ವನ್ಯಜೀವಿ ಸಂರಕ್ಷಣಾ ಯೋಜನೆಗಳು

ಜೀವ ಪ್ರಭೇದಗಳ ರಕ್ಷಣೆಗಾಗಿ ಭಾರತ ಸರ್ಕಾರವು ಈ ಕೆಳಗಿನ ಯೋಜನೆಗಳನ್ನು ಹಮ್ಮಿಕೊಂಡಿದೆ.

1. ಹುಲಿ ಯೋಜನೆ: (Tiger Project)

ರಾಷ್ಟ್ರೀಯ ಪ್ರಾಣಿ ಎಂದು ಹೆಸರಾದ ಹುಲಿಯು ಇಂದು ಅಳಿವಿನ ಅಂಚಿನಲ್ಲಿದೆ. ಭಾರತವು 1900ರಲ್ಲಿ ಸುಮಾರು 40000 ಹುಲಿಗಳನ್ನು ಹೊಂದಿತ್ತು. ಆದರೆ ಇವುಗಳ ಸಂಖ್ಯೆ 1970ರಲ್ಲಿ 1800 ಕ್ಕೆ ಇಳಿಯಿತು. ಇದರಿಂದ ಆತಂಕಗೊಂಡ ಭಾರತ ಸರ್ಕಾರ ಭಾರತೀಯ ವನ್ಯಜೀವಿ ಮಂಡಳಿಯ ನೇತೃತ್ವದಲ್ಲಿ ಹುಲಿಗಳ ಸಂರಕ್ಷಣೆಗೆಂದು 1970ರಲ್ಲಿ ಒಂದು ವಿಶೇಷ ಕಾರ್ಯವನ್ನು ಸಂಘಟಿಸಿತು. ಇದರ ಪರಿಣಾಮವಾಗಿ 1973 ಏಪ್ರಿಲ್ 1 ರಂದು ʻʻಭಾರತ ಸರ್ಕಾರದ ಹುಲಿ ಯೋಜನೆಯನ್ನು ಜಾರಿಗೆ ತಂದಿತು.ʼʼ

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸ್ಥಾಪನೆ:

ವನ್ಯಜೀವಿ ಸಂರಕ್ಷಣಾ ತಿದ್ದುಪಡಿ ಕಾಯ್ದೆ 2006ರ ಪ್ರಕಾರ ವನ್ಯಜೀವಿ ಸಂರಕ್ಷಣಾ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ. ಈ ಪ್ರಾಧಿಕಾರವು ಈ ಕೆಳಗಿನ ಕಾರ್ಯಗಳನ್ನು ಹಮ್ಮಿಕೊಂಡಿದೆ.

  1. a) ರಾಜ್ಯ ಸರ್ಕಾರ ತಯಾರಿಸಿದ ಹುಲಿ ಸಂರಕ್ಷಣಾ ಯೋಜನೆಗಳಿಗೆ ಅನುಮೋದನೆಯನ್ನು ನೀಡುವುದು.
  2. b) ಹುಲಿ ಮೀಸಲು ಪ್ರದೇಶಗಳಲ್ಲಿ ಗಣಿಗಾರಿಕೆ, ಕೈಗಾರಿಕೆ ಹಾಗೂ ವಿವಿಧ ಯೋಜನೆಗಳನ್ನು ಮಾಡಿದಂತೆ ತಡೆ ನೀಡುವುದು.
  3. c) ಹುಲಿಗಳ ರಕ್ಷಣೆಗಾಗಿ ಕಾಲಕಾಲಕ್ಕೆ ಯೋಜನೆಯ ಮಾರ್ಗಸೂಚಿಯನ್ನು ಬಿಡುಗಡೆ ಮಾಡುವುದು.
  4. d) ಸಂರಕ್ಷಣೆಯ ಕ್ರಮಗಳ ಕುರಿತು ಪ್ರಾಧಿಕಾರವು ಸರ್ಕಾರಕ್ಕೆ ಆಗಾಗ ಮಾಹಿತಿ ನೀಡುವುದು.

2) ಆನೆ ಯೋಜನೆ: (Elephant Project)

1992 ರಲ್ಲಿ ಆನೆಯೋಜನೆಯನ್ನು ಆರಂಭಿಸಲಾಯಿತು. ಈ ಯೋಜನೆಯ ಮೂಲ ಉದ್ದೇಶಗಳು ಈ ಕೆಳಗಿನಂತಿವೆ.

  1. ಆನೆಗಳ ಆವಾಸಸ್ಥಾನಗಳನ್ನು ರಕ್ಷಿಸುವುದು ಮತ್ತು ಪೋಷಿಸುವುದು.
  2. ಮಾನವ-ಪ್ರಾಣಿಗಳ ನಡುವಿನ ಸಂಘರ್ಷವನ್ನು ತಪ್ಪಿಸುವುದು.
  3. ಸೆರೆಸಿಕ್ಕ ಆನೆಗಳನ್ನು ಸೂಕ್ತ ರೀತಿಯಲ್ಲಿ ಪೋಷಿಸಿ ಬೆಳೆಸುವುದು.
  4. ಈ ಯೋಜನೆಯು ಭಾರತದ 16 ರಾಜ್ಯಗಳಲ್ಲಿ ಜಾರಿಯಲ್ಲಿದೆ.
  5. ಅಧಿಕ ಪ್ರಮಾಣದ ಆನೆ ಸಂತತಿಗಳನ್ನು ಹೊಂದಿದ ರಾಜ್ಯಗಳಿಗೆ ಆರ್ಥಿಕ ಹಾಗೂ ತಾಂತ್ರಿಕ ನೆರವನ್ನು ನೀಡುವುದು.

ಭಾರತದಲ್ಲಿ ಇಂದು ಆನೆ ಸುರಕ್ಷಿತಾ ವಲಯಗಳನ್ನು ಸ್ಥಾಪಿಸಲಾಗಿದ್ದು ಈಗ ಒಟ್ಟು 33 ಆನೆ ಸುರಕ್ಷಿತ ವಲಯಗಳಿವೆ. ಪ್ರಸ್ತುತ ಆನೆಗಳ ಸಂಖ್ಯೆ 23,000 ದಿಂದ 41,000 ಕ್ಕೆ ಏರಿಕೆಯಾಗಿದೆ. ಕರ್ನಾಟಕ ಒಂದರಲ್ಲಿ ಒಟ್ಟು 30000ಕ್ಕೂ ಹೆಚ್ಚು ಆನೆಗಳಿವೆ.

3. ರಣಹದ್ದು ಯೋಜನೆ : (Vultura Project)

2006 ರ ಮೇ ತಿಂಗಳಲ್ಲಿ ಭಾರತ ಸರ್ಕಾರವು ರಣಹದ್ದು ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಪ್ರಕಾರ ಮಹಾರಾಷ್ಟ್ರ ಹಾಗೂ ಹರಿಯಾಣಾ ಅರಣ್ಯ ಇಲಾಖೆಗಳು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಇವುಗಳು ರಣಹದ್ದು ಉಪಹಾರಗೃಹಗಳನ್ನು  ಆರಂಭಿಸಿವೆ.

  1. ತೀವ್ರವಾಗಿ ಇಳಿಕೆ ಕಾಣುತ್ತಿರುವ ರಣಹದ್ದುಗಳ ಸಂಖ್ಯೆಗಳನ್ನು ಹೆಚ್ಚಿಸುವುದು.
  2. ರಣಹದ್ದು ಉಪಹಾರ ಗೃಹಗಳ ಮೂಲಕ ಡೈಕ್ಲೋಪಿನಾಕ್‌ ಮುಕ್ತ ಸತ್ತ ಜಾನುವಾರುಗಳನ್ನು ರಣಹದ್ದುಗಳಿಗೆ ಆಹಾರವಾಗಿ ನೀಡಲಾಗುವುದು.
  3. ಈ ಉಪಹಾರ ಗೃಹಗಳೊಂದಿಗೆ ಸ್ಥಳೀಯ ಸಾರ್ವಜನಿಕರು ಕೈಜೋಡಿಸಿ ಸ್ವಸ್ಥಾನಗಳಲ್ಲಿ ರಣಹದ್ದುಗಳನ್ನು ರಕ್ಷಿಸುವುದು.
  4. ಗ್ರಾಮಗಳಲ್ಲಿ ಯಾವುದೇ ಪ್ರಾಣಿ ಸತ್ತು ಹೋದರೆ ಗ್ರಾಮೀಣ ಜನರು ಇಲಾಖೆಗೆ ಮಾಹಿತಿ ನೀಡುತ್ತಾರೆ. ಅರಣ್ಯ ಇಲಾಖೆ ಇದನ್ನು ಪರೀಕ್ಷಿಸಿ, ಡೈಕ್ಲೋಪಿನಾಕ್‌ ಮುಕ್ತವಾಗಿದ್ದರೆ ಅದನ್ನು ರಣಹದ್ದು ಗೃಹಗಳಿಗೆ ಸಾಗಿಸುತ್ತಾರೆ ನಂತರ ಸತ್ತ ದನಗಳ ಮಾಲೀಕರಿಗೆ ಹಣಕಾಸಿನ ನೆರವನ್ನು ನೀಡಲಾಗುತ್ತದೆ.
  5. ರಣಹದ್ದು ಗೂಡುಗಳು ಕಂಡು ಬಂದಾಗ ಅಲ್ಲಿ ಆಹಾರದ ವ್ಯವಸ್ಥೆ ಮಾಡುವುದು.

4. ಸಮುದ್ರ ಆಮೆಗಳ ಯೋಜನೆ: (Sea Turtle Project)

ಪ್ರತಿ ವರ್ಷ ಚಳಿಗಾಲ ಬಂದಿತೆಂದರೆ ಭಾರತದ ಪೂರ್ವ ಕರಾವಳಿಯಲ್ಲಿ ಆಮೆಗಳು ಗೂಡು ಕಟ್ಟಲು ಸಮುದ್ರದಿಂದ ದಡಕ್ಕೆ ಬರುತ್ತವೆ. ಇವುಗಳಲ್ಲಿ ಪ್ರಮುಖವಾದ ಆಮೆಗಳೆಂದರೆ ʻʻಆಲಿವ್‌ ರಿಡ್ಲೆ ಆಮೆʼʼ 1999 ನವೆಂಬರ್ ತಿಂಗಳಲ್ಲಿ ಪರಿಸರ ಹಾಗೂ ಅರಣ್ಯ ಸಚಿವಾಲಯವು ಅಳಿವಿನ ಅಂಚಿನಲ್ಲಿರುವ ಆಮೆಗಳನ್ನು ರಕ್ಷಿಸಲು ಸಮುದ್ರ ಆಮೆಗಳ ಸಂರಕ್ಷಣಾ ಯೋಜನೆಯನ್ನು  ಜಾರಿಗೆ ತಂದಿತು.

ಕಾರ್ಯಗಳು: 

ಒರಿಸ್ಸಾ ರಾಜ್ಯದ ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಸಮಾಜಗಳು ಸ್ಥಳೀಯ ಎನ್ ಜಿ ಒ ಸಹಯೋಗದೊಂದಿಗೆ ಈ ಕೆಳಗಿನ ರಕ್ಷಣಾ ಕಾರ್ಯಗಳನ್ನು ಹಮ್ಮಿಕೊಂಡಿದೆ.

  1. ಸಮುದ್ರದಲ್ಲಿ ಗಸ್ತು ತಿರುಗುವವರೆಗೆ ಸೂಕ್ತವಾದ ದೋಣಿಗಳ ಸಹಾಯವನ್ನು ಒದಗಿಸುವುದು.
  2. ಆಮೆಗಳ ಚಲನವಲನಗಳನ್ನು ಗುರುತಿಸಲು ಕ್ಷೇತ್ರ ಶಿಬಿರಗಳನ್ನು ಹಮ್ಮಿಕೊಳ್ಳುವುದು.
  3. ಸಾಗರದ ಆಮೆಗಳ ಸಾವಿನ ಸಂಖ್ಯೆಯನ್ನು ಲೆಕ್ಕ ಹಾಕುವುದು.
  4. ಅಕ್ರಮ ಮೀನುಗಾರಿಕೆಯನ್ನು ತಡೆಗಟ್ಟುವುದು.

5. ಹಂಗೂಲ್ ಯೋಜನೆ: (Hangul Project)

ಇದನ್ನು ಕಾಶ್ಮೀರ ಕಡವೆ ಎಂದು ಕರೆಯಲಾಗಿದೆ. ಯುರೋಪಿನಲ್ಲಿ ಕಂಡುಬರುವ ಹಿಮಸಾರಂಗ ಜಾತಿಗೆ ಸೇರಿದ ಒಂದು ಜಿಂಕೆ ಪ್ರಭೇದವಾಗಿದೆ. ಇವು ದಟ್ಟವಾದ ನದಿ ಕಾಡುಗಳು, ಎತ್ತರ ಕಣಿವೆಗಳು, ಕಾಶ್ಮೀರ ಕಣಿವೆಯ ಪರ್ವತಗಳು, ಹಿಮಾಚಲ ಪ್ರದೇಶ ಹಾಗೂ ಕಾಶ್ಮೀರದ ದಚಿಗಾಮ್‌ ರಾಷ್ಟ್ರೀಯ ಉದ್ಯಾನವನದಲ್ಲಿ ಕಂಡುಬಂದಿವೆ. 20ನೇ ಶತಮಾನದ ಹೊತ್ತಿನಲ್ಲಿ 5000 ಇದ್ದ ಈ ಜಿಂಕೆಗಳ ಸಂತತಿ ಆವಾಸಸ್ಥಾನಗಳ ನಾಶ, ಸಾಕುಪ್ರಾಣಿಗಳ ಮೇಯಿಸುವಿಕೆ, ಬೇಟೆಯಾಡುವುದು  ಮುಂತಾದ ಕ್ರಿಯೆಗಳಿಂದ ಇಳಿಮುಖವಾಗಿದೆ. ಇಂದು ಇದು ಅಳಿವಿನಂಚಿನ ಪ್ರಭೇದದ ಗುಂಪಿಗೆ ಸೇರಿದೆ. 1970ರ ವೇಳೆಗೆ ಇವುಗಳ ಸಂಖ್ಯೆ 150ಕ್ಕೆ ಇಳಿಯಿತು ಹೀಗಾಗಿ ಜಮ್ಮು ಕಾಶ್ಮೀರ ರಾಜ್ಯದ ಜೊತೆ ಸೇರಿ IUCN and WWFಗಳು ಸಂರಕ್ಷಣಾ ಯೋಜನೆಯನ್ನು ಜಾರಿಗೆ ತಂದವು. ಇದರಿಂದ 1980ರ ವೇಳೆಗೆ ಜಿಂಕೆಗಳ ಸಂತತಿ 340ಕ್ಕೆ ಏರಿತು. 2009ರ ವೇಳೆಗೆ ʻʻʻಕಾಶ್ಮೀರಿನ ಕೆಂಪುಜಿಂಕೆಯ ಹಂಗೂಲ್‌ನ್ನುʼʼ ರಕ್ಷಿಸಿ ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಅಂದಿನಿಂದ ಜಿಂಕೆಗಳನ್ನು ರಕ್ಷಿಸಲು ಅವುಗಳನ್ನು ಬಂಧಿಸಿ ಅಭಿವೃದ್ಧಿಪಡಿಸಲಾಯಿತು. ಸಂತಾನೋತ್ಪತ್ತಿ ಕೇಂದ್ರಗಳನ್ನು ʻʻಸಿಕರ್‌ಘರ್‌ ಟ್ರಾಲ್‌, ಪುಲುವಾನಾ ಮತ್ತು ಕಂಗನ್ ಜಿಲ್ಲೆಗಳಲ್ಲಿ ತೆರೆಯಲಾಯಿತು. ಆದರೂ ಅವುಗಳ ಪ್ರಗತಿ ಕಂಡುಬಂದಿಲ್ಲ.

6) ಕೆಂಪು ಪಾಂಡಾ ಯೋಜನೆ: (Red Ponda project)

ಇವುಗಳು ಪೂರ್ವ ಹಿಮಾಲಯ ಪರ್ವತಗಳಲ್ಲಿ 1500 ರಿಂದ 4,000 ಮೀಟರ್‌ಗಳಷ್ಟು ಎತ್ತರವಾದ ಪ್ರದೇಶಗಳಲ್ಲಿ ವಾಸಿಸುತ್ತವೆ. ಅರುಣಾಚಲ ಪ್ರದೇಶದಲ್ಲಿ ಇದನ್ನು ʻʻಬೆಕ್ಕು ಕರಡಿʼʼ ಎಂದು ಕರೆಯುತ್ತಾರೆ. ಕೆಂಪು ಪಾಂಡಾ ಯೋಜನೆಯು 1966 ಜಾರಿಗೆ ಬಂದಿತು. ಈ ಯೋಜನೆಯನ್ನು ಪದ್ಮಜಾ ನಾಯ್ಡು ಹಿಮಾಲಯನ್ ವನ್ಯಜೀವಿ ಉದ್ಯಾನವನದಲ್ಲಿ WWF ನ ಸಹಕಾರದೊಂದಿಗೆ ಆರಂಭಿಸಿದರು. ಕೆಂಪು ಪಾಂಡಾಗಳು ಅರುಣಾಚಲ ಪ್ರದೇಶ, ಸಿಕ್ಕಿಂ ಹಾಗೂ ಪಶ್ಚಿಮ ಬಂಗಾಳದಲ್ಲಿ ಕಂಡು ಬಂದಿವೆ. 

7)  ಮಣಿಪುರ ಥಾಮೀನ್ ಯೋಜನೆ : (Manipur Thamin Project)

ಈ ಥಾಮೀನ್ ಜಿಂಕೆಗಳು ಪಣಿಪುರ ಲೋಕ್ತಾ ಕೆರೆಯ ಆಗ್ನೇಯ ಭಾಗದಲ್ಲಿ ಕಂಡುಬರುತ್ತವೆ. ಇದು ಅತ್ಯಂತ ವಿರಳವಾದ ಪ್ರಭೇದವಾಗಿದ್ದು ಅಳಿವಿನಂಚಿನಲ್ಲಿದೆ. ಇದನ್ನು ರಕ್ಷಿಸಲು 1977ರಲ್ಲಿ ಮಣಿಪುರದಲ್ಲಿ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

8.  ಮೊಸಳೆ ತಳಿ ಸಂವರ್ಧನೆ ಯೋಜನೆ:

ತೀವ್ರವಾಗಿ ಕುಸಿಯುತ್ತಿರುವ ಮೊಸಳೆಗಳನ್ನು ಅಭಿವೃದ್ಧಿಪಡಿಸಲು 1975ರಲ್ಲಿ ಮೊಸಳೆ ತಳಿ ಸಂವರ್ಧನೆ ಯೋಜನೆಯನ್ನು ಆರಂಭಿಸಲಾಯಿತು. ಈ ಯೋಜನೆಯ ರೂವಾರಿ ಗುಜರಾತ್ ರಾಜ್ಯವಾಗಿದೆ. ಈ ಯೋಜನೆಯು ಒರಿಸ್ಸಾದ ʻʻತಿಕರಪಾರʼʼ ಎಂಬಲ್ಲಿ ಆರಂಭವಾಯಿತು. ನಂತರ ಇದನ್ನು ಉತ್ತರಪ್ರದೇಶ, ಮಹಾರಾಷ್ಟ್ರ, ಅಂಡಮಾನ್, ಅಸ್ಸಾಂ, ಬಿಹಾರ ಹಾಗೂ ನಾಗಾಲ್ಯಾಂಡ್‌ಗಳಿಗೂ ವಿಸ್ತರಿಸಲಾಯಿತು.

9. ರಾಮಸರ ಸಮಾವೇಶ: (Ramasara Convention)

ಆರ್ದ್ರ ಭೂಮಿಗಳನ್ನು ಅಥವಾ ಜೀವ ವೈವಿಧ್ಯತೆಗಳನ್ನು ರಕ್ಷಣೆ ಮಾಡಲು ರಾಮಸರ ಸಮಾವೇಶವು ನಡೆಯಿತು. ಈ ರಾಮಸರ ಪ್ರದೇಶವು ಈಗಿನ ಇರಾನ್ ದೇಶದ ಕ್ಯಾಪ್ಸಿಯನ್ ಸಮುದ್ರದ ಕರಾವಳಿಯ ತೇವಭೂಮಿಯಾಗಿದೆ. 1971ರ ಅವಧಿಯಲ್ಲಿ ಪ್ರಪಂಚದ ಹಲವು ದೇಶಗಳು ಈ ತೇವವಾದ ಭೂಮಿಯನ್ನು ರಕ್ಷಿಸುವ ಕುರಿತು ರಾಮಸರ ಪ್ರದೇಶದಲ್ಲಿ ಸಭೆ ಸೇರಿ ಚರ್ಚೆಗಳನ್ನು ನಡೆಸಿ  ಒಂದು ಒಮ್ಮತದ ಅಭಿಪ್ರಾಯಕ್ಕೆ ಬಂದವು. ಈ ಸಮಾವೇಶದಲ್ಲಿ 169 ದೇಶಗಳು ಭಾಗವಹಿಸಿವೆ. ವಿಶ್ವದಾದ್ಯಂತ 2100 ಕ್ಕೂ ಹೆಚ್ಚು ರಾಮಸರ ಸ್ಥಳಗಳನ್ನು ಹೊಂದಿದೆ. ಈ ಸಮಾವೇಶದಲ್ಲಿ ಹಲವಾರು ಪ್ರಾಕೃತಿಕ ಹಾಗೂ ಮಾನವ ನಿರ್ಮಿತ ವಾಸಸ್ಥಾನಗಳು. ನದಿಗಳು ಹಾಗೂ ಹವಳದ ದಿಬ್ಬಗಳನ್ನು ವಿವಿಧ ಬಗೆಯ ತೇವಭೂಮಿಗಳನ್ನಾಗಿ ವರ್ಗೀಕರಿಸಲಾಗಿದೆ. ಹೀಗೆ ವರ್ಗೀಕರಿಸಿದ ಭೂಮಿಗಳನ್ನು ತೇವಭೂಮಿಯ ಪಟ್ಟಿಗೆ ಸೇರಿಸಲಾಗಿದೆ. ಈ ಪಟ್ಟಿಯಲ್ಲಿರುವ ತೇವ ಭೂಮಿಗಳನ್ನು ರಾಮಸರ ತಾಣಗಳು ಎಂದು ಹೆಸರಿಸಲಾಗಿದೆ.

ಭಾರತ ಹಾಗೂ ರಾಮಸರ ಸಮಾವೇಶ:

ಭಾರತವು ಒಟ್ಟು 27400 ಚೌಗು ಪ್ರದೇಶಗಳನ್ನು ಹೊಂದಿದೆ. ಅದರಲ್ಲಿ 23450 ಒಳನಾಡಿನ ಹಾಗೂ 3950 ಕರಾವಳಿಯ ಚೌಗು ಪ್ರದೇಶಗಳಾಗಿವೆ. 1981 ರಲ್ಲಿ ಭಾರತವು ರಾಮಸರ ಸಮಾವೇಶದ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಯಾಯಿತು. ಚಿಲ್ಕಾ ಹಾಗೂ ಘಾನಾ ಸರೋವರ ಭಾರತದ ಮೊದಲ ರಾಮಸರ ಸರೋವರಗಳಾಗಿವೆ. ಭಾರತದ ಚೌಗು ಪ್ರದೇಶಗಳನ್ನು ರಾಮಸರ ತಾಣಗಳ ಪಟ್ಟಿಗೆ ಸೇರಿಸಲಾಗಿದೆ. ಭಾರತದಲ್ಲಿ ಈಗ 89 ರಾಮಸರ ತಾಣಗಳಿವೆ. ಭಾರತದ ಅತಿ ದೊಡ್ಡ ರಾಮಸರ ತಾಣವೆಂದರೆ ಸುಂದರ್‌ ಬನ್ಸ್‌, ವಿಶ್ವದ ಅತೀ ದೊಡ್ಡ ರಾಮಸರ್‌ ತಾಣವೆಂದರೆ ಪಂಥನಾಲ್‌, ಇದು ದಕ್ಷಿಣ ಅಮೆರಿಕದಲ್ಲಿದೆ. ಭಾರತದ ಚಿಕ್ಕ ರಾಮಸರ್‌ ತಾಣ ರೇಣುಕಾ ಚೌಗು ಪ್ರದೇಶ ಹಿಮಾಚಲ ಪ್ರದೇಶದಲ್ಲಿದೆ. ಭಾರತದಲ್ಲಿ ಗರಿಷ್ಠ ರಾಮಸರ ತಾಣಗಳನ್ನು ತಮಿಳುನಾಡು ಹೊಂದಿದೆ. ಇಲ್ಲಿ ಒಟ್ಟು 20 ತಾಣಗಳಿವೆ. ನಂತರ ಉತ್ತರ ಪ್ರದೇಶ ಇಲ್ಲಿ 10 ತಾಣಗಳಿವೆ.

10. ಪವಿತ್ರವನ: (Secred Groves)

ಭಾರತದ ಪ್ರಾಚೀನ ಕಾಲದಿಂದಲೂ ಅರಣ್ಯ ರಕ್ಷಣೆಗೆ ಆದ್ಯತೆ ನೀಡಲಾಗಿದೆ. ವಿವಿಧ ಸಮುದಾಯಗಳು ದೇಶದಾದ್ಯಂತ ಪವಿತ್ರ ವನಗಳನ್ನು ಸ್ಥಾಪಿಸಿ ಸಂರಕ್ಷಿಸಿವೆ. ಇವು ಇಂದಿಗೂ  ಪಳೆಯುಳಿಕೆಯ ಹಾಗೆ ಉಳಿದುಕೊಂಡಿವೆ. ಸಹ್ಯಾದ್ರಿಯ ಪ್ರತಿಯೊಂದು ಗ್ರಾಮಗಳೂ ಈ ಪವಿತ್ರವನ ಸ್ಥಾಪಿಸಿ ರಕ್ಷಿಸಿಕೊಂಡು ಬರುತ್ತಿವೆ. ಇವುಗಳನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತಿದೆ. ಕರ್ನಾಟಕದಲ್ಲಿ ʻದೇವರನಾಡುʼ ಕೇರಳದಲ್ಲಿ ಕಾವು, ಸರ್ಪಕಾವು, ಮಹಾರಾಷ್ಟ್ರದಲ್ಲಿ ದೇವರೈ, ಆಂಧ್ರಪ್ರದೇಶದಲ್ಲಿ ʻʻಪವಿತ್ರ ಕ್ಷೇತ್ರಲುʼʼ ಅರುಣಾಚಲ ಪ್ರದೇಶದಲ್ಲಿ ʻʻಗುಂಪಾʼʼ ಛತ್ತೀಸ್‌ಗಡದಲ್ಲಿ ಸ್ವರ್ಣ, ದೇವಲಾಸ್‌, ತಮಿಳುನಾಡಿನಲ್ಲಿ ʻಕೋವಿಲ್ ಕಾಡುʼ ಉತ್ತರಖಂಡದಲ್ಲಿ ʻದೇರ್‌ಭೂಮಿʼ ಎಂದು ಕರೆಯುತ್ತಾರೆ. ಕೊಡಗಿನಲ್ಲಿಯೇ ಸುಮಾರು 1000 ದೇವರ ಕಾಡುಗಳಿವೆ. ಅರಣ್ಯನಾಶ, ನಗರೀಕರಣ, ದನಕರುಗಳ ಮೇಯುವಿಕೆ ಹಾಗೂ ಜನರ ನಿರ್ಲಕ್ಷದಿಂದಾಗಿ ಹಾಳಾಗಿವೆ.

ಉಪಸಂಹಾರ

ಭಾರತ ಸರ್ಕಾರವು ಜಾರಿಗೆ ತಂದಿರುವ ಈ ಜೀವ ಸಂರಕ್ಷಣಾ ಯೋಜನೆಗಳು ಪ್ರಕೃತಿ ಮತ್ತು ಮಾನವನ ನಡುವಿನ ಸಮತೋಲನವನ್ನು ಕಾಯ್ದುಕೊಳ್ಳಲು ಅತ್ಯಂತ ಅಗತ್ಯವಾಗಿವೆ. ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಉಳಿಸುವ ಮೂಲಕ ಪರಿಸರದ ಆರೋಗ್ಯವನ್ನು ಸುಧಾರಿಸುವ ಪ್ರಯತ್ನ ಇದಾಗಿದೆ. ಸರ್ಕಾರದ ಜೊತೆಗೆ ಸಾರ್ವಜನಿಕರ ಸಹಕಾರವೂ ಈ ಯೋಜನೆಗಳ ಯಶಸ್ಸಿಗೆ ಮುಖ್ಯವಾಗಿದೆ. ಪ್ರತಿಯೊಬ್ಬ ನಾಗರಿಕನು ಪರಿಸರ ಸಂರಕ್ಷಣೆಯ ಹೊಣೆ ಹೊತ್ತಾಗ ಮಾತ್ರ ಭವಿಷ್ಯ ಪೀಳಿಗೆಗೆ ಸುರಕ್ಷಿತ ಪ್ರಕೃತಿಯನ್ನು ನೀಡಲು ಸಾಧ್ಯವಾಗುತ್ತದೆ.