ಮಹಾತ್ಮ ಕಬೀರ್

ಮಹಾತ್ಮ ಕಬೀರರು ಭಕ್ತಿ ಚಳುವಳಿಯ ಅಗ್ರಗಣ್ಯ ನಾಯಕರು. ಇವರು ಸಾ. ಶ. 1398ರಲ್ಲಿ ಒಬ್ಬ ಬ್ರಾಹ್ಮಣವಿಧವೆಗೆ ಜನಿಸಿದಾಗ ಅವಳು ಸಮಾಜಕ್ಕೆ ಹೆದರಿ ಆ ಮಗುವನ್ನು ಲಹರ್‌ತಾಲಾ ಎಂಬ ಕೊಳದ ಬಳಿ ಬಿಟ್ಟುಹೋದಳು. ಆಗ ಬನಾರಸ್ಸಿನ ನೀರು ಮತ್ತು ನೀಮಾ ಎಂಬ ಮುಸ್ಲಿಂ ದಂಪತಿಗಳಿಗೆ ಆ ಮಗು ದೊರಕಿತು. ಅವರು ಆ ಮಗುವನ್ನು ಪ್ರೀತಿಯಿಂದ ಸಾಕಿ ಬೆಳಸಿದರು. ಕಬೀರರು ಸೂಫಿ ಸಂತ ಪೀರ್ ರಾಕಿಯ ಪ್ರಭಾವಕ್ಕೆ ಒಳಗಾದರು. ನಂತರ ರಮಾನಂದರ ಶಿಷ್ಯರಾಗಿ ಸನ್ಯಾಸಿ ದೀಕ್ಷೆ ಪಡೆದರು.

ಬೋಧನೆಗಳು:

ಕಬೀರರು ಮುಕ್ತಿಗೆ ಜ್ಞಾನಮಾರ್ಗ ಅಗತ್ಯವಾಗಿದೆ ಎಂದು ಒತ್ತಿ ಹೇಳಿದರು. ಇವರು ಏಕೀಶ್ವರ ವಾದವನ್ನು ಪ್ರತಿಪಾದಿಸಿದರು. ದೇವರು ಒಬ್ಬನೆ ಅವನು ನಿರ್ಗುಣ, ನಿರಾಕಾರ, ಸರ್ವವ್ಯಾಪಿ, ಸರ್ವಶಕ್ತ ಹಾಗೂ ಸರ್ವಜೀವಿಗಳ ರಕ್ಷಕನಾಗಿದ್ದಾನೆ ಎಂದು ಬೋಧಿಸಿದರು. ಇವರು ಜಾತಿಪದ್ಧತಿ, ಸಾಮಾಜಿಕ ಅಸಮಾನತೆ, ಮೂರ್ತಿಪೂಜೆ, ಬಾಲ್ಯವಿವಾಹ, ಸತಿಸಹಗಮನ, ಮೂಢನಂಬಿಕೆ ಹಾಗೂ ಪರ್ದಾಪದ್ಧತಿಯನ್ನು ಖಂಡಿಸಿದರು. ದೇಹದಂಡನೆ, ಉಪವಾಸ, ಅರ್ಥವಿಲ್ಲದ ಆಚರಣೆ, ತೀರ್ಥಯಾತ್ರೆ ಹಾಗೂ ಯಜ್ಞಯಾಗಾದಿಗಳಿಂದ ದೇವರು ಒಲಿಯಲಾರನು ಎಂದು ಎಚ್ಚರಿಸಿದರು. ಪರಿಶುದ್ಧ ಭಕ್ತಿಯಿಂದ ಮಾತ್ರ ದೇವರನ್ನು ಕಾಣಲು ಸಾಧ್ಯ ಎಂದು ಹೇಳಿದರು. ಮೂರ್ತಿ ಪೂಜೆಯನ್ನು ಖಂಡಿಸುತ್ತಾ “ಕಲ್ಲನ್ನು ಪೂಜಿಸಿ ಭಗವಂತನನ್ನು ಪಡೆಯುವದಾದರೆ ನಾನು ಬೆಟ್ಟವನ್ನೇ ಪೂಜಿಸುವೆ. ಪವಿತ್ರ ನದಿಗಳ ನೀರಿನ ಸ್ನಾನದಿಂದ ಮೋಕ್ಷ ಪಡೆಯುವುದಾದರೆ ಆ ನದಿಗಳಲ್ಲಿ ವಾಸವಾಗಿರುವ ಮೀನು ಕಪ್ಪೆಗಳೇಕೆ ಮುಕ್ತಿ ಹೊಂದಿಲ್ಲ?” ಎಂದು ಮೂದಲಿಸಿದರು.ಇಡೀ ವಿಶ್ವಕ್ಕೆ ದೇವರು ಒಬ್ಬನೆ. ಹಿಂದುಗಳು ದೇವರನ್ನು ಈಶ್ವರ ಎಂದು ಕರೆದರೆ ಮುಸಲ್ಮಾನರು ಅಲ್ಲಾ ಎಂದು ಕರೆಯುವರು. ಹಿಂದುಗಳಲ್ಲಿ ರಾಮನಾದರೆ ಮುಸಲ್ಮಾನರಲ್ಲಿ ರಹೀಮ. ಹಿಂದುಗಳು ಕೃಷ್ಣ ಎಂದು ಪೂಜಿಸಿದರೆ ಮುಸಲ್ಮಾನರು ಕರೀಮನೆಂದು ಪೂಜಿಸುವರು. ಹೀಗಾಗಿ ನಾನು ರಾಮರಹಿಮರ ಮಗನೆಂದು ಸಾರಿದರು. ಕಬೀರರು ತಮ್ಮ ಬೋಧನೆಗಳನ್ನು ಸರಳ ಭಾಷೆಗಳಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಬೋಧಿಸಿದರು. ಇವರ ತತ್ವಗಳನ್ನು ದೋಹಾಗಳಲ್ಲಿ ಕಾಣಬಹುದಾಗಿದೆ.ಕಬೀರರ ಅನುಯಾಯಿಗಳಿಗೆ ಕಬೀರಪಂಥಿಗಳೆಂದು ಹೆಸರು.

ಗುರುನಾನಕರು

ಸಿಖ್ ಧರ್ಮದ ಸ್ಥಾಪಕರಾದ ಗುರುನಾನಕರು ಬಾಲ್ಯದಲ್ಲಿ ಐಹಿಕ ಜೀವನದಲ್ಲಿ ಆಸಕ್ತಿ ಬೆಳಸಿಕೊಳ್ಳದೆ ಏಕಾಂಗಿಯಾಗಿ ದೇವರ ಧ್ಯಾನದಲ್ಲಿ ಮಗ್ನರಾಗುತ್ತಿದ್ದರು. ಇದರಿಂದ ಚಿಂತಿತರಾದ ಇವರ ತಂದೆ ನಾನಕರನ್ನು ಲೌಕಿಕದ ಕಡೆಗೆ ತರಲು ಸಾ.ಶ. 1488 ರಲ್ಲಿ ಬಟಾಲಾದ ನಿವಾಸಿ ಮೂಲಚಂದನ ಮಗಳಾದ ಸುಲಖನಿ ಎಂಬುವಳೊಂದಿಗೆ ವಿವಾಹ ಮಾಡಿದರು. ಕೆಲ ವರ್ಷಗಳಲ್ಲಿ ಈ ದಂಪತಿಗಳಿಗೆ ಇಬ್ಬರು ಮಕ್ಕಳು ಜನಿಸಿದರು. ಆದರೂ ನಾನಕರು ದೇವರ ಧ್ಯಾನವನ್ನು ಮಾತ್ರ ಬಿಡಲೇ ಇಲ್ಲ.

ಜ್ಞಾನೋದಯ:

ಒಂದು ದಿನ ಗುರುನಾನಕರು ಸುಲ್ತಾನಪುರದ ಸಣ್ಣ ನೀರಿನ ಕೊಳದಲ್ಲಿ ಸ್ನಾನಮಾಡುತ್ತಿರುವಾಗ ದೇವರ ದರ್ಶನವಾಯಿತು. ಈ ದಿವ್ಯ ದರ್ಶನದಿಂದ ನಾನಕರಿಗೆ ಜ್ಞಾನೋದಯವಾಯಿತು ಎಂದು ತಿಳಿದು ಬರುತ್ತದೆ. ಜ್ಞಾನೋದಯದ ನಂತರ ನಾನಕರು ಸಂಸಾರ ಬಂಧನದಿಂದ ಬಿಡುಗಡೆ ಹೊಂದಿ ತಾನು ಕಂಡುಕೊಂಡ ಸತ್ಯದ ಸಾರವನ್ನು ಜಗತ್ತಿಗೆ ತಿಳಿಸಲು ಊರೂರು ಸುತ್ತಿದರು. ಅನೇಕ ಪಂಡಿತ ಪಾಮರರೊಂದಿಗೆ ಚರ್ಚೆಗಿಳಿದರು. ಮೆಕ್ಕಾ ಮದಿನಾಗಳಿಗೂ ಭೇಟಿನೀಡಿದರು.ನಂತರ ಚೀನಾ, ಟಿಬೇಟ್, ಶ್ರೀಲಂಕಾ, ಹರಿದ್ವಾರ, ಕಾಶಿ, ಅಸ್ಸಾಂ, ದೆಹಲಿ, ಕುರುಕ್ಷೇತ್ರ ಹಾಗೂ ಒರಿಸ್ಸಾಗಳನ್ನು ಸಂದರ್ಶಿಸಿದರು. ನಂತರ ರಾವಿನದಿಯ ದಂಡೆಯ ಮೇಲಿದ್ದ ಕರ್ತಾರಪುರ ಎಂಬ ನಗರದಲ್ಲಿ ಖಾಯಂ ಆಗಿ ನೆಲಸಿ ಸಾಕಷ್ಟು ಅನುಯಾಯಿಗಳನ್ನು ಪಡೆದರು. ತಮ್ಮ ಜೀವಿತದ ಕೊನೆಯ ಕಾಲದಲ್ಲಿ ನಾನಕರು ಬಾಯಿಲಹಾನಾ ಎಂಬ ಶಿಷ್ಯನಿಗೆ ಉತ್ತರಾಧಿಕಾರಿ ಪಟ್ಟವನ್ನು ಕಟ್ಟಿ ಸಾ.ಶ.1530 ರಲ್ಲಿ ಕರ್ತಾರಪುರದಲ್ಲಿ ನಿಧನರಾದರು.

ಬೋಧನೆಗಳು:

ಗುರುನಾನಕರು ಏಕೀಶ್ವರ ತತ್ವವನ್ನು ಪ್ರತಿಪಾದಿಸಿದರು. ದೇವರು ಒಬ್ಬನೆ ಅವನು ನಿರ್ಗುಣ, ನಿರಾಕಾರ, ಸರ್ವವ್ಯಾಪಿ, ನಿರ್ವಿಕಾರ, ನಿರ್ಮಲಚಿತ್ತ ಹಾಗೂ ಲೋಕೋದ್ಧಾರಕನಾಗಿದ್ದಾನೆಂದರು. ದೇವರ ಸ್ಮರಣೆಯಿಂದ ಮುಕ್ತಿ ಸಾಧ್ಯ ಎಂದು ಸಾರಿದರು. ನಾನಕರು ಜಾತಿಪದ್ಧತಿ, ಮೂರ್ತಿಪೂಜೆ, ಪರ್ದಾಪದ್ಧತಿ ಹಾಗೂ ಬಾಲ್ಯವಿವಾಹವನ್ನು ಖಂಡಿಸಿದರು. ಇವರು ಪುನರ್‌ಜನ್ಮದಲ್ಲಿ ನಂಬಿಕೆ ಇಟ್ಟಿದ್ದರು. ಹಿಂದೂ ಮುಸಲ್ಮಾನರ ನಡುವೆ ಐಕ್ಯತೆಯನ್ನು ಸಾಧಿಸಿದರು. ಪ್ರತಿಯೊಬ್ಬರೂ ಸ್ವಾರ್ಥ, ಮೋಸ, ವಂಚನೆ, ಕಪಟ ಹಾಗೂ ಅಸತ್ಯವನ್ನು ತ್ಯಜಿಸುವಂತೆ ಕರೆನೀಡಿದರು. ಗುರುನಾನಕರ ಬೋಧನೆಗಳನ್ನು ಸಿಖ್‌ರ ಪವಿತ್ರ ಗ್ರಂಥವಾದ ‘ಗುರುಗ್ರಂಥ ಸಾಹಿಬ್’ದಲ್ಲಿ ನೋಡಬಹುದು. ಇದು ಗುರುಮುಖ ಲಿಪಿಯಲ್ಲಿದೆ. ‘ಗುರುದ್ವಾರ’ ಸಿಖ್ರ ಪವಿತ್ರವಾದ ಸ್ಥಳವಾಗಿದೆ.