ಉಚ್ಛ ನ್ಯಾಯಾಲಯಗಳ ರಚನೆ: (Composition of High Court)
ಉಚ್ಛ ನ್ಯಾಯಾಲಯಗಳ ರಚನೆಯನ್ನು ಈ ಕೆಳಗಿನಂತೆ ಕಾಣಬಹುದು.
1. ನ್ಯಾಯಾಧೀಶರ ಸಂಖ್ಯೆ: (Total Number of Judges)
ಭಾರತದ ಎಲ್ಲಾ ಉಚ್ಛ ನ್ಯಾಯಾಲಯಗಳು ಒಬ್ಬ ಮುಖ್ಯ ನ್ಯಾಯಾಧೀಶರು ಹಾಗೂ ಇತರ ನ್ಯಾಯಾಧೀಶರುಗಳನ್ನು ಒಳಗೊಂಡಿರುತ್ತವೆ. ಆದರೆ ದೇಶದ ಎಲ್ಲಾ ನ್ಯಾಯಾಲಗಳ ನ್ಯಾಯಾಧೀಶರ ಸಂಖ್ಯೆ ಒಂದೇ ಆಗಿರುವುದಿಲ್ಲ. ಆಯಾ ಉಚ್ಛ ನ್ಯಾಯಾಲಯಗಳ ಕಾರ್ಯಭಾರದ ಆಧಾರದ ಮೇಲೆ ನ್ಯಾಯಾಧೀಶರ ಸಂಖ್ಯೆಯನ್ನು ನಿಗದಿಪಡಿಸಲಾಗಿರುತ್ತದೆ. ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸುವುದು ಅಥವಾ ಕಡಿಮೆ ಮಾಡುವುದು ರಾಷ್ಟ್ರಪತಿಗಳ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಪ್ರಸ್ತುತ ಭಾರತದ 25 ರಾಜ್ಯಗಳ ಉಚ್ಛ ನ್ಯಾಯಾಲಯಗಳಲ್ಲಿ ಒಟ್ಟು 815 ಕಾಯಂ ನ್ಯಾಯಾಧೀಶರ ಅನುಮೋದಿತ ಹುದ್ದೆಗಳಿವೆ.
2. ನ್ಯಾಯಾಧೀಶರ ನೇಮಕ: (Appointment of Judges)
ʻʻಸಂವಿಧಾನದ 217 ನೇ ವಿಧಿಯ ಪ್ರಕಾರ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಹಾಗೂ ಇತರೆ ನ್ಯಾಯಾಧೀಶರನ್ನು ರಾಷ್ಟ್ರಪತಿಗಳು ನೇಮಕಮಾಡುತ್ತಾರೆ.ʼʼ ರಾಷ್ಟ್ರಪತಿಗಳು ಉಚ್ಛನ್ಯಾಯಾಲಯದ ನ್ಯಾಯಾಧೀಶರನ್ನು ಪ್ರಧಾನಮಂತ್ರಿ ಹಾಗೂ ಮಂತ್ರಿಮಂಡಲದ ಸಲಹೆ ಮೇರೆಗೆ ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಾಧೀಶರು ಸಂಬಂಧಿಸಿದ ರಾಜ್ಯಪಾಲರೊಂದಿಗೆ ಸಮಾಲೋಚಿಸಿ ನೇಮಕ ಮಾಡುತ್ತಾರೆ.
3. ಅರ್ಹತೆಗಳು: (Qualification)
ಉಚ್ಛ ನ್ಯಾಯಾಲಯದ ನ್ಯಾಯಾಧೀಶನಾಗಲು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು
- ಭಾರತದ ಪ್ರಜೆಯಾಗಿರಬೇಕು.
- ಜಿಲ್ಲಾ ಮಟ್ಟದ ಅಥವಾ ಅದಕ್ಕಿಂತ ಕೆಳಹಂತದ ನ್ಯಾಯಾಲಯಗಳಲ್ಲಿ ಕನಿಷ್ಠ 10 ವರ್ಷ ನ್ಯಾಯವಾದಿಯಾಗಿ ಕೆಲಸ ಮಾಡಿದ ಅನುಭವವಿರಬೇಕು.
- ಒಂದು ಅಥವಾ ಹೆಚ್ಚು ಉಚ್ಛ ನ್ಯಾಯಾಲಯಗಳಲ್ಲಿ ನ್ಯಾಯವಾದಿಯಾಗಿ ಹತ್ತು ವರ್ಷ ಸೇವೆ ಸಲ್ಲಿಸಿರಬೇಕು.
- ರಾಷ್ಟ್ರಪತಿಗಳ ಅಭಿಪ್ರಾಯದಲ್ಲಿ ಆತ ಉತ್ತಮ ನ್ಯಾಯಶಾಸ್ತ್ರಜ್ಞನಾಗಿರಬೇಕು.
4. ಪ್ರಮಾಣವಚನ: (Oath)
ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶನಾಗಿ ನೇಮಕಗೊಳ್ಳುವವರಿಗೆ ಆ ರಾಜ್ಯದ ರಾಜ್ಯಪಾಲರು ಪ್ರಮಾಣವಚನವನ್ನು ಬೋಧಿಸುತ್ತಾರೆ.
5. ಅಧಿಕಾರಾವಧಿ: (Term of Power)
ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಲು ಸಂವಿಧಾನದಲ್ಲಿ ನಿರ್ದಿಷ್ಟ ವಯೋಮಿತಿಯನ್ನು ತಿಳಿಸಿಲ್ಲ. ಆದರೆ 62 ವರ್ಷ ವಯೋಮಿತಿ ಆದ ನಂತರ ಉಚ್ಛ ನ್ಯಾಯಾಲಯದ ನ್ಯಾಯಾಧೀಶರು ತಮ್ಮ ಅಧಿಕಾರದಿಂದ ನಿರ್ಗಮಿಸಬೇಕು. ರಾಜೀನಾಮೆ, ಮರಣ ಹಾಗೂ ದುರ್ನಡತೆಯಿಂದ ನ್ಯಾಯಾಧೀಶರನ್ನು ಅವಧಿಗೆ ಮುನ್ನವೇ ಅಧಿಕಾರದಿಂದ ವಜಾಗೊಳಿಸಬಹುದು. 62 ವರ್ಷ ಮುನ್ನವೇ ರಾಜೀನಾಮೆ ನೀಡಲು ಬಯಸಿದರೆ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಗೆ ನೀಡುವ ಮೂಲಕ ಪದತ್ಯಾಗ ಮಾಡಬೇಕು.
6. ವರ್ಗಾವಣೆ: (Transfer)
ಸಂವಿಧಾನದ 2೨2ರ ವಿಧಿಯ ಪ್ರಕಾರ ಉಚ್ಛ ನ್ಯಾಯಾಲಯದ ನ್ಯಾಯಾಧೀಶರನ್ನು ರಾಷ್ಟ್ರಪತಿಗಳು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಸಂಪರ್ಕಿಸಿ ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಬಹುದು.
7. ಪದಚ್ಯುತಿ: (Impeachment)
ಉಚ್ಛ ನ್ಯಾಯಾಲಯದ ನ್ಯಾಯಾಧೀಶರನ್ನು, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಪದಚ್ಯುತಗೊಳಿಸುವ ರೀತಿಯಲ್ಲಿಯೇ ಪದಚ್ಯುತಿಗೊಳಿಸುತ್ತಾರೆ. ನ್ಯಾಯಾಧೀಶರನ್ನು ಭ್ರಷ್ಟಾಚಾರ, ಅವಿಧೇಯತೆ ಅಥವಾ ಸಂವಿಧಾನದ ಉಲ್ಲಂಘನೆ ಕಾರಣದಿಂದ ರಾಷ್ಟ್ರಪತಿಗಳು ಮಹಾಭಿಯೋಗದ ಮೂಲಕ ಪದಚ್ಯುತಗೊಳಿಸುತ್ತಾರೆ. ಸಂಸತ್ತಿನ ಉಭಯ ಸದನಗಳಾದ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪ್ರತ್ಯೇಕವಾಗಿ ಆ ಸದನದ ೨/೩ ಕ್ಕಿಂತ ಕಡಿಮೆ ಇಲ್ಲದಷ್ಟು ಸದಸ್ಯರು ಹಾಜರಿದ್ದು ಒಟ್ಟು ಸದಸ್ಯರ ಸಂಖ್ಯೆಯ ಬಹುಮತದೊಂದಿಗೆ ಪದಚ್ಯುತಿ ಪ್ರಸ್ತಾವನೆಯನ್ನು ಅನುಮೋದಿಸಬೇಕಾಗುತ್ತದೆ.
8. ವೇತನ ಮತ್ತು ಭತ್ಯೆಗಳು: (Salary and Allowances)
ಉಚ್ಛ ನ್ಯಾಯಾಲಯಗಳ ಮುಖ್ಯನ್ಯಾಧೀಶರು ಹಾಗೂ ಇತರ ನ್ಯಾಯಾದೀಶರ ವೇತನವನ್ನು ಸಂಸತ್ತು ಆಗಾಗ ಪರಿಪ್ಕರಿಸಿ ನೀಡುತ್ತದೆ. ಇವರ ವೇತನ ಹಾಗೂ ಭತ್ಯೆಗಳನ್ನು ಆಯಾ ರಾಜ್ಯಗಳ ʻʻರಾಜ್ಯ ಸಂಚಿತ ನಿಧಿಯಿಂದ ʻʻಭರಿಸಲಾಗುತ್ತದೆ. ಉಚ್ಛ ನ್ಯಾಯಾಲಯಗಳ ಮುಖ್ಯ ನ್ಯಾಯಾದೀಶರು ೨,೫೦,೦೦೦ ಹಾಗೂ ಇತರ ನ್ಯಾಯಾದೀಶರು ೨,೨೫,೦೦೦ ರೂಗಳನ್ನು ಮಾಸಿಕ ವೇತನವಾಗಿ ಪಡೆಯುತ್ತಾರೆ. ಇದರೊಂದಿಗೆ ಉಚಿತ ನಿವಾಸ, ಉಚಿತ ದೂರವಾಣಿ ಸೌಲಭ್ಯ, ವಿದ್ಯುತ್ ಸೌಲಭ್ಯ ಹಾಗೂ ಅಂತರ್ಜಾಲ ಸೌಲಭ್ಯಗಳನ್ನು ಒದಸಲಾಗುತ್ತದೆ. ಇದರೊಂದಿಗೆ ತಿಂಗಳಿಗೆ ೨೫೦೦೦ ಸೇವಕರ ಭತ್ಯೆಯನ್ನು ನೀಡಲಾಗುತ್ತದೆ. ಮುಂದುವರೆದು ಎರಡು ವಾಹನಗಳು, ಪೋಲಿಸ್ ಭದ್ರತೆ, ವಾರ್ಷಿಕ 30 ಸಾರಿ ಉಚಿತ ವಿಮಾನ ಪ್ರಯಾಣ, ವೈದ್ಯಕೀಯ ವೆಚ್ಚ ಹಾಗು ನಿವೃತ್ತಿ ವೇತನದಂತದ ಸೌಲಭ್ಯಗಳನ್ನು ನ್ಯಾಯಾಧೀಶರಿಗೆ ನೀಡಲಾಗುತ್ತದೆ. ನಿವೃತ್ತಿಯ ಬಳಿಕ ತಾನು ಕಾರ್ಯನಿರ್ವಹಿಸಿದ ನ್ಯಾಯಾಲಯವನ್ನು ಹೊರತುಪಡಿಸಿ ಉಳಿದ ಉಚ್ಛ ನ್ಯಾಯಾಲಯಗಳಲ್ಲಿ ಅಥವಾ ಸರ್ವೋಚ್ಛ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸಲು ಅವಕಾಶವಿದೆ.