ವಾಯುಮಂಡಲವು ಭೂಮಿಯಿಂದ ಸುಮಾರು 1600 ಕಿ.ಮೀ ಎತ್ತರವಾಗಿದೆ. ಶೇ 99 % ರಷ್ಟು ವಾಯುವಿನ ಸಾಂದ್ರತೆಯು ಭೂಮಿಯಿಂದ 32 ಕಿ.ಮೀ ಎತ್ತರದೊಳಗೆ ಸಂಗ್ರಹವಾಗಿದೆ. ಇದಕ್ಕೆ ಮೂಲ ಕಾರಣ ಭೂಮಿಯ ಗುರುತ್ವಾಕರ್ಷಣಬಲ. ವಾಯುಮಂಡಲವನ್ನು ಒಟ್ಟು ಐದು ಪದರಗಳನ್ನಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ
1. ಪರಿವರ್ತನಾ ಮಂಡಲ
2. ಸಮೋಷ್ಣ ಮಂಡಲ
3. ಮಧ್ಯಂತರ ಮಂಡಲ
4. ಉಷ್ಣತಾ ಮಂಡಲ ಹಾಗೂ
5. ಬಾಹ್ಯ ಮಂಡಲ
1. ಪರಿವರ್ತನ ಮಂಡಲ (Troposphere)
ʻʻಪರಿವರ್ತನಾ ಮಂಡಲಕ್ಕೆ ಮಿಶ್ರವಲಯ ಎಂದು ಕರೆಯುತ್ತಾರೆ.ʼʼ ಟ್ರೋಪೋಸ್ ಎಂಬ ಪದವು ಗ್ರೀಕ್ ಭಾಷೆಯಿಂದ ಬಂದಿದೆ. ಇದರ ಅರ್ಥ ಮಿಶ್ರಣ ಅಥವಾ ಟರ್ಬುಲೆನ್ಸ್. ಇದು ವಾಯುಮಂಡಲದ ಅತ್ಯಂತ ಕೆಳಸ್ತರವಾಗಿದೆ. ಈ ವಲಯದ ಎತ್ತರ ಧ್ರುವಗಳಲ್ಲಿ 8 ಕೀ.ಮಿ, ಸಮಭಾಜಕ ವೃತ್ತ ಪ್ರದೇಶದಲ್ಲಿ 18 ಕೀ.ಮಿ ಹಾಗೂ ಸರಾಸರಿ ಎತ್ತರ 12 ಕಿ.ಮೀ ಆಗಿರುತ್ತದೆ. ಈ ವಲಯದಲ್ಲಿ ಎತ್ತರವು ಹೆಚ್ಚಿದಂತೆ ಉಷ್ಣಾಂಶದಲ್ಲಿ ಇಳಿಕೆ ಕಂಡುಬರುತ್ತದೆ. ಈ ಪ್ರದೇಶದಲ್ಲಿನ ಸರಾಸರಿ ತಾಪಮಾನವು ಪ್ರತಿ 165 ಮೀಟರ್ ಎತ್ತರಕ್ಕೆ 1 ಡಿಗ್ರಿ ಸೆ. ಅಥವಾ 100 ಮೀ ಎತ್ತರಕ್ಕೆ 6.4 ಡಿಗ್ರಿ ಸೆ. ಕಡಿಮೆಯಾಗುತ್ತದೆ. ವಾಯುಮಂಡಲದ 99% ನೀರಿನ ಆವಿ, ವಾಯುಧೃವ ಕಣಗಳು ಈ ವಲಯದಲ್ಲಿ ಕಂಡುಬರುವ ಕಾರಣದಿಂದ ಇದಕ್ಕೆ ʻʻ ಬದಲಾವಣೆ ಮಂಡಲʼʼ ಎಂದು ಕರೆಯುತ್ತಾರೆ. ಪರಿವರ್ತನಾ ಮಂಡಲದಲ್ಲಿ ಮೋಡಗಳ ಜನನ, ಮಿಂಚು, ಗುಡುಗು, ಕಾಮನಬಿಲ್ಲು, ಮಂಜು, ಮಳೆ ಕಂಡುಬರುತ್ತದೆ. ಹಾಗಾಗಿ ಇದನ್ನು ʻʻ ಹವಾಮಾನ ಉತ್ಪಾದಕ ಮಂಡಲʼʼ ಎಂದು ಕರೆಯಲಾಗುವುದು. ಪ್ರಚಲನ ಪ್ರವಾಹಗಳು ಇಲ್ಲಿಯೇ ಕೊನೆಯಾಗುತ್ತವೆ. ಆದುದರಿಂದ ಇದನ್ನು ಪ್ರಚಲನ ಹೊಲಿಗೆ ಎಂದು ಕರೆಯಲಾಗಿದೆ. ಪರಿವರ್ತನಾ ಮಂಡಲ ಹಾಗೂ ಸಮೋಷ್ಣ ಮಂಡಲದ ನಡುವಿನ ಗಡಿ ರೇಖೆಯನ್ನು ಪರಿವರ್ತನಾ ವಿರಾಮ ಎಂದು ಕರೆಯಲಾಗಿದೆ.
2. ಸಮೋಷ್ಣ ಮಂಡಲ (Stratosphere)
ಇದು ವಾಯುಮಂಡಲದ ಎರಡನೇ ಸ್ಥರವಾಗಿದೆ. ಈ ವಲಯವು ಭೂಮಿಯ ಮೇಲ್ಮೈಯಿಂದ ಸುಮಾರು 50 ಕಿ.ಮೀ ಎತ್ತರದಲ್ಲಿದೆ. ಈ ವಲಯವು ನೀರಾವಿ ಹಾಗೂ ಧೂಳಿನ ಕಣಗಳಿಂದ ಮುಕ್ತವಾಗಿರುವ ಕಾರಣದಿಂದ ಇಲ್ಲಿ ಯಾವುದೇ ಮೋಡಗಳು ಇರುವುದಿಲ್ಲ. ಹಾಗಾಗಿ ವಿಮಾನಗಳು ಹಾರಾಟ ಮಾಡಲು ಇಲ್ಲಿ ಸಮಸ್ಯೆಗಳು ಉದ್ಭವಿಸುವುದಿಲ್ಲ. ಇದರ ಇನ್ನೊಂದು ವೈಶಿಷ್ಟವೆಂದರೆ ಇಲ್ಲಿ ಓಝೋನ್ ಪದರು ಇದ್ದು ಅದು ಸೂರ್ಯನ ಅಪಾಯಕಾರಿಯಾದ ನೇರಳಾತೀತ ಕಿರಣಗಳನ್ನು ಹೀರಿಕೊಂಡು ಭೂಮಿಯ ಮೇಲಿನ ಜೀವಿಗಳ ಉಳಿವಿಗೆ ಕಾರಣವಾಗಿದೆ. ಓಝೋನ್ ಪದರವು ಸುಮಾರು 20ರಿಂದ 30 ಕಿ.ಮೀ ಮಧ್ಯದಲ್ಲಿದೆ. ಇಲ್ಲಿ ವಾಯು ವಿರಳವಾಗಿದ್ದು ಉಷ್ಣತೆಯು ಸ್ಥಿರವಾಗಿರುತ್ತದೆ. ಸಮೋಷ್ಣ ವಿರಾಮವು ಸಮೋಷ್ಣ ಮಂಡಲ ಹಾಗೂ ಮಧ್ಯಂತರದ ಮಂಡಲದ ನಡುವೆ ಇದೆ.
3. ಮಧ್ಯಂತರ ಮಂಡಲ (Mesosphere)
ಇದು ವಾಯುಮಂಡಲದ ಮೂರನೇ ಸ್ತರವಾಗಿದೆ ಈ ಪದರು ಭೂಮಿಯ ಮೇಲ್ಮೈಯಿಂದ ಸುಮಾರು 80 ಕಿಮೀ ಎತ್ತರದಲ್ಲಿದೆ. ವಾಯುಮಂಡಲದ ಶೀತವಲಯ ಇದಾಗಿದ್ದು ಇಲ್ಲಿ ಸೂರ್ಯನ ಕಿರಣಗಳನ್ನು ಹೀರಲಾರದಷ್ಟು ವಾಯು ವಿರಳವಾಗಿದೆ. ಈ ಮಂಡಲದಿಂದ ತಾಪಮಾನದ ಇಳಿಕೆ ಆರಂಭವಾಗುತ್ತದೆ. ಈ ಪದರಿನಲ್ಲಿ ನಾವು ಎತ್ತರಕ್ಕೆ ಹೋದಂತೆ ಉಷ್ಣಾಂಶ ತೀವ್ರಗತಿಯಲ್ಲಿ ಇಳಿಕೆಯಾಗುತ್ತಾ ಸುಮಾರು 80 ಕಿಮೀ ಎತ್ತರದಲ್ಲಿ -100 ಡಿಗ್ರಿ ಸೆಲ್ಸಿಯಸ್ ಇರುವುದು ಕಂಡುಬರುತ್ತದೆ.
4. ಉಷ್ಣತಾ ಮಂಡಲ (Thermosphere)
ಉಷ್ಣತಾ ಮಂಡಲವು ಸುಮಾರು 80 ರಿಂದ 400 ಕಿ.ಮೀ ಎತ್ತರದವರೆಗೆ ವ್ಯಾಪಿಸಿದೆ. ಇಲ್ಲಿ ಅಧಿಕ ಉಷ್ಣಾಂಶವಿದ್ದು ಅದು ಅನಿಲಕಣಗಳು, ಸೂಕ್ಷ್ಮ ತರಂಗ, ಆವೆಗೆಂಪು ತರಂಗಗಳು ಹಾಗೂ ಕ್ಷ-ಕಿರಣಗಳನ್ನು ಹೀರಿಕೊಂಡು ಅಯಾನಿಕರಣ ಗೊಳ್ಳುವುದರಿಂದ ಉಷ್ಣಾಂಶವು ಹೆಚ್ಚಾಗಿರುತ್ತದೆ. ಇಲ್ಲಿ ಅಯಾನುಗಳು ಒಡೆದು ಧನ ಮತ್ತು ಋಣಕಣಗಳಾಗಿ ಪ್ರಭಾವಿತಗೊಳ್ಳುತ್ತವೆ. ನಂತರ ಅನಿಲಕಣಗಳು ವಿದ್ಯುತ್ ವಾಹಕ ಗುಣಗಳನ್ನು ಪಡೆದುಕೊಳ್ಳುತ್ತವೆ. ಇವುಗಳನ್ನು ಅಯಾನುಗಳೆಂದು ಕರೆಯುತ್ತಾರೆ. ಈ ಸ್ತರವು ವಿವಿಧ ರೀತಿಯ ದ್ವನಿ ತರಂಗಗಳನ್ನು ಪ್ರತಿಫಲಿಸುವುದರಿಂದ ರೇಡಿಯೋ ಹಾಗೂ ಮೊಬೈಲ್ ಇತ್ಯಾದಿಗಳ ಸಂಪರ್ಕ ಸುಲಭವಾಗಿದೆ. ಇದು ರಾಡರ್ ಮತ್ತು ನಾವಿಕರನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ. ಇದು ಉಲ್ಕಾ ಶಿಲೆಗಳಿಂದಲೂ ನಮ್ಮನ್ನು ರಕ್ಷಿಸುತ್ತದೆ. ಇದಲ್ಲದೆ ಬೋರಿಯಾಲಿಸ್ ಮತ್ತು ಅರೋರ ಆಸ್ಟ್ರೇಲಿಸ್ ಎಂಬ ಧ್ರುವಜೋತಿಗಳನ್ನು ರಕ್ಷಿಸುತ್ತದೆ.
5. ಬಾಹ್ಯಮಂಡಲ (Exosphere)
ಉಷ್ಣ ಮಂಡಲದ ಆಚೆಗಿರುವ ಮಂಡಲವನ್ನು ಬಾಹ್ಯ ಮಂಡಲ ಎಂದು ಕರೆಯುತ್ತಾರೆ. ಇದು 400 ರಿಂದ 1000 ಕಿ.ಮೀ ವಿಸ್ತಾರವನ್ನು ಹೊಂದಿದೆ. ಭೂಮಿಯ ಗುರುತ್ವ ಮಂಡಲವು ಈ ವಲಯದಲ್ಲಿ ಅತ್ಯಂತ ಕಡಿಮೆ ಇರುತ್ತದೆ. ಈ ವಲಯದ ನಂತರದಲ್ಲಿ ಕಾಂತತ್ವ ವಲಯವು ಕಂಡುಬರುತ್ತದೆ. ಇದರ ಜೊತೆಗೆ ಹೈಡ್ರೋಜನ್ ಹಾಗೂ ಹೀಲಿಯಂ ಅನಿಲಗಳು ಕಂಡುಬರುತ್ತವೆ.
ಉಪಸಂಹಾರ
ವಾಯುಮಂಡಲವು ಭೂಮಿಯ ಮೇಲಿನ ಜೀವಸಂಕುಲದ ಅಸ್ತಿತ್ವಕ್ಕೆ ಅವಿಭಾಜ್ಯ ಅಂಗವಾಗಿದೆ. ಪರಿವರ್ತನಾ ಮಂಡಲದಿಂದ ಆರಂಭಿಸಿ ಬಾಹ್ಯ ಮಂಡಲದವರೆಗೆ ಪ್ರತಿಯೊಂದು ಪದರಕ್ಕೂ ತನ್ನದೇ ಆದ ವಿಶಿಷ್ಟ ಗುಣಲಕ್ಷಣಗಳು ಮತ್ತು ಮಹತ್ವವಿದೆ. ಹವಾಮಾನ ಉತ್ಪತ್ತಿ, ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಣೆ, ಸಂವಹನ ವ್ಯವಸ್ಥೆಗಳ ಸಹಕಾರ ಹಾಗೂ ಉಲ್ಕಾಶಿಲೆಗಳಿಂದ ಭೂಮಿಯ ರಕ್ಷಣೆಯು ವಾಯುಮಂಡಲದ ವಿವಿಧ ಪದರಗಳ ಕಾರ್ಯಗಳೇ ಆಗಿವೆ. ಈ ಪದರಗಳ ಸಮತೋಲನವೇ ಭೂಮಿಯಲ್ಲಿ ಜೀವನ ನಿರಂತರವಾಗಿ ಸಾಗಲು ಕಾರಣವಾಗಿದೆ