ಭೋಜರಾಜನು ಪರಮಾರ ದೊರೆಗಳಲ್ಲಿ ಅತ್ಯಂತ ಪ್ರಸಿದ್ಧನಾಗಿದ್ದನು. ಈತ ಕ್ರಿ.ಶ.1000 ದಿಂದ 1055ರವರೆಗೆ ಆಳ್ವಿಕೆ ಮಾಡಿದನು. ಚಿಕ್ಕ ರಾಜ್ಯವಾಗಿದ್ದ ಪರಮಾರರ ರಾಜ್ಯ ಭೋಜರಾಜನ ಕಾಲದಲ್ಲಿ ವಿಶಾಲವಾಗಿ ಹರಡಿತು. ಇವನು ದಂಡನಾಯಕ ಮಾತ್ರ ಆಗಿರದೆ ಸಾಹಿತಿಯೂ ಆಗಿದ್ದನು. ‘ಧಾರಾನಗರ’ ಈತನ ರಾಜಧಾನಿಯಾಗಿದ್ದಿತು. ಭೋಜಚರಿತೆ, ಸರಸ್ವತಿ ಕಂಠಾಭರಣ ಹಾಗೂ ಶಬ್ದಾನುಶಾಸನ ಈತನ ಸಾಧನೆಗಳ ಕುರಿತು ಬರೆದಿವೆ.
ಭೋಜರಾಜನ ದಂಡಯಾತ್ರೆಗಳು:
1) ಕಲ್ಯಾಣಿ ಚಾಲುಕ್ಯರ ಮೇಲೆ ಸೇಡು: ಪರಮಾರರ ಬದ್ಧ ವೈರಿಯಾಗಿದ್ದ ಕಲ್ಯಾಣಿ ಚಾಲುಕ್ಯರ ಮೇಲೆ ಸೇಡು ತೀರಿಸಿಕೊಳ್ಳಲು ಭೋಜರಾಜನು ಕಾತರನಾಗಿದ್ದನು. ಇದೇ ಸಮಯದಲ್ಲಿ ಚಾಲುಕ್ಯರ ಅರಸನಾದ ಎರಡನೆಯ ಜಯಸಿಂಹ ಭೋಜರಾಜನ ಅರಮನೆಯ ಸಂಪತ್ತೆಲ್ಲವನ್ನು ಲೂಟಿ ಮಾಡಿದನು. ಇದರಿಂದ ಕುಪಿತಗೊಂಡ ಭೋಜರಾಜನು ಕಲಚೂರಿ ದೊರೆ ಗಾಂಗೇಯದೇವ ಹಾಗು ತಂಜಾವೂರಿನ ರಾಜೇಂದ್ರ ಚೋಳನೊಂದಿಗೆ ಒಪ್ಪಂದವನ್ನು ಮಾಡಿಕೊಂಡು ಚಾಲುಕ್ಯರ ಮೇಲೆ ಯುದ್ಧ ಸಾರಿದನು. ಇವರೀರ್ವರೂ ಗೋದಾವರಿ ನದಿ ತೀರದಲ್ಲಿ ಸಂಧಿಸಿದರು. ಆರಂಭದಲ್ಲಿ ಭೋಜರಾಜನ ಸೈನ್ಯಕ್ಕೆ ಯಶಸ್ಸು ಲಭಿಸಿತು. ಆದರೆ ತಕ್ಷಣವೇ ಎಚ್ಚೆತ್ತುಕೊಂಡ ಜಯಸಿಂಹ ಮಿತ್ರಕೂಟವನ್ನು ಸಂಪೂರ್ಣವಾಗಿ ಸೋಲಿಸಿ ಹಿಮ್ಮೆಟ್ಟಿಸಿದನು.
2) ಇಂದ್ರರಥನ ಮೇಲೆ ದಾಳಿ: ಆದಿನಗರವನ್ನು ಆಳುತ್ತಿದ್ದ ಇಂದ್ರರಥನನ್ನು ಸೋಲಿಸಲು ಭೋಜರಾಜನು ಸೇನಾಸಮೇತ ಹೊರಟನು. ಇವರಿಬ್ಬರ ನಡುವೆ ನಡೆದ ಯುದ್ಧದಲ್ಲಿ ಇಂದ್ರರಥ ಸೋಲನುಭವಿಸಿದನು.
3) ಲಾಟರ ವಿರುದ್ಧ ಯುದ್ಧ: ಲಾಟರ ಅರಸನಾದ ಕೀರ್ತಿರಾಜನನ್ನು ಭೋಜರಾಜ ಸೋಲಿಸಿದನೆಂದು ಆ ಕಾಲದ ಶಾಸನಗಳು ಹೇಳಿವೆ.
4) ತ್ರಿಪುರಿ ಗಂಗೇವಾಡಿಯ ವಿರುದ್ಧ ವಿಜಯ: ತ್ರಿಪುರಿ ಗಾಂಗೇಯ ರಾಜನು ಭೋಜರಾಜನ ಕಡುವೈರಿಯಾಗಿದ್ದನು. ಹೀಗಾಗಿ ಅವನನ್ನು ಸೋಲಿಸಲು ಭೋಜ ರಾಜನು ಹೊರಟನು. ದೀರ್ಘಕಾಲದ ಹೋರಾಟದ ನಂತರ ಗಾಂಗೇಯದೇವ ಭೋಜರಾಜನಿಂದ ಸೋತು ಶರಣಾಗತನಾದನು. ದರ್ಪದಿಂದ ಆಳ್ವಿಕೆ ಮಾಡುತ್ತಿದ್ದನು.
5) ಕೊಂಕಣದ ಮೇಲೆ ದಂಡಯಾತ್ರೆ: ಕೊಂಕಣ ಪ್ರಾಂತ್ಯದ ಅಧಿಪತಿಯಾಗಿದ್ದ ಕೇಶಿದೇವನು ಅಹಂಕಾರ ಹಾಗೂ ಇವನನ್ನು ಬಗ್ಗು ಬಡಿಯಲು ಭೋಜರಾಜ ಕ್ರಿ.ಶ.1020ರಲ್ಲಿ ಕೊಂಕಣದ ಮೇಲೆ ದಾಳಿ ಮಾಡಿದನು. ಈ ಯುದ್ಧದಲ್ಲಿ ಭೋಜರಾಜ ಗೆಲುವನ್ನು ಸಾಧಿಸುವ ಮೂಲಕ ಕೊಂಕಣದ ಮೇಲೆ ತನ್ನ ಪ್ರಭುತ್ವವನ್ನು ಸ್ಥಾಪಿಸಿದನು.
6) ಕನ್ಯಾಕುಬ್ಜದ ವಿರುದ್ಧ ದಂಡಯಾತ್ರೆ: ಶಾಸನಗಳು ಹೇಳುವ ಪ್ರಕಾರ ಭೋಜರಾಜನು ಕನ್ಯಾಕುಬ್ಬದ ಮೇಲೆ ದಾಳಿ ಮಾಡಿ ಅಲ್ಲಿನ ರಾಜನನ್ನು ಸೋಲಿಸಿದನು ಎಂದು ತಿಳಿದುಬರುತ್ತದೆ.
7) ಚಂದೇಲರ ವಿರುದ್ಧ ದಂಡಯಾತ್ರೆ: ಚಂದೇಲರ ಅರಸನಾದ ವಿಧ್ಯಾದರ ಹಾಗೂ ಭೋಜನ ನಡುವೆ ಭೀಕರ ಯುದ್ಧ ನಡೆಯಿತು. ಈ ಯುದ್ಧದಲ್ಲಿ ಭೋಜನು ಸೋಲನುಭವಿಸಿದನು. ಭೋಜನ ಪ್ರಯತ್ನವನ್ನು ಚಂದೇಲರು ಭಗ್ನಗೊಳಿಸಿದರೆಂದು ಶಾಸನಗಳಿಂದ ತಿಳಿದುಬರುತ್ತದೆ.
8) ಗ್ವಾಲಿಯರದ ಕೀರ್ತಿರಾಜನ ಮೇಲೆ ದಾಳಿ: ಗ್ವಾಲಿಯರದ ದೊರೆ ಕೀರ್ತಿರಾಜನ ವಿರುದ್ಧ ಭೋಜನು ಯುದ್ಧವನ್ನು ಸಾರಿದನು. ಈತನನ್ನು ತೀವ್ರವಾಗಿ ವಿರೋಧಿಸಿದ ಕೀರ್ತಿರಾಜನು ಭೋಜರಾಜನನ್ನು ಯುದ್ಧದಲ್ಲಿ ಸೋಲಿಸಿ ಹಿಂದಕ್ಕೆ ಅಟ್ಟಿದನು.
9) ಚಹಮಾನರ ವಿರುದ್ಧ ಹೋರಾಟ: ಚಹಮಾನರ ರಾಜನಾದ ವಿಕ್ರಮನು ಭೋಜರಾಜನ ವಿರುದ್ಧ ಹೋರಾಡಿ ಸೋಲನುಭವಿಸಿದನು.
10) ಘಜ್ನಿ ಮಹಮ್ಮದನ ವಿರುದ್ಧ ದಂಡಯಾತ್ರೆ: ಘಜ್ಜಿ ಮಹಮ್ಮದನ ವಿರುದ್ಧ ಪಂಜಾಬಿನ ದೊರೆಯಾದ ಆನಂದಪಾಲನು ಭೋಜರಾಜನ ಜೊತೆ ಮೈತ್ರಿಯನ್ನು ಏರ್ಪಡಿಸಿಕೊಂಡು ಯುದ್ಧ ಸಾರಿದನು. ಆದರೆ ಮಹಮ್ಮದ್ನ ಉಪಟಳ ಹೆಚ್ಚಾಯಿತು. ಆಗ ಆನಂದಪಾಲನ ಮಗ ತ್ರಿಲೋಚನಾಪಾಲನು ಭೋಜರಾಜನ ಜೊತೆ ಸೇರಿಕೊಂಡು ಮಹಮ್ಮದನ ವಿರುದ್ಧ ಹೋರಾಟ ಆರಂಭಿಸಿದನು. ಇವರಿಬ್ಬರೂ ಸೇರಿ ಮುಸ್ಲಿಂರ ಆಕ್ರಮಣದಿಂದ ಭಾರತವನ್ನು ರಕ್ಷಿಸಿದರು. ಇದು ಭೋಜರಾಜನ ಬಹುಮುಖ್ಯವಾದ ಸಾಧನೆಯಾಯಿತು.
11) ಸೋಮೇಶ್ವರನ ವಿರುದ್ಧ ದಾಳಿ: ಚಾಲುಕ್ಯ ದೊರೆ ಒಂದನೆಯ ಸೋಮೇಶ್ವರ ಭೋಜರಾಜನಿಂದ ತನ್ನ ತಂದೆಗೆ ಆದ ಅವಮಾನವನ್ನು ಮರೆತಿರಲಿಲ್ಲ. ಹೀಗಾಗಿ ಆತನ ಮೇಲೆ ಸೇಡು ತೀರಿಸಿಕೊಳ್ಳಲು ಒಂದನೆಯ ಸೋಮೇಶ್ವರ ಆತನ ವಿರುದ್ಧ ಯುದ್ಧ ಘೋಷಿಸಿ ಧಾರಾನಗರ, ಉಜೈನಿ ಹಾಗೂ ಮಾಂಡುಗಳನ್ನು ವಶಪಡಿಸಿಕೊಂಡನು. ಸೋಮೇಶ್ವರನ ದಾಳಿಗೆ ಹೆದರಿ ಭೋಜರಾಜ ರಾಜಧಾನಿಯನ್ನು ತೊರೆದು ಪಲಾಯನ ಮಾಡಿದನು.
12) ಭೋಜನ ಸಾಂಸ್ಕೃತಿಕ ಸಾಧನೆಗಳು:
ಎ) ಧರ್ಮ: ಭೋಜರಾಜನು ಮಹಾನ್ ಪರಾಕ್ರಮಿಯಾಗಿದ್ದಂತೆ ಉತ್ತಮ ಆಡಳಿತಗಾರನೂ ಹಾಗೂ ಸಾಹಿತ್ಯ ಪ್ರೇಮಿಯೂ ಆಗಿದ್ದನು. ಇವನು ಶೈವ ಧರ್ಮದ ಅನುಯಾಯಿಯಾಗಿದ್ದು ಧರ್ಮದ ಕುರಿತು ‘ಸತ್ಯ ಪ್ರಕಾಶ’ ಎಂಬ ಕೃತಿಯನ್ನು ರಚಿಸಿದನು. ಇವನು ಜೈನ ಧರ್ಮದ ರಕ್ಷಕನೂ ಆಗಿದ್ದನು. ತನ್ನ ಆಡಳಿತಾವಧಿಯಲ್ಲಿ ವಿವಿಧ ಧರ್ಮದ ಗುರುಗಳನ್ನು ಕರೆದು ಚರ್ಚೆ ಹಾಗೂ ಗೋಷ್ಠಿಗಳನ್ನು ನಡೆಸಿದನು.
ಬಿ) ಶಿಕ್ಷಣ: ಭೋಜನು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದನು. ಆದ್ದರಿಂದ ಭೋಜನು ಧಾರಾನಗರದಲ್ಲಿ ಒಂದು ಸಂಸ್ಕೃತ ವಿದ್ಯಾಕೇಂದ್ರವನ್ನು ಸ್ಥಾಪಿಸಿದನು.
ಇವನು ಸಾಹಿತ್ಯ ಪ್ರೇಮಿಯಾಗಿದ್ದು, ಸ್ವತಃ ಅನೇಕ ಕೃತಿಗಳನ್ನು ರಚಿಸಿದ್ದಾನೆ. ಇವನು ರಚಿಸಿದ ಚಂಪೂ ಕಾವ್ಯಕ್ಕೆ ರಾಮಾಯಣ ಚಂಪೂ ಎಂದು ಕರೆಯಲಾಗಿದೆ. ಆಯುರ್ವೇದ ಸರ್ವಸ್ಯ, ಸರಸ್ವತಿ ಕಂಠಾಭರಣ, ವ್ಯವಹಾರ ಸಮುಚ್ಚಯ, ಶಬ್ದಾನುಶಾಸನ, ಸಮರಾಂಗನ ಸೂತ್ರಧಾರ, ನಾಮಮಲ್ಲಿಕಾ, ತತ್ವಪ್ರಕಾಶ, ರಾಜಮಾರ್ತಂಡ ಹಾಗು ಶೃಂಗಾರ ಪ್ರಕಾಶ ಮೊದಲಾದ ಕೃತಿಗಳನ್ನು ಸ್ವತಃ ಭೋಜರಾಜನೇ ರಚಿಸಿದನು. ಧನಪಾಲ, ಉವಟ, ಸೋಲಹನ, ಕವಿತ್ರಿ ಸೀತ ಮುಂತಾದ ಕವಿ ಪಂಡಿತರು ಭೋಜನ ಆಸ್ಥಾನದಲ್ಲಿದ್ದರು. ಈತನ ರಾಣಿ ಅರುಂಧತಿ ಸಹ ವಿದ್ವಂಸಳಾಗಿದ್ದಳು. ಕಲೆ: ಭೋಜರಾಜ ಅನೇಕ ದೇವಾಲಯಗಳು, ಸರೋವರಗಳು ಹಾಗೂ ಕೆರೆಗಳನ್ನು ನಿರ್ಮಿಸಿದನು. ಇವನು ಭೋಜಪುರ ಎಂಬ ನಗರವನ್ನು ನಿರ್ಮಿಸಿದನು. ಧಾರಾನಗರದಲ್ಲಿ ಸರಸ್ವತಿ ದೇಗುಲವನ್ನು ಕಟ್ಟಿಸಿದನು. ಧಾರಾನಗರದಲ್ಲಿ ಶಾಲೆಯನ್ನು ನಿರ್ಮಿಸಿದನು. ಇದು ಅಂದಿನ ಪ್ರಸಿದ್ಧ ವಿಶ್ವವಿದ್ಯಾಲಯವಾಗಿತ್ತು. ಧಾರಾನಗರದಲಿ ಭೋಜ ಸರೋವರವನ್ನು ನಿರ್ಮಿಸಿದನು.
ಕಲೆ: ಭೋಜರಾಜನ ನಂತರ ಜಯಸಿಂಹ, ಉದಯಾದಿತ್ಯ, ಜಗತ್ ದೇವ, ನರವರ್ಮನ್, ಯಶೋವರ್ಮನ್, ಜಯವರ್ಮನ್, ವಿಂಧ್ಯವರ್ಮನ್, ಅರ್ಜುನವರ್ಮ, ದೇವಪಾಲ, ಚೈತುಗಿದೇವ, ಎರಡನೆಯ ಜಯವರ್ಮ, ಎರಡನೆಯ ಜಯಸಿಂಹಮ ಎರಡನೆಯ ಅರ್ಜುನವರ್ಮ ಹಾಗೂ ಎರಡನೆಯ ಭೋಜರಾಜ ಪರಮಾರರ ದೊರೆಗಳಾದರು. ಆದರೆ ಎರಡನೆಯ ಭೋಜರಾಜನ ಕಾಲದಲ್ಲಿ 1305ರಲ್ಲಿ ಅಲ್ಲಾವುದ್ದೀನ್ ಖಲ್ಟಿ ಮಾಳವವನ್ನು ಆಕ್ರಮಿಸಿ ಭೋಜರಾಜನ ಸೋಲಿಗೆ ಕಾರಣನಾದನು. ಭೋಜರಾಜನ ಸೋಲಿನ ನಂತರ ಪರಮಾರರ ಸಂತತಿ ಅವನತಿ ಹೊಂದಿತು.