ಕಲ್ಲಿದ್ದಲು, ಪೆಟ್ರೋಲಿಯಂ, ವಾಹನಗಳು, ವಿದ್ಯುತ್ ಉತ್ಪಾದನೆ, ಲೋಹ ಕರಗಿಸುವ ಕಾರ್ಯಗಾರ, ಮನೆಗಳಲ್ಲಿ ಉರಿಸುವ ಸೌದೆ, ಮೊದಲಾದವುಗಳಿಂದ ಹೊರಬಂದ ಹೊಗೆಯಲ್ಲಿ ಗಂಧಕದ ಡೈಆಕ್ಸೈಡ್ ಹಾಗೂ ಸಾರಜನಕದ ಡೈಆಕ್ಸೈಡ್‌ಗಳು ಇರುತ್ತವೆ. ಅವುಗಳು ಗಾಳಿಯಲ್ಲಿ ಸೇರಿ ಭೂಮಿಯ ಮೇಲ್ಭಾಗದ ಹವೆಯಲ್ಲಿ ಹಲವಾರು ಕಿಮಿಗಳವರೆಗೆ ಚಲಿಸುತ್ತವೆ. ನಂತರ ನೀರಾವಿಯೊಂದಿಗೆ ಸಂಯೋಜನೆ ಹೊಂದಿ ರಸಾಯನಿಕ ಕ್ರಿಯೆಗೆ ಒಳಪಡುತ್ತವೆ. ತದನಂತರ ಆಮ್ಲದ ದ್ರಾವಣವಾಗಿ ಬದಲಾಗುತ್ತವೆ. ಹೀಗೆ ಆಮ್ಲದಿಂದ ಕೂಡಿದ ಮೋಡಗಳು ಮಳೆಯಲ್ಲಿ ವಿಲೀನಗೊಂಡು ವೃಷ್ಠಿರೂಪದಲ್ಲಿ ಭೂಮಿಯ ಮೇಲೆ ಬೀಳುತ್ತವೆ. ಇದನ್ನೇ ʻʻಆಮ್ಲ ಮಳೆʼʼ ಎಂದು ಕರೆಯುತ್ತಾರೆ.

ಸಾಮಾನ್ಯವಾಗಿ ಮಳೆ, ಮಂಜು, ಮೊದಲಾದ ರೂಪದಲ್ಲಿ ಆಮ್ಲಗಳು ವಾತಾವರಣದಿಂದ ಭೂಮಿಯ ಮೇಲೆ ಚೆಲ್ಲಲ್ಪಡುವ ಪ್ರಕ್ರಿಯೆಯನ್ನು ಆಮ್ಲ ಮಳೆ ಎಂದು ಕರೆಯುವರು.

ವಾಯುಮಂಡಲದ ನೀರಾವಿ ನೀರಿನ ಹನಿಗಳ ರೂಪದಲ್ಲಿ ಭೂಮಿಯ ಮೇಲೆ ಬೀಳುವುದನ್ನು ಆಮ್ಲ ಮಳೆ ಎಂದು ಕರೆಯುವರು. ಈ ನೀರಾವಿ ಅಧಿಕ ಪ್ರಮಾಣದ ಆಮ್ಲವನ್ನು ಒಳಗೊಂಡಿರುವುದರಿಂದ ಇದಕ್ಕೆ ಹುಳಿ ಮಳೆ ಎಂದು ಸಹ ಕರೆಯುತ್ತಾರೆ.

ರಸಾಯನಿಕ ಆಮ್ಲ ಗುಣವನ್ನು PH ಎಂಬ ಮಾನದಂಡದಿಂದ ಅಳಿಯಲಾಗುತ್ತದೆ. ಶುದ್ಧ ನೀರಿನ PH 7 ಆಗಿದ್ದರೆ ಆಮ್ಲಿಯ ನೀರಿನ PH ಅದಕ್ಕಿಂತ ಕಡಿಮೆಯಾಗಿರುತ್ತದೆ. ಅಮೆರಿಕದಂತಹ ಮಾಲಿನ್ಯಭರಿತ ದೇಶಗಳಲ್ಲಿ ಬೀಳುವ ಆಮ್ಲ ಮಳೆ ನೀರಿನ PH 4.3 ರಷ್ಟು ಕಡಿಮೆ ಇದೆ.      

ಆಮ್ಲ ಮಳೆಯನ್ನು ಮೊದಲ ಬಾರಿಗೆ ಗುರುತಿಸಿದ ಖ್ಯಾತಿ ಇಂಗ್ಲೆಂಡಿನ ರಸಾಯನಿಕ ತಜ್ಞ ರಾಬರ್ಟ್ ಹ್ಯಾಂಗಸ್‌ ಸ್ಮಿತ್ ಎಂಬವರಿಗೆ ಸಲ್ಲುತ್ತದೆ. ಇವರು 1852 ರಲ್ಲಿ ಸುರಿದ ಮ್ಯಾಚೆಸ್ಟರ್‌ ಮಳೆಯ ನೀರಿನಲ್ಲಿ ಅಸಾಧಾರಣ ಆಮ್ಲಿಯ ಮಟ್ಟವನ್ನು ಗುರುತಿಸಿದರು. ತದನಂತರ 1960 ರಲ್ಲಿ ಸ್ವೀಡನ್ ದೇಶದ ಸ್ವೇಂಟಿ ಓಡೆನ್‌ ಎಂಬುವರು ಆ ದೇಶದ 25% ರಷ್ಟು ಜಲಮೂಲಗಳು ಆಮ್ಲ ಮಳೆಯ ಪರಿಣಾಮದಿಂದ ಹಾಳಾಗುವುದನ್ನು ಗುರುತಿಸಿದರು. ಇತ್ತೀಚಿನ ಅಧ್ಯಯನಗಳ ಆಧಾರದ ಮೇರೆಗೆ ಕಲ್ಕತ್ತಾ, ಮುಂಬೈ, ಚೆನ್ನೈ, ಹೈದರಾಬಾದ್, ವಿಶಾಖಪಟ್ಟಣಂ, ಬೆಂಗಳೂರು, ಮೊದಲಾದ ಮಹಾನಗರಗಳು ಸಹ ಆಮ್ಲ ಮಳೆಯ ತೊಂದರೆಗೆ ಸಿಲುಕಿವೆ.

ಆಮ್ಲಮಳೆಯ ಪರಿಣಾಮಗಳು (ಸಮುದಾಯ ಹಾಗೂ ಕೃಷಿ) 

  1. ಆಮ್ಲ ಮಳೆಯು ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ಕರಗಿಸಿ ಆಹಾರ ಪದಾರ್ಥಗಳು ಫಲವತ್ತಾಗಿ ಬೆಳೆಯಲು ತಡೆಯನ್ನೊಡ್ಡುತ್ತದೆ.
  2. ಆಮ್ಲ ಮಳೆಯು ಮಣ್ಣಿನಲ್ಲಿರುವ ಅಲ್ಯುಮಿನಿಯಂ ಹಾಗೂ ಪಾದರಸಗಳನ್ನು ಕರಗಿಸಿ ಜಲಮೂಲಗಳನ್ನು ಕಲುಷಿತಗೊಳಿಸುತ್ತದೆ. ಮಣ್ಣಿನಲ್ಲಿರುವ ಪೋಷಕಾಂಶಗಳು ಕರಗಿ ಹೋದರೆ ಸಸ್ಯಗಳ ಸಂತತಿ ವಿನಾಶದ ಅಂಚಿಗೆ ಬಂದು ತಲುಪುತ್ತದೆ.
  3. ಆಮ್ಲ ಮಳೆಯು ಸಮುದ್ರ ಹಾಗೂ ಸಾಗರ, ಸರೋವರ ಮತ್ತು ನದಿಗಳ ಮೂಲಕ ಸೇರಿ ಜಲರಾಶಿಗಳ ಜೀವ ಪರಿಸರ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟುಮಾಡುತ್ತದೆ.
  4. ಆಮ್ಲ ಮಳೆಯು ಜಲಭಾಗದ ಆಹಾರ ಸರಪಳಿ, ಆಹಾರ ಜಾಲ ಹಾಗೂ ಮೀನಿನ ಉತ್ಪಾದನೆಯನ್ನು ಕುಂಠಿತಗೊಳಿಸಿ ಅವುಗಳನ್ನು ಮೃತ ಸರೋವರಗಳನ್ನಾಗಿ ಮಾಡಿದೆ.
  5. ಆಮ್ಲ ಮಳೆಯಿಂದ ಬೆಳೆಗಳು ಹಾಗೂ ಅರಣ್ಯಗಳ ಮರಗಳ ಎಲೆಗಳು ಉದುರುತ್ತವೆ ಇದರಿಂದ ದ್ಯುತಿ ಸಂಶ್ಲೇಷಣೆ ಹಾಗೂ ಸಸ್ಯಗಳ ಆಹಾರ ಉತ್ಪಾದನೆಯಲ್ಲಿ ಹಿನ್ನಡೆ ಉಂಟಾಗುತ್ತದೆ.
  6. ಆಮ್ಲ ಮಳೆಯಿಂದ ಮರ ಗಿಡಗಳು ದುರ್ಬಲಗೊಂಡು ಸುಲಭವಾಗಿ ರೋಗಗಳಿಗೆ ತುತ್ತಾಗುತ್ತವೆ.
  7. ಆಮ್ಲ ಮಳೆಯು ವಿಶ್ವದಾದ್ಯಂತ ಸುಂದರ ಶಿಲ್ಪಗಳು, ಐತಿಹಾಸಿಕ ಕಟ್ಟಡಗಳು, ಸೇತುವೆಗಳು ಮುಂತಾದವುಗಳನ್ನು ವಿರೂಪಗೊಳಿಸುತ್ತದೆ ಹಾಗೂ ಶಿಥಿಲಗೊಳಿಸುತ್ತದೆ.
  8. ವಿಶ್ವ ಪ್ರಸಿದ್ಧ ತಾಜ್‌ಮಹಲ್ ಕಟ್ಟಡವು ಅಮೃತಶಿಲೆಯಿಂದ ರಚಿಸಲ್ಪಟ್ಟಿದ್ದು ಸ್ಥಳೀಯ ಕಾರ್ಖಾನೆಗಳು ಬಿಡುವ ಹೊಗೆಯ ಮಲಿನಕಾರಕ ಅಂಶಗಳಿಂದ ಉಂಟಾಗುವ ಆಮ್ಲ ಮಳೆಯಿಂದ ಹಾಳಾಗಿದೆ. ಅತ್ಯಂತ ಬೆಳಕು ಹಾಗೂ ಹೊಳಪಿನಿಂದ ಕೂಡಿದ ತಾಜ್‌ಮಹಲ್ ಕಳೆಗುಂದಿ ಮಾಸಿದ ಬಣ್ಣಕ್ಕೆ ತಿರುಗಿದೆ.
  9. ಕಬ್ಬಿಣ ಹಾಗೂ ಉಕ್ಕು, ತವರ ಮೊದಲಾದವು ಆಮ್ಲ ಮಳೆಯಿಂದ ತುಕ್ಕು ಹಿಡಿದು ಹಾಳಾಗುತ್ತವೆ.
  10. ಗಣಿಗಾರಿಕೆ ಮತ್ತು ಪೆಟ್ರೋ ಕೆಮಿಕಲ್ ಪಕ್ಕದ ಪ್ರದೇಶದಲ್ಲಿರುವ ಡಾಂಪಿಯರ್ ರಾಕ್ ಆರ್ಟ್ ಕಾಂಪ್ಲೆಕ್ಸ್‌ನಲ್ಲಿರುವ ಚಿತ್ರಕಲೆಗಳ ಮೇಲೆ ಆಮ್ಲಮಳೆಯ ಪರಿಣಾಮ ಸಾಕಷ್ಟು ಪ್ರಮಾಣದಲ್ಲಿ ಉಂಟಾಗಿದೆ. ಅನೇಕ ಕಲಾಕೃತಿಗಳು ನಿಧಾನವಾಗಿ ಮಂದವಾಗುತ್ತಿವೆ.
  11. ಹಾಗೆಯೇ ಅಥೆನ್ಸ್, ಪಾರ್ಥೆನಾನ್‌, ರೋಂನ, ಕಲೋಸಿಯಂ ಅಂತಹ ಅನುಪಮ ಸೌಂದರ್ಯದ ವಾಸ್ತುಶಿಲ್ಪಗಳು ಸಹ  ಆಮ್ಲ ಮಳೆಯ ಕಾರಣದಿಂದ ಹಾಳಾಗಿವೆ.
  12. ಆಮ್ಲೀಯ ಮಳೆಯಿಂದ ಮಾನವ ಸಮುದಾಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಉಂಟಾಗಿದೆ. ಆಮ್ಲಿಯ ಮಳೆಯಿಂದ ಗಾಳಿಯನ್ನು ಸೇರುವ ಗಂಧಕದ ಡೈಆಕ್ಸೈಡ್ ಹಾಗೂ ಸಾರಜನಕದ ಆಕ್ಸೈಡ್‌ಗಳು ಉಸಿರಾಟದ ತೊಂದರೆಗೆ ಕಾರಣವಾಗಿವೆ. ಅಸ್ತಮಾ ಹಾಗೂ ಶ್ವಾಸಕೋಶದ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ. ಇದು ಅಲ್ಲದೆ ಚರ್ಮರೋಗ ಹಾಗೂ ಕೂದಲು ಉದುರುವುದು ಮುಂತಾದ ಗಂಭೀರ ಖಾಯಿಲೆಗಳು ಕಾಣಿಸಿಕೊಂಡಿವೆ.

ಉಪಸಂಹಾರ

ಆಮ್ಲ ಮಳೆಯು ಕೃಷಿ ಉತ್ಪಾದನೆ, ಅರಣ್ಯ ಸಂಪತ್ತು, ಜಲಜೀವ ವೈವಿಧ್ಯ ಹಾಗೂ ಮಾನವ ಆರೋಗ್ಯದ ಮೇಲೆ ಗಂಭೀರ ಅಪಾಯವನ್ನುಂಟುಮಾಡುತ್ತಿದೆ. ಇದು ಕೇವಲ ಪ್ರಕೃತಿಗೆ ಮಾತ್ರವಲ್ಲದೆ, ಮಾನವ ನಿರ್ಮಿತ ಐತಿಹಾಸಿಕ ಸ್ಮಾರಕಗಳು ಮತ್ತು ಮೂಲಸೌಕರ್ಯಗಳಿಗೂ ಹಾನಿ ಉಂಟುಮಾಡುತ್ತಿದೆ. ಈ ಸಮಸ್ಯೆಯನ್ನು ನಿಯಂತ್ರಿಸಲು ವಾಯುಮಾಲಿನ್ಯ ಕಡಿತಗೊಳಿಸುವ ಕ್ರಮಗಳು, ಸ್ವಚ್ಛ ಇಂಧನ ಬಳಕೆ ಮತ್ತು ಪರಿಸರ ಸ್ನೇಹಿ ನೀತಿಗಳ ಅನುಷ್ಠಾನ ಅತ್ಯಗತ್ಯವಾಗಿದೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯೆಂಬ ಅರಿವು ಮೂಡಿದಾಗ ಮಾತ್ರ ಭವಿಷ್ಯದ ಪೀಳಿಗೆಗೆ ಆರೋಗ್ಯಕರ ಭೂಮಿಯನ್ನು ಉಳಿಸಬಹುದು.