ಚೌಹಾನ್ ಸಂತತಿಯಲ್ಲಿ ಮೂರನೆಯ ಪೃಥ್ವಿರಾಜ್ ಚೌಹಾನ್ ಅತ್ಯಂತ ಪ್ರಸಿದ್ಧ ದೊರೆ. ಈತ ದೆಹಲಿ ಹಾಗೂ ಅಜೇರ್ಗಳನ್ನು ತನ್ನ ಆಡಳಿತ ಕೇಂದ್ರಗಳನ್ನಾಗಿ ಮಾಡಿಕೊಂಡಿದ್ದನು. ಇವನು ಚೌಹಾನರ ಇತಿಹಾಸದಲ್ಲಿ ನೂತನ ಯುಗವೊಂದನ್ನು ಆರಂಭಿಸಿದನು. ಸೋಮೇಶ್ವರ ಹಾಗೂ ಕರ್ಪೂರದೇವಿಯರು ಇವನ ತಂದೆ-ತಾಯಿಗಳು, ಚಾಂದ್ ಬರ್ದಾಯಿ ರಚಿಸಿದ ಪೃಥ್ವಿರಾಜರಾಸೋ, ಹಮ್ಮಿರ ಕಾವ್ಯ, ಜಯಂಕರನ ಪೃಥ್ವಿರಾಜ ವಿಜಯ, ಫೆರಿಸ್ತಾ ರಚಿಸಿದ ಕೃತಿಗಳು ಪೃಥ್ವಿರಾಜನ ಜೀವನ ಚರಿತ್ರೆಯ ಮೇಲೆ ಸಾಕಷ್ಟು ಬೆಳಕು ಚಲ್ಲುತ್ತವೆ. ಪೃಥ್ವಿರಾಜ್ ಚೌಹಾನ್ ಕ್ರಿಶ 1178 ರಿಂದ 1192 ರವರೆಗೆ ಆಳ್ವಿಕೆ ಮಾಡಿದನು. ಪೃಥ್ವಿರಾಜ್ ಅಪ್ರಾಪ್ತ ವಯಸ್ಕನಾಗಿದ್ದಾಗ ಆತನ ತಾಯಿ ಕರ್ಪೂರದೇವಿ ರಾಜಪ್ರತಿನಿಧಿಯಾಗಿ ಕಾರ್ಯಭಾರ ನಿರ್ವಹಿಸಿದಳು. ಇಚ್ಛಿನಿದೇವಿ, ಶಶಿವ್ರತಾ, ಸಂಯೋಗಿತಾ ಈತನ ರಾಣಿಯರಾಗಿದ್ದರು. ಚಾಂದ್ ಬರ್ದಾಯಿಯ ಪೃಥ್ವಿರಾಜ್ ರಾಸೋ ಕೃತಿಯಲ್ಲಿ ಬರೆದಂತೆ ಗಹಡವಾಲದ ಜಯಚಂದ್ರನ ಮಗಳಾದ ಸಂಯುಕ್ತ ಪೃಥ್ವಿರಾಜನ ಪರಾಕ್ರಮಗಳಿಗೆ ಮಾರುಹೋಗಿ ಅವನನ್ನೇ ತನ್ನ ಪತಿಯಾಗಿ ಸ್ವೀಕರಿಸಬೇಕೆಂಬ ಹಂಬಲವುಳ್ಳವಳಾಗಿದ್ದಳು. ಆದರೆ ಪೃಥ್ವಿರಾಜನಿಗೂ ಅವಳ ತಂದೆ ಜಯಚಂದ್ರನಿಗೂ ಅನುವಂಶಿಕ ದ್ವೇಷವಿದ್ದಿತು. ಇದರಿಂದ ಅವಳು ತನ್ನ ಆಸೆ ಆಕಾಂಕ್ಷೆಗಳನ್ನು ಅದುಮಿಟ್ಟುಕೊಳ್ಳುವಂತಹ ಪ್ರಸಂಗ ಬಂದಿತು. ಆದರೂ ಸಂಯುಕ್ತ ಗುಪ್ತವಾಗಿ ಪೃಥ್ವಿರಾಜನ ಜೊತೆಗೆ ಪತ್ರ ವ್ಯವಹಾರವನ್ನು ಇಟ್ಟುಕೊಂಡಿದ್ದಳು. ಇದೇ ಸಂದರ್ಭದಲ್ಲಿ ಜಯಚಂದ್ರ ತನ್ನ ಮಗಳ ವಿವಾಹದ ಸಲುವಾಗಿ ಸ್ವಯಂವರವನ್ನು ಏರ್ಪಡಿಸಿದ್ದನು. ಸ್ವಯಂವರಕ್ಕಾಗಿ ಜಯಚಂದ್ರ ಎಲ್ಲಾ ರಜಪೂತ ದೊರೆಗಳನ್ನು ಕನೂಜಿಗೆ ಆಹ್ವಾನಿಸಿದನು. ಆದರೆ ಪೃಥ್ವಿರಾಜನಿಗೆ ಉದ್ದೇಶಪೂರ್ವಕವಾಗಿ ಆಹ್ವಾನ ಪತ್ರಿಕೆಯನ್ನು ಕಳುಹಿಸಿರಲಿಲ್ಲ. ಇದು ಅಲ್ಲದೆ ಅವನ ಒಂದು ಪ್ರತಿಮೆಯನ್ನು ಕಾವಲುಗಾರ ನಿಲ್ಲುವ ಸ್ಥಳದಲ್ಲಿ ನಿಲ್ಲಿಸಿದನು. ಸ್ವಯಂವರದಲ್ಲಿ ಸಂಯುಕ್ತ ಯಾರನ್ನೂ ವರಿಸದೆ ಪೃಥ್ವಿರಾಜನ ಪ್ರತಿಮೆಗೆ ಹೋಗಿ ಹಾರವನ್ನು ಹಾಕಿದಳು. ಇದರಿಂದ ಅಲ್ಲಿದ್ದ ಎಲ್ಲ ರಜಪೂತ ಅರಸರು ದಿಗ್ಧಮೆಗೊಂಡರು. ಅಲ್ಲೆ ತನ್ನ ಸೈನಿಕರೊಂದಿಗೆ ಅಡಗಿಕೊಂಡಿದ್ದ ಪೃಥ್ವಿರಾಜನು ಧಿಡೀರನೆ ಸಂಯುಕ್ತಿಯನ್ನು ಅಪಹರಿಸಿಕೊಂಡು ಅಲ್ಲಿಂದ ಕಾಲುಕಿತ್ತನು. ಪೃಥ್ವಿರಾಜ ಕ್ಷೇಮವಾಗಿ ಸಂಯುಕ್ತಿಯೊಂದಿಗೆ ರಾಜಧಾನಿಯನ್ನು ಸೇರಿದನು. ಅರಮನೆಯಲ್ಲಿ ವಿಧಿವತ್ತಾಗಿ ಸಂಯುಕ್ತಿಯನ್ನು ಮದುವೆಯಾದನು. ಪೃಥ್ವಿರಾಜ್ ಚೌಹಾನ್ ಘೋರ್ ಸಂತತಿಯ ಖುಸ್ರಾವ್ ಮಲ್ಲಿಕ್ ನ್ನು ಸೋಲಿಸಿ ಪಶ್ಚಿಮ ಪಂಜಾಬ್ ನ್ನು ವಶಪಡಿಸಿಕೊಂಡನು. ಪೃಥ್ವಿರಾಜ್ ತ್ರಿತ 1182ರಲ್ಲಿ ಭಡನಕರನ್ನು ಸೋಲಿಸಿ ತಿವಾರಿ, ಭವಾನಿ ಹಾಗೂ ಆಳ್ವಾರ್ನ ಕೆಲವು ಪ್ರದೇಶಗಳನ್ನು ವಶಪಡಿಸಿಕೊಂಡನು. ಅದೇವರ್ಷ ಚಂದೇಲ ದೊರ ಪರಮಾರ್ಥಿಯನ್ನು ಸೋಲಿಸಿ ಮಹೋಬ ಹಾಗೂ ಕಾಲಿಂಜರ್ಗಳನ್ನು ಗೆದ್ದುಕೊಂಡನು.
ತರೈನ್ ಕದನಗಳು :
ಮೊದಲನೆಯ ತರೈನ್ ಕದನ: (1191)
ಪೃಥ್ವಿರಾಜ್ ಚೌಹಾನ್ ತನ್ನ ಆಳ್ವಿಕೆಯ ಅಂತಿಮ ದಿನಗಳಲ್ಲಿ ಟರ್ಕರ ದಾಳಿಯನ್ನು ಎದುರಿಸಬೇಕಾಯಿತು. ಘೋರಿ ಮಹಮ್ಮದ್ ಖುಸ್ತು ಮಲಿಕ್ನನ್ನು ಪದಚ್ಯುತಗೊಳಿಸಿದ ನಂತರ ಚೌಹಾನ್ ರಾಜ್ಯದ ಪಂಜಾಬ್ ಪ್ರದೇಶದಲ್ಲಿ ತನ್ನ ಸೈನಿಕ ಕಾರ್ಯಚರಣೆಯನ್ನು ಆರಂಭಿಸಿದನು. ಇದಾದ ಮೇಲೆ ಇಡೀ ಭಾರತವನ್ನೇ ಗೆಲ್ಲಬೇಕೆಂಬ ಮಹದಾಸೆಯಿಂದ ಘೋರಿ ಪೃಥ್ವಿರಾಜನಿಗೆ ಸೇರಿದ್ದ ಸಿರ್ ಹಿಂದನ್ನು ವಶಪಡಿಸಿಕೊಂಡು ತನ್ನ ಸಂಬಂಧಿಕನೊಬ್ಬನನ್ನು ಅದರ ಉಸ್ತುವಾರಿಗೆ ನೇಮಿಸಿದನು. ಹೀಗೆ ಏಕಾಏಕಿ ಮುಸಲ್ಮಾನರು ಸರಹಿಂದದವರೆಗೆ ಬಂದುದು ಚೌಹಾನರಿಗೆ ನುಂಗಲಾರದ ತುತ್ತಾಯಿತು. ಆಗ ದೆಹಲಿಯ ಪ್ರಾಂತಾಡಳಿತ ನೋಡಿಕೊಳ್ಳುತ್ತಿದ್ದ ಗೋವಿಂದರಾಜನ ಮಗ ಚಂದ್ರರಾಜನು ಶಿಹಾಬ್-ಉದ್-ದೀನ್ ಎಂಬ ಮುಸ್ಲಿಂನು ತಮ್ಮ ನಗರಗಳನ್ನು ಲೂಟಿಮಾಡಿ, ಅಲ್ಲಿನ ಅನೇಕ ಸ್ತ್ರೀಯರ ಮಾಜಭಂಗ ಮಾಡಿದ್ದಾನೆ. ಇದರಿಂದಾಗಿ ಅನೇಕ ರಜಪೂತ ಮಹಿಳೆಯರು ಹಾಗೂ ಪುರುಷರು ಬೆಟ್ಟ ಗುಡ್ಡಗಳ ಕಡೆಗೆ ಓಡಿ ಹೋಗಿ ಅವಿತುಕೊಂಡಿದ್ದಾರೆ. ಅವನು ಈಗ ಮುಲ್ತಾನಿನಲ್ಲಿ ರಾಜಧಾನಿಯನ್ನು ಸ್ಥಾಪಿಸಿದ್ದಾನೆ ಎಂಬುದಾಗಿ ಪೃಥ್ವಿರಾಜನಿಗೆ ವರದಿ ಮಾಡಿದನು. ಈ ವಿಷಯವನ್ನು ಕೇಳಿ ಪೃಥ್ವಿರಾಜನು ಕೆಂಡಾಮಂಡಲವಾದನು. ಘೋರಿ ಮಹಮ್ಮದನ ಅಕ್ರಮ ಪ್ರವೇಶವನ್ನು ತಡೆಗಟ್ಟಲು ರಜಪೂತರ ಒಕ್ಕೂಟವನ್ನು ರಚಿಸಿದನು. ತನ್ನ ಎರಡು ಲಕ್ಷ ಸೈನ್ಯ ಹಾಗೂ ಮೂರು ಸಾವಿರ ಗಜಪಡೆಯೊಂದಿಗೆ ಘೋರಿಯನ್ನು ದಂಡಿಸಲು ಹೊರಟನು. ಈ ವಿಷಯ ಹೇಗೋ ಘೋರಿಗೆ ತಿಳಿದುಹೋಯಿತು. ಆತ ಕ್ರಿ.ಶ 1191 ರಲ್ಲಿ ಪೃಥ್ವಿರಾಜ ಚೌಹಾನನ ಮೇಲೆ ಯುದ್ಧ ಸಾರಿದನು. ದೆಹಲಿಯಿಂದ 80 ಮೈಲು ದೂರ ಹಾಗೂ ಥಾನೇಶ್ವರದಿಂದ 14 ಮೈಲು ದೂರದಲ್ಲಿದ್ದ ತರೈನ್ ಎಂಬ ಹಳ್ಳಿಯಲ್ಲಿ ಉಭಯ ಬಣಗಳು ಮುಖಾಮುಖಿಯಾಗಿ ಸಂಧಿಸಿದವು. ಪೃಥ್ವಿರಾಜನಿಗೆ ಅನೇಕ ರಜಪೂತ ದೊರೆಗಳು ಬೆಂಬಲ ಸೂಚಿಸಿದರು. ಆದರೆ ಗಹಡವಾಲದ ಜಯಚಂದ್ರ ಮಾತ್ರ ಪೃಥ್ವಿರಾಜನಿಗೆ ಬೆಂಬಲ ನೀಡಲಿಲ್ಲ.
ಮಧ್ಯಯುಗೀನ ಭಾರತದಲ್ಲಿ ರಜಪೂತರು ಶೌರ್ಯ, ಸಾಹಸ, ಧೈರ್ಯ ಸ್ವಾಮಿನಿಷ್ಠೆ ಹಾಗೂ ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದರು. ಇವರು ತಮ್ಮ ಜೀವದ ಹಂಗು ತೊರೆದು ಘೋರಿ ಮಹಮ್ಮದನ ವಿರುದ್ಧ ಹೋರಾಡಿದರು. ಯುದ್ಧ ಭಯಂಕರವಾಗಿ ನಡೆಯುತ್ತಿದ್ದಾಗ ಮಹಮ್ಮದನ ಎಡ ಹಾಗೂ ಬಲ ಪಾರ್ಶ್ವದ ಸೇನಾಪಡೆಗಳು ಅಸಮರ್ಥವಾದವು. ಪರಿಣಾಮವಾಗಿ ಈ ಸೇನಾಪಡೆಗಳು ವಿಧಿಯಿಲ್ಲದೆ ಬೇರಡೆ ಪಲಾಯನ ಮಾಡಿದವು. ತದನಂತರ ಮಧ್ಯದ ಸೇನಾಪಡೆಯೂ ಸಹ ಕುಸಿಯತೊಡಗಿತು. ಆದರೂ ಎದೆಗುಂದದ ಘೋರಿ ಹಾಗೆಯೇ ಯುದ್ಧವನ್ನು ಮುಂದುವರೆಸಿದನು. ಆದರೆ ಸುಲ್ತಾನ್ ಘೋರಿ ಬಿಟ್ಟ ಬಾಣವೊಂದು ಪೃಥ್ವಿರಾಜನ ಸೋದರನಾದ ಗೋವಿಂದರೈನ ಎರಡು ಹಲ್ಲುಗಳು ಉದುರುವಂತೆ ಮಾಡಿತು. ಆಗ ಗೋವಿಂದ ರೈ ಪ್ರತಿಯಾಗಿ ಈಟಿಯೊಂದನ್ನು ಬೀಸಿದನು. ಪರಿಣಾಮವಾರಿ ಘೋರಿ ಮಹಮ್ಮದ್ ಗಾಯಗೊಂಡು ಮೂರ್ಚೆ ಹೋದನು. ಇದೇ ಸಂದರ್ಭದಲ್ಲಿ ಖಿಲ್ಟಿ ಶ್ರೀಮಂತನೊಬ್ಬ ಘೋರಿಯನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋದನು. ಪ್ರಥಮ ತರೈನ್ ಕದನದಲ್ಲಿ ಘೋರಿಗೆ ಹೀನಾಯವಾಗಿ ಸೋಲುಂಟಾಯಿತು. ಪೃಥ್ವಿರಾಜನ ದಳಪತಿ ಸ್ಕಂದನು ತರೈನ್ ಯುದ್ಧದ ಗೆಲುವಿಗೆ ಕಾರಣನಾದನು. ಡಾ|| ಈಶ್ವರಿ ಪ್ರಸಾದ ಹೇಳಿದಂತೆ ಮುಸಲ್ಮಾನರು ಹಿಂದೆಂದೂ ಇಂತಹ ಸೋಲನ್ನು ವಿಧರ್ಮಿಯರ ಕೈಯಲ್ಲಿ ಅನುಭವಿಸಿರಲಿಲ್ಲ ಎಂದು ಹೇಳಿದ್ದಾರೆ.
ಎರಡನೆಯ ತರೈನ್ ಕದನ: (1192)
ಮೊದಲನೆಯ ತರೈನ್ ಯುದ್ಧದಲ್ಲಿ ಸೋಲಿನಿಂದ ಅವಮಾನಿತನಾಗಿದ್ದ ಘೋರಿ ಮಹಮ್ಮದ್ ಪೃಥ್ವಿರಾಜನ ವಿರುದ್ಧ ಮತ್ತೊಮ್ಮೆ ಯುದ್ಧ ಘೋಷಿಸಿದನು. ಈ ಯುದ್ಧಕ್ಕಾಗಿ ಅವನು 1,20,000 ಸೈನ್ಯವನ್ನು ಕಟ್ಟಿದನು. ಇಂತಹ ಬೃಹತ್ ಸೇನೆಯೊಂದಿಗೆ ಘೋರಿ ಮಹಮ್ಮದ್ ಬಂದು ಭಟಂದವನ್ನು ಆಕ್ರಮಿಸಿದನು. ನಂತರ ದೆಹಲಿಯಿಂದ 80 ಮೈಲಿ ದೂರದ ಹಾಗೂ ಥಾನೇಶ್ವರದಿಂದ 10 ಮೈಲಿ ದೂರದಲ್ಲಿದ್ದ ತರೈನ್ ಎಂಬ ಪ್ರದೇಶಕ್ಕೆ ಬಂದು ಬೀಡು ಬಿಟ್ಟನು. ಇದು ಎರಡನೆಯ ತರೈನ್ ಕದನಕ್ಕೆ ಕಾರಣವಾಯಿತು. ಈ ಯುದ್ಧ ಭಾರತದ ಇತಿಹಾಸದಲ್ಲಿ ಮತ್ತೊಂದು ಅಧ್ಯಾಯವನ್ನು ಸೃಷ್ಟಿಸಿತು. ಯುದ್ಧ ಭೂಮಿಗೆ ಆಗಮಿಸಿದ ಘೋರಿ ಪೃಥ್ವಿರಾಜನು ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ಒತ್ತಾಯಿಸಿ ತನ್ನ ರಾಯಭಾರಿಯನ್ನು ಪೃಥ್ವಿರಾಜನ ಬಳಿ ಕಳುಹಿಸಿದನು. ಆದರೆ ಪೃಥ್ವಿರಾಜ್ ಚೌಹಾನ್ ಅದನ್ನು ತಿರಸ್ಕರಿಸಿದನು. ಘೋರಿ ಮಹಮ್ಮದನ ದಾಳಿಯ ಮುನ್ಸೂಚನೆಯನ್ನು ಅರಿತಿದ್ದ ಪೃಥ್ವಿರಾಜ್ ಘೋರಿ ಮಹಮ್ಮದನನ್ನು ಸೋಲಿಸಲು ದೃಢ ನಿರ್ಧಾರ ಮಾಡಿ 150 ರಜಪೂತ ರಾಜರ ಒಕ್ಕೂಟವನ್ನು ರಚಿಸಿದನು. ಪ್ರಥಮ ಯುದ್ಧದಲ್ಲಿ ಪೃಥ್ವಿರಾಜನ ಗೆಲುವಿಗೆ ಕಾರಣನಾದ ಸ್ಕಂದನ ಬದಲು ಉದಯರಾಜ ಎಂಬ ದಳಪತಿ ಎರಡನೆಯ ತರೈನ್ ಕದನದ ಮುಂದಾಳತ್ವವನ್ನು ವಹಿಸಿಕೊಳ್ಳಲು ನಿರ್ಧರಿಸಿದನು. 300,000 ಅಶ್ವದಳ ಹಾಗು 300 ಗಜದಳದೊಂದಿಗೆ ಪೃಥ್ವಿರಾಜ್ ತರೈನ್ ಬಳಿ ಬಂದು ಬೀಡುಬಿಟ್ಟನು. ಎರಡೂ ಸೈನ್ಯಗಳ ನಡುವೆ ತರೈನ್ ಎಂಬಲ್ಲಿ 1192ರಲ್ಲಿ ಭಯಂಕರ ಕದನ ನಡೆಯಿತು. ಯುದ್ಧವು ಬೆಳಿಗ್ಗೆ ಆರಂಭವಾಗಿ ಸಾಯಂಕಾಲದವರೆಗೆ ಮುಂದುವರೆಯಿತು. ರಜಪೂತರು ಜೀವದ ಹಂಗು ತೊರೆದು ಮೊದಲ ತರೈನ್ ಯುದ್ಧದಲ್ಲಿ ಹೋರಾಡಿದಂತೆ ಇಲ್ಲಿಯೂ ಹೋರಾಟ ಆರಂಭಿಸಿದರು. ಆದರೆ, ಅದೃಷ್ಟ ಲಕ್ಷ್ಮಿ ಕೈಕೊಟ್ಟಿದ್ದರ ಪರಿಣಾಮವಾಗಿ ಪೃಥ್ವಿರಾಜನ ಸೇನೆ ಸಂಪೂರ್ಣವಾಗಿ ಸೋತಿತು. ಫೆರಿಸ್ತಾನ ಪ್ರಕಾರ “ರಜಪೂತರ ಅಪಾರ ಸೈನ್ಯ ಘೋರಿ ಮಹಮ್ಮದನ ಮುಂದೆ ಒಂದು ಬೃಹತ್ ಕಟ್ಟಡ ನಡುಗಿದಂತೆ ನಡುಗಿ ಮಣ್ಣುಪಾಲಾಯಿತು”. ಯುದ್ಧದಲ್ಲಿ ಒಟ್ಟು ಒಂದು ಲಕ್ಷ ಸೈನ್ಯ ನಾಶವಾಯಿತು. ಪೃಥ್ವಿರಾಜನ ಸಹೋದರ ಗೋವಿಂದರಾಜ ರಣರಂಗದಲ್ಲಿ ಮಡಿದನು. ಪೃಥ್ವಿರಾಜ ರಣರಂಗದಲ್ಲಿ ಸೋತು ಓಡಿಹೋಗುತ್ತಿದ್ದಾಗ ಮಹಮ್ಮದ್ ಘೋರಿಗೆ ‘ಶಿರ್ಸುತಿ’ ಬಳಿ ಸೆರೆಸಿಕ್ಕನು. ನಂತರ ಅವನನ್ನು ಕೊಲೆ ಮಾಡಲಾಯಿತು. ಇದಾದ ನಂತರ ಘೋರಿ ಅಜೀರ್ ಮೇಲೆ ಧಾಳಿ ಮಾಡಿ ಅಲ್ಲಿದ್ದ ದೇವಾಲಯಗಳನ್ನು ನಾಶಗೊಳಿಸಿದನು. ಅದರ ಅವಶೇಷಗಳ ಮೇಲೆ ಗೋರಿ ಹಾಗೂ ಮಸೀದಿಗಳನ್ನು ನಿರ್ಮಿಸಿದನು.
ಪರಿಣಾಮಗಳು:
1) ತರೈನ್ ಯುದ್ಧದಲ್ಲಿ ಪೃಥ್ವಿರಾಜನಿಗಾದ ಸೋಲು ಇಡೀ ರಜಪೂತ ಸಾಮ್ರಾಜ್ಯದ ಶಕ್ತಿಯನ್ನು ಉಡುಗಿಸಿತು.
2) ಈ ಕದನವು ಇಡೀ ಭಾರತದ ಸಂಸ್ಕೃತಿಯ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ಬೀರಿತು.
3) ಎರಡನೆಯ ತರೈನ್ ಕದನವು ರಜಪೂತ ಅರಸರ ಹಾಗೂ ಜನರ ಆತ್ಮಸ್ಥೆರ್ಯವನ್ನು ಉಡುಗಿಸಿತು.
4) ತರೈನ್ ಕದನವು ಭಾರತದಲ್ಲಿ ಮುಸ್ಲಿಂ ರಾಜ್ಯ ಸ್ಥಾಪನೆಗೆ ಅಡಿಪಾಯವನ್ನು ಹಾಕಿತು.
5) ರಜಪೂತರ ಸೋಲಿನಿಂದ ಮುಸ್ಲಿಂ ಸತ್ತೆಯ ಸ್ಥಾಪನೆಗೆ ಇದ್ದ ಅಡಚಣೆ ಮಾಯವಾಯಿತು.
6) ಪೃಥ್ವಿರಾಜನ ಕೊಲೆಯ ನಂತರ ಮಹಮ್ಮದ್ ಘೋರಿ ಆತನ ಮಗನನ್ನು ತನ್ನ ಸಾಮಂತನನ್ನಾಗಿ ನೇಮಿಸಿಕೊಂಡನು.
ಪೃಥ್ವಿರಾಜನ ಸಾವಿನ ನಂತರ ಅವನ ಸಹೋದರ ಅಜೀರನ್ನು ವಶಪಡಿಸಿಕೊಂಡು ಆಳ್ವಿಕೆ ನಡೆಸಿದನು. ಆದರೆ ಕುತುಬ್-ಉದ್-ದೀನ್-ಐಬಕ್ ಅಣ್ಣೀರನ್ನು ವಶಪಡಿಸಿಕೊಳ್ಳುವುದರ ಮೂಲಕ ರಜಪೂತ ಸಂತತಿಯ ಅವನತಿಗೆ ಕಾರಣನಾದನು.
ರಜಪೂತರ ಸಾಂಸ್ಕೃತಿಕ ಕೊಡುಗೆಗಳು ಹರ್ಷವರ್ಧನನ ಮರಣದ ನಂತರ ಉತ್ತರ ಭಾರತದಲ್ಲಿ ಸುಮಾರು 12ನೆಯ ಶತಮಾನದವರೆಗೆ ಆಳ್ವಿಕೆ ಮಾಡಿದ ರಜಪೂತರು ನಿಜವಾಗಿಯೂ ಅದೃಷ್ಟವಂತರು. ಈ ಅವಧಿಯಲ್ಲಿ ರಜಪೂತರ ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ವ್ಯವಸ್ಥೆ ಅತ್ಯಂತ ಪ್ರಮಾಣಬದ್ಧವಾಗಿದ್ದಿತು. ಸ್ವಾಭಿಮಾನಿಗಳು, ಹುಟ್ಟು ಹೋರಾಟಗಾರರು, ಪ್ರಾಮಾಣಿಕರು, ಸ್ವತಂತ್ರಪ್ರಿಯರು ಹಾಗೂ ವೀರಯೋಧರಾಗಿದ್ದ ರಜಪೂತರು ಪರಕೀಯರ ದಾಳಿಗಳಿಂದ ಭಾರತದ ಸಂಸ್ಕೃತಿ ಹಾಗೂ ಸಮಾಜವನ್ನು ರಕ್ಷಿಸಲು ಹರಸಾಹಸ ಮಾಡಿದರು. ರಾಜಭಕ್ತಿ, ಸ್ವಾಮಿನಿಷ್ಠೆ, ಸರಳತೆ ಅವರ ಹುಟ್ಟು ಗುಣಗಳಾಗಿದ್ದವು. ಇವರ ಸಮಾಜ ಅತ್ಯಂತ ಉತ್ಕೃಷ್ಟವಾಗಿದ್ದು ಹೇಡಿಗಳಿಗೆ ಅವಕಾಶ ನೀಡಿರಲಿಲ್ಲ. ರಜಪೂತರು ತಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೇ ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನು ಹೇಳಿ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದರು. ಯುದ್ಧದಲ್ಲಿ ರಜಪೂತರು ಸೋತರೂ ಸ್ವಾಮಿನಿಷ್ಠೆಗೆ ದ್ರೋಹ ಬಗೆಯಲಿಲ್ಲ. ಅವರು ಅಸಮರ್ಥರ, ನಿದ್ರಿಸುತ್ತಿದ್ದವರ ಹಾಗೂ ಹೇಡಿಗಳ ಮೇಲೆ ಎಂದಿಗೂ ದಾಳಿ ಮಾಡುತ್ತಿರಲಿಲ್ಲ. ಆದರೆ ಕಾಲಾನಂತರ ರಜಪೂತರ ಒಗ್ಗಟ್ಟಿನಲ್ಲಿ ಕೊರತೆ ಕಂಡು ಬಂದ ಕಾರಣದಿಂದ 12ನೆಯ ಶತಮಾನದ ನಂತರ ಭಾರತ ವಿದೇಶಿ ಮುಸಲ್ಮಾನರ ಕಪಿಮುಷ್ಠಿಗೆ ಸಿಲುಕಿತು.