ಮಧ್ಯಕಾಲೀನ ಭಾರತದ ಇತಿಹಾಸದಲ್ಲಿ ಷಹಜಹಾನನ ಆಳ್ವಿಕೆಯ ಕಾಲವನ್ನು ಮೊಗಲರ ಕಾಲದ ಸುವರ್ಣಯುಗವೆಂದು ಬಣ್ಣಿಸಲಾಗಿದೆ. ಈತನ ಕಾಲದಲ್ಲಿ ಮೊಗಲ್ ಸಾಮ್ರಾಜ್ಯ ಔನ್ನತ್ಯದ ಶಿಖರವನ್ನು ತಲುಪಿದ್ದಿತು. ವಿಶಾಲವಾದ ಮೊಗಲ್ ಸಾಮ್ರಾಜ್ಯದಲ್ಲಿ ಶಾಂತಿ, ಸುವ್ಯಮೃತ ಜನಜೀವನ ಮತ್ತು ಪ್ರಗತಿಗಳು ಉಂಟಾಗಿದ್ದವು. ಈತನ ಕಾಲದಲ್ಲಿ ಕ್ಷಾಮ ತಲೆದೋರಿದರೂ ಅದರ ಹತೋಟಿಗೆ ಷಹಜಹಾನನು ಕೈಗೊಂಡ ಮಾನವೀಯ ವ್ಯವಸ್ಥೆ ಶ್ಲಾಘನೀಯವಾಗಿತ್ತು. ಒಟ್ಟಿನಲ್ಲಿ ಷಹಜಹಾನನ ಆಳ್ವಿಕೆಯ ಕಾಲದಲ್ಲಿ ಸುಖ, ಶಾಂತಿ, ಸುವ್ಯವಸ್ಥೆ ನೆಲೆಸಿದ್ದರಿಂದ ಕಲೆ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಅಪಾರ ಪ್ರಗತಿ ಸಾಧಿಸಲ್ಪಟ್ಟಿತು, ಎಂಬುದಾಗಿ ಕೆಲವು ಚರಿತ್ರೆಕಾರರು ಅಭಿಪ್ರಾಯಪಟ್ಟಿದ್ದಾರೆ.
ಷಹಜಹಾನನ ಕಾಲ ಮೊಗಲರ ಸುವರ್ಣ ಯುಗವೇ? ಅಲ್ಲವೆ? ಎಂಬ ಬಗ್ಗೆ ಇತಿಹಾಸಕಾರರಲ್ಲಿ ಜಿಜ್ಞಾಸೆ ಮತ್ತು ವಾದ ವಿವಾದಗಳಿವೆ. ಸಾಮಾನ್ಯವಾಗಿ ಷಹಜಹಾನನ ಕಾಲವನ್ನು ಮೊಗಲರ ಸುವರ್ಣಯುಗವೆಂತಲೂ, ವೈಭವದ ಕಾಲವೆಂದೂ ಬಣ್ಣಿಸಲಾಗಿದೆ. ಆದರೆ ಕೆಲವು ಇತಿಹಾಸಕಾರರು ಇದರ ಬಗ್ಗೆ ತಮ್ಮ ವಿಮರ್ಶಾತ್ಮಕ ದೃಷ್ಟಿ ಬೀರಿ ಸಹಜಹಾನನ ಕಾಲ ಮೊಗಲ್ ಸಾಮ್ರಾಜ್ಯದ ಅವನತಿ ಮತ್ತು ಅವಸಾನದ ಆರಂಭ ಕಾಲವೆಂದು ಪರಿಗಣಿಸಿದ್ದಾರೆ. ಆದ್ದರಿಂದ ಇದರ ಬಗ್ಗೆ ಸಾಕಷ್ಟು ವಾದ ವಿವಾದಗಳಿವೆ.
ಐರೋಪ್ಯ ಬರಹಗಾರರು ಷಹಜಹಾನನ ಅಳ್ವಿಕೆಯನ್ನು ಟೀಕಿಸಿದ್ದಾರೆ. ಈತನ ಆಳ್ವಿಕೆ ಮೇಲು ನೋಟಕ್ಕೆ ವೈಭವಯುತವಾಗಿ ಕಂಡರೂ ಅದು ನಿಜವಾಗಿ ಹಾಗಿರಲಿಲ್ಲ ಎಂಬುದು ಇವರ ಅಭಿಪ್ರಾಯ. ಇದನ್ನು 14ನೇ ಲೂಯಿಯ ಕಾಲದ ಫ್ರಾನ್ಸಿಗೆ ಹೋಲಿಸಬಹುದು. 14ನೇ ಲೂಯಿಯಂತೆ ಷಹಜಹಾನ್ ವೈಭವವನ್ನು ಹೊರನೋಟಕ್ಕೆ ಪ್ರದರ್ಶಿಸಿದ್ದರೂ ಆಂತರಿಕವಾಗಿ ಹಲವಾರು ಆತೃಪ್ತಿ, ಅಸಮಾಧಾನ, ಕೊರತೆ, ಹಸಿವು, ಬಡತನ ಜನರನ್ನು ಕಾಡುತ್ತಿದ್ದವು.
ಈತನ ಆಳ್ವಿಕೆ ಕಣ್ಣು ಕೋರೈಸುವಂತಹ ವೈಭವ ಮತ್ತು ಆಡಂಬರಗಳಿಂದ ಕೂಡಿದ್ದಿತು. ಅವನ ವಾಸ್ತುಶಿಲ್ಪ ಕೃತಿಗಳು ಮತ್ತು ಮಯೂರ ಸಿಂಹಾಸನ ಅವನ ಕಾಲದ ವೈಭವಕ್ಕೆ ಸಾಕ್ಷಿಯಾಗಿದ್ದವು. ಆದರೆ ಷಹಜಹಾನ್ ಇದಕ್ಕೆ ವೆಚ್ಚ ಮಾಡಿದುದು ಅಪಾರ ಹಣ. ಆದರೆ ಇದು ಯಾರ ಹಣ? ಎಲ್ಲಿಂದ ಬಂದಿತ್ತು? ಎಷ್ಟು ಜನರ ಕಣ್ಣೀರಿನ ಮತ್ತು ಬೆವರಿನ ಹಣ ಎಂಬುದು ಮುಖ್ಯ ಪ್ರಶ್ನೆ, ಹೌದು, ಆತನ ಕಾಲದ ವೈಭವದಿಂದ ವಿದೇಶಿಗರು ಮೂಕವಿಸ್ಮಿತರಾಗಿದ್ದರು. ಇವೆಲ್ಲ ನೋಡಿ ಅವರು ಸಾಮ್ರಾಜ್ಯದಲ್ಲಿ ಶಾಂತಿ, ಸಮೃದ್ಧಿ ನೆಲೆಸಿದ್ದಿತೆಂದೇ ಭಾವಿಸಿದ್ದರು. ಆದರೆ ಇದು ಕೇವಲ ಭ್ರಮೆಯಾಗಿತ್ತು. ನೈಜ ಸ್ಥಿತಿ ಇದಕ್ಕೆ ತದ್ವಿರುದ್ಧವಾಗಿತ್ತು.
ಎಡ್ವರ್ಡ್ ಮತ್ತು ಗಾರೆಕ್ಟರ ಪ್ರಕಾರ “ಷಹಜಹಾನನ ಆಳ್ವಿಕೆ ಮೊಗಲ್ ಸಾಮ್ರಾಜ್ಯದ ಮತ್ತು ಅದರ ಆರ್ಥಿಕ ವ್ಯವಸ್ಥೆಯ ಅವಸಾನದ ನಾಂದಿಯಾಗಿದ್ದಿತು”, ವಿ.ಎ. ಸ್ಮಿತ್ ಪ್ರಕಾರ “ಷಹಜಹಾನನ ಕಾಲದ ಆಡಂಬರ, ವೈಭವ ಮತ್ತು ವಿಲಾಸಗಳಿಂದ ಇತಿಹಾಸಕಾರರು ದಾರಿತಪ್ಪಿದ್ದಾರೆ, ಪಹಜಹಾನ್ ಸಮರ್ಥ ದಂಡನಾಯಕ ಮತ್ತು ಸೇನಾ ವ್ಯವಸ್ಥಾಪಕನಲ್ಲ. ರಾಜ್ಯದ ಆಡಳಿತದಲ್ಲಿ ಅವನು ಕ್ರೂರಿ ಮತ್ತು ಯಾವುದಕ್ಕೂ ಹೇಸದವ”.
ಡಾ।। ಜಾದೂನಾಥ ಸರ್ಕಾರ್ ಪ್ರಕಾರ “ಷಹಜಹಾನನ ಕಾಲದಲ್ಲಿ ಮೊಗಲ್ ಸಾಮ್ರಾಜ್ಯದ ಅವನತಿಯ ಬೀಜ ಬಿತ್ತಲ್ಪಟ್ಟವು”.
ಈ ಮೇಲ್ಕಂಡ ಅಭಿಪ್ರಾಯಗಳಿಂದ ಕೆಲವು ಇತಿಹಾಸಕಾರರು ಷಹಜಹಾನನ ಕಾಲವನ್ನು ಸುವರ್ಣಯುಗವೆಂದು ಒಪ್ಪಿಕೊಂಡಿಲ್ಲ ಎಂಬುದು ನಿಖರವಾಗಿ ತಿಳಿಯುತ್ತದೆ. ಆದರೆ ಷಹಜಹಾನನ ಕಾಲವನ್ನು ಸುವರ್ಣಯುಗವೆಂದು ಬಣ್ಣಿಸುವವರೂ ಇದ್ದಾರೆ. ಆ ಅಭಿಪ್ರಾಯವನ್ನು ಮಂಡಿಸುವಲ್ಲಿ ಪ್ರೊ. ಎಸ್.ಆರ್. ಕರ್ಮ ಪ್ರಮುಖರು, ಚರ್ಮರವರು ತಮ್ಮ ʻʻಭಾರತದಲ್ಲಿ ಮೊಗಲ್ ಸಾಮ್ರಾಜ್ಯ” ಎಂಬ ಗ್ರಂಥದಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹಲವಾರು ವಂಗಗಳು, ಯುದ್ಧಗಳು ಇದ್ದರೂ ಷಹಜಹಾನನ ಕಾಲವು ಸಾಕಷ್ಟು ಸಂಪದ್ಭರಿತತೆ ಮತ್ತು ವೈಭವದಿಂದ ಕೂಡಿತ್ತು ಎಂಬುದು ಅವರ ವಾದ. ಔರಂಗಜೇಬನ ಕಾಲದ ದುರಂತಕ್ಕೆ ಮತ್ತು ಮೊಗಲ್ ಸಾಮ್ರಾಜ್ಯದ ಆರ್ಥಿಕ ದಿವಾಳಿತನಕ್ಕೆ ಈತನನ್ನು ಹೊಣೆ ಮಾಡಿ ಫಲವಿಲ್ಲ ಎಂಬುದು ಇವರ ನಂಬಿಕೆ. ಇವರು ವಿ.ಎ. ಸ್ಮಿತ್‌ರ ವಾದವನ್ನು ವಿರೋಧಿಸಿ, ಅದು ಕೇವಲ ಕಾಲ್ಪನಿಕ ಎಂದು ತೆಗಳಿದ್ದಾರೆ.
ರಾಯ್ ಭಾರ್ಮಲ್ ಮತ್ತು ಕಾಫೀಖಾನ್‌ರೆಂಬ ಸಮಕಾಲೀನ ಇತಿಹಾಸಕಾರರು ಷಹಜಹಾನನ ಕಾಲವನ್ನು ಶಾಂತಿ ಮತ್ತು ಸಮೃದ್ಧಿಯ ಕಾಲವೆಂದು ವರ್ಣಿಸಿದ್ದಾರೆ.
ಎಲ್ಲಿನ್ ಸ್ಟೋನ್‌ರ ಪ್ರಕಾರ, ʻʻಷಹಜಹಾನನ ಕಾಲವು ಭಾರತದ ಇತಿಹಾಸದಲ್ಲಿ ಸಂಪದ್ಭರಿತ ಕಾಲವಾಗಿದ್ದಿತು”. ಈ ಮೇಲ್ಕಂಡಂತೆ ವಾದ ವಿವಾದಗಳಿದ್ದಾಗ್ಯೂ ಷಹಜಹಾನ್ ಯಶಸ್ವಿ ರಾಜನಾಗಿದ್ದ, ಆಡಳಿತ ದಕ್ಷತೆಯನ್ನು ಹೊಂದಿದ್ದ. ಮೊಗಲ್ ಸಾಮ್ರಾಜ್ಯ ಇವನ ಕಾಲದಲ್ಲಿ ಅತ್ಯುನ್ನತಿ ಮುಟ್ಟಿದ್ದಿತು ಎಂಬುದನ್ನು ತಳ್ಳಿಹಾಕುವಂತಿಲ್ಲ. ಅದೇ ರೀತಿ ಆತನ ತಪ್ಪುಗಳನ್ನು ನ್ಯೂನತೆಗಳನ್ನು ಒಪ್ಪಿಕೊಳ್ಳುವಂತಿಲ್ಲ.
ಕಲೆ ಮತ್ತು ವಾಸ್ತು ಶಿಲ್ಪ
ಷಹಜಹಾನನ ಕಾಲ ಕಲೆ ಮತ್ತು ವಾಸ್ತುಶಿಲ್ಪ ದೃಷ್ಟಿಯಿಂದ ವೈಭವದ ಕಾಲ, ಕಟ್ಟಡಗಳ ನಿರ್ಮಾಣದಲ್ಲಿ ಉಳಿದ ಮೊಗಲ್ ದೊರೆಗಳನ್ನು ಮೀರಿಸಿದ ಪಹಜಹಾನ್ ನನ್ನು “ಸೌಧಗಳ ನಿರ್ಮಾಪಕರ ರಾಜ” ಎಂದು ಕರೆದದ್ದು ಸತ್ಯವಾಗಿದೆ. ಪರ್ಶಿಯನ್ ಕವಿ ಶೇಖ್ ಸೌದಿಯಂತೆ, “ದೇವಾಲಯಗಳು, ಸೇತುವೆಗಳು, ಕೆರೆಕಟ್ಟೆಗಳು ಮತ್ತು ಕಾಲುವೆಗಳಂತಹ ಸ್ಮಾರಕಗಳನ್ನು ಬಿಟ್ಟು ಹೋಗುವ ವ್ಯಕ್ತಿ ಎಂದಿಗೂ ಸಾಯುವುದಿಲ್ಲ”. ಈ ಹೇಳಿಕೆ ಷಹಜಹಾನನಿಗೆ ಸಂಪೂರ್ಣವಾಗಿ ಒಪ್ಪುತ್ತದೆ. ಈತನ ಸಾಮ್ರಾಜ್ಯ, ಸೈನಿಕರು, ಆಡಳಿತ ಸಾಧನೆಗಳನ್ನು ಯಾರೂ ಇಂದು ಸ್ಮರಿಸುವುದಿಲ್ಲ. ಆದರೆ ಆತ ಬಿಟ್ಟು ಹೋಗಿರುವ ಕಲೆ ಮತ್ತು ವಾಸ್ತುಶಿಲ್ಪ ಕೃತಿಗಳಲ್ಲಿ ಅವನ ಹೆಸರು ಶಾಶ್ವತವಾಗಿದೆ. ಈತನ ಕಾಲ ನಿಜವಾಗಿ ಮೊಗಲ್ ವಾಸ್ತುಶಿಲ್ಪದ ಸುವರ್ಣಯುಗ. ಇವನೊಬ್ಬ ಮಹಾ ನಿರ್ಮಾಣಕಾರ. ಅವನನ್ನು “ನಿರ್ಮಾಣಕಾರರ ರಾಜ” ನೆಂದೇ ಕರೆಯಲಾಗಿದೆ. ಈತ ಆಗ್ರಾ, ದೆಹಲಿ, ಲಾಹೋರ್, ಕಾಶ್ಮೀರ, ಕಾಬೂಲ್, ಕಾಂದಹಾರ್, ಅಜೀರ್, ಅಹಮದಾಬಾದ್ ಮುಂತಾದೆಡೆಗಳಲ್ಲಿ ಹಲವು ಸುಂದರವಾದ ಆರಮನೆ, ಕೋಟೆ, ಮಸೀದಿ, ಗೋರಿ ಇತ್ಯಾದಿ ಕಟ್ಟಡಗಳನ್ನು ಬಿಟ್ಟು ಹೋಗಿದ್ದಾನೆ. ಈತನ ಕಾಲದಲ್ಲಿ ಮೊಗಲ್ ವಾಸ್ತುಶಿಲ್ಪ ತನ್ನ ಅತ್ಯುನ್ನತಿ ಮುಟ್ಟಿತ್ತು. ಅಮೃತಶಿಲೆಯಲ್ಲಿ ಉತ್ಕೃಷ್ಟ ಸೌಧಗಳನ್ನು ನಿರ್ಮಿಸಿದ “ಷಹಜಹಾನನು ಮೊಗಲರ ಅಗಸ್ಟಸ್” ಎಂದು ಕಲಾವಿಮರ್ಶಕರು ಬಣ್ಣಿಸಿದ್ದಾರೆ.
1. ಕೆಂಪುಕೋಟೆ : ಷಹಜಹಾನನು ಹಲವು ಮೊಗಲ್ ಪಟ್ಟಣಗಳಲ್ಲಿ ಕಟ್ಟಡಗಳನ್ನು ನಿರ್ಮಿಸಿದ್ದರೂ, ದೆಹಲಿ ಮತ್ತು ಆಗ್ರಾಗಳು ಈತನ ಕಾಲದ ಕಲಾವೈಭವವನ್ನು ಪ್ರದರ್ಶಿಸುವಲ್ಲಿ ಪ್ರಾಮುಖ್ಯತೆ ಪಡೆದಿವೆ. ಹಹಜಹಾನ್ ದೆಹಲಿಗೆ ತನ್ನ ರಾಜಧಾನಿ ವರ್ಗಾಯಿಸಿದ ಮೇಲೆ ಅಲ್ಲಿ ʻಷಹಜಹಾನಾ ಬಾದ್’ ಎಂಬ ಹೊಸನಗರವನ್ನೇ ನಿರ್ಮಾಣ ಮಾಡಿದ. ಇದರಲ್ಲಿ ಆನೇಕ ಸುಂದರವಾದ ಕಟ್ಟಡಗಳನ್ನು ನಿರ್ಮಿಸಿದೆ. ಇದರಲ್ಲಿ ಮುಖ್ಯವಾದುದೆಂದರೆ ಕೆಂಪುಕೋಟೆ. ಇದರ ಒಳಗೆ ಅನೇಕ ಸುಂದರವಾದ ವಾಸ್ತುಶಿಲ್ಪ ಕೃತಿಗಳನ್ನು ನಿರ್ಮಿಸಲಾಗಿದೆ. ಇವೆಲ್ಲವನ್ನು ಪರಿಶುದ್ದ ಅಮೃತ ಶಿಲೆಯಲ್ಲಿ ನಿರ್ಮಿಸಲಾಗಿದೆ. ಇವುಗಳಲ್ಲಿ ಮೋತಿಮಹಲ್, ಹಿರಾಮಹಲ್, ರಂಗ ಮಹಲ್, ದಿವಾನಿ ಆಮ್, ದಿವಾನಿ ಖಾಸ್ ಮುಖ್ಯವಾದವು. ದಿವಾನಿ ಖಾಸ್ ಒಂದು ಅಪೂರ್ವ ಸುಂದರ ಕಲಾಕೃತಿ, ಇದರ ಗೋಡೆಯ ಮೇಲೆ ಕಂಡುಬಂದಿರುವ “ಭೂಮಿಯಲ್ಲಿ ಸಂತೋಷದ ಸ್ವರ್ಗದ ಉದ್ಯಾನವಿದ್ದಲ್ಲಿ ಅದುವೆ ಇದು, ಇದಲ್ಲದೆ ಬೇರೆ ಇಲ್ಲ” ಎಂಬ ಬರಹ ಅಕ್ಷರಶಃ ನಿಜ.
2. ತಾಜ್ ಮಹಲ್ : ಷಹಜಹಾನನ ಕಟ್ಟಡಗಳಲ್ಲೆಲ್ಲ ಅತ್ಯಂತ ಸುಪ್ರಸಿದ್ಧವಾದುದು ತಾಜ್ ಮಹಲ್, ಇದನ್ನು ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಇದನ್ನು ಪಹಜಹಾನನು ತನ್ನ ಪ್ರೀತಿಯ ರಾಣಿ ಮಮ್ತಾಜ್ ಮಹಲ್‌ಳ ನೆನಪಿನಲ್ಲಿ ಆಗ್ರಾದಲ್ಲಿ, ಯಮುನಾ ನದಿ ದಡದಲ್ಲಿ ನಿರ್ಮಿಸಿದೆ. ಇದು ಸಂಪೂರ್ಣವಾಗಿ ಅಮೃತಶಿಲೆಯಲ್ಲಿ ನಿರ್ಮಾಣವಾಗಿದೆ. ಕ್ರಿ.ಶ. 1632 ರಲ್ಲಿ ಇದರ ರಚನೆ ಆರಂಭವಾಗಿ 1653ರಲ್ಲಿ ಪೂರ್ಣಗೊಂಡಿತು. ಇದನ್ನು ಕಟ್ಟಿಸಲು ಷಹಜಹಾನನು 50ಲಕ್ಷರೂಗಳನ್ನು ವೆಚ್ಚಮಾಡಿದನು. ತಾಜ್ ಮಹಲ್‌ನ್ನು “ಅಮೃತ ಶಿಲೆಯ ಕನಸು” ಎಂದು ವರ್ಣಿಸಲಾಗಿದೆ. ಟವರ್ನಿಯರ್ ಪ್ರಕಾರ ತಾಜ್‌ಮಹಲ್‌ನ್ನು 22 ವರ್ಷಗಳಲ್ಲಿ ಪೂರ್ಣಗೊಳಿಸಲಾಯಿತು ಮತ್ತು 3 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣ ವೆಚ್ಚವಾಯಿತು. ವೆನಿಷಿಯಾದ ವೆರೊನಿಯೋ ಎಂಬುವನು ತಾಜ್ ಮಹಲ್‌ನ ವಿನ್ಯಾಸವನ್ನು ರೂಪಿಸಿದವನೆಂದು ಫಾದರ್ ಮಾಡ್ರಿಕ್ ಹೇಳಿದ್ದಾರೆ. ಆದರೆ ಈ ಕಟ್ಟಡದಲ್ಲಿ ಪಾಶ್ಚಾತ್ಯ ಪ್ರಭಾವ ಕಾಣುವುದಿಲ್ಲವೆಂದು ಭಾರತೀಯ ವಿದ್ವಾಂಸರ ಅಭಿಪ್ರಾಯ. ಉಸ್ತಾದ್ ಈಸಾ ಎಂಬುವನ ನಿರ್ದೇಶನದಲ್ಲಿ ಪರ್ಶಿಯದ ಮತ್ತು ಮಧ್ಯ ಏಶಿಯಾದ ಕಲಾವಿದರು ಭಾರತೀಯ ಕಲಾಕಾರರ ಸಹಾಯದಿಂದ ತಾಜ್ ಮಹಲ್‌ನ್ನು ನಿರ್ಮಿಸಿದರೆಂದು ಕೆಲವು ಇತಿಹಾಸಕಾರರ ಅಭಿಪ್ರಾಯ. ಕಟ್ಟಡದ ವಿನ್ಯಾಸವನ್ನು ಮುಸಲ್ಮಾನ ಕಲಾವಿದರು ಮತ್ತು ಅಲಂಕಾರದ ಕೆಲಸವನ್ನು ಹಿಂದೂ ಕಲಾಕಾರರು ಪೂರೈಸಿದರೆಂದು ನಂಬಲಾಗಿದೆ. ತಾಜ್ ಮಹಲ್ ನಲ್ಲಿ ಸಹಜಹಾನನ ಕಾಲದ ಉತ್ಕೃಷ್ಟ ಕಲೆ ಮತ್ತು ಪರಿಣಿತ ವಾಸ್ತುಶಿಲ್ಪ ಇವುಗಳ ಸುಂದರ ಸಮ್ಮಿಲನ ಗೋಚರಿಸುತ್ತದೆ. ಯಮುನಾ ನದಿಯ ದಡದ ಮೇಲಿನ ಈ ತಾಜ್‌ಮಹಲ್ ಪ್ರಕೃತಿ ದೇವಿಯ ಮತ್ತು ಮಾನವ ಹಸ್ತಗಳ ಸಂಯೋಜನೆಯ ಫಲವಾಗಿ ರೂಪುಗೊಂಡ ಸೌಂದರ್ಯರಾಶಿಯಂತೆ ಕಂಗೊಳಿಸುತ್ತದೆ. ಹಗಲು ಹೊತ್ತಿನಲ್ಲಿ ಮತ್ತು ಬೆಳದಿಂಗಳಲ್ಲಿ ತಾಜ್ ಮಹಲಿನ ಬಣ್ಣ ಬದಲಾಗುವುದು ಈ ಕಟ್ಟಡದ ಒಂದು ವೈಶಿಷ್ಟ್ಯ.
3. ಮಯೂರ ಸಿಂಹಾಸನ : ಷಹಜಹಾನನ ಕಾಲದ ಇನ್ನೊಂದು ಸೃಷ್ಟಿಯೇ ಮಯೂರ ಸಿಂಹಾಸನ ಇದನ್ನು ನಿರ್ಮಿಸಲು ಏಳು ವರ್ಷ ಹಿಡಿಯಿತು. ಇದಕ್ಕೆ ತಗುಲಿದ ವೆಚ್ಚ ಒಂದು ಕೋಟಿ ರೂಪಾಯಿ, ಇದನ್ನು ಮುತ್ತುರತ್ನಗಳಿಂದ, ವಜ್ರ ವೈಡೂರ್ಯಗಳಿಂದ ಅಲಂಕರಿಸಲಾಗಿತ್ತು. ನಾದಿರ್ಷಹ ತನ್ನ ಧಾಳಿಯ ಕಾಲದಲ್ಲಿ ಇದನ್ನು ಪರ್ಶಿಯಾಕ್ಕೆ ಸಾಗಿಸಿದೆ.
4. ಮೋತಿ ಮಸೀದಿ : ಆಗ್ರಾದಲ್ಲಿನ ನಯನ ಮನೋಹರವಾದ ಮೋತಿ ಮಸೀದಿಯನ್ನು ಕ್ರಿ.ಶ. 1653ರಲ್ಲಿ ಪೂರ್ಣಗೊಳಿಸಲಾಯಿತು. ಇದರ ನಿರ್ಮಾಣಕ್ಕೆ ಏಳು ವರ್ಷ ಹಿಡಿಯಿತು. ಪರಿಶುದ್ಧತೆ ಮತ್ತು ಆಕರ್ಷಕತೆ ಇದರ ಮುಖ್ಯ ಲಕ್ಷಣಗಳು.
5. ಮುಸ್ಲಾಮಾನ್ ಬುರ್ಚ್ : ಇದು ಆಗ್ರಾ ಕೋಟೆಯೊಳಗಿನ ಇನ್ನೊಂದು ಸುಂದರ ನಿರ್ಮಾಣ, ಇಲ್ಲಿಂದ ತಾಜ್ ಮಹಲಿನ ದರ್ಶನ ಸಾಧ್ಯ. ಇದರಲ್ಲಿಯೇ ಔರಂಗಜೇಬ್ ಷಹಜಹಾನನ್ನು ಸೆರೆಹಿಡಿದದ್ದು. ಕಟ್ಟಡಗಳೇ ಅಲ್ಲದೆ ಉದ್ಯಾನವನಗಳನ್ನು ನಿರ್ಮಿಸುವಲ್ಲಿ ಷಹಜಹಾನ್ ಆಸಕ್ತಿ ವಹಿಸಿದ್ದ. ಕಾಶ್ಮೀರದ ಕಾಲಿಮಾರ್ ಮತ್ತು ನಿಷಾತ್ ಉದ್ಯಾನವನಗಳು, ಲಾಹೋರಿನ ಶಾಲಿಮಾರ್ ಉದ್ಯಾನವನ ಈತನ ಕಾಲದವು.
ಮುಕ್ತಾಯ : ಷಹಜಹಾನನ ಕಾಲದಲ್ಲಿ ವಿಶಿಷ್ಟವಾದ ವಾಸ್ತುಶಿಲ್ಪ ಶೈಲಿಯೊಂದು ನಿರ್ಮಾಣವಾಯಿತು. ಇದನ್ನು ಕೆಲವರು “ಷಹಜಹಾನನ ಶೈಲಿ” ಯೆಂದು ಕರೆದಿದ್ದಾರೆ. ಈತನಿಗಿಂತ ಮೊದಲಿನ ಶೈಲಿಯನ್ನು “ಇಂಡೋಪರ್ಶಿಯನ್ ಶೈಲಿ” -ಯೆಂದು ಗುರುತಿಸಲಾಗಿದೆ. ಕಾರಣ ಅದರಲ್ಲಿ ಭಾರತೀಯ ಮತ್ತು ಪರ್ಶಿಯನ್ ಶೈಲಿಗಳ ಸಮ್ಮಿಲನವಿದ್ದಿತ್ತು. ಸಹಜಹಾನನ ಕಾಲದಲ್ಲಿ ಸಂಪೂರ್ಣವಾಗಿ ಭಾರತೀಯ ಅಂಶಗಳಿಂದ ಕೂಡಿದ ಶೈಲಿ ಆರಂಭವಾಯಿತು. ವಿದೇಶಿ ಅಂಶಗಳು ದೂರವಾದವು. ಈ ಶೈಲಿಯಲ್ಲಿ ಸೂಕ್ಷ್ಮವಾದ ಕೆತ್ತನೆಗೆ, ಅಲಂಕಾರಕ್ಕೆ, ಮೆರುಗಿಗೆ, ಬಣ್ಣಕ್ಕೆ, ರಮ್ಯತೆಗೆ ಅಧಿಕ ಗಮನ ಕೊಡಲಾಗಿತ್ತು. ಷಹಜಹಾನನ ಕಾಲದ ವಾಸ್ತುಶಿಲ್ಪ ಕೃತಿಗಳ ವೈಶಿಷ್ಟ್ಯವೆಂದರೆ ಹೆಚ್ಚಾಗಿ ಬಿಳಿಯ ಅಮೃತಶಿಲೆಯ ಬಳಕೆ ಮತ್ತು ಅಲಂಕಾರಕ್ಕೆ ಮತ್ತು ರತ್ನ, ವಜ್ರ ವೈಡೂರ್ಯ, ಬಂಗಾರ ಮತ್ತು ಬೆಳ್ಳಿಯನ್ನು ಬಳಸಿರುವುದು. ತತ್ಪರಿಣಾಮವಾಗಿ ಈತನ ಕಾಲದ ಕೃತಿಗಳು ಅತ್ಯಂತ ಆಕರ್ಷಕ ಮತ್ತು ಸುಂದರವಾದವು.