ಪೀಠಿಕೆ:

ಮಧ್ಯಯುಗೀನ ಭಾರತದ ಇತಿಹಾಸದಲ್ಲಿ ರಾಜಪೂತರು ಮಹತ್ವದ ಸ್ಥಾನವನ್ನು ಹೊಂದಿದ್ದರು. ಅವರು ಕ್ರಿ.ಶ. 7ನೇ ಶತಮಾನದಿಂದ 18ನೇ ಶತಮಾನವರೆಗೆ ಪಶ್ಚಿಮ ಹಾಗೂ ಮಧ್ಯ ಭಾರತದ ವಿವಿಧ ಭಾಗಗಳಲ್ಲಿ ಆಳ್ವಿಕೆ ನಡೆಸಿದರು. ರಾಜಪೂತ ಆಡಳಿತ ವ್ಯವಸ್ಥೆ ಕ್ಷತ್ರಿಯ ಧರ್ಮ, ವೀರತೆ, ಕುಲಗೌರವ ಮತ್ತು ಭೂಸ್ವಾಮ್ಯಾಧಾರಿತ ಸಾಮಂತ ವ್ಯವಸ್ಥೆ ಮೇಲೆ ಆಧಾರಿತವಾಗಿತ್ತು. ಈ ವ್ಯವಸ್ಥೆಯು ರಾಜಕೀಯ, ಸೈನಿಕ ಮತ್ತು ಸಾಮಾಜಿಕ ಅಂಶಗಳನ್ನು ಒಟ್ಟುಗೂಡಿಸಿಕೊಂಡು ರೂಪುಗೊಂಡಿತ್ತು.

ರಾಜಪೂತ ರಾಜ್ಯಗಳಾದ ಮೇವಾರ್, ಮಾರ್ವಾರ್, ಅಂಬರ್ ಮೊದಲಾದವುಗಳಲ್ಲಿ ಈ ಆಡಳಿತ ವ್ಯವಸ್ಥೆ ವಿಭಿನ್ನ ರೂಪಗಳಲ್ಲಿ ಕಂಡುಬಂದರೂ, ಅದರ ಮೂಲ ಸ್ವರೂಪ ಸಾಮಾನ್ಯವಾಗಿತ್ತು.

1) ರಾಜಕೀಯ ಸ್ಥಿತಿಗತಿ: ರಜಪೂತರ ರಾಜಕೀಯ ವ್ಯವಸ್ಥೆ ಊಳಿಗಮಾನ್ಯ ಲಕ್ಷಣಗಳನ್ನು ಒಳಗೊಂಡಿದ್ದಿತು. ಇವರು ಗುಪ್ತರ ಆಡಳಿತ ಪದ್ಧತಿಯನ್ನು ಮುಂದುವರೆಸಿಕೊಂಡು ಬಂದರು.

ರಾಜ: ರಜಪೂತ ರಾಜ್ಯದಲ್ಲಿ ರಾಜನೇ ಆಡಳಿತದ ಕೇಂದ್ರಬಿಂದುವಾಗಿದ್ದನು. ಇವನು ಅಪರಿಮಿತ ಹಾಗೂ ಹೆಚ್ಚಿನ ಗೌರವವನ್ನು ಹೊಂದಿದ್ದನು. ಈತ ನ್ಯಾಯಾಂಗದ ಮುಖ್ಯಸ್ಥನೂ ಆಗಿದ್ದನು. ರಾಜತ್ವ ದೈವಿಕ ವ್ಯಕ್ತಿತ್ವದ ಸಂಕೇತವಾಗಿತ್ತು. ಅವನನ್ನು ಸಾಕ್ಷಾತ್ ವಿಷ್ಣುವಿನ ಅವತಾರ ಎಂದು ತಿಳಿಯಲಾಗಿತ್ತು. ರಾಜನ ಆಜ್ಞೆಯೇ ಅಂತಿಮ ಅಪೀಲು ಆಗಿತ್ತು. ಇವನ ಹೆಸರಿನಲ್ಲಿ ಅನೇಕ ಶಾಸನಗಳನ್ನು ಹೊರಡಿಸಲಾಗಿತ್ತು. ರಾಜನಿಗೆ ಪರಮಭಟ್ಟಾರಕ, ಮಹಾರಾಜಾಧಿರಾದ, ರಾಜ ಪರಮೇಶ್ವರ ಮುಂತಾದ ಬಿರುದುಗಳನ್ನು ಹೊಂದಿದ್ದನು. ರಾಜತ್ವ ನಿರಂಕುಶಾಧಿಕಾರವಾಗಿದ್ದರೂ ಆತ ನ್ಯಾಯ, ನೀತಿ, ಧರ್ಮಶಾಸ್ತ್ರ ಹಾಗೂ ಸ್ಮೃತಿಗಳಿಗೆ ಅನುಗುಣವಾಗಿ ಆಳ್ವಿಕೆಯನ್ನು ಮಾಡಬೇಕಿದ್ದಿತು. ಪ್ರಜೆಗಳ ರಕ್ಷಣೆ, ರಾಜ್ಯ ರಕ್ಷಣೆ, ಬ್ರಾಹ್ಮಣರಿಗೆ ದಾನ ದತ್ತಿಗಳನ್ನು ನೀಡುವುದು, ಪ್ರಜಾಕಲ್ಯಾಣ, ಕಾನೂನು ಪರಿಪಾಲನೆ, ಶಿಕ್ಷಣ ಪ್ರಚಾರ, ಅಧಿಕಾರಿಗಳ ನೇಮಕ ಮುಂತಾದವುಗಳು ರಾಜನ ಪ್ರಮುಖ ಕರ್ತವ್ಯಗಳಾಗಿದ್ದವು, ರಾಜತ್ವ ವಂಶಪಾರಂಪರವಾಗಿದ್ದಿತು. ರಾಜನ ನಂತರ ಅವನ ಮಗನಿಗೆ ಸಿಂಹಾಸನ ದೊರಕುತ್ತಿತ್ತು, ರಜಪೂತರ ಆಡಳಿತದಲ್ಲಿ ಸ್ತ್ರೀಯರು ಸಹ ರಾಜನಿಗೆ ಮಾರ್ಗದರ್ಶನ ನೀಡಿ ಆಡಳಿತವು ಉತ್ತಮವಾಗಿ ಸಾಗುವಂತೆ ನೋಡಿಕೊಳ್ಳುತ್ತಿದ್ದರು.

ಮಂತ್ರಿಮಂಡಲ: ರಾಜನಿಗೆ ಆಡಳಿತದಲ್ಲಿ ಸಹಾಯ ನೀಡಲು ಮಂತ್ರಿಮಂಡಲವಿತ್ತು. ರಾಜನ ಮಂತ್ರಿಮಂಡಲದಲ್ಲಿ ಯುವರಾಜ ಹಾಗೂ ರಾಣಿಯರಿದ್ದರು. ಇವರಿಗೆ ಅಧಿಕಾರಿ ವರ್ಗ ಸಹಕಾರ ನೀಡುತ್ತಿತ್ತು. ರಾಜನ ಮಂತ್ರಿ ಮಂಡಲವು ಪುರೋಹಿತ, ಪ್ರದಾನ್, ಮಂತ್ರಿ, ಪಂಡಿತ, ಸುಮಂತ, ಅಮಾತ್ಯ ಹಾಗು ದೂತರನ್ನು ಒಳಗೊಂಡಿತ್ತು. ಪ್ರತಿಯೊಬ್ಬ ಮಂತ್ರಿ ತಮಗೆ ನೀಡಿದ ಇಲಾಖೆಗಳ ಮೇಲ್ವಿಚಾರಣೆಯನ್ನು ಮಾಡುತ್ತಿದ್ದರು. ಸಾಮಾನ್ಯವಾಗಿ ಉನ್ನತ ಅಧಿಕಾರಿಗಳು ಬ್ರಾಹ್ಮಣರೇ ಆಗಿರುತ್ತಿದ್ದರು. ಈ ಕಾಲದಲ್ಲಿ ಸಾರ್ವಜನಿಕ ಹುದ್ದೆಗಳು ಸಹ ವಂಶಪಾರಂಪರವಾಗಿದ್ದವು.

ಪ್ರಾಂತಾಡಳಿತ: ರಜಪೂತರ ಆಧಿಕಾರಾವಧಿಯಲ್ಲಿ ಅನೇಕ ರಾಜ್ಯಗಳಿದ್ದು ಅವುಗಳನ್ನು ಒಬ್ಬನಿಂದ ರಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ. ಆದಕಾರಣ ಅವರು ಆಡಳಿತದ ಹಿತದೃಷ್ಠಿಯಿಂದ ರಾಜ್ಯಗಳನ್ನು ಹಲವಾರು ಪ್ರಾಂತಗಳನ್ನಾಗಿ ವಿಭಾಗಿಸಿದ್ದರು. ಹೀಗೆ ವಿಭಾಗಿಸಲ್ಪಟ್ಟ ಪ್ರಾಂತಗಳನ್ನು ‘ಭುಕ್ತಿಗಳೆಂದು’ ಹೆಸರಿಸಿದರು. ಪ್ರಾಂತಗಳ ಅಧಿಕಾರವನ್ನು ಜಹಗೀರುದಾರರು ನಿರ್ವಹಿಸುತ್ತಿದ್ದರು. ಇವರ ಅಧಿಕಾರವು ಸಹ ವಂಶಪಾರಂಪರ್ಯವಾಗಿತ್ತು. ಯುದ್ಧ ಸಮಯದಲ್ಲಿ ರಾಜನಿಗೆ ಸೈನ್ಯವನ್ನು ಒದಗಿಸುವುದು, ಕಪ್ಪಕಾಣಿಕೆಗಳನ್ನು ನೀಡುವುದು, ಪ್ರಾಂತಗಳ ರಕ್ಷಣೆ ಮಾಡುವುದು ಜಹಗೀರದಾರರಿಗೆ ಸೇರಿದ್ದಿತು.

ಆಡಳಿತದ ಹಿತದೃಷ್ಠಿಯಿಂದ ಪ್ರಾಂತಗಳನ್ನು ಹಲವಾರು ಜಿಲ್ಲೆಗಳನ್ನಾಗಿ ವಿಂಗಡಿಸಲಾಗಿತ್ತು. ಜಿಲ್ಲೆಗಳನ್ನು ವಿಷಯಗಳನ್ನಾಗಿ ವಿಭಜನೆಗೊಳಿಸಿ ಅವುಗಳನ್ನು ವಿಷಯಪತಿ ಎಂಬ ಅಧಿಕಾರಿ ಕೈಗೆ ನೀಡಲಾಯಿತು. ಆತ ವಿಷಯಗಳ ರಕ್ಷಣೆಯನ್ನು ಮಾಡಬೇಕಿದ್ದಿತು. ಆಡಳಿತದ ಕೊನೆಯ ಘಟಕವೇ ಗ್ರಾಮವಾಗಿದ್ದಿತು. ಗ್ರಾಮಗಳ ಮುಖ್ಯಸ್ಥನನ್ನು ಗ್ರಾಮಿಕ, ಗ್ರಾಮಗಾವುಂಡ ಅಥವಾ ಗ್ರಾಮಪತಿ ಎಂದು ಕರೆಯಲಾಗುತ್ತಿತ್ತು. ಪ್ರತಿಯೊಂದು ಗ್ರಾಮವು ಸಹ ಗ್ರಾಮಪಂಚಾಯಿತಿಯನ್ನು ಹೊಂದಿದ್ದಿತು. ನ್ಯಾಯಾಡಳಿತ, ಮಾರುಕಟ್ಟೆ ನಿರ್ವಹಣೆ, ತೆರಿಗೆ ಸಂಗ್ರಹ, ಸಾರ್ವಜನಿಕ ಕಟ್ಟಡಗಳ ನಿರ್ಮಾಣ ಉದ್ಯಾನವನಗಳ ರಕ್ಷಣೆ, ಹುಲ್ಲುಗಾವಲು ನಿರ್ವಹಣೆ, ಶಿಕ್ಷಣ ಸುಧಾರಣೆ, ನೈರ್ಮಲ್ಯ ನಿರ್ವಹಣೆ, ಆಸ್ಪತ್ರೆಗಳ ಸ್ಥಾಪನೆ, ಬೀದಿದೀಪಗಳ ವ್ಯವಸ್ಥೆ, ರಸ್ತೆಗಳ ರಿಪೇರಿ ಬಾವಿ ತೋಡಿಸುವುದು, ದೇವಾಲಯಗಳ ನಿರ್ಮಾಣ ಹಾಗೂ ದುರಸ್ತಿ ಮುಂತಾದವುಗಳು ಗ್ರಾಮ ಮುಖಂಡರ ಕರ್ತವ್ಯಗಳಾಗಿದ್ದವು.

ಸೈನ್ಯಾಡಳಿತ: ರಜಪೂತರು ತಮ್ಮ ಜೀವನವೆಲ್ಲವನ್ನು ಯುದ್ಧಕ್ಕಾಗಿ ಮೀಸಲಾಗಿಟ್ಟಿದ್ದರು. ಪ್ರತಿಯೊಬ್ಬ ರಜಪೂತನು ವಯಸ್ಕನಾದ ಮೇಲೆ ಖಡ್ಗಬಂಧ ಎಂಬ ಶಾಸ್ತ್ರವನ್ನು ಆಚರಿಸಿ ತನ್ನ ಜೀವನವನ್ನು ಯುದ್ಧಕ್ಕಾಗಿ ಮೀಸಲಿಡುತ್ತಿದ್ದನು. ಆದಕಾರಣ ರಜಪೂತರು ಬಲಿಷ್ಟವಾದ ಸೈನ್ಯವನ್ನು ಹೊಂದಿದ್ದರು. ಇವರ ಸೈನ್ಯವು ಕಾಲ್ಗಳ, ಅಶ್ವದಳ ಹಾಗೂ ಗಜದಳವನ್ನು ಹೊಂದಿದ್ದಿತು. ರಜಪೂತರ ಸೈನ್ಯದಲ್ಲಿ ಒಟ್ಟು 2,00000 ಕಾಲ್ಗಳ 30,000, ಗಜದಳ 9,000 ಅಶ್ವದಳವಿದ್ದಿತೆಂದು ಹೇಳಲಾಗಿದೆ. ರಜಪೂತರ 4 ಸೈನಿಕರ ತುಕಡಿಗಳ ದಳಕ್ಕೆ ‘ಗುಲ್ಕ’ ಎಂದು ಕರೆಯುತ್ತಿದ್ದರು. ಇದರ ಮುಖ್ಯಸ್ಥರಿಗೆ ಗುಮಾಸ್ತ ಎಂದು ಹೆಸರು ಇತ್ತು. ದಂಡನಾಯಕ ಅಥವಾ ಸೇನಾಪತಿ ಸೈನ್ಯದ ಮುಖ್ಯಸ್ಥನಾಗಿದ್ದನು. ‘ಭಂಡಾರಿ’ ಎಂಬ ಅಧಿಕಾರಿ ಸೇನೆಗೆ ಬೇಕಾದ ಆಹಾರ, ಬಟ್ಟೆ, ಯುದ್ಧಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ಸರಬರಾಜು ಮಾಡಬೇಕಿತ್ತು. ಸೈನಿಕರು ದಂಡನಾಯಕನಿಗೆ ನಿಷ್ಠೆಯಿಂದ ಇರುತ್ತಿದ್ದರೇ ಹೊರತು ರಾಜನಿಗಲ್ಲ. ಇವರು ಕೇವಲ ಸಂಬಳಕ್ಕಾಗಿ ಕೆಲಸ ಮಾಡುತ್ತಿದ್ದರೆ ಹೊರತು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರಲಿಲ್ಲ. ಸದಾ ಯುದ್ಧ ನಿರತ ರಜಪೂತರು ತಮ್ಮ ಒಳಜಗಳಗಳಿಂದ ಸೈನ್ಯದ ಶಿಸ್ತಿನ ಕಡೆಗೆ ಹೆಚ್ಚು ಗಮನ ಹರಿಸಲಿಲ್ಲ. ಈ ಕಾರಣದಿಂದ ತಮ್ಮ ಸೈನಿಕ ಶಕ್ತಿಯನ್ನು ನಾಶಮಾಡಿಕೊಂಡರು. ಸ್ವಾತಂತ್ರ್ಯ ಪ್ರಿಯರಾದ ರಜಪೂತರು ವಿದೇಶಿಯರ ದಾಳಿಯ ವೇಳೆಯಲ್ಲಿಯೂ ದೇಶದ ಸ್ವಾತಂತ್ರ್ಯ ರಕ್ಷಣೆಗಾದರೂ ಒಗ್ಗಟ್ಟಿನಿಂದ ಹೋರಾಡದೆ ಪ್ರತ್ಯೇಕವಾಗಿ ಹೋರಾಡಿ ಸೋತು ಸ್ವಾತಂತ್ರ್ಯವನ್ನು ಕಳೆದುಕೊಂಡರು.

ಭೂಕಂದಾಯ:

ಭೂಕಂದಾಯವು ರಾಜ್ಯದ ಮೂಲ ಆದಾಯವಾಗಿತ್ತು. ಪ್ರತಿಯೊಬ್ಬ ರೈತ ತಾನು ಬೆಳೆದ ಬೆಳೆಯಲ್ಲಿ ಸರ್ಕಾರಕ್ಕೆ 1/6 ಭಾಗ ಅಥವಾ 1/4 ಭಾಗದಷ್ಟು ತೆರಿಗೆಯನ್ನು ಸಲ್ಲಿಸಬೇಕಿತ್ತು. ಗ್ರಾಮಪಂಚಾಯತಿಗಳು ಕಂದಾಯ ವಸೂಲಿ ಮಾಡುವ ಕೇಂದ್ರಗಳಾಗಿದ್ದವು. ತೆರಿಗೆಯನ್ನು ಕಾಳು ಅಥವಾ ಹಣದ ರೂಪದಲ್ಲಿ ನೀಡಬಹುದಾಗಿತ್ತು. ಕಂದಾಯ ಹಣದ ರೂಪದಲ್ಲಿದ್ದರೆ ಅದನ್ನು ‘ಹಿರಣ್ಯ’ ಎಂದು ಕರೆಯಲಾಗುತ್ತಿತ್ತು. ರಸ್ತೆ ತೆರಿಗೆ, ವೃತ್ತಿ ತೆರಿಗೆ, ಮನೆಗಂದಾಯ, ತಲೆಗಂದಾಯ ಮುಂತಾದವುಗಳು ಆ ಕಾಲದ ಪ್ರಮುಖ ತೆರಿಗೆಗಳಾಗಿದ್ದವು. ವ್ಯಾಪಾರ ಹಾಗೂ ಕೈಗಾರಿಕೆಗಳಿಂದ ಬರುತ್ತಿದ್ದ ತೆರಿಗೆಯನ್ನು ‘ಶುಲ್ಕ’ ಎಂದು ಮಾರಾಟ ತೆರಿಗೆಯನ್ನು ‘ಮಂಡಪಿಕ’ ಎಂದು ಕರೆಯಲಾಗುತ್ತಿತ್ತು. ರಾಜ್ಯದ ಒಟ್ಟು ಆದಾಯದ ಅರ್ಧದಷ್ಟು ಸೈನ್ಯದ ಖರ್ಚಿಗಾಗಿ ಇನ್ನರ್ಧದಷ್ಟು ಸಾರ್ವಜನಿಕ ಕೆಲಸ ಕಾರ್ಯಗಳಿಗಾಗಿ ಖರ್ಚು ಮಾಡಲಾಗುತ್ತಿತ್ತು.

ನ್ಯಾಯಾಡಳಿತ:

ರಾಜನೇ ರಾಜ್ಯದ ಸರ್ವೋಚ್ಛ ನ್ಯಾಯಾಧೀಶನಾಗಿದ್ದನು. ಈತನ ಮಾತು ಅಂತಿಮವಾಗಿತ್ತು. ರಾಜನು ನ್ಯಾಯ ನಿಷ್ಠೆಗೆ ಹೆಸರಾಗಿದ್ದನು. ಜನರು ರಾಜನನ್ನು ಸಾಕ್ಷಾತ್ ದೇವರೆಂದೇ ಪೂಜಿಸುತ್ತಿದ್ದರು. ನ್ಯಾಯದಾನದ ವೇಳೆಯಲ್ಲಿ ಬಡವ ಬಲ್ಲಿದನೆನ್ನದೆ ಎಲ್ಲರಿಗೂ ಸಮಾನವಾಗಿ ನ್ಯಾಯವನ್ನು ನೀಡಲಾಗುತ್ತಿತ್ತು. ಪ್ರಾಂತಗಳಲ್ಲಿ ಠಾಕೂರರು ಹಾಗೂ ಜಮೀನುದಾರರು ನ್ಯಾಯ ವಿಚಾರಣೆ ಮಾಡುತ್ತಿದ್ದರೆ, ಗ್ರಾಮಗಳಲ್ಲಿ ಗ್ರಾಮಸಮಿತಿಗಳು ನ್ಯಾಯ ತೀರ್ಮಾನ ಮಾಡುತ್ತಿದ್ದವು. ಅಪರಾಧಿಗಳಿಗೆ ಕಠಿಣವಾದ ಶಿಕ್ಷೆಯನ್ನು ನೀಡಲಾಗುತ್ತಿತ್ತು. ಕೈಕಾಲು ಕತ್ತರಿಸುವುದು, ಕಣ್ಣು ಕೀಳುವುದು, ದಂಡ, ಗಡಿಪಾರು ಮುಂತಾದ ಶಿಕ್ಷೆಗಳು ಸರ್ವೆಸಾಮಾನ್ಯವಾಗಿದ್ದವು.

ಉಪಸಂಹಾರ:

ರಾಜಪೂತ ಆಡಳಿತ ವ್ಯವಸ್ಥೆ ಯೋಧಪ್ರಧಾನ ಮತ್ತು ಕುಲಾಧಾರಿತ ಸಮಾಜಕ್ಕೆ ಸೂಕ್ತವಾಗಿದ್ದು, ಶತಮಾನಗಳ ಕಾಲ ರಾಜಪೂತ ರಾಜ್ಯಗಳು ತಮ್ಮ ರಾಜಕೀಯ ಸ್ವಾತಂತ್ರ್ಯ ಮತ್ತು ಸಾಂಸ್ಕೃತಿಕ ಗುರುತನ್ನು ಉಳಿಸಿಕೊಳ್ಳಲು ಸಹಾಯ ಮಾಡಿತು. ಆದರೆ, ಇದರ ಅತಿಯಾದ ವಿಕೇಂದ್ರೀಕರಣ, ವೈಯಕ್ತಿಕ ನಿಷ್ಠೆಯ ಮೇಲಿನ ಅವಲಂಬನೆ ಮತ್ತು ಬಲಿಷ್ಠ ಕೇಂದ್ರೀಕೃತ ಆಡಳಿತದ ಕೊರತೆ ದೀರ್ಘಾವಧಿಯಲ್ಲಿ ಆಡಳಿತಾತ್ಮಕ ಹಾಗೂ ಆರ್ಥಿಕ ದುರ್ಬಲತೆಗೆ ಕಾರಣವಾಯಿತು.

ಧೈರ್ಯ, ಗೌರವ ಮತ್ತು ಸ್ಥಳೀಯ ಸ್ವಶಾಸನವನ್ನು ಉತ್ತೇಜಿಸಿದರೂ, ಈ ವ್ಯವಸ್ಥೆ ಶಕ್ತಿಶಾಲಿ ಕೇಂದ್ರೀಕೃತ ಸಾಮ್ರಾಜ್ಯಗಳೊಂದಿಗೆ ಸ್ಪರ್ಧಿಸಲು ಕಷ್ಟಪಟ್ಟಿತು. ಆದರೂ, ಧರ್ಮ, ಶೌರ್ಯ ಮತ್ತು ಪ್ರಾದೇಶಿಕ ಆಡಳಿತಕ್ಕೆ ನೀಡಿದ ಮಹತ್ವದ ಕಾರಣದಿಂದ ರಾಜಪೂತ ಆಡಳಿತ ವ್ಯವಸ್ಥೆ ಮಧ್ಯಯುಗೀನ ಭಾರತದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ.