ಅಶೋಕನ ಆಡಳಿತ ವ್ಯವಸ್ಥೆ
ಸಾಹಸಪ್ರಿಯನೂ, ದಿಗ್ವಿಜಯಶಾಲಿಯೂ ಆಗಿದ್ದ ಅಶೋಕ ಮಹಾಶಯ ದಕ್ಷ ಆಡಳಿತಗಾರನೂ ಸಹ ಆಗಿದ್ದನು. ಆತನ ಆಡಳಿತವು ಪ್ರಾಚೀನ ಭಾರತದ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಂಡಿರುವ ಆದರ್ಶ ಮತ್ತು ಮಾದರಿಯಾದ ಆಡಳಿತವಾಗಿದೆ. ಭಾರತ ಖಂಡದ ಚರಿತ್ರೆಯಲ್ಲಿ ಮೊದಲ ಬಾರಿಗೆ ವಿಶಾಲ ಮತ್ತು ಐಕ್ಯತೆಯ ಸಾಮ್ರಾಜ್ಯವನ್ನು ಅಶೋಕ ಸ್ಥಾಪಿಸಿದ್ದನು. ಅಶೋಕನ ಆಡಳಿತ ಸಂಘಟನೆಯಲ್ಲಿ ಕೆಲವು ಪ್ರಮುಖ ಲಕ್ಷಣಗಳು ಕಂಡುಬರುತ್ತವೆ. ಅಂತಹ ಲಕ್ಷಣಗಳು ಮೌರ್ಯರ ಆಡಳಿತದ ಲಕ್ಷಣಗಳಾಗಿಯೂ ಕಂಡುಬರುತ್ತವೆ. ಅಂತಹ ಪ್ರಮುಖ ಲಕ್ಷಣಗಳೆಂದರೆ :
- ಪ್ರಬಲ ಕೇಂದ್ರಾಡಳಿತ,
- ವಿಕೇಂದ್ರೀಕೃತ ಆಡಳಿತ
- ಪ್ರಜಾಹಿತ ಆಡಳಿತ
- ಲೋಕೋಪಯೋಗಿ ಕಾರ್ಯಗಳು
1. ಪ್ರಬಲ ಕೇಂದ್ರಾಡಳಿತ :
ಅಶೋಕನ ಆಡಳಿತ ವ್ಯವಸ್ಥೆಯಲ್ಲಿ ಕೇಂದ್ರಸರ್ಕಾರವು ಅತ್ಯಂತ ಪ್ರಬಲವಾದುದಾಗಿತ್ತು. ಕೇಂದ್ರಾಡಳಿತವು ರಾಜ ಮತ್ತು ಮಂತ್ರಿಪರಿಷತ್ ಸಹಾಯದಿಂದ ನಡೆಯುತ್ತಿತ್ತು. ರಾಜನಿಗೆ ಅಪರಿಮಿತ ಅಧಿಕಾರಗಳಿದ್ದವು. ಅಧಿಕಾರಿಗಳ ದೃಷ್ಟಿಯಿಂದ ರಾಜನು ನಿರಂಕುಶಾಧಿಕಾರಿಯಾಗಿದ್ದನು. ಆದರೆ ಆಡಳಿತ ನಿರಂಕುಶ ರೀತಿಯಲ್ಲಿ ಇರಲಿಲ್ಲ. ರಾಜನು ಸಾಮಾನ್ಯ ಆಡಳಿತಗಾರನಾಗಿ, ಅತ್ಯುಚ್ಛ ನ್ಯಾಯಾಧೀಶನಾಗಿ, ಶ್ರೇಷ್ಠ ದಂಡನಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದನು.
ಮಂತ್ರಿಪರಿಷತ್ : ಕೇಂದ್ರಾಡಳಿತದಲ್ಲಿ ರಾಜನಿಗೆ ಸಹಕಾರಿಯಾಗಿ ಮಂತ್ರಿಪರಿಷತ್ ಇತ್ತು. ಕೇಂದ್ರಾಡಳಿತದಲ್ಲಿ ವಿವಿಧ ಇಲಾಖೆಯ ಮುಖ್ಯಸ್ಥರು ಕಾರ್ಯನಿರ್ವಹಿಸುತ್ತಿದ್ದರು.
ಅಂತ ಮಹಾಮಾತ್ರರು : ರಾಜ್ಯದ ಗಡಿಭಾಗಗಳ ರಕ್ಷಣಾ ಕಾರ್ಯವನ್ನು ನಿರ್ವಹಿಸುತ್ತಿದ್ದರು.
ಧರ್ಮ ಮಹಾಮಾತ್ರರು : ಧಾರ್ಮಿಕ ಶ್ರೇಯಸ್ಸನ್ನು ಸಾಧಿಸುತ್ತಿದ್ದರು.
ಸ್ತ್ರೀ ಅದ್ಯಕ್ಷ ಮಹಾಮಾತ್ರರು : ಸ್ತ್ರೀಯರ ಹಿತವನ್ನು ನೋಡಿಕೊಳ್ಳುತ್ತಿದ್ದರು.
2. ವಿಕೇಂದ್ರೀಕೃತ ಆಡಳಿತ :
ಅಶೋಕನು ಸಂಸ್ಥಾಪಿಸಿದ್ದ ಆಡಳಿತವು ವಿಕೇಂದ್ರೀಕೃತ ಸ್ವರೂಪದ್ದಾಗಿತ್ತು. ಅಶೋಕನ ಕಾಲದಲ್ಲಿ 5 ಪ್ರಾಂತ್ಯಗಳಿದ್ದು ಪ್ರಾಂತ್ಯಾಧಿಕಾರಿಗಳು ಪ್ರಾಂತೀಯ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. ಅವುಗಳೆಂದರೆ; ಕಳಿಂಗ, ಕೋಸಲ, ಪಾಟಲೀಪುತ್ರ, ಉಜ್ಜಯನಿ ಮತ್ತು ಸುವರ್ಣಗಿರಿ, ಕೇಂದ್ರಾಡಳಿತದಂತೆಯೇ ಪ್ರಾಂತೀಯ ಆಡಳಿತವು ಸಹ ವ್ಯವಸ್ಥಿತ ಮತ್ತು ಸುಭದ್ರ ಆಡಳಿತವೆನಿಸಿತ್ತು.
3. ಪ್ರಜಾಹಿತ ಆಡಳಿತ (ಸುಖೀ ರಾಜ್ಯದ ಸ್ಥಾಪನೆ):
ಅಶೋಕನು ಸಂಸ್ಥಾಪಿಸಿದ್ದ ಆಡಳಿತವು ಪ್ರಜಾಹಿತ ಆಡಳಿತವೆನಿಸಿತ್ತು. ಪ್ರಜಾಹಿತಾಕಾಂಕ್ಷೆಯೇ ರಾಜನ ಆಡಳಿತದ ಮೂಲ ಮಂತ್ರವಾಗಿತ್ತು. ಪ್ರಜಾ ಅಭ್ಯುದಯವೇ ರಾಜನ ಅಭ್ಯುದಯವಾಗಿತ್ತು.
4. ಪ್ರಜಾಕಲ್ಯಾಣ (ಲೋಕೋಪಯೋಗಿ ಕಾರ್ಯಗಳು):
ಪ್ರಜಾಕಲ್ಯಾಣ ಕಾರ್ಯಕ್ಕಾಗಿ ಕೆಲವು ಲೋಕೋಪಯೋಗಿ ಕಾರ್ಯಗಳನ್ನು ಜಾರಿಗೆ ತಂದಿದ್ದನು. ಪ್ರಯಾಣಿಕರಿಗಾಗಿ ಮಾರ್ಗಗಳನ್ನು ನಿರ್ಮಿಸಿದ್ದನು. ಮಾರ್ಗಗಳ ಎರಡು ಕಡೆಗೂ ನೆರಳಿಗಾಗಿ ಆಲದ ಮರಗಳನ್ನು ನೆಡಿಸಿದ್ದನು. ಮಾವಿನ ತೋಪುಗಳನ್ನು ಬೆಳೆಸಿದ್ದನು. ಪ್ರತಿ 9 ಮೈಲುಗಳಿಗೆ ಬಾವಿಯನ್ನು ತೊಡಿಸಿದ್ದನು. ಮಾರ್ಗದ ಮಧ್ಯೆ ವಿಶ್ರಾಂತಿ ಗೃಹಗಳನ್ನು ಕಟ್ಟಿಸಿದ್ದನು. ಪ್ರಾಣಿ ಮತ್ತು ಮಾನವರ ಉಪಯೋಗಕ್ಕಾಗಿ ಚಿಕಿತ್ಸಾಲಯಗಳನ್ನು ತೆರೆದಿದ್ದನು. ಚಿಕತ್ಸೆಗಾಗಿ ಗಿಡಮೂಲಿಕೆಗಳ ವನವನ್ನು ಬೆಳೆಸಿದ್ದನು. ಅಶೋಕನ 7 ನೇ ಸ್ತಂಭಶಾಸನ ಮತ್ತು 2ನೇ ಬಂಡೆಕಲ್ಲು ಶಾಸನದಿಂದ ಅಶೋಕನ ಪ್ರಜಾಹಿತ ಕಾರ್ಯಗಳ ವಿವರ ತಿಳಿದುಬರುತ್ತದೆ. ಈ ಮೇಲಿನ ಅಂಶಗಳನ್ನು ಅವಲೋಕಿಸಿದ ಚರಿತ್ರಾಕಾರ ʻಫೀಟ್’ ಅಭಿಪ್ರಾಯ ಪಡುವಂತೆ `ಪ್ರಜಾಹಿತಕಾರ್ಯಕ್ಕೆ ಅಶೋಕನ ಧಾರ್ಮಿಕ ಮತ್ತು ನೈತಿಕ ಅಂಶಗಳು ಆಧಾರಗಳಾಗಿದ್ದವು’.
5. ಶಾಂತಿ ಮತ್ತು ಅಹಿಂಸೆಯ ತತ್ವ :
ಅಶೋಕನ ಆಳ್ವಿಕೆಯಲ್ಲಿ ಶಾಂತಿ ಮತ್ತು ಅಹಿಂಸೆಯ ತತ್ವವು ಮೂಲ ಆಧಾರವಾಗಿತ್ತು. ಶಾಂತಿ ಮತ್ತು ಅಹಿಂಸಾತತ್ವವು ಬೌದ್ಧ ಧಾರ್ಮಿಕ ತತ್ವಗಳನ್ನು ಆಧರಿಸಿದೆ. ಯುದ್ಧದಿಂದ ಮತ್ತು ಹಿಂಸೆಗಳ ಮೂಲಕ ಭೂಪ್ರದೇಶ ಗೆಲ್ಲುವುದನ್ನು ತ್ಯಜಿಸುವುದು, ಜೊತೆಗೆ ಪ್ರಾಣಿಹತ್ಯೆಯನ್ನು ತಡೆಗಟ್ಟುವುದೇ ಆಗಿದೆ.