1) ಸಾಮಾಜೀಕರಣವು ಮಾನವನನ್ನು ಸಮೂಹ ಜೀವಿಯನ್ನಾಗಿಸುತ್ತದೆ:

ಮಾನವ ಜನ್ಮತ: ಸಮೂಹ ಜೀವಿಯಾಗಿರುವುದಿಲ್ಲ. ಸಮೂಹ ಸಂಪರ್ಕ, ಸಂಸ್ಕಾರ ಹಾಗೂ ಶಿಕ್ಷಣವಿಲ್ಲದೆ ಮಾನವ ಸಮೂಹ ಜೀವನದ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಲಾರ. ನವಜಾತ ಶಿಶುವಿಗೆ ಸಾಮಾಜಿಕ ಶಿಕ್ಷಣವನ್ನು ನೀಡಿ ಅದನ್ನು ಸಮೂಹ ಜೀವನಕ್ಕೆ ಅಣಿಗೊಳಿಸುವುದು ಸಾಮಾಜೀಕರಣದ ಪ್ರಮುಖ ಕಾರ್ಯವಾಗಿದೆ. ಮಾನವ ಸಾಮಾಜಿಕ ಜೀವಿಯಾಗಲು ಜ್ಞಾನ, ನಂಬಿಕೆ, ಅಭ್ಯಾಸಗಳು ಹಾಗೂ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಈ ಅಂಶಗಳನ್ನು ಅವನು ಈಗಾಗಲೇ ಪಡೆದವರಿಂದ ಸಂಪರ್ಕ ಹೊಂದುವ ಮೂಲಕ ಪಡೆಯಬಹುದಾಗಿದೆ. ಮಾನವ ಹುಟ್ಟಿನಿಂದ ಕೇವಲ ಒಂದು ಜೈವಿಕ ಪದಾರ್ಥ ಅದು ಕೇವಲ ಮಾಂಸದ ಮುದ್ದೆ, ನಿರಂತರ ಸಂಪರ್ಕ ಸಾಧನೆಯಿಂದ ಸಂಸ್ಕಾರವನ್ನು ಕಲಿಯಬೇಕು. ಇಲ್ಲದೆ ಹೋದರೆ ಅದು ನಿಜಮಾನವನಾಗಿ ಬಾಳಲು ಸಾಧ್ಯವಿಲ್ಲ. ಈ ಸಂಸ್ಕಾರ ಸಮಾಜದಿಂದಲೇ ಬರುವುದು ಎಂಬುದು ಕಮಲ, ಅಮಲ, ಅನ್ನಾ, ಇಸಬೆಲ್ಲಾ ಹಾಗೂ ಕ್ಯಾನ್ಸರ್ ಹೌಸರ್ ಪ್ರಕರಣಗಳಿಂದ ಸ್ಪಷ್ಟವಾಗಿದೆ.

2) ಸಾಮಾಜೀಕರಣವು ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿಯಾಗಿದೆ;

ಸಾಮಾಜೀಕರಣವು ವ್ಯಕ್ತಿಯ ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿಯಾಗಿದೆ. ವ್ಯಕ್ತಿತ್ವವೆಂಬುದು ಹುಟ್ಟಿನಿಂದ ಬರುವುದಿಲ್ಲ. ಅದನ್ನು ಪ್ರತಿಯೊಬ್ಬರೂ ಸಾಮಾಜಿಕ ಸಂಪರ್ಕದಿಂದ ಬೆಳೆಸಿಕೊಳ್ಳಬೇಕು. ಸಮೂಹ ಅಥವಾ ಸಮಾಜದ ಹೊರತಾಗಿ ಯಾರೂ ವ್ಯಕ್ತಿತ್ವವನ್ನು ಹೊಂದಲು ಸಾಧ್ಯವಿಲ್ಲ. ಅದೇ ರೀತಿಯಾಗಿ ಸಾಮಾಜೀಕರಣದ ಹೊರತಾಗಿ ವ್ಯಕ್ತಿತ್ವ ರೂಪುಗೊಳ್ಳುವುದಿಲ್ಲ. ಆದುದರಿಂದ ವ್ಯಕ್ತಿ ಸಮಾಜ ಹಾಗೂ ಸಂಸ್ಕೃತಿಗಳ ಸಂಪರ್ಕದಿಂದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತಾನೆ. ಇವೆಲ್ಲವೂ ಸಾಮಾಜೀಕರಣದಿಂದಲೇ ಬರುತ್ತದೆ. ಇದರ ಮೂಲಕವೇ ಮಾನವನಲ್ಲಿ ಉತ್ತಮ ಆಸೆ ಆಕಾಂಕ್ಷೆಗಳು, ಧ್ಯೇಯಧೋರಣೆಗಳು, ಜೀವನ ಮೌಲ್ಯಗಳು ಮೈಗೂಡಿ ಬರುತ್ತವೆ. ವ್ಯಕ್ತಿಯ ತಂದೆ, ತಾಯಿ, ಬಂಧು, ಬಳಗ, ಗುರು, ಹಿರಿಯರು, ಅಧಿಕಾರಿ, ಪ್ರಜೆ, ಆಡಳಿತಗಾರ ಮೊದಲಾದ ಯಾವುದೇ ಅಂತಸ್ತಿನಲ್ಲಿರುವ ಅದಕ್ಕೆ ಅವನು ತಕ್ಕ ಪಾತ್ರವಹಿಸಲು ಶಕ್ತನಾಗುತ್ತಾನೆ.

3) ಸಾಮಾಜೀಕರಣದಿಂದ ಶಿಸ್ತು ಮೂಡುತ್ತದೆ:

ಸಾಮಾಜೀಕರಣದ ಒಂದು ಕಲಿಕೆಯ ಪ್ರಕ್ರಿಯೆ. ಆದುದರಿಂದ ಆತ ಸಾಮಾಜೀಕರಣದಿಂದ ಶಿಸ್ತನ್ನು ಕಲಿಯುತ್ತಾನೆ. ಮೇಲಾಗಿ ವ್ಯಕ್ತಿಯು ಸಮಾಜದ ರೀತಿನೀತಿಗಳು, ರೂಢಿ ಸಂಪ್ರದಾಯಗಳು, ಆಚಾರವಿಚಾರಗಳನ್ನು ಪಡೆದುಕೊಳ್ಳುತ್ತಾನೆ. ಶಿಸ್ತು ಸಾಮಾಜಿಕ ವ್ಯವಸ್ಥೆಯ ಸೂಚಕ, ಅಶಿಸ್ತು ಅವ್ಯವಸ್ಥೆಯ ದ್ಯೋತಕ, ಶಿಸ್ತು ವ್ಯಕ್ತಿಯ ಬದುಕಿಗೆ ಪೂರಕ. ಆದುದರಿಂದ “ಶಿಸ್ತು” ವ್ಯಕ್ತಿಯು ತನ್ನ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಹೀಗೆ ವ್ಯಕ್ತಿಯ ಶಿಸ್ತುಬದ್ಧನಾಗಿದ್ದರೆ ಸಮಾಜದಲ್ಲಿ ಕ್ರಮಬದ್ಧತೆ. ಸ್ಥಿರತೆ, ಭದ್ರತೆ ಹಾಗೂ ಸುವ್ಯವಸ್ಥೆಯನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ.

4) ಸಾಮಾಜೀಕರಣವು ಪಾತ್ರ ನಿರ್ವಹಣೆಯಲ್ಲಿ ಸಹಕಾರಿಯಾಗುವುದು:

ಪ್ರತಿಯೊಬ್ಬ ಮಾನವನೂ ತನ್ನ ಜೀವಮಾನದುದ್ದಕ್ಕೂ ಹಲವಾರು ಸಾಮಾಜಿಕ ಪಾತ್ರಗಳನ್ನು ನಿರ್ವಹಿಸುತ್ತಾನೆ. ಅದು ಹಲವು ರೀತಿಯ ನೀತಿ ನಿಯಮಗಳನ್ನು ಒಳಗೊಂಡಿರುತ್ತದೆ. ಈ ರೀತಿ ನಿಯಮಗಳನ್ನು ಅರಿತುಕೊಳ್ಳಲು ಹಾಗೂ ಪಾತ್ರ ನಿರ್ವಹಣೆಗೆ ಅಗತ್ಯವಾದ ಮನೋಭಾವನೆಗಳನ್ನು ಬೆಳೆಸಿಕೊಳ್ಳಲು ಸಾಮಾಜೀಕರಣವು ಸಹಕಾರಿಯಾಗಿದೆ. ಸ್ತ್ರೀ ಪುರುಷ ಎಂಬ ಲಿಂಗ ಅಂತಸ್ತು, ಜನಾಂಗ ಅಂತಸ್ತು, ಜಾತಿ ಅಂತಸ್ತು ಮೊದಲಾದವುಗಳ ಬಗೆಗಿನ ಪರಂಪರಾಗತ ಕಲ್ಪನೆಗಳ ಹಿಂದಿರುವ ಸತ್ಯಾಸತ್ಯತೆಗಳನ್ನು ಅರ್ಥಮಾಡಿಕೊಳ್ಳಲು ವೈಚಾರಿಕ, ವೈಜ್ಞಾನಿಕ ಮನೋಭಾವ, ಪ್ರಜಾಸತಾತ್ಮಕ ಮೌಲ್ಯಗಳನ್ನು ರೂಢಿಸಿಕೊಳ್ಳಲು ಪ್ರೇರೇಪಿಸುತ್ತದೆ.

5) ಸಾಮಾಜೀಕರಣವು ವಿವಿಧ ಕೌಶಲ್ಯಗಳ ಬಗ್ಗೆ ಜ್ಞಾನವನ್ನು ನೀಡುತ್ತದೆ:

ಸಾಮಾಜೀಕರಣದಿಂದ ಅನೇಕ ಕುಶಲತೆಗಳ ಪರಿಜ್ಞಾನವು ಲಭ್ಯವಾಗುವುದು. ಅದರಿಂದ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಮೊದಲಾದ ಕ್ಷೇತ್ರಗಳಲ್ಲಿನ ಪಾತ್ರ ನಿರ್ವಹಣೆಗೆ ಅಗತ್ಯವಾದ ಜ್ಞಾನವನ್ನು ಸಾಮಾಜೀಕರಣ ನೀಡುತ್ತದೆ. ಅತ್ಯಂತ ಸರಳವಾದ ಕೆಲಸಗಳಾದ ಬಟ್ಟೆ ತೊಳೆಯುವುದು, ಸ್ನಾನಮಾಡುವುದು, ಹಲ್ಲುಜ್ಜುವುದು, ಪಾತ್ರೆ ತೊಳೆಯುವುದು, ಮನೆ ಶುದ್ಧವಾಗಿಟ್ಟುಕೊಳ್ಳುವುದರಿಂದ ಹಿಡಿದು ವಾಹನ ಓಡಿಸುವುದು, ಕಂಪ್ಯೂಟರ್ ಬಳಸುವುದು. ಯಂತ್ರಗಳನ್ನು ರಿಪೇರಿ ಮಾಡುವುದು. ವ್ಯಾಪಾರ ಮಾಡುವುದು ಮುಂತಾದ ಕಷ್ಟಮಯ ಕ್ರಿಯೆಗಳನ್ನು ಮಾಡುವುದನ್ನು ಸಾಮಾಜೀಕರಣದಿಂದ ಕಲಿಯಬಹುದು.

6) ಸಾಮಾಜೀಕರಣವು ಸರಿಯಾದ ಆಕಾಂಕ್ಷೆಗಳ ಬೆಳವಣಿಗೆಗೆ ಸಹಕಾರಿಯಾಗಿದೆ.

ಸಾಮಾಜೀಕರಣವು ವ್ಯಕ್ತಿಯು ಸರಿಯಾದ ಆಕಾಂಕ್ಷೆಗಳನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ಸಾಮಾಜೀಕರಣದಿಂದ ವ್ಯಕ್ತಿಯಲ್ಲಿ ಉತ್ತಮ ಆಸೆ ಆಕಾಂಕ್ಷೆಗಳು ಧ್ಯೇಯ ಧೋರಣೆಗಳು ಹಾಗೂ ಜೀವನ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಅನುವುಮಾಡಿಕೊಡುತ್ತದೆ. ಸಮಾಜದ ಹಿತಕ್ಕೆ ಮಾರಕವಾಗುವ ಆಸೆ ಆಕಾಂಕ್ಷೆಗಳನ್ನು ಕೈಬಿಟ್ಟು ಸಮಾಜದ ನಿರೀಕ್ಷೆಗೆ ಪ್ರತಿರೋಧಕವಲ್ಲದ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸುವಂತೆ ಪ್ರಚೋದಿಸುತ್ತದೆ. ವ್ಯಕ್ತಿಗಳ ಪ್ರವೃತ್ತಿ ಇಚ್ಛೆ ಹಾಗೂ ಸಮೂಹ ನಿರೀಕ್ಷೆ ಸಮಾಜ ಹಿತ ಇವುಗಳ ನಡುವೆ ಸಂಘರ್ಷ ಉಂಟಾದಾಗ ತಾನು ಪಡೆದ ಸಂಸ್ಕಾರ ಹಾಗೂ ಸಾಮಾಜಿಕ ಶಿಕ್ಷಣದ ಫಲವಾಗಿ ಆತ ಹೆಚ್ಚಿನ ಸಂದರ್ಭದಲ್ಲಿ ಸಮಾಜ ಹಿತಕ್ಕೆ ಅನುಸಾರವಾಗಿಯೇ ನಡೆದುಕೊಳ್ಳುತ್ತಾನೆ.

7) ಸಾಮಾಜೀಕರಣವು ಸಾಮಾಜಿಕ ಭದ್ರತೆಗೆ ಸಹಕಾರಿಯಾಗಿದೆ:

ಸಾಮಾಜೀಕರಣವು ಸಂಸ್ಕೃತಿಯ ಪರಂಪರೆಯ ಮುಂದುವರೆಯುವಿಕೆಗೆ ಸಹಾಯ ಮಾಡುತ್ತದೆ. ತನ್ಮೂಲಕ ಸಾಮಾಜಿಕ ಭದ್ರತೆ ಹಾಗೂ ಸ್ಥಿರತೆಯನ್ನು ತಂದು ಕೊಡುತ್ತದೆ. ಹೊಸ ಸಾಧನೆಗಳಿಗೆ ಅವಕಾಶ ಕಲ್ಪಿಸುತ್ತದೆ. ಸಮಾಜದ ಹಿತದಲ್ಲಿ ತನ್ನ ಹಿತವೂ ಅಡಗಿದೆ ಎಂಬುದನ್ನು ಅರ್ಥೈಸಿಕೊಡುತ್ತದೆ. ಬದುಕು- ಬದುಕಲು ಬಿಡು ಎಂಬ ಧೋರಣೆಯಿಂದ ನಡೆದುಕೊಳ್ಳಲು ಮನವರಿಕೆ ಮಾಡಿಕೊಡುತ್ತದೆ. ಕೊಲೆ, ಸುಲಿಗೆ, ದರೋಡೆ, ಕಳ್ಳತನ, ಭ್ರಷ್ಟಾಚಾರ, ಅನಾಚಾರ, ಅತ್ಯಾಚಾರ, ಮುಂತಾದವುಗಳು ಸಮಾಜ ಬಾಹಿರವಾದವುಗಳು ಎಂಬುದನ್ನು ತಿಳಿಸಿಕೊಡುತ್ತದೆ. ರಾಷ್ಟ್ರಕ್ಕೆ ಗೌರವ ಸಲ್ಲಿಸುವುದು ಪ್ರಜೆಯ ಆದ್ಯ ಕರ್ತವ್ಯವೆಂದು, ತೆರಿಗೆ ನೀಡುವುದು ಸಾಮಾಜಿಕ ನ್ಯಾಯವೆಂದೂ, ರಸ್ತೆಯ ನಿಯಮ ಪಾಲಿಸದಿರುವುದು ಮಹಾಪಾಪವೆಂದೂ ಸಮಾಜೀಕರಣದಿಂದ ತಿಳಿಯಬಹುದು.

8) ಸಾಮಾಜೀಕರಣವು ಸಾಮಾಜಿಕ ಅಂತರವನ್ನು ಕಡಿಮೆ ಮಾಡುತ್ತದೆ:

ಭಾರತೀಯ ಸಮಾಜವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ಸಮಾಜ. ಇದು ಹಲವಾರು ರೂಢಿ-ನಿಯಮಗಳು, ಲೋಕಾಚಾರಗಳು, ಸಂಪ್ರದಾಯ ಹಾಗೂ ಸಂಸ್ಕೃತಿಯ ಆಗರ. ಇಲ್ಲಿ ಹಲವಾರು ಜಾತಿ, ಮತ, ಪಂಗಡ, ಪಕ್ಷ, ಭಾಷೆ, ಪ್ರಾಂತ್ಯ ಮೊದಲಾದ ಸಮೂಹಗಳಿವೆ. ಈ ಬಗೆಯ ಸಮೂಹಗಳ ಜನರು ದ್ವೇಷ, ಅಸೂಯೆ, ಪೂರ್ವಾಗ್ರಹ ಪೀಡಿತರಾಗಿರಬಹುದಾದ ಸಂಭವನೀಯತೆ ಹೆಚ್ಚು. ಆದರೆ ಸಾಮಾಜೀಕರಣದ ಮುಖಾಂತರ ಸಮಾಜದ ವಿಭಿನ್ನ ಸಮೂಹಗಳ ನಡುವಿನ ಅಂತರವನ್ನು ತಗ್ಗಿಸಬಹುದಾಗಿದೆ.

9) ಸಾಮಾಜೀಕರಣವು ಭವ್ಯ ಭವಿಷ್ಯವನ್ನು ರೂಪಿಸಲು ಅವಕಾಶ ನೀಡುವುದು:

ಸಾಮಾಜೀಕರಣವು ಭವ್ಯ ಭವಿಷ್ಯವನ್ನು ರೂಪಿಸಲು ಸಹಕಾರಿಯಾಗಿದೆ. ಇದು ಸಮಾಜದ ಪ್ರಭಾವಿ ಸಾಧನವಾಗಿದೆ. ಕಿಂಗ್ಲಲೇ ಡೇವಿಸ್ ಹೇಳಿರುವಂತೆ ಸಾಮಾಜೀಕರಣವನ್ನು ಉತ್ತಮಗೊಳಿಸುವುದರಿಂದ ಮುಂಬರುವ ದಿನಗಳಲ್ಲಿ, ಮಾನವನ ಸ್ವಭಾವ ಮತ್ತು ಮಾನವ ಸಮಾಜಗಳನ್ನು ಮಾರ್ಪಡಿಸುವುದು ಸಾಧ್ಯವಿದೆ. ಹೊಸ ಪೀಳಿಗೆಗೆ ಯೋಜನಾ ಬದ್ಧವಾಗಿ ಮತ್ತು ವ್ಯವಸ್ಥಿತವಾಗಿ ಸಾಮಾಜಿಕ ಶಿಕ್ಷಣವನ್ನು ನೀಡುವುದರ ಮೂಲಕ ಭವಿಷ್ಯದಲ್ಲಿ ನಿರೀಕ್ಷಿತ ಮಾರ್ಪಾಡುಗಳನ್ನು ತರುವುದು ಸಾಧ್ಯವಾಗದ ಮಾತೇನಲ್ಲ.

10) ಸಾಮಾಜೀಕರಣವು ಸಂಸ್ಕೃತಿಯ ನಿರಂತರತೆಯ ಮುಂದುವರಿಕೆಗೆ ಸಹಾಯ ಮಾಡುತ್ತದೆ:

ಸಾಮಾಜೀಕರಣವು ಸಂಸ್ಕೃತಿಯ ಸತತ ಮುಂದುವರಿಕೆಗೆ ಸಹಾಯವಾಗಿದೆ. ಸಾಂಸ್ಕೃತಿಕ ಅಂಶಗಳಾದ ಆಚರಣೆಗಳು, ನಂಬಿಕೆಗಳು, ಮೌಲ್ಯಗಳು, ಆದರ್ಶಗಳು, ಭಾಷೆ, ಕೌಶಲ್ಯ ಮುಂತಾದವುಗಳು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಯವರೆಗೆ ಮುಂದುವರೆಯುವಂತೆ ಮಾಡುವುದೇ ಸಾಮಾಜೀಕರಣ.

ಉಪಸಂಹಾರ:

ಸಾಮಾಜೀಕರಣವು ವ್ಯಕ್ತಿಯ ವ್ಯಕ್ತಿತ್ವ ವಿಕಸನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ವ್ಯಕ್ತಿಯ ಮಾನಸಿಕ, ನೈತಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ಸಹಾಯಕವಾಗುವಂತೆ ಸಮಾಜದ ಮೌಲ್ಯಗಳು, ನಂಬಿಕೆಗಳು ಮತ್ತು ಆಚರಣೆಗಳನ್ನು ಅಳವಡಿಸಿಕೊಳ್ಳುವ ಪ್ರಕ್ರಿಯೆಯಾಗಿದೆ. ಕುಟುಂಬ, ಶಾಲೆ, ಸ್ನೇಹಿತರು, ಮಾಧ್ಯಮ ಮತ್ತು ಸಮುದಾಯವು ಮುಖ್ಯವಾದ ಸಾಮಾಜೀಕರಣ ಏಜೆನ್ಸಿಗಳಾಗಿ ಕೆಲಸ ಮಾಡುತ್ತವೆ. ಸಾಮಾಜೀಕರಣದ ಮೂಲಕ ವ್ಯಕ್ತಿ ಸಮಾಜದಲ್ಲಿ ಹೇಗೆ ವರ್ತಿಸಬೇಕು, ಉತ್ತಮ ಬಾಂಧವ್ಯಗಳನ್ನು ಹೇಗೆ ಕಟ್ಟಿಕೊಳ್ಳಬೇಕು ಎಂಬುದನ್ನು ಕಲಿಯುತ್ತಾನೆ. ಇದರಿಂದ ಸಾಮಾಜಿಕ ಸಾಮರಸ್ಯ ಹೆಚ್ಚುವುದು, ಸೌಹಾರ್ದತೆಯು ತಲೆಮಾರುಗಟ್ಟಲೆ ಸಾಗುವುದು. ಅಲ್ಲದೆ, ಪ್ರಜಾಪ್ರಭುತ್ವ ಮತ್ತು ಜವಾಬ್ದಾರಿಯುಳ್ಳ ನಾಗರಿಕತ್ವ ಬೆಳೆಸಲು ಇದು ಅಗತ್ಯವಾಗಿದೆ.

Sacred Heart English Higher Primary School E-Magazine