ಸುಮಾರು ೨೦ನೇ ಶತಮಾನದ ದ್ವಿತಿಯಾರ್ಧದಲ್ಲಿ ಭಾರತೀಯರಿಗೆ ಸಂವಿಧಾನದ ಸ್ಪಷ್ಟ ಪರಿಕಲ್ಪನೆಯೇ ಇರಲಿಲ್ಲ. ಇಂತಹ ಸಮಯದಲ್ಲಿಯೇ ಭಾರತೀಯ ರಾಷ್ಟ್ರೀಯತೆಯ ಉದಯ, ಸ್ವದೇಶಿ ಚಳುವಳಿ, ಗಾಂಧಿ ನಾಯಕತ್ವದಲ್ಲಿ ನಡೆದ ಅಸಹಕಾರ ಚಳುವಳಿ, ಖಿಲಾಫತ್ ಚಳುವಳಿ ಹಾಗೂ ೧೯೪೨ ಚಲೇಜಾವ್ ಚಳುವಳಿಗಳು ಭಾರತೀಯರಲ್ಲಿ ಸಂವಿಧಾನದ ಬಯಕೆಯನ್ನು ಹೆಚ್ಚಿಸುವಂತೆ ಮಾಡಿದವು. ಆರಂಭದಲ್ಲಿ ಸಂವಿಧಾನದ ಕುರಿತು ಭಾರತೀಯರಿಗೆ ಸ್ಪಷ್ಟತೆ ಇರಲಿಲ್ಲ. ಬರಬರುತ್ತಾ ಅದರ ಬಗ್ಗೆ ಕಲ್ಪನೆಗಳು ಮೂಡಲಾರಂಭಿಸಿದವು. ಅಂದಿನಿಂದ ಭಾರತದ ಸಂವಿಧಾನದ ಇತಿಹಾಸ ಪರಿಪೂರ್ಣವಾಗಿ ಸಂವಿಧಾನ ಬೇಡಿಕೆಯ ಇತಿಹಾಸವನ್ನು ಅರಿತುಕೊಳ್ಳುವಂತೆ ಮಾಡಿತು.
- ೧೯೧೮ ರ ಡಿಸೆಂಬರ್, ೩೩ನೇ ದೆಹಲಿ ಅಧಿವೇಶನದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಥಮ ಬಾರಿಗೆ ಸಂವಿಧಾನ ರಚನಾ ಬೇಡಿಕೆಯ ನಿರ್ಣಯವನ್ನು ಅಂಗೀಕರಿಸಿತು. ಈ ನಿರ್ಣಯವು ಸ್ವಯಂ ನಿರ್ಧಾರವಾಗಿದ್ದು ಬ್ರಿಟಿಷ್ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಥಮ ಪ್ರಯತ್ನ ಇದಾಗಿತ್ತು. ಕಾಲಕಳೆದಂತೆ ಅದೊಂದು ನಿರ್ದಿಷ್ಟ ಬೇಡಿಕೆಯಾಗಿ ರೂಪುಗೊಂಡಿತು.
- ೧೯೨೨ ಜನವರಿ ೫ ರಂದು ಮಹಾತ್ಮಾ ಗಾಂಧೀಜಿಯವರು ಯಂಗ್ ಇಂಡಿಯಾ ಪತ್ರಿಕೆಗೆ ಬರೆಯುತ್ತಾ ಸ್ವಯಂ ಆಳ್ವಿಕೆಯ ಪರಿಕಲ್ಪನೆಯು ಬ್ರಿಟೀಷ್ ಸಂಸತ್ತಿನ ಉಚಿತ ಕೊಡುಗೆಯಾಗಿರದೆ ಭಾರತೀಯರು ತಮ್ಮ ಪ್ರತಿನಿಧಿಗಳ ಮೂಲಕ ತಮ್ಮ ಮನದಾಸೆಯನ್ನು ಅಭಿವ್ಯಕ್ತಗೊಳಿಸುವುದಾಗಿದೆ.
- 1924 ಫೆಬ್ರವರಿ 8ರಂದು ಸ್ವರಾಜ್ ಪಕ್ಷದ ಸ್ಥಾಪಕರಾದ ಮೋತಿಲಾಲ್ ನೆಹರು ಅವರು ಕೇಂದ್ರ ಶಾಸಕಾಂಗದಲ್ಲಿ ನಿಯಮಾವಳಿ ಒಂದನ್ನು ಮಂಡಿಸಿ ಭಾರತಕ್ಕೆ ಸಂವಿಧಾನ ರಚನೆಯ ಕುರಿತು ಚರ್ಚಿಸಲು ಇಂಗ್ಲೆಂಡಿನಲ್ಲಿ ದುಂಡು ಮೇಜಿನ ಪರಿಷತ್ತನ್ನು ಆಯೋಜಿಸುವಂತೆ ಬ್ರಿಟಿಷ್ ಸರ್ಕಾರದ ಮೇಲೆ ಒತ್ತಡ ಹಾಕಿದರು. ಆದರೆ ಬ್ರಿಟಿಷ್ ಸರ್ಕಾರ ಅದ್ಯಾವುದಕ್ಕೂ ಜಗ್ಗಲಿಲ್ಲ ಬಗ್ಗಲಿಲ್ಲ ಈ ಕುರಿತು ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ.
- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧಿವೇಶನವು 1927 ಮೇ 17ರಂದು ಮುಂಬೈಯಲ್ಲಿ ಜರುಗಿತ್ತು. ಈ ಅಧಿವೇಶನದಲ್ಲಿ ಮೋತಿಲಾಲ್ ನೆಹರು ಅವರು ನಿಳುವಳಿಯೊಂದನ್ನು ಮಂಡಿಸಿ ಕಾಂಗ್ರೆಸ್ ವರ್ಕಿಂಗ್ ಕಮಿಟಿಯು ಕೇಂದ್ರ ಹಾಗೂ ಪ್ರಾಂತ್ಯ ಶಾಸನ ಸಭೆಯ ಸರ್ವ ಪಕ್ಷಗಳ ಪ್ರತಿನಿಧಿಗಳ ಸಮಿತಿಯ ಮೂಲಕ ಭಾರತದ ಸಂವಿಧಾನದ ರಚನೆಗೆ ಮುಂದಾಗಬೇಕೆಂದು ಆಗ್ರಹಿಸಿದರು. ಪರಿಣಾಮವಾಗಿ 1928 ಮೇ 19 ರಂದು ಜರುಗಿದ ಸರ್ವ ಪಕ್ಷ ಸಮ್ಮೇಳನವು ಮೋತಿಲಾಲ್ ನೆಹರು ಅವರ ಅಧ್ಯಕ್ಷತೆಯಲ್ಲಿ ಸಂವಿಧಾನ ರಚನಾ ಸಮಿತಿಯನ್ನು ರಚಿಸಿತು. ನೆಹರು ಅವರು 1928 ಆಗಸ್ಟ್ ೧೦ ರಂದು ವರದಿಯೊಂದನ್ನು ತಯಾರಿಸಿ ಬ್ರಿಟಿಷ್ ಸರ್ಕಾರದ ಮುಂದಿಟ್ಟರು. ಈ ವರದಿಯಲ್ಲಿ ಭಾರತಕ್ಕೆ ಪೂರ್ಣ ಜವಾಬ್ದಾರಿಯುಳ್ಳ ಸರ್ಕಾರ ರಚನೆಯ ಸಂವಿಧಾನವನ್ನು ರಚಿಸಬೇಕೆಂಬ ಬೇಡಿಕೆಯನ್ನು ಇಟ್ಟರು.
- 1929ರ ಲಾಹೋರ್ ಅಧಿವೇಶನವು ರಾವಿ ನದಿಯ ದಂಡೆಯ ಮೇಲೆ ನಡೆಯಿತು. ಅಂದು ಜವಹರಲಾಲ್ ನೆಹರು ಅವರು ತ್ರಿವರ್ಣ ಧ್ವಜವನ್ನು ಹಾರಿಸಿ ಸಂಪೂರ್ಣ ಸ್ವರಾಜ್ಯದ ರಚನೆಯೇ ನಮ್ಮ ಗುರಿಯಾಗಿದೆ ಎಂದು ಘೋಷಿಸಿದರು.
- 1933 ಅಕ್ಟೋಬರ್ 2ರಂದು ಲಕ್ನೋ ಹೆರಾಲ್ಡ್ ಗೆ ನೆಹರು ಅವರು ಬರೆದ ಲೇಖನದಲ್ಲಿ ಭಾರತದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಭಾರತೀಯ ಪ್ರತಿನಿಧಿಗಳಿಂದ ರಚನೆಗೊಂಡ ಸಂವಿಧಾನದ ಜಾರಿಯಿಂದ ಮಾತ್ರ ರಾಜಕೀಯ ಪರಿಹಾರವಾಗಬಲ್ಲದು ಎಂಬ ಅಭಿಪ್ರಾಯವನ್ನು ಜನತೆಯ ಮುಂದಿಟ್ಟರು.
- 1935ರ ಕಾಯ್ದೆಗನುಗುಣವಾಗಿ ರಚನೆಯಾದ ಕೇಂದ್ರ ಹಾಗೂ ಪ್ರಾಂತೀಯ ಸರ್ಕಾರಗಳು 1937ರಲ್ಲಿ ಒಂದು ನಿರ್ಣಯಕ್ಕೆ ಬಂದವು. ಈ ನಿರ್ಣಯದಲ್ಲಿ 1935 ರಲ್ಲಿ ಭಾರತ ಸರ್ಕಾರದ ಕಾಯ್ದೆಯು ಭಾರತೀಯರ ಆಶಯಗಳನ್ನು ಪೂರೈಸುವಲ್ಲಿ ವಿಫಲವಾಗಿದ್ದು ಅದನ್ನು ರದ್ದುಪಡಿಸಿ ಭಾರತೀಯರಿಂದ ಕೂಡಿದ ಸಂವಿಧಾನ ರಚನಾ ಸಭೆಯನ್ನು ರಚಿಸಬೇಕೆಂದು ಒತ್ತಾಯಿಸಲಾಯಿತು.
- 1939ರಲ್ಲಿ ಪ್ರಪಂಚದ ದ್ವಿತೀಯ ಮಹಾಯುದ್ಧ ಆರಂಭವಾಯಿತು. ಆಂಗ್ಲರು ಸೋಲಿನ ಭೀತಿಯನ್ನು ಎದುರಿಸಿದರು. ಆಗ ಅವರು ಭಾರತೀಯರ ಸಹಕಾರವನ್ನು ಬಯಸಿದರು. ಆಗ ಕಾಂಗ್ರೆಸ್ ಕಾರ್ಯಕಾರಿ ಮಂಡಳಿಯು ಭಾರತದ ಸ್ವಾತಂತ್ರ್ಯ ಹಾಗೂ ಸಂವಿಧಾನ ರಚಿಸಿಕೊಳ್ಳುವ ಹಕ್ಕನ್ನು ನೀಡುವುದಾದರೆ ಸಹಕಾರದ ಪರಿಶೀಲನೆಯನ್ನು ಮಾಡಬಹುದೆಂಬ ನಿರ್ಣಯವನ್ನು ಕೈಗೊಂಡಿತು.
- 1940 ಆಗಸ್ಟ್ 8ರಂದು ಬ್ರಿಟಿಷ್ ಸರ್ಕಾರ ಭಾರತೀಯರ ಸಂವಿಧಾನದ ರಚನಾ ಸಭೆಯ ಬೇಡಿಕೆಯನ್ನು ಪರೋಕ್ಷವಾಗಿ ಅಂಗೀಕರಿಸಿತು. ಯುದ್ಧ ನಂತರ ಸಂವಿಧಾನ ರಚನಾ ಸಭೆಯ ಸ್ಥಾಪನೆ ಮಾಡಲಾಗುವುದೆಂದು ಬ್ರಿಟಿಷ್ ವೈಸರಾಯ್ ಲಿನ್ಲಿತ್ಲೋ ಘೋಷಿಸಿದರು.
- 1942ರ ಮಾರ್ಚ್ ಕ್ರಿಪ್ಸ್ ಆಯೋಗವು ಭಾರತೀಯರ ರಚನಾ ಸಭೆಯ ಬೇಡಿಕೆಯನ್ನು ಅಧಿಕೃತವಾಗಿ ಒಪ್ಪಿಕೊಂಡಿತು. ಜೊತೆಗೆ ಭಾರತಕ್ಕೆ ಡೊಮಿನಿಯನ್ ಸ್ಥಾನಮಾನ ನೀಡಿ ಭಾರತದ ಆಂತರಿಕ ಮತ್ತು ಬಾಹ್ಯ ಸ್ವಾತಂತ್ರ್ಯದ ಭರವಸೆಯನ್ನು ನೀಡಿತು. ಆದರೆ ಭಾರತೀಯರು ಕ್ರಿಪ್ಸ್ ಆಯೋಗದ ಭರವಸೆಯನ್ನು ನಂಬಲಿಲ್ಲ. ಗಾಂಧೀಜಿಯವರು ಈ ಆಯೋಗವನ್ನು ಮುಳುಗುತ್ತಿರುವ ಬ್ಯಾಂಕಿನ ಮುಂದಿನ ದಿನಾಂಕವನ್ನು ಹೊಂದಿದ ಚೆಕ್ ಎಂದು ಟೀಕಿಸಿದರು. ಅದೇ ವರ್ಷ ಅವರು ಬ್ರಿಟಿಷರ ವಿರುದ್ಧ ಚಲೇ ಜಾವ್ ಚಳುವಳಿಯನ್ನು ಆರಂಭಿಸಿದರು.
- 1946ರಲ್ಲಿ ಕ್ಯಾಬಿನೆಟ್ ಆಯೋಗವು ಭಾರತಕ್ಕೆ ಬಂದಿತು. ಆಯೋಗವು ಭಾರತೀಯರ ಸಂವಿಧಾನ ಬೇಡಿಕೆ ಒಪ್ಪಿಕೊಂಡಿತು. 389 ಸದಸ್ಯರುಳ್ಳ ಭಾರತ ಸಂವಿಧಾನ ರಚನಾ ಸಭೆಯು ಸಂವಿಧಾನ ರಚನೆಗೆ ಕ್ಯಾಬಿನೆಟ್ ಆಯೋಗ ಅಂಗೀಕಾರ ಮುದ್ರೆಯೊತ್ತುವ ಮೂಲಕ ಭಾರತೀಯರ ಬಹುದಿನಗಳ ಕನಸನ್ನು ನನಸಾಗಿಸಿತು.
ಉಪಸಂಹಾರ
ಭಾರತೀಯ ಸಂವಿಧಾನ ಬೇಡಿಕೆಯ ಇತಿಹಾಸವು ಸ್ವಾತಂತ್ರ್ಯ ಹೋರಾಟದ ಅವಿಭಾಜ್ಯ ಅಂಗವಾಗಿದೆ. ರಾಷ್ಟ್ರೀಯ ಚಳುವಳಿಗಳು ಭಾರತೀಯರಲ್ಲಿ ರಾಜಕೀಯ ಜಾಗೃತಿಯನ್ನು ಮೂಡಿಸಿದವು. ಮಹಾತ್ಮಾ ಗಾಂಧೀಜಿ ಮತ್ತು ಜವಹರಲಾಲ್ ನೆಹರು ಅವರ ನಾಯಕತ್ವದಲ್ಲಿ ಈ ಬೇಡಿಕೆ ಸ್ಪಷ್ಟ ರೂಪ ಪಡೆದಿತು. ಅಂತಿಮವಾಗಿ ಸಂವಿಧಾನ ರಚನಾ ಸಭೆಯ ಸ್ಥಾಪನೆಯೊಂದಿಗೆ ಭಾರತೀಯರ ಬಹುದಿನಗಳ ಕನಸು ನನಸಾಯಿತು.