ಜಗತ್ತಿನ ಪ್ರತಿಯೊಂದು ದೇಶಗಳು ತಮ್ಮ ಸಾಂಸ್ಕೃತಿಕ, ಭೌಗೋಳಿಕ, ರಾಜಕೀಯ ಹಾಗೂ ಧಾರ್ಮಿಕ ನೆಲೆಯಲ್ಲಿ ಸಂವಿಧಾನವನ್ನು ರಚಿಸಿ ಅಳವಡಿಸಿಕೊಂಡಿವೆ. ಈ ಕಾರಣದಿಂದ ಪ್ರಪಂಚದಾದ್ಯಂತ ಏಕರೂಪದ ಸಂವಿಧಾನವನ್ನು ನಾವು ನೋಡಲು ಸಾಧ್ಯವಾಗುವುದಿಲ್ಲ. ಹೀಗೆ ವೈವಿಧ್ಯಮಯವಾದ ಸಂವಿಧಾನವನ್ನು ಆಧರಿಸಿ ರಾಜಕೀಯ ಚಿಂತಕರು ನಾಲ್ಕು ರೀತಿಯ ಸಂವಿಧಾನವನ್ನು ಗುರುತಿಸಿದ್ದಾರೆ ಅವುಗಳು ಈ ಕೆಳಕಂಡಂತಿವೆ.
A. ಲಿಖಿತ ಸಂವಿಧಾನ: ಸಂವಿಧಾನವು ಬರಹ ರೂಪದಲ್ಲಿರುವ ನಿಯಮಾವಳಿಗಳನ್ನು ಹೊಂದಿದ್ದರೆ ಅದನ್ನು ಲಿಖಿತ ಸಂವಿಧಾನ ಎಂದು ಕರೆಯುಲಾಗಿದೆ ಭಾರತವು ಲಿಖಿತ ಸಂವಿಧಾನವನ್ನು ಹೊಂದಿದ ಬೃಹತ್ ಪ್ರಜಾಪ್ರಭುತ್ವ ದೇಶವಾಗಿದೆ ಅಮೆರಿಕ ಸಂವಿಧಾನವು ಕೂಡ ಲಿಖಿತ ಸಂವಿಧಾನವನ್ನು ಹೊಂದಿದ್ದು ಇದನ್ನು ಫಿಲಿಡೆಲ್ವಿಯಾ ಸಭೆಯು ರಚಿಸಿದಂತೆ ಭಾರತದ ಸಂವಿಧಾನವನ್ನು ಸಂವಿಧಾನದ ರಚನಾ ಸಭೆಯಿಂದ ರಚಿಸಲಾಯಿತು. ಭಾರತದ ಸಂವಿಧಾನವನ್ನು ರಚಿಸಲು ಸರಿಸುಮಾರು ಮೂರು ವರ್ಷಗಳ ಕಾಲ ತೆಗೆದುಕೊಂಡು ಕೊನೆಗೆ ಭಾರತ ಸರ್ಕಾರದಿಂದ ಅಂಗೀಕಾರಗೊಂಡಿತು. ಈ ಸಂವಿಧಾನದಲ್ಲಿ ಆಡಳಿತಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ವಿವರವಾಗಿ ತಿಳಿಸಲಾಗಿದೆ. ಪೌರತ್ವ, ಮೂಲಭೂತ ಕರ್ತವ್ಯಗಳು, ಮೂಲಭೂತ ಹಕ್ಕುಗಳು, ರಾಜ್ಯ ನಿರ್ದೇಶಕ ತತ್ವಗಳು, ಸಂಯುಕ್ತ ಪದ್ದತಿ, ತುರ್ತು ಪರಿಸ್ಥಿತಿ ಅಧಿಕಾರಗಳು, ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ, ಸಾರ್ವತ್ರಿಕ ಚುನಾವಣೆಗಳು, ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ರಕ್ಷಣೆಗಳು, ಕೇಂದ್ರ ಹಾಗೂ ಹಿಂದುಳಿದ ವರ್ಗಗಳ ರಕ್ಷಣೆಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಳ ರಚನೆ ಹಾಗೂ ಅವುಗಳ ನಡುವಿನ ಸಂಬಂಧಗಳು ಮುಂತಾದ ವಿಷಯಗಳ ಬಗ್ಗೆ ಸಮಗ್ರವಾದ ವಿವರಣೆಗಳನ್ನು ಒಳಗೊಂಡಿದೆ 1949ರ ನವೆಂಬರ್ 26ರಂದು ಅಂಗೀಕರಿಸಲ್ಪಟ್ಟ ಸಂವಿಧಾನದಲ್ಲಿ 395 ವಿಧಿಗಳು 8 ಅನುಸೂಚಿಗಳು ಇದ್ದವು. ಅನೇಕ ಸಂವಿಧಾನ ತಿದ್ದುಪಡಿಗಳ ಪರಿಣಾಮವಾಗಿ ವಿಧಿಗಳ ಸಂಖ್ಯೆಯಲ್ಲಿ ಏರುಪೇರು ಕಂಡು ಬಂದಿದೆ. ಕೆಲವು ವಿಧಿಗಳು ರದ್ದಾಗಿ ಮತ್ತೆ ಕೆಲವು ವಿಧಿಗಳು ಸಂವಿಧಾನಕ್ಕೆ ಸೇರ್ಪಡೆಗೊಂಡಿದ್ದರೂ ವಿಧಿಗಳ ಮೊದಲ ಕ್ರಮ ಸಂಖ್ಯೆ ಮಾತ್ರ ಬದಲಾಗಿಲ್ಲ ಭಾರತದ ಸಂವಿಧಾನವು ಲಿಖಿತ ಸಂವಿಧಾನವಾಗಿದ್ದರೂ ಅದು ಸಂಪ್ರದಾಯಗಳ ರೂಪದ ಕೆಲವು ಅಲಿಖಿತ ಅಂಶಗಳನ್ನು ಕೂಡ ಹೊಂದಿದೆ ಈ ಎಲ್ಲಾ ಅಂಶಗಳು ಸಹ ಸಂವಿಧಾನದ ಪ್ರಮುಖ ಭಾಗಗಳಾಗಿವೆ. ಅಲಿಖಿತ ಅಂಶಗಳು ಲಿಖಿತ ಅಂಶಗಳಿಗೆ ಪೂರಕವಾಗಿದ್ದು ಅವುಗಳ ಕೆಲವು ಉದಾಹರಣೆಗಳನ್ನು ಈ ಕೆಳಕಂಡಂತೆ ನೋಡಬಹುದು.
1. ಪ್ರಧಾನಮಂತ್ರಿಯು ಬಹುಮತ ಪಡೆಯದಿದ್ದು ಒಂದು ವೇಳೆ ರಾಷ್ಟ್ರಪತಿಗಳೇನಾದರೂ ಅವರನ್ನು ಪ್ರಧಾನಮಂತ್ರಿಯಾಗಿ ನೇಮಕ ಮಾಡಿದರೆ ಅಂತಹ ಪ್ರಧಾನ ಮಂತ್ರಿಯು ಒಂದು ತಿಂಗಳಲ್ಲಿ ವಿಶ್ವಾಸ ಮತವನ್ನು ಗಳಿಸಬೇಕು.
2. ಜೇಷ್ಠತೆಯ ಆಧಾರದ ಮೇಲೆ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರನ್ನು ನೇಮಿಸಬೇಕು.
3. ಸಾರ್ವಜನಿಕ ಲೆಕ್ಕ ಸಮಿತಿಯ ಅಧ್ಯಕ್ಷರು ಯಾವುದೇ ವಿರೋಧ ಪಕ್ಷದವರಾಗಿರಬಹುದು.
B. ಅಲಿಖಿತ ಸಂವಿಧಾನ: “ಸಂವಿಧಾನದ ಬಹುತೇಕ ನಿಯಮಾವಳಿಗಳು ಬರಹ ರೂಪದಲ್ಲಿರದೆ ರೂಡಿ ಮತ್ತು ಸಂಪ್ರದಾಯಗಳ ರೂಪದಲ್ಲಿ ಇದ್ದರೆ ಅದನ್ನು ಅಲಿಖಿತ ಸಂವಿಧಾನ ಎಂದು ಕರೆಯಲಾಗುತ್ತದೆ.” ಅಲಿಖಿತ ಸಂವಿಧಾನವಿರುವಲ್ಲಿ ಸರ್ಕಾರದ ಅಧಿಕಾರ ಹಂಚಿಕೆ ಹಾಗೂ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಮಾವಳಿಗಳು ಬರಹ ರೂಪದಲ್ಲಿರದೆ ಅಲಿಖಿತ ರೂಪದಲ್ಲಿರುತ್ತವೆ.
ಅಲಿಖಿತ ಸಂವಿಧಾನದ ಬಹುತೇಕ ತತ್ವಗಳು ಕಾಲಾನುಕ್ರಮದಲ್ಲಿನ ಅನುಭವಗಳಿಂದ ಅಸ್ತಿತ್ವದಲ್ಲಿ ಇರುತ್ತವೆ. ಮುಂದುವರೆದು ಸಂವಿಧಾನ ರಚನಾ ಸಭೆಯಿಂದ ಉದ್ದೇಶಪೂರ್ವಕವಾಗಿ ರಚನೆಗೊಂಡ ಕೃತಕ ನಿಯಮಗಳನ್ನು ಅಲಿಖಿತ ಸಂವಿಧಾನವು ಒಳಗೊಂಡಿರುವುದಿಲ್ಲ. ಅಧಿಕ ಅಲಿಖಿತ ನಿಯಮಗಳನ್ನು ಹೊಂದಿರುವ ಬ್ರಿಟಿಷ್ ಸಂವಿಧಾನವನ್ನು ಅಲಿಖಿತ ಸಂವಿಧಾನವೆಂದು ಪರಿಗಣಿಸಲಾಗಿದೆ.
C. ಭಾಗಶಃ ನಮ್ಯ ಹಾಗೂ ಭಾಗಶಃ ಅನಮ್ಯ:
ಯಾವ ಸಂವಿಧಾನವನ್ನು ವಿಶೇಷ ವಿಧಾನವನ್ನು ಅನುಸರಿಸದೆ ಸುಲಭವಾಗಿ ತಿದ್ದುಪಡಿ ಮಾಡಬಹುದು ಅದನ್ನು ನಮ್ಯ ಅಥವಾ ಸುಲಭ ಸಂವಿಧಾನವೆಂದು ಮತ್ತು ಯಾವ ಸಂವಿಧಾನವನ್ನು ತಿದ್ದುಪಡಿ ಮಾಡಲು ವಿಶೇಷ ವಿಧಾನವನ್ನು ಅನುಸರಿಸಬೇಕು ಅದನ್ನು ಅನಮ್ಯ ಅಥವಾ ಕಠಿಣ ಸಂವಿಧಾನವೆಂದು ಕರೆಯಲಾಗಿದೆ. ಭಾರತದ ಸಂವಿಧಾನವು ಬ್ರಿಟಿಷ್ ಸಂವಿಧಾನದಂತೆ ನಮ್ಮಯವೂ ಅಲ್ಲ ಅಥವಾ ಅಮೆರಿಕಾದ ಸಂವಿಧಾನದಂತೆ ಅನಮ್ಯವೂ ಅಲ್ಲ. ಹೆಚ್ಚು ಕಠಿಣ ಮಾರ್ಗವನ್ನು ಅನುಸರಿಸಿ ಭಾರತದ ಸಂವಿಧಾನವನ್ನು ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಸಂವಿಧಾನದಂತೆ ಸಂಸತ್ತು ಪರಮೋಚ್ಚ ಅಧಿಕಾರವನ್ನು ಹೊಂದಿದ್ದು ಸಂವಿಧಾನದ ನಿಯಮಾವಳಿಗಳನ್ನು ತಿದ್ದುಪಡಿ ಮಾಡುವ ಅಧಿಕಾರವನ್ನು ಪಡೆದಿದೆ. ಪರಿಣಾಮವಾಗಿ ಬ್ರಿಟಿಷ್ ಸಂಸತ್ತು ಸಾಮಾನ್ಯ ಕಾನೂನನ್ನು ಬದಲಾಯಿಸುವಂತೆ ಸಂವಿಧಾನದ ನಿಯಮಾವಳಿಗಳನ್ನು ತಿದ್ದುಪಡಿ ಮಾಡಲು ಅನುಮತಿಯನ್ನು ಪಡೆದಿದೆ. ಈ ಕಾರಣದಿಂದ ಬ್ರಿಟಿಷ್ ಸಂವಿಧಾನವನ್ನು ನಮ್ಯ ಸಂವಿಧಾನ ಎಂದು ಕರೆಯಲಾಗಿದೆ ಈ ರೀತಿಯ ತಿದ್ದುಪಡಿಯಿಂದಾಗಿ ಆಗಾಗ ಆಗುತ್ತಿರುವ ಬದಲಾವಣೆಗಳನ್ನು ತ್ವರಿತವಾಗಿ ಕೈಗೊಳ್ಳಲು ಸಾಧ್ಯವಾಗುತ್ತದೆ.
ಇನ್ನು ಅನಮ್ಯ ಸಂವಿಧಾನ ಹೊಂದಿದ ದೇಶಗಳಲ್ಲಿ ತ್ವರಿತ ಬದಲಾವಣೆಗೆ ಹಿನ್ನಡೆ ಉಂಟಾಗುತ್ತದೆ. ಉದಾಹರಣೆ ಅಮೇರಿಕಾದ ಸಂವಿಧಾನವು ಜಗತ್ತಿನ ಅತಿ ಕಠಿಣವಾದ ಸಂವಿಧಾನವೆನಿಸಿದ್ದು ಜಾರಿಗೊಂಡು ಎರಡು ಶತಮಾನಗಳು ಕಳೆದರೂ ಈವರೆಗೆ ಕೇವಲ 27 ತಿದ್ದುಪಡಿಗಳನ್ನು ಮಾತ್ರ ಮಾಡಲಾಗಿದೆ.
ಉಪಸಂಹಾರ
ಸಂವಿಧಾನವು ದೇಶದ ಆಡಳಿತ, ಹಕ್ಕುಗಳು ಮತ್ತು ಕರ್ತವ್ಯಗಳಿಗೆ ದಿಕ್ಕು ನೀಡುವ ಪ್ರಮುಖ ದಾಖಲೆ ಆಗಿದೆ. ಲಿಖಿತ ಹಾಗೂ ಅಲಿಖಿತ ಸಂವಿಧಾನಗಳು ತಮ್ಮದೇ ಆದ ಲಾಭ–ಮಿತಿಗಳನ್ನು ಹೊಂದಿವೆ. ನಮ್ಯ ಮತ್ತು ಅನಮ್ಯ ಸಂವಿಧಾನಗಳ ಸಂಯೋಜನೆಯೇ ಸ್ಥಿರ ಹಾಗೂ ಚುರುಕಾದ ಆಡಳಿತಕ್ಕೆ ಕಾರಣವಾಗುತ್ತದೆ. ಈ ಕಾರಣದಿಂದ ಭಾರತ ಸಂವಿಧಾನವು ಜಗತ್ತಿನ ಅತ್ಯಂತ ಸಮಗ್ರ ಮತ್ತು ಸಮತೋಲನದ ಸಂವಿಧಾನಗಳಲ್ಲಿ ಒಂದಾಗಿದೆ.