ʻʻಸಾಮಾನ್ಯವಾಗಿ ಮಾನವ ಬಯಸಿದ್ದಕ್ಕಿಂತ ಕಡಿಮೆ ಮಳೆ ಬೀಳುವುದು ಅಥವಾ ಪ್ರವಾಹದ ವಿರುದ್ಧವಾದ ಮಳೆಗಾಲದ ಪರಿಸ್ಥಿತಿಯನ್ನು ಬರಗಾಲ ಎಂದು ಕರೆಯಲಾಗಿದೆ.ʼʼ

ʻʻಒಂದು ನಿರ್ದಿಷ್ಟ ಅವಧಿಯಲ್ಲಿ ವಾತಾವರಣದಲ್ಲಿ ಮಳೆಯ ಕೊರತೆ, ಶುಷ್ಕ ವಾತಾವರಣ ಹಾಗೂ ಭೂಮಿಯಲ್ಲಿನ ತೇವಾಂಶ ಕೊರತೆ ಇತ್ಯಾದಿಗಳ ಮಾನದಂಡವನ್ನು ಪರಿಗಣನೆಗೆ ತಗೆದುಕೊಂಡು ಬರಪೀಡಿತ ಪ್ರದೇಶ ಎಂದು ಹೇಳಲಾಗುತ್ತದೆ.ʼʼ

ಬರಗಾಲಕ್ಕೆ ಕಾರಣಗಳು:

ಬರಗಾಲಕ್ಕೆ ಈ ಕೆಳಗಿನ ಅಂಶಗಳು ಕಾರಣವಾಗುತ್ತವೆ.

1. ಜಾಗತಿಕ ತಾಪಮಾನ ಹಾಗೂ ಹವಾಗುಣದ ಬದಲಾವಣೆ:

ಭೂಮಿಯು ಅತಿಯಾಗಿ ಕಾಯುವುದರಿಂದ ಹವಾಗುಣದಲ್ಲಿ ಏರುಪೇರುಗಳು ಕಂಡುಬರುತ್ತದೆ. ಆಗ ಭೂಮಿಯ ಮೇಲೆ ತೇವಾಂಶ ಕಡಿಮೆಯಾಗಿ ಬೆಳೆಗಳು ಒಣಗಿ ಹೋಗಿ ನದಿಗಳು, ಕೆರೆಗಳು, ಹೊಂಡಗಳು ಹಾಗೂ ಸರೋವರದ ನೀರು ಬತ್ತಿಹೋಗುವುದರಿಂದ ಬರಗಾಲ ಕಾಣಿಸಿಕೊಳ್ಳುತ್ತದೆ. ಬರಗಾಲ ಬಂದಿತೆಂದರೆ ಪಶುಪಕ್ಷಿಗಳು, ಗಿಡಮರಗಳು ಹಾಗೂ ಮಾನವ ಕುಲ ನೀರಿಗಾಗಿ ಪರಿತಪಿಸುವಂತಾಗುತ್ತದೆ.

2. ಮಾರುತಗಳು ಹಾಗೂ ಹವಾಮಾನ ಮಾದರಿಗಳು:

ಪ್ರಸ್ತುತ ದಿನಗಳಲ್ಲಿ  ಮಾನ್ಸೂನ್‌ ಮಾರುತಗಳು ಅನಿಶ್ಚಿತ ಹಾಗೂ ಅನರೀಕ್ಷಿತ ಮತ್ತು ವಿಶ್ವಾಸಾರ್ಹವಾದವುಗಳಲ್ಲದಾಗಿದೆ. ಹೀಗಾಗಿ ಮಳೆಗಾಲವು ಸಹ ಅನಿಶ್ಚಿತತೆಯಿಂದ ಕೂಡಿದೆ. ಕೆಲವು ಕಡೆಗಳಲ್ಲಿ ವಿಪರಿತ ಮಳೆ ಬಂದರೆ ಇನ್ನು ಕೆಲವು ಕಡೆ ಮಳೆಯೇ ಇರುವುದಿಲ್ಲ. ಕೆಲಭಾಗಗಳಿಗೆ ಭೇಗ ಮಳೆ ಬಂದರೆ ಕೆಲವು ಕಡೆ ತಡವಾಗಿ ಬರುತ್ತದೆ. ಎಲ್‌ ನಿನೋ ಅಥವಾ ಲಾ ನಿನೋ ಎಂಬ ಘಟನೆಗಳು ಬರಗಾಲಕ್ಕೆ ತಮ್ಮದೇ ಆದ ಕೊಡುಗೆ ನೀಡಿವೆ. ಸಮುದ್ರದಲ್ಲಿ ಬಿಸಿ ನೀರಿನ ಪ್ರವಾಹ ಹಾಗೂ ತಣ್ಣೀರಿನ ಪ್ರವಾಹದಲ್ಲಿ ಸಮುದ್ರದ ಮೇಲೆ ಬೀಸುವ ಮಾರುತಗಳಲ್ಲಿ ಆಗುವ ಏರಿಪೇರಿನಿಂದ ಉಂಟಾಗುವ ಅಸಾಧಾರಣ ವಾತಾವರಣದ ಸ್ಥಿತಿಗಳಿವು. ಸುಮಾರು 15 ನೇ ಶತಮಾನದಲ್ಲಿ ಎಲ್‌ ನಿನಾಗಳು 4-8 ವರ್ಷಗಳಿಗೆ ಒಮ್ಮೆ ಸಂಭವಿಸುತ್ತಿತ್ತು. ಆದರೆ 20 ನೇ ಶತಮಾನದಲ್ಲಿ 2-7 ವರ್ಷಕ್ಕೆ ಕುಸಿದಿದೆ. ಮುಂದಿನ ದಶಕಗಳಲ್ಲಿ ಅದು 1-2 ವರ್ಷಕ್ಕೆ ಕುಸಿಯುವ ಅಪಾಯವಿದೆ. ಹೀಗೆ ವರ್ಷ ವರ್ಷ ಎಲ್‌ ನಿನಾಗಳ ಕುಸಿತವಾಗುತ್ತಾ ಹೋದರೆ ತೀವ್ರ ಬರಗಾಲ ಬರುತ್ತದೆ. 

3. ಮಣ್ಣಿನ ತೇವಾಂಶದ ಮಟ್ಟ:

ಭೂಮಿಯ ಮೇಲೆ ತೇವಾಂಶದ ಪ್ರಮಾಣ ಕಡಿಮೆಯಾದರೆ ಮೊಡಗಳು ಸೃಷ್ಠಿಯಾಗುವುದಿಲ್ಲ. ಆಗ ಮಳೆಯ ಪ್ರಮಾಣ ಕಡಿಮೆಯಾಗುತ್ತದೆ. ಆಗ ಭೂಮಿಯ ತಾಪಮಾನ ಅಧಿಕವಾಗುತ್ತದೆ. ನೀರಿನ ಬೇಡಿಕೆ ಹೆಚ್ಚಾದಾಗ ಕಡಿಮೆ ನೀರಿನ ಲಭ್ಯತೆ ಇದ್ದಾಗ ತೀವ್ರ ಬರಗಾಲಕ್ಕೆ ಕಾರಣವಾಗುತ್ತದೆ.

4. ನೀರಿನ ಪೂರೈಕೆ ಸಮಸ್ಯೆಗಳು:

ಕೈಗಾರೀಕರಣದ ಮಿತಿಮೀರಿದ ಬೆಳವಣಿಗೆ, ಅತಿಯಾದ ನೀರಿನ ಬಳಕೆ, ಜನಸಂಖ್ಯಾ ಸ್ಫೋಟ, ಮುಂತಾದವುಗಳ ಕಾರಣದಿಂದ ಅಂತರ್ಜಲ ಹಾಗೂ ಸಿಹಿ ನೀರಿನ ಬೇಡಿಕೆ ಹೆಚ್ಚುತ್ತದೆ. ಆಗ ಬರಗಾಲ ಕಾಣಿಸಿಕೊಳ್ಳುತ್ತದೆ. 

 5. ಶಾಖೋತ್ಪನ್ನ ಘಟಕಗಳು ಹಾಗೂ ಉಷ್ಣ ವಿದ್ಯುತ್‌ ಸ್ಥಾವರಗಳು:

ಶಾಖೋತ್ಪನ್ನ ಘಟಕಗಳು ಹಾಗೂ ಅಣುವಿದ್ಯುತ್‌ ಸ್ಥಾವರಗಳಿಗೆ ಅಧಿಕ ಪ್ರಮಾಣದ ನೀರು ಬೇಕಾಗುತ್ತದೆ. ದಿನೇ ದಿನೇ ನೀರಿನ ಬಳಕೆ ಹೆಚ್ಚಾದಂತೆ ನದಿ, ಸರೋವರ, ಕೆರೆ, ಹೊಂಡಗಳು ಬತ್ತಿಹೋಗಿ ನೀರಿನ ಹಾಹಾಕಾರ ಆರಂಭವಾಗುತ್ತದೆ. ಇದೇ ಬರಗಾಲಕ್ಕೆ ಕಾರಣವಾಗುತ್ತದೆ. 

ಬರಗಾಲದ ಪರಿಣಾಮಗಳು:

ಬರಗಾಲದಿಂದ ಉಂಟಾಗುವ ಪರಿಣಾಮಗಳು ಈ ಕೆಳಗಿನಂತಿವೆ.

  1. ಭೌತಿಕ ಪರಿಣಾಮ(Physical Result) : ಭೂಮಿಯ ಮೇಲಿನ ಮಣ್ಣಿನ ತೇವಾಂಶ, ಭೂ ಮೇಲ್ಮೈ ಹರಿವು ಹಾಗೂ ಅಂತರ್ಜಲಗಳ ಮೇಲೆ ಬರಗಾಲ ತೀವ್ರ ಪರಿಣಾಮಗಳನ್ನು ಬೀರುತ್ತದೆ. 
  2. ಕೃಷಿಯ ಮೇಲಿನ ಪರಿಣಾಮ : ಭಾರತೀಯ ಕೃಷಿಯು ಮಾನ್ಸೂನ್‌ ಮಳೆಯನ್ನು ಅವಲಂಭಿಸಿದೆ. ಆದರೆ ಮಾನ್ಸೂನ್‌ ಅನಿರೀಕ್ಷಿತ ಹಾಗೂ ಅಸಂಭವುಳ್ಳದ್ದಾಗಿರುತ್ತದೆ. ಹೀಗಾಗಿ ಮಳೆಯನ್ನೇ ಅವಲಂಬಿಸಿ ಬದುಕುತ್ತಿದ್ದ ಭಾರತೀಯ ರೈತ ಕುಟುಂಬಗಳು ಬರಗಾಲದಿಂದ ತತ್ತರಿಸಿ ಹೋಗುತ್ತವೆ. 
  3. ಪರಿಸರದ ಮೇಲೆ ಪರಿಣಾಮ: ತೀವ್ರ ಬರಗಾಲ ಕಾಣಿಸಿಕೊಂಡರೆ ವನ್ಯ ಜೀವಿಗಳಿಗೆ ಆಹಾರ ಮತ್ತು ನೀರಿನ ಕೊರತೆಯುಂಟಾಗುತ್ತದೆ. ಜೊತೆಗೆ ವನ್ಯಜೀವಿಗಳ ವಾಸಸ್ಥಾನಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಬರಗಾಲ ಹೆಚ್ಚಾದರೆ ಕಾಡುಗಳು ಒಣಗಿ ಹೋಗುತ್ತವೆ. ಇಲ್ಲವೆ ತಾಪಮಾನದಿಂದ ಕಾಡಿಗೆ ಬೆಂಕಿ ಹತ್ತಬಹುದು. ಆಗ ವನ್ಯಜೀವಿಗಳು ವಲಸೆ ಹೋಗಬಹುದು ಇಲ್ಲವೆ ಕಾಡಿನ ಬೆಂಕಿನ ಆಹುತಿಯಾಬಹುದು. ನೀರಿನ ಗುಣಮಟ್ಟ ಕುಸಿಯುತ್ತಾ ಹೋದರೆ ಜೀವ ವೈವಿಧ್ಯತೆಗಳು ಅಳಿವಿನ ಅಂಚಿಗೆ ತಳ್ಳಪ್ಪಡುತ್ತವೆ.
  4. ಬರಗಾಲದಿಂದ ಕೃಷಿಗಿಂತ ತೀವ್ರವಾಗಿ ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತದೆ.
  5. ಕೃಷಿ ಕ್ಷೇತ್ರದಲ್ಲಿರುವ ಉದ್ಯೋಗಾವಕಾಶಗಳನ್ನು ಕಡಿತಗೊಳಿಸುತ್ತದೆ.
  6.  ಸಾಕು ಪ್ರಾಣಿಗಳಾದ ಎಮ್ಮೆ, ಹಸು, ಕೋಣ, ಕುರಿ, ಮೇಕೆ, ಅಷ್ಟೇ ಏಕೆ ಮಾನವರೂ ಸಹ ಕುಡಿಯುವ ನೀರಿನ ಕೊರತೆಯನ್ನು ಅನುಭವಿಸಬೇಕಾಗುತ್ತದೆ.
  7.  ಬರಗಾಲದಿಂದ ಸಾಕು ಪ್ರಾಣಿಗಳು ಆಹಾರ ಮತ್ತು ನೀರಿಲ್ಲದೆ ಬಡವಾಗುತ್ತವೆ. ಇದರಿಂದ ಪ್ರಾಣಿಗಳ ಕೊಡುಕೊಳ್ಳುವ ವ್ಯವಹಾರ ನಿಂತುಹೋಗುತ್ತದೆ. ಅನಿವಾರ್ಯವಾಗಿ ಸಾಕು ಪ್ರಾಣಿಗಳನ್ನು ಕಸಾಯಿ ಖಾನೆಗಳಿಗೆ ಮಾರಾಟ ಮಾಡಬೇಕಾಗುತ್ತದೆ.
  8.  ಬರಗಾಲದಿಂದ ಆಹಾರದ ಕೊರತೆ ಕಂಡುಬರುತ್ತದೆ. ಪೌಷ್ಟಿಕ ಆಹಾರದ ಕೊರತೆಯಿಂದ ಅತಿಸಾರ ಹಾಗೂ ಕಾಲಾರಾದಂತಹ ರೋಗಗಳು ಕಾಡುತ್ತವೆ.
  9. ಬರಪೀಡಿತ ಪ್ರದೇಶಗಳಿಂದ ತತ್ತರಿಸಿದ ಜನರು ಜೀವನೋಪಾಯಕ್ಕಾಗಿ ಬೇರೆಡೆ ವಲಸೆ ಹೋಗುತ್ತಾರೆ.
  10. ಆಹಾರದ ಕೊರತೆ ಹಾಗೂ ಅಪೌಷ್ಟಿಕತೆಯಿಂದ ಸಾವು ಸಂಭವಿಸುತ್ತದೆ.
  11.  ಪ್ರಾಥಮಿಕ ವಲಯದ ಉತ್ಪಾದನೆ ಕುಸಿತವಾಗುತ್ತದೆ. ಇದು ದ್ವಿತೀಯ ಹಾಗೂ ತೃತೀಯ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ.
  12.  ಕುಟುಂಬದಲ್ಲಿನ ಸದಸ್ಯರ ನಡುವೆ ಕಲಹಗಳುಂಟಾಗುತ್ತವೆ. ಸಾಮಾಜಿಕ ಸ್ವಾಸ್ಥ್ಯ ಕೆಟ್ಟು ಹೋಗುತ್ತದೆ. ಜೊತೆಗೆ ಸಮಾಜದಲ್ಲಿ ಅಪರಾಧಿಗಳ ಸಂಖ್ಯೆ ಹೆಚ್ಚುತ್ತದೆ.

ಉಪಸಂಹಾರ

ಬರಗಾಲವು ಕೃಷಿ, ಪರಿಸರ ಮತ್ತು ಮಾನವ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದನ್ನು ತಡೆಗಟ್ಟಲು ನೀರಿನ ಸಂರಕ್ಷಣೆ, ಮಳೆಯ ನೀರು ಸಂಗ್ರಹ, ಅರಣ್ಯ ಸಂರಕ್ಷಣೆ ಹಾಗೂ ಪರಿಸರ ಸ್ನೇಹಿ ಅಭಿವೃದ್ಧಿ ಅಗತ್ಯ. ಸರ್ಕಾರ ಹಾಗೂ ಸಾರ್ವಜನಿಕರ ಸಹಕಾರದಿಂದ ಮಾತ್ರ ಬರಗಾಲದ ದುಷ್ಪರಿಣಾಮಗಳನ್ನು ಕಡಿಮೆ ಮಾಡಬಹುದು. ಭವಿಷ್ಯದ ತಲೆಮಾರಿಗೆ ನೀರು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.