ಪ್ರಾಚೀನ ಭಾರತದಲ್ಲಿ ಮಹಿಳೆಯರಿಗೆ ಸಾಮಾಜಿಕ ನ್ಯಾಯವಾಗಲೀ ಹಾಗೂ ಆರ್ಥಿಕ ಸೌಲಭ್ಯಗಳಾಗಲೀ ಇರಲಿಲ್ಲ. ಅವಳನ್ನು ಪುರುಷನಿಗೆ ಸರಿಸಮಾನಗಳು ಎಂದು ಪರಿಗಣಿಸಿರಲಿಲ್ಲ. ಮತದಾನದ ಹಕ್ಕುಗಳಂತೂ ಇರಲೇ ಇಲ್ಲ ʻʻನ ಸ್ಸ್ತ್ರಿ ಸ್ವಾತಂತ್ಯ್ರಂ ಅರ್ಹತಿʼʼ ಎಂದರೆ ಸ್ತ್ರೀಯು ಸ್ವಾತಂತ್ರ್ಯಕ್ಕೆ ಯೋಗ್ಯಳಲ್ಲ ಎಂಬ ಭಾವನೆಯಿತ್ತು. ಅವಳು ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಭಾಗವಹಿಸುವಂತಿರಲಿಲ್ಲ. ಮನೆಯ ನಾಲ್ಕು ಗೋಡೆಯ ಮಧ್ಯೆ ಇರಬೇಕು. ಚಿಕ್ಕವಳಿರುವಾಗ ತಂದೆಯ, ಮದುವೆಯಾದಾಗ ಗಂಡನ ಹಾಗೂ ವಯಸ್ಸಾದ ನಂತರ ಮಕ್ಕಳ ಆಶ್ರಯದಲ್ಲಿ ಇದ್ದು ದೇವರು ಕರೆದಾಗ ಹೋಗಬೇಕು ಎಂಬ ನಿಯಮವನ್ನು ಹಾಕಿ ಅವಳ ಸ್ವಾತಂತ್ರವನ್ನು ಕಿತ್ತುಕೊಳ್ಳಲಾಗಿತ್ತು. ಸ್ವಾತಂತ್ರ್ಯ ನಂತರ ಭಾರತದ ಮಹಿಳೆಯರ ಚಳುವಳಿಯ ಪರಿಣಾಮವಾಗಿ ಎಚ್ಚೆತ್ತ ಸರ್ಕಾರ ಅವರಿಗಾಗಿ ಕಾನೂನು ಹಾಗೂ ಸಂವಿಧಾನ ತಿದ್ದುಪಡಿ ಮಾಡುವ ಮೂಲಕ ಸಮಾನ ಮತ್ತು ನ್ಯಾಯಯುತ ಜೀವನ ನಡೆಸಲು ಅನುಕೂಲವಾಗುವಂತೆ ಮಾಡಲು ರಾಷ್ಟ್ರೀಯ ಮಹಿಳಾ ಆಯೋಗವನ್ನು ರಚಿಸಲು ಮುಂದಾಯಿತು. ಮಹಿಳೆಯರ ಮೇಲಿನ ದೌರ್ಜನ್ಯವನ್ನು ರಾಷ್ಟ್ರಗಳು, ಸಮಾಜಗಳು, ಸಂಸ್ಕೃತಿಗಳು ಮತ್ತು ವರ್ಗಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಕಂಡುಬಂದಾಗ ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆಯನ್ನು ತಡೆಯಲು ಈ ಆಯೋಗವನ್ನು ರಚಿಸಲಾಯಿತು. 1990ರಲ್ಲಿ ಮಹಿಳಾ ಆಯೋಗದ ಕಾಯಿದೆಯ ಕರಡನ್ನು ತಯಾರಿಸಿ 1991ರಲ್ಲಿ ಸಂಸತ್ತಿನಲ್ಲಿ ಮಂಡಿಸಲಾಯಿತು. ಅದು ಅಂತಿಮವಾಗಿ 1992 ಜನವರಿ 31 ರಂದು ಕಾನೂನಾತ್ಮಕವಾಗಿ ಜಾರಿಗೆ ಬಂದಿತು. ʻʻಈ ಆಯೋಗದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಜಯಂತಿ ಪಟ್ನಾಯಕ್ ಅಧಿಕಾರ ವಹಿಸಿಕೊಂಡರು.ʼʼ ಮೊದಲ ಪುರುಷ ಸದಸ್ಯರಾಗಿ ʻʻಅಲೋಕ್ ರಾವತ್ʼʼ ಆಯ್ಕೆಯಾದರು.
ರಚನೆ : (Composition)
ಮಹಿಳಾ ಆಯೋಗವು ಒಬ್ಬ ಅಧ್ಯಕ್ಷರು, ಐವರು ಸದಸ್ಯರು ಹಾಗೂ ಒಬ್ಬ ಸದಸ್ಯ ಕಾರ್ಯದರ್ಶಿಗಳನ್ನು ಒಳಗೊಂಡಿರುತ್ತದೆ.
ʻʻಮಹಿಳಾ ಆಯೋಗದ ಅಧ್ಯಕ್ಷರನ್ನು ಕೇಂದ್ರ ಸರ್ಕಾರವು ನಾಮನಿರ್ದೇಶನ ಮಾಡುತ್ತದೆ. ಉಳಿದ ೫ ಜನ ಸದಸ್ಯರನ್ನು ಅವರ ಸಾಮರ್ಥ್ಯ, ಸಮಗ್ರತೆ ಮತ್ತು ಕರ್ತವ್ಯ ನಿಷ್ಠೆಯನ್ನು ಪರಿಗಣಿಸಿ ನಾಮನಿರ್ದೇಶನ ಮಾಡಬೇಕು. ಅವರು ಕಾನೂನು, ಮಹಿಳಾ ಕೈಗಾರಿಕಾ ಸಾಮರ್ಥ್ಯದ ನಿರ್ವಹಣೆ, ಸ್ವಮಹಿಳಾ ಸಂಘಟನೆ, ಶಿಕ್ಷಣ, ಆಡಳಿತ, ಅಭಿವೃದ್ಧಿ ಹಾಗೂ ಸಾಮಾಜಿಕ ಯೋಗಕ್ಷೇಮದಂತಹ ವಿವಿಧ ಕ್ಷೇತ್ರಗಳಲ್ಲಿ ಅನುಭವ ಹೊಂದಿರಬೇಕು. ಸದಸ್ಯ ಕಾರ್ಯದರ್ಶಿಯನ್ನು ಕೇಂದ್ರ ಸರ್ಕಾರವೇ ನಾಮನಿರ್ದೇಶನ ಮಾಡುತ್ತದೆ. ಅವರು ನಿರ್ವಹಣಾ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರಬೇಕು.
ಕಾರ್ಯಗಳು: (Functions) ಮಹಿಳಾ ಆಯೋಗದ ಕಾರ್ಯಗಳು ಹೀಗಿವೆ.
- ಆಯೋಗವು ಮಹಿಳೆಯರ ಮೇಲೆ ಪರಿಣಾಮ ಬೀರುವ ಕಾನೂನುಗಳು ಹಾಗೂ ನೀತಿಗಳನ್ನು ಪರಿಶೀಲಿಸಿ ಅವರ ಕಲ್ಯಾಣಕ್ಕಾಗಿ ತಿದ್ದುಪಡಿಗಳು ಹಾಗೂ ಹೊಸ ಶಾಸನಗಳನ್ನು ರೂಪಿಸುತ್ತದೆ.
- ಮಹಿಳೆಯರ ಕೌಟುಂಬಿಕ ಹಿಂಸಾಚಾರದಿಂದ ಮಹಿಳಾ ರಕ್ಷಣಾ ಕಾನೂನುಗಳನ್ನು ಸರಿಯಾಗಿ ಅನುಸಾರಗೊಳಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿ ಸರ್ಕಾರಕ್ಕೆ ಮಾಹಿತಿ ನೀಡುತ್ತದೆ.
- ಕೌಟುಂಬಿಕ ಹಿಂಸೆ, ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ, ವರದಕ್ಷಿಣೆ ಸಮಸ್ಯೆಗಳು, ಕಳ್ಳ ಸಾಗಾಣಿಕೆಗೆ ಸಂಬಂಧಿಸಿದ ದೂರುಗಳು ಬಂದರೆ ಅವುಗಳನ್ನು ಸ್ವೀಕರಿಸುವ ಹಾಗೂ ವಿಚಾರಣೆ ಮಾಡುವ ಅಧಿಕಾರ ಮಹಿಳಾ ಆಯೋಗಕ್ಕೆ ಇದೆ.
- ಭಾರತದಲ್ಲಿ ಮಹಿಳೆಯರ ಸ್ಥಾನಮಾನವನ್ನು ಸುಧಾರಿಸಲು ನೀತಿ ಕ್ರಮಗಳ ಕುರಿತು ಸರ್ಕಾರಕ್ಕೆ ಸಲಹೆ ನೀಡುವ ಜವಾಬ್ದಾರಿ ಮಹಿಳಾ ಆಯೋಗಕ್ಕೆ ಇದೆ.
- ಮಹಿಳೆಯರಿಗೆ ಅವರ ಹಕ್ಕುಗಳ ಕುರಿತು ಮಾಹಿತಿ ನೀಡಲು ಆಯೋಗವು ಕಾರ್ಯಾಗಾರಗಳು ಹಾಗೂ ವಿಚಾರ ಸಂಕೀರ್ಣಗಳನ್ನು ನಡೆಸುತ್ತದೆ.
- ಮಹಿಳಾ ಹಕ್ಕುಗಳ ಉಲ್ಲಂಘನೆಯಾದಾಗ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆಯುತ್ತದೆ.
- ಮಹಿಳಾ ಕಲ್ಯಾಣ ಹಾಗೂ ಸಬಲೀಕರಣಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡುತ್ತದೆ.
- ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಉದ್ಯೋಗ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಸುಧಾರಿಸಲು ಶಿಫಾರಸ್ಸು ಮಾಡುವುದು.
- ಮಹಿಳೆಯರನ್ನು ಬಂಧಿತರಾಗಿ ಇರಿಸಲಾಗಿರುವ ಸೆರೆಮನೆ, ರಿಮ್ಯಾಂಡ್ ಹೋಂ, ಮಹಿಳಾ ಸ್ಥಾಪನೆ ಹಾಗೂ ಇತರ ಸ್ಥಳಗಳನ್ನು ಪರಿಶೀಲಿಸುವುದು.
- ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಸೂಕ್ತ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳುವ ಮಾರ್ಗಗಳನ್ನು ಪ್ರಸ್ತಾಪಿಸಲು ಪ್ರಚಾರ ಹಾಗೂ ಶೈಕ್ಷಣಿಕ ಸಂಶೋಧನೆಗಳನ್ನು ಕೈಗೊಳ್ಳುವುದು. ವೃತ್ತಿಪರ ಆರೋಗ್ಯ ಅಪಾಯಗಳನ್ನು ಕಡಿಮೆ ಮಾಡಲು ಹಾಗೂ ಅವರ ದಕ್ಷತೆಯನ್ನು ಹೆಚ್ಚಿಸಲು ಬೆಂಬಲ ಸೇವೆಗಳನ್ನು ಗುರುತಿಸುವುದು.
ಉಪಸಂಹಾರ
ಮಹಿಳಾ ಆಯೋಗವು ಮಹಿಳೆಯರ ರಕ್ಷಣೆಗೆ ಮತ್ತು ಸಬಲೀಕರಣಕ್ಕೆ ಪ್ರಮುಖ ಪಾತ್ರ ವಹಿಸುತ್ತದೆ. ಮಹಿಳೆಯರ ಹಕ್ಕುಗಳ ಅರಿವು ಮೂಡಿಸಿ, ಕಾನೂನು ಸಹಾಯ ಮತ್ತು ಸಲಹೆಗಳನ್ನು ನೀಡುತ್ತದೆ. ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಒದಗಿಸಲು ಇದು ಸರ್ಕಾರಕ್ಕೆ ಮಾರ್ಗದರ್ಶನ ನೀಡುತ್ತದೆ. ಹೀಗಾಗಿ ಮಹಿಳಾ ಆಯೋಗವು ಸಮಾನತೆ ಮತ್ತು ನ್ಯಾಯದ ಸಮಾಜ ನಿರ್ಮಾಣಕ್ಕೆ ಅತ್ಯಂತ ಅಗತ್ಯವಾದ ಸಂಸ್ಥೆಯಾಗಿದೆ.