ಪೀಠಿಕೆ

ಸಿಂದೂ ಬಯಲಿನ ನಾಗರೀಕತೆಯ(ಹರಪ್ಪ ಸಂಸ್ಕೃತಿಯ) ಜನರು ವಿವಿಧ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಇವರು ಭವಿಷ್ಯದ ಸಮಾಜಗಳಿಗೆ ಅಡಿಪಾಯ ಹಾಕುವ ರೀತಿಯಲ್ಲಿ ತಮ್ಮ ಆರ್ಥಿಕ ಜೀವನವನ್ನು ರೂಪಿಸಿಕೊಂಡರು. ಇಲ್ಲಿ, ನಾವು ಕೃಷಿ, ಕೈಗಾರಿಕೆಗಳು, ವ್ಯಾಪಾರ ಮತ್ತು ಕಲಾತ್ಮಕತೆ ಸೇರಿದಂತೆ ಅವರ ಆರ್ಥಿಕತೆಯ ಪ್ರಮುಖ ಅಂಶಗಳನ್ನು ಗಮನಿಸಬಹುದು.

ಆರ್ಥಿಕ ಜೀವನದ/ವ್ಯವಸ್ಥೆಯ ಪ್ರಮುಖ ಅಂಶಗಳು

1. ಕೃಷಿ ಮತ್ತು ಪಶುಸಂಗೋಪನೆ: ಕೃಷಿಯು ಸಿಂಧೂ ಜನರ ಮೂಲ ಉದ್ಯೋಗವಾಗಿತ್ತು. ಇವರು ಹವಾಮಾನ, ಭೂಮಿಯ ಫಲವತ್ತತೆ ಹಾಗೂ ನೀರಾವರಿಯನ್ನು ಆಧರಿಸಿ ಗೋಧಿ, ಬಾರ್ಲಿ, ಭತ್ತ, ತರಕಾರಿ, ಖರ್ಜೂರ, ನವಣೆ,ಬಟಾಣಿ ಹಾಗೂಎಣ್ಣೆಕಾಳು ಗಳಂತಹ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದರು. ಹರಪ್ಪ ಹಾಗೂ ಮೊಹೆಂಜೋದಾರೋ ನಗರಗಳಲ್ಲಿ ಕಲ್ಲಂಗಡಿ ಮತ್ತು ಖರ್ಜೂರ ಬೀಜಗಳು ದೊರಕಿದ್ದು ನೋಡಿದರೆ ಅವರು ಕಲ್ಲಂಗಡಿ ಹಾಗೂ ಖರ್ಜೂರಗಳನ್ನು ಬೆಳೆಯುತ್ತಿದ್ದರೆಂದು ತಿಳಿಯಬಹುದು. ಹತ್ತಿ ಬಟ್ಟೆಯ ಅವಶೇಷಗಳು ದೊರೆತಿರುವುದರಿಂದ ಹತ್ತಿಯನ್ನು ವಾಣಿಜ್ಯ ಬೆಳೆಯನ್ನಾಗಿ ಬೆಳೆಯುತ್ತಿದ್ದರೆಂದು ಅರಿಯಬಹುದಾಗಿದೆ. ನೀರಾವರಿಯ ಕಾಲುವೆಗಳು ಸಿಂಧೂ ಸಂಸ್ಕೃತಿಯಲ್ಲಿ ದೊರಕಿವೆ. ಅನೇಕ ಉಗ್ರಾಣಗಳು ಪತ್ತೆಯಾಗಿವೆ. ಉಳುಮೆಗಾಗಿ ಇವರು ಮರದ ನೇಗಿಲುಗಳನ್ನು ಬಳಸುತ್ತಿದ್ದರು. ಸಿಂಧೂ ಜನರು ಕೃಷಿಯ ಜೊತೆಗೆ ಪಶುಪಾಲನೆಯಂತಹ ಉದ್ಯೋಗವನ್ನು ಕೈಗೊಂಡಿದ್ದರು.

2. ಕೈಗಾರಿಕೆಗಳು : ಹರಪ್ಪ, ಮೊಹೆಂಚೋದಾರೋ ಹಾಗೂ ಲೋಥಾಲ್ ಪ್ರಮುಖ ಕೈಗಾರಿಕಾ ಪ್ರದೇಶಗಳಾಗಿದ್ದವು. ನೇಕಾರಿಕೆ, ಕುಂಬಾರಿಕೆ, ಕಮ್ಮಾರಿಕೆ, ಲೋಹ ತಯಾರಿಕೆ, ಮುಂತಾದ ಉದ್ದಿಮೆಗಳು ಪ್ರಚಲಿತವಾಗಿದ್ದವು. ಬಣ್ಣ ತಯಾರಿಕೆ, ಬಟ್ಟೆ ತಯಾರಿಕೆ, ಕುಸುರಿ ಕೆಲಸ ಮುಂತಾದವು ಇನ್ನಿತರ ಉದ್ದಿಮೆಗಳಾಗಿದ್ದವು. ತಮ್ಮ ಪ್ರಾಣ ರಕ್ಷಣೆಗಾಗಿ ಅವರು ಕೊಡಲಿ, ಕತ್ತಿ, ಗುರಾಣಿ, ಚಾಕು, ಭರ್ಚಿ, ಕವಚ, ಶಿರಾಸ್ತ್ರಣ, ಬಿಲ್ಲು, ಬಾಣ, ಶೂಲ ಮತ್ತು ಈಟಿಯಂತಹ ಆಯುಧಗಳನ್ನು ಬಳಸುತ್ತಿದ್ದರು. ಈಗಾಗಿ ಈ ಉದ್ದಿಮೆಗಳು ಸಹ ಪ್ರಾಮುಖ್ಯತೆಯನ್ನು ಪಡೆದಿದ್ದವೆಂದು ತಿಳಿದುಬರುತ್ತದೆ.

3. ಲೋಹಗಳು: ಸಿಂಧೂ ಜನರು ತಮ್ಮ ದೈನಂದಿನ ಜೀವನದಲ್ಲಿ ಬೆಳ್ಳಿ, ಚಿನ್ನ, ತಾಮ್ರ, ತವರ ಮತ್ತು ಸೀಸದಂತಹ ಲೋಹಗಳನ್ನು ಬಳಸುವ ಮೂಲಕ ಗಣನೀಯ ಲೋಹಶಾಸ್ತ್ರ ಕೌಶಲ್ಯವನ್ನು ಪ್ರದರ್ಶಿಸಿದರು. ಆದಾಗ್ಯೂ, ಈ ಅವಧಿಯಲ್ಲಿ ಅವರು ಕಬ್ಬಿಣವನ್ನು ಬಳಸಲಿಲ್ಲ ಎಂಬುದಕ್ಕೆ ಪುರಾವೆಗಳಿವೆ.

4. ವ್ಯಾಪಾರ : ಸಿಂಧೂ ನಾಗರಿಕತೆಯು ಮುಖ್ಯವಾಗಿ ವ್ಯಾಪಾರವನ್ನು ಅವಲಂಬಿಸಿತ್ತು. ದೇಶೀಯ ಮತ್ತು ವಿದೇಶಿ ವ್ಯಾಪಾರಗಳು ಭರದಿಂದ ಸಾಗಿದ್ದವು. ಹರಪ್ಪ, ಮೊಹೆಂಜೋದಾರೊ, ಲೋಥಾಲ್ ಹಾಗೂ ಕಾಲಿಬಂಗನ್ ಪ್ರಮುಖ ವ್ಯಾಪಾರಿ ಕೇಂದ್ರಗಳಾಗಿದ್ದವು. ಸಮುದ್ರದ ಚಿಪ್ಪನ್ನು ಬಲೂಚಿಸ್ಥಾನದ ಬಾಲಕೋಟದಿಂದ, ಶಂಕಗಳನ್ನು ಲೋಥಾಲ್‌ದಿಂದ, ಚರ್ಟಕಲ್ಲನ್ನು ಖೇತ್ರ ಹಾಗೂ ದೇಬರಿ ಗಣಿಗಳಿಂದ, ಚಿನ್ನವನ್ನು ಕೋಲಾರ ಮತ್ತು ಹಟ್ಟಿ ಗಣಿಗಳಿಂದ, ಸೀಸವನ್ನು ದಕ್ಷಿಣ ಭಾರತದಿಂದ, ಕಾಗೆ ಬಂಗಾರವನ್ನು ಬಲೂಚಿಸ್ಥಾನದಿಂದ ತರಿಸಿಕೊಳ್ಳಲಾಗುತ್ತಿತ್ತು. ಹರಪ್ಪ, ಮೆಹೆಂಜೋದಾರೊ ಹಾಗೂ ಲೋಥಾಲ್‌ಗಳು ವಿದೇಶಿ ವ್ಯಾಪಾರ ಕೇಂದ್ರಗಳಾಗಿದ್ದವು. ಸಿಂಧೂ ಜನರು ಈಜಿಪ್ಟ್, ಮೆಸೋಪೋಟಮಿಯಾ, ಚೀನಾ, ಪರ್ಶಿಯಾ ಹಾಗೂ ಸಿರಿಯಾ ಮುಂತಾದ ದೇಶಗಳೊಂದಿಗೆ ವಿದೇಶಿ ವ್ಯಾಪಾರವನ್ನು ಇಟ್ಟುಕೊಂಡಿದ್ದರು. ಎತ್ತು, ಎಮ್ಮೆ, ಕತ್ತೆ ಹಾಗೂ ಒಂಟೆಗಳನ್ನು ಭೂಸಾರಿಗೆಗಾಗಿ ಬಳಸುತ್ತಿದ್ದರು. ಇವರಿಗೆ ದಶಮಾಂಶ ಪದ್ಧತಿ ತಿಳಿದಿತ್ತು ಮಹೆಂಜೋದಾರೋ ಹಾಗೂ ಹರಪ್ಪ ನಗರಗಳಲ್ಲಿ ತೂಕದ ಕಲ್ಲುಗಳು, ತಕ್ಕಡಿ ಹಾಗೂ ಕಂಚಿನ ಆಳತೆಯ ಕಡ್ಡಿಗಳು ಸಿಕ್ಕಿವೆ.

5. ಮುದ್ರೆಗಳು: ಸಿಂಧೂ ನದಿಯ ಬಯಲಿನಲ್ಲಿ ಈಗಾಗಲೇ ಸುಮಾರು 1500 ಮುದ್ರೆಗಳು ದೊರಕಿವೆ. ಇವುಗಳು ಅವರ ಆರ್ಥಿಕ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದವೆಂದು ನಂಬಲಾಗಿದೆ. ಇವುಗಳು ಮೂಳೆ, ಟೆರಿಕೋಟ ಹಾಗೂ ಜೇಡಿಮಣ್ಣಿನಿಂದ ತಯಾರಾಗಿವೆ. ಅನೇಕ ಮುದ್ರೆಗಳು ಮಾನವನ ಹಾಗೂ ಪ್ರಾಣಿಗಳ ಚಿತ್ರಗಳನ್ನು ಹೊಂದಿವೆ. ಕೆಲವು ಮುದ್ರೆಗಳ ಮೇಲೆ ಚಿತ್ರ ಲಿಪಿಗಳಿಂದ ಕೂಡಿದ ಬರವಣಿಗೆಗಳು ಕಂಡು ಬಂದಿವೆ.

6. ಕರಕುಶಲತೆ : ಸಿಂಧೂ ಜನರು ಕರಕುಶಲ ಕೆಲಸಗಾರರೂ ಆಗಿದ್ದು ಕಲೆ ಮತ್ತು ವಾಸ್ತುಶಿಲ್ಪದಲ್ಲಿ ಅವರು ಸಾಕಷ್ಟು ಪರಿಣಿತಿಯನ್ನು ಪಡೆದಿದ್ದರು. ಮೊಹೆಂದೋ ದಾರೋ ನಗರದಲ್ಲಿ ದೊರೆತಿರುವ ನೃತ್ಯ ಭಂಗಿಯ ಕಂಚಿನ ಸ್ತ್ರೀ ವಿಗ್ರಹ ಹಾಗೂ ಗಡ್ಡದಾರಿ ಪುರುಷನ ಬಳಪದ ಕಲ್ಲಿನ ವಿಗ್ರಹ ಸಿಂಧೂ ಜನರ ಕಲಾ ನೈಮಣ್ಯತೆಗೆ ಹಿಡಿದ ಕನ್ನಡಿಯಾಗಿದೆ.

ಉಪಸಂಹಾರ

ಸಿಂಧೂ ಕಣಿವೆ ನಾಗರಿಕತೆಯ ಆರ್ಥಿಕ ಜೀವನವು ಕೃಷಿ, ಕೈಗಾರಿಕೆ, ವ್ಯಾಪಾರ, ಕಲಾತ್ಮಕತೆ ಮತ್ತು ಆಧ್ಯಾತ್ಮಿಕ ನಂಬಿಕೆಗಳಿಂದ ನೇಯ್ದ ಸಂಕೀರ್ಣವಾದ ಬಟ್ಟೆಯಾಗಿದೆ. ಕೃಷಿ ಮತ್ತು ವ್ಯಾಪಾರದಲ್ಲಿ ಅವರ ನವೀನ ಅಭ್ಯಾಸಗಳು ಭವಿಷ್ಯದ ಪೀಳಿಗೆಯ ಮೇಲೆ ಪ್ರಭಾವ ಬೀರುವ ಆರ್ಥಿಕ ವ್ಯವಸ್ಥೆಗಳಿಗೆ ಅಡಿಪಾಯವನ್ನು ಹಾಕಿದವು. ಹೀಗಾಗಿಯೇ ಪ್ರಪಂಚದ ಆರಂಭಿಕ ನಗರ ನಾಗರಿಕತೆಗಳಲ್ಲಿ ಒಂದಾದ ಸಿಂದೂ ನಾಗರೀಕತೆಯು ಆರ್ಥಿಕ ಚಲನಶೀಲತೆಯ ಒಳನೋಟಗಳನ್ನು ನೀಡುತ್ತದೆ.