ಮಣ್ಣಿನ ಸವೆತ ಹಾಗೂ ನಿಯಂತ್ರಣ ಕ್ರಮಗಳು
ಕನ್ನಡದ ಮಣ್ಣು ಎಂಬ ಶಬ್ದವು ಆಂಗ್ಲ ಭಾಷೆಯ soil ಎಂಬ ಪದದಿಂದ ಬಂದಿದೆ. ಆಂಗ್ಲ ಭಾಷೆಯ soil ಎಂಬ ಪದವು ಲ್ಯಾಟಿನ್ ಭಾಷೆಯ ಸೋಲಮ್ ಎಂಬ ಪದದಿಂದ ಉತ್ಪತ್ತಿಯಾಗಿದೆ. ಇದರ ಅರ್ಥ ಭೂಕವಚದ ಅತ್ಯಂತ ಮೇಲ್ಪದರು ಎಂದಾಗುತ್ತದೆ. ಸಾಮಾನ್ಯವಾಗಿ ಹೇಳುವುದಾದರೆ soil ಎಂದರೆ ಕನ್ನಡದಲ್ಲಿ ಹುಡಿ ಅಥವಾ ಹುಡಿಯಾಗಿರುವ ಶಿಲಾವಸ್ತುಗಳ ತೆಳುವಾದ ಪದರು ಎಂದು ಅರ್ಥ. ಇದನ್ನೇ ಮಣ್ಣು ಎಂದು ಕರೆಯಲಾಗಿದೆ. ಹಲವಾರು ವರ್ಷಗಳಿಂದ ಗಾಳಿ ಮಳೆಗೆ ಶಿಲೆಗಳು ಒಡೆದು ಚೂರು ಚೂರಾಗಿ ಚಿಕ್ಕ ಚಿಕ್ಕ ಕಣಗಳಾಗಿ ಹಾಗೂ ನಶಿಸಿ ಹುಡಿಯ ರೂಪದಲ್ಲಿಯೇ ಭೂಮೇಲ್ಮೈಯಲ್ಲಿ ಹರಡಿರುವುದು. ಈ ಭೂಮಿಯ ಮೇಲ್ಪದರಿನಲ್ಲಿ ಹರಡಿರುವ ಹುಡಿ ಪ್ರಾಕೃತಿಕ ಹೊಡೆತದಿಂದ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾವಣೆ ಹೊಂದುವ ಪ್ರಕ್ರಿಯೆಯನ್ನು ಮಣ್ಣಿನ ಸವೆತ ಎಂದು ಕರೆಯುವರು. ಆದರೆ ಮಣ್ಣಿನ ಸವೆತ ಹೆಚ್ಚಾದಾಗ ಪರಿಣಾಮ ಗಂಭೀರವಾಗುತ್ತದೆ.
ಮಣ್ಣಿನ ಸವಕಳಿಗೆ ಕಾರಣಗಳು: (Causes for soil erosion)
1. ಗಾಳಿ ರಭಸವಾಗಿ ಬೀಸುವುದು, ಜನರ ಮಿತಿಮೀರಿದ ಓಡಾಟ, ದನಕರುಗಳನ್ನು ಮೇಯಿಸುವುದು, ಬಿರುಗಾಳಿ, ಮಳೆ, ರಸಾಯನಿಕ ಗೊಬ್ಬರಗಳ ಬಳಕೆ, ಬೇಸಾಯ ಹಾಗೂ ಕಾಡು ನಾಶದಿಂದ ಮಣ್ಣಿನ ಮೇಲ್ಪದರು ಜಾರಿ ಹೋಗಿ ಮಣ್ಣಿನ ಸವಕಳಿ ಉಂಟಾಗುತ್ತದೆ.
2. ಪ್ರಸ್ತುತ ದಿನಗಳಲ್ಲಿ ಕಾಡಿನ ನಾಶ ಹೇಳತೀರದಷ್ಟು ಆಗುತ್ತಿದೆ. ಪರಿಣಾಮವಾಗಿ ಮಣ್ಣಿನ ಫಲವತ್ತತೆ ನಾಶವಾಗಿ ಆಹಾರ ಉತ್ಪಾದನೆಯಲ್ಲಿ ತೀವ್ರ ಹಿನ್ನಡೆಯಾಗುತ್ತಿದೆ. ಮಳೆಗಾಲದಲ್ಲಿ ಬಿದ್ದ ನೀರನ್ನು ತಡೆ ಹಿಡಿಯುವಂತಹ ಕಾಡುಗಳು ಇಲ್ಲದಿರುವುದರಿಂದ ಮಣ್ಣಿನ ಸವೆತ ಉಂಟಾಗುತ್ತದೆ.
3. ಕಾಡು ನಾಶದ ಪರಿಣಾಮದಿಂದ ಪ್ರತಿ ವರ್ಷ ಸುಮಾರು ಏಳು ಮಿಲಿಯನ್ ಹೆಕ್ಟರ್‌ನಷ್ಟು ಮಣ್ಣು ನಾಶವಾಗುತ್ತಿದೆ.
4. ಭಾರತೀಯ ಗ್ರಾಮೀಣ ಪ್ರದೇಶಗಳಲ್ಲಿ ಜನರು ತಮ್ಮ ತಮ್ಮ ಹೊಲಗಳಲ್ಲಿ ಒಡ್ಡುಗಳನ್ನು ನಿರ್ಮಿಸಿಲ್ಲ. ಹೀಗಾಗಿ ಇಳಿಜಾರು ಇರುವ ಹೊಲಗಳಲ್ಲಿ ಬಿದ್ದ ಮಳೆ ನೀರಿನಿಂದ ಮಣ್ಣಿನ ಸವಕಳಿ ನಿರಂತರವಾಗಿ ಆಗುತ್ತಿದೆ. ಅದನ್ನು ತಪ್ಪಿಸಲು ರೈತರು ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಇಂತಹ ಸಮಸ್ಯೆಗಳು ಕಾಡುತ್ತವೆ.
5. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಮಣ್ಣು ಕೊಚ್ಚಿಕೊಂಡು ಹೋಗಿ ಹತ್ತಿರದ ಕೆರೆ, ಹೊಂಡ ಹಾಗೂ ಸರೋವರಗಳನ್ನು ಸೇರುತ್ತದೆ. ಆಗ ಅವುಗಳು ಹೂಳಿನಿಂದ ತುಂಬಿ ನೀರಿನ ಆಳ ಕಡಿಮೆಯಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
- ಭಾರತದಲ್ಲಿರುವ ಸಾವಿರಾರು ಕೆರೆಗಳು ಮತ್ತು ಜಲಾಶಯಗಳಿಗೆ ಮಳೆಗಾಲದಲ್ಲಿ ಮಣ್ಣು ಬಂದು ಸೇರುವುದರಿಂದ ಕೆರೆಗಳಲ್ಲಿ ಹೂಳು ತುಂಬಿಕೊಳ್ಳುತ್ತದೆ. ಆಗ ಕೆರೆಗಳ ಆಯುಷ್ಯವು ಕಡಿಮೆಯಾಗುತ್ತದೆ.
- ಕಾಡಿನ ನಡುವೆ ವರ್ಗಾವಣೆ ಬೇಸಾಯಕ್ಕಾಗಿ ಗಿಡಮರಗಳನ್ನು ಕಡಿಯುವುದರಿಂದ ಕಾಡುಗಳು ಹಾಳಾಗಿ ಮಣ್ಣಿನ ಸವೆತ ಕಂಡು ಬರುತ್ತದೆ.
- ಹೆಂಚು, ಇಟ್ಟಿಗೆ ತಯಾರಿಕೆ ಹಾಗೂ ಮಡಿಕೆ ಮುಂತಾದ ವಸ್ತುಗಳ ತಯಾರಿಕೆಗಾಗಿ ಫಲವತ್ತಾದ ಮಣ್ಣಿನ ಮೇಲ್ಭಾಗವನ್ನು ತೆಗೆಯುವುದು ಸಹ ಮಣ್ಣಿನ ಸವೆತಕ್ಕೆ ಕಾರಣವಾಗುತ್ತದೆ.
- ಕೈಗಾರಿಕರಣ, ಅಣೆಕಟ್ಟು, ರಸ್ತೆ, ರೈಲು ಮಾರ್ಗ ಹಾಗೂ ವಸತಿ ನಿರ್ಮಾಣ ಮುಂತಾದ ಉದ್ದೇಶಗಳಿಗಾಗಿ ಅರಣ್ಯವನ್ನು ಕಡಿದು ನಾಶ ಮಾಡುವುದರಿಂದ ಮಣ್ಣಿನ ಸವೆತ ಕಂಡುಬರುತ್ತದೆ.
ಮಣ್ಣಿನ ಸವೆತವನ್ನು ನಿಯಂತ್ರಿಸುವ ಕ್ರಮಗಳು: (Control soil erosion)
- ಇಳಿಜಾರಿಗೆ ಅಡ್ಡಲಾಗಿ ಕೃಷಿ ಕಾರ್ಯಗಳನ್ನು ಮಾಡುವುದರಿಂದ ಮಣ್ಣಿನ ಸವಕಳಿಯನ್ನು ತಪ್ಪಿಸುವುದು.
- ಇಳಿಜಾರು ಪ್ರದೇಶಗಳ ಹೊಲಗಳಿಗೆ ಅಡ್ಡಲಾಗಿ ಒಡ್ಡುಗಳನ್ನು ನಿರ್ಮಿಸುವುದು.
- ಕಾಡುಗಳನ್ನು ಕಡಿಯದಂತೆ ಕ್ರಮಕೈಗೊಳ್ಳುವುದು ಮತ್ತು ಅರಣ್ಯವನ್ನು ಬೆಳೆಸುವುದು.
- ದನಕರುಗಳನ್ನು ಹುಲ್ಲುಗಾವಲು ಪ್ರದೇಶಗಳಲ್ಲಿ ಮೇಯಿಸುವುದನ್ನು ನಿಯಂತ್ರಿಸುವುದು.
- ನೀರಾವರಿ ಪ್ರದೇಶಗಳಲ್ಲಿ ಪ್ರವಾಹಗಳುಂಟಾಗದಂತೆ ಎಚ್ಚರಿಕೆ ವಹಿಸುವುದು.
- ಅಂತರ ಬೇಸಾಯಕ್ಕೆ ಆದ್ಯತೆ ನೀಡುವುದು.
- ಎಲ್ಲಿ ಮಣ್ಣಿನ ಸವೆತ ಹೆಚ್ಚಾಗಿದೆಯೋ ಅಲ್ಲಿ ಹುಲ್ಲನ್ನು ಬೆಳೆಸುವುದು.
- ಇಳಿಜಾರಿಗೆ ಅಡ್ಡಲಾಗಿ ಚಿಕ್ಕ ಚಿಕ್ಕ ಹಳ್ಳಗಳನ್ನು ತೋಡಿ ಗಿಡಗಳನ್ನು ಬೆಳೆಸುವುದು.
- ವೇಗವಾಗಿ ಗಾಳಿ ಬೀಸುವ ಕಡೆಗಳಲ್ಲಿ ಮರಗಳನ್ನು ಬೆಳೆಸುವುದು.
- ಭತ್ತ, ಗೋಧಿಯ ಹುಲ್ಲು, ಭತ್ತದ ಹೊಟ್ಟು ಹಾಗೂ ಎಲೆಗಳಂತಹ ಕೊಳೆತ ವಸ್ತುಗಳನ್ನು ಮಣ್ಣಿನ ಮೇಲ್ಭಾಗದಲ್ಲಿ ಹಾಕುವುದರಿಂದ ಮಣ್ಣಿನ ಸವೆತವನ್ನು ತಡೆಯಬಹುದು.
- ಮಣ್ಣಿನ ಸವೆತದಿಂದಾಗುವ ಪರಿಣಾಮಗಳ ಕುರಿತು ರೈತರಿಗೆ ಮನವರಿಕೆ ಮಾಡಿಕೊಡುವುದು.
- ಗ್ರಾಮೀಣ ಪ್ರದೇಶಗಳಲ್ಲಿ ಮಣ್ಣಿನ ಸವಕಳಿಯಿಂದ ಆಗುವ ತೊಂದರೆಗಳ ಬಗ್ಗೆ ತಿಳುವಳಿಕೆ ನೀಡುವಂತಹ ಸಾಕ್ಷ್ಯ ಚಿತ್ರಗಳನ್ನು ತೋರಿಸುವುದು.
ಉಪಸಂಹಾರ
ಮಣ್ಣಿನ ಸವೆತವು ಕೃಷಿ ಉತ್ಪಾದನೆ, ಜಲಾಶಯಗಳ ಆಯುಷ್ಯ ಹಾಗೂ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇದನ್ನು ನಿಯಂತ್ರಿಸಲು ವೈಜ್ಞಾನಿಕ ಕೃಷಿ ಪದ್ಧತಿಗಳು, ಅರಣ್ಯ ಸಂರಕ್ಷಣೆ ಮತ್ತು ಜನಜಾಗೃತಿ ಅತ್ಯಂತ ಅಗತ್ಯವಾಗಿದೆ. ರೈತರು ಮತ್ತು ಸಾರ್ವಜನಿಕರು ಮಣ್ಣಿನ ಮಹತ್ವವನ್ನು ಅರಿತು ಸಂರಕ್ಷಣಾ ಕ್ರಮಗಳನ್ನು ಅನುಸರಿಸಬೇಕು. ಸರ್ಕಾರ ಮತ್ತು ಸಮಾಜ ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಮಣ್ಣಿನ ಸವೆತವನ್ನು ಪರಿಣಾಮಕಾರಿಯಾಗಿ ತಡೆಹಿಡಿಯಲು ಸಾಧ್ಯ. ಮಣ್ಣನ್ನು ಉಳಿಸುವುದು ಭವಿಷ್ಯ ಪೀಳಿಗೆಗೆ ನಮ್ಮ ಜವಾಬ್ದಾರಿಯಾಗಿದೆ.