ಜೀವ ವೈವಿಧ್ಯತೆಯ ಮಾದರಿಗಳು
ಜೀವ ವೈವಿಧ್ಯತೆಯು ಮುಖ್ಯವಾಗಿ ಪರಿಸರ ಹಾಗೂ ಜೀವ ಪರಿಸರದ ಸಮತೋಲನ ಮಾಡುವಲ್ಲಿ ಮುಖ್ಯವಾದ ಪಾತ್ರ ವಹಿಸುತ್ತದೆ. ಮರುಭೂಮಿಯಲ್ಲಿ ಮಾಂಸಾಹಾರಿಗಳಷ್ಟೇ ಸಸ್ಯಹಾರಿಗಳು ಇರಬೇಕಾಗುತ್ತದೆ. ಒಂದುವೇಳೆ ಇವುಗಳಲ್ಲಿ ಏರುಪೇರು ಕಂಡುಬಂದರೆ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತದೆ. ಮಾನವನ ಆರ್ಥಿಕ ಚಟುವಟಿಕೆಗೆ ಜೀವವೈವಿಧ್ಯತೆಯು ಅಗತ್ಯವಾಗಿ ಬೇಕು.
ಮಾನವನ ಉಸಿರಾಟಕ್ಕೆ ಉತ್ತಮ ಗಾಳಿ ಬೇಕು. ಅದನ್ನು ಪರಿಸರ ನೀಡಿದೆ. ಆದರೆ ಮಾನವ ಇಂದು ತನ್ನ ದುರಂಕಾರದಿಂದ ಪರಿಸರಕ್ಕೆ ಕುತ್ತು ತಂದಿದ್ದಾನೆ. ಕಾಡಿನಲ್ಲಿ ಸಿಗುವ ಗಿಡಮೂಲಿಕೆಯ ವ್ಯವಹಾರದಿಂದಲೇ ಕೋಟಿ ಕೋಟಿ ಹಣವನ್ನು ಗಳಿಸಬಹುದು. ಅರಣ್ಯದಿಂದ ಪ್ರಾಣಿಗಳ ಚರ್ಮ, ಪಕ್ಷಿಗಳ ರೆಕ್ಕೆ, ಘೇಂಡಾಮೃಗದ ಕೊಂಬು, ಆನೆಯ ದಂತ ಒಂದೇ ಎರಡೇ ಎಲ್ಲವೂ ಕಾಡಿನಿಂದಲೇ ಲಭ್ಯವಿವೆ. ಉಸಿರಾಟಕ್ಕೆ ಗಾಳಿ, ತಿನ್ನಲು ಗೆಡ್ಡೆ, ಗೆಣಸು ಹಾಗೂ ಹಣ್ಣು-ಹಂಪಲುಗಳು ಯಥೇಚ್ಛವಾಗಿ ಸಿಗುತ್ತವೆ. ಹೀಗಾಗಿ ಜೀವವೈವಿಧ್ಯತೆಯ ಮೌಲ್ಯ ಬಹಳ ಅಪಾರವಾಗಿದೆ. ಇನ್ನು ಸಾಕು ಪ್ರಾಣಿಗಳಿಂದ ಹೈನುಗಾರಿಕೆ, ಸಾಗಾಣಿಕೆ ಮೊದಲಾದ ಎಲ್ಲಾ ಅಗತ್ಯಗಳಿಗೂ ಪೂರೈಕೆಯಾಗುತ್ತವೆ. ಮಾನವನ ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಜೀವವೈವಿಧ್ಯತೆಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪೋಷಿಸಲ್ಪಟ್ಟವುಗಳಾಗಿವೆ. ಜೀವ ವೈವಿಧ್ಯತೆಯ ಮೌಲ್ಯಗಳ ಪ್ರಕಾರಗಳು ಈ ಕೆಳಗಿನಂತಿವೆ.
1.ಆಹಾರ ಮೌಲ್ಯಗಳು
2. ಔಷಧೀಯ ಸಂಪನ್ಮೂಲಗಳು
3. ಮರದ ಉತ್ಪನ್ನಗಳು
4. ಮನೋರಂಜನ ಮೌಲ್ಯಗಳು ಹಾಗೂ
5. ಸಾಂಸ್ಕೃತಿಕ ಮೌಲ್ಯಗಳು
6. ಸಂಶೋಧನಾ ಶೈಕ್ಷಣಿಕ ನಿರ್ವಹಣೆ.
1. ಆಹಾರದ ಮೌಲ್ಯಗಳು: (Consumtive value)
ವಿಶ್ವದ ಆಹಾರ ಉತ್ಪಾದನೆಯಲ್ಲಿ ಜೀವವೈವಿಧ್ಯತೆಯ ಪಾತ್ರ ಬಹಳ ಮುಖ್ಯವಾಗಿದೆ. ಭೂಮಿಯ ಮೇಲೆ ವಾಸಿಸುವ ಮಾನವನ ಮೂಲ ಆಹಾರವೇ ಸಸ್ಯಹಾರ ಮತ್ತು ಮಾಂಸಹಾರ. ವಿಶ್ವದಲ್ಲಿ ಸರಿಸುಮಾರು 80,000 ಆಹಾರ ಯೋಗ್ಯ ಸಸ್ಯಗಳು ಇರುವುದು ವರದಿಯಾಗಿದೆ. ಮಾನವನು ಮಾಂಸಕ್ಕಾಗಿ ಕೆಲವೇ ಕೆಲವು ಪ್ರಾಣಿಗಳನ್ನು ಸಾಕಣೆ ಮಾಡುತ್ತಾನೆ. ಉದಾಹರಣೆ: ಹಸು, ಕುರಿ, ಮೇಕೆ, ಎಮ್ಮೆ, ಕೋಣ, ಕೋಳಿ ಇತ್ಯಾದಿಗಳು. ಈ ಪ್ರಾಣಿಗಳಿಂದ ಸುಮಾರು 100% ರಷ್ಟು ಪ್ರೋಟಿನ್‌ಯುಕ್ತ ಆಹಾರವನ್ನು ಪಡೆಯುತ್ತಾನೆ. ಇದು ಅಲ್ಲದೆ ಮೀನು ಕೂಡ ಉತ್ತಮವಾದ ಆಹಾರ ಪಟ್ಟಿಗೆ ಸೇರ್ಪಡೆಗೊಂಡಿದೆ. ಇಂದು ಮೀನುಗಾರಿಕೆ ಅತ್ಯಂತ ಲಾಭದಾಯಕ ಉದ್ಯೋಗವಾಗಿದೆ. ಗೋಧಿ, ಜೋಳ, ರಾಗಿ, ಭತ್ತ, ಸಜ್ಜೆ, ನವಣೆ, ಮೆಕ್ಕೆಜೋಳ ಮೊದಲಾದ 15 ಪ್ರಭೇದಗಳನ್ನು ಮಾನವ ಕೃಷಿ ಮಾಡಿ ಪಡೆದುಕೊಂಡು ಅವುಗಳನ್ನು ಆಹಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾನೆ.
2. ಔಷಧೀಯ ಸಂಪನ್ಮೂಲಗಳು: (Medical resources)
ಜಾಗತಿಕವಾಗಿ ಒಟ್ಟು ಔಷಧಿಗಳ ಉತ್ಪಾದನೆಯಲ್ಲಿ ಸುಮಾರು ಶೇಕಡ 75 ಭಾಗದಷ್ಟು ವಿವಿಧ ಗಿಡಮೂಲಿಕೆಗಳು ಅಥವಾ ಸಸಿಗಳಿಂದ ತಯಾರಾದಂತವುಗಳಾಗಿವೆ. ಆಯುರ್ವೇದ ಹಾಗೂ ಯುನಾನಿ ಮುಂತಾದ ಸಾಂಪ್ರದಾಯಿಕ ವೈದ್ಯ ಪದ್ಧತಿಗಳ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಈ ಚಿಕಿತ್ಸೆಗಳಿಗೆ ಔಷಧೀಯ ಸಸ್ಯಗಳೇ ಮೂಲ ಆಕರಗಳಾಗಿವೆ. ಉದಾ: . ಮೆಂತೆಕಾಳು ಮಧುಮೇಹಕ್ಕೆ ದಿವ್ಯ ಔಷಧೀಯವಾಗಿದೆ. ಹಾಗೆಯೇ
- ತುಳಸಿ ಎಲೆಯು ಜ್ವರಕ್ಕೆ ರಾಮಬಾಣವಾಗಿದೆ.
- ಸೌತೆಕಾಯಿಯನ್ನು ಬಿಲ್ಲೆಯ ಹಾಗೆ ಕತ್ತರಿಸಿ ಕಣ್ಣಿನ ಮೇಲೆ ಇಟ್ಟುಕೊಂಡರೆ ಕಣ್ಣು ಉರಿ ಶಮನವಾಗುತ್ತದೆ.
- ಪರಂಗಿ ಹಣ್ಣನ್ನು ತಿಂದರೆ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.
- ಸಿಂಕೋನ ಮರದ ತೊಗಟೆಯಿಂದ ಮಲೇರಿಯ ರೋಗ ನಿರೋಧಕ ಔಷಧಿಯಾದ ಕ್ವಿನೈನನ್ನು ತಯಾರಿಸಲಾಗಿದೆ.
ಪೆನ್ಸಿಲಿಯಂನಿಂದ ಪ್ರತಿಜೀವಕ, ಬ್ಯಾಕ್ಟೀರಿಯಮ್‌ನಿಂದ ಟೆಟ್ರಿ ಸೈಕ್ಲಿನ್, ಕ್ಯಾನ್ಸರ್ ರೋಗ ನಿರೋಧಕ ಔಷಧಿ ಮೂಲ ವಸ್ತುಗಳನ್ನು ಪೆರಿವಿಂಕಲ್ ಸಸ್ಯದಿಂದ ತಯಾರಿಸಲಾಗುವುದು. ಇಂಗನ್ನು ಆಹಾರದ ರೂಪದಲ್ಲಿ ಅಲ್ಲದೆ ಔಷಧಿ ರೂಪದಲ್ಲಿಯೂ ಉಪಯೋಗಿಸುತ್ತಾರೆ. ಹಲವು ಸಸ್ಯಗಳಿಂದ ಅಂಟಿ ಬಯೋಟಿಕ್ ಔಷಧಿಯನ್ನು ತಯಾರಿಸುತ್ತಾರೆ.
ಡೈಸಿ ಎಂಬ ಸಸ್ಯಗಳನ್ನು ಹಿಂದಿನ ಕಾಲದಲ್ಲಿ ಹೇನು ನಿವಾರಣ ಔಷಧಿಯಾಗಿ ಬಳಸಲಾಗುತ್ತಿತ್ತು. ಜೊತೆಗೆ ಇದನ್ನು ಪೈರಿಥ್ರಿನ್ ಎಂಬ ಕೀಟನಾಶಕಗಳಲ್ಲಿಯೂ ಇದನ್ನು ಬಳಸಲಾಗುತ್ತಿತ್ತು. ಕಾಲಾನಂತರ ಹೇನು ನಿವಾರಕ ಶಾಂಪೂಗಳಲ್ಲಿ ಡೈಸಿಯ ಬಳಕೆಯನ್ನು ಕಡ್ಡಾಯ ಮಾಡಲಾಯಿತು.
ಬೆಸಿಲಸ್ ತುರಿಂಜೆನೆಸಿಸ್ ಎಂಬುದು ಒಂದು ಸ್ವಾಭಾವಿಕ ಬ್ಯಾಕ್ಟೀರಿಯಾ ಆಗಿದೆ. ಇದು ಮಣ್ಣಿನಲ್ಲಿ ಇರುತ್ತದೆ. ಈ ಬ್ಯಾಕ್ಟೀರಿಯಾ ವಿಷಪೂರಿತ ಪ್ರೊಟೀನ್‌ಗಳನ್ನು ಉತ್ಪತ್ತಿ ಮಾಡುವ ಕಾರಣದಿಂದ ಇದನ್ನು ಸೇವಿಸುವ ಕೀಟಗಳು ಸತ್ತು ಹೋಗುತ್ತವೆ. ಈ ಕಾರಣಕ್ಕಾಗಿ ಕೀಟನಾಶಕಗಳಲ್ಲಿ ಇದನ್ನು ಬೆರೆಸಲಾಗುತ್ತದೆ.
ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಬೇವನ್ನು ಔಷಧೀಯ ಸಸ್ಯವಾಗಿ ಬಳಕೆ ಮಾಡಲಾಗುತ್ತದೆ. ಬೇವನ್ನು ಪ್ರಮುಖವಾಗಿ ʻಅಜಾಡಿರ್ಯಾಕ್ಟಿನ್(Azardurachtin)ʼʼ ಎಂಬ ಕೀಟನಾಶಕ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. ಭಾರತೀಯ ಕೃಷಿ ಪದ್ಧತಿ ಹಾಗೂ ಸೌಂದರ್ಯ ವರ್ಧಕಗಳ ತಯಾರಿಕೆಯಲ್ಲಿ ಬೇವನ್ನು ಅಧಿಕ ಪ್ರಮಾಣದಲ್ಲಿ ಬಳಸಲಾಗುತ್ತದೆ.
3. ಮರದ ಉತ್ಪನ್ನಗಳು: (Wood products)
ಆದಿ ಮಾನವನಿಂದ ಹಿಡಿದು ಆಧುನಿಕ ಮಾನವನವರೆಗೆ ಮರವನ್ನು ಉರುವಲು ಸೌದೆಗಾಗಿ ಬಳಕೆ ಮಾಡಲಾಗುತ್ತದೆ. ಇದು ಅಲ್ಲದೆ ಮರವನ್ನು ಕಟ್ಟಡ ನಿರ್ಮಾಣಕ್ಕಾಗಿ, ಅಣೆಕಟ್ಟು ಸೇತುವೆ ಹಾಗೂ ರೈಲು ಹಳಿ ನಿರ್ಮಾಣದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಮುಂದುವರೆದು ಅಲಂಕಾರಿಕ ವಸ್ತುಗಳ ತಯಾರಿಕೆ, ಕಾಗದ ತಯಾರಿಕೆ, ರೆಯಾನ್ ತಯಾರಿಕೆ, ಗೊಂಬೆಗಳ ತಯಾರಿಕೆ ಹಾಗೂ ಆಟಿಕೆಗಳ ತಯಾರಿಕೆಗಳಲ್ಲಿ ಮರವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಾರೆ.
4. ಮನೋರಂಜನಾ ಮೌಲ್ಯಗಳು: (Aesthetic values)
ಜೀವವೈವಿಧ್ಯತೆಯು ಪ್ರವಾಸ ಹಾಗೂ ಮನರಂಜನ ಚಟುವಟಿಕೆಗಳ ಪ್ರಮುಖ ಅಂಗಗಳಾಗಿ ಕೆಲಸ ನಿರ್ವಹಿಸುತ್ತದೆ. ಅನೇಕ ಗಿರಿಧಾಮಗಳು, ಪರ್ವತಗಳು, ಹಿತಕರವಾದ ಹವಾಗುಣವನ್ನು ಹೊಂದಿದ್ದು ಜನರು ಅಲ್ಲಿಗೆ ಹೋಗಿ ಸಮಯವನ್ನು ಕಳೆಯಲು ಅತ್ಯಂತ ಪ್ರಶಸ್ತವಾದ ತಾಣವಾಗಿವೆ. ಪಕ್ಷಿಧಾಮಗಳು, ಅಭಯಾರಣ್ಯಗಳು, ವನ್ಯಮೃಗ ಸಂರಕ್ಷಣಾ ತಾಣಗಳು, ಪ್ರಾಣಿ ಸಂಗ್ರಹಾಲಯಗಳು ಮೊದಲಾದವುಗಳು ಜನರಿಗೆ ಮನರಂಜನೆಯನ್ನು ಒದಗಿಸುತ್ತವೆ. ವನ್ಯಜೀವಿಗಳ ಕುರಿತು ಸಾಹಿತ್ಯ ರಚಿಸಲು, ಛಾಯಾಗ್ರಹಣ ಮಾಡಲು, ಪಕ್ಷಿ ವೀಕ್ಷಿಸಲು, ಪರಿಸರ ಅಧ್ಯಯನ ಕ್ಷೇತ್ರಗಳಾಗಿ ಹೆಚ್ಚು ಪ್ರಸಿದ್ಧಿಗಳಿಸಿವೆ.
5. ಸಾಂಸ್ಕೃತಿಕ ಮೌಲ್ಯಗಳು: (Cultural values)
ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಜೀವವೈವಿಧ್ಯತೆಗಳಿಗೆ ಅತ್ಯಂತ ಮಹತ್ವವನ್ನು ನೀಡಲಾಗಿದೆ. ಹಬ್ಬ ಹರಿದಿನಗಳಲ್ಲಿ ಮರಗಳನ್ನು ಪೂಜಿಸುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಉದಾ: ದಸರಾ ಹಬ್ಬದಲ್ಲಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸುವುದು ಇಂದಿಗೂ ರೂಢಿಯಲ್ಲಿದೆ.
ಉಪಸಂಹಾರ
ಒಟ್ಟಿನಲ್ಲಿ ಜೀವವೈವಿಧ್ಯತೆಯು ಮಾನವನ ಜೀವನಕ್ಕೆ ಅಮೂಲ್ಯವಾದ ಪ್ರಕೃತಿಯ ವರವಾಗಿದೆ. ಪರಿಸರದ ಸಮತೋಲನ, ಆರೋಗ್ಯಕರ ಜೀವನ ಹಾಗೂ ಆರ್ಥಿಕ ಅಭಿವೃದ್ಧಿಗೆ ಇದು ಅವಿಭಾಜ್ಯ ಅಂಗವಾಗಿದೆ. ಮಾನವನ ಅತಿಯಾದ ದುರಾಸೆಯಿಂದ ಇಂದು ಜೀವವೈವಿಧ್ಯತೆ ಅಪಾಯಕ್ಕೆ ಸಿಲುಕುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಜೀವವೈವಿಧ್ಯತೆಯನ್ನು ಸಂರಕ್ಷಿಸುವ ಹೊಣೆಗಾರಿಕೆಯನ್ನು ಅರಿತುಕೊಳ್ಳಬೇಕು. ಪ್ರಕೃತಿಯನ್ನು ಉಳಿಸಿದರೆ ಮಾತ್ರ ಭವಿಷ್ಯದ ಪೀಳಿಗೆಗೆ ಸುಸ್ಥಿರ ಜೀವನವನ್ನು ನೀಡಲು ಸಾಧ್ಯ.