ಹ್ಯುಯನ್‌ತ್ಸಾಂಗ್ ಚೀಣಾ ದೇಶದಲ್ಲಿ ಕ್ರಿ.ಶ 600 ರಲ್ಲಿ ಜನಿಸಿದನು. ಬಾಲ್ಯದಿಂದಲೇ ಬೌದ್ಧಧರ್ಮದ ಸೆಳೆತಕ್ಕೆ ಒಳಗಾದನು. ಹೀಗಾಗಿ ತನ್ನ 20ನೇ ವಯಸ್ಸಿನಲ್ಲಿ ಬೌದ್ಧಬಿಕ್ಷುವಾದನು. ನಂತರ ಭಾರತಕ್ಕೆ ಬರಲು ಮಹದಾಕಾಂಕ್ಷೆ ಹೊಂದಿದ್ದನು. ಅದರ ಉದ್ದೇಶ:-
- ಬುದ್ಧನ ಜನ್ಮಸ್ಥಳವಾದ ಮತ್ತು ಬೌದ್ಧಧರ್ಮದ ತಾಯಿನಾಡಾದ ಭಾರತವನ್ನು ನೋಡಬೇಕೆಂಬ ಕನಸು.
- ಬುದ್ಧನಿಗೆ ಸಂಬಂಧಿತ ಸ್ಥಳಗಳಿಗೆ ಯಾತ್ರೆ ಕೈಗೊಂಡು ಪುನೀತನಾಗಬೇಕೆಂಬ ಬಯಕೆ.
- ಬೌದ್ಧ ಪವಿತ್ರ ಗ್ರಂಥಗಳನ್ನು ಅದರ ಮೂಲಭಾಷೆಯಲ್ಲೇ ಅಧ್ಯಯನ ಮಾಡಬೇಕೆಂಬ ತವಕ.
- ಬೌದ್ಧ ಪವಿತ್ರ ಗ್ರಂಥಗಳನ್ನು ಚೀಣಿಭಾಷೆಗೆ ಭಾಷಾಂತರಿಸಬೇಕೆಂಬ ಯೋಜನೆ.
- ಬುದ್ಧನ ಅವಶೇಷಗಳನ್ನು ವಿಗ್ರಹಗಳನ್ನು ಮತ್ತು ಕೆಲವು ಬೌದ್ಧ ಕೃತಿಗಳನ್ನು ಚೀಣಾಕ್ಕೆ ತರಬೇಕೆಂಬಾಸೆ.
- ಭಾರತದಲ್ಲಿ ಕಂಡುಂಡ ಮತ್ತು ಕೇಳಿದ ಸಂಗತಿಗಳ ಕುರಿತು ಹಾಗೂ ಅನುಭವವನ್ನು ಕುರಿತು ಕೃತಿಯೊಂದನ್ನು ಬರೆಯಬೇಕೆಂಬ ದೂರದೃಷ್ಟಿ ಆ ಕಾಲದಲ್ಲಿ ಚೀಣಾ ದೇಶದವರು ಹೊರದೇಶಕ್ಕೆ ಹೋಗಬೇಕೆಂದರೆ ಅರಸನ ಅನುಮತಿ ಪಡೆಯಬೇಕಿತ್ತು. ಆದರೆ ಚೀಣಿ ಅರಸ ಅನುಮತಿ ನೀಡದಿದ್ದಾಗ ಹ್ಯಯನ್‌ತ್ಸಾಂಗ್ ಬಹಳ ನೊಂದುಕೊಂಡನು. ಹೇಗಾದರೂ ಮಾಡಿ ಭಾರತವನ್ನು ತಲುಪಲೇಬೇಕೆಂಬ ಛಲ ತೊಟ್ಟನು. ಚಕ್ರವರ್ತಿಗೂ ಹೇಳದೆ ಕಣ್ಣುತಪ್ಪಿಸಿ ಭಾರತದ ಹಾದಿ ತುಳಿದೇಬಿಟ್ಟನು.
ಚೀಣೀ ಗಡಿಭಾಗದಲ್ಲೆ ನಡೆಯುತ್ತಾ ಸಿಂಧೂ ನದಿಯನ್ನು ದಾಟಿ ತಕ್ಷಶಿಲೆ ತಲುಪಿದನು. ಅನಂತರ ಕಾಶ್ಮೀರ ತಲುಪಿ ಅಲ್ಲಿ ಎರಡು ವರ್ಷ ಇದ್ದನು. ಅಲ್ಲಿ ಬೌದ್ಧಗ್ರಂಥಗಳನ್ನು ಅಧ್ಯಯನ ಮಾಡಿದನು. ನಂತರ ಉತ್ತರ ಪಥೇಶ್ವರನಾದ ಹರ್ಷನ ರಾಜಧಾನಿಯನ್ನು ತಲುಪಿದನು. ಚೀಣಿ ದೇಶದವನೊಬ್ಬ ಭಾರತದ ಯಾತ್ರೆ ಕೈಗೊಂಡಿರುವುದು ಮತ್ತು ಬೌದ್ಧಧರ್ಮದ ಘನ ಪಂಡಿತನಾಗಿರುವುದು ಹರ್ಷನನ್ನು ಆಕರ್ಷಿಸಿತು. ಹರ್ಷನು ಅವನೊಂದಿಗೆ ಹೆಚ್ಚಿನ ಒಡನಾಟ ಬೆಳೆಸಿಕೊಂಡನು. ಡ್ಯೂಯನ್ ತ್ಸಾಂಗ್‌ಗೆ ‘ರಾಜಾತಿಥ್ಯ’ವನ್ನೇ ನೀಡಿದನು. ಅವನ ಪ್ರಭಾವದಲ್ಲೇ ಬೌದ್ಧಧರ್ಮಕ್ಕೆ ಮತಾಂತರವಾದನು. ಅವನನ್ನು ಯೋಗ್ಯವಾಗಿ ಸತ್ಕರಿಸಲು ಕನೌಜ್ ಮತ್ತು ಪ್ರಯಾಗ ಸಮ್ಮೇಳನವನ್ನು ನಡೆಸಿದನು. ಇವೆರಡರ ನೇತೃತ್ವವನ್ನು ಡ್ಯೂಯನ್ ತ್ಸಾಂಗ್ ವಹಿಸಿದ್ದನು. ಅಂತಿಮವಾಗಿ ಬೌದ್ಧಧರ್ಮದ ಹೆಗ್ಗಳಿಕೆ ಜಾಹೀರುಪಡಿಸಿದನು. ಕನೌಜ್ ಸಮ್ಮೇಳನದಲ್ಲಿ ಅನೇಕ ಹಿಂದೂ ಮತ್ತು ಜೈನ ವಿದ್ವಾಂಸರನ್ನು ಸೋಲಿಸಿದ್ದರಿಂದ ಹರ್ಷವರ್ಧನನು ಅವನನ್ನು ಆನೆಯ ಮೇಲೆ ಕುಳ್ಳಿರಿಸಿ ಸನ್ಮಾನಿಸಿದ್ದನು.
ಕ್ರಿ.ಶ 630 ರಿಂದ 644 ರವರೆಗೆ ಹೂಯನ್ ತ್ಸಾಂಗ್ ಭಾರತದಾದ್ಯಂತ ಸಂಚರಿಸಿದನು. ಯಾತ್ರಿಕನಾಗಿ ಸಂದರ್ಶಿಸಿದ ಸ್ಥಳಗಳೆಂದರೆ ಕಪಿಲವಸ್ತು, ಗಯಾ, ಕುಶೀನಗರ, ಬನಾರಸ್, ಅಲ್ಲದೆ ಕಾಶ್ಮೀರ, ಗಾಂಧಾರ, ಆಂದ್ರ, ಕಂಚಿ, ಮಹಾರಾಷ್ಟ್ರ ಮತ್ತು ಕರ್ನಾಟಕಕ್ಕೂ ಬೇಟಿ ನೀಡಿದ್ದನು. ಗಾಂಧಾರಕ್ಕೆ ಬೇಟಿಕೊಟ್ಟಾಗ ಬಮಿಯಾನ್ ಬುದ್ಧನನ್ನು ನೋಡಿದ್ದನು. ಇಮ್ಮಡಿ ಪುಲಿಕೇಶಿಯ ಸಾಮ್ರಾಜ್ಯಕ್ಕೂ ಬೇಟಿಕೊಟ್ಟಿದ್ದನು. ಆಗ ಅವನ ಶೌರ ಸಾಹಸಗಳನ್ನು, ಕನ್ನಡಿಗರ ಔದಾರ್ಯವನ್ನು ಮತ್ತು ಹೃದಯ ಶ್ರೀಮಂತಿಕೆಯನ್ನು ಹಾಡಿ ಹೊಗಳಿದ್ದಾನೆ.
ಭಾರತದಿಂದ ಹಿಂತಿರುಗುವಾಗ ಬುದ್ಧನ ಅವಶೇಷಗಳನ್ನು ಮತ್ತು ವಿಗ್ರಹಗಳನ್ನು ತನ್ನೊಂದಿಗೆ ಕೊಂಡೊಯ್ದನು. ಇಲ್ಲಿ ಸಂಗ್ರಹಿಸಿದ 657 ತಾಳೆಗರಿ ಗ್ರಂಥಗಳನ್ನು, 20 ಕುದುರೆಗಳ ಮೇಲೆ ಹೇರಿಕೊಂಡು ಚೀಣಾಕ್ಕೆ ಹಿಂತಿರುಗಿದನು (ಕ್ರಿ.ಶ 644 ರಲ್ಲಿ). ಅರಸನ ಕೆಂಗಣ್ಣಿಗೆ ತುತ್ತಾಗುವೆನೆಂಬ ಹೆದರಿಕೆ ಇತ್ತು. ಆದರೆ ಚೀಣಿ ಅರಸನು ಅವನನ್ನು ಆದರದಿಂದ ಬರಮಾಡಿಕೊಂಡನು. ಕ್ಯೂಯನ್ ತ್ಸಾಂಗ್ ಭಾರತದಲ್ಲಿ ತಾನು ಕಂಡುಂಡ ಸಂಗತಿಗಳನ್ನು ಸಿ-ಯೂ-ಕಿ ಎಂಬ ಗ್ರಂಥದಲ್ಲಿ ದಾಖಲಿಸತೊಡಗಿದನು. ಅಲ್ಲದೆ ಅನೇಕ ಬೌದ್ಧಕೃತಿಗಳನ್ನು ಚೀಣಿ ಭಾಷೆಗೆ ಭಾಷಾಂತರ ಮಾಡಿದನು. ಜೊತೆಗೆ ‘ಹಂಗ್‌ಫು’ ಎಂಬ ಪಂಥವನ್ನು ಸ್ಥಾಪಿಸಿ ಬೌದ್ಧಧರ್ಮ ಪ್ರಸಾರಮಾಡಿದನು.
ಹೂಯನ್ ತ್ಸಾಂಗ್ ತನ್ನ ಸಿ-ಯೂ-ಕಿ ಗ್ರಂಥದಲ್ಲಿ ಹಲವು ಹತ್ತು ಸಂಗತಿಗಳನ್ನು ದಾಖಲಿಸಿದ್ದಾನೆ. ಅಂದಿನ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಪರಿಸ್ಥಿತಿಗಳು, ಜನರ ಅಚಾರ-ವಿಚಾರ, ಸಂಪ್ರದಾಯ ಶರಣತೆಗಳು, ಅಸ್ಪೃಶ್ಯತಾ ಆಚರಣೆ, ಭೌಗೋಳಿಕ ಸ್ಥಿತಿಗತಿ, ಜನರ ಪ್ರಾಮಾಣಿಕತೆ, ಬೌದ್ಧಧರ್ಮದ ಪರಿಸ್ಥಿತಿ ಇವೇ ಮೊದಲಾದವುಗಳ ಬಗ್ಗೆ ಬರೆದಿದ್ದಾನೆ. ಇವುಗಳು ಅಂದಿನ ಇತಿಹಾಸ ರಚನೆಗೆ ಅಮೂಲ್ಯ ದಾಖಲೆಗಳಾಗಿವೆ. ಡಾ||ವಿ.ಎ.ಸ್ಮಿತ್ ರವರ ಪ್ರಕಾರ ಸಿ-ಯೂ-ಕಿ ಯ ಐತಿಹಾಸಿಕ ಮಹತ್ವವನ್ನು ಉತ್ತೇಕ್ಷೆ ಮಾಡಲು ಸಾಧ್ಯವಿಲ್ಲ.ಆದ್ದರಿಂದ ಡ್ಯೂಯನ್ ತ್ಸಾಂಗ್‌ನನ್ನು ‘ಯಾತ್ರಿಕರ ಚಕ್ರವರ್ತಿ’ (ಪ್ರವಾಸಿಗರ ರಾಜ) ಎಂದು ಕರೆಯುವುದು ರಾಜೋಚಿತವಾಗಿದೆ.