ನೇ ಶತಮಾನದಲ್ಲಿ ಅರೇಬಿಕ್ ಭಾಷೆಗೂ ಭಾಷಾಂತರವಾಯಿತು. ಕಾನಿಷ್ಕನ ಕಾಲಾವಧಿಯಲ್ಲಿ ವಸುಮಿತ್ರ ಮತ್ತು ಪಾರ್ಶ್ವ ಎಂಬ ವಿದ್ವಾಂಸರುಗಳಿದ್ದರು. ವಸುಮಿತ್ರನು ನಾಲ್ಕನೇ ಬೌದ್ಧ ಮಹಾಸಮ್ಮೇಳನದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದನು. ಕುಶಾನರ ಕಾಲದಲ್ಲಾದ ಸಾಹಿತ್ಯದ ಚಟುವಟಿಕೆಗಳ ನ್ನು ಗಮನಿಸಿ ಡಾ|ಹೆಚ್.ಜಿ.ರಾಲಿಸನ್ ರವರು ‘ಕುಶಾನರ ಕಾಲವು ಗುಪ್ತರ ಯುಗಕ್ಕೆ ಅತ್ಯುತ್ತಮ ಪೂರ್ವಭಾವಿ ಪೀಠಿಕೆಯಾಗಿದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕಲೆ ಮತ್ತು ವಾಸ್ತುಶಿಲ್ಪ
ಕುಶಾನರು ಕಲೆಗೆ ಹೆಚ್ಚು ಪ್ರೋತ್ಸಾಹ ನೀಡಿದ್ದರಿಂದ ಕಲಾ ಶ್ರೀಮಂತಿಕೆಯು ಸೃಷ್ಟಿಗೊಂಡಿತ್ತು. ಕಲಾವೈಭವ, ಕಲಾಕೌಶಲ್ಯತೆ, ಕುಸುರಿಯ ಕೆತ್ತನೆಯಿಂದ ಕಲೆಯಲ್ಲಿ ವೈಭವದ ಅಂಕುರಾರ್ಪಣೆ ಕಂಡುಬಂದಿತು. ಕುಶಾನರ ಕಾಲದ ಬೆಳವಣಿಗೆಯು ಭಾರತೀಯ ಕಲೆಯಲ್ಲಿ ಹೊಸದೊಂದು ಯುಗ ಆರಂಭಿಸಿತು. ಗಾಂಧಾರವನ್ನು ಕೇಂದ್ರಸ್ಥಾನವಾಗಿ ಮಾಡಿಕೊಂಡು ಕುಶಾನರು ಕಲೆಯನ್ನು ಅಭಿವೃದ್ಧಿ ಪಡಿಸಿದ್ದರಿಂದ ‘ಗಾಂಧಾರಕಲೆ’ ಎಂದೇ ಕರೆಯಲಾಗಿದೆ. ಈ ಕಲೆಯು ಗ್ರೀಕ್ ಮತ್ತು ಭಾರತೀಯ ಕಲೆಯ ಲಕ್ಷಣಗಳಿರುವುದರಿಂದ ‘ಗ್ರೀಕೊ ಬೌದ್ಧಕಲೆ’ ಎಂದು ಸಹ ಹೆಸರಿಸಲಾಗಿದೆ. ಏಷ್ಯಾಮೈನಾರ್ ಮತ್ತು ರೋಂ ಸಾಮ್ರಾಜ್ಯದ ಹೆಲೆನಿಸ್ಟಿಕ್ ಕಲೆಯ ಲಕ್ಷಣಗಳು ಸಹ ಸಂಮ್ಮಿಲನಗೊಂಡಿರುವುದರಿಂದ ‘ಗ್ರೀಕೋ-ರೋಮನ್ ಕಲೆ’ ಎಂದೂ ಸಹ ಹೆಸರಿಸಲಾಗಿದೆ.
1. ಗಾಂಧಾರ ಕಲಾ ಶೈಲಿ:
ಈಗಿನ ಅಫಘಾನಿಸ್ತಾನವನ್ನು ಹಿಂದೆ ಗಾಂಧಾರ ದೇಶವೆಂದು ಕರೆಯುತ್ತಿದ್ದರು. ಇಲ್ಲಿಗೆ ಬಂದು ನೆಲಸಿದ ಗ್ರೀಕ್ ಶಿಲ್ಪಗಳು ಹೊಸ ಕಲಾ ಶೈಲಿಯನ್ನೇ ಹುಟ್ಟುಹಾಕಿದರು. ಅದನ್ನು ‘ಗಾಂಧಾರ ಶಿಲ್ಪ ಶೈಲಿ’ ಎಂದೇ ಕರೆಯಲಾಗಿದೆ. ಇದರ ಪ್ರಮುಖ ಕಲಾ ಕೇಂದ್ರಗಳೆಂದರೆ:
* ಜಲಾಲಾಬಾದ್,
* ಹಡ್ಡ
* ಬಮಿಯಾನ್,
* ಸ್ವಾಟ್ ಕಣಿವೆ ಮತ್ತು ಪೆಶಾವರ್ ಜಿಲ್ಲೆ.
ಗಾಂಧಾರ ಶಿಲ್ಪಕಲೆಯು ಭಾರತವು ಗ್ರೀಸ್ ಮತ್ತು ರೋಮ್ ರಾಜ್ಯಗಳೊಂದಿಗೆ ಹೊಂದಿದ್ದ ಸಾಂಸ್ಕೃತಿಕ ಮತ್ತು ವಾಣಿಜ್ಯ ಸಂಪರ್ಕದ ಫಲವಾಗಿದೆ. ಮಹಾಯಾನ ಪಂಥ ಬೆಳೆದಂತೆ ಗಾಂಧಾರ ಶಿಲ್ಪಕಲೆಯು ಚೀನಾ, ಟಿಬೆಟ್ ಮತ್ತು ಜಪಾನ್ ಗಳಿಗೂ ಪರಿಚಯವಾಯಿತು, ಆದರೆ ಮುಂದೆ ಕುಶಾನರ ನಂತರ ಗಾಂಧಾರ ಕಲೆಯು ತನ್ನ ಮಹತ್ವವನ್ನು ಕಳೆದುಕೊಂಡು ಕಣ್ಮರೆಯಾಯಿತು. ಮೂರ್ತಿಶಿಲ್ಪದಲ್ಲಿ ಉಬ್ಬುಶಿಲ್ಪಗಳಿಗೆ ಪ್ರಾಧಾನ್ಯತೆಯನ್ನು ನೀಡಿರುವುದು ಕಂಡುಬರುತ್ತದೆ. ಮಹಾಯಾನ ಪಂಥದವರು ಬುದ್ಧನನ್ನು ದೈವತ್ವದ ಮಟ್ಟಕ್ಕೇರಿಸಿದ್ದರಿಂದ ಮೂರ್ತಿಗಳ ಕೆತ್ತನೆಗೆ ಪ್ರೇರಣೆ ದೊರಕಿತು. ಮೂರ್ತಿಗಳ ರಚನೆಯಲ್ಲಿ ಕಲ್ಲು, ತಿಳಿಗಚ್ಚು ಹಾಗೂ ಜೇಡಿಮಣ್ಣನ್ನು ಬಳಸುತ್ತಿದ್ದರು. ಈ ಕಲೆಯಲ್ಲಿ ಬುದ್ಧನ ವಿವಿಧ ರೂಪದ ಮೂರ್ತಿಯನ್ನು ರಚಿಸಲಾಯಿತು. ಬುದ್ಧನ ಜನನ, ರಾಜಕುಮಾರನಾಗಿ, ಸನ್ಯಾಸಿಯಾಗಿ ಸಿದ್ದಾರ್ಥನು ಬುದ್ಧನಾದ ಬಗೆಯನ್ನು ಚಿತ್ರಿಸಲಾಗಿದೆ. ಬುದ್ಧನ ಬಾಲ್ಯಾವಸ್ಥೆಯಿಂದ ಹಿಡಿದು ಜ್ಞಾನೋದಯನಾದ ಕಾಲದವರೆಗಿನ ವಿವರಗಳು ದೊರಕುತ್ತವೆ. ವಿ.ಎ.ಸ್ಮಿತ್ ಅಭಿಪ್ರಾಯಪಡುವಂತೆ ‘ಯಾವುದೇ ಲೌಕಿಕ ಅಭಿರುಚಿಯನ್ನು ಕಡೆಗಣಿಸದೆ ಶಿಲ್ಪಿಯು ಎಲ್ಲಾ ಅಂಶಗಳನ್ನು ಸೂಕ್ತವಾಗಿ ಬಳಸಿರುವುದು ಕಂಡುಬರುತ್ತದೆ”.
ಗಾಂಧಾರ ಶಿಲ್ಪ ಶೈಲಿಯ ಪ್ರಮುಖ ಲಕ್ಷಣಗಳು
1. ಮನುಷ್ಯಾಕೃತಿಯ ವಿಗ್ರಹಗಳು:
ಕುಶಾನರಿಗಿಂತ ಹಿಂದೆ ಬುದ್ಧನ ವಿಗ್ರಹಗಳನ್ನು ಕೆತ್ತುತ್ತಿರಲಿಲ್ಲ. ಮತ್ತು ಪೂಜಿಸುತ್ತಿರಲಿಲ್ಲ. ಬದಲಿಗೆ ಬುದ್ಧನ ಪ್ರತೀಕಗಳನ್ನು (symbols) ಮಾತ್ರ ಪೂಜಿಸುತ್ತಿದ್ದರು. ಅವುಗಳೆಂದರೆ:-
1. ಬುದ್ಧನ ಪಾದದ ಗುರುತು,
2. ಛತ್ರಿ,
3. ಖಾಲಿಸ್ಥಾನ,
4. ಬುದ್ಧನ ಅಸ್ಥಿ ಪಂಜರದ ಅವಶೇಷಗಳು,
ಆದರೆ ಮೊಟ್ಟಮೊದಲಿಗೆ ಗಾಂಧಾರ ಶೈಲಿಯಲ್ಲಿ ಬುದ್ಧನ ವಿಗ್ರಹಗಳನ್ನು ಕೆತ್ತಲು ಪ್ರಾರಂಭಿಸಿದರು. ಇವುಗಳು ಮನುಷ್ಯಾಕೃತಿಯ ನಿಂತ, ಕುಳಿತ ಅಥವಾ ಮಲಗಿದ ಪ್ರತಿಮೆಯೋಪಾದಿಯಲ್ಲಿದ್ದವು.
2. ಗ್ರೀಕ್ ದೇವರ ಹೋಲಿಕೆ:
ಗ್ರೀಕ್ ಶಿಲ್ಪಿಗಳು ಭಾರತೀಯ ಬುದ್ಧನನ್ನು ಕೆತ್ತುವಾಗಲೂ ತಮ್ಮ ಹಿಂದಿನ ಗ್ರೀಕ್ ತಂತ್ರಗಾರಿಕೆಯನ್ನು, ವಿಧಾನ ಮತ್ತು ಸ್ವರೂಪವನ್ನು ಮರೆಯಲಾಗಲಿಲ್ಲ. ಬದಲಿಗೆ ಬುದ್ಧನ ಮೂರ್ತಿಯಲ್ಲಿಯೂ ಅದನ್ನು ಕಂಡರಿಸಿದರು. ಪರಿಣಾಮವಾಗಿ ಗಾಂಧಾರ ಬುದ್ಧನ ಮೂರ್ತಿಗಳು ಗ್ರೀಕರ ದೇವರಾದ ‘ಅಪೊಲೊ’ ವನ್ನು ಹೋಲುವಂತಿವೆ.
3. ಕೇಶಾಲಂಕಾರ ಮತ್ತು ಉದ್ದನೆಯ ಗಡ್ಡ ಮೀಸೆ:
ಗ್ರೀಕ್ ಶಿಲ್ಪಗಳಿಂದ ಕೆತ್ತಲ್ಪಟ್ಟ ಬುದ್ದನಲ್ಲಿ ಗ್ರೀಕೊ-ರೋಮನ್ ದೇವತಾಶಾಸ್ತ್ರ ಲಕ್ಷಣಗಳು ಬೆರೆತು ನಿರೂಪಿತವಾಗಿದೆ. ಪ್ರಮುಖವಾಗಿ ಕೇಶಾಲಂಕಾರಕ್ಕೆ ಗಮನ ಕೊಡಲಾಗಿದೆ. ತಲೆಗೂದಲು ಮೆಟ್ಟಿಲು ಮೆಟ್ಟಿಲಾಗಿ ಮೇಲೆರುತ್ತದೆ. ತಲೆಯನ್ನು ಆಭರಣಗಳೊಂದಿಗೆ ಅಲಂಕರಿಸಲಾಗಿದೆ. ಗ್ರೀಕ್ ಸಂಪ್ರದಾಯಕ್ಕೆ ಅನುಗುಣವಾಗಿ ಉದ್ದನೆಯ ಮೀಸೆ, ಗಡ್ಡವನ್ನು ಕೆತ್ತಲಾಗಿದೆ. ಭಾರತೀಯ ಬುದ್ಧನನ್ನು ಒಳಗೊಂಡು ಯಕ್ಷರು, ಗರುಡರು, ನಾಗರು, ಮುನಿಗಳು ಹಾಗೂ ಪುರೋಹಿತರಿಗೂ ಗಡ್ಡ ಮತ್ತು ಮೀಸೆಯನ್ನು ಬಿಡಲಾಗಿದೆ. ಈ ಶಿಲ್ಪಗಳು ಗ್ರೀಕ್ ಅಟ್ಲಾಂಟಿಸ್, ಬಚಾಂಟ್ಸ್, ನ್ಯೂಸ್, ಹೆರಾಕ್ಸಿಸ್, ಈರೋಸ್, ಹರ್ಮಿಸ್ ರಂತೆ ಕಂಡುಬರುತ್ತಾರೆ.
4. ಎದ್ದು ಕಾಣುವ ಸ್ನಾಯು:
ಮೊದಲಿಗೆ ಗ್ರೀಕ್ ಶಿಲ್ಪಿಗಳು ಸಿದ್ದಾರ್ಥನ ಜೀವನ ಚರಿತ್ರೆಯನ್ನು ಆಲಿಸಿದರು. ಸುಖದ ಸುಪ್ಪತ್ತಿಗೆ ಯಲ್ಲಿರಬೇಕಾದ ಅರಸನೊಬ್ಬ ರಾಜ್ಯವನ್ನು, ಅರಮನೆ ಯನ್ನು, ಹೆಂಡತಿ-ಮಕ್ಕಳನ್ನು ತೊರೆದು ಅಲೆಯುತ್ತಿರುವ ಚಿತ್ರವನ್ನು ಕಲ್ಪಿಸಿಕೊಂಡರು. ಪ್ರಪಂಚದ ದುಃಖ ದುಮ್ಮಾನವನ್ನು ಹೋಗಲಾಡಿಸುವ ಬಗ್ಗೆ ಚಿಂತಿಸುತ್ತಾ ಸದಾ ಜಿಜ್ಞಾಸೆಯಲ್ಲಿ ಅನ್ನ ಆಹಾರದ ಪರಿವೆ ಇಲ್ಲದೆ ಇರುವ ವ್ಯಕ್ತಿಯೊಬ್ಬ ಹೇಗಿರಬಹುದು ಎಂಬುದನ್ನು ಮನಸ್ಸಿನಲ್ಲಿಯೇ ಚಿತ್ರಿಸಿಕೊಂಡರು. ಇಂತಹ ವ್ಯಕ್ತಿ ಜ್ಞಾನೋದಯಿಯಾಗಿ ಸಿದ್ದಾರ್ಥ, ಬುದ್ಧನಾದ ಕಥೆ ಅವರ ಮನಸ್ಸಿಗೆ ನಾಟಿತು. ಅಂತೆಯೆ ಗ್ರೀಕ್ ಶಿಲ್ಪಿಗಳು ವಾಸ್ತವಿಕವಾಗಿ ಕೆತ್ತ ತೊಡಗಿದರು. ಪರಿಣಾಮವಾಗಿ ಗುಳಿ ಬಿದ್ದ ಕಪಾಳ, ಒಳಹೋದ ಕಣ್ಣಿನ ಮತ್ತು ಎದ್ದು ಕಾಣುವ ಸ್ನಾಯುವನ್ನು ಒಳಗೊಂಡ ಬುದ್ಧನನ್ನು ಕಲ್ಲಿನಲ್ಲಿ ಕಂಡರಿಸಿದರು.
5. ಬುದ್ಧನಿಗೆ ನೆರಿಗೆಗಳುಳ್ಳ ವಸ್ತ್ರವಿನ್ಯಾಸದ ಪಾರದರ್ಶಕ ಉಡುಪು:
ಬುದ್ಧನಿಗೆ ತೊಡಿಸಿರುವ ಪೋಷಾಕನ್ನು ಚಿತ್ರಿಸುವಲ್ಲಿ ಗ್ರೀಕ್ ಶಿಲ್ಪಿಗಳು ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಬುದ್ಧನ ಉಡುಪು ನೆರಿಗೆಯನ್ನು ಹೊಂದಿದ್ದು ಮಡಿಕೆಯೋಪಾದಿಯಲ್ಲಿದೆ. ದೇಹ ರಚನೆಯು ತೊಟ್ಟ ಬಟ್ಟೆಯ ಮೇಲಿನಿಂದಲೇ ಕಾಣುತ್ತಿದ್ದು, ಪಾರದರ್ಶಕವಾಗಿದೆ. ಉಡುಪು ಗ್ರೀಕರ ಟೋಗ ಮಾದರಿಯದಾಗಿದೆ.
6. ವಸ್ತು ವಿಷಯ ಮತ್ತು ಯೋಗಾಸನಭಂಗಿಯಲ್ಲಿ ಭಾರತೀಯತೆ:
ಈಗಿನ ಅಫಘಾನಿಸ್ತಾನದಲ್ಲಿ (ಗಾಂಧಾರ) ನೆಲಸಿದ್ದ ಗ್ರೀಕರು ತಮ್ಮ ಶಿಲ್ಪಕೆತ್ತನೆಗೆ ವಸ್ತು ವಿಷಯವಾಗಿ ಭಾರತೀಯ ಭಗವಾನ್ ಬುದ್ಧನನ್ನು ಆರಿಸಿಕೊಂಡರು. ಅಲ್ಲದೆ ಅವರ ಕೆತ್ತನೆಯಲ್ಲಿ ಭಾರತೀಯ ಮುನಿಗಳು, ಗರುಡರು, ಯಕ್ಷರು ಸಹ ಕಾಣಿಸಿಕೊಂಡರು. ಭಗವಾನ್ ಬುದ್ಧ ಕುಳಿತ ಭಂಗಿ ಯೋಗಾಸನ ಮಾದರಿ ಯದಾಗಿತ್ತು, ಕೆತ್ತಿದವನು ವಿದೇಶಿ ಹಿನ್ನೆಲೆಯ ಗ್ರೀಕ್ ಶಿಲ್ಪಿಯಾದರು ಅವರ ವಸ್ತು ವಿಷಯ ಭಾರತೀಯವಾಗಿದ್ದುದು ಮಹತ್ವದ ವಿಷಯವಾಗಿದೆ. ಆದ್ದರಿಂದ ಡಾ॥ ಆರ್.ಸಿ.ಮಜುಂದಾರ್ ಹೇಳುವಂತೆ ‘ಗಾಂಧಾರ ಶಿಲ್ಪಿ ಗ್ರೀಕ್ ಕೈಯಿ ಹೊಂದಿದ್ದರೆ ಹೃದಯ ಮಾತ್ರ ಭಾರತೀಯವಾಗಿತ್ತು ಎಂದಿದ್ದಾರೆ’
ಇತ್ತೀಚೆಗೆ 2001 ರಲ್ಲಿ ಅಫಘಾನಿಸ್ತಾನದ ಮತಾಂಧ ತಾಲಿಬಾನ್ ಸರ್ಕಾರವು ಅಮೂಲ್ಯ ಗಾಂಧಾರ ವಿಗ್ರಹಗಳನ್ನು ಭಗ್ನ ಗೊಳಿಸಿದೆ. ಫಿರಂಗಿ, ಟ್ಯಾಂಕ್, ಮದ್ದು ಗುಂಡುಗಳನ್ನು ಬಳಸಿ ವಿಗ್ರಹ ಭಂಜನೆ ಮಾಡಿ ತಾನೂ ನಾಶವಾಗಿದೆ. ಆ ಮೂಲಕ ತನ್ನ ನಾಡಿನ ಅಮೂಲ್ಯ ಸಂಸ್ಕೃತಿಯೊಂದನ್ನು ಸರ್ವನಾಶ ಮಾಡಿದೆ. ಇವುಗಳಲ್ಲಿ ಪ್ರಮುಖವಾಗಿ :
1. ಬಾಮಿಯಾನ್ ಬಂಡೆಯಲ್ಲಿಕೆತ್ತಲಾಗಿದ್ದ ಬುದ್ಧನ ವಿಗ್ರಹ. ಇದು 175 ಅಡಿ ಎತ್ತರವಿದ್ದು, ಜಗತ್ತಿನಲ್ಲಿಯೇ ಅತಿ ಎತ್ತರವಾಗಿತ್ತು.ಹ್ಯುಯನ್ ತ್ಸಾಂಗ್ ಇಲ್ಲಿಗೆ ಬೇಟಿಕೊಟ್ಟು ಈ ವಿಗ್ರಹವನ್ನು ನೋಡಿದ್ದಾಗಿ ಹೇಳಿಕೊಂಡಿದ್ದಾನೆ.
2. ತಾಲಿಬಾನಿಗಳಿಂದನಾಶವಾದ ಮತ್ತೊಂದು ಪ್ರಸಿದ್ಧ ವಿಗ್ರಹವೆಂದರೆ ಸಾದ್ರಿ ಬಹಲೂಲ್ ಬುದ್ಧ. ಇದು 86 ಅಡಿ ಎತ್ತರವಿತ್ತು.3. ಕಾಬೂಲಿನ ರಾಷ್ಟ್ರೀಯ ಸಂಗ್ರಹಾಲಯದಲ್ಲಿದ್ದ ಸಾವಿರಾರು ವಿಗ್ರಹಗಳ ಅಂಗಛೇದವನ್ನು ತಾಲಿಬಾನ್ ಸರ್ಕಾರ ವ್ಯವಸ್ಥಿತವಾಗಿ ಮಾಡಿತು.
3. ಇಡೀ ವಿಶ್ವವೇ ಮನವಿ ಮಾಡಿಕೊಂಡರೂ ತಾಲಿಬಾನ್ ಸರ್ಕಾರ ಕಿವಿಗೊಡದೆ ತನ್ನ ವಿಗ್ರಹ ಭಂಜನೆಯ ಕೆಲಸವನ್ನು ಮುಂದುವರೆಸಿತು. ಸಂಸ್ಕೃತಿ ಮತ್ತು ನಾಗರೀಕತೆಯ ಇತಿಹಾಸದಲ್ಲಿ ತಮಗೆ ಸಂಸ್ಕೃತಿ ಮತ್ತು ನಾಗರೀಕತೆಯೇ ಇಲ್ಲವೆಂದು ಜಗತ್ತಿಗೆ ಜಾಹೀರು ಪಡಿಸಿತು. ಇದು ತಾಲಿಬಾನಿಗಳ ಕುಕೃತ್ಯದ ಕರ್ಮಕಾಂಡದ ವಿಗ್ರಹನಾಶದ ಕಥೆಯಾಗಿದೆ.
2. ಮಥುರಾ ಕಲಾ ಶೈಲಿ
ಮಥುರಾವನ್ನು ಕೇಂದ್ರಸ್ಥಾನವಾಗಿ ಹೊಂದಿ ಕಲೆಯು ಬೆಳವಣಿಗೆ ಹೊಂದಿದ್ದರಿಂದ ಮಥುರಾ ಕಲಾ ಶೈಲಿ ಎಂದೇ ಹೆಸರಾಗಿದೆ. ಮಥುರಾ ಶಿಲ್ಪದಲ್ಲಿ ಜೈನ ತೀರ್ಥಂಕರರು, ಬುದ್ಧ, ಬೋಧಿಸತ್ವರು ಹಾಗೂ ಸುಂದರಿಯರು, ಲಾವಣ್ಯವತಿಯರು, ಬ್ರಹ್ಮ, ವಿಷ್ಣು, ಶಿವ, ಸೂರ್ಯ, ಮಹಿಷಾಸುರ ಮರ್ದಿನಿ ಮೊದಲಾದ ಮೂರ್ತಿಗಳನ್ನು ಕೆತ್ತಲಾಗಿದೆ. ಕೆಲವು ಯುವತಿಯರ ಶಿಲ್ಪಗಳು ಅತ್ಯಂತ ನಯನ ಮನೋಹರವಾಗಿ ಮೂಡಿಬಂದಿವೆ. ‘ಯುವತಿಯು ಹಕ್ಕಿಗಳ ಜೊತೆ ಹಾಡುತ್ತಿರುವ ದೃಶ್ಯ, ಯುವತಿಯೊಬ್ಬಳು ಸ್ನಾನಮಾಡಿ ತಲೆಗೂದಲನ್ನು ಹಿಂಡುವಾಗ ನೀರನ್ನು ಹಕ್ಕಿಯು ಹೀರಲು ಯತ್ನಿಸುತ್ತಿರುವುದು, ಅಮೋಹಿನಿ ಉಬ್ಬುಶಿಲ್ಪ, ಕಾನಿಷ್ಕನ ಶಿಲ್ಪ ಅತ್ಯುತ್ತಮ ಶಿಲ್ಪಗಳಾಗಿವೆ. ಮಥುರಾ ಕಲಾ ಶೈಲಿಯಲ್ಲಿ ಭಾರತೀಯ ಅಂಶಗಳೇ ಹೆಚ್ಚಾಗಿರುವುದರಿಂದ ರಾಲಿನ್‌ನ್ ರವರು ಇದನ್ನು ‘ದೇಶಿಯ ಕಲಾ ಶೈಲಿ’ಯೆಂದೇ ವರ್ಣಿಸಿದ್ದಾರೆ. ಬುದ್ಧನ ಮೂರ್ತಿಯನ್ನು ಚಲಾವಣೆಗೆ ತಂದು ಭಾರತೀಕರಣಗೊಳಿಸಿದ ಕೀರ್ತಿ ಮಥುರಾ ಕಲಾ ಪಂಥದವರಿಗೆ ಸಲ್ಲುತ್ತದೆ ಎಂದು ಪ್ರೊ|| ರೋಮಿಲಾ ಥಾಪರ್ ಅಭಿಪ್ರಾಯಪಟ್ಟಿದ್ದಾರೆ.
3. ಸಾರನಾಥ ಕಲಾಪಂಥ
ಸಾರನಾಥ ಕಲಾಶೈಲಿಯು ಮಥುರಾ ಶೈಲಿಯಂತೆಯೇ ದೇಶಿಯ ಅಂಶಗಳನ್ನು ಒಳಗೊಂಡಿತ್ತು. ಇದು ವಿದೇಶಿಯ ಪ್ರಭಾವದಿಂದ ಮುಕ್ತಗೊಂಡಿತು. ʻಬಿಕ್ಷುಬಲನು’ ಕಾನಿಷ್ಕನ ಆಳ್ವಿಕೆಯ ಕಾಲದಲ್ಲಿ ಬೋದಿಸತ್ವ ಮೂರ್ತಿಯನ್ನು ಸಾರನಾಥದಲ್ಲಿ ಕೆತ್ತಿಸಿದ್ದನು.
ವಾಸ್ತುಶಿಲ್ಪ
ಕುಶಾನರ ಕಾಲದಲ್ಲಿ ಮೂರ್ತಿಶಿಲ್ಪದಂತೆಯೇ ವಾಸ್ತುಶಿಲ್ಪಕೂಡ ಹೆಚ್ಚು ಅಭಿವೃದ್ಧಿಗೊಂಡಿತು. ಕಾನಿಷ್ಕನು ʻಎಜಿಸಿಲಾನ್’ಎಂಬ ಗ್ರೀಕ್ ವಾಸ್ತುಶಿಲ್ಪಿಗೆ ಆಶ್ರಯ ನೀಡಿದ್ದನು. ಪೇಷಾವರ್, ಕಾನಿಷ್ಕಪುರ, ತಕ್ಷಶಿಲೆ, ಮಥುರಾ ಮೊದಲಾದ ಪ್ರದೇಶಗಳಲ್ಲಿ ಅಪಾರ ಸಂಖ್ಯೆಯ ಕಟ್ಟಡಗಳು ನಿರ್ಮಿಸಲ್ಪಟ್ಟವು. ಅಂತಹವುಗಳಲ್ಲಿ ಸ್ತೂಪಗಳು, ವಿಹಾರಗಳು ಹಾಗೂ ಸಂಘರಾಮಗಳು ಸೇರಿವೆ. ಇಂತಹ ಅಮೂಲ್ಯ ಸ್ಮಾರಕಗಳು ಭಗ್ನಾವಶೇಷ ಸ್ಥಿತಿಯಲ್ಲಿವೆ. ಕಾನಿಷ್ಕನು ಅನೇಕ ಗೋಪುರಗಳನ್ನು ನಿರ್ಮಿಸಿದನು. ಕಾಶ್ಮೀರದಲ್ಲಿ ಕಾನಿಷ್ಕಪುರ ಎಂಬ ನಗರವನ್ನು ನಿರ್ಮಿಸಿದನು. ತಕ್ಷಶಿಲೆಯ ಸಿರ್‌ಸುರ್ ನಗರಕ್ಕೆ ಅಡಿಗಲ್ಲು ಹಾಕಿದನು. ಕಾನಿಷ್ಕನು ಪುರುಷಪುರವನ್ನು (ಪೇಷಾವರ್) ಅಭಿವೃದ್ಧಿಪಡಿಸಿದಂತೆ, ‘ಹುವಿಷ್ಕನು’ ಮಥುರಾವನ್ನು ಸ್ಮಾರಕಗಳು ಮತ್ತು ಶಿಲ್ಪಗಳಿಂದ ಅಂದಗೊಳಿಸಿದನು. ಹುವಿಷ್ಕನು ಕಾಶ್ಮೀರದಲ್ಲಿ ಹುವಿಷ್ಕಪುರ ಎಂಬ ನಗರವನ್ನು ನಿರ್ಮಿಸಿದನು.