ಮೂಲ- ಅರ್ಥ,
“Numismatics” ಎಂಬ ಪದದ ಮೂಲವು ಆಸಕ್ತಿದಾಯಕವಾಗಿದೆ. ಇದು ಲ್ಯಾಟಿನ್ ಪದ numisma (ಅರ್ಥ: ನಾಣ್ಯ) ಯಿಂದ ಬಂದಿದ್ದು, ಅದು ಗ್ರೀಕ್ ಪದ nomisma ಯಿಂದ ಉತ್ಪನ್ನವಾಗಿದೆ. Nomisma ಎಂದರೆ “ಸಮಾಜದಲ್ಲಿ ರೂಢಿಯಾದ ವಿನಿಮಯದ ಮಾಧ್ಯಮ.” Nomisma ದ ಮೂಲ nomos ಎಂಬ ಗ್ರೀಕ್ ಪದವಾಗಿದ್ದು, ಅದರ ಅರ್ಥ “ಕಾನೂನು” ಅಥವಾ “ಸಂಪ್ರದಾಯ.” ಇದರಿಂದ ನಮಗೆ ತಿಳಿಯುವುದು ಏನೆಂದರೆ ಹಣವೆಂದರೆ ಕೇವಲ ಲೋಹ ಅಥವಾ ಕಾಗದವಲ್ಲ; ಅದು ಸಮಾಜ ಮತ್ತು ರಾಜ್ಯದಿಂದ ಮಾನ್ಯತೆ ಪಡೆದ ವಿನಿಮಯದ ಸಾಧನವಾಗಿದೆ. ಹೀಗಾಗಿ ನಾಣ್ಯಶಾಸ್ತ್ರವೆಂದರೆ ಕಾನೂನುಬದ್ಧ ಹಾಗೂ ಸಮಾಜದಿಂದ ಅಂಗೀಕೃತ ಹಣದ ಅಧ್ಯಯನವಾಗಿದೆ.
ನಾವು ಇತಿಹಾಸವನ್ನು ಕಲ್ಪಿಸಿಕೊಂಡಾಗ ಸಾಮಾನ್ಯವಾಗಿ ಪುರಾತನ ಗ್ರಂಥಗಳು, ಸ್ಮಾರಕಗಳು, ಶಾಸನಗಳು ಅಥವಾ ಪುರಾತತ್ವ ಉತ್ಕನನಗಳನ್ನು ನೆನಪಿಗೆ ತರುತ್ತೇವೆ. ಆದರೆ ನಮ್ಮ ಕೈಯಲ್ಲಿ ಹಿಡಿಯಬಹುದಾದ ಒಂದು ಅತ್ಯಂತ ಮಹತ್ವದ ಮತ್ತು ಆಸಕ್ತಿದಾಯಕ ಇತಿಹಾಸದ ಮೂಲವೂ ಇದೆ ನಾಣ್ಯವಾಗಿದೆ. ನಾಣ್ಯಗಳು ಮತ್ತು ಇತರೆ ಹಣಕಾಸು ವಸ್ತುಗಳ ವೈಜ್ಞಾನಿಕ ಅಧ್ಯಯನವನ್ನು ನಾಣ್ಯಶಾಸ್ತ್ರ (Numismatics) ಎಂದು ಕರೆಯಲಾಗುತ್ತದೆ. ಇದು ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಮತ್ತು ಕಲಾತ್ಮಕ ಇತಿಹಾಸವನ್ನು ಪುನರ್ನಿರ್ಮಿಸಲು ಮಹತ್ವದ ಪಾತ್ರ ವಹಿಸುತ್ತದೆ.
ನಾಣ್ಯಶಾಸ್ತ್ರ ಎಂದರೆ ಕೇವಲ ಹಳೆಯ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸವಲ್ಲ. ನಾಣ್ಯ ಸಂಗ್ರಹ ಒಂದು ಆಸಕ್ತಿದಾಯಕ ಹವ್ಯಾಸವಾಗಿರಬಹುದು, ಆದರೆ ನಿಜವಾದ ನಾಣ್ಯಶಾಸ್ತ್ರವು ಅದಕ್ಕಿಂತ ಬಹಳ ದೂರ ಹೋಗುತ್ತದೆ. ಇದು ವಿವಿಧ ಕಾಲಘಟ್ಟಗಳಲ್ಲಿ ಬಳಸಲಾದ ನಾಣ್ಯಗಳು, ಕಾಗದದ ನೋಟುಗಳು, ಪದಕಗಳು, ಟೋಕನ್ಗಳು ಹಾಗೂ ಇತರೆ ಹಣಕಾಸು ಸಾಧನಗಳ ವೈಜ್ಞಾನಿಕ ಮತ್ತು ವ್ಯವಸ್ಥಿತ ಅಧ್ಯಯನವಾಗಿದೆ. ನಾಣ್ಯಶಾಸ್ತ್ರಜ್ಞನು ನಾಣ್ಯದ ಲೋಹ ಸಂಯೋಜನೆ, ತೂಕ, ಗಾತ್ರ, ಆಕಾರ, ಲಿಪಿ, ಚಿಹ್ನೆಗಳು, ಭಾಷೆ, ಮುದ್ರಣ ಗುರುತುಗಳು ಹಾಗೂ ಕಲಾತ್ಮಕ ಲಕ್ಷಣಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಾನೆ. ಈ ಪ್ರತಿಯೊಂದು ಅಂಶವೂ ಆ ನಾಣ್ಯ ಹೊರಬಂದ ಸಮಾಜದ ಕುರಿತು ಅಮೂಲ್ಯ ಮಾಹಿತಿಯನ್ನು ನೀಡುತ್ತದೆ.
ನಾಣ್ಯಗಳನ್ನು “ಇತಿಹಾಸದ ಸಣ್ಣ ದಾಖಲೆಗಳು” ಎಂದು ಕರೆಯಲಾಗುತ್ತದೆ. ಇದು ಅತಿಶಯೋಕ್ತಿಯಲ್ಲ. ಸಾಹಿತ್ಯ ಗ್ರಂಥಗಳು ಕೆಲವೊಮ್ಮೆ ಅತಿರಂಜಿತವಾಗಿರಬಹುದು ಅಥವಾ ನಂತರದಲ್ಲಿ ಬರೆಯಲ್ಪಟ್ಟಿರಬಹುದು. ಆದರೆ ನಾಣ್ಯಗಳು ಸಾಮಾನ್ಯವಾಗಿ ಆಳಿದ ರಾಜನ ಕಾಲದಲ್ಲೇ ಹೊರಬರುತ್ತವೆ. ಅವು ರಾಜ್ಯದ ಅಧಿಕೃತ ಉತ್ಪನ್ನವಾಗಿವೆ. ಆದ್ದರಿಂದ ನಾಣ್ಯಗಳಲ್ಲಿರುವ ಮಾಹಿತಿ ನೇರ ಮತ್ತು ವಿಶ್ವಾಸಾರ್ಹವಾಗಿರುತ್ತದೆ. ಒಂದೇ ನಾಣ್ಯದಲ್ಲಿ ರಾಜನ ಹೆಸರು, ಧಾರ್ಮಿಕ ಚಿಹ್ನೆಗಳು, ದಿನಾಂಕ, ಪ್ರತಿಮೆ ಮತ್ತು ಮುದ್ರಣ ಗುರುತುಗಳು ಇರಬಹುದು.
ನಾಣ್ಯಶಾಸ್ತ್ರಜ್ಞರ ಅಧ್ಯಯನಗಳು:
- ಬಳಸಿದ ಲೋಹ (ಚಿನ್ನ, ಬೆಳ್ಳಿ, ತಾಮ್ರ, ಕಂಚು, ಮಿಶ್ರಲೋಹ)
- ತೂಕದ ಮಾನದಂಡ
- ಆಕಾರ ಮತ್ತು ಗಾತ್ರ
- ಶಾಸನಗಳು ಮತ್ತು ಭಾಷೆ
- ಚಿಹ್ನೆಗಳು ಮತ್ತು ಚಿತ್ರಗಳು
- ಟಂಕಿಸುವ ತಂತ್ರ
ಹೀಗಾಗಿ, ನಾಣ್ಯಶಾಸ್ತ್ರವು ಐತಿಹಾಸಿಕ ವಿಜ್ಞಾನ ಮತ್ತು ವಿಶ್ಲೇಷಣಾತ್ಮಕ ವಿಭಾಗವಾಗಿದೆ.
ನಾಣ್ಯಶಾಸ್ತ್ರದ ರಾಜಕೀಯ ಅಧ್ಯಯನ
ರಾಜಕೀಯ ಇತಿಹಾಸದ ದೃಷ್ಟಿಯಿಂದ ನಾಣ್ಯಗಳು ಅತ್ಯಂತ ಮುಖ್ಯ. ಸಾಹಿತ್ಯದಲ್ಲಿ ಹೆಸರು ಕಾಣಿಸದ ಕೆಲವು ರಾಜರ ಮಾಹಿತಿಯನ್ನು ನಾಣ್ಯಗಳಿಂದಲೇ ತಿಳಿದುಕೊಳ್ಳಬಹುದು. “ಮಹಾರಾಜಾಧಿರಾಜ” ಅಥವಾ “ರಾಜಾಧಿರಾಜ” ಮುಂತಾದ ಪದವಿಗಳು ರಾಜನ ಅಧಿಕಾರ ಮತ್ತು ಮಹತ್ವಾಕಾಂಕ್ಷೆಯನ್ನು ತೋರಿಸುತ್ತವೆ. ಕೆಲವು ನಾಣ್ಯಗಳಲ್ಲಿ ರಾಜನ ಮುಖಚಿತ್ರವೂ ಇರುತ್ತದೆ. ಇದು ರಾಜಕೀಯ ಪ್ರಚಾರದ ಒಂದು ರೂಪವಾಗಿರಬಹುದು. ಹೀಗಾಗಿ ನಾಣ್ಯಗಳು ವಂಶಾವಳಿ ಮತ್ತು ಕಾಲಕ್ರಮವನ್ನು ನಿರ್ಧರಿಸಲು ಸಹಾಯ ಮಾಡುತ್ತವೆ.
ನಾಣ್ಯಶಾಸ್ತ್ರದ ಆರ್ಥಿಕ ಅಧ್ಯಯನ
ಆರ್ಥಿಕ ಇತಿಹಾಸದ ಅಧ್ಯಯನದಲ್ಲಿಯೂ ನಾಣ್ಯಗಳು ಬಹುಮುಖ್ಯ. ನಾಣ್ಯಗಳಲ್ಲಿ ಬಳಸಿದ ಲೋಹ — ಬಂಗಾರ, ಬೆಳ್ಳಿ, ತಾಮ್ರ ಅಥವಾ ಮಿಶ್ರಲೋಹ — ರಾಜ್ಯದ ಆರ್ಥಿಕ ಸ್ಥಿತಿಯನ್ನು ತೋರಿಸುತ್ತದೆ. ಹೆಚ್ಚಿನ ಬಂಗಾರದ ನಾಣ್ಯಗಳು ಸಮೃದ್ಧಿಯನ್ನು ಸೂಚಿಸಬಹುದು. ಕಡಿಮೆ ಗುಣಮಟ್ಟದ ಅಥವಾ ಮಿಶ್ರಿತ ನಾಣ್ಯಗಳು ಆರ್ಥಿಕ ಸಂಕಷ್ಟವನ್ನು ಸೂಚಿಸಬಹುದು. ಒಂದು ಪ್ರದೇಶದಲ್ಲಿ ಬೇರೆ ದೇಶಗಳ ನಾಣ್ಯಗಳು ದೊರೆತರೆ, ಅದು ವ್ಯಾಪಾರ ಸಂಬಂಧಗಳ ಸಾಕ್ಷಿಯಾಗಿದೆ. ಉದಾಹರಣೆಗೆ, ದಕ್ಷಿಣ ಭಾರತದಲ್ಲಿ ರೋಮನ್ ನಾಣ್ಯಗಳ ಪತ್ತೆ ಇಂಡೋ-ರೋಮನ್ ವ್ಯಾಪಾರದ ಸಾಕ್ಷಿಯಾಗಿದೆ.
ನಾಣ್ಯಶಾಸ್ತ್ರದ ಧರ್ಮ ಮತ್ತು ಸಾಂಸ್ಕೃತಿಕ ಅಧ್ಯಯನ
ಧರ್ಮ ಮತ್ತು ಸಂಸ್ಕೃತಿಯು ಸಹ ನಾಣ್ಯಗಳಲ್ಲಿ ಸ್ಪಷ್ಟವಾಗಿರುತ್ತದೆ. ಅನೇಕ ನಾಣ್ಯಗಳಲ್ಲಿ ದೇವರು-ದೇವತೆಗಳ ಚಿತ್ರಗಳು, ಪವಿತ್ರ ಚಿಹ್ನೆಗಳು ಅಥವಾ ಧಾರ್ಮಿಕ ವಾಕ್ಯಗಳು ಕಾಣಿಸುತ್ತವೆ. ಇದರಿಂದ ಆ ಕಾಲದ ಧಾರ್ಮಿಕ ನಂಬಿಕೆಗಳು ಮತ್ತು ಸಾಂಸ್ಕೃತಿಕ ವೈವಿಧ್ಯತೆ ತಿಳಿಯುತ್ತದೆ. ಕೆಲವು ರಾಜರು ವಿವಿಧ ಧರ್ಮಗಳ ಚಿಹ್ನೆಗಳನ್ನು ಬಳಸಿರುವುದು ಧಾರ್ಮಿಕ ಸಹಿಷ್ಣುತೆಯನ್ನು ಸೂಚಿಸುತ್ತದೆ.
ನಾಣ್ಯಶಾಸ್ತ್ರದ ಕಲಾ ಅಧ್ಯಯನ
ಕಲೆ ಮತ್ತು ಚಿಹ್ನಾಶಾಸ್ತ್ರದ ದೃಷ್ಟಿಯಿಂದಲೂ ನಾಣ್ಯಗಳು ಅಮೂಲ್ಯ. ಅವು ಸಣ್ಣ ಗಾತ್ರದಿದ್ದರೂ ಕಲಾಕೃತಿಗಳಂತಿವೆ. ಉಡುಪು, ಆಭರಣ, ಆಯುಧ, ಸಂಗೀತ ವಾದ್ಯಗಳು, ಪ್ರಾಣಿಗಳು ಮತ್ತು ಕಟ್ಟಡಗಳ ಚಿತ್ರಣಗಳು ನಾಣ್ಯಗಳಲ್ಲಿ ಕಾಣಬಹುದು. ಇದರಿಂದ ಆ ಕಾಲದ ಜೀವನಶೈಲಿ ಮತ್ತು ಕಲಾತ್ಮಕ ರುಚಿ ತಿಳಿಯುತ್ತದೆ.
ನಾಣ್ಯಶಾಸ್ತ್ರದಿಂದ ಕಾಲಗಣನೆಯ ಅಧ್ಯಯನ
ಇತಿಹಾಸದ ಕಾಲಕ್ರಮವನ್ನು ನಿಖರವಾಗಿ ನಿರ್ಧರಿಸಲು ನಾಣ್ಯಗಳು ಬಹಳ ಸಹಾಯಕ. ಕೆಲವು ನಾಣ್ಯಗಳಲ್ಲಿ ಆಳ್ವಿಕೆಯ ವರ್ಷಗಳು ಅಥವಾ ದಿನಾಂಕಗಳು ಉಲ್ಲೇಖವಾಗಿರುತ್ತವೆ. ಪುರಾತತ್ವ ಉತ್ಕನನಗಳಲ್ಲಿ ದೊರೆಯುವ ನಾಣ್ಯಗಳು ಆ ಪದರದ ಕಾಲವನ್ನು ನಿರ್ಧರಿಸಲು ಸಹಾಯ ಮಾಡುತ್ತವೆ. ಹೀಗಾಗಿ ನಾಣ್ಯಗಳು ಇತಿಹಾಸದ ದಿನಾಂಕ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಆಧುನಿಕ ನಾಣ್ಯಶಾಸ್ತ್ರವು ವೈಜ್ಞಾನಿಕ ವಿಧಾನಗಳನ್ನು ಬಳಸುತ್ತದೆ. ಲೋಹ ಸಂಯೋಜನೆಯ ಪರೀಕ್ಷೆ, ಡಿಜಿಟಲ್ ಚಿತ್ರ ವಿಶ್ಲೇಷಣೆ, ಮತ್ತು ವರ್ಗೀಕರಣ ವಿಧಾನಗಳು ಇತ್ಯಾದಿ ಬಳಕೆಯಲ್ಲಿವೆ. ಇದು ಇತಿಹಾಸ, ಪುರಾತತ್ವ, ಆರ್ಥಿಕಶಾಸ್ತ್ರ ಮತ್ತು ಕಲಾ ಅಧ್ಯಯನಗಳೊಂದಿಗೆ ನಿಕಟವಾಗಿ ಸಂಬಂಧ ಹೊಂದಿದೆ.
ಒಟ್ಟಿನಲ್ಲಿ, ನಾಣ್ಯಶಾಸ್ತ್ರವೆಂದರೆ ಹಣದ ಮೂಲಕ ಇತಿಹಾಸವನ್ನು ತಿಳಿಯುವ ಅಧ್ಯಯನ. ನಾಣ್ಯಗಳು ಸಣ್ಣವಾಗಿದ್ದರೂ ಅವುಗಳಲ್ಲಿ ರಾಜಕೀಯ ಶಕ್ತಿ, ಆರ್ಥಿಕ ಪರಿಸ್ಥಿತಿ, ಧಾರ್ಮಿಕ ನಂಬಿಕೆ ಮತ್ತು ಕಲಾತ್ಮಕ ಅಭಿವ್ಯಕ್ತಿಯ ಕಥೆಗಳು ಅಡಗಿವೆ. ಇತಿಹಾಸ ಮತ್ತು ಪುರಾತತ್ವ ವಿದ್ಯಾರ್ಥಿಗಳಿಗೆ ನಾಣ್ಯಶಾಸ್ತ್ರ ಅತ್ಯಗತ್ಯವಾದ ಸಹಾಯಕ ಶಾಸ್ತ್ರವಾಗಿದೆ. ಸಣ್ಣ ನಾಣ್ಯಗಳಲ್ಲಿಯೇ ದೊಡ್ಡ ಇತಿಹಾಸದ ಕಥೆಗಳು ಅಡಗಿವೆ ಎಂಬುದು ನಿಜ.
ಭಾರತೀಯ ನಾಣ್ಯ ಪರಂಪರೆ
ನಾಣ್ಯಗಳು ಮಾನವನ ವ್ಯಾಪಾರ, ವಾಣಿಜ್ಯದ ಅತೀ ಮುಖ್ಯ ಸಂಕೇತ, ಹಣವಿಲ್ಲದೇ ಯಾವುದೇ ತೆರನಾದ ಆರ್ಥಿಕ ವ್ಯವಹಾರವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಭಾರತೀಯ ಇತಿಹಾಸದಲ್ಲಿ ನಾಣ್ಯಶಾಸ್ತ್ರಕ್ಕೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಆರ್ಥಿಕ ಸ್ಥಿತಿಗತಿ, ಸಾಂಸ್ಕೃತಿಕ ಬಂಧುತ್ವ, ಇತಿಹಾಸ ಭವ್ಯತೆಯನ್ನು ಮುಂದಿನ ಪೀಳಿಗೆಗೆ ಕಟ್ಟಿಕೊಡುವ ಕೆಲಸವನ್ನು ನಾಣ್ಯಶಾಸ್ತ್ರ ಮಾಡುತ್ತಾ ಬಂದಿದೆ. ಅಷ್ಟೇ ಅಲ್ಲ ಮರೆತು ಹೋದ ಸಾಮ್ರಾಜ್ಯಗಳನ್ನು ಬೆಳಕಿಗೆ ತಂದ ಕೀರ್ತಿ ನಾಣ್ಯ ಶಾಸ್ತ್ರಕ್ಕೆ ಸಲ್ಲುತ್ತದೆ. ಮೇಲ್ನೋಟಕ್ಕೆ ನಾಣ್ಯ ಲೋಹದ ಚೂರಾಗಿ ಕಾಣುತ್ತದೆ. ಆದರೆ ಅದು ಲೋಹದ ಚೂರಲ್ಲ, ಜೀವಂತ ಸಮಾಜದ ಆರ್ಥಿಕ ವ್ಯವಸ್ಥೆಯ ಅವಿನಾಭಾವ ಸಂಬಂಧದ ಉಸಿರು. ಸಿರಿಸಂಪತ್ತಿನ ಸಾಕ್ಷಿ, ರಾಜಪ್ರಭುತ್ವದ ದಾಖಲೆ, ಧರ್ಮ, ಸಾಹಿತ್ಯ, ಕಲೆ, ಮತ್ತು ನಮ್ಮ ಬದುಕಿನ ನೈಜಾಂಶಗಳ ಪ್ರತಿಬಿಂಬ, ಇತಿಹಾಸಕಾರನ ಮೌಖಿಕ ಆಕಾರ, ನಾಡಿನ ಅಭಿವೃದ್ಧಿಯ ಸಂಕೇತ, ಆರ್ಥಿಕ ವಲಯದ ಸಮಷ್ಟಿ ಚಾಲಿತ ಚಿಹ್ನೆ.
ನಾಣ್ಯಗಳ ತಯಾರಿಕಾ ತಂತ್ರಗಾರಿಕೆ, ಆಕಾರ, ಸೂಕ್ಷ್ಮತೆ, ತೂಕ ಹಾಗೂ ಗಾತ್ರದ ನಿರ್ಧಿಷ್ಟತೆ, ವಿಧಾನ ವೈವಿದ್ಯತೆ ಇತ್ಯಾದಿ ಭಾರತೀಯ ನಾಣ್ಯಗಳಲ್ಲಿ ಕಂಡುಬರುತ್ತದೆ. ಭಾರತೀಯ ನಾಣ್ಯ ಪರಂಪರೆಯ ಮಾಹಿತಿಗಳು ಪ್ರಾಚೀನ ಕಾಲದಿಂದ ಇಲ್ಲಿಯವರೆಗೆ ಆಯಾ ಸಮಾಜದ ಹಾಗೂ ಪ್ರಭುಗಳ ವ್ಯವಹಾರ ಮನೋಭಾವವನ್ನು ಬಿಂಬಿಸುತ್ತಾ ಬಂದಿವೆ. ಇತಿಹಾಸದ ಮಾಹಿತಿಗಳ ಕಣಜ ಎಂದೇ ಖ್ಯಾತವಾಗಿರುವ ನಾಣ್ಯಗಳು ಪ್ರಾಚೀನ ಕಾಲದಿಂದಲೂ ರಾಜಕೀಯ, ಆರ್ಥಿಕ, ಧಾರ್ಮಿಕ ಮಾಹಿತಿಗಳ ಸ್ಪಷ್ಟಿಕರಣದೊಂದಿಗೆ ಕಾಲಗಣನೆ, ಭಾಷೆ, ಕಲಾಕೌಶಲ್ಯತೆಯ ವಿವಿಧ ಆಯಾಮಗಳು, ಕಡಲಾಚೆ ನಾಡುಗಳೊಂದಿಗೆ ಭಾರತ ಹೊಂದಿದ್ದ ವಾಣಿಜ್ಯ ಸಂಬಂಧಗಳು, ಭಾರತದ ಮೇಲೆ ವಿದೇಶೀ ದಾಳಿಗಳು ಇನ್ನು ಮುಂತಾದ ವಿಷಯಗಳನ್ನು ಇತಿಹಾಸದ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವುದರ ಜೊತೆಗೆ ಸಾಂಸ್ಕೃತಿಕ ಬೃಹತ್ ಭಾರತದ ಹೆಜ್ಜೆ ಗುರುತುಗಳನ್ನು ನಮ್ಮ ಮುಂದೆ ಮೂಡಿಸುವಲ್ಲಿ ನಾಣ್ಯಶಾಸ್ತ್ರವು ಬಹುಪಾಲು ಸ್ಥಾನವನ್ನು ಪಡೆದುಕೊಂಡಿದೆ.
ಭಾರತೀಯ ನಾಣ್ಯಗಳ ಉಗಮ:
ಭಾರತದಲ್ಲಿ ನಾಣ್ಯದ ಉಗಮದ ಬಗ್ಗೆ ಸ್ಪಷ್ಟ ಮಾಹಿತಿಗಳು ಇಂದಿನವರೆಗೂ ಲಭ್ಯವಿಲ್ಲ. ಸಿಂಧೂ ನದಿ ನಾಗರೀಕತೆಯಲ್ಲಿ ನಡೆದಿರುವ ಉಲ್ಲೇಖಗಳಲ್ಲಿ ಅದರಲ್ಲಿಯೂ ಮುಖ್ಯವಾಗಿ ಹರಪ್ಪ, ಮಹೇಂಜೋದಾರೋ, ಲೋಥಾಲ್ಗಳಲ್ಲಿ ನಾಣ್ಯಕ್ಕೆ ಸರಿಹೊಂದುವ ಅಥವಾ ನಾಣ್ಯ ಎಂದೇ ಗುರುತಿಸುವ ಲೋಹದ ವಸ್ತುಗಳು ಇದುವರೆಗೂ ದೊರೆತಿಲ್ಲ. ಅನೇಕ ವಿದ್ವಾಂಸರು ತೂಕದ ಭಟ್ಟುಗಳನ್ನು ಗುರುತಿಸಿದ್ದಾರೆ. ಆದರೆ ನಾಣ್ಯಗಳನ್ನು ಗುರುತಿಸಿಲ್ಲ. ಆದರೆ ಮಹೇಂಜೋದಾರೋದಲ್ಲಿ ದೊರಕಿದ ಕೆಲವು ಬೆಳ್ಳಿ ಚೂರುಗಳು ನಾಣ್ಯಗಳೆಂದು ಕೆಲವು ಇತಿಹಾಸಕಾರರ ಅಭಿಪ್ರಾಯ. ಈ ಚೂರುಗಳು ಚೌಕ, ಆಯತಾಕಾರ ಮತ್ತು ವೃತ್ತಾಕಾರದಲ್ಲಿ ಇದ್ದವು. ಇದನ್ನು ಆಳವಾಗಿ ಅಧ್ಯಯನವನ್ನು ಮಾಡಿದ ವಿಖ್ಯಾತ ಗಣಿತ ಶಾಸ್ತ್ರಜ್ಞ ಡಿ.ಡಿ. ಕೌಶಾಂಬಿಯವರು ಇವುಗಳು ನಾಣ್ಯಗಳೆಂದು ಪ್ರತಿಪಾದಿಸಿದರು. ಸಿಂಧೂ ನದಿ ನಾಗರೀಕತೆ ನಾಶವಾಗುವುದಕ್ಕೆ ಮುಂಚಿತವಾಗಿ ಅಂತಿಮ ಕಾಲದಲ್ಲಿ ಈ ನಾಣ್ಯಗಳು ತಯಾರಿಸಲಾಗಿದೆ ಎಂದು ತಿಳಿಯಬಹುದು. ಕಾರಣ ಈ ನಾಣ್ಯಗಳು ಅನಂತರದ ಕಾಲದಲ್ಲಿ ಬಳಕೆಯಲ್ಲಿ ಇದ್ದ ಪಂಚ್ ಚಿಹ್ನೆಯ ನಾಣ್ಯಗಳಿಗೆ ಮಾದರಿಯನ್ನು ಒದಗಿಸಿದವು. ಆದುದರಿಂದ ಅತ್ಯಂತ ಪ್ರಾಥಮಿಕ ಹಂತದ ನಾಣ್ಯಗಳು ಸಿಂಧೂ ಸಂಸ್ಕೃತಿ ಕಾಲದಲ್ಲಿ ಚಲಾವಣೆಯಲ್ಲಿ ಇದ್ದವು ಎಂಬುದು ಕೇವಲ ಸಿದ್ಧಾಂತವಾಗಿ ಉಳಿಯುತ್ತದೆ.
ವೇದಗಳ ಕಾಲದಲ್ಲಿ ನಾಣ್ಯಗಳು
ಋಗ್ವೇದದ ಕಾಲದಲ್ಲಿ (ಕ್ರಿ.ಪೂ: 1500) ಹಸುಗಳನ್ನು ವಸ್ತು ವಿನಿಮಯಕ್ಕಾಗಿ ಬಳಸುತ್ತಿದ್ದರು. ಜನರ ಅಂತಸ್ತನ್ನು ಅಳೆಯುವಾಗ ಸಾವಿರ ಗೋವುಗಳ ಒಡೆಯ, ಐದು ನೂರು ಗೋವುಗಳ ಒಡೆಯ ಮುಂತಾದ ಪದಗುಚ್ಚಗಳನ್ನು ಕಾಣುತ್ತೇವೆ. ಇದರ ಜೊತೆಗೆ ನಿಷ್ಕ ಎಂಬ ಪದಗಳ ಬಳಕೆಯನ್ನು ಕಾಣುತ್ತೇವೆ. ಇದನ್ನು ಆರ್ಯರು ನಾಣ್ಯದ ಅರ್ಥದಲ್ಲಿ ಬಳಸಿದ್ದಾರೆ. ಉದಾಹರಣೆಗೆ ಎರಡು ನಿಷ್ಕ ದಾನವಾಗಿ ನೀಡಿದರು ಎನ್ನುವ ಪದ ಪ್ರಯೋಗ ನಿಷ್ಕ ಎಂಬುದು ನಾಣ್ಯ ಎಂದೇ ಅರ್ಥವನ್ನು ಕೊಡುತ್ತದೆ. ಕೆಲವು ವಿದ್ವಾಂಸರು ಹಾರ ಎಂಬುದಾಗಿಯೂ ವಾದಿಸಿದ್ದಾರೆ.
ಮುನಿ ಕಕ್ಷೀವಾತನಿಗೆ ಭವ್ಯ ಎಂಬ ದೊರೆಯು ಹತ್ತು ನಿಷ್ಕಗಳನ್ನು ಕೊಟ್ಟನು. ಒಬ್ಬ ಕವಿಗೆ ನೂರು ನಿಷ್ಕಗಳನ್ನು ನೀಡಲಾಯಿತು. ಆನಂತರದ ಕಾಲದ ಸಾಹಿತ್ಯಿಕ ಆಧಾರಗಳಲ್ಲಿ ನಿಷ್ಕ ಎಂಬ ಪದ ಚಿನ್ನದ ನಾಣ್ಯ ಎಂದು ಕರೆದಿರುವ ಅಂಶ ಗಮನಾರ್ಹವಾದದು. ಆದುದರಿಂದ ಭಾರತೀಯ ನಾಣ್ಯ ಶಾಸ್ತ್ರದ ಉಗಮ ಋಗ್ವೇದ ಕಾಲದಲ್ಲಿ ಆಗಿತ್ತು ಎಂಬುದು ಇವುಗಳಿಂದ ವ್ಯಕ್ತವಾಗುತ್ತದೆ. ಆನಂತರದ ವೇದಗಳಲ್ಲಿ ನಾಣ್ಯಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ದೊರಕುತ್ತವೆ. ನಿಷ್ಕ ಎನ್ನುವ ಪದದ ಜೊತೆಗೆ ಸ್ವರ್ಣ, ಶತಮಾನ, ಪಾದ ಎಂಬ ಪದಗಳು ನಾಣ್ಯದ ಅರ್ಥದಲ್ಲಿ ಬಳಕೆಯಾಗಿರುವುದು ಕಂಡು ಬರುತ್ತದೆ. ಶತಮಾನ, ಸ್ವರ್ಣ ಮತ್ತು ನಿಷ್ಕ ನಾಣ್ಯಗಳ ನಾಲ್ಕನೆಯ ಒಂದು ಭಾಗಕ್ಕೆ ಪಾದ ಎಂದು ಹೆಸರಿದ್ದಿತು.
ವೇದಗಳ ನಂತರದ ಕಾಲದಲ್ಲಿ ಕ್ರಿ.ಪೂ. 5,4ನೇಯ ಶತಮಾನಗಳಲ್ಲಿ ನಾಣ್ಯಗಳು ಖಚಿತವಾಗಿ ಬಳಕೆಯಲ್ಲಿ ಇದ್ದವು ಎಂದು ಬೌದ್ಧ ಜಾತಕ ಕಥೆಗಳು, ಪಾಣಿನಿಯ ವ್ಯಾಕರಣ ಗ್ರಂಥ, ಅಷ್ಟಧ್ಯಾಯಿಗಳು ಉಲ್ಲೇಖಿಸುತ್ತದೆ.
ಕ್ರಿಸ್ತ ಪೂರ್ವ ೮ನೇ ಶತಮಾನದಲ್ಲಿ ಪಾಣಿನಿ ನಾಣ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾನೆ. ಚಿನ್ನ, ಬೆಳ್ಳಿ, ಮತ್ತು ತಾಮ್ರದ ನಾಣ್ಯಗಳನ್ನು ಉಲ್ಲೇಖಿಸಿದ್ದಾನೆ. ಪ್ರಾಚೀನ ಕಾಲದಲ್ಲಿ ನಾಣ್ಯಗಳ ಬಗ್ಗೆ ಅತೀ ಹೆಚ್ಚಿನ ಮಾಹಿತಿ ನೀಡಿದ ಗ್ರಂಥ ಅಷ್ಟದ್ಯಾಯಿ, ನೂರು ನಿಷ್ಕಗಳನ್ನು ಹೊಂದಿದ್ದವನನ್ನು ʻನೈಷ್ಕ ಕತಿಕ’ ಎಂದು ಕರೆಯಲಾಗಿದೆ. ಇವುಗಳ ಜೊತೆಗೆ ಶತಮಾನ ಕತಿಕ, ಎನ್ನುವ ನಾಣ್ಯ ಸೂಚಕ ಪದಗಳನ್ನು ಕಾಣಬಹುದು. ಸಾಣ ಎನ್ನುವುದು ಮತ್ತೊಂದು ನಾಣ್ಯ ಇದು ಶತಮಾನ ನಾಣ್ಯದ ಎಂಟನೆಯ ಒಂದು ಭಾಗದ ನಾಣ್ಯ. ಒಂದು, ಒಂದೂವರೆ, ಎರಡು ಸಾಣ ನಾಣ್ಯಗಳ ಉಲ್ಲೇಖವು ಅಷ್ಟದ್ಯಾಯಿ ಗ್ರಂಥದಲ್ಲಿ ಕಾಣಬಹುದು. ಪಾಣಿನಿ ಹೆಸರಿಸಿರುವ ಇನ್ನೆರೆಡು ನಾಣ್ಯಗಳೆಂದರೆ ಮಾಷ, ಮತ್ತು ಕಾರ್ಷಾಪಣ ಎಂಬ ನಾಣ್ಯಗಳು ಜನಾನುರಾಗಿಯಾಗಿದ್ದವು.
ಭಾರತೀಯ ನಾಣ್ಯಗಳ ವಿಕಾಸದಲ್ಲಿ ಕೌಟಿಲ್ಯನ ಅರ್ಥಶಾಸ್ತ್ರವು ಹೆಚ್ಚಿನ ಮಾಹಿತಿ ನೀಡುತ್ತವೆ. ಕ್ರಿಸ್ತ ಪೂರ್ವ ನಾಲ್ಕನೇ ಶತಮಾನದ ಈ ಗ್ರಂಥದಲ್ಲಿ ಒಂದು ಇಡೀ ಅದ್ಯಾಯ ಟಂಕಶಾಲೆಯ ಬಗ್ಗೆ ಮಾಹಿತಿ ನೀಡುತ್ತದೆ. ಲಕ್ಷಣಾಧ್ಯಕ್ಷ ಎಂಬುವವನ ನೇತ್ರತ್ವದಲ್ಲಿ ಟಂಕಶಾಲೆಯ ಕಾರ್ಯಗಳು ನಡೆಯುತ್ತಿತ್ತು. ಬೆಳ್ಳಿ, ತಾಮ್ರದ ನಾಣ್ಯಗಳ ಉಲ್ಲೇಖ ರೂಪ್ಯ, ರೂಪ, ತಾಮ್ರ ಮುಂತಾದ ಪದಗಳ ಉಲ್ಲೇಖವಿದೆ. ಪಣ, ಅರ್ದಪಣ, ಪಾದ ಮತ್ತು ಅಷ್ಟ ಭಾಗ, ಎನ್ನುವುದು ಬೆಳ್ಳಿಯ ನಾಣ್ಯಗಳು. ಮಾಷಕ. ಅರ್ಧಮಾಷಕ, ಕಾಣಿಕೆ, ಎನ್ನುವುದು ತಾಮ್ರದ ನಾಣ್ಯಗಳು.
ನಾಣ್ಯಗಳನ್ನು ಟಂಕಿಸುವುದು ಸರ್ಕಾರದ ಕೆಲಸ, ನಾಣ್ಯ ನಿಯಂತ್ರಣ ಸರ್ಕಾರದ ಪೂರ್ಣ ವಶದಲ್ಲಿ ಇತ್ತು ಎಂಬುದು ತಿಳಿಯುತ್ತದೆ.
ಆದರೆ ಕೆಲವು. ಪಾಶ್ಚಿಮಾತ್ಯ ವಿದ್ವಾಂಸರು ಅದರಲ್ಲಿಯೂ ಮುಖ್ಯವಾಗಿ ಹೆಚ್.ಹೆಚ್.ವಿಲ್ಸನ್ ಎಂಬುವವನು ಪ್ರಾಚೀನ ಭಾರತೀಯರು ಬ್ಯಾಕ್ಟ್ರಿಯನ್ ಜನಗಳಿಂದ ನಾಣ್ಯ ಕಲೆಯನ್ನು ಕಲಿತರು ಎಂದು ಅಭಿಪ್ರಾಯಪಟ್ಟಿದ್ದಾರೆ. ರೋಮಿನೊಡನೆ ಹೊಂದಿದ್ದ ವ್ಯಾಪಾರ ಸಂಬಂಧದಿಂದ ನಾಣ್ಯಗಳ ವಿಷಯದಲ್ಲಿ ಹೆಚ್ಚಿನ ಮಾಹಿತಿಯನ್ನು ಭಾರತೀಯರು ಪಡೆದರು ಎಂದಿದ್ದಾರೆ.
ಜೇಮ್ಸ್ ಪ್ರಿಸೈಟ್ ಎಂಬುವವನ ಪ್ರಕಾರ ಪ್ರಾಚೀನ ಭಾರತೀಯರು ಗ್ರೀಕರಿಂದ ನಾಣ್ಯಗಳನ್ನು ಟಂಕಿಸುವ ವಿಧಾನ ಕಲಿತರು ಎಂದಿದ್ದಾನೆ. ಆದರೆ ಗ್ರೀಕರಿಗಿಂತ ಮುಂಚೆಯೇ ಭಾರತೀಯರು ನಾಣ್ಯಗಳನ್ನು ಟಂಕಿಸುವ ವಿಧಾನ ಕಲಿತಿದ್ದರು ಎನ್ನುವುದಕ್ಕೆ ಪಂಚ್ ಚಿಹ್ನೆಯ ನಾಣ್ಯಗಳೇ ಸಾಕ್ಷಿ. ಕಟ್ಟೀಸ್, ಎಂಬ ಗ್ರೀಕ್ ಇತಿಹಾಸಕಾರ ನೀಡಿರುವ ಮಾಹಿತಿಯ ಪ್ರಕಾರ ತಕ್ಷಶಿಲೆಯ ದೊರೆಯು ಅಲೆಗ್ಸಾಂಡರನಿಗೆ ಉಡುಗೊರೆಯಾಗಿ ಟ್ಯಾಲೆಂಟ್ ಬೆಳ್ಳಿಯ ನಾಣ್ಯಗಳನ್ನು ನೀಡಿದ್ದನು ಎಂಬ ಉಲ್ಲೇಖವನ್ನು ಗಮನಿಸಿದಾಗ ಗ್ರೀಕ್ ನಾಣ್ಯಗಳು ಭಾರತೀಯ ನಾಣ್ಯಗಳ ಮೇಲೆ ತಮ್ಮ ಪ್ರಭಾವ ಬೀರಿರಬಹುದೇ ಹೊರತು ಅವುಗಳ ಉಗಮಕ್ಕೆ ಕಾರಣವಲ್ಲ. ಗ್ರೀಕರ ದಂಡಯಾತ್ರೆಗೆ ಮೊದಲೇ ಭಾರತೀಯರು ನಾಣ್ಯಗಳನ್ನು ಬಳಸುತ್ತಿದ್ದರು. ಇದಕ್ಕೆ ಸಾಕ್ಷಿ ಕ್ರಿ.ಪೂ. 4ನೇ ಶತಮಾನಕ್ಕೆ ಸೇರಿದ ಅವಶೇಷಗಳನ್ನು ತಕ್ಷಶಿಲೆಯಲ್ಲಿ ಉತ್ಕನನ ಮಾಡಿದಾಗ 1055 ಬೆಳ್ಳಿಯ ಪಂಚ್ ಚಿಹ್ನೆಯ ನಾಣ್ಯಗಳು ದೊರೆತಿವೆ. ಈ ಎಲ್ಲಾ ದಾಖಲೆಗಳಿಂದ ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿ ಭಾರತದಲ್ಲಿ ನಾಣ್ಯ ಚಲಾವಣೆ ಇದ್ದಿತೆಂದು ಖಚಿತಪಡಿಸಬಹುದು.
ನಾಣ್ಯ ದೊರೆತ ವಿಧಾನ
ಭಾರತದಲ್ಲಿ ಮೂರು ವಿಧಗಳಲ್ಲಿ ಪ್ರಾಚೀನ ನಾಣ್ಯಗಳು ದೊರಕುತ್ತವೆ.
1) ಪುರಾತತ್ವ ಉತ್ಖನನಗಳಲ್ಲಿ
2) ನಿರ್ಮಾಣ ಚಟುವಟಿಕೆಗಳಲ್ಲಿ
3) ನಾಣ್ಯ ಸಂಗ್ರಹಕರ ಮೂಲಕ
1) ಪುರಾತತ್ವ ಉತ್ಖನನಗಳಲ್ಲಿ:
ಪುರಾತತ್ವ ಉತ್ಖನನಗಳಲ್ಲಿ ಪ್ರಾಚೀನ ನಾಣ್ಯಗಳು ಹೇರಳವಾಗಿ ದೊರೆತಿವೆ. ಚಂದ್ರವಳ್ಳಿಯಲ್ಲಿ ರೋಮನ್, ಶಾತವಾಹನ, ಚುಟು, ಮರಾಠಿ, ನಾಣ್ಯಗಳು ಲಭ್ಯವಾಗಿವೆ. ಬನವಾಸಿ, ಸನ್ನತಿ, ವಡ್ಡಗಾಂ, ಮಾಧವಪುರ, ತಲಕಾಡು, ಉಜ್ಜಯಿನಿ, ಪೆದ್ದವಗಿ, ವಡ್ಡಮಾನುಗಳಲ್ಲಿ ತಾಮ್ರದ ನಾಣ್ಯಗಳು ದೊರಕಿವೆ.
2) ನಿರ್ಮಾಣ ಚಟುವಟಿಕೆಗಳಲ್ಲಿ:
1965 ರಲ್ಲಿ ಬೆಂಗಳೂರಿನ ಹೆಚ್.ಎ.ಎಲ್. ವಿಮಾನ ನಿಲ್ದಾಣಕ್ಕಾಗಿ ಭೂಮಿ ಅಗೆಯುವಾಗ 250 ರೋಮನ್ ಬೆಳ್ಳಿಯ ನಾಣ್ಯಗಳು ದೊರಕಿವೆ. 1891 ರಲ್ಲಿ ಬೆಂಗಳೂರಿನ ಯಶವಂತಪುರದಲ್ಲಿ ರೈಲ್ವೆ ಹಳಿಯನ್ನು ಹಾಕುವ ಸಲುವಾಗಿ ಭೂಮಿಯನ್ನು ಅಗೆಯುವಾಗ 63 ರೋಮನ್ ಬೆಳ್ಳಿಯ ನಾಣ್ಯಗಳು ದೊರಕಿವೆ. ರಾಯಚೂರು ಜಿಲ್ಲೆಯ ಚಿಕ್ಕ ಸಿಂಧಗಿಯಲ್ಲಿ ತಾಮ್ರದ ಪಾತ್ರೆಯೊಂದರಲ್ಲಿ 5534 ಪಂಚ್ ಚಿಹ್ನೆಯ ನಾಣ್ಯಗಳು ದೊರಕಿದ್ದು, ಈ ನಾಣ್ಯಗಳ ಮೇಲೆ ಚಿಂತರಸ ಎಂಬ ಬ್ರಾಹ್ಮಿ ಲಿಪಿಯ ಬರಹವಿದೆ. ಕರ್ನಾಟಕದಲ್ಲಿ ಇದುವರೆಗೆ ದೊರೆತಿರುವ ಅತೀ ಹೆಚ್ಚಿನ ನಾಣ್ಯಗಳ ರಾಶಿ ಇದು. 1913 ರಲ್ಲಿ ಆಂಧ್ರಪ್ರದೇಶದ ನಲ್ಲೂರು ಜಿಲ್ಲೆಯ ಕಡೂರು ಎಂಬಲ್ಲಿ 15462 ನಾಣ್ಯಗಳ ರಾಶಿ ದೊರೆಯಿತು. ಇವುಗಳು ಚಿನ್ನದ ನಾಣ್ಯಗಳಾಗಿದ್ದು, ನಮ್ಮ ದೇಶದಲ್ಲಿ ದೊರೆತಿರುವ ಅತೀ ಹೆಚ್ಚು ಚಿನ್ನದ ನಾಣ್ಯಗಳ ರಾಶಿ ಎಂಬ ದಾಖಲೆ ಇದಾಗಿತ್ತು. ಆಂಧ್ರ ಪ್ರದೇಶದ ಅಮರಾವತಿಯಲ್ಲಿ 7668 ಪಂಚ್ ಮಾರ್ಕಿನ ತಾಮ್ರದ ನಾಣ್ಯಗಳು, ಭಾರತದ ಬಯಾನ ಎಂಬಲ್ಲಿ 1821 ಚಿನ್ನದ ಗುಪ್ತರ ಕಾಲದ ನಾಣ್ಯಗಳು ಲಭ್ಯವಾಯಿತು.
3) ನಾಣ್ಯ ಸಂಗ್ರಹಕರ ಮೂಲಕ :
ಕೆಲವು ಆಸಕ್ತ ಸಂಗ್ರಹಕಾರರು ನಾಣ್ಯಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕೆ ಇಡುತ್ತಾರೆ. ಈ ರೀತಿಯಲ್ಲಿ ಸಾವಿರಾರು ನಾಣ್ಯಗಳು ಸಂಗ್ರಹಿಸಲ್ಪಟ್ಟಿತು. ನಮ್ಮ ದೇಶದ ಪ್ರಾಚೀನ ಬೇವಾಲಯಗಳಾದ ತಿರುಮಲೈ, ಕಾಂಚಿ, ಮದುರೈ, ಗುರುವಾಯೂರು ಸೋಮನಾಥ ಇತ್ತೀಚೆಗೆ ಕೇರಳದ ತಿರುವನಂತಪುರದ ಪದ್ಮನಾಭ ದೇವಾಲಯದಲ್ಲಿ ಪ್ರಾಚೀನ ನಾಣ್ಯಗಳ ರಾಶಿ ದೊರೆತಿರುವುದು ಕಾಣಬಹುದು. ಲಂಡನ್ನಿನ ಬ್ರಿಟಿಷ್ ಮ್ಯೂಸಿಯಂ, ದೆಹಲಿಯ ನ್ಯಾಷನಲ್ ಮ್ಯೂಸಿಯಂ, ಕಲ್ಕತ್ತ, ಚೆನ್ನೈ, ಬೆಂಗಳೂರು ಹೈದರಾಬಾದ್ ಲಕ್ನೋ, ಭೂಪಾಲ್, ತಿರುವನಂತಪುರಂ, ಪೂನ, ಮುಂಬೈ ಮುಂತಾದ ನಗರಗಳಲ್ಲಿ ಇರುವ ಮ್ಯೂಸಿಯಂಗಳಲ್ಲಿ ನಾಣ್ಯ ಸಂಗ್ರಹಣೆಯನ್ನು ಕಾಣಬಹುದು.
1910 ರಲ್ಲಿ ನ್ಯೂಮಿಸ್ ಮ್ಯಾಟಕ್ ಸೊಸೈಟಿ ಆಫ್ ಇಂಡಿಯಾ (ಭಾರತೀಯ ನಾಣ್ಯ ಶಾಸ್ತ್ರ ಸಂಸ್ಥೆ) ಸ್ಥಾಪಿಸಲಾಯಿತು. ನಮ್ಮ ಪ್ರಾಚೀನ ನಾಣ್ಯಗಳ ಅಧ್ಯಯನಕ್ಕೆ ಇದೂ ಒಂದು ಮೈಲಿಗಲ್ಲು, ರಿಚರ್ಡ್ ಬರ್ನ್, ಹೆಚ್.ಆರ್.ನೆವಿಲ್, ಆರ್.ಬಿ.ವೈಟ್ ಹೆಡ್, ಹೆಚ್.ಎನ್. ಲೈಟ್ ಮುಂತಾದ ಐ.ಎ.ಎಸ್. ಅಧಿಕಾರಿಗಳು ನಾಣ್ಯ ಶಾಸ್ತ್ರ ಅಧ್ಯಯನಕ್ಕೆ ಭದ್ರ ಬುನಾದಿ ಹಾಕಿದರು.
ಭಾರತೀಯ ವಿದ್ವಾಂಸರಾದ ವಿ.ಎಸ್.ಅಗರವಾಲ್, ಎಸ್.ಆಲ್ಟೇಕರ್. ಎ.ಕೆ.ನಾರಾಯಣ್. ಪಿ.ಎಲ್.ಗುಪ್ತ, ಎಂ.ಹೆಚ್.ಕೃಷ್ಣ, ಬಿ.ಸಿ.ಸರ್ಕಾರ್, ಡಿ.ಡಿ.ಕೋಸಂಬಿ ಮುಂತಾದವರು ಮಧ್ಯಕಾಲೀನ ಭಾರತದ ನಾಣ್ಯಗಳನ್ನು ಅಧ್ಯಯನ ಮಾಡಿ ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸಿದ್ದಾರೆ. ಇದುವರೆಗೆ 56 ಸಂಪುಟಗಳ ನಿಯತಕಾಲಿಕೆಯನ್ನು “ಜರ್ನಲ್ ಆಫ್ ದಿ ನ್ಯೂಮಿಸ್ ಮ್ಯಾಟಿಕ್ ಸೊಸೈಟಿ ಆಫ್ ಇಂಡಿಯಾ” ದಲ್ಲಿ ಬರೆದು ಪ್ರಕಟಿಸಿದ್ದಾರೆ.
ದಕ್ಷಿಣ ಭಾರತದಲ್ಲಿ 1990 ರಲ್ಲಿ ಸೌತ್ ಇಂಡಿಯನ್ ನ್ಯೂಮಿಸ್ ಮ್ಯಾಟಿಕ್ ಸೊಸೈಟಿಯನ್ನು ಸ್ಥಾಪಿಸಿ “ಸ್ಟಡೀಸ್ ಇನ್ ಸೌತ್ ಇಂಡಿಯನ್ ಕಾಯಿನ್ಸ್” ಎಂಬ 17 ಸಂಪುಟಗಳನ್ನು ಈವರೆಗೆ ಪ್ರಕಟಿಸಿದೆ. ಐ.ಕೆ.ಶರ್ಮ, ಆರ್.ಕೃಷ್ಣಮೂರ್ತಿ, ಡಾ: ಎ.ವಿ.ನರಸಿಂಹಮೂರ್ತಿ, ಮುಕುಂದ ಪ್ರಭು, ಡಾ:ಗಿರಿಜಾಪತಿ, ಗಣೇಶ್, ಡಾ: ಗೋಪಾಲ್, ಸತ್ಯಮೂರ್ತಿ, ನಿತ್ಯಾನಂದ ಪೈ. ಬೀನಾ ನರಸನ್ ಮುಂತಾದವರು ಸಂಗಂ, ಪಲ್ಲವ, ಶಾತವಾಹನ, ವಿಜಯನಗರ, ಸೇವುಣ ರಾಜವಂಶಗಳ ನಾಣ್ಯಗಳ ಬಗ್ಗೆ ಹೆಚ್ಚಿನ ಅಧ್ಯಯನವನ್ನು ನಡೆಸಿ, ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸಿದ್ದಾರೆ.
ನಾಣ್ಯಗಳಲ್ಲಿ ಧಾರ್ಮಿಕ ಚಿಹ್ನೆಗಳ ಅಧ್ಯಯನ
ಪ್ರಾಚೀನ ರಾಜಮನೆತನಗಳ ಧಾರ್ಮಿಕ ಸ್ಥಿತಿಗಳ ಅಧ್ಯಯನದ ದೃಷ್ಟಿಯಿಂದ ನಾಣ್ಯಗಳು ಮಹತ್ವದ ಅಂಶಗಳನ್ನು ತಿಳಿಯಪಡಿಸುತ್ತವೆ.
ನಾಣ್ಯಗಳು ಪ್ರಾಚೀನ ರಾಜವಂಶಗಳ ಆಧ್ಯಾತ್ಮಿಕ ಬದುಕಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿವೆ ಎಂದರೆ ತಪ್ಪಾಗಲಾರದು. ಸಾಹಿತ್ಯಾಧಾರಗಳಲ್ಲಿ ಉಲ್ಲೇಖವಾಗಿರುವ ಧಾರ್ಮಿಕ ವಿಚಾರವನ್ನು ನಾಣ್ಯಗಳು ದೃಢೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ದೇವರು ಮತ್ತು ದೇವತೆಗಳ ಚಿತ್ರಗಳನ್ನು ನಾಣ್ಯಗಳಲ್ಲಿ ಅಳವಡಿಸುವ ಪರಂಪರೆಗೆ ಎರಡು ಸಾವಿರ ವರ್ಷಗಳಿಗೂ ಮೀರಿದ ಇತಿಹಾಸವಿದೆ. ಕುಶಾನರ ನಾಣ್ಯಗಳಲ್ಲಿ ಮೊಟ್ಟ ಮೊದಲ ಭಾರಿಗೆ ಶಿವ ಲಕ್ಷ್ಮಿ, ಬುದ್ಧ, ನಂದಿ ಮುಂತಾದ ದೇವತೆಗಳ ಚಿತ್ರಗಳನ್ನು ಕಾಣುತ್ತೇವೆ. ಕುಶಾನರ ದೊರೆ ಕಾನಿಷ್ಕನ ನಾಣ್ಯಗಳಲ್ಲಿ ಇರಾನಿಯನ್(ಪರ್ಶಿಯನ್), ಗ್ರೀಕ್ ಮತ್ತು ಹಿಂದೂ ದೇವತೆಗಳ ಚಿತ್ರವಿರುವುದು ಗಮನಾರ್ಹ. ಅಂತೆಯೇ ಇದು ಕಾನಿಷ್ಕನ ಧರ್ಮ ಸಹಿಷ್ಣುತೆಗೆ ಸಾಕ್ಷಿಯಾಗಿದೆ. ಈ ರೀತಿ ನಾಣ್ಯಗಳ ಮೇಲೆ ದೇವತೆಗಳ ಚಿತ್ರವನ್ನು ಅಳವಡಿಸುವುದು ಒಂದು ಪದ್ಧತಿಯಾಗಿ ಬೆಳೆದು, ಮುಂದೆ ಬಂದ ಎಲ್ಲಾ ರಾಜವಂಶಗಳು ಇದರಿಂದ ಪ್ರಭಾವಿತವಾದವು.
ಗುಪ್ತರ ಕಾಲದಲ್ಲಿ ರಾಜ ರಾಣಿಯರ ಚಿತ್ರಗಳು, ದೇವ, ದೇವತೆಯರ ಚಿತ್ರಗಳನ್ನು ಅತ್ಯಂತ ಕಲಾತ್ಮಕ ಶೈಲಿಯಲ್ಲಿ ನಾಣ್ಯಗಳ ಮೇಲೆ ಅಳವಡಿಸಲಾಯಿತು. ಕುಶಾನರ ಪ್ರಭಾವ ಗುಪ್ತರ ನಾಣ್ಯಗಳಲ್ಲಿ ಕಾಣಬಹುದು. ಚಿನ್ನ ಮತ್ತು ಬೆಳ್ಳಿಯ ಕಲಾತ್ಮಕವಾದ ನಾಣ್ಯಗಳಿಂದಲೇ ಗುಪ್ತರ ಯುಗ ʼಸುವರ್ಣಯುಗʼ ಎನ್ನುವಷ್ಟರ ಮಟ್ಟಿಗೆ ಖ್ಯಾತಿಗಳಿಸಿತ್ತು. ಸಮುದ್ರಗುಪ್ತನ ಚಿನ್ನದ ನಾಣ್ಯಗಳಲ್ಲಿ ಅಶ್ವಮೇಧ ಯಾಗದ ಕುದುರೆ, ಮತ್ತೊಂದರಲ್ಲಿ ಲಕ್ಷ್ಮಿಯ ಸುಂದರ ಚಿತ್ರ, ಪರುಶುವಿನ ಚಿತ್ರವಿರುವ ಚಿನ್ನದ ನಾಣ್ಯ, ವೀಣೆಯನ್ನು ನುಡಿಸುತ್ತಿರುವ ಸಮುದ್ರಗುಪ್ತನ ನಾಣ್ಯಗಳು ಕಲಾವೈವಿಧ್ಯಕ್ಕೆ ಸಾಕ್ಷಿಯಾಗಿವೆ. ಇಮ್ಮಡಿ ಚಂದ್ರಗುಪ್ತನ ಒಂದು ನಾಣ್ಯದಲ್ಲಿ ಕಾರ್ತಿಕೇಯನ ಚಿತ್ರವಿದೆ. ಕುಮಾರಗುಪ್ತನ ನಾಣ್ಯಗಳಲ್ಲಿ ದೇವತೆ ಕಾರ್ತಿಕೇಯನು ನವಿಲಿನ ಮೇಲೆ ಕುಳಿತಿದ್ದಾನೆ. ಮತ್ತೊಂದರಲ್ಲಿ ಗಂಗೆಯು ಮೊಸಳೆಯ ಮೇಲೆ ನಿಂತಿದ್ದಾಳೆ. ಗುಪ್ತ ದೊರೆಗಳ ಕಾಲವನ್ನು ವೈಷ್ಣವ ಪಂಥದ ಪುನರುಜ್ಜಿವನ ಕಾಲವೆಂದೇ ಕರೆಯಲು ಈ ನಾಣ್ಯಗಳು ಸಹಕಾರಿಯಾಗಿವೆ.
ಕೆಲವು ಗಣರಾಜ್ಯಗಳ ನಾಣ್ಯಗಳ ಮೇಲೆ ಧಾರ್ಮಿಕ ಚಿಹ್ನೆಗಳಾದ ಚಕ್ರ, ಸ್ವಸ್ತಿಕ, ಚೈತ್ಯ ನಂದಿ, ಮುಂತಾದ ಚಿಹ್ನೆಗಳನ್ನು ಕಾಣಬಹುದು. ವರ್ದನರ ಕಾಲದ ಹರ್ಷನ ನಾಣ್ಯಗಳಲ್ಲಿ ಶಿವ, ಪಾರ್ವತಿಯರ ಚಿತ್ರಗಳನ್ನು ಕಾಣಬಹುದು.
ದಕ್ಷಿಣ ಭಾರತದ ಪ್ರಸಿದ್ಧ ರಾಜಮನೆತನಗಳಾದ ಸೇವುಣ, ಚಾಲುಕ್ಯ, ಹೊಯ್ಸಳ, ವಿಜಯನಗರ ಸಾಮ್ರಾಜ್ಯ ಮತ್ತು ಪಲ್ಲವರಾಜ್ಯದ ನಾಣ್ಯಗಳಲ್ಲಿ ದೇವ ದೇವಿಯಿರುವ ಚಿತ್ರಗಳನ್ನು ಕಾಣಬಹುದು. ವಿಜಯನಗರದ ನಾಣ್ಯಗಳು ಈ ದೃಷ್ಟಿಯಿಂದ ಗಮನಾರ್ಹವಾಗಿವೆ. ಹಾಗೆ ನೋಡಿದರೆ ದೇವ-ದೇವತೆಯರ ಚಿತ್ರ ಅಥವಾ ಚಿಹ್ನೆಗಳು ಇಲ್ಲದ ಒಂದು ನಾಣ್ಯವೂ ವಿಜಯನಗರದ ಅರಸರ ಕಾಲದಲ್ಲಿ ಮುದ್ರಿತವಾಗಲೇ ಇಲ್ಲ. ಈ ಕಾಲದಲ್ಲಿ ಶೈವ, ವೈಷ್ಣವ, ದೇವ ದೇವತೆಗಳ ನಾಣ್ಯಗಳು ಅಧಿಕ ಸಂಖ್ಯೆಯಲ್ಲಿ ಕಂಡು ಬರುತ್ತವೆ. ಬ್ರಹ್ಮ ವಿಷ್ಣು, ಶಿವ, ಸರಸ್ವತಿ, ಪಾರ್ವತಿ, ಲಕ್ಷ್ಮಿ, ಗರುಡ, ನಂದಿ, ಗಣೇಶ, ವೆಂಕಟೇಶ್ವರ, ಶ್ರೀರಾಮ ಚಿಹ್ನೆಗಳನ್ನು ಒಳಗೊಂಡ ಈ ನಾಣ್ಯಗಳು ಧಾರ್ಮಿಕ ಇತಿಹಾಸದಲ್ಲಿ ಪ್ರತ್ಯೇಕವಾದ ಸ್ಥಾನವನ್ನು ಪಡೆದುಕೊಂಡಿವೆ. ಶ್ರೀ ಕೃಷ್ಣದೇವರಾಯನು ತಿರುಪತಿ ವೆಂಕಟೇಶ್ವರನಿಗೆ ಕನಕಾಭಿಷೇಕವನ್ನು ಮಾಡುವ ಸಲುವಾಗಿ 120 ಗ್ರೇನ್ ತೂಕದ ಚಿನ್ನದ ನಾಣ್ಯವನ್ನು ಟಂಕಿಸಿದನು. ಇದನ್ನು ಜನರು ತಿರುಪತಿಯ ಹಣ ಎಂದೇ ಕರೆಯತ್ತಿದ್ದರು. ಇದರಲ್ಲಿ ತಿರುಪತಿ ವೆಂಕಟೇಶ್ವರನ ಚಿತ್ರವಿದೆ.
ಮುಸ್ಲಿಂ ದೊರೆಗಳ ನಾಣ್ಯಗಳಲ್ಲಿ ದೇವ ದೇವತೆಗಳ ಚಿತ್ರಗಳನ್ನು ಅಳವಡಿಸುವುದಕ್ಕೆ ಅವಕಾಶವಿಲ್ಲ, ಮುಸ್ಲಿಂ ದೊರೆಗಳ ನಾಣ್ಯಗಳಲ್ಲಿ ಧಾರ್ಮಿಕ ಚಿಹ್ನೆಗಳು ಕಾಣಸಿಗುವುದಿಲ್ಲ. ಇದಕ್ಕೆ ಕೆಲವು ಅಪವಾದಗಳಿವೆ. ಅವುಗಳನ್ನು ಇಲ್ಲಿ ಉದಾಹರಣೆ ಸಮೇತ ವಿವರಿಸಬಹುದು. ಮಹಮದ್ ಘೋರಿಯ ನಾಣ್ಯದ ಮುಮ್ಮುಖದಲ್ಲಿ ಲಕ್ಷ್ಮಿಯ ಚಿತ್ರವಿದೆ. ಮೊಗಲ್ ಚಕ್ರವರ್ತಿ ಅಕ್ಬರನ ಬೆಳ್ಳಿಯ ನಾಣ್ಯಗಳಲ್ಲಿ ಶ್ರೀರಾಮ, ಸೀತೆಯರ ಚಿತ್ರ ಹಾಗೂ ರಾಮ, ಸಿಯಾ ಎಂಬ ನಾಗರಿ ಬರಹ ಇರುವುದು ಗಮನಾರ್ಹವಾದುದು. ಜಹಾಂಗೀರನು ತನ್ನ ಬೆಳ್ಳಿಯ ನಾಣ್ಯಗಳ ಮೇಲೆ ಹಿಂದೂ ದ್ವಾದಷ ರಾಶಿ (ಮೇಷದಿಂದ ಮೀನದವರೆಗೆ) ಚಿಹ್ನೆಗಳನ್ನು ಅಚ್ಚು ಹಾಕಿಸಿದನು. ಹೈದರಾಲಿಯ ಚಿನ್ನದ ನಾಣ್ಯಗಳ ಮೇಲೆ ಶಿವ, ಪಾರ್ವತಿಯರ ಚಿತ್ರಗಳು ಕಂಡು ಬರುತ್ತವೆ.
ಸೇವುಣರ ನಾಣ್ಯಗಳು, ಆಳುಪರ ನಾಣ್ಯಗಳು, ಇಕ್ಷಾಕು ಪೂರ್ವ ಚಾಲುಕ್ಯರು, ಸಾಮಂತ ರಾಜರು ಮತ್ತು ನಾಯಕರುಗಳ ನಾಣ್ಯಗಳಲ್ಲಿ ಒಂದಲ್ಲ ಒಂದು ಧಾರ್ಮಿಕ ಚಿಹ್ನೆಯನ್ನು ಕಾಣಬಹುದು.
ವಿಜಯನಗರ ಸಾಮ್ರಾಜ್ಯದ ನಾಣ್ಯ ಪದ್ಧತಿ ವಿಜಯನಗರದ ನಂತರದ ಅರಸು ಮನೆತನಗಳಿಗೆ ಮಾರ್ಗಸೂಚಿಯಾಗಿತ್ತು, ದೇವ ದೇವತೆಗಳ ಚಿಹ್ನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತವೆ. ಮೈಸೂರು ಒಡೆಯರ ನಾಣ್ಯಗಳು ವಿಜಯನಗರದ ನಾಣ್ಯ ಪದ್ದತಿಯನ್ನೇ ಅನುಸರಿಸಿ, ಚಿನ್ನ, ಬೆಳ್ಳಿ ಮತ್ತು ತಾಮ್ರಗಳಲ್ಲಿ ನಾಣ್ಯಗಳನ್ನು ಟಂಕಿಸಿದರು. ಒಡೆಯರ್ ಮನೆತನದಲ್ಲಿ ಮೊಟ್ಟಮೊದಲನೇ ಬಾರಿಗೆ ಟಂಕಶಾಲೆಯನ್ನು ಸ್ಥಾಪಿಸಿದವರು ಕಂಠೀರವ ನರಸರಾಜ ಒಡೆಯರ್, ಶ್ರೀ ರಂಗಪಟ್ಟಣದಲ್ಲಿ ಟಂಕಶಾಲೆಯನ್ನು ಆರಂಭಿಸಿ ತಮ್ಮದೇ ಆದ ನಾಣ್ಯಗಳನ್ನು ಟಂಕಿಸಲು ಆರಂಭಿಸಿದರು. ಇವರ ವರಹ ಮತ್ತು ಅರ್ಧವರಹ ಚಿನ್ನದ ನಾಣ್ಯದ ಮುಮ್ಮುಖದಲ್ಲಿ ಲಕ್ಷ್ಮಿಯೊಡನೆ ಕುಳಿತಿರುವ ಶಂಕ, ಚಕ್ರಧಾರಿಯಾದ ನರಸಿಂಹನ ಚಿತ್ರವಿದೆ. ಹಿಮ್ಮುಖದಲ್ಲಿ ಶ್ರೀ ಕಂಠೀರವ ನರಸರಾಜ ಎಂಬ ಬರಹವಿದೆ.
ತಾಮ್ರದ ನಾಣ್ಯಗಳಲ್ಲಿ ಶಿವಲಿಂಗ, ನವಿಲು, ಮೀನು, ಕುಳಿತಿರುವ ಗಣಪತಿ, ಕಾರ್ತಿಕೇಯ, ವೈಷ್ಣವ ನಾಮದ ಚಿಹ್ನೆಯೊಡನೆ ಶಂಖ, ಚಕ್ರ. ವೃಷಭ ಮತ್ತು ಸೂರ್ಯ, ಚಂದ್ರ ಆನೆಯ ಮೇಲಿನ ಸವಾರ ಮುಂತಾದ ಚಿತ್ರಗಳಿವೆ. ಈ ನಾಣ್ಯಗಳು ಕಂಠಿರಾಯ ಹಣ ಎಂದೇ ಖ್ಯಾತಿಗೊಂಡಿದ್ದವು.
ಚಿಕ್ಕ ದೇವರಾಜ ಒಡೆಯರ್ (ಕ್ರಿ.ಶ. 1673-1704)
ಇವರ ಕಾಲದ ಚಿನ್ನದ ನಾಣ್ಯಗಳಲ್ಲಿ ಅಲಂಕೃತ ಕಮಾನಿನ ಮಂಟಪದೊಳಗೆ ನಾಟ್ಯ ಮಾಡುತ್ತಿರುವ ಅಲಂಕೃತ ಬಾಲಕೃಷ್ಣ, ಬಲಗೈಯುಲ್ಲಿ ಬೆಣ್ಣೆಯ ಮುದ್ದೆ ಕೆಳಭಾಗದಲ್ಲಿ ಸರ್ಪವಿದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಚಿನ್ನ ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ಟಂಕಿಸಿದರು. ಇವರು ಟಂಕಿಸಿದ ಚಿನ್ನದ ವರಹದ ನಾಣ್ಯ ಇಕ್ಕೇರಿ ವರಹದ ಮಾದರಿಯಲ್ಲಿದ್ದುದರಿಂದ ಅದಕ್ಕೆ ʼಹೊಸ ಇಕ್ಕೇರಿ ವರಹʼ ಎಂದು ಹೆಸರು ಬಂತು. ನಾಣ್ಯದ ಮುಮ್ಮಖದಲ್ಲಿ ಶಿವ ಪಾರ್ವತಿಯರಿದ್ದಾರೆ. ಶಿವನ ಕೈಯಲ್ಲಿ ತ್ರಿಶೂಲವಿದೆ. ಹಿಮ್ಮುಖದಲ್ಲಿ ʼಶ್ರೀʼ ಎನ್ನುವ ಕನ್ನಡ ಅಕ್ಷರವಿದೆ. ಶಿವ ಪಾರ್ವತಿ ನಮೂನೆಯ ನಾಣ್ಯಗಳು ತುಂಬಾ ಜನಾನುರಾಗಿಯಾಗಿದ್ದವು. ಮೊದಲಿಗೆ ಶಿವ-ಪಾರ್ವತಿ ನಮೂನೆಯ ನಾಣ್ಯಗಳನ್ನು ಜನಪ್ರಿಯಗೊಳಿಸಿದವರು ವಿಜಯನಗರದ ಅರಸರು. ಇಮ್ಮಡಿ ಹರಿಹರ, ಮೊಟ್ಟಮೊದಲು ಶಿವ ಪಾರ್ವತಿಯರ ನಾಣ್ಯವನ್ನು ಅಚ್ಚು ಮಾಡಿಸಿದ್ದು ಈತ ಶೈವ ಧರ್ಮೀಯನಾಗಿದ್ದನು. ಇಮ್ಮಡಿ ದೇವರಾಯ ಮತ್ತು ಕೃಷ್ಣದೇವರಾಯರು ಶಿವ ಪಾರ್ವತಿಯರ ನಾಣ್ಯಗಳನ್ನು ಅಚ್ಚು ಹಾಕಿಸಿದರು. ಕೃಷ್ಣದೇವರಾಯನ ಶಿವ ಪಾರ್ವತಿಯರ ಚಿನ್ನದ ನಾಣ್ಯ ಎಷ್ಟು ಜನ ಪ್ರಿಯವಾಯಿತೆಂದರೆ ಆ ನಾಣ್ಯದ ಮಾದರಿಯನ್ನು ಕೆಳದಿಯ ಶಿವಪ್ಪ ನಾಯಕನು ಮುಂದುವರೆಸಿದನು. ಸದಾಶಿವರಾಯ ಮತ್ತು ಶಿವಪ್ಪ ನಾಯಕನ ಶಿವ ಪಾರ್ವತಿ ನಾಣ್ಯಗಳಲ್ಲಿ ವಿಶೇಷ ಸ್ವಾಮ್ಯತೆ ಇರುತ್ತದೆ. ಪ್ರತಾಪ ಎನ್ನುವ ಬಿರುದು ಇಲ್ಲದೇ ಹೋಗಿದ್ದರೆ ಇವರೀರ್ವರ ನಾಣ್ಯಗಳನ್ನು ಗುರುತಿಸುವುದೇ ಕಷ್ಟವಾಗಿತ್ತು. ಕೆಳದಿಯ ವೆಂಕಟಪ್ಪ ನಾಯಕನ ನಾಣ್ಯಗಳ ಮೇಲೂ ಶಿವ ಪಾರ್ವತಿಯರ ವಿನ್ಯಾಸ ಕಾಣಬಹುದು. ಕೆಳದಿಯ ಈ ನಾಣ್ಯಗಳು ಇಕ್ಕೇರಿ ವರಹ ಎಂದೇ ಜನಪ್ರಿಯವಾಗಿತ್ತು. ಹೈದರಾಲಿ ಸಹ ಶಿವಪಾರ್ವತಿಯರ ನಾಣ್ಯಗಳನ್ನು ಅಚ್ಚು ಹಾಕಿಸಿದ್ದು. ಒಂದು ವಿಶೇಷ. ಇದು ಬಹದ್ದೂರಿ, ಪಗೋಡ ಎಂಬ ಹೆಸರಿನಿಂದ ಪ್ರಸಿದ್ದಿ ಪಡೆದಿತ್ತು.
ವಿಷ್ಣು ಲಕ್ಷ್ಮಿ ಚಿಹ್ನೆಯ ನಾಣ್ಯಗಳು:
ಈ ರೀತಿಯ ಚಿಹ್ನೆಯ ನಾಣ್ಯಗಳನ್ನು ವಿಜಯನಗರದ ದೊರೆ ಮೊದಲನೇ ದೇವರಾಯನ ಕಾಲದಲ್ಲಿ ಕಾಣಬಹುದು. ಈ ದೊರೆಯು ವಿಷ್ಣು ಲಕ್ಷ್ಮಿಯ ಅರ್ಧ ವರಹ ಮೌಲ್ಯದ ನಾಣ್ಯಗಳನ್ನು ಅಚ್ಚು ಹಾಕಿಸಿದ್ದನು. ಇಮ್ಮಡಿ, ಹರಿಹರ, ಈ ಮಾದರಿಯನ್ನು ಅನುಸರಿಸಿದನು. ಸದಾಶಿವರಾಯ, ಮೈಸೂರು ಒಡೆಯರು. ವಿಷ್ಣು ಮತ್ತು ಲಕ್ಷ್ಮಿಯ ಚಿಹ್ನೆ ಉಳ್ಳ ನಾಣ್ಯಗಳನ್ನು ಅಚ್ಚು ಹಾಕಿಸಿದ್ದರು. ಲಕ್ಷ್ಮಿಯ ಚಿಹ್ನೆಯುಳ್ಳ ನಾಣ್ಯಗಳನ್ನು ಮೊದಲು ಟಂಕಿಸಿದವರು ಕುಶಾನರು. ದೆಹಲಿ ಸುಲ್ತಾನರು, ಘೋರಿ ಮಹಮ್ಮದ್, ಇಂಡೋ ಬ್ಯಾಕ್ಟ್ರಿಯನ್ ದೊರೆ ಮೊದಲನೇ ಏಜಸ್ ತನ್ನ ಚಿನ್ನದ ನಾಣ್ಯದಲ್ಲಿ ಲಕ್ಷ್ಮಿಯ ವಿಶೇಷ ವಿನ್ಯಾಸದ ನಾಣ್ಯವನ್ನು ಹೊರಡಿಸಿದ್ದನು. ಇದರಲ್ಲಿ ಎರಡು ಆನೆಗಳು, ಲಕ್ಷ್ಮಿಗೆ ನೀರಿನಿಂದ ಅಭಿಷೇಕ ಮಾಡುತ್ತಿರುವಂತೆ ತೋರಿಸಲಾಗಿದೆ. ವಸ್ಯ ರಾಜ್ಯದ ರಾಜಧಾನಿ ಕೌಶಾಂಬಿಯಲ್ಲಿ ದೊರಕಿರುವ ಅನೇಕ ತಾಮ್ರದ ನಾಣ್ಯಗಳಲ್ಲಿ ಅಭಿಷೇಕ ಲಕ್ಷ್ಮಿಯ ಚಿತ್ರವಿರುವುದು ಗಮನಾರ್ಹವಾದುದು. ಹೂಣರ ದೊರೆ ಮಿಹಿರಗುಲನ ನಾಣ್ಯಗಳಲ್ಲಿ ಲಕ್ಷ್ಮಿಯ ಚಿತ್ರವಿದೆ. ತ್ರಿಪುರಿಯಲ್ಲಿ ಆಳಿದ ಕಲಚೂರಿ ದೊರೆ ಗಂಗೇಯ ದೇವನು ಲಕ್ಷ್ಮಿಯ ನಮೂನೆಯ ನಾಣ್ಯಗಳನ್ನು ಚಿನ್ನ, ಬೆಳ್ಳಿ ಮತ್ತು ತಾಮ್ರಗಳಲ್ಲಿ ಟಂಕಿಸಿದನು. ಇವುಗಳಲ್ಲಿ ನಾಲ್ಕು ಕೈಗಳುಳ್ಳ ಲಕ್ಷ್ಮಿಯ ಚಿತ್ರವಿದೆ. ಮಾಳ್ವದ ಪಾರಮಾರ ದೊರೆಗಳು, ಜಾಂದೇಲರು, ಗಹಡವಾಲರು, ಗೋವಿಂದ, ಚಂದ್ರ, ಕುಮಾರಪಾಲ ಮುಂತಾದ ರಾಜಮನೆತನಗಳು ಲಕ್ಷ್ಮಿಯ ಚಿತ್ರವಿರುವ ನಾಣ್ಯಗಳನ್ನು ಹೊರಡಿಸಿದ್ದರು. ಇವುಗಳು ತುಂಬಾ ಜನಾನುರಾಗಿಯಾಗಿ ಕಂಡು ಬಂದವು.
ಲಕ್ಷ್ಮಿ ನರಸಿಂಹ:
ಮೊದಲ ಬಾರಿಗೆ ಲಕ್ಷ್ಮಿನರಸಿಂಹ ಚಿತ್ರವನ್ನು ಕಾಣುವುದು ಹೊಯ್ಸಳ ದೊರೆ ಇಮ್ಮಡಿ ನರಸಿಂಹನ ಕಾಲದ ನಾಣ್ಯಗಳಲ್ಲಿ. ನಂತರ ವಿಜಯನಗರದ ಕಾಲದಲ್ಲೂ ಲಕ್ಷ್ಮಿನರಸಿಂಹ ಚಿತ್ರವನ್ನು ಕಾಣಬಹುದು.
ಶ್ರೀರಾಮ:
ವಿಜಯನಗರದ ದೊರೆ ತಿರುಮಲರಾಯರು ಶ್ರೀರಾಮನ ನಾಣ್ಯಗಳನ್ನು ಅತ್ಯಂತ ಹೆಚ್ಚಾಗಿ ಅಚ್ಚು ಹಾಕಿಸಿದ. ನಂತರ ಮೊಗಲ್ ಚಕ್ರವರ್ತಿ ಅಕ್ಬರ್ ನು ಶ್ರೀ ರಾಮ ಸೀತೆಯ ಚಿಹ್ನೆಯುಳ್ಳ ಚಿತ್ರಗಳನ್ನು ಟಂಕಿಸಿದ. ದಕ್ಷಿಣ ಭಾರತದ ದೇವಾಲಯಗಳಲ್ಲಿ ಪೂಜಾ ಗೃಹಗಳಲ್ಲಿ ರಾಮಟಂಕಾ ನಾಣ್ಯಗಳು ಅಧಿಕವಾಗಿ ಕಂಡು ಬರುತ್ತವೆ.
ದುರ್ಗಾದೇವಿ
ಕುಶಾನರು, ಹೊಯ್ಸಳರು ಮತ್ತು ಚಿತ್ರದುರ್ಗದ ಪಾಳೇಗಾರರ ನಾಣ್ಯಗಳಲ್ಲಿ ದುರ್ಗಾ ದೇವಿಯ ಚಿತ್ರಗಳನ್ನು ಕಾಣಬಹುದು. ಮೈಸೂರಿನ ಚಿಕ್ಕದೇವರಾಜ ಒಡೆಯರ್ರವರು “ಶ್ರೀ ಚಾಮುಂಡಿ” ಎಂಬ ನಾಣ್ಯಗಳನ್ನು ಹೊರಡಿಸಿದ್ದು ನಾಣ್ಯಗಳ ಮೇಲೆ ದುರ್ಗಾದೇವಿಯ ಚಿಹ್ನೆಗಳನ್ನು ಕಾಣಬಹುದು.
ಹನುಮಂತ:
ಕ್ರಿ.ಶ. 12ನೇ ಶತಮಾನದಲ್ಲಿ ಕಲಚೂರಿಗಳು ಹನುಮಂತ ಹಾರುತ್ತಿರುವ ಅನೇಕ ನಮೂನೆಯ ನಾಣ್ಯಗಳನ್ನು ಟಂಕಿಸಿದ್ದರು. ಕೆಲವು ಚಾಂದೇಲ ದೊರೆಗಳು, ಕಲ್ಯಾಣಿ ಚಾಲುಕ್ಯರು ಮತ್ತು ಹಾನಗಲ್ ಕದಂಬರ ನಾಣ್ಯಗಳಲ್ಲಿ ಹನುಮಂತನ ಚಿತ್ರವಿದೆ. ವಿಜಯನಗರದ ದೊರೆ ಹರಿಹರನು ಹನುಮಂತನ ಚಿತ್ರವುಳ್ಳ ನಾಣ್ಯಗಳನ್ನು ಮೊದಲು ಬಳಕೆಗೆ ತಂದರು. ಬುಕ್ಕರಾಯನು ಇದೇ ರೀತಿ ಹನುಮಂತನ ನಾಣ್ಯಗಳನ್ನು ಟಂಕಿಸಿದನು.
ಕಾರ್ತಿಕೇಯ:
ಚಾಲುಕ್ಯ ದೊರೆ ವಿಕ್ರಮಾಧಿತ್ಯನು ಚಿನ್ನ ಮತ್ತು ಬೆಳ್ಳಿಯ ಮಿಶ್ರ ಲೋಹದ ನಾಣ್ಯಗಳನ್ನು ಟಂಕಿಸಿದನು. ಇದರಲ್ಲಿ ನಿಂತಿರುವ ದೇವತೆ ಸರ್ಪ ಮತ್ತು ನವಿಲು ಕಾಣಬರುತ್ತದೆ. ಆದುದರಿಂದ ನಿಂತಿರುವ ಈ ದೇವತೆಯನ್ನು ಕಾರ್ತಿಕೇಯ ಎಂದು ಗುರುತಿಸಲಾಗಿದೆ.
ಗರುಡ:
ಕರ್ನಾಟಕದಲ್ಲಿ ವಿಜಯನಗರದ ದೊರೆಗಳು ಉತ್ತರ ಭಾರತದಲ್ಲಿ ಗುಪ್ತರ ನಾಣ್ಯಗಳಲ್ಲಿ ಗರುಡನ ಚಿಹ್ನೆಯ ನಾಣ್ಯಗಳು ಸಿಕ್ಕಿವೆ. ಗರುಡ ಚಿಹ್ನೆಯ ನಾಣ್ಯಗಳನ್ನು ಅಚ್ಚು ಹಾಕಿಸಿದ ಮೊಟ್ಟ ಮೊದಲನೆಯ ದೊರೆ ಹರಿಹರ. ನಂತರ ಶ್ರೀ ಕೃಷ್ಣದೇವರಾಯನ ತಾಮ್ರದ ನಾಣ್ಯಗಳು ಗರುಡ ಚಿಹ್ನೆಗಳನ್ನು ಒಳಗೊಂಡಿದೆ.
ವೆಂಕಟೇಶ್ವರ:
ಶ್ರೀ ಕೃಷ್ಣದೇವರಾಯನು ತಿರುಪತಿ ವೆಂಕಟೇಶ್ವರ ಸ್ವಾಮಿಯ ಭಕ್ತನಾಗಿದ್ದನು. ಇವನು ವೆಂಕಟೇಶ್ವರ ಸ್ವಾಮಿಗೆ ಕನಕಾಭಿಷೇಕವನ್ನು ಮಾಡುವುದಕ್ಕೋಸ್ಕರ ವೆಂಕಟೇಶ್ವರನ ಚಿತ್ರವಿರುವ 117 ಗ್ರೈನ್ ತೂಕದ ಚಿನ್ನದ ನಾಣ್ಯವನ್ನು ಅಚ್ಚು ಹಾಕಿಸಿದನು. ವಿಜಯನಗರದ ದೊರೆ ಶ್ರೀ ರಂಗರಾಯನು ಈ ಪರಂಪರೆಯನ್ನು ಮುಂದುವರೆಸಿದನು. ಇವನು 52 ಗ್ರೈನ್ ತೂಕವಿರುವ ವೆಂಕಟೇಶ್ವರ ಚಿತ್ರವಿರುವ ನಾಣ್ಯವನ್ನು ಅಚ್ಚು ಮಾಡಿಸಿದನು. ಇದರಲ್ಲಿ ಶ್ರೀ “ವೆಂಕೆಟೇಶ್ವರಾಯ ನಮಃ” ಎಂಬ ಬರಹವೂ ಇದೆ.
ಕೃಷ್ಣ
ವಿಜಯನಗರದ ಕೃಷ್ಣದೇವರಾಯನ ಒಂದು ನಾಣ್ಯದಲ್ಲಿ ಬಾಲಕೃಷ್ಣ ಚಿಹ್ನೆ ಇರುವ ನಾಣ್ಯಗಳು ಇವೆ. ಇನ್ನು ಕೃಷ್ಣ ಮುದ್ರೆಯ ನಾಣ್ಯಗಳನ್ನು ಅತೀ ಹೆಚ್ಚು ಅಚ್ಚು ಹಾಕಿಸಿದವರೆಂದರೆ ಮೈಸೂರಿನ ಒಡೆಯರು.
ಬ್ರಹ್ಮ ಸರಸ್ವತಿ:
ವಿಜಯನಗರದ ದೊರೆ ಇಮ್ಮಡಿ ಹರಿಹರನು ತನ್ನ ಚಿನ್ನದ ವರಹ, ಅರ್ಧ ವರಹ ನಾಣ್ಯದಲ್ಲಿ ಬ್ರಹ್ಮ ಸರಸ್ವತಿಯ ಚಿತ್ರಗಳನ್ನು ಅಳವಡಿಸಿದನು. ಗುಪ್ತರ ನಾಣ್ಯಗಳಲ್ಲೂ ಬ್ರಹ್ಮ ಸರಸ್ವತಿಯರ ಚಿತ್ರಗಳನ್ನು ಕಾಣಬಹುದು.
ಒಟ್ಟಿನಲ್ಲಿ ಭಾರತೀಯ ನಾಣ್ಯಗಳಲ್ಲಿ ಧಾರ್ಮಿಕ ಚಿಹ್ನೆಗಳನ್ನು ಕಾಣಬಹುದು. ಭಾರತೀಯ ನಾಣ್ಯಗಳಲ್ಲಿ ಕಾಣಬರುವಷ್ಟು ದೇವ ದೇವತೆ ಮತ್ತು ಧಾರ್ಮಿಕ ಚಿಹ್ನೆಗಳನ್ನು ಇತರೆ ದೇಶಗಳ ನಾಣ್ಯಗಳಲ್ಲಿ ಕಾಣಬರುವುದಿಲ್ಲ.
ನಾಣ್ಯಗಳು ಲಕ್ಷ್ಮಿಯ ಒಂದು ಅಂಶ ಎಂದು ನಂಬಿದ್ದ ಭಾರತೀಯರಿಗೆ ಈ ಧಾರ್ಮಿಕ ಭಾವನೆ ಸಹಜವಾಗಿಯೇ ತೋರಿದುದರಲ್ಲಿ ಆಶ್ಚರ್ಯವೇನಿಲ್ಲ. ನಮ್ಮ ಭಾರತೀಯ ಸಮಾಜದಲ್ಲಿ ಧಾರ್ಮಿಕತೆಗೆ ಎಷ್ಟೊಂದು ಮಹತ್ವವಿದ್ದಿತು ಎನ್ನುವುದನ್ನು ನೆನೆಸಿಕೊಂಡಾಗ ನಾಣ್ಯಗಳು ಈ ಪರಿದಿಯ ಒಳಗೆ ಇದ್ದುದು ಅರ್ಥಪೂರ್ಣವೆನಿಸುತ್ತವೆ.
ನಾಣ್ಯಗಳ ಅಧ್ಯಯನದಿಂದ ತಿಳಿದು ಬರುವ ಸಂಗತಿಗಳು
1) ರಾಜ ಮಹಾರಾಜರ ಧಾರ್ಮಿಕ ಒಲವು ತಿಳಿಯುವಲ್ಲಿ ನಾಣ್ಯ ಶಾಸ್ತ್ರ ಪ್ರಮುಖವಾದದ್ದು. ಇದು ಸಾಹಿತ್ಯಾಧಾರದ ಲೋಪದೋಷಗಳನ್ನು ಸರಿಪಡಿಸುತ್ತದೆ.
2) ಶೈವ, ವೈಷ್ಣವ, ಬೌದ್ಧ ಇತರ ಧಾರ್ಮಿಕ ಚಿಹ್ನೆಗಳನ್ನು ಹೊಂದಿದ್ದ ನಾಣ್ಯ ಒಂದೇ ಕಾಲದಲ್ಲಿ ಒಂದೇ ಸ್ಥಳದಲ್ಲಿ ಚಲಾವಣೆಯಲ್ಲಿ ಇದ್ದುದರಿಂದ ಆ ಕಾಲದಲ್ಲಿ ಧಾರ್ಮಿಕ ಪಂಥಗಳ ಸಹಬಾಳ್ವೆಗೆ ಸಾಕ್ಷಿಯಾಗಿದೆ.
3) ಸ್ಥಳೀಯ ಜನರ ವಿಶ್ವಾಸವನ್ನು ಸಂಪಾದಿಸುವ ದೃಷ್ಟಿಯಿಂದ ಅನೇಕ ಮುಸ್ಲಿಂ ಸುಲ್ತಾನರು ಕೊನೆಗೆ ಬ್ರಿಟಿಷರೂ ಕೂಡಾ ಈ ಪ್ರವೃತ್ತಿಯನ್ನು ಮುಂದುವರೆಸಿಕೊಂಡು ಬಂದರು. ಕುಶಾನರು ಶೈವ, ಬೌದ್ಧ ಸಂಬಂಧದ ಚಿಹ್ನೆಗಳನ್ನು ಮುದ್ರಿಸಿದ್ದರು. ಹೈದರಾಲಿ, ಅಕ್ಬರ್, ಜಹಾಂಗೀರ್, ಅಷ್ಟೇ ಏಕೆ ಘೋರಿ ಮಹಮದ್, ಕೂಡ ಹಿಂದೂ ದೇವತೆಗಳ ಚಿಹ್ನೆಗಳನ್ನು ನಾಣ್ಯಗಳಲ್ಲಿ ಬಳಸಿದ್ದನು.
4) ಒಂದೇ ರಾಜಮನೆತನದ ವಿವಿಧ ರಾಜರು ಶೈವ ಮತ್ತು ವೈಷ್ಣವ ಚಿಹ್ನೆಯನ್ನು ಹೊಂದಿದ್ದ ನಾಣ್ಯಗಳನ್ನು ಅಚ್ಚು ಮಾಡಿಸಿದ್ದು ಇನ್ನೊಂದು ವೈಶಿಷ್ಟವೆನ್ನಬಹುದು. ಚುಟುಕಲಾಂದ. ಶಿವಲಾನಂದರ ನಾಣ್ಯಗಳಲ್ಲಿ ಹಾಗೂ ಮರಾಠಿ ನಾಣ್ಯಗಳ ಕಟಾಂಜನದಲ್ಲಿ ಇರುವ ವೃಕ್ಷ ಪ್ರಮುಖ ಚಿಹ್ನೆಯಾಗಿ ಕಾಣಿಸಿಕೊಳ್ಳುತ್ತದೆ. ಕ್ರಿಸ್ತಶಕದ ಮೊದಲ ಶತಮಾನಗಳಲ್ಲಿ ಬೌದ್ಧ ಧರ್ಮಕ್ಕೆ ಸೇರಿದ ಚಿಹ್ನೆಗಳನ್ನು ರಾಜರು ವಿಶೇಷವಾಗಿ ಬಳಸುತ್ತಿದ್ದರು.
5) ಹೊರದೇಶದಿಂದ ಭಾರತಕ್ಕೆ ಬಂದು ಇಲ್ಲಿ ರಾಜ್ಯ ಸ್ಥಾಪನೆ ಮಾಡಿದ ಕುಶಾನರು ಭಾರತೀಕರಣಕ್ಕೆ ಉತ್ತಮ ಉದಾಹರಣೆ ಎಂದರೆ ತಪ್ಪಾಗಲಾರದು. ಕಾನಿಷ್ಕ, ಗ್ರೀಕ್, ಸುಮೇರಿಯನ್ ಎಲಾಮೈಟ್, ಪರ್ಶಿಯನ್ ಹಿಂದೂ ದೇವತೆಗಳನ್ನು ನಾಣ್ಯಗಳಲ್ಲಿ ಅಳವಡಿಸಿರುವುದು ಕಾನಿಷ್ಕನ ಧರ್ಮಸಮನ್ವಯತೆಯ ದೃಷ್ಟಿಕೋನಕ್ಕೆ ಒಂದು ಸಾಕ್ಷಿ ಎಂದೇ ಹೇಳಬಹುದು. ಕುಶಾನರ ನಾಣ್ಯಗಳಲ್ಲಿ ಶಿವನ ವಿವಿಧ ರೂಪಗಳನ್ನು ಅಳವಡಿಸುವ ಪರಂಪರೆಗೆ ಚಾಲನೆ ಲಭ್ಯವಾಯಿತು.
6) ಕುಶಾನರ ನಾಣ್ಯಗಳಲ್ಲಿ ಕಂಡು ಬರುವ ಮತ್ತೊಬ್ಬ ದೇವತೆ, ದೇವಿ ಅರ್ಧೋಕ್ಷು ಭಾರತೀಯ ಲಕ್ಷ್ಮಿ, ಮೊಟ್ಟಮೊದಲ ಬಾರಿಗೆ ಕುಶಾನರ ನಾಣ್ಯಗಳಲ್ಲಿ ಕಂಡು ಬರುತ್ತಾಳೆ. ಕುಶಾನರ ಈ ಧಾರ್ಮಿಕ ದೃಷ್ಟಿಕೋನ ಮುಂದಿನ ಭಾರತೀಯ ರಾಜವಂಶೀಯರಿಗೆ ಮಾದರಿಯಾದದ್ದು ಒಂದು ವಿಶೇಷವೇ ಸರಿ.
ಉಪಸಂಹಾರ
ನಾಣ್ಯಶಾಸ್ತ್ರವು ಕೇವಲ ಹಳೆಯ ನಾಣ್ಯಗಳನ್ನು ಸಂಗ್ರಹಿಸುವುದರ ಬಗ್ಗೆ ಅಲ್ಲ; ಇದು ಐತಿಹಾಸಿಕ ಪುರಾವೆಯಾಗಿ ಹಣವನ್ನು ಅಧ್ಯಯನ ಮಾಡುವ ವೈಜ್ಞಾನಿಕ ಶಾಸ್ತ್ರವಾಗಿದೆ.
ನಾಣ್ಯಗಳ ಮೂಲಕ ರಾಜಕೀಯ ಶಕ್ತಿ, ಆರ್ಥಿಕ ಪರಿಸ್ಥಿತಿ, ಧಾರ್ಮಿಕ ಆಚರಣೆಗಳು, ಕಲಾತ್ಮಕ ಸಾಧನೆಗಳು ಮತ್ತು ಐತಿಹಾಸಿಕ ಕಾಲಮಾನ ಮುಂತಾದ ಸಂಗತಿಗಳನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ.