“ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯಗಳನ್ನು ದೇಶದ ಪ್ರಜೆಗಳಿಗೆ ದೊರಕಿಸಿಕೊಡುವ ಉದ್ದೇಶದಿಂದ ರಾಜ್ಯ ನಿರ್ದೇಶಕ ತತ್ವಗಳನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆಯಲ್ಲದೇ ಅವುಗಳು ಮೂಲಭೂತ ಹಕ್ಕುಗಳಿಗಿಂತ ಮುಖ್ಯವಾದವೆಂದು ಪರಿಗಣಿಸಲಾಗಿದೆ.” – ಪ್ರೊ. ಕೆ.ಸಿ. ಮರ್ಕಾನಂದನ್
ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ದೇಶದ ಎಲ್ಲಾ ಜನರಿಗೂ ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಧಾರ್ಮಿಕ ನ್ಯಾಯವನ್ನು ದೊರಕಿಸಿಕೊಟ್ಟು ಎಲ್ಲಾ ಜನರಿಗೂ ಸಮಾನ ಸ್ಥಾನಮಾನಗಳನ್ನು ನೀಡಿ ಸುಖೀ ರಾಜ್ಯದ ಸ್ಥಾಪನೆಯನ್ನು ಮಾಡುವ ಧ್ಯೇಯವನ್ನು ಹೊಂದಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಈ ಧ್ಯೇಯಗಳನ್ನು ಸರ್ಕಾರಗಳು ಕಾರ್ಯಗತಗೊಳಿಸುವಂತೆ ಸರ್ಕಾರಗಳಿಗೆ ಸಂವಿಧಾನವು ಆದೇಶಗಳನ್ನು ನೀಡುತ್ತದೆ. ಈ ಆದೇಶಗಳೇ ರಾಜ್ಯ ನಿರ್ದೇಶಕ ತತ್ವಗಳು ಎಂದು ಹೆಸರಾಗಿವೆ. ಸಂವಿಧಾನದ 4 ನೇ ಭಾಗದಲ್ಲಿ ರಾಜ್ಯ ನಿರ್ದೇಶಕ ತತ್ವಗಳನ್ನು ಅಳವಡಿಸಲಾಗಿದೆ. ಈ ತತ್ವಗಳನ್ನು ಸರ್ಕಾರಗಳು ಕಡ್ಡಾಯವಾಗಿ ಪಾಲಿಸಬೇಕೆಂಬ ನಿಯಮವೇನೂ ಇಲ್ಲ. ಒಂದು ವೇಳೆ ಸರ್ಕಾರ ಈ ನಿಯಮವನ್ನು ಪಾಲನೆ ಮಾಡದಿದ್ದರೆ ಪೌರನಾದವನು ಸರ್ಕಾರದ ವಿರುದ್ಧ ನ್ಯಾಯಾಲಯಕ್ಕೆ ಹೋಗಲು ಸಾಧ್ಯವಿಲ್ಲ. ನಮ್ಮ ಸಂವಿಧಾನ ರಚನಾಕಾರರು ರಾಜ್ಯ ನಿರ್ದೇಶಕ ತತ್ವಗಳನ್ನು ಐರಿಷ್ ಗಣರಾಜ್ಯದಿಂದ ಎರವಲು ಪಡೆದಿದ್ದಾರೆ. ಐರ್ಲೆಂಡ್ ದೇಶವು ಸ್ಪೇನ್ ದೇಶದ ಸಂವಿಧಾನದಿಂದ ಎರವಲು ಪಡೆದಿದೆ. ಡಾ. ಬಿ.ಆರ್. ಅಂಬೇಡ್ಕರರು ರಾಜ್ಯ ನಿರ್ದೇಶಕ ತತ್ವಗಳು ನಮ್ಮ ಸಂವಿಧಾನದ ಒಂದು ಪ್ರಮುಖವಾದ ಲಕ್ಷಣ ಎಂದಿದ್ದಾರೆ. ರಾಜ್ಯ ನಿರ್ದೇಶಕ ತತ್ವಗಳು ಕಲ್ಯಾಣ ರಾಜ್ಯ ಸ್ಥಾಪನೆಯ ಗುರಿಯನ್ನು ಹೊಂದಿದೆ ಎಂದು ಡಾ. ಬಾಬು ರಾಜೇಂದ್ರ ಪ್ರಸಾದರು ಹೇಳಿದ್ದಾರೆ.
ಸಂವಿಧಾನದ 4ನೇ ಭಾಗದಲ್ಲಿರುವ ವಿಧಿಗಳು (36 ರಿಂದ 51 ರವರೆಗೆ) ರಾಜ್ಯ ನಿರ್ದೇಶಕ ತತ್ವಗಳ ಬಗ್ಗೆ ವಿವರಗಳನ್ನು ಒಳಗೊಂಡಿದೆ.
ರಾಜ್ಯ ನೀತಿ ನಿರ್ದೇಶಕ ತತ್ವಗಳ ವರ್ಗೀಕರಣ: (Classification of directive principles of state policy)
ಭಾರತ ಸಂವಿಧಾನದ 4 ನೇ ಅಧ್ಯಾಯದಲ್ಲಿ 35 ರಿಂದ 51 ನೇ ವಿಧಿಯವರೆಗೆ ರಾಜ್ಯ ನಿರ್ದೇಶಕ ತತ್ವಗಳನ್ನು ಅಳವಡಿಸಲಾಗಿದೆ. ಇವುಗಳನ್ನು ಯೋಜನಾಬದ್ಧವಾಗಿ ಸೇರಿಸಿಲ್ಲವಾದ ಕಾರಣ ಅವುಗಳನ್ನು ವೈಜ್ಞಾನಿಕ ತಳಹದಿಯ ಮೇಲೆ ವಿಂಗಡಿಸಲು ಸಾಧ್ಯವಿಲ್ಲ. ರಾಜ್ಯನೀತಿ ನಿರ್ದೇಶಕ ತತ್ವಗಳನ್ನು ಸಮಾಜವಾದಿ, ಗಾಂಧೀವಾದಿ ಹಾಗೂ ಉದಾರ ತತ್ವಗಳು ಎಂಬ 3 ವಿಭಾಗಗಳಾಗಿ ಗುರುತಿಸಲಾಗಿದ್ದು ಅವುಗಳು ಈ ಕೆಳಗಿನಂತಿವೆ,
1. ಸಮಾಜವಾದಿ ತತ್ವಗಳು ( The socialistic principles)
ಭಾರತದ ಸಂವಿಧಾನದ ಪ್ರಸ್ತಾವನೆಗೆ 1976 ರಲ್ಲಿ ಸಮಾಜವಾದಿ ಪದವನ್ನು ಸೇರಿಸುವ ಮೂಲಕ ಭಾರತವನ್ನು ಸಮಾಜವಾದಿ ರಾಷ್ಟ್ರವೆಂದು ಘೋಷಿಸಲಾಯಿತು. 1976 ಕ್ಕಿಂತ ಮುಂಚೆ ಸಂವಿಧಾನದಲ್ಲಿ ಸಮಾಜವಾದಿ ಅಂಶಗಳನ್ನು ರಾಷ್ಟ್ರನೀತಿ ನಿರ್ದೇಶಕ ತತ್ವಗಳಲ್ಲಿ ಅಳವಡಿಸಿದ್ದರು. ಸಮಾಜವಾದಿ ಸಿದ್ಧಾಂತದ ಉದ್ದೇಶವನ್ನು ಪ್ರತಿನಿಧಿಸುವ ಪ್ರಮುಖ ನಿರ್ದೇಶಕ ತತ್ವಗಳೆಂದರೆ,
a. ಸಂವಿಧಾನದ 38(1)ನೇ ವಿಧಿಯ ಪ್ರಕಾರ ರಾಜ್ಯವು ಪ್ರಜಾಕಲ್ಯಾಣಕ್ಕಾಗಿ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯವನ್ನು ದೊರಕಿಸಿಕೊಡಬೇಕು.
b. ಸಂವಿಧಾನದ 38(2)ನೇ ಉಪವಿಧಿಗೆ 44ನೇ ತಿದ್ದುಪಡಿ ತಂದು ಪ್ರಜೆಗಳ ಆದಾಯದ ಅಸಮಾನತೆಯನ್ನು ಕಡಿಮೆಗೊಳಿಸಿ, ವ್ಯಕ್ತಿಗಳ, ಬೇರೆ ಬೇರೆ ಪ್ರದೇಶಗಳಲ್ಲಿ ವಾಸಿಸುವ ಜನರ ಸೌಲಭ್ಯಗಳ ಮತ್ತು ಅವಕಾಶಗಳ ಅಸಮಾನತೆಯನ್ನು ತೆಗೆದು ಹಾಕಲು ರಾಜ್ಯವು ಪ್ರಯತ್ನಿಸಬೇಕು.
c. ಸಂವಿಧಾನದ 39(A) ವಿಧಿಯಂತೆ ರಾಜ್ಯದ ಪ್ರಜೆಗಳ ಉತ್ತಮ ಜೀವನಕ್ಕೆ ಅನುಕೂಲವಾಗುವಂತಹ ಸಾಧನಗಳನ್ನು ಹೊಂದುವಂತಹ ನೀತಿ ಅಥವಾ ಕಾರ್ಯಗಳನ್ನು ರೂಪಿಸಿ ಜಾರಿಗೆಗೊಳಿಸಬೇಕು.
d. ಸಂವಿಧಾನದ 39(B) ವಿಧಿಯ ಪ್ರಕಾರ ದೇಶದ ಸಂಪನ್ಮೂಲಗಳು ಸರ್ವರಿಗೂ ಹಂಚಿ ಹೋಗುವಂತೆ ಕಾರ್ಯಕ್ರಮಗಳನ್ನು ರೂಪಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ.
e. ಸಂವಿಧಾನದ 39(C) ವಿಧಿಯಂತೆ ರಾಜ್ಯದ ಸಂಪತ್ತು ಕೆಲವೇ ವ್ಯಕ್ತಿಗಳ ಕೈಯಲ್ಲಿ ಕೇಂದ್ರೀಕೃತವಾಗದಂತೆ ಮತ್ತು ಸಮಾನವಾಗಿ ಹಂಚಿಕೆಯಾಗುವಂತೆ ಕ್ರಮ ಕೈಗೊಳ್ಳಬೇಕು.
f. ಸಂವಿಧಾನದ 39(D) ವಿಧಿಯಂತೆ ರಾಜ್ಯವು ಸಮಾನ ಕೆಲಸಕ್ಕೆ ಸಮಾನ ವೇತನ ದೊರೆಯುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
g. ಸಂವಿಧಾನದ 39(E) ವಿಧಿಯಂತೆ ಕಾರ್ಮಿಕರು, ಮಹಿಳೆಯರು, ಮಕ್ಕಳು ಸೇರಿದಂತೆ ಪ್ರಜೆಗಳ ಆರೋಗ್ಯವನ್ನು ಕಾಪಾಡುವುದು ಸರ್ಕಾರದ ಹೊಣೆಯಾಗಿದೆ.
h. ಸಂವಿಧಾನದ 39(F) ವಿಧಿಯ ಪ್ರಕಾರ ಮಕ್ಕಳು ಆರೋಗ್ಯವಾಗಿ ಬೆಳೆಯಲು ಅವಕಾಶಗಳು ಹಾಗೂ ಸೌಲಭ್ಯಗಳನ್ನು ನೀಡಿ ಅವರ ಸ್ವಾತಂತ್ರ್ಯ ಹಾಗೂ ವ್ಯಕ್ತಿತ್ವದ ಬೆಳವಣಿಗೆಗೆ ಅನುಕೂಲ ಮಾಡಿಕೊಡಬೇಕು. ಮಕ್ಕಳು ಮತ್ತು ಯುವಕರು ಶೋಷಣೆಯ ವಿರುದ್ಧ ರಕ್ಷಣೆಯನ್ನು ಪಡೆಯಬೇಕು.
i. ಸಂವಿಧಾನದ 42 ನೇ ತಿದ್ದುಪಡಿಮ ಮೂಲಕ 39(A) ವಿಧಿಯ ಅನ್ವಯ ರಾಜ್ಯವು ಸಮಾನ ಅವಕಾಶದ ಆಧಾರದ ಮೇಲೆ ನ್ಯಾಯವನ್ನು ದೊರಕಿಸಿ ಬಡವರಿಗೆ ಉಚಿತ ಕಾನೂನು ನೆರವನ್ನು ನೀಡಬೇಕು.
j. ಸಂವಿಧಾನದ 40 ನೇ ವಿಧಿಯ ಪ್ರಕಾರ ರಾಜ್ಯವು ಗ್ರಾಮ ಪಂಚಾಯತಿಗಳನ್ನು ಸ್ಥಾಪಿಸಿ ಅವುಗಳು ಸಮರ್ಪಕವಾಗಿ ಕಾರ್ಯಗಳನ್ನು ನಿರ್ವಹಿಸುವಂತೆ ಅಧಿಕಾರವನ್ನು ನೀಡಬೇಕು.
k. ಸಂವಿಧಾನದ 41 ನೇ ವಿಧಿಯಂತೆ ನಿರುದ್ಯೋಗಿಗಳಿಗೆ, ವೃದ್ಧರಿಗೆ, ರೋಗಿಗಳಿಗೆ ಹಾಗೂ ಅಂಗವಿಕಲರಿಗೆ ಹಣ ಸಂದಾಯ ಮಾಡಿ ಅವರ ಏಳಿಗೆಗೆ ಶ್ರಮಿಸಬೇಕು.
l. ಸಂವಿಧಾನದ 42 ನೇ ವಿಧಿಯು ಕಾರ್ಮಿಕರು ಉತ್ತಮ ಜೀವನ ನಿರ್ವಹಣೆ ಮಾಡಲು ವಿರಾಮ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಅವಕಾಶಗಳನ್ನು ಅನುಭವಿಸುವಂತಾಗಲು ರಾಜ್ಯವು ಗ್ರಾಮೀಣ ಪ್ರದೇಶಗಳ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಬೇಕು.
m. ಸಂವಿಧಾನದ 42 ನೇ ತಿದ್ದುಪಡಿಯ 42(A) ವಿಧಿಯ ಅನ್ವಯ ಕಾರ್ಮಿಕರು ಉದ್ಯಮಗಳ ಕಾರ್ಯನಿರ್ವಹಣೆಯಲ್ಲಿ ಭಾಗವಹಿಸುವಂತೆ ರಾಜ್ಯವು ಕ್ರಮ ಕೈಗೊಳ್ಳುವಂತೆ ಮಾಡಲಾಗಿದೆ.
ಗಾಂಧೀವಾದದ ತತ್ವಗಳು (The gandhian principles)
ಭಾರತದ ಸ್ವಾತಂತ್ರ್ಯ ಹೋರಾಟಗಾರ, ರಾಷ್ಟ್ರಪಿತ, ಬಾಪೂಜಿ ಹಾಗೂ ಭಾರತದ ಪಿತಾಮಹ ಎಂದು ಹೆಸರಾದ ಗಾಂಧೀಜಿಯವರು ಸ್ವಾತಂತ್ರ್ಯದ ಹೋರಾಟದ ಸಮಯದಲ್ಲಿ ಅನೇಕ ಆಚರಣೆಗಳು, ನಂಬಿಕೆ, ಮೌಲ್ಯಗಳನ್ನು ಅಳವಡಿಸಿಕೊಂಡು ಭಾರತೀಯ ನಾಗರಿಕರಿಗೆ ಮಾದರಿಯಾದರು. ಆದ್ದರಿಂದ ಭಾರತದ ಬಲಿಷ್ಠ ನಿರ್ಮಾಣಕ್ಕೆ ಸಾದ್ಯವಾಯಿತು. ಅವರು ನೀಡಿದ ಕೆಲವು ಸಲಹೆಗಳನ್ನು ರಾಜ್ಯ ನಿರ್ದೇಶಕ ತತ್ವಗಳಲ್ಲಿ ಅಳವಡಿಸಲಾಯಿತು.
- ಸಂವಿಧಾನದ 40 ನೇ ವಿಧಿಯಂತೆ ರಾಜ್ಯವು ಗ್ರಾಮಪಂಚಾಯತಿಗಳನ್ನು ಸ್ಥಾಪಿಸಿ ಅವುಗಳನ್ನು ಸ್ವಯಂ ಆಡಳಿತ ಸಂಸ್ಥೆಗಳನ್ನಾಗಿ ಮಾಡುವುದು.
- ಸಂವಿಧಾನದ 43 ನೇ ವಿಧಿಯ ಪ್ರಕಾರ ಗ್ರಾಮೀಣ ಭಾಗದಲ್ಲಿ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಿ ಅವುಗಳನ್ನು ಸಹಕಾರಿ ಆಧಾರದ ಮೇಲೆ ರೂಪಿಸುವುದು.
- ಸಂವಿಧಾನದ 97 ನೇ ತಿದ್ದುಪಡಿಯ ಮೂಲಕ ಸೇರಿಸಲಾದ 43(B) ವಿಧಿಯಂತೆ ರಾಜ್ಯವು ಸಹಕಾರಿ ಸಂಸ್ಥೆಗಳ ರಚನೆ, ಕಾರ್ಯವಿಧಾನ, ಪ್ರಜಾಸತ್ತಾತ್ಮಕ ನಿಯಂತ್ರಣ ಹಾಗೂ ವೃತ್ತಿಪರ ನಿರ್ವಹಣೆಗೆ ಪ್ರೋತಾಹ ನೀಡಬೇಕು.
- ಸಂವಿಧಾನದ 46 ನೇ ವಿಧಿಯಂತೆ ರಾಜ್ಯವು ಪರಿಶಿಷ್ಠ ಜಾತಿ ಹಾಗೂ ಪರಿಶಷ್ಠ ವರ್ಗ ಸೇರಿದಂತೆ ಸಮಾಜದ ದುರ್ಬಲ ವರ್ಗಗಳ ಪ್ರಜೆಗಳ ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಬೇಕು.
- ಸಂವಿಧಾನದ 47 ನೇ ವಿಧಿಯಂತೆ ರಾಜ್ಯವು ವೈದ್ಯಕೀಯ ಉದ್ದೇಶ ಹೊರತುಪಡಿಸಿ ಆರೋಗ್ಯಕ್ಕೆ ಮಾರಕವಾದ ಉಳಿದೆಲ್ಲಾ ಮಾದಕ ವಸ್ತುಗಳ ಬಳಕೆಯ ನಿಷೇಧಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು.
- ಸಂವಿಧಾನದ 48 ನೇ ವಿಧಿಯಲ್ಲಿ ರಾಜ್ಯವು ಗೋಹತ್ಯೆಯನ್ನು ನಿಷೇಧಿಸಲು ಪ್ರಯತ್ನಿಸಬೇಕು.
3. ಉದಾರವಾದಿ ತತ್ವಗಳು ( Liberal principles)
1. ಸಂವಿಧಾನದ 44 ನೇ ವಿಧಿಯಂತೆ ಭಾರತದ ಎಲ್ಲಾ ಪ್ರಜೆಗಳಿಗೆ ಏಕರೂಪ ನಾಗರಿಕ ಸಂಹಿತೆಯ ಭರವಸೆಯನ್ನು ರಾಜ್ಯವು ಒದಗಿಸುವ ಕೆಲಸ ಮಾಡಬೇಕು.
2. ಸಂವಿಧಾನದ 45 ನೇ ವಿಧಿಯ ಪ್ರಕಾರ ರಾಜ್ಯವು 14 ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡಬೇಕು.
3. ಸಂವಿಧಾನದ 47 ನೇ ವಿಧಿಯಂತೆ ರಾಜ್ಯವು ಸಾರ್ವಜನಿಕ ಆರೋಗ್ಯಾಭಿವೃದ್ಧಿಗಾಗಿ ಪ್ರಜೆಗಳ ಪೌಷ್ಟಿಕಾಂಶ ಹಾಗೂ ಜೀವನಮಟ್ಟವನ್ನು ಸುಧಾರಿಸಲು ಕ್ರಮ ವಹಿಸಬೇಕು.
4. ಸಂವಿಧಾನದ 50 ನೇ ವಿಧಿಯ ಪ್ರಕಾರ ಸಾರ್ವಜನಿಕ ಸೇವಾ ದೃಷ್ಠಿಯಿಂದ ಕಾರ್ಯಾಂಗ ಹಾಗೂ ನ್ಯಾಯಾಂಗವನ್ನು ಪ್ರತ್ಯೇಕಿಸಬೇಕು.
4. ಸಾಮಾನ್ಯ ತತ್ವಗಳು (Common principles)
- ಸಂವಿಧಾನದ 48 ನೇ ವಿಧಿಯಂತೆ ರಾಜ್ಯವು ಕೃಷಿ ಮತ್ತು ಪಶುಸಂಗೋಪನೆಯನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡಲು ಯತ್ನಿಸಬೇಕು.
- 1976 ರಲ್ಲಿ ತರಲಾದ 42 ನೇ ತಿದ್ದುಪಡಿಯಂತೆ ಸೇರಿಸಲಾದ 48(A) ವಿಧಿಯಂತೆ ರಾಜ್ಯವು ಪರಿಸರ ರಕ್ಷಣೆ ಹಾಗೂ ಸುಧಾರಣೆಗೆ ಪ್ರಯತ್ನಿಸಬೇಕು. ಅದೇ ರೀತಿ ಅರಣ್ಯ ಹಾಗೂ ಪರಿಸರವನ್ನು ಸಂರಕ್ಷಿಸಬೇಕು.
- ಸಂವಿಧಾನದ 49 ನೇ ವಿಧಿಯಂತೆ ಕಲಾತ್ಮಕ ಅಥವಾ ಚಾರಿತ್ರಿಕ ಪ್ರಾಮುಖ್ಯತೆಯನ್ನು ಹೊಂದಿದ ಸ್ಮಾರಕ, ಸ್ಥಳ ಅಥವಾ ವಸ್ತುವನ್ನು ರಕ್ಷಿಸುವುದು ರಾಜ್ಯದ ಕರ್ತವ್ಯವಾಗಿದೆ.
- ಸಂವಿಧಾನದ 51(A) ವಿಧಿಯಂತೆ ರಾಜ್ಯವು ಅಂತರಾಷ್ಟ್ರೀಯ ಶಾಂತಿ ಹಾಗೂ ಭದ್ರತೆಯನ್ನು ಕಾಪಾಡಬೇಕು.
- ಸಂವಿಧಾನದ 51(B) ವಿಧಿಯ ಪ್ರಕಾರ ರಾಜ್ಯವು ಜಗತ್ತಿನ ಇತರೇ ದೇಶಗಳೊಂದಿಗೆ ಗೌರವಯುತವಾದ ಸಂಬಂಧವನ್ನು ಹೊಂದಿರಬೇಕು.
- ಸಂವಿಧಾನದ 51(C) ವಿಧಿಯಂತೆ ರಾಜ್ಯವು ಅಂತರಾಷ್ಟ್ರೀಯ ಕಾನೂನು ಹಾಗೂ ಒಪ್ಪಂದಗಳನ್ನು ಗೌರವಿಸಬೇಕು.
- ಸಂವಿಧಾನದ 51(D) ವಿಧಿಯ ಪ್ರಕಾರ ರಾಜ್ಯವು ಅಂತರಾಷ್ಟ್ರೀಯ ವಿವಾದಗಳನ್ನು ಶಾಂತಿಯುತ ಮಾತುಕತೆಗಳ ಮೂಲಕ ಬಗೆಹರಿಸಬೇಕು.
ಉಪಸಂಹಾರ
ರಾಜ್ಯ ನಿರ್ದೇಶಕ ತತ್ವಗಳು ಭಾರತೀಯ ಸಂವಿಧಾನದ ಆತ್ಮಸ್ವರೂಪವಾಗಿವೆ. ಇವು ಕಾನೂನಾತ್ಮಕವಾಗಿ ಜಾರಿಗೆ ಬಾರದಿದ್ದರೂ ನೈತಿಕವಾಗಿ ಸರ್ಕಾರಗಳಿಗೆ ಬದ್ಧತೆಯನ್ನು ವಿಧಿಸುತ್ತವೆ. ಸಮಾಜವಾದಿ, ಗಾಂಧೀವಾದಿ ಮತ್ತು ಉದಾರ ತತ್ವಗಳ ಸಮನ್ವಯವೇ ಇವುಗಳ ವೈಶಿಷ್ಟ್ಯ. ಈ ತತ್ವಗಳ ಸಮರ್ಪಕ ಜಾರಿಗೆ ಬಂದಾಗಲೇ ನಿಜವಾದ ಕಲ್ಯಾಣರಾಜ್ಯ ನಿರ್ಮಾಣ ಸಾಧ್ಯ.