ನಾವು ಇಂದು ಬಳಸುವ ಸ್ಪ್ರೇ ವಸ್ತುಗಳು, ಬರುಗು ಉಂಟು ಮಾಡುವ ಪದಾರ್ಥಗಳು ಅಗ್ನಿಶಾಮಕಗಳು, ಹವಾನಿಯಂತ್ರಿತ, ಕೆಲವು ಬಗೆಯ ದ್ರಾವಕ ಕೀಟನಾಶಕಗಳು ಮೊದಲಾದವುಗಳು ಗಾಳಿಯನ್ನು ಸೇರಿ ಅದರಲ್ಲಿನ ಅಣುಗಳೊಂದಿಗೆ ಬೆರೆಯುತ್ತವೆ. ಕಾಲಾನಂತರ ಓಜೋನ್‌ ನಾಶಗೊಂಡು ದುರ್ಬಲವಾಗುತ್ತದೆ. ಹೀಗೆ ಓಜೋನ್‌ ಅನಿಲವು ನಾಶವಾಗುವುದನ್ನೇ “ಓಜೋನ್‌ ವಲಯ ಪತನʼʼ ಎಂದು ಕರೆಯುವರು. ಮಾನವನ ಚಟುವಟಿಕೆಗಳಿಂದ ಓಝೋನ್ ವಲಯಕ್ಕೆ ಹಾನಿ ಆದರೆ ಮಾನವನನ್ನು ʻʻಓಜೋನ್‌ ಭಕ್ಷಕʼʼ ಎಂದು ಪರಿಗಣಿಸಬಹುದು. ಓಜೋನ್‌ ಪದರಿನ ನಾಶದಿಂದ ಆಗುವ ಪರಿಣಾಮಗಳನ್ನು ಈ ಕೆಳಗಿನಂತೆ ತಿಳಿಯಬಹುದು.

ಓಝೋನ್ ಪದರು ನಾಶದಿಂದ ಉಂಟಾಗುವ ಪರಿಣಾಮಗಳು

  1. ಓಜೋನ್ ಪದರು ಹಾಳಾಗುವುದರಿಂದ ಅತಿ ನೇರಳೆ ಕಿರಣಗಳು ಭೂಮಿಯನ್ನು ತಲುಪುತ್ತವೆ. ಆಗ ಮಾನವನ ದೇಹದ ಮೇಲೆ ಈ ಕಿರಣಗಳು ದುಷ್ಪರಿಣಾಮವನ್ನು ಬೀರುತ್ತವೆ. ಮಾನವನ ಶರೀರದಲ್ಲಿ ಇರುವ DNA ದ ಮೇಲೆ ಗಂಭೀರ ಪರಿಣಾಮಗಳು ಉಂಟಾಗುತ್ತದೆ. ಇದರಿಂದ ಅವರಿಗೆ ಜನಿಸುವ ಮಕ್ಕಳು ಅಂಗವಿಕಲರಾಗುತ್ತವೆ. ಈ ನೇರಳೆ ಕಿರಣಗಳು ಚರ್ಮದ ಕ್ಯಾನ್ಸರ್, ಕಣ್ಣಿನ ಕ್ಯಾನ್ಸರ್, ಉಸಿರಾಟದ ತೊಂದರೆ ಮುಂತಾದ ಕಾಯಿಲೆಗಳನ್ನು ಸೃಷ್ಟಿಸುತ್ತವೆ.
  2. ಅತಿಯಾದ ನೇರಳೆ ಕಿರಣಗಳಿಂದ ಮಾನವನ ಕಣ್ಣಿನ ದೃಷ್ಟಿಯ ಮೇಲೆ ಪರಿಣಾಮ ಬೀರುತ್ತದೆ. ಕಣ್ಣಿನ ರೆಟಿನಾಗಳು ಹಾಳಾಗಿ ಕುರುಡುತನ ಬರುತ್ತದೆ.
  3. ಓಜೋನ್ ಪದರಿನ ನಾಶದಿಂದ ಭೂಮಿಯ ಮೇಲಿನ ನಾನಾ ಜೀವಿಗಳು ರೋಗ ರುಜಿನಗಳಿಂದ ನರಳಿ ಸಾಯುತ್ತವೆ.
  4. ಓಜೋನ್ ಪದರು ಹಾಳಾಗುವುದರಿಂದ ರೋಗ ನಿರೋಧಕ ಶಕ್ತಿ ಕುಂದಿ ಮಾನವನ ದೇಹ ನೂರಾರು ಕಾಯಿಲೆಗಳ ಗೂಡಾಗುತ್ತವೆ.
  5. ಇದರಿಂದ ಕೃಷಿ ಬೆಳೆಗಳು ಹಾಗೂ ಜಲಚರ ಪ್ರಾಣಿಗಳು ನಾಶವಾಗುತ್ತವೆ.
  6. ಓಝೋನ್ ಪದರು ನಾಶವಾದರೆ ಭೂಮಂಡಲದ ಉಷ್ಣತೆ ಹೆಚ್ಚಾಗುತ್ತದೆ. ಮಣ್ಣಿನ ಆರ್ದ್ರತೆ ಕಡಿಮೆಯಾಗುತ್ತದೆ ಇದರಿಂದ ಫಸಲು ಹಾಳಾಗುತ್ತದೆ.
  7. ಪಾಚಿಗಳು ಮೀನುಗಳು ಏಡಿಗಳಂತಹ ಜಲಚರಗಳು ಸಹ ನೇರಳಾತೀತ ಕಿರಣಗಳಿಂದ ಅಪಾಯಕ್ಕೆ ಈಡಾಗುತ್ತದೆ

ಓಜೋನ್ ಪದರಿನ ನಿಯಂತ್ರಣಗಳು:

  1. ಸಿ ಎಫ್ ಸಿ ರಹಿತವಾದ ರೆಫ್ರಿಜರೇಟರ್ ಹಾಗೂ ಹವಾ ನಿಯಂತ್ರಿತ ವಸ್ತುಗಳನ್ನು ಬಳಸದಂತೆ ಕ್ರಮ ಕೈಗೊಳ್ಳಬೇಕು.
  2. ಓಝೋನ್ ಸ್ನೇಹಿ ರಾಸಾಯನಿಕಗಳನ್ನು ಬಳಸುವುದು.
  3. 1987ರ ಮಾಂಟ್ರಿಯಲ್ ಪ್ರೋಟೋಕಾಲ್‌ನಲ್ಲಿ ಭಾಗವಹಿಸಿದ ಅಭಿವೃದ್ಧಿ ಹೊಂದಿದ ದೇಶಗಳು ಓಝೋನ್ ವಿನಾಶಕ ವಸ್ತುಗಳನ್ನು ನಿಷೇಧಿಸಲು ನಿರ್ಧರಿಸಿದವು. ಅದು 2000 ಇಸವಿಗೆ ಸ್ವಲ್ಪ ಸಕಾರಗೊಂಡಂತಾಗಿದೆ.
  4. 1990 ರಲ್ಲಿ ಲಂಡನ್ ನಲ್ಲಿ ನಡೆದ ಸಮಾವೇಶದಲ್ಲಿ ಮಾಂಟ್ರಿಯಲ್ ನಡವಳಿಕೆಗೆ ತಿದ್ದುಪಡಿಯನ್ನು ತಂದು ಅಭಿವೃದ್ಧಿ ಹೊಂದಿದ ದೇಶಗಳು ಓಝೋನ್ ವಿನಾಶಕ ವಸ್ತುಗಳ ಬದಲಾಗಿ ಪರ್ಯಾಯ ರಸಾಯನಿಕಗಳನ್ನು ಬಳಸಲು ನಿರ್ಧರಿಸಿದವು.
  5. 1992 ರಲ್ಲಿ ಭಾರತವು ಸಹ ಮಾಂಟ್ರಿಯಲ್ ನಡುವಳಿಕೆಗೆ ಸಹಿ ಹಾಕಿತ್ತು. 1998ರಲ್ಲಿ ಅರಣ್ಯ ಸಚಿವಾಲಯವು ಓಝೋನ್ ವಿನಾಶಕಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ನಿಯಮಗಳನ್ನು ರೂಪಿಸಿದೆ. ಇದರ ಪ್ರಕಾರ 2003ರ ಹೊತ್ತಿಗೆ ಓಝೋನ್ ವಿನಾಶಕಗಳನ್ನು ಬಳಸುವುದು ಕಡಿಮೆ ಮಾಡಬೇಕು. ಭಾರತ ಈಗ ಹ್ಯಾಲೋಜನ್‌ಗಳ ಬಳಕೆಯನ್ನು ನಿಲ್ಲಿಸಿದೆ.

ಉಪಸಂಹಾರ

ಓಜೋನ್ ಪದರ ನಾಶವು ಮಾನವ ಆರೋಗ್ಯ, ಪರಿಸರ ಹಾಗೂ ಜೀವಜಾಲದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅತಿನೇರಳೆ ಕಿರಣಗಳ ಪ್ರಮಾಣ ಹೆಚ್ಚಿದಂತೆ ಅನೇಕ ರೋಗಗಳು ಹಾಗೂ ಪರಿಸರ ಅಸಮತೋಲನ ಉಂಟಾಗುತ್ತಿದೆ. ಆದ್ದರಿಂದ ಓಜೋನ್ ಸ್ನೇಹಿ ಉತ್ಪನ್ನಗಳನ್ನು ಬಳಸುವುದು ಮತ್ತು ಹಾನಿಕಾರಕ ರಾಸಾಯನಿಕಗಳ ಬಳಕೆಯನ್ನು ತಗ್ಗಿಸುವುದು ಅತ್ಯವಶ್ಯಕ. ಸರ್ಕಾರಗಳು ಕೈಗೊಂಡಿರುವ ಅಂತರರಾಷ್ಟ್ರೀಯ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಪರಿಸರ ಸಂರಕ್ಷಣೆಯ ಹೊಣೆಗಾರಿಕೆ ಪ್ರತಿಯೊಬ್ಬ ನಾಗರಿಕನ ಮೇಲಿದೆ ಎಂಬ ಅರಿವು ಮೂಡಬೇಕು.