ಮನುಷ್ಯನ ದೇಹಕ್ಕೆ ಶಿರ ಹೇಗೆ ಮುಖ್ಯವಾಗಿದೆಯೋ ಹಾಗೆ ರಾಜ್ಯಕ್ಕೆ ಸಂವಿಧಾನ ಅಷ್ಟೇ ಮುಖ್ಯವಾದದ್ದು ಮನುಷ್ಯ ಎಷ್ಟೇ ಶಕ್ತಿಶಾಲಿ ಸಮರ್ಥ ಹಾಗೂ ಬುದ್ಧಿವಂತನಾದರೂ ಅವನ ಚಟುವಟಿಕೆಗಳನ್ನು ನಿಯಂತ್ರಿಸಿ ನಿರ್ದೇಶಿಸಿ ಹಾಗೂ ಹೊಂದಿಸುವ ಬುದ್ದಿ ಇಲ್ಲದಿದ್ದರೆ ಅವನಿಂದ ಯಾವ ಲಾಭವೂ ಇಲ್ಲ ಹಾಗೆಯೇ ಒಂದು ರಾಜ್ಯವು ಎಷ್ಟೇ ಪ್ರಭಾವಶಾಲಿಯಾದರೂ ತನ್ನದೇ ಆದ ನಿರ್ದಿಷ್ಟ ಗುರಿ ಅಥವಾ ಉದ್ದೇಶ ಇಲ್ಲದೆ ಹೋದರೆ ಅದರಿಂದ ಯಾವ ಪ್ರಯೋಜನವು ಇಲ್ಲ ಆಗ ಸಂವಿಧಾನವು ರಾಜ್ಯ ಹಾಗೂ ವ್ಯಕ್ತಿಯ ಗುರಿ ಅಥವಾ ಉದ್ದೇಶಗಳನ್ನು ತಿಳಿಸಿ ತನಗಿರುವ ಅಲ್ಪಸಂಪನ್ಮೂಲಗಳನ್ನು ಬಳಸಿಕೊಂಡು ಹೇಗೆ ಗುರಿ ತಲುಪಬೇಕು ಎಂಬ ತತ್ವಗಳನ್ನು ತಿಳಿ ಹೇಳುವ ಕಾರ್ಯವನ್ನು ಮಾಡುತ್ತದೆ ಈ ಕೆಳಗಿನ ಅಂಶಗಳು  ಸಂವಿಧಾನದ ಪ್ರಾಮುಖ್ಯತೆಯನ್ನು ಸಂಕ್ಷಿಪ್ತವಾಗಿ ಮನವರಿಕೆ ಮಾಡುತ್ತದೆ.

ಜನರ ಹಕ್ಕುಗಳ ರಕ್ಷಣೆ: ಪ್ರಪಂಚದ ಪ್ರತಿಯೊಂದು ದೇಶಗಳ ಸಂವಿಧಾನಗಳು ತನ್ನ ದೇಶದ ಪ್ರಜೆಗಳ ಜೀವನಕ್ಕೆ ಬೇಕಾಗುವ ವಯಕ್ತಿಕ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಒದಗಿಸಿಕೊಡುತ್ತವೆ. ಯಾವುದೇ ಜಾತಿ, ಜನಾಂಗ, ಲಿಂಗ, ಧರ್ಮ, ಭಾಷೆ ಹಾಗೂ ಸ್ಥಾನಮಾನಗಳ ಆಧಾರದ ಮೇಲೆ ತಾರತಮ್ಯವನ್ನು ತೋರದೆ ಪ್ರತಿಯೊಬ್ಬ ಪ್ರಜೆಗಳಿಗೆ ಸರಿ ಸಮಾನವಾದ ನ್ಯಾಯವನ್ನು ಒದಗಿಸಿಕೊಡುವ ಕಾರ್ಯವನ್ನು ಮಾಡುತ್ತದೆ. ಸರ್ಕಾರವಾಗಲಿ ಅಥವಾ ಬೇರೆ ಯಾವುದೇ ವ್ಯಕ್ತಿಯಾಗಲಿ ಪ್ರಜೆಗಳ ಹಕ್ಕುಗಳಿಗೆ ಧಕ್ಕೆಯಾಗುವಂತೆ ನಡೆದುಕೊಂಡರೆ ಸಂವಿಧಾನವು ಸೂಕ್ತ ರಕ್ಷಣೆಯನ್ನು ಒದಗಿಸುತ್ತದೆ. ಪ್ರಜೆಗಳ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ರಾಜ್ಯವಾಗಲಿ ಅಥವಾ ವ್ಯಕ್ತಿಯಾಗಲಿ ಕಸಿದುಕೊಳ್ಳಲು ಪ್ರಯತ್ನಿಸಿದರೆ ನ್ಯಾಯಾಂಗದ ಮೂಲಕ ಅವುಗಳನ್ನು ರಕ್ಷಿಸಲು ಸಂವಿಧಾನಗಳು ಸಾಮಾನ್ಯವಾಗಿ ಅವಕಾಶ ಕಲ್ಪಿಸುತ್ತವೆ. ಉದಾಹರಣೆ ಭಾರತವು ಜಾತ್ಯತೀತ ದೇಶವಾಗಿದ್ದು ತನ್ನ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ, ಸಮಾನತೆ ಹಾಗೂ ಸ್ವಾತಂತ್ರ್ಯವನ್ನು ಭಾರತ ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.

ಕಾನೂನಿನ ಸ್ಥಿರತೆ ಮತ್ತು ಸುರಕ್ಷತೆ: ದೇಶದ ಕಾನೂನನ್ನು ಯಾರು ಹೇಗೆ ಮತ್ತು ಯಾವಾಗ ರಚಿಸಬೇಕೆಂಬ ನಿರ್ಧಾರವನ್ನು ತೆಗೆದುಕೊಳ್ಳುವ ಹೊಣೆಗಾರಿಕೆ ಸಂವಿಧಾನಕ್ಕೆ ಇದೆ. ಒಂದು ದೇಶದ ಸರ್ಕಾರ, ಸಂಸ್ಥೆಗಳು ಹಾಗೂ ಪ್ರಜೆಗಳು ಯಾವ ರೀತಿಯ ಕಾನೂನನ್ನು ಅನುಸರಿಸಬೇಕು ಎಂಬ ಸ್ಪಷ್ಟ ನಿಯಮವನ್ನು ಒದಗಿಸುವ ಕಾರ್ಯವನ್ನು ಸಂವಿಧಾನ ಮಾಡುತ್ತದೆ. ಹಾಗೆಯೇ ಮುಂದುವರೆದು ಕಾನೂನುಗಳನ್ನು ಅರ್ಥೈಸಿಕೊಂಡು ಬಂದೋದಾಗಬಹುದಾದ ವಿವಾದಗಳನ್ನು ಹೇಗೆ ಪರಿಹರಿಸಿಕೊಳ್ಳಬೇಕೆಂಬ  ಮಾಹಿತಿಯನ್ನು ದೇಶದ ನ್ಯಾಯಾಂಗಕ್ಕೆ ಅಗತ್ಯ ಮಾರ್ಗದರ್ಶನ ಮಾಡುವ ಕಾರ್ಯದ ಜವಾಬ್ದಾರಿಯು ಸಂವಿಧಾನದ ಮೇಲಿದೆ. ಸಂದರ್ಭ ಬಂದಾಗ ಕಾನೂನುಗಳ ತಿದ್ದುಪಡಿಗೆ ಸಂವಿಧಾನವೇ ಅವಕಾಶ ಕಲ್ಪಿಸುತ್ತದೆ. ಹೀಗೆ ದೇಶವೊಂದರ ನಿರ್ದಿಷ್ಟ ಹಾಗೂ ಸುವ್ಯವಸ್ಥಿತವಾದ ಕಾನೂನನ್ನು ಹೊಂದುವಲ್ಲಿ ಸಂವಿಧಾನವು ನೆರವಾಗುವ ಮೂಲಕ ತನ್ನ ಪ್ರಾಮುಖ್ಯತೆಯನ್ನು ತೋರ್ಪಡಿ.

ಪ್ರಜಾಪ್ರಭುತ್ವದ ಆಳ್ವಿಕೆಗೆ ಸಹಕಾರಿ: ಒಂದು ದೇಶದ ಪ್ರಜಾಪ್ರಭುತ್ವ ಯಶಸ್ವಿಯಾಗಿ ಮುನ್ನುಗ್ಗುವಂತಾಗಲು ಅದಕ್ಕೆ ಲಿಖಿತ ಸಂವಿಧಾನದ ಅವಶ್ಯಕತೆ ಇದೆ. ಸಂವಿಧಾನವು ದೇಶದ ಚುನಾವಣಾ ಪ್ರಕ್ರಿಯೆಗಳು ಪ್ರತಿನಿಧಿ ಸರ್ಕಾರದ ರಚನೆ, ಸರ್ಕಾರದ ಕಾರ್ಯಗಳು, ಪ್ರಜಾಪ್ರತಿನಿಧಿಗಳ ಆಯ್ಕೆಯಾದ ಪ್ರತಿನಿಧಿಗಳು, ಪ್ರಜೆಗಳ ವಿರುದ್ಧವಾಗಿ ನಡೆದುಕೊಳ್ಳದೆ ಜನರಿಗೆ ಜವಾಬ್ದಾರರಾಗಿ ನಡೆದುಕೊಳ್ಳುವುದು ಮುಂತಾದ ಮಹತ್ವದ ಸಂಗತಿಗಳನ್ನು ಸಂವಿಧಾನವು ಒಳಗೊಂಡಿರುತ್ತದೆ.  ಸರ್ಕಾರಗಳು ಜನರ ಇಚ್ಚೆಗೆ ವಿರುದ್ಧವಾಗಿ ನಡೆದುಕೊಳ್ಳದೆ ಅಧಿಕಾರವನ್ನು ಚಲಾಯಿಸುವುದನ್ನು ಖಾತ್ರಿಪಡಿಸಿಕೊಂಡು ಸಂವಿಧಾನವು ಪ್ರಜೆಗಳು ಸರ್ಕಾರದಲ್ಲಿ ಸಕ್ರೀಯವಾಗಿ ಭಾಗವಹಿಸುವಂತೆ ಪ್ರಚೋದಿಸುವ ಕಾರ್ಯವನ್ನು ಮಾಡುತ್ತದೆ. ಉದಾಹರಣೆ ಚುನಾವಣೆಯಲ್ಲಿ ಮತ ಚಲಾಯಿಸುವ ಸೂಕ್ತವಾದ ಅಭ್ಯರ್ಥಿಗಳನ್ನು ಆಯ್ಕೆಮಾಡುವ, ಸರ್ಕಾರಿ ಉದ್ಯೋಗ ಪಡೆಯುವ, ಸರ್ಕಾರವನ್ನು ಟೀಕಿಸುವ ಮತ್ತು ಸರ್ಕಾರದ ಆಡಳಿತದಲ್ಲಿ ಪಾಲ್ಗೊಳ್ಳುವ ಗುರುತರ ಜವಾಬ್ದಾರಿಯನ್ನು ಪ್ರಜೆಗಳು ನಿರ್ವಹಿಸುವಂತೆ ಸಂವಿಧಾನವು ಪ್ರೋತ್ಸಾಹಿಸುತ್ತದೆ.

ಹೊಣೆಗಾರಿಕೆಗಳ ಬಲವರ್ಧನೆಯ ಸಾಧನ: ಪ್ರಪಂಚದ ಯಾವುದೇ ದೇಶವೊಂದರ ಸಂವಿಧಾನವು ಅಲ್ಲಿನ ಪ್ರಜೆಗಳ ಹೊಣೆಗಾರಿಕೆಯನ್ನು ತಿಳಿಯಪಡಿಸುತ್ತದೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಲ್ಲಿ ತಮ್ಮ ಹೊಣೆಗಾರಿಕೆ ಏನು ಎಂಬುದನ್ನು ಸಂವಿಧಾನವು ಮನವರಿಕೆ ಮಾಡಿಕೊಡುತ್ತದೆ. ಒಂದು ವೇಳೆ ಸರ್ಕಾರ ಏನಾದರೂ ಜನ ವಿರೋಧಿ ಕ್ರಮಗಳನ್ನು ಕೈಗೊಂಡರೆ ಮತ್ತು ಸಂವಿಧಾನಿಕ ಸತತ್ವಗಳನ್ನು ಉಲ್ಲಂಘಿಸಿದರೆ, ಅದನ್ನು ಪ್ರಶ್ನಿಸುವ ಕಾರ್ಯಗಳನ್ನು ಮಾಡುವಲ್ಲಿ ಪ್ರಜೆಗಳಿಗೆ ಸಂವಿಧಾನವು ಸಹಾಯ ಮಾಡುತ್ತದೆ. ಹೀಗೆ ಆಳುವ ವರ್ಗ ಮತ್ತು ಆಳಿಸಿಕೊಳ್ಳುವ ವರ್ಗಗಳ ನಡುವೆ ಸಾಮರಸ್ಯವನ್ನು ಉಂಟು ಮಾಡಿ ಅವರವರ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿರ್ವಹಿಸುವಂತೆ ಸಂವಿಧಾನವು ಮಾರ್ಗದರ್ಶನ ನೀಡುತ್ತದೆ.

ರಾಷ್ಟ್ರೀಯ ಏಕತೆಗೆ ನೆರವು:  ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಮೆರೆದ ದೇಶ. ಇಲ್ಲಿ ವಿವಿಧ ಜಾತಿ, ಜನಾಂಗ, ಧರ್ಮ, ಲಿಂಗ, ಭಾಷೆ ಹಾಗೂ ಸ್ಥಾನಮಾನಗಳನ್ನು ಹೊಂದಿದ ಜನಾಂಗವಿದೆ. ಇಂತಹ ವೈವಿಧ್ಯಮಯವಾದ ಜನರ ಮೌಲ್ಯಗಳು ಹಾಗೂ ಆಕಾಂಕ್ಷೆಗಳನ್ನು ಅರಿತುಕೊಂಡು ಸಂವಿಧಾನ ಅವರಿಗೆ ಸೂಕ್ತವಾದ ಸ್ಥಾನಮಾನವನ್ನು ಗಳಿಸಿಕೊಳ್ಳಲು ನೆರವಾಗುತ್ತದೆ. ಇದರಿಂದ ಸಾರ್ವಜನಿಕ ಆಡಳಿತ ಮತ್ತು ಜೀವನಕ್ಕೆ ಏಕರೂಪದ ಅಡಿಪಾಯ ಒದಗಿಸುತ್ತದೆ. ಸಂವಿಧಾನವು ಪ್ರಜೆಗಳಿಗೆ ಏಕರೂಪದ ಕಾನೂನು ಹಾಗೂ ಸಮಾನುಪಾತಗಳನ್ನು ಒದಗಿಸುವುದರಿಂದ ಅವರಲ್ಲಿ ನಾವೆಲ್ಲ ಒಂದೇ ಎಂಬ ಭಾವನೆ ಮೊಳಕೆಯೊಡೆಯುತ್ತದೆ. ಸರ್ವಜನೇ ಸುಖಿನೋ ಭವಂತು ಎಂಬುದು ಸಂವಿಧಾನದ ಧ್ಯೇಯ ವಾಕ್ಯವಾಗಿದೆ. ವಸುದೈವಕಂ ಕುಟುಂಬಕಂ ಎಂಬ ತತ್ವವನ್ನು ಪ್ರಜೆಗಳು ಅರಿತು ನಡೆದರೆ ಅದಕ್ಕಿಂತ ಸಂತೋಷ ಇನ್ನೆಲ್ಲಿದೆ ಇವೆಲ್ಲವುಗಳಿಗೆ ತಳಪಾಯವನ್ನು ಹಾಕುವ ಕಾರ್ಯವನ್ನು ಸಂವಿಧಾನ ಮಾಡುತ್ತದೆ.

ವಿವಾದಗಳಿಂದ ದೂರವಿದ್ದು ಶಾಂತಿಯುತ ಪರಿಹಾರಕ್ಕೆ ಆಸ್ಪದ: ಸರ್ಕಾರ ಹಾಗೂ ಪ್ರಜೆಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಒಂದು ದೇಶದ ಶ್ರೇಯೋಭಿವೃದ್ಧಿಯಲ್ಲಿ ಪ್ರಜೆಗಳ ಮತ್ತು ಸರ್ಕಾರದ ನಡುವಿನ ಸಹಕಾರದ ಪಾತ್ರ ದೊಡ್ಡದಾಗಿದೆ. ಪರಸ್ಪರರಲ್ಲಿ ವಿಶ್ವಾಸವಿರಬೇಕು. ಪ್ರಜೆಗಳ ಸರ್ವಾಂಗಿಣ ಅಭಿವೃದ್ಧಿಗಾಗಿ ಸಂವಿಧಾನವು ಹಲವು ಮೂಲಭೂತ ಹಕ್ಕುಗಳನ್ನು ನೀಡಿದೆ. ಪರಿಸ್ಪರ ವಿವಾದಗಳಿಂದ ದೂರವಿದ್ದು ಶಾಂತಿಯುತ ಬಾಳ್ವೆ ಮಾಡಬೇಕಾದದ್ದು ಪ್ರಜೆಗಳ ಮತ್ತು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಸರ್ಕಾರ ಕೂಡ ನಾನು ಯಾವಾಗಲೂ ಸರಿ ಎಂಬ ಧೋರಣೆಯಿಂದ ವರ್ತಿಸಬಾರದು. ಹಾಗೇನಾದರೂ ಸರ್ಕಾರ ವರ್ತಿಸಿದ ಸಂವಿಧಾನ ಅದಕ್ಕೆ ನಿರ್ಬಂಧವನ್ನು ಹಾಕುತ್ತದೆ. ಸರ್ಕಾರ ಮತ್ತು ಪ್ರಜೆಗಳ ನಡುವಿನ ಘರ್ಷಣೆಯನ್ನು ತಪ್ಪಿಸುವ ಜವಾಬ್ದಾರಿ ಸಂವಿಧಾನದ ಮೇಲಿದೆ.

ಉಪಸಂಹಾರ

ಸಂವಿಧಾನವು ಕೇವಲ ಕಾನೂನುಗಳ ಸಂಕಲನವಲ್ಲ, ಅದು ಒಂದು ದೇಶದ ಆತ್ಮವಾಗಿದೆ. ರಾಜ್ಯ ಮತ್ತು ಪ್ರಜೆಗಳ ನಡುವಿನ ಸಂಬಂಧವನ್ನು ನಿಯಂತ್ರಿಸುವ ಶಕ್ತಿಶಾಲಿ ಮಾರ್ಗದರ್ಶಿಯಾಗಿದೆ. ಸಮಾಜದಲ್ಲಿ ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಸ್ಥಾಪಿಸುವುದೇ ಇದರ ಮೂಲ ಉದ್ದೇಶ.