ಮಣ್ಣು ಪ್ರಕೃತಿಯ ಅಮೂಲ್ಯ ಕೊಡುಗೆಯಾಗಿದ್ದು ಮಾನವನ ಆಹಾರ, ವಾಸಸ್ಥಳ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಆಧಾರವಾಗಿದೆ. ಕೃಷಿ, ಕೈಗಾರಿಕೆ ಮತ್ತು ನಗರೀಕರಣದ ವೇಗವಾದ ಬೆಳವಣಿಗೆಯಿಂದ ಮಣ್ಣಿನ ಮೇಲೆ ಹೆಚ್ಚಿನ ಒತ್ತಡ ಬೀರುತ್ತಿದೆ. ಮಾನವ ನಿರ್ಮಿತ ಚಟುವಟಿಕೆಗಳಿಂದ ಮಣ್ಣಿನಲ್ಲಿ ವಿಷಪೂರಿತ ರಸಾಯನಿಕಗಳು ಸೇರಿ ಅದರ ಸಹಜ ಗುಣಗಳನ್ನು ಹಾಳುಮಾಡುತ್ತಿವೆ. ಮಣ್ಣಿನ ಮಾಲಿನ್ಯವು ಬೆಳೆಗಳ ಗುಣಮಟ್ಟ ಕುಗ್ಗಿಸುವುದರ ಜೊತೆಗೆ ಜೀವವೈವಿಧ್ಯತೆ ನಾಶಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ಮಣ್ಣಿನ ಮಾಲಿನ್ಯದ ಕಾರಣಗಳು ಮತ್ತು ಪರಿಣಾಮಗಳನ್ನು ತಿಳಿದುಕೊಳ್ಳುವುದು ಇಂದಿನ ಅಗತ್ಯವಾಗಿದೆ.

ಮಣ್ಣಿನ ಮಾಲಿನ್ಯದ ಕಾರಣಗಳು ಅಥವಾ ಮೂಲಗಳು:

1. ಕೈಗಾರಿಕೆಗಳ ತ್ಯಾಜ್ಯಗಳು: ರಸಾಯನಿಕಗಳಾದ ಪಾದರಸ, ತಾಮ್ರ, ಸೀಸ, ಸತು, ಕಾಡ್ಮಿಯಂ ,ಸೈನೆಡ್‌ಗಳು, ಕ್ರೋಮೇಟ್‌ಗಳು, ಆಮ್ಲಗಳು, ಆಲ್ಕಲಿಸ್ ಹಾಗೂ ಜೈವಿಕ ವಸ್ತುಗಳು ಮಣ್ಣಿನಲ್ಲಿ ಸೇರಿ ಮಾಲಿನ್ಯಗೊಳಿಸುತ್ತವೆ. ಕೈಗಾರಿಕೆಗಳಲ್ಲಿ ಬಳಸುವ ಕಚ್ಚಾವಸ್ತುಗಳಲ್ಲಿ ಶೇಕಡ 50ರಷ್ಟು ವ್ಯರ್ಥವಾದ ಪದಾರ್ಥಗಳಿರುತ್ತವೆ. ಅದರಲ್ಲಿ ಶೇ. 15 ರಷ್ಟು ವಿಷಪೂರಿತವಾಗಿರುತ್ತದೆ. ಇದರ ಜೊತೆಗೆ ಗಣಿಗಾರಿಕೆಯಿಂದಲೂ ಸಾಕಷ್ಟು ವ್ಯರ್ಥ ಪದಾರ್ಥಗಳು ಉತ್ಪತ್ತಿಯಾಗುವುದರ ಮೂಲಕ ಮಣ್ಣಿನ ಮಾಲಿನ್ಯತೆಗೆ ಕಾರಣವಾಗುತ್ತದೆ.

2. ಕೀಟನಾಶಕಗಳು:  ಆಧುನಿಕ ಬೇಸಾಯ ಪದ್ಧತಿಯಲ್ಲಿ ಫಸಲುಗಳನ್ನು ಬೇಗ ಬೇಗ ಪಡೆಯಬೇಕೆನ್ನುವ ಆಸೆಯಿಂದ ಕಾಯಿಗಳು ದಪ್ಪವಾಗಿ ಇರಬೇಕೆಂಬ ಕಾರಣಗಳಿಂದ  ರೈತರು ಕೀಟಗಳ ನಿಯಂತ್ರಣಕ್ಕಾಗಿ ಔಷಧಿಗಳು ಹಾಗೂ ಕೀಟನಾಶಕಗಳನ್ನು ಬಳಸುತ್ತಿದ್ದಾರೆ. ಇದರಿಂದ ಎಲ್ಲಾ ಬಗೆಯ ಕೀಟಗಳು ನಾಶವಾಗಿ ಜೀವವೈವಿಧ್ಯತೆಗಳು ನಾಶವಾಗುತ್ತಿವೆ. ಕೆಲವು ಔಷಧಿಗಳು ಹಾಳಾಗದೆ ಆಹಾರದ ಸರಪಳಿಯಲ್ಲಿ ಅಂಟಿಕೊಂಡು ಒಂದು ಬೆಳೆಯಿಂದ ಮತ್ತೊಂದು ಬೆಳೆಗೆ ಸಾಗಿಸಲ್ಪಡುವುದರಿಂದ ಮಾನವನ ಆರೋಗ್ಯದ ಮೇಲೆ ಪರಿಣಾಮಗಳನ್ನುಂಟು ಮಾಡುತ್ತದೆ. ರೈತರು ಹೆಚ್ಚಾಗಿ ಡಿಡಿಟಿಯನ್ನು ಬಳಸುವುದರಿಂದ ಅದು ಎಲೆಯ ಕಾಂಡದಲ್ಲಿ ಹಾಗೆ ಉಳಿದುಕೊಳ್ಳುವುದು. ಮಳೆಗಾಲದಲ್ಲಿ ಈ ರಸಾಯನಿಕ ಪದಾರ್ಥವು ಮಣ್ಣಿನಲ್ಲಿ ಸೇರುವುದರಿಂದ ಮಣ್ಣು ಮಲಿನವಾಗುತ್ತದೆ.

3. ತಿರಸ್ಕರಿಸಲ್ಪಟ್ಟ ವಸ್ತುಗಳು:  ಬೇಡವಾದ ವಸ್ತುಗಳಾದ ಕಾಂಕ್ರೀಟ್, ಡಾಂಬರ್, ಚರ್ಮ, ಕ್ಯಾನ್‌ಗಳು, ಪ್ಲಾಸ್ಟಿಕ್ ಗ್ಲಾಸ್‌, ಬಿಸಾಕಿದ ಆಹಾರ ಪದಾರ್ಥ, ಕಾಗದ ಮತ್ತು ಇತರ ವಸ್ತುಗಳು ಮಣ್ಣಿನೊಳಗೆ ಬೆರೆತು ಮಣ್ಣಿನ ಮಲಿನತೆಯನ್ನು ಉಂಟುಮಾಡುತ್ತವೆ.

4. ಆಸ್ಪತ್ರೆ ತ್ಯಾಜ್ಯಗಳು:  ಇಂದು ಭಾರತದಲ್ಲಿ ಆಸ್ಪತ್ರೆಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಆಸ್ಪತ್ರೆಯ ತ್ಯಾಜ್ಯ ವಸ್ತುಗಳಾದ ಸಿರಿಂಜ್, ಕೈಗೆ ಹಾಕುವ ಗ್ಲೌಸ್, ಔಷಧಿ ಬಾಟಲಿಗಳು, ನಿರುಪಯುಕ್ತ ಪದಾರ್ಥಗಳು, ಶಸ್ತ್ರಚಿಕಿತ್ಸೆಯ ನಂತರ ಕಲೆಹಾಕಿದ ಮಲಿನಕಾರಕ ವಸ್ತುಗಳು ಮುಂತಾದವುಗಳನ್ನು ಇಂದು ರಾಶಿ ರಾಶಿಯಾಗಿ ಎಲ್ಲೆಂದರಲ್ಲಿ ಗುಡ್ಡೆ ಹಾಕಲಾಗುತ್ತದೆ. ಮಳೆಗಾಲದಲ್ಲಿ ಇದರಲ್ಲಿನ ದ್ರವ ಪದಾರ್ಥಗಳು ನೀರಿನಲ್ಲಿ ಮತ್ತು ಮಣ್ಣಿನಲ್ಲಿ ಸೇರಿಕೊಳ್ಳುತ್ತವೆ. ಆಗ ಮಣ್ಣು ಮಲಿನವಾಗಿ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

5. ಜೈವಿಕ ಮೂಲಗಳು:  ಮಾನವ ಮತ್ತು ಪ್ರಾಣಿಗಳ ಮಲಮೂತ್ರಗಳು, ಕಸದ ಕೊಳೆತ ಪದಾರ್ಥಗಳು, ಮನೆಗಳಿಂದ ಹೊರ ಹಾಕಿದ ತ್ಯಾಜ್ಯಗಳು, ಮಣ್ಣಿನಲ್ಲಿ ಸೇರಿಕೊಂಡು ಮಣ್ಣುಮಲಿನವಾಗುವುದಕ್ಕೆ ಕಾರಣವಾಗುತ್ತದೆ.

6. ಮಣ್ಣಿನ ಸವೆತ : ವೇಗವಾಗಿ ಹರಿಯುವ ನೀರು, ಬೀಸುವ ಗಾಳಿ, ಹಿಮ, ಸಮುದ್ರದ ಅಲೆಗಳು ಮುಂತಾದ ನೈಸರ್ಗಿಕ ಕ್ರಿಯೆಗಳಿಂದ ಮಣ್ಣು ಸವಕಳಿ ಹೊಂದುತ್ತದೆ. ಮೇಲ್ಪದರು ಕೊಚ್ಚಿ ಹೋದ ನಂತರ ಕೆಳಗಿನ ಮಣ್ಣಿನ ಪದರು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ಇದರ ಜೊತೆಗೆ ಧನ ಕರುಗಳನ್ನು ಅತಿಯಾಗಿ ಮೇಯಿಸುವುದು, ವ್ಯವಸಾಯ ಕ್ಷೇತ್ರದ ವಿಸ್ತಾರ ಮುಂತಾದ ಕಾರಣಗಳಿಂದ ಮಣ್ಣು ಮಾಲಿನ್ಯವಾಗುತ್ತದೆ. ಭಾರತದ ಒಟ್ಟು ಭೂಪ್ರದೇಶದ 28ರಲ್ಲಿ ಶೇಕಡ 15ರಷ್ಟು ಮಣ್ಣು ಹಾಳಾಗಿದೆ. ನಮ್ಮ ದೇಶದಲ್ಲಿ ಪ್ರತಿವರ್ಷ ಸುಮಾರು 53000 ದಶಲಕ್ಷ ಟನ್ ಮಣ್ಣನ್ನು ವಿವಿಧ ಕಾರಣಗಳಿಂದಾಗಿ ಸಾಗಿಸುವುದರಿಂದ ಉತ್ಪಾದನಾ ಮಟ್ಟ ಕುಂಠಿತವಾಗುತ್ತದೆ.

7. ಜೀವಿ ಪರಿಸರ ವ್ಯವಸ್ಥೆಯ ನಾಶ: ಸಾಮಾನ್ಯವಾಗಿ ಒಂದು ಹೆಕ್ಟೇರ್‌ ಪ್ರದೇಶದಲ್ಲಿ 300 ದಶಲಕ್ಷ ಜೀವಿಗಳು ವಾಸಿಸುತ್ತವೆ ಎಂದು ಹೇಳಲಾಗುತ್ತಿದೆ. ಇಲಿ, ಹೆಗ್ಗಣ, ಕೀಟಗಳು, ಹಾವು, ಜೇಡ, ಪ್ರೋಟೋಜೋವ್‌ ಮುಂತಾದ ಹಲವು ಜೀವಿಗಳು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿವೆ. ಆಧುನಿಕ ಬೇಸಾಯ ಕ್ರಮದಿಂದ ರಸಾಯನಿಕ ಬಳಕೆ ಮಾಡುತ್ತಿರುವುದು ಈ ಜೈವಿಕ ವ್ಯವಸ್ಥೆ ಹಾಳಾಗಲು ಕಾರಣವಾಗಿದೆ.

8. ಜನಸಂಖ್ಯಾ ಬೆಳವಣಿಗೆ: ಜನಸಂಖ್ಯೆ ವೇಗವಾಗಿ ಬೆಳೆದಂತೆ ಅವನ ಅಗತ್ಯತೆಗಳು ಸಹ ಹೆಚ್ಚಾಗುತ್ತವೆ. ವಸತಿಗಾಗಿ ಕಾಡುಗಳನ್ನು ಕಡೆಯುವುದು, ಕೃಷಿ ಭೂಮಿಯನ್ನು ವಿಸ್ತರಿಸುವುದು, ಅಣೆಕಟ್ಟುಗಳನ್ನು ನಿರ್ಮಿಸುವುದು, ಸೇತುವೆಗಳ ನಿರ್ಮಾಣ ಹಾಗೂ ರಸ್ತೆ ನಿರ್ಮಾಣಕ್ಕಾಗಿ ಅತಿ ಹೆಚ್ಚು ಭೂಮಿಯನ್ನು ಬಳಸಿಕೊಳ್ಳುತ್ತಾನೆ. ಇದರಿಂದ ಭೂಮಿಗೆ ಧಕ್ಕೆ ಉಂಟಾಗುತ್ತದೆ.

9. ಆಮ್ಲೀಕರಣ: ಮಿತಿಮೀರಿದ ಆಮ್ಲೀಕರಣ ಗುಣಗಳುಳ್ಳ ರಸಗೊಬ್ಬರಗಳ ಬಳಕೆ ಮತ್ತು ಆಮ್ಲ ಮಳೆಗಳ ಕಾರಣದಿಂದ ಮಣ್ಣಿನಲ್ಲಿ ಆಮ್ಲಿಯತೆ ಅಧಿಕಗೊಳ್ಳುತ್ತದೆ. ಇದರಿಂದ ಹುಳಿ ಮಣ್ಣಿನ ಫಲವತ್ತತೆ ಹಾಳಾಗುತ್ತದೆ.

10. ಮಣ್ಣಿನ ಮೇಲ್ಪದರು ಗಟ್ಟಿಯಾಗುವುದು: ಭೂಮಿಯ ಮೇಲ್ಪದರು ಗಟ್ಟಿಯಾದರೆ ಕೃಷಿಕಾರ್ಯಕ್ಕೆ ತೊಂದರೆಯಾಗುತ್ತದೆ. ಬೀಜಗಳು ಮೊಳಕೆಯೊಡೆದು ಸಸಿಗಳು ಹೊರಬರಲು ಗಟ್ಟಿಮಣ್ಣು ತಡೆಯೊಡ್ಡುತ್ತದೆ. ಮಣ್ಣಿನಲ್ಲಿ ನೀರು ಇಂಗಲು ಸಾಧ್ಯವಾಗುವುದಿಲ್ಲ. ನೀರು ಇಂಗುವಿಕೆ ಕಡಿಮೆಯಾದಾಗ ನೀರಿನ ಹರಿಯುವ ಪ್ರಮಾಣ ಹೆಚ್ಚಾಗಿ ಸವಕಳಿಯ ಪ್ರಮಾಣವು ಹೆಚ್ಚುತ್ತದೆ.

11. ಭೂಕುಸಿತಗಳು: ಗುಡ್ಡಗಳ ಇಳಿಜಾರು ಭಾಗದಲ್ಲಿ ಅರಣ್ಯಗಳು ಹಾಗೂ ಸಸ್ಯಗಳು ಅಲ್ಲಿನ ಮಣ್ಣನ್ನು ಗಟ್ಟಿಯಾಗಿ ಹಿಡಿದಿಡುತ್ತವೆ. ಆದರೆ ಸಸ್ಯಗಳು ಹಾಗೂ ಅರಣ್ಯಗಳು ನಾಶವಾದಂತೆ ಅಲ್ಲಿನ ಮಣ್ಣು ಸಡಿಲಗೊಳ್ಳುತ್ತದೆ. ವಿಪರೀತ ಮಳೆ ಬಂದರೆ ಇಂತಹ ಭೂಪ್ರದೇಶಗಳು ಕುಸಿಯಲು ಆರಂಭಿಸುತ್ತವೆ.  ಇದನ್ನೇ ಭೂ ಕುಸಿತ ಎಂದು ಕರೆಯುವರು. ಗಣಿಗಾರಿಕೆ ಹಾಗೂ ರೈಲು ಮಾರ್ಗಗಳನ್ನು ನಿರ್ಮಾಣ ಮಾಡುವಾಗ ಭೂಕುಸಿತ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ.

ಉಪಸಂಹಾರ

ಮಣ್ಣಿನ ಮಾಲಿನ್ಯವು ಕೃಷಿ ಉತ್ಪಾದನೆ, ಜೀವವೈವಿಧ್ಯತೆ ಮತ್ತು ಮಾನವ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅತಿಯಾದ ರಸಾಯನಿಕ ಬಳಕೆ, ತ್ಯಾಜ್ಯಗಳ ಅಸಮರ್ಪಕ ನಿರ್ವಹಣೆ ಮತ್ತು ಅರಣ್ಯ ನಾಶವನ್ನು ತಡೆಯುವುದು ಅತ್ಯಂತ ಅಗತ್ಯವಾಗಿದೆ. ಪರಿಸರ ಸ್ನೇಹಿ ಕೃಷಿ ವಿಧಾನಗಳು, ತ್ಯಾಜ್ಯ ವಿಂಗಡಣೆ ಮತ್ತು ಮಣ್ಣಿನ ಸಂರಕ್ಷಣಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಸರ್ಕಾರ, ಸಮಾಜ ಮತ್ತು ಪ್ರತಿಯೊಬ್ಬ ನಾಗರಿಕರೂ ಒಟ್ಟಾಗಿ ಜವಾಬ್ದಾರಿಯಿಂದ ನಡೆದುಕೊಂಡಾಗ ಮಾತ್ರ ಮಣ್ಣಿನ ಮಾಲಿನ್ಯವನ್ನು ನಿಯಂತ್ರಿಸಬಹುದು. ಭವಿಷ್ಯದ ತಲೆಮಾರಿಗಾಗಿ ಮಣ್ಣನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.