ಪೀಠಿಕೆ:

ಅರಬ್ಬರು ಭಾರತದ ಮೇಲೆ ದಾಳಿ ಮಾಡಿದ ಪ್ರಥಮ ಮುಸಲ್ಮಾನರು. ಇವರು ಕೇವಲ ಸಿಂಧ್‌ ಪ್ರಾಂತ್ಯಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡು ಭಾರತದ ಇತರ ಭೂಭಾಗಗಳನ್ನು ನಿರ್ಲಕ್ಷಿಸಿದ್ದರು. ಆದರೆ ನಂತರದಲ್ಲಿ ಭಾರತದ ಮೇಲೆ ದಂಡಯಾತ್ರೆಯನ್ನು ಕೈಗೊಂಡ ಟರ್ಕರು ಭಾರತದ ಇನ್ನುಳಿದ ಕೆಲವು ಭೂಪ್ರದೇಶಗಳನ್ನು ವಶಪಡಿಸಿಕೊಳ್ಳುವ ಮೂಲಕ ಭಾರತದಲ್ಲಿ ಇಸ್ಲಾಂ ಧರ್ಮವನ್ನು ಶಾಶ್ವತವಾಗಿ ನೆಲೆಯೂರಲು ಕಾರಣರಾದರು. ಟರ್ಕರು ಅರಬ್ಬರಿಗಿಂತ ದೈಹಿಕವಾಗಿ ಬಲಾಡ್ಯರಾಗಿದ್ದು ಪ್ರಬಲ ಆಯುಧಗಳನ್ನು ಹೊಂದಿದ್ದರು. ಟರ್ಕರು ಭಾವಜೀವಿಗಳೂ ಆಗಿದ್ದರು. ಅವರಲ್ಲಿ ಶ್ರದ್ಧೆ ಇತ್ತು. 8 ಹಾಗೂ 9ನೇ ಶತಮಾನದಲ್ಲಿ ಬಾಗ್ದಾದಿನ ಖಲೀಪರ ಮೇಲೆ ಹಿಡಿತವನ್ನು ಸಾಧಿಸಿದ ಟರ್ಕರು ಅಬ್ಬಾಸಿದ್‌ ಖಲೀಪರ ಮರಣದ ನಂತರ ಮಧ್ಯ ಏಷ್ಯಾದಲ್ಲಿ ಅವರ ಸಾಮಂತರಾದ ಸಮಸಿದ್‌ ಮನೆತನದವರನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದರು. ಅಬ್ದುಲ್‌ ಮಲಿಕ್‌ ಎಂಬಾತನು ಸಮಸಿದ್‌ ಮನೆತನದ ಅರಸನಾಗಿದ್ದನು. ಈತನ ಸಾವಿನ ನಂತರ ಅವನ ಗುಲಾಮನಾಗಿದ್ದ ಅಲಪ್ತಗಿನ್‌ ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿ ಮಧ್ಯ ಏಷಿಯಾದ ರಾಜಕೀಯ ಬೆಳವಣಿಗೆಗೆ ಕಾರಣನಾದನು. ಈತ ರಾಜ್ಯವನ್ನು ಕಟ್ಟಿದ ಕೆಲವೇ ತಿಂಗಳಲ್ಲಿ ನಿಧನ ಹೊಂದಿದನು. ಈತನ ಮರಣದ 14 ವರ್ಷಗಳ ನಂತರ ಸಬಕ್ತಗಿನ್‌ ಕ್ರಿ.ಶ 977ರಲ್ಲಿ ಘಜ್ನಿಯಲ್ಲಿ ಸಿಂಹಾಸನಕ್ಕೆ ಬಂದನು. ಅಲಪ್ತಗಿನ್‌ ಹಾಗೂ ಸಬಕ್ತಗಿನ್‌ರು ಆಗಲೇ ಭಾರತದ ಮೇಲೆ ಹಲವಾರು ಬಾರಿ ದಾಳಿ ಮಾಡಿ ಹಿಂದೂ ದೊರೆಗಳಿಂದ ಅಪಾರ ಪ್ರಮಾಣದಲ್ಲಿ ಸಂಪತ್ತನ್ನು ಕೊಳ್ಳೆ ಹೊಡೆದರು. ಕ್ರಿ.ಶ 997ರಲ್ಲಿ ಸಬಕ್ತಗಿನ್‌ ಮರಣ ಹೊಂದಿದನು. ಆಗ ಈತನ ಮೆಚ್ಚಿನ ಸೇವಕನಾದ ಮಹಮ್ಮದ್‌ ಘಜ್ನಿಯು ಸಿಂಹಾಸನಕ್ಕೆ ಬಂದನು. ಈತ ಭಾರತದ ಸಂಪತ್ತಿನ ಬಗ್ಗೆ ಕೇಳಿ ತಿಳಿದುಕೊಂಡಿದ್ದ ಕಾರಣದಿಂದ ಭಾರತದ ಮೇಲೆ ಸುಮಾರು 17 ಬಾರಿ ದಂಡಯಾತ್ರೆಯನ್ನು ಕೈಗೊಂಡನು. ಈತ ಸಾಕಷ್ಟು ಪ್ರಮಾಣದಲ್ಲಿ ಭಾರತದ ಸಂಪತ್ತನ್ನು ಕೊಳ್ಳೆ ಹೊಡೆದನು. ಇವನ ಸಾವಿನ ನಂತರ ಇವನ ಆಪ್ತ ಸೇವಕನಾದ ಘೋರಿ ಮಹಮ್ಮದ್‌ ಭಾರತದ ಮೇಲೆ ಹಲವಾರು ಬಾರಿ ದಾಳಿ ಮಾಡಿ ಅಗಾಧ ಪ್ರಮಾಣದಲ್ಲಿ ಸಂಪತ್ತನ್ನು ವಶಪಡಿಸಿಕೊಳ್ಳುವುದರೊಂದಿಗೆ ಭಾರತದಲ್ಲಿ ಇಸ್ಲಾಂ ಧರ್ಮ ಶಾಶ್ವತವಾಗಿ ಬೇರು ಬಿಡಲು ಕಾರಣನಾದನು.

ಹೀಗೆ ಘೋರಿ ಮಹಮ್ಮದನ ಪ್ರಯತ್ನದ ಫಲವಾಗಿ ಭಾರತದಲ್ಲಿ ಕಾಲಿರಿಸಿದ ಇಸ್ಲಾಂ ಧರ್ಮ ಸಹಜವಾಗಿ ಹಿಂದೂ ಧರ್ಮದೊಂದಿಗೆ ಸ್ಪರ್ಧೆಗೆ ಇಳಿಯಿತು. ಇವುಗಳ ಸಂಘರ್ಷದ ಪರಿಣಾಮವಾಗಿ ಭಾರತದಲ್ಲಿ ರಾಜಕೀಯ, ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಏರಿಳಿತಗಳು ಕಂಡುಬಂದವು. ಈ ಹಿಂದೆ ಕುಶಾನರು, ಗ್ರೀಕರು, ಪರ್ಶಿಯನ್ನರು ಹಾಗೂ ಶಕರು ಭಾರತಕ್ಕೆ  ಬಂದರಾದರೂ ಅವರಿಂದ ಭಾರತದ ಮೇಲೆ ಯಾವುದೇ ಪರಿಣಾಮಗಳು ಬೀರಲಿಲ್ಲ. ಈ ನೆಲದಲ್ಲಿಯೇ ಹುಟ್ಟಿದ ಜೈನ ಹಾಗೂ ಬೌದ್ಧ ಧರ್ಮಗಳು ಭಾರತೀಯ ಸಮಾಜದಲ್ಲಿ ಹೇಳಿಕೊಳ್ಳುವಂತಹ ಬದಲಾವಣೆಯನ್ನು ಮಾಡಲಿಲ್ಲ. ಅವರು ಹಿಂದುಗಳೊಂದಿಗೆ ಹೊಂದಾಣಿಕೆಯ ಸಹಜೀವನ ನಡೆಸಿದರು. ಆದರೆ ಭಾರತಕ್ಕೆ ಕಾಲಿಟ್ಟ ಇಸ್ಲಾಂ ಧರ್ಮವು ಮಾತ್ರ ತನ್ನತನವನ್ನು ಬಿಟ್ಟುಕೊಡದೆ ಭಾರತೀಯ ಸಂಸ್ಕೃತಿಯೊಂದಿಗೆ ಬೆರೆಯಲಿಲ್ಲ. ಹೀಗಾಗಿ ಟರ್ಕರ ಆಕ್ರಮಣವು ಭಾರತದ ಈ ಕೆಳಗಿನ ಕ್ಷೇತ್ರಗಳಲ್ಲಿ ಬದಲಾವಣೆಯನ್ನು ತಂದಿತು.

1) ರಾಜಕೀಯ ಬದಲಾವಣೆಗಳು:

ರಾಜಕೀಯವಾಗಿ ಟರ್ಕರ ಆಕ್ರಮಣದ ಪರಿಣಾಮಗಳು ಈ ಕೆಳಗಿನಂತಿವೆ.

೧. ನಂತರದ ಆಕ್ರಮಣಗಳಿಗೆ ನೆಲೆ:  

ಟರ್ಕರ ಆಕ್ರಮಣಗಳು ತರೈನ್‌ ಕದನಗಳಿಗೆ (ಘೋರಿ ಮಹಮ್ಮದ್ ಮತ್ತು  ಪೃಥ್ವಿರಾಜ್ ಚೌಹಾನ್ ನಡುವೆ ನಡೆದ) ಕಾರಣವಾಯಿತು. ಇದು ಉತ್ತರ ಭಾರತದ ಅನೇಕ ಪ್ರದೇಶಗಳ ಮೇಲೆ ಸುಲ್ತಾನರ ಆಳ್ವಿಕೆಯನ್ನು ವಿಸ್ತರಿಸಲು ಕಾರಣವಾಯಿತು. ಘಜ್ನಿ ಮಹಮದ್‌ ಪಂಜಾಬನ್ನು ಗೆದ್ದದ್ದು, ಮುಂದೆ ಘೋರಿ ಮಹಮ್ಮದ್ ಮತ್ತಷ್ಟು ಪ್ರದೇಶದ ಮೇಲೆ ದಾಳಿ ಮಾಡಲು ನೆಲೆ ಒದಗಿಸಿತು.

೨. ದೆಹಲಿಯಲ್ಲಿ ಸುಲ್ತಾನರ ಆಳ್ವಿಕೆಗೆ ಕಾರಣ:

ಘೋರಿ ಮಹಮ್ಮದ್ ಹಿಂತಿರುಗುವಾಗ ತನ್ನ ನಂಬಿಕಸ್ತ ಕುತುಬ್-ಉದ್ದಿನ್-ಐಬಕ್‌ನನ್ನು ತನ್ನ ಪ್ರತಿನಿಧಿಯಾಗಿ ಗೆದ್ದ ಪ್ರದೇಶಗಳನ್ನು ನೋಡಿಕೊಳ್ಳಲು ಜವಾಬ್ದಾರಿ ವಹಿಸಿ ತೆರಳಿದನು. ಈ ನಂಬಿಕಸ್ತನೇ (ಕುತುಬ್-ಉದ್ದಿನ್-ಐಬಕ್‌) ಮುಂದೆ ದೆಹಲಿಯಲ್ಲಿ ಸುಲ್ತಾನರ ಆಳ್ವಿಕೆಗೆ ಕಾರಣನಾದನು. ಅಂದರೆ ಘೋರಿ ಮಹಮದ್‌ನ ಆಕ್ರಮಣ ದೆಹಲಿಯಲ್ಲಿ ಸುಲ್ತಾನರ ಆಳ್ವಿಕೆಗೆ ನಾಂದಿಯಾಯಿತು.

೩. ಭಾರತದ ರಾಜಕೀಯದಲ್ಲಿ ವಿದೇಶಿ ಮುಸ್ಲಿಂರ ಧಾರ್ಮಿಕ ಅಂಶಗಳ ಪ್ರವೇಶ:

ಟರ್ಕರು ಸ್ವತಂತ್ರ ಆಡಳಿತವನ್ನು ನಡೆಸುತ್ತಿದ್ದರು. ಆದರೂ ಬಾಗ್ದಾದಿನ ಖಲೀಫನಿಗೆ ಗೌರವವನ್ನು ನೀಡಿ ಅವರ ಮಾರ್ಗದರ್ಶನವನ್ನು ಬಯಸುತ್ತಿದ್ದರು.  ಅಲ್ಲದೆ ದೆಹಲಿ ಆಡಳಿತವು ವಿಶ್ವ ಮುಸ್ಲಿಮರ ಆಳ್ವಿಕೆಯ ಭಾಗವೆಂದು ಪರಿಗಣಿಸಿದ್ದರು. ಹೀಗಾಗಿ ಬಾಗ್ದಾದಿನ ಖಲೀಫನ ಸಾರ್ವಬೌಮತ್ವವನ್ನು ಮನ್ನಿಸಿದ್ದರು. ಇದು ಭಾರತದ ರಾಜಕೀಯದಲ್ಲಿ ವಿದೇಶಿ ಮುಸ್ಲಿಂರ ಧಾರ್ಮಿಕ ಅಂಶಗಳು ಎದ್ದು ಕಾಣುವಂತಾಯಿತು.

೪. ಆಡಳಿತದಲ್ಲಿ ಟರ್ಕರ ಸಾರ್ವಭೌಮಾಧಿಕಾರದ ಸ್ಥಾಪನೆ:

ಭಾರತೀಯರ ರಾಜಕೀಯ ಏಕತೆಯ ಕೊರತೆಯ ಕಾರಣದಿಂದ ಟರ್ಕರು ಭಾರತೀಯರನ್ನು ಸುಲಭವಾಗಿ ಸೋಲಿಸಿ ತಮ್ಮ ರಾಜಕೀಯ ಸಾರ್ವಭೌಮಾಧಿಕಾರವನ್ನು ಸ್ಥಾಪಿಸಿದರು. ಭಾರತೀಯರು ತಮ್ಮ ಎಲ್ಲಾ ಅಧಿಕಾರವನ್ನು ಟರ್ಕರ ಕೈಗೆ ಹಸ್ತಾಂತರಿಸಿ ಹಲ್ಲು ಕಿತ್ತ ಹಾವಿನಂತಾದರು. ರಾಜಕೀಯ ಮೇಲಾಟದಲ್ಲಿ ಮೆರೆಯುತ್ತಿದ್ದ ಭಾರತೀಯರು ತಮ್ಮ ಅಧಿಕಾರವನ್ನು ಕಳೆದುಕೊಂಡು ದ್ವಿತೀಯ ದರ್ಜೆಯ ಗುಲಾಮರಂತೆ ಬದುಕಿದರು. ಆಡಳಿತದಲ್ಲಿನ ಉನ್ನತ ಹುದ್ದೆಗಳು ಟರ್ಕರಿಗೆ ಮಾತ್ರ ಮೀಸಲಾಗಿದ್ದವು. ಇದರಿಂದ ಹಿಂದೂಗಳು ಮತ್ತು ಇತರೆ ಮುಸ್ಲಿಂರು ಉನ್ನತ ಹುದ್ದೆಯಿಂದ ವಂಚಿತರಾದರು.

೫. ಹಿಂದೂಗಳು ದೈಹಿಕ ಮತ್ತು ಮಾನಸಿಕ ಹಿಂಸೆಗೆ ಒಳಪಟ್ಟರು:

ಟರ್ಕರು ಭಾರತದ ಮೇಲೆ ದಾಳಿ ಮಾಡಿ ಹಿಂದೂಗಳಿಂದ ಬಲವಂತವಾಗಿ ಅಧಿಕಾರವನ್ನು ಕಿತ್ತುಕೊಂಡು ಅವರನ್ನು ತಮ್ಮ ಗುಲಾಮರನ್ನಾಗಿ ಮಾಡಿಕೊಂಡರು. ರಾಜ್ಯದ ಶ್ರೇಷ್ಠ ಹುದ್ದೆಗಳು ಟರ್ಕರ ಪಾಲಾಗಿ ಕೆಳದರ್ಜೆಯ ಹುದ್ದೆಗಳನ್ನು ಹಿಂದುಗಳಿಗೆ ನೀಡಲಾಯಿತು. ಪರಿಣಾಮವಾಗಿ ಭಾರತೀಯ ನೈಸರ್ಗಿಕ ಸಂಪತ್ತು ಹಾಗೂ ವಿವಿಧ ಸೌಲಭ್ಯಗಳನ್ನು ಟರ್ಕರು ಅನಾಯಾಸವಾಗಿ ಅನುಭವಿಸುವಂತಾಯಿತು. ಹಿಂದೂಗಳು ದನಗಳಿಗಿಂತಲೂ ಕೀಳು ದರ್ಜೆಯ ಬದುಕನ್ನು ಸಾಗಿಸುವಂತಾಯಿತು. ಮಹಮ್ಮದ್‌ ಘಜ್ನಿ, ಮಹಮ್ಮದ್‌ ಘೋರಿ ಹಾಗೂ ಅಲ್ಲಾವುದ್ದೀನ್‌ ಖಿಲ್ಜಿ ಮತ್ತು ಇಬ್ರಾಹಿಂ ಲೂದಿಯಂತಹ ಮತಾಂಧರುಗಳು ಹಿಂದೂಗಳ ಏಳಿಗೆಯನ್ನು ಸ್ವಲ್ಪವೂ ಸಹಿಸಲಿಲ್ಲ. ಹಿಂದುಗಳನ್ನು ಹೆಜ್ಜೆ ಹೆಜ್ಜೆಗೂ ಹಿಂಸಿಸಿ ಪ್ರಾಣಿಗಳಂತೆ ನಡೆಸಿಕೊಂಡರು. ಹೀಗೆ ಟರ್ಕರಿಂದ ಹಿಂದೂಗಳು ದೈಹಿಕ ಹಾಗೂ ಮಾನಸಿಕ ಹಿಂಸೆಗೆ ಒಳಗಾದರು.

೬. ಆಡಳಿತದಲ್ಲಿ ಕೆಲವು ಹಿಂದೂಗಳು ನೇಮಕ:  

ಟರ್ಕರು ದಕ್ಷ ಆಡಳಿತಾಧಿಕಾರಿಗಳೇನು ಆಗಿರಲಿಲ್ಲ. ಅವರು ಕೆಲವು ಬುದ್ಧಿವಂತ ಹಿಂದೂಗಳನ್ನೇ ಆಡಳಿತದಲ್ಲಿ ನೇಮಿಸಿಕೊಂಡು ಅವರಿಂದಲೇ ರಾಜಕೀಯ ಲಾಭವನ್ನು ಪಡೆದುಕೊಂಡರು. ಅವರಿಂದಲೇ ತಮ್ಮ ಅಧಿಕಾರದ ಬೇಳೆಯನ್ನು ಬೇಯಿಸಿಕೊಂಡರು. ಭಾರತದಲ್ಲಿ ಗ್ರಾಮಾಡಳಿತದಿಂದ ಹಿಡಿದು ಕೇಂದ್ರ ಸರ್ಕಾರದವರೆಗಿನ ವಿವಿಧ ಹುದ್ದೆಗಳಿಗೆ ಹಿಂದೂಗಳನ್ನು ನೇಮಕ ಮಾಡಿದ ಟರ್ಕರು ಅವರ ಮಾರ್ಗದರ್ಶನದಲ್ಲಿ ಭಾರತದ ಆಡಳಿತವನ್ನು ನಡೆಸಿಕೊಂಡು ಬಂದರು. ಉದಾ: ಚಾಂದೇರಿಯ ಮೇದಿನಿರಾಯ್‌, ಬಂಗಾಳದಲ್ಲಿ ರೂಪ್‌ ಹಾಗೂ ಸನ್‌ಕನ್‌ ಮುಂತಾದವರು. ಹಾಗೆಯೇ ಗೋಲ್ಕಂಡ ಸುಲ್ತಾನ್‌, ಬಿಜಾಪುರದ ಯೂಸುಪ್‌ ಆದಿಲ್‌ ಷಾ ಸಹ ಹಿಂದೂಗಳನ್ನು ಆಡಳಿತದಲ್ಲಿ ನೇಮಕಮಾಡಿಕೊಂಡಿದ್ದರು.

೭. ಹಿಂದೂಗಳ ಧಾರ್ಮಿಕ ನಂಬಿಕೆಯ ಮೇಲೆ ಪ್ರಹಾರ:

ಮಹಮ್ಮದ್‌ ಘಜ್ನಿ 1026ರಲ್ಲಿ ವಿಶ್ವಪ್ರಸಿದ್ಧ ಸೋಮನಾಥ ದೇವಾಲಯವನ್ನು ಧ್ವಂಸಗೊಳಿಸಿ ಅಲ್ಲಿನ ಶಿವಲಿಂಗವನ್ನು ಒಡೆದು ಹಾಕಿದನು. ಕೋಟ್ಯಾಂತರ ರೂಪಾಯಿಗಳ ಬೆಲೆಬಾಳುವ ಮುತ್ತು, ರತ್ನ ಹಾಗೂ ವಜ್ರ ವೈಡೂರ್ಯಗಳನ್ನು ದೋಚಿಕೊಂಡು ಹೋದನು. ಇದು ಹಿಂದೂಗಳ ಧಾರ್ಮಿಕ ನಂಬಿಕೆಯ ಮೇಲೆ ನಡೆದ ಪ್ರಹಾರವಾಗಿತ್ತು. ಆದರೆ ಆ ಸಂದರ್ಭದಲ್ಲಿ ಯಾವುದೇ ಒಬ್ಬ ಹಿಂದೂ ಸಹ ಪ್ರತಿರೋಧ ಒಡ್ಡಲಿಲ್ಲ. ಹಾಗೆಯೇ ಮಹಮ್ಮದ್‌ ಘೋರಿ ತರೈನ್‌ ಯುದ್ಧದಲ್ಲಿ ಪೃಥ್ವಿರಾಜ್‌ ಚೌಹಾಣನನ್ನು ಸೋಲಿಸಿ ಕೊಲೆ ಮಾಡಿದ ಸಂದರ್ಭದಲ್ಲಿಯೂ ಸಹ ರಜಪೂತ್‌ ದೊರೆಗಳು ಮೂಕ ಪ್ರೇಕ್ಷಕರಂತೆ ನಿಂತು ನೋಡಿದರೇ ಹೊರತು ಯಾರೂ ಸಹ ಘೋರಿಯ ವಿರುದ್ಧ ಕಂಕಣ ಕಟ್ಟಿ ಹೋರಾಟಕ್ಕೆ ಇಳಿಯಲಿಲ್ಲ. ಮುಂದೊಂದು ದಿನ ಇಂತಹ ಪರಿಸ್ಥಿತಿ ತಮಗೂ ಬರಬಹುದು ಎಂಬ ಕನಿಷ್ಟ ಜ್ಞಾನವೂ ರಜಪೂತ ದೊರೆಗಳಿಗೆ ಇಲ್ಲದೆ ಹೋದುದು ಅತ್ಯಂತ ದುಃಖದ ಸಂಗತಿ ಎಂದು ಹೇಳಬಹುದು. ಇದಕ್ಕೆಲ್ಲಾ ಮೂಲ ಕಾರಣವೆಂದರೆ ಭಾರತೀಯ ಸಮಾಜದಲ್ಲಿದ್ದ ಒಡಕು.

೮. ಪರ್ಶಿಯನ್‌ ಆಡಳಿತ ಭಾಷೆಯಾಯಿತು:

ಟರ್ಕರ ಆಕ್ರಮಣದ ಪರಿಣಾಮವಾಗಿ ಭಾರತದಲ್ಲಿ ಸಂಸ್ಕೃತ ಭಾಷೆಯ ಬದಲಾಗಿ ಪರ್ಶಿಯನ್‌ ಆಡಳಿತ ಭಾಷೆಯಾಗಿ ಜಾರಿಗೆ ಬಂದಿತು. ಅದು ಮೊಗಲರ ಕಾಲದವರೆಗೂ ಮುಂದುವರೆಯಿತು. ಭಾರತೀಯ ಅನೇಕ ಹಿಂದೂ ಪಂಡಿತರು, ಲೇಖಕರು ಹಾಗೂ ಕವಿಗಳಿಗೆ ಟರ್ಕರು ತಮ್ಮ ಆಸ್ಥಾನದಲ್ಲಿ ಆಶ್ರಯ ನೀಡಿ ಅವರ ಮೂಲಕ ಅನೇಕ ಹಿಂದೂ ಗ್ರಂಥಗಳನ್ನು ಪರ್ಶಿಯನ್‌ ಭಾಷೆಗೆ ತರ್ಜುಮೆಗೊಳಿಸಿದರು.

೯. ರಾಜಧಾನಿಯ ಬದಲಾವಣೆ:

ಟರ್ಕರ ದಾಳಿಯ ಪರಿಣಾಮವಾಗಿ ಈ ಹಿಂದೆ ಇದ್ದ ಲಾಹೋರಿನ ಕೇಂದ್ರ ಸ್ಥಾನವನ್ನು ಬದಲಾಯಿಸಿ ಅದನ್ನು ದೆಹಲಿಗೆ ಸ್ಥಳಾಂತರಗೊಳಿಸಿದರು. ಹೀಗಾಗಿ ಘಜ್ನಿ ಹಾಗೂ ಘೋರಿ ಮಹಮ್ಮದರಿಂದ ಹಿಡಿದು ಮೊಗಲ್‌ ಸಾಮ್ರಾಜ್ಯದ ಕೊನೆಯ ದಿನಗಳವರೆಗೂ ದೆಹಲಿಯು ಮುಸ್ಲೀಂರ ಕೇಂದ್ರ ಸ್ಥಾನವಾಯಿತು. ದೆಹಲಿಯಿಂದಲೇ ಮುಸ್ಲೀಂರ ರಾಜಕೀಯ ಚಟುವಟಿಕೆಗಳು ಆರಂಭಗೊಳ್ಳುತ್ತಿದ್ದವು.

೧೦. ಉತ್ತರಾಧಿಕಾರದ ಕಾನೂನು ಇಲ್ಲದಿರುವುದು ರಕ್ತಪಾತಕ್ಕೆ ಕಾರಣವಾಯಿತು:

ಮುಸ್ಲೀಂರ ರಾಜಕೀಯ ವ್ಯವಸ್ಥೆ ಅಂದು ಬಹಳ ಗೊಂದಲಗಳಿಂದ ಕೂಡಿತ್ತು. ಅವರಲ್ಲಿ ಉತ್ತರಾಧಿಕಾರದ ಕುರಿತು ಯಾವುದೇ ನಿರ್ದಿಷ್ಟವಾದ ಕಾನೂನುಗಳು ಇರಲಿಲ್ಲ. ಉತ್ತರಾಧಿಕಾರತ್ವ ಅನುವಂಶೀಯವಾಗಿರಲಿಲ್ಲ. ಅದು ಕೇವಲ ಖಡ್ಗ ಬಲದ ಆಧಾರದ ಮೇಲೆ ನಿಂತಿತ್ತು. ಯಾರು ಬಲಿಷ್ಟರಾಗಿರುತ್ತಾರೋ ಅವರೇ ಸಿಂಹಾಸನಕ್ಕೆ ಬರುತ್ತಿದ್ದರು. ಹೀಗಾಗಿ ಉತ್ತರಾಧಿಕಾರದ ಸಂದರ್ಭಗಳಲ್ಲಿ ಸುಲ್ತಾನರ ಮಕ್ಕಳ ನಡುವೆ ನಿರಂತರವಾಗಿ ಘರ್ಷಣೆಗಳು ಸಂಭವಿಸುತ್ತಿದ್ದವು. ಈ ಘರ್ಷಣೆಯಲ್ಲಿ ರಕ್ತಪಾತ ಸಹಜವೆಂಬಂತೆ ಇತ್ತು.

೧೧. ಊಳಿಗಮಾನ್ಯ ಪದ್ಧತಿ ನಿರ್ನಾಮವಾಯಿತು:

ಟರ್ಕರು ತಮ್ಮ ಆಡಳಿತದ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು ಇಕ್ತಾಗಳಾಗಿ (ಪ್ರಾಂತ್ಯಗಳಾಗಿ)ವಿಭಜಿಸಿದ್ದರು.  ಪರಿಣಾಮವಾಗಿ ಸಣ್ಣಪುಟ್ಟ ಅರಸರು ತಮ್ಮ ಅಸ್ತಿತ್ವವನ್ನು ಕಳೆದುಕೊಂಡರು. ಇಕ್ತಾಗಳನ್ನು ನೋಡಿಕೊಳ್ಳಲು ಇಕ್ತಾದಾರರನ್ನು ನೇಮಿಸಿದ್ದರು. ಇಕ್ತಾದಾರನು ಇಕ್ತಾಗಳಿಂದ ವಸೂಲಾಗುವ ಆದಾಯದಲ್ಲಿ ಸೈನ್ಯದ ನಿರ್ವಹಣೆ ಮಾಡುತ್ತ ಉಳಿದ ಆದಾಯವನ್ನು ಸುಲ್ತಾನನಿಗೆ ಸಲ್ಲಿಸಬೇಕಾಗಿತ್ತು. ಇದರಿಂದ ಕೇಂದ್ರ ಸರಕಾರದ ಆಳ್ವಿಕೆ ಬಲವಾಯಿತು. ಪ್ರಾಚೀನ ಕಾಲದಲ್ಲಿ  ಯುದ್ಧದ ಸಂದರ್ಭಗಳಲ್ಲಿ ಮಾತ್ರ ಊಳಿಗಮಾನ್ಯ ಸೈನ್ಯವನ್ನು ಬಳಸಿಕೊಳ್ಳಲಾಗುತ್ತಿತ್ತು. ಆದರೆ ಟರ್ಕರು ಭಾರತಕ್ಕೆ ಬಂದ ನಂತರ ಯುದ್ಧದ ಸಮಯದಲ್ಲಿ ಸದಾ ಸಿದ್ಧವಿದ್ದ ಸೇನೆಯನ್ನು (Permanent Standing Army)ಸಂಘಟಿಸಿ ಅದಕ್ಕೆ ಸಂಪೂರ್ಣ ತರಬೇತಿಯನ್ನು ನೀಡಿ ಯುದ್ಧಕ್ಕೆ ಸನ್ನದ್ಧಗೊಳಿಸಲಾಗುತ್ತಿತ್ತು. ಹೀಗಾಗಿ ಊಳಿಗಮಾನ್ಯ ಸೈನ್ಯವು ತನ್ನ ಅಸ್ತಿತ್ವವನ್ನು ಕಳೆದುಕೊಂಡು ಊಳಿಗಮಾನ್ಯ ವ್ಯವಸ್ಥೆ (Feudal System) ಅವನತಿ ಕಾಣುವಂತಾಯಿತು.

೧೨. ಕ್ಷತ್ರಿಯರೊಂದಿಗೆ ಸೈನ್ಯಕ್ಕೆ ಬೇರೆ ಜನರ ಸೇರ್ಪಡೆ:

ಪ್ರಾಚೀನ ಹಾಗೂ ಮಧ್ಯಕಾಲೀನ ಆಡಳಿತದ ಸಮಯದಲ್ಲಿ ರಜಪೂತರಲ್ಲಿ ಕ್ಷತ್ರೀಯ ಹಿನ್ನೆಲೆಯಿಂದ ಬಂದವರು ಮಾತ್ರ ಸೈನ್ಯವನ್ನು ಸೇರಬಹುದಾಗಿತ್ತು. ದೇಶ ರಕ್ಷಣೆಯ ವಿಷಯ ಬಂದಾಗ ಕ್ಷತ್ರೀಯರು ಮಾತ್ರ ಹೋರಾಟದಲ್ಲಿ ತೊಡಗಬೇಕು ಎಂಬ ನಿಯಮವಿತ್ತು. ಬೇರೆ ಜಾತಿ ಜನಾಂಗಗಳಲ್ಲಿ ಎಷ್ಟೇ ಬಲಿಷ್ಠರು ಇದ್ದರೂ ಸಹ ಅವರನ್ನು ಸೈನ್ಯಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ. ಕ್ಷತ್ರೀಯರು ಯುದ್ಧದಲ್ಲಿ ಸೋತರೆ ಇಡೀ ದೇಶವೇ ಸೋತಂತೆ ಎಂಬ ತೀರ್ಮಾನಕ್ಕೆ ಬರಲಾಗುತ್ತಿತ್ತು. ಆದರೆ ಟರ್ಕರು ಭಾರತಕ್ಕೆ ಬಂದ ನಂತರ ಕ್ಷತ್ರೀಯರು ಮಾತ್ರವಲ್ಲ, ಬೇರೆ ಯಾವುದೇ ಜಾತಿ ಜನಾಂಗದವರು ಸೇನೆಯನ್ನು ಸೇರಬಹುದು ಎಂಬ ಪತ್ವಾವನ್ನು ಹೊರಡಿಸಿದರು. ಹೀಗಾಗಿ ಭಾರತೀಯ ಸೇನೆಯಲ್ಲಿ ಬೇರೆ-ಬೇರೆ ಜಾತಿ ಜನಾಂಗದ ಸೈನಿಕರು ಸೇರಲು ಅವಕಾಶ ಸಿಕ್ಕಂತಾಯಿತು.

2) ಆರ್ಥಿಕ ಬದಲಾವಣೆಗಳು:

ಟರ್ಕರ ದಂಡಯಾತ್ರೆಗಳ ಪರಿಣಾಮದಿಂದ ಭಾರತದ ಆರ್ಥಿಕ ಕ್ಷೇತ್ರದಲ್ಲಿ ಉಂಟಾದ ಬದಲಾವಣೆಗಳು ಈ ಕೆಳಗಿನಂತಿವೆ.

೧. ಅಪಾರ ಪ್ರಮಾಣದ ಸಂಪತ್ತಿನ ಲೂಟಿ:

ಮಹಮ್ಮದ್‌ ಘಜ್ನಿಯ ಭಾರತದ ಮೇಲಿನ ದಾಳಿಗೆ ಕಾರಣ ಅಪಾರ ಪ್ರಮಾಣದ ಸಂಪತ್ತನ್ನು ದೋಚುವುದಾಗಿತ್ತು. ಅವನು ಸಂಪತ್ತಿನ ಮೇಲೆ ಅತಿಯಾದ ಮೋಹವುಳ್ಳವನಾಗಿದ್ದನು. ಆ ಸಂಪತ್ತಿನ ದಾಹವನ್ನು ಇಂಗಿಸಿಕೊಳ್ಳಲು ಆತ ಭಾರತದ ಮೇಲೆ ಸುಮಾರು 17 ಬಾರಿ ದಂಡಯಾತ್ರೆ ಕೈಗೊಂಡು ದೇಶದ ಅರ್ಧದಷ್ಟು ಸಂಪತ್ತನ್ನು ಲೂಟಿ ಮಾಡಿದನು. ಆದರೆ ಘೋರಿ ಮಹಮ್ಮದ್‌ ಭಾರತದ ಸಂಪತ್ತನ್ನು ಲೂಟಿ ಮಾಡುವುದು ಹಾಗೂ ಸಾಮ್ರಾಜ್ಯವನ್ನು ವಿಸ್ತರಿಸುವುದು ಈ ಎರಡು ಮೂಲಗುರಿಗಳನ್ನು ಇಟ್ಟುಕೊಂಡು ಭಾರತದ ಮೇಲೆ ದಾಳಿ ಮಾಡಿ ತರೈನ್‌ ಯುದ್ಧದಲ್ಲಿ ಪೃಥ್ವಿರಾಜ್‌ ಚೌಹಾಣನನ್ನು ಸೋಲಿಸಿ ಕೊಲೆ ಮಾಡಿದನು. ಇವರಿಬ್ಬರ ದಾಳಿಯ ಪರಿಣಾಮವಾಗಿ ಭಾರತ  ಬಡ ರಾಷ್ಟ್ರವಾಯಿತು. ಒಂದು ಅಂದಾಜಿನ ಪ್ರಕಾರ ಅವರು ಕೊಳ್ಳೆ ಹೊಡೆದ ಚಿನ್ನ, ಬೆಳ್ಳಿ, ರತ್ನ, ವಜ್ರಗಳ ಮೌಲ್ಯ ಫೆರಿಸ್ತಾ ಹೇಳಿದಂತೆ 7 ಲಕ್ಷ ಚಿನ್ನದ ದಿನಾರು, 700 ಮಣ ಚಿನ್ನ ಹಾಗೂ ಬೆಳ್ಳಿ, 200 ಮಣ ಚಿನ್ನದ ಗಟ್ಟಿ, 200 ಮಣ ಕಚ್ಛಾ ಬೆಳ್ಳಿ, 20 ಮಣ ಆಭರಣಗಳು ಸೇರಿದ್ದವು.

೨. ಆರ್ಥಿಕ ಮುಗ್ಗಟ್ಟು:

ಟರ್ಕರು ಭಾರತವನ್ನು ಆಕ್ರಮಣ ಮಾಡಿಕೊಂಡ ನಂತರ ಭಾರತದ ರಾಜಕೀಯದಲ್ಲಿ ಮಧ್ಯಪ್ರವೇಶ ಮಾಡಿದರು. ನಂತರ ಭಾರತದ ಹಿಂದೂಗಳ ಮೇಲೆ ಜಜಿಯಾ ತೆರಿಗೆಗಳನ್ನು ಹೇರಿದರು. ತೆರಿಗೆ ಕೊಡಲಾಗದ ಅನೇಕ ಹಿಂದುಗಳು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು. ದೇಶದ ಸಂಪತ್ತು ಕೆಲವೇ ಕೆಲವು ವ್ಯಕ್ತಿಗಳಲ್ಲಿ ಕೇಂದ್ರೀಕರಣಗೊಂಡಿತು. ಈ ಸಂಪತ್ತನ್ನು ಅವರು ಪ್ರಜೆಗಳ ಕಲ್ಯಾಣಕ್ಕಾಗಿ ಬಳಕೆ ಮಾಡಲಿಲ್ಲ. ಬದಲಾಗಿ ಸುಖ ಭೋಗದ ಜೀವನಕ್ಕಾಗಿ ಬಳಕೆ ಮಾಡಿಕೊಂಡರು. ಹೀಗಾಗಿ ಭಾರತೀಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು.

೩. ತೆರಿಗೆ ಪದ್ಧತಿಯಲ್ಲಿ ಬದಲಾವಣೆ:

ಟರ್ಕರು ಮುಸ್ಲಿಂ ಆಗಿದ್ದರಿಂದ ಇಸ್ಲಾಮಿಕ್ ಕಾಯ್ದೆಯ ಪ್ರಕಾರ ತೆರಿಗೆ ವಸೂಲಿ ಮಾಡುತ್ತಿದ್ದರು.

೧. ಜಕಾತ್ ತೆರಿಗೆ(Zakat):  ಪ್ರತಿ ಮುಸಲ್ಮಾನರು ತಮ್ಮ ಆದಾಯದಲ್ಲಿ ೨% ತೆರಿಗೆಯನ್ನು ಸರ್ಕಾರಕ್ಕೆ ಕಟ್ಟಬೇಕಾಗಿತ್ತು.

೨. ಖಮ್ಸ್‌ (Khams):  ಯುದ್ಧದ ಸಂದರ್ಭದ ಲೂಟಿಯಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕಾದ ತೆರಿಗೆ.

೩. ಜಜಿಯಾ(Jajiya): ಹಿಂದುಗಳು ತಮ್ಮ ರಕ್ಷಣೆಗಾಗಿ ಸರ್ಕಾರಕ್ಕೆ ಸಲ್ಲಿಸಬೇಕಾದ ತೆರಿಗೆ.

೪. ಖಿರಾಜ್(Khiraj):   ರೈತರು ತಮ್ಮ ಜಮೀನಿನ ಉತ್ಪತ್ತಿಯಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕಾದ ತೆರಿಗೆ ಶೇಕಡ 50ರಷ್ಟು.

3) ಸಾಮಾಜಿಕ ಬದಲಾವಣೆಗಳು:

ಇಸ್ಲಾಂ ಸಂಸ್ಕೃತಿ ಹಾಗೂ ನಾಗರಿಕತೆಗಳು ಭಾರತೀಯ ಸಮಾಜದ ಮೇಲೆ ಕೆಲವೊಂದು ಕೆಟ್ಟ ಪರಿಣಾಮಗಳನ್ನು ಬೀರಿ ಭಾರತೀಯ ಸಮಾಜದ ಬದಲಾವಣೆಗೆ ಕಾರಣವಾದವು. ಅವುಗಳನ್ನು ಈ ರೀತಿಯಾಗಿ ನೋಡಬಹುದು.

೧. ಭಾರತೀಯ ಸಮಾಜದ ವಿಭಜನೆಗೆ ಕಾರಣವಾಯಿತು:

ಟರ್ಕರು ಭಾರತದ ಮೇಲೆ ದಾಳಿ ಮಾಡುವ ಮೂಲಕ ಅವರು ಇಲ್ಲಿಯೇ ನೆಲೆಯೂರಿದರು. ಪರಿಣಾಮವಾಗಿ ಭಾರತೀಯ ಸಮಾಜವು ಹಿಂದೂ ಸಮಾಜ ಹಾಗೂ ಮುಸ್ಲೀಂ ಸಮಾಜ ಎಂಬ ಎರಡು ಭಾಗಗಳಾಗಿ ವಿಭಜನೆ ಹೊಂದಿತು. ಇವರಿಬ್ಬರ ನಡುವೆ ಮೇಲು-ಕೀಳು, ಕರಿಯ-ಬಿಳಿಯ ಹಾಗೂ ವರ್ಣಭೇದಗಳು ಕಾಣಿಸಿಕೊಂಡವು. ಇದು ಅತಿಯಾದಂತೆ ಪರಸ್ಪರರಲ್ಲಿ ಜಗಳ, ಕದನ ಆರಂಭಗೊಂಡು ಸೌಹಾರ್ದತೆ ಕ್ಷೀಣಿಸುತ್ತಾ ಹೋಯಿತು.

೨. ಜಾತಿ ಪದ್ಧತಿಗೆ ವಿರೋಧ ಮತ್ತು ಅದರ ಕರಾಳತೆಗೆ ಕಾರಣವಾಯಿತು:

ಇಸ್ಲಾಂ ಧರ್ಮದಲ್ಲಿ ಜಾತಿ ಪದ್ಧತಿ ಇರಲಿಲ್ಲ. ಇದರಿಂದ ಹಿಂದೂ ಧರ್ಮದಲ್ಲಿದ್ದ ಜಾತಿಪದ್ಧತಿ, ವರ್ಣಾಶ್ರಮ ಧರ್ಮಕ್ಕೆ ಯಾವುದೇ ಮಾನ್ಯತೆಯನ್ನು ಸುಲ್ತಾನರು ನೀಡಲಿಲ್ಲ. ಹೀಗಾಗಿ ಜಾತಿಪದ್ಧತಿ ತನ್ನ ಜಟಿಲತೆಯನ್ನು ಕಳೆದುಕೊಂಡಿತು. ಟರ್ಕರ ಆಗಮನದ ಪರಿಣಾಮವಾಗಿ ಇಸ್ಲಾಂ ಧರ್ಮ ತನ್ನ ಪ್ರಚಾರವನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಾ ಹೊರಟಿತು. ಇದರಿಂದ ಹೆದರಿದ ಹಿಂದುಗಳು ಹಿಂದೂ ಧರ್ಮವನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಅವರು ಜಾತಿ ಪದ್ಧತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರು. ಇದರಿಂದ ಭಾರತದಲ್ಲಿ ಜಾತಿ ಪದ್ಧತಿ ಅಳಿಸಿ ಹೋಗುವುದರ ಬದಲಾಗಿ ಮತ್ತಷ್ಟು ತನ್ನ ಕರಾಳ ರೂಪವನ್ನು ತೋರಿಸಿತು. ಹೀಗೆ ಜಾತಿ ಪದ್ಧತಿಯು ತನ್ನ ಜಟಿಲತೆಯನ್ನು ಕಳೆದುಕೊಂಡದ್ದು ಹಾಗೂ ಅದರ ಕರಾಳತೆಯ ಪ್ರದರ್ಶನ ಎರಡೂ ಏಕಕಾಲದಲ್ಲಿ ಘಟಿಸಿದವು.

೩. ನಗರ ಪ್ರದೇಶಗಳಲ್ಲಿ ಬದಲಾವಣೆ:

 ಟರ್ಕರ ಆಡಳಿತ ಕಾಲದಲ್ಲಿ ನಗರ ಪ್ರದೇಶದಲ್ಲಿ ಎಲ್ಲಾ ರೀತಿಯ ಜನರು ವಾಸಿಸಲು ಅನುಕೂಲವಾಯಿತು. ಜಾತಿ ಧರ್ಮದ ಹಂಗಿಲ್ಲದೆ ಒಟ್ಟಿಗೆ  ವಾಸಿಸುವ ವ್ಯವಸ್ಥೆ  ಸೃಷ್ಟಿಯಾಯಿತು.  ಯಾಕೆಂದರೆ ಜಾತಿಯನ್ನು ಪೋಷಿಸುವ ಮತ್ತು ಜಾತಿ ವ್ಯವಸ್ಥೆಯನ್ನು ಕಾಪಾಡುವ ಅವಶ್ಯಕತೆ ಮುಸ್ಲಿಂ ಮುಖಂಡರಿಗೆ ಅಥವಾ ಸುಲ್ತಾನರಿಗೆ ಇರಲಿಲ್ಲ. ಅದರಲ್ಲಿ ಅವರಿಗೆ ಯಾವುದೇ ಆಸಕ್ತಿಯೂ ಇರಲಿಲ್ಲ.

೪. ವೈಭವದ ವಿಲಾಸಿ ಜೀವನ ಶೈಲಿಗೆ ಪರಿವರ್ತನೆ:

ರ್ಕರು ಭಾರತದಲ್ಲಿ ತಮ್ಮ ಆಳ್ವಿಕೆಯನ್ನು ಸ್ಥಾಪಿಸಿದ ನಂತರ, ಉಪಖಂಡದ ಅಪಾರ ಸಂಪತ್ತು ಅವರ ಜೀವನ ವಿಧಾನದ ಮೇಲೆ ಪ್ರಭಾವ ಬೀರಲು ಪ್ರಾರಂಭಿಸಿತು. ಅವರು ಗಳಿಸಿದ ಸಂಪತ್ತು ಪರ್ಷಿಯನ್ನರಂತೆಯೇ ಐಷಾರಾಮಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಅವರಿಗೆ ಅವಕಾಶ ಮಾಡಿಕೊಟ್ಟಿತು. ಅರಮನೆಗಳು, ಉತ್ತಮ ಉಡುಪುಗಳು, ಸುಗಂಧ ದ್ರವ್ಯಗಳು, ಶ್ರೀಮಂತ ಆಹಾರ ಮತ್ತು ಮನರಂಜನೆ ಗಣ್ಯ ಸಂಸ್ಕೃತಿಯ ಭಾಗವಾಯಿತು. ಸೌಕರ್ಯ ಮತ್ತು ಭವ್ಯತೆಯ ಈ ಹೊಸ ಅಭಿರುಚಿ ಕ್ರಮೇಣ ಸಾಮ್ರಾಜ್ಯದಾದ್ಯಂತ ಹರಡಿತು. ಇದು ಪ್ರಮುಖ ನಗರಗಳಲ್ಲಿನ ಅನೇಕ ಜನರ ಜೀವನಶೈಲಿಯ ಮೇಲೆ ಪ್ರಭಾವ ಬೀರಿತು.

ಕಾಲಕ್ರಮೇಣ, ಈ ಐಷಾರಾಮಿತನ ಕೆಲವು ಸಾಮಾಜಿಕ ಬದಲಾವಣೆಗಳಿಗೆ ಕಾರಣವಾಯಿತು. ಮದ್ಯಪಾನ, ಜೂಜಾಟ ಮತ್ತು ಅನೈತಿಕ ಚಟುವಟಿಕೆಗಳು ಹೆಚ್ಚು ವ್ಯಾಪಕವಾಗಿ ಹರಡಿತು. ಇದು ಆಡಳಿತ ವರ್ಗ ಮತ್ತು ಹಿಂದೂ ಸಮಾಜಿಕ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಿತು ಎಂದು ಐತಿಹಾಸಿಕ ವೃತ್ತಾಂತಗಳು ಉಲ್ಲೇಖಿಸುತ್ತವೆ. ಜನರು ಸೌಕರ್ಯ ಮತ್ತು ಭೋಗ ಜೀವನದತ್ತ ಆಕರ್ಷಿತರಾಗುತ್ತಿದ್ದಂತೆ, ಸಾಂಪ್ರದಾಯಿಕ ನೈತಿಕ ಮೌಲ್ಯಗಳು ದುರ್ಬಲಗೊಳ್ಳಲು ಪ್ರಾರಂಭಿಸಿದವು. ಹೀಗಾಗಿ, ಟರ್ಕರ ವಿಜಯವು ಹೊಸ ಸಾಂಸ್ಕೃತಿಕ ಅಂಶಗಳನ್ನು ಪರಿಚಯಿಸಿದ್ದಲ್ಲದೆ, ಸಾಮಾಜಿಕ ದುರ್ಗುಣಗಳ ಉದಯಕ್ಕೂ ಕಾರಣವಾಯಿತು, ಇದು ಮಧ್ಯಕಾಲೀನ ಭಾರತೀಯ ಸಮಾಜದಲ್ಲಿ ಗಮನಾರ್ಹ ಬದಲಾವಣೆಯನ್ನು ಉಂಟುಮಾಡಿತು.

೫. ಉಡುಗೆ ತೊಡುಗೆಗಳಲ್ಲಿ ಬದಲಾವಣೆ:

ಭಾರತಕ್ಕೆ ತುರ್ಕರು ಮತ್ತು ಇತರ ಮುಸ್ಲಿಂ ಸಮುದಾಯಗಳ ಆಗಮನವು ಹೊಸ ಮತ್ತು ಆಕರ್ಷಕ ಶೈಲಿಯ ಉಡುಗೆ ತೊಡುಗೆ, ಆಹಾರ ಪದ್ಧತಿ, ಸುಗಂಧ ದ್ರವ್ಯಗಳು ಮತ್ತು ಜೀವನಶೈಲಿಯ ಅಭ್ಯಾಸಗಳನ್ನು ಪರಿಚಯಿಸಿತು. ಮುಸ್ಲಿಂ ಗಣ್ಯರು ಮತ್ತು ಸೈನಿಕರು ರೇಷ್ಮೆ ನಿಲುವಂಗಿಗಳು, ಮಸ್ಲಿನ್ ಬಟ್ಟೆಗಳು, ಕಸೂತಿ ಮಾಡಿದ ಪೇಟಗಳು ಮತ್ತು ಅಲಂಕಾರಿಕ ಬೆಲ್ಟ್‌ಗಳಂತಹ ಸೊಗಸಾದ ಉಡುಪುಗಳನ್ನು ಧರಿಸುತ್ತಿದ್ದರು. ಇದು ಅವರ ನೋಟವನ್ನು ಆಕರ್ಷಕ ಮತ್ತು ಅತ್ಯಾಧುನಿಕವಾಗಿಸಿತು. ಅವರ ಸಂಸ್ಕರಿಸಿದ ಆಹಾರ ಪದ್ಧತಿಗಳು, ಸುಗಂಧ ದ್ರವ್ಯಗಳ ಬಳಕೆ ಮತ್ತು ಸುಸಂಘಟಿತ ಜೀವನ ಶೈಲಿಗಳು ಸ್ಥಳೀಯ ಜನರ ಮೇಲೆ ಸಾಂಸ್ಕೃತಿಕ ಪ್ರಭಾವವನ್ನು ಬೀರಿದವು.

ಸಾಂಪ್ರದಾಯಿಕವಾಗಿ ಸರಳವಾದ ಬಟ್ಟೆ ಮತ್ತು ಜೀವನಶೈಲಿಯ ಅಭ್ಯಾಸಗಳನ್ನು ಅನುಸರಿಸುತ್ತಿದ್ದ ಹಿಂದೂಗಳು ಸ್ವಾಭಾವಿಕವಾಗಿ ಈ ಹೊಸ ಪ್ರಭಾವಗಳಿಂದ ಆಕರ್ಷಿತರಾದರು. ಕಾಲಾನಂತರದಲ್ಲಿ, ಅನೇಕ ಹಿಂದೂಗಳು ವಿಶೇಷವಾಗಿ ಪಟ್ಟಣಗಳು, ವ್ಯಾಪಾರ ಕೇಂದ್ರಗಳು ಮತ್ತು ಅರಮನೆಯ ಸುತ್ತಮುತ್ತ ವಾಸಿಸುವವರು ಮುಸ್ಲಿಂ ಉಡುಗೆ ತೊಡುಗೆ, ಆಹಾರ ಮತ್ತು ಶಿಷ್ಟಾಚಾರದ ಅಂಶಗಳನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿದರು. ಕ್ರಮೇಣ ಈ ಅನುಕರಣೆ ಮಧ್ಯಕಾಲೀನ ಭಾರತದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಮಿಶ್ರಣವನ್ನು ಪ್ರತಿಬಿಂಬಿಸುತ್ತದೆ. ಇದು ಅನೇಕ ಹಿಂದೂಗಳಲ್ಲಿ ದೈನಂದಿನ ಜೀವನದ ಮೇಲೆ ಪ್ರಭಾವ ಬೀರಿದವು.

೬. ಉಳಿಗಮಾನ್ಯ ಪ್ರಭುಗಳ ಸ್ಥಾನಕ್ಕೆ ಕುತ್ತಾಯಿತು:

 ಇಕ್ತಗಳೆಂದರೆ ಪ್ರಾಂತಗಳು. ಅದರ ನೇತೃತ್ವ ವಹಿಸಿದ್ದ ಇಕ್ತದಾರರು ಸರಕಾರದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ತೆರಿಗೆಯನ್ನು ವಸೂಲಿ ಮಾಡುತ್ತಿದ್ದರು. ಹೀಗಾಗಿ ಹಿಂದೆ ಇದೇ ಕೆಲಸ ಮಾಡುತ್ತಿದ್ದ ಉಳಿಗಮಾನ್ಯ ಮುಖಂಡರು ತಮ್ಮ ಸ್ಥಾನವನ್ನು ಕಳೆದುಕೊಂಡರು. ಅವರು ಸರಕಾರದ ಸವಲತ್ತುಗಳಿಂದಲೂ ಹಾಗೂ ಜನರ ಭಯ ಭಕ್ತಿಯಿಂದಲೂ ದೂರವಾದರು.

೭. ಪರ್ದಾ ಪದ್ಧತಿಯ ಪರಿಚಯ:

ಟರ್ಕರು ಭಾರತಕ್ಕೆ ಬರುವ ಮೊದಲು ಭಾರತದಲ್ಲಿ ಪರ್ದಾ ಪದ್ಧತಿ ಜಾರಿಯಲ್ಲಿ ಇರಲಿಲ್ಲ. ಈ ಪದ್ಧತಿ ಮುಸ್ಲೀಂ ಸಮಾಜಕ್ಕೆ ಮಾತ್ರ ಮೀಸಲಾಗಿತ್ತು. ಪರಿಸ್ಥಿತಿ ಬದಲಾದಂತೆ ಹಿಂದೂಗಳು ಸಹ ಪರ್ದಾ ಪದ್ಧತಿಯನ್ನು ಅನುಸರಿಸಲು ಆರಂಭಿಸಿದರು. ಕಾರಣ ಮುಸ್ಲೀಂ ಕಾಮಾಂಧರ ಕಣ್ಣಿಗೆ ಹಿಂದೂ ಸುಂದರ ಹುಡುಗಿಯರು ಬೀಳದಿರಲಿ ಎಂಬ ಉದ್ದೇಶದಿಂದ ಈ ಪದ್ಧತಿಯನ್ನು ಅನುಸರಿಸಿದರು. ಹೀಗೆ ಭಾರತೀಯ ಸಮಾಜದಲ್ಲಿ ಪರ್ದಾ ಪದ್ಧತಿ ಕಾಲಿರಿಸಿತು.

೮. ಬಾಲ್ಯವಿವಾಹ ಜನಪ್ರಿಯವಾಯಿತು:

ಮುಸ್ಲೀಂ ರಾಜರು, ಕುಲೀನರು ಹಾಗೂ ಸೈನಿಕರು ಹಿಂದೂ ಸ್ತ್ರೀಯರನ್ನು ಬಲಾತ್ಕಾರದಿಂದ ಮದುವೆಯಾಗಲು ಆರಂಭಿಸಿದರು. ಕೆಲವರು ಹಿಂದೂ ಹುಡುಗಿಯರನ್ನು ಅಪಹರಿಸಿ ಮದುವೆಯಾಗುತ್ತಿದ್ದರು. ಈ ಕಾರಣದಿಂದ ಹಿಂದೂಗಳು ತಮ್ಮ ಹೆಣ್ಣು ಮಕ್ಕಳನ್ನು ಪ್ರೌಢಾವಸ್ಥೆಗೆ ಬರುವ ಮೊದಲೇ ಮದುವೆ ಮಾಡಿ ಮುಗಿಸುತ್ತಿದ್ದರು. ಹಿಂದೆ ಕಡಿಮೆ ಪ್ರಮಾಣದಲ್ಲಿ ಜಾರಿಯಲ್ಲಿದ್ದ ಬಾಲ್ಯವಿವಾಹ ಟರ್ಕರು ಭಾರತಕ್ಕೆ ಬಂದ ನಂತರ ಅದು ಹೆಚ್ಚು ಪ್ರಚಲಿತವಾಯಿತು. ಮುಸ್ಲೀಂರಿಂದ ತಮ್ಮ ಹೆ‍ಣ್ಣು ಮಕ್ಕಳನ್ನು ರಕ್ಷಿಸಲು ಹಿಂದೂಗಳು ಹೆಣ್ಣು ಮಗು ಜನಿಸಿದ ಕೂಡಲೇ ಅದನ್ನು ಕೊಲ್ಲುವಂತಹ ಅಮಾನುಷ ಕೃತ್ಯಕ್ಕೂ ಇಳಿದರು. ಇದರಿಂದ ಹೆಣ್ಣು ಶಿಶು ಹತ್ಯೆ ಸರ್ವೇಸಾಮಾನ್ಯವಾಯಿತು.

೯. ಮಹಿಳಾ ಸ್ವಾತಂತ್ರ್ಯಕ್ಕೆ ನಿರ್ಬಂಧ:

ಟರ್ಕರ ಸಮಾಜದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಇರಲಿಲ್ಲ. ಪುರುಷನಿಗೆ ಸರಿಸಮಾನವಾಗಿ ನಿಲ್ಲುವ ಹಕ್ಕು ಸ್ತ್ರೀಯರಿಗೆ ನಿರಾಕರಿಸಲಾಗಿತ್ತು. ಸಭೆ-ಸಮಾರಂಭಗಳು ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಅವರು ಭಾಗವಹಿಸದಂತೆ ನಿರ್ಬಂಧ ಹೇರಲಾಗಿತ್ತು. ಇದು ಭಾರತೀಯ ಹಿಂದೂಗಳ ಮೇಲೆ ಪ್ರಭಾವ ಬೀರಿತು. ತಾವು ಸಹ ಮಹಿಳೆಯರಿಗೆ ಸ್ವಾತಂತ್ರ್ಯ ನೀಡುವುದನ್ನು ನಿರ್ಬಂಧಿಸಿದರು. ಹೆಣ್ಣು ನಾಲ್ಕು ಗೋಡೆಗಳ ಮಧ್ಯೆ ಕಾಲಕಳೆಯುವಂತೆ ಮಾಡಲಾಯಿತು.

೧೦. ಸತಿಸಹಗಮನ ಹಾಗೂ ಜೋಹಾರ್‌ ಪದ್ಧತಿಯ ಜನಪ್ರಿಯತೆ:

ಟರ್ಕರ ಆಕ್ರಮಣದ ಸಂದರ್ಭದಲ್ಲಿ ಸಾವಿರಾರು ಸ್ತ್ರೀಯರನ್ನು ಅಪಹರಿಸಿಕೊಂಡು ಹೋಗಿ ಮದುವೆಯಾಗುವುದು, ಮಾರುವುದು ಹಾಗೂ ಗುಲಾಮಳನ್ನಾಗಿ ಮಾಡಿಕೊಳ್ಳುವುದು ಮುಂತಾದ ಚಟುವಟಿಕೆಗಳು ಆರಂಭವಾದವು. ಹೀಗಾಗಿ ಹಿಂದೂ ಸ್ತ್ರೀಯರು ತಮ್ಮ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ಸಾಮೂಹಿಕವಾಗಿ ಅಗ್ನಿಗೆ ಹಾರಿ ಪ್ರಾಣ ಕಳೆದುಕೊಳ್ಳುವ ಜೋಹಾರ್‌ ಪದ್ಧತಿಯನ್ನು ಅನುಸರಿಸಲು ಆರಂಭಿಸಿದರು. ಜೊತೆಗೆ ಪತಿ ತೀರಿಕೊಂಡಾಗ ವೈಯಕ್ತಿಕವಾಗಿ ಪ್ರಾಣ ಕಳೆದುಕೊಳ್ಳುವ ಸತಿ ಪದ್ಧತಿಯೂ ಜನಪ್ರಿಯವಾಯಿತು.

೧೧. ಗುಲಾಮಗಿರಿಯ ಜನನ:

ಭಾರತದಲ್ಲಿ ಮುಸ್ಲಿಂ ಆಳ್ವಿಕೆಯ ಸ್ಥಾಪನೆಯು ದೊಡ್ಡ ಪ್ರಮಾಣದ ಗುಲಾಮಗಿರಿ ವ್ಯವಸ್ಥೆಯನ್ನು ಪರಿಚಯಿಸಿತು. ಇದು ಆಡಳಿತಗಾರರಲ್ಲಿ ಪ್ರತಿಷ್ಠೆ, ಸಂಪತ್ತು ಮತ್ತು ಅಧಿಕಾರದ ಗುರುತಾಯಿತು. ಅನೇಕ ಮುಸ್ಲಿಂ ರಾಜರು ಮತ್ತು ಗಣ್ಯರು ಹೆಚ್ಚಿನ ಸಂಖ್ಯೆಯ ಗುಲಾಮರನ್ನು ಹೊಂದುವುದು ತಮ್ಮ ಸಾಮಾಜಿಕ ಸ್ಥಾನಮಾನವನ್ನು ಹೆಚ್ಚಿಸುತ್ತದೆ ಎಂದು ನಂಬಿದ್ದರು. ಯುದ್ಧಗಳ ಸಮಯದಲ್ಲಿ ಸೆರೆಹಿಡಿಯಲಾದ ಸೈನಿಕರು, ಗಣ್ಯರು ಮತ್ತು ರಾಜಮನೆತನದ ಸದಸ್ಯರು ಸೇರಿದಂತೆ ಅವರನ್ನು ಹೆಚ್ಚಾಗಿ ಗುಲಾಮಗಿರಿಗೆ ತಳ್ಳಲಾಗುತ್ತಿತ್ತು ಮತ್ತು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುವಂತೆ ಮಾಡಲಾಗುತ್ತಿತ್ತು. ಈ ಗುಲಾಮ ವ್ಯಕ್ತಿಗಳನ್ನು ಮನೆಗಳು, ಮಿಲಿಟರಿ ಶಿಬಿರಗಳು, ಅರಮನೆಗಳು ಮತ್ತು ಆಡಳಿತಾತ್ಮಕ ಕೆಲಸಗಳಲ್ಲಿ ನೇಮಿಸಿಕೊಳ್ಳಲಾಗುತ್ತಿತ್ತು. ಇದು ವಶಪಡಿಸಿಕೊಂಡ ಪ್ರದೇಶಗಳ ಮೇಲೆ ಆಡಳಿತಗಾರರ ಪ್ರಾಬಲ್ಯವನ್ನು ಪ್ರತಿಬಿಂಬಿಸುತ್ತದೆ.

ಕಾಲಕ್ರಮೇಣ, ಕೆಲವು ಆಡಳಿತಗಾರರ ಅಡಿಯಲ್ಲಿ ಗುಲಾಮಗಿರಿಯು ಅಸಾಧಾರಣ ಪ್ರಮಾಣದಲ್ಲಿ ವಿಸ್ತರಿಸಿತು. ಅಲಾವುದ್ದೀನ್ ಖಿಲ್ಜಿ ಸುಮಾರು 84,000 ಗುಲಾಮರನ್ನು ಇಟ್ಟುಕೊಂಡಿದ್ದಾಗಿ ದಾಖಲಿಸಲಾಗಿದೆ. ಆದರೆ ಫಿರೋಜ್ ಷಾ ತುಘಲಕ್ ಇನ್ನೂ ಹೆಚ್ಚಿನ ಸಂಖ್ಯೆಯ ಗುಲಾಮರನ್ನು ಇಟ್ಟುಕೊಂಡಿದ್ದನು. ಇವನ ಹತ್ತಿರ ಸುಮಾರು 1,80,000 ಗುಲಾಮರು ಇದ್ದರು. ಈ ಗುಲಾಮರು ಸ್ಥಳೀಯ ಸೇವೆಯಿಂದ ಕೌಶಲ್ಯಪೂರ್ಣ ಕಾರ್ಮಿಕರವರೆಗೆ ಮತ್ತು ಆಡಳಿತಾತ್ಮಕ ಕಾರ್ಯಗಳವರೆಗೆ ವ್ಯಾಪಕ ಶ್ರೇಣಿಯ ಕರ್ತವ್ಯಗಳನ್ನು ನಿರ್ವಹಿಸಿದರು. ಗುಲಾಮರನ್ನಾಗಿ ಮಾಡಿಕೊಂಡ ಜನರ ಬೃಹತ್ ಸಂಖ್ಯೆಯು ಆಡಳಿತಗಾರರ ರಾಜಕೀಯ ಅಧಿಕಾರವನ್ನು ಪ್ರತಿಬಿಂಬಿಸುತ್ತದೆ. ಆದರೆ ತಮ್ಮ ಕುಟುಂಬಗಳಿಂದ ಬಲವಂತವಾಗಿ ಕರೆದೊಯ್ಯಲ್ಪಟ್ಟವರು ಮತ್ತು ಜೀವನದುದ್ದಕ್ಕೂ ಸೇವೆ ಸಲ್ಲಿಸಲು ಒತ್ತಾಯಿಸಲ್ಪಟ್ಟವರು ಎದುರಿಸಿದ ಕಠೋರ ವಾಸ್ತವಗಳನ್ನು ಸಹ ಎತ್ತಿ ತೋರಿಸುತ್ತದೆ.

4) ಧಾರ್ಮಿಕ ಬದಲಾವಣೆಗಳು:

ಟರ್ಕರು ಭಾರತಕ್ಕೆ ಆಗಮಿಸಿದ ನಂತರ ಭಾರತೀಯ ಧಾರ್ಮಿಕ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದವು. ಅವುಗಳು ಈ ರೀತಿಯಾಗಿವೆ.

೧. ಇಸ್ಲಾಂ ಧರ್ಮದ ಪ್ರಚಾರ:

ಮುಸಲ್ಮಾನರು ಭಾರತದಲ್ಲಿ ನೆಲೆಯೂರಿದ ನಂತರ ಇಸ್ಲಾಂ ಧರ್ಮವು ಹೆಚ್ಚು ಬಲಿಷ್ಠವಾಗುತ್ತಾ ಹೊರಟಿತು.  ಅವರ ಮತಾಂತರ ಕಾರ್ಯಕ್ಕೆ ವೇಗ ಬಂದಿತು. ಏಕೆಂದರೆ ಅನೇಕ ಮುಸ್ಲೀಂ ರಾಜರುಗಳು ಹಿಂದೂಗಳಿಗೆ ಅನೇಕ ಆಸೆ ಆಮಿಷಗಳನ್ನು ಒಡ್ಡಿ ಅವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿದರು. ಹಿಂದೂ ದೇವಾಲಯಗಳನ್ನು ಭಗ್ನಗೊಳಿಸಿದರು. ಕೆಲವರಂತೂ ಮೂರ್ತಿಭಂಜಕರು ಎಂಬ ಬಿರುದನ್ನೇ ಪಡೆದರು. ಹಿಂದೂಗಳ ಮೇಲೆ ಅಮಾನವೀಯ ತೆರಿಗೆಗಳನ್ನು ಹೇರಿದರು. ತೆರಿಗೆ ನೀಡಲು ಅಸಮರ್ಥರಾದವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು. ಇಸ್ಲಾಂನ ಏಕೀಶ್ವರ ವಾದವು ಅನೇಕ ಹಿಂದೂಗಳನ್ನು ಆಕರ್ಷಿಸಿತು. ಇಸ್ಲಾಂ “ರಾಜ್ಯ ಧರ್ಮ” (State Religion)ವಾಯಿತು. ಹಿಂದೂ ಧರ್ಮದಲ್ಲಿ ಸಾವಿರಾರು ವರ್ಷಗಳಿಂದ ಎಲ್ಲಾ ರೀತಿಯ ಅಮಾನುಷ ಅಸಮಾನತೆಯನ್ನು ಅನುಭವಿಸಿದವರು ಇಸ್ಲಾಂ ಧರ್ಮಕ್ಕೆ ಆಕರ್ಷಿತರಾಗಿ ಮತಾಂತರವಾದರು. ಇದರಿಂದ ಭಾರತೀಯ ಸಮಾಜದಲ್ಲಿದ್ದ ಕೆಲವೊಂದು ಅನಿಷ್ಟ ಪದ್ಧತಿಗಳು ತೊಲಗಲು ಆರಂಭಿಸಿದವು. ಪರಿಣಾಮವಾಗಿ ಬ್ರಾಹ್ಮಣರ ಸ್ಥಾನಮಾನಗಳು ಕುಸಿದು ಹೋದವು.

೨. ಧಾರ್ಮಿಕ ಮತ್ತು ಸಾಮಾಜಿಕ ಸಹಿಷ್ಣುತೆಗೆ ಚಾಲನೆ ಸಿಕ್ಕಿತು:

ಆರಂಭದಲ್ಲಿ ಹಿಂದೂ-ಮುಸಲ್ಮಾನರಲ್ಲಿ ಸಾಕಷ್ಟು ಭಿನ್ನತೆಗಳು ಕಂಡುಬಂದವು. ಆದರೆ ಕಾಲಾನಂತರ ಅವರು ಹೊಂದಾಣಿಕೆಯ ಗುಣಗಳನ್ನು ಅಳವಡಿಸಿಕೊಂಡರು. ಮತಾಂಧತೆ ಭಾವನೆಗಳನ್ನು ತೊಲಗಿಸಿ ಸಮತಾಭಾವನೆಯನ್ನು ರೂಢಿಸಿಕೊಂಡರು. ಭಕ್ತಿಸಂತರ ಬೋಧನೆಗಳಿಂದ ಇಬ್ಬರೂ ಪ್ರಭಾವಿತರಾದರು. ಮುಸಲ್ಮಾನರ ಧಾರ್ಮಿಕ ಚಿಂತನೆಗಳು ಹಾಗೂ ಆಚರಣೆಗಳನ್ನು ಹಿಂದೂಗಳು, ಹಿಂದೂಗಳ ಧಾರ್ಮಿಕ ಚಿಂತನೆ ಹಾಗೂ ಆಚರಣೆಗಳನ್ನು ಮುಸಲ್ಮಾನರು ಅಳವಡಿಸಿಕೊಳ್ಳಲು ಆರಂಭಿಸಿದರು. ಆರಂಭದಲ್ಲಿ “ ನ ರೋಟಿ ನ ಬೇಟಿ” ಎಂಬ ನೀತಿಯನ್ನು ಅನುಸರಿಸಿದ ಹಿಂದೂ-ಮುಸಲ್ಮಾನರು ಕಾಲ ಕ್ರಮೇಣ ಮದುವೆ ಹಾಗೂ ಊಟೋಪಚಾರಗಳಲ್ಲಿ ಹೊಂದಾಣಿಕೆಯನ್ನು ಮಾಡಿಕೊಂಡರು. ಮುಸಲ್ಮಾನರ ಉಡುಗೆ-ತೊಡುಗೆ, ಆಹಾರ ಪದ್ಧತಿಯನ್ನು ಹಿಂದೂಗಳು, ಹಿಂದೂಗಳ ಆಹಾರ ಪದ್ಧತಿ, ವೇಷ ಭೂಷಣಗಳನ್ನು ಮುಸಲ್ಮಾನರು ರೂಢಿಸಿಕೊಂಡರು.

೩. ಭಕ್ತಿ ಹಾಗೂ ಸೂಫಿ ಪಂಥಗಳ ಬೆಳವಣಿಗೆ:

ಆರಂಭದಲ್ಲಿ ಹಿಂದೂ-ಮುಸಲ್ಮಾನರ ನಡುವೆ ದೊಡ್ಡದಾದ ಧಾರ್ಮಿಕ ಕಂದಕವೇ ಏರ್ಪಟ್ಟಿತ್ತು. ಇಂತಹ ಕಂದಕವನ್ನು ದೂರಮಾಡಿ ಅವರಿಬ್ಬರಲ್ಲಿ ಸಹೋದರ ಭಾವನೆಯನ್ನು ಮೂಡಿಸಲು ಭಕ್ತಿಪಂಥ ಹಾಗೂ ಸೂಫಿ ಪಂಥಗಳು ಪ್ರಯತ್ನಿಸಿದವು. ಭಕ್ತಿಪಂಥ ಹಾಗೂ ಸೂಫಿ ಪಂಥಗಳ ಸಂತರು ದೇವರ ಏಕತೆ, ಸಮಾನತೆ, ಸರಳ ಮತಾಚರಣೆಗಳನ್ನು ಬೋಧಿಸಿದರು. ಇವುಗಳು ಹಿಂದೂ-ಮುಸ್ಲೀಂರ ಮೇಲೆ ತೀವ್ರ ಪರಿಣಾಮಗಳನ್ನು ಬೀರಿದವು. ಇವರ ಚಿಂತನೆಗಳು ಜನರ ನಡುವೆ ಸುಸ್ಥಿರ ಮನೋಭಾವನೆಯ ಬೆಳವಣಿಗೆಗೆ ಕಾರಣವಾದವು.

೪. ಬೌದ್ಧ ಧರ್ಮದ ಅವನತಿ:

ಭಾರತಕ್ಕೆ ಬಂದ ಮುಸಲ್ಮಾನರು ಭೌದ್ಧ ಧರ್ಮ ಹಾಗೂ ಅದರ ಅಹಿಂಸಾ ನೀತಿಯನ್ನು ವಿರೋಧಿಸಿದರು. ಹೀಗಾಗಿ ಮುಸಲ್ಮಾನರು ಸಾವಿರಾರು ಬೌದ್ಧರನ್ನು ಸೆರೆ ಹಿಡಿದು ಕುರಿಗಳನ್ನು ಕಡಿದಂತೆ ಕಡಿದು ಹಾಕಿದರು. ಹಿಂದೂಗಳು ಸಹ ಅಹಿಂಸಾ ನೀತಿಯನ್ನು ಒಪ್ಪಿಕೊಳ್ಳದೆ ಅದರಿಂದ ದೂರವಾದರು.

5) ಸಾಂಸ್ಕೃತಿಕ ಬದಲಾವಣೆಗಳು:

ಟರ್ಕರ ಆಗಮನದಿಂದ ಭಾರತೀಯ ಸಮಾಜದ ಸಾಂಸ್ಕೃತಿಕ ಬದಲಾವಣೆಗಳು ಈ ಕೆಳಗಿನಂತಿವೆ.

೧. ಉರ್ದು ಭಾಷೆಯ ಉಗಮ:

ಮುಸ್ಲೀಂ ಆಕ್ರಮಣಕಾರರು ಅಂದು ಪರ್ಶಿಯನ್‌ ಹಾಗೂ ಅರೇಬಿಕ್‌ ಭಾಷೆಗಳನ್ನು ಮಾತನಾಡುತ್ತಿದ್ದರು. ಹಾಗೆಯೇ ಹಿಂದೂಗಳು ಸಂಸ್ಕೃತ ಭಾಷೆಯನ್ನು ಜನಪ್ರಿಯಗೊಳಿಸಿದ್ದರು. ಭಾರತಕ್ಕೆ ಬಂದ ಮುಸಲ್ಮಾನರು ಹಾಗೂ ಭಾರತೀಯ ಹಿಂದೂಗಳು ಇವರಿಬ್ಬರಿಗೂ ಒಂದೇ ಭಾಷೆಯ ಅಗತ್ಯವಿತ್ತು. ಹೀಗಾಗಿ ಹಿಂದೂ-ಮುಸ್ಲೀಂರ ಸಮ್ಮಿಲನದ ಫಲಶೃತಿಯಾಗಿ ಉರ್ದುಭಾಷೆ ಉಗಮಗೊಂಡಿತು. ಉರ್ದು ಜನರ ಆಡುಭಾಷೆಯಾಗಿ ಜನಪ್ರಿಯತೆಗಳಿಸಿತು. ಅನೇಕ ಮುಸ್ಲೀಂ ಕವಿಗಳು ಹಿಂದಿಯಲ್ಲಿಯೂ ಹಾಗೂ ಅನೇಕ ಹಿಂದೂ ಕವಿಗಳು ಉರ್ದುವಿನಲ್ಲಿ ಕವಿತೆ, ಗೀತೆ ಹಾಗೂ ಕೃತಿಗಳನ್ನು ರಚಿಸಿದರು.

೨. ಹಿಂದವಿ ಭಾಷೆಯ ಬೆಳವಣಿಗೆ :

ಹಿಂದವಿ ಭಾಷೆಯು ೧೦ ರಿಂದ ೧೩ನೇ ಶತಮಾನಗಳ ಸುಮಾರಿಗೆ ದೆಹಲಿ ಪ್ರದೇಶದಲ್ಲಿ ಮಾತನಾಡುತ್ತಿದ್ದ ಅಪಭ್ರಂಶ ಉಪಭಾಷೆಗಳಿಂದ ಹೊರಹೊಮ್ಮಿತು. ಇದೇ ಹೊತ್ತಿನಲ್ಲಿ ದೆಹಲಿ ಸುಲ್ತಾನರ ಆಳ್ವಿಕೆಯೂ ಪ್ರಾರಂಭವಾಗಿ ಇಂಡೋ ಆರ್ಯನ್‌ ಉಪಭಾಷೆಗಳನ್ನು ಪರ್ಶಿಯನ್‌ ಮತ್ತು ಅರೇಬಿಕ್‌ ಪದಗಳೊಂದಿಗೆ ಬೆರೆಸಿ ಮಾತನಾಡುವ ಪ್ರಕ್ರಿಯೆಯಿಂದಾಗಿ ಹಿಂದವಿ ಸಾಕಷ್ಟು ಬೆಳೆಯಿತು. ಪರ್ಶಿಯನ್‌ ಆಡಳಿತಗಾರರು ಮತ್ತು ಅಮೀರ್‌ ಖುಸ್ರು ಮುಂತಾದ ಕವಿಗಳು ವಿಶಿಷ್ಟವಾಗಿ ಬೆಳವಣಿಗೆಯಾಗುತ್ತಿರುವ ಈ ಭಾಷೆಯನ್ನು  ಹಿಂದವಿ ಅಥವಾ ದಹ್ಲವಿ ಎಂದು ಕರೆದರು. ಇದು ಆಧುನಿಕ ಹಿಂದಿ ಮತ್ತು ಉರ್ದುವಿನ ಹಿಂದಿನ ಬೆಳವಣಿಗೆಯ ಆರಂಭಿಕ ಹಂತವಾಗಿದೆ.(ಪೂರ್ವಜವಾಗಿದೆ).  

೩. ಇಂಡೋ-ಸಾರ್ಸೆನಿಕ್‌ ಶೈಲಿಯ ಉದಯ:

ಹಿಂದೂ ಮುಸ್ಲೀಂ ಸಂಸ್ಕೃತಿಯ ಬೆರೆಕೆಯ ಪರಿಣಾಮವಾಗಿ ಇಂಡೋ-ಇಸ್ಲಾಮಿಕ್‌ ಅಥವಾ ಇಂಡೋ-ಸಾರ್ಸೆನಿಕ್‌ ಎಂಬ ಹೊಸಶೈಲಿ ಉಗಮಗೊಂಡಿತು. ಕಾಲಾನಂತರ ಹಿಂದೂಸ್ತಾನಿ ಸಂಗೀತವು ಸಹ ಬೆಳವಣಿಗೆಯಾಯಿತು. ಮುಸಲ್ಮಾನರು ಹಿಂದೂ ದೇವಾಲಯಗಳನ್ನು ನಾಶಗೊಳಿಸಿ ಅದರ ಮೇಲೆ ಮಸೀದಿಯನ್ನು ನಿರ್ಮಿಸಿ ಅದಕ್ಕೆ ಇಂಡೋ- ಸಾರ್ಸೆನಿಕ್‌ ಕಲೆಯ ರೂಪವನ್ನು ನೀಡಿದರು.

೪. ಹಿಂದೂ ಹಬ್ಬಗಳ ಮತ್ತು ಸಂಪ್ರದಾಯ ಆಚರಣೆಗಳ ಅನುಸರಣೆ:

ಮುಸಲ್ಮಾನರು ಹಿಂದೂ ಧಾರ್ಮಿಕ ಪದ್ಧತಿ ಹಾಗೂ ರೂಢಿ ಸಂಪ್ರದಾಯಗಳಿಂದ ಪ್ರಭಾವಿತರಾಗಿದ್ದರು. ಉದಾ: ಅಖೀಬಾ ಹಾಗೂ ಬಿಸ್ಮಿಲ್ಲಾ ಪದ್ಧತಿಯ ಆಚರಣೆಗಳು, ಹಿಂದೂಗಳ ಚೌಲಕರ್ಮ ಹಾಗೂ ಉಪನಯನ ಕಾರ್ಯಕ್ರಮ ನಡೆಸುವ ರೀತಿಯಲ್ಲಿ ಆಚರಿಸಲಾಗುತ್ತಿತ್ತು. ಶಿವರಾತ್ರಿ ಹಬ್ಬದಂತೆ ಷಬ್-ಎ-ಬರಾತ್‌ ಹಬ್ಬವನ್ನು ಆಚರಿಸುತ್ತಿದ್ದರು. ಹಿಂದೂಗಳಲ್ಲಿದ್ದ ಸಾಧು ಸಂತರನ್ನು ಪೂಜಿಸುವುದು, ಅವರ ಸಮಾಧಿ ಸ್ಥಳಗಳಿಗೆ ಭೇಟಿ ನೀಡುವುದು ಮುಂತಾದ ಪದ್ಧತಿಗಳನ್ನು ಮುಸಲ್ಮಾನರೂ ಸಹ ಅಳವಡಿಸಿಕೊಂಡರು. ಹಿಂದೂ ಚಿಂತನೆಗಳು ಸಹ ಮುಸಲ್ಮಾನರಲ್ಲಿ ಆಳವಾಗಿ ಬೇರೂರಿದವು. ಕೆಲವು ಮುಸಲ್ಮಾನರು ಮಾತ್ರ ಬಹುಪತ್ನಿತ್ವವನ್ನು ಕೈಬಿಟ್ಟು ಏಕಪತ್ನಿ ಪದ್ಧತಿಯನ್ನು ಅನುಸರಿಸಿದರು. ಹಿಂದೂ ವಿವಾಹ ಪದ್ಧತಿಯಂತೆ ಮುಸಲ್ಮಾನರೂ ಸಹ ತಮ್ಮಲ್ಲಿ ಅನುಸರಿಸಿದರು. ಹಿಂದೂ ರಾಜರು ತುಲಾಭಾರ ಮಾಡಿಸಿಕೊಳ್ಳುವಂತೆ ಮುಸಲ್ಮಾನ ರಾಜರು ಸಹ ತುಲಾಭಾರವನ್ನು ಮಾಡಿಸಿಕೊಳ್ಳಲು ಆರಂಭಿಸಿದರು.

೫. ಜ್ಞಾನ ಕೇಂದ್ರಗಳಾದ ವಿಶ್ವವಿದ್ಯಾನಿಲಯಗಳ ಅವನತಿ:

ಪ್ರಾಚೀನ ಕಾಲದ ಪ್ರಸಿದ್ಧ ಕಲಿಕಾ ಕೇಂದ್ರಗಳಾದ ನಲಂದಾ, ತಕ್ಷಶಿಲಾ, ವಿಕ್ರಮಶಿಲಾ, ಉಜ್ಜಯಿನಿ, ಕಾಶಿ ಮುಂತಾದವುಗಳು ಟರ್ಕರ ದಾಳಿಗೆ ಸಿಕ್ಕು ಹೇಳ ಹೆಸರಿಲ್ಲದಂತೆ ನಾಶವಾದವು. ಅಲ್ಲಿನ ಅಮೂಲ್ಯ ಗ್ರಂಥ ಭಂಡಾರವನ್ನು ಟರ್ಕರು ಬೆಂಕಿಗೆ ಹಾಕಿ ಸುಟ್ಟರು.

೬.  ʻಘಜ್ನಿʼ ನಗರಕ್ಕೆ  ಆಧುನಿಕತೆಯ ಸ್ಪರ್ಶ:

ಘಜ್ನಿಯ ಮಹಮ್ಮದ್ ಆಳ್ವಿಕೆಯಲ್ಲಿ ಘಜ್ನಿ ನಗರವು ಗಮನಾರ್ಹ ರೂಪಾಂತರಕ್ಕೆ ಒಳಗಾಯಿತು. ಇದಕ್ಕೆ ಹೆಚ್ಚಾಗಿ ಅವನು ಭಾರತದಿಂದ ಲೂಟಿ ಮಾಡಿದ ಅಪಾರ ಸಂಪತ್ತಿನ ಹಣಕಾಸು ಒದಗಿಸಿದನು. ಈ ನಿಧಿಯಿಂದ, ಘಜ್ನಿಯನ್ನು ಸುಂದರಗೊಳಿಸಲಾಯಿತು ಮತ್ತು ಅದರ ಕಾಲಕ್ಕೆ ತಕ್ಕ ಶಕ್ತಿ, ಅತ್ಯಾಧುನಿಕತೆಯನ್ನು ಪ್ರತಿಬಿಂಬಿಸುವ ಭವ್ಯವಾದ, ಪ್ರವರ್ಧಮಾನಕ್ಕೆ ಬಂದ ರಾಜಧಾನಿಯಾಗಿ ಅಭಿವೃದ್ಧಿಪಡಿಸಲಾಯಿತು. ಘಜ್ನವಿಡ್ ಸಾಮ್ರಾಜ್ಯದ ವೈಭವವನ್ನು ಪ್ರದರ್ಶಿಸಲು ಭವ್ಯವಾದ ಅರಮನೆಗಳು, ಎತ್ತರದ ಮಸೀದಿಗಳು, ಉದ್ಯಾನಗಳು, ಅಮೃತಶಿಲೆಯ ರಚನೆಗಳು ಮತ್ತು ಕಲಾತ್ಮಕ ಸ್ಮಾರಕಗಳನ್ನು ನಿರ್ಮಿಸಲಾಯಿತು. ವಿವಿಧ ಪ್ರದೇಶಗಳಿಂದ ನುರಿತ ವಾಸ್ತುಶಿಲ್ಪಿಗಳು, ಕುಶಲಕರ್ಮಿಗಳು, ಕವಿಗಳು ಮತ್ತು ವಿದ್ವಾಂಸರನ್ನು ಆಹ್ವಾನಿಸಲಾಯಿತು, ಘಜ್ನಿಯನ್ನು ಸಂಸ್ಕೃತಿ, ಕಲಿಕೆ ಮತ್ತು ಆಡಳಿತದ ರೋಮಾಂಚಕ ಕೇಂದ್ರವನ್ನಾಗಿ ಮಾಡಲಾಯಿತು. ಹೀಗಾಗಿ, ಭಾರತದಿಂದ ತೆಗೆದುಕೊಂಡ ಹೋದ (ಲೂಟಿ ಮಾಡಿದ) ಸಂಪತ್ತು ಘಜ್ನಿ ಎಂಬ ನಗರಕ್ಕೆ ಹೊಸ, ಆಧುನಿಕ ಮತ್ತು ಭವ್ಯವಾದ ಗುರುತನ್ನು ಮತ್ತು ಆಧುನಿಕ ಸ್ಪರ್ಶವನ್ನು ನೀಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಅದನ್ನು ಮಧ್ಯಕಾಲೀನ ಇಸ್ಲಾಮಿಕ್ ಪ್ರಪಂಚದ ಅತ್ಯಂತ ವೈಭವದ  ರಾಜಧಾನಿಗಳಲ್ಲಿ ಒಂದನ್ನಾಗಿ ಪರಿವರ್ತಿಸಲಾಯಿತು.

ಉಪಸಂಹಾರ

ಟರ್ಕರ ಆಡಳಿತದ ಅವಧಿಯಲ್ಲಿ ಹಿಂದೂ ಮತ್ತು ಮುಸ್ಲಿಂ ಸಂಸ್ಕೃತಿಗಳ ನಡುವಿನ ಪರಸ್ಪರ ಸಂಬಂಧವು ಸಹಕಾರ ಮತ್ತು ಸಂಘರ್ಷ ಎರಡನ್ನೂ ತಂದಿತು. ಹಲವಾರು ಕಾರಣಗಳಿಂದ ಹಿಂದೂ ಮುಸ್ಲೀಂ ಸಂಸ್ಕೃತಿಗಳು ಸಂಪೂರ್ಣ ಬೆರೆಯಲಿಲ್ಲ.

ಅನೇಕ ಮುಸ್ಲಿಂ ಆಡಳಿತಗಾರರು ಮತಾಂತರವನ್ನು ಪ್ರೋತ್ಸಾಹಿಸುವ ನೀತಿಗಳನ್ನು ಅನುಸರಿಸಿದರು, ಹಿಂದೂ ಸಮಾಜದ ಮೇಲೆ ಕುರಾನ್‌ನ ತತ್ವಗಳನ್ನು ಜಾರಿಗೊಳಿಸಿದರು, ಗೋಹತ್ಯೆಯನ್ನು ಅನುಮತಿಸಿದರು ಮತ್ತು ಕೆಲವೊಮ್ಮೆ ಹಿಂಸೆ ಅಥವಾ ತಾರತಮ್ಯಕ್ಕೆ ಕಾರಣವಾಗುವ ಇಸ್ಲಾಮಿಕ್ ಕಾನೂನುಗಳನ್ನು ಹೇರಿದರು. ಈ ಅಂಶಗಳು ಸಮಾಜದ ಉನ್ನತ ಹಂತಗಳಲ್ಲಿ ಪೂರ್ಣ ಸಾಂಸ್ಕೃತಿಕ ಸಾಮರಸ್ಯಕ್ಕೆ ಅಡೆತಡೆಗಳನ್ನು ಸೃಷ್ಟಿಸಿದವು.

ಆದಾಗ್ಯೂ, ಟರ್ಕರ ಆಕ್ರಮಣವು ಭಾರತದಲ್ಲಿ ಹೊಸ ರಾಜಕೀಯ ಮತ್ತು ಸಾಂಸ್ಕೃತಿಕ ಯುಗದ ಆರಂಭವನ್ನು ಗುರುತಿಸಿತು. ದೆಹಲಿ ಸುಲ್ತಾನರು ಭಾರತೀಯ ಆಡಳಿತವನ್ನು ಮರುರೂಪಿಸಿದ ಬಲವಾದ, ಕೇಂದ್ರೀಕೃತ ಆಡಳಿತವನ್ನು ಪರಿಚಯಿಸಿದರು. ಅವರ ಆಗಮನವು ಇಸ್ಲಾಂ ಧರ್ಮದ ಹರಡುವಿಕೆಯನ್ನು ಪ್ರೋತ್ಸಾಹಿಸಿತು ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ಮಾರ್ಗಗಳನ್ನು ತೆರೆಯಿತು. ಈ ಅವಧಿಯು ಕಲೆ, ವಾಸ್ತುಶಿಲ್ಪ, ಸಾಹಿತ್ಯ, ನಗರಾಭಿವೃದ್ಧಿ ಮತ್ತು ಮಿಲಿಟರಿ ತಂತ್ರಗಳಲ್ಲಿ ಗಮನಾರ್ಹ ಬೆಳವಣಿಗೆಗೆ ಸಾಕ್ಷಿಯಾಯಿತು, ಇದರಲ್ಲಿ ಅಶ್ವಸೈನ್ಯದ ಬಳಕೆ, ಹೊಸ ಶಸ್ತ್ರಾಸ್ತ್ರಗಳು ಮತ್ತು ಮುಂದುವರಿದ ಯುದ್ಧ ತಂತ್ರಗಳು ಸೇರಿವೆ. ಟರ್ಕರ ಆಕ್ರಮಣದಿಂದಾಗಿ ಮೇಲಿನ ಸ್ತರದಲ್ಲಿ ಹಿಂದೂ ಮತ್ತು ಮುಸ್ಲಿಂರ ನಡುವೆ ಘರ್ಷಣೆಯ ವಾತಾವರಣವಿತ್ತು. ಆದರೆ ಕೆಳಸ್ತರದಲ್ಲಿ (ಆಂತರ್ಯದಲ್ಲಿ) ಸಾಮಾನ್ಯ ಹಿಂದು ಮತ್ತು ಮುಸ್ಲಿಂರ ನಡುವೆ ಒಡನಾಟ, ಪರಸ್ಪರ ನಂಬಿಕೆ, ವಿಶ್ವಾಸಗಳು ನೆಲೆಯೂರ ತೊಡಗಿದವು. ಇದು ವಿಶಿಷ್ಟ ಪರಸ್ಪರ ಸಾಂಸ್ಕೃತಿಕ ಅನುಭವಕ್ಕೆ ಅಡಿಪಾಯ ಹಾಕಿತು. ಹೀಗಾಗಿ, ಟರ್ಕರ ಪ್ರಭಾವವು ಭಾರತದ ರಾಜಕೀಯ ರಚನೆ, ಸಾಂಸ್ಕೃತಿಕ ಜೀವನ ಮತ್ತು ಸಾಮಾಜಿಕ ವಿಕಾಸದ ಮೇಲೆ ಆಳವಾದ ಮತ್ತು ಶಾಶ್ವತವಾದ ಪ್ರಭಾವವನ್ನು ಬೀರಿತು.