ರಜಪೂತರ ಕಾಲದ ಸಾಮಾಜಿಕ ವ್ಯವಸ್ಥೆ ಚಾತುರ್ವಣ್ರ ಪದ್ಧತಿಯ ಅಡಿಪಾಯದ ಮೇಲೆ ನಿರ್ಮಾಣವಾಗಿತ್ತು. ಇದರಿಂದ ಜಾತಿ ಪದ್ಧತಿ ಆ ಕಾಲದಲ್ಲಿಯೂ ಅತ್ಯಂತ ಕಠಿಣವಾಗಿತ್ತು ಎಂಬುದನ್ನು ತಿಳಿಯಬಹುದು. ಮುಸ್ಲಿಂ ಬರಹಗಾರರ ಪ್ರಕಾರ ರಜಪೂತರ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ವರ್ಣಗಳೆಂದರೆ ಸಬಕುಪಿರಿಯಾ (ಕ್ಷತ್ರಿಯ) ಬ್ರಹ್ಮ (ಬ್ರಾಹ್ಮಣ) ಬೈಸೂರಿಯಾ (ವೈಶ್ಯ) ಸುದರಿಯಾ (ಶೂದ್ರ). ಈ ನಾಲ್ಕು ವರ್ಣಗಳ ಜೊತೆಗೆ ಅನೇಕ ಉಪಜಾತಿಗಳು ಸಹ ಪ್ರಚಲಿತದಲ್ಲಿದ್ದವು.

ಬ್ರಾಹ್ಮಣರು ರಜಪೂತರ ಕಾಲದಲ್ಲಿ ಸಾಮಾಜಿಕವಾಗಿ ಮೇರು ಸ್ಥಾನದಲ್ಲಿ ಇದ್ದರು. ಉಳಿದ ವರ್ಗದ ಜನ ಇವರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಇವರು ಮಂತ್ರಿಗಳಾಗಿ, ಪರೋಹಿತರಾಗಿ, ಸಲಹೆಗಾರರಾಗಿ, ತತ್ವಜ್ಞಾನಿಗಳಾಗಿ, ಉಪಾಧ್ಯಾಯರಾಗಿ ಸೇವೆಸಲ್ಲಿಸುತ್ತಿದ್ದರು. ಬ್ರಾಹ್ಮಣರಲ್ಲಿ ದೀಕ್ಷಿತ್, ಪಾಂಡೆ, ಶರ್ಮ, ಚತುರ್ವೇದಿ, ಪಾಠಕ್, ತ್ರಿವೇದಿ, ತ್ರಿಪಾಠಿ, ಸರಯೂಪರಿ, ಸರಸ್ವತ ಹಾಗೂ ಕನ್ಯಾಕುಬ್ಬ ಎಂಬ ಪಂಗಡಗಳು ಇದ್ದವು. ಇವರಿಗೆ ಮರಣದಂಡನೆಯಿಂದ ವಿನಾಯಿತಿ ಇತ್ತು. ಯಜ್ಞಯಗಾದಿಗಳನ್ನು ಇವರೇ ನೆರವೇರಿಸುತ್ತಿದ್ದರು. ಕ್ಷತ್ರಿಯರು ರಜಪೂತರ ಕಾಲದಲ್ಲಿ ಆಳುವ ವರ್ಗಕ್ಕೆ ಸೇರಿತ್ತು. ಆಡಳಿತಗಾರರು ಮತ್ತು ಸೈನಿಕರು ಕ್ಷತ್ರಿಯರೇ ಆಗಿರುತ್ತಿದ್ದರು. ರಾಜ್ಯದ ರಕ್ಷಣೆ ಹಾಗೂ ಪ್ರಜಾರಕ್ಷಣೆ ಕ್ಷತ್ರಿಯರಿಗೆ ಸೇರಿದ್ದಿತು. ಇವರು ಸೂರ್ಯ ಹಾಗೂ ಚಂದ್ರವಂಶಕ್ಕೆ ಸೇರಿದುದರಿಂದ ಇವರು ಪರಿಶುದ್ಧವಾಗಿದ್ದರು. ಬ್ರಾಹ್ಮಣರೂ ಸಹ ಕ್ಷತ್ರಿಯರ ಮುಂದೆ ತಲೆಬಾಗಬೇಕಿತ್ತು. ಕ್ಷತ್ರಿಯರು ತಮ್ಮ ಬಹುಕಾಲವನ್ನು ಯುದ್ಧದಲ್ಲಿಯೇ ಕಳೆಯಬೇಕಿತ್ತು. ವೈಶ್ಯರು ವ್ಯಾಪಾರ ಹಾಗೂ ವಾಣಿಜ್ಯ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವರ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿತ್ತು.

ಇವರಿಗೂ ವೇದಾಧ್ಯಯನವನ್ನು ನಿರಾಕರಿಸಲಾಗಿತ್ತು. ಶೂದ್ರರು ವ್ಯವಸಾಯ ಹಾಗೂ ಕುಶಲಕಲೆಗಳಲ್ಲಿ ನಿರತರಾಗುವ ಮೂಲಕ ಈ ಮೇಲಿನ ಮೂರು ವರ್ಗಗಳ ಜನರ ಸೇವೆಯನ್ನು ಮಾಡಬೇಕಿತ್ತು. ಇನ್ನು ಅಸ್ಪೃಶ್ಯರು ಊರ ಹೊರಗೆ ವಾಸಿಸಬೇಕಿತ್ತು. ಇವರ ಬದುಕು ಸಹ ದುಸ್ತರವಾಗಿತ್ತು.

ಈ ಮೇಲಿನ ವರ್ಗಗಳ ಜೊತೆಗೆ ರಜಪೂತರ ಕಾಲದಲ್ಲಿ ಅನೇಕ ಜಾತಿ ಹಾಗೂ ಉಪಜಾತಿಗಳಿದ್ದವು. ಉದಾ. ನೇಕಾರರು, ಅಕ್ಕಸಾಲಿಗ, ಗಾಣಿಗ, ಗೌಳಿಗ, ಬಡಗಿ ಇತ್ಯಾದಿ. ಇವುಗಳ ಜೊತೆಗೆ ‘ಕಾಯಸ್ತ’ ಎಂಬ ವರ್ಗವೊಂದು ಹುಟ್ಟಿಕೊಂಡಿತು. ಕವಿಗಳನ್ನು ಈ ಕಾಲದಲ್ಲಿ ‘ಭಟ ಅಥವಾ ಚರಣ್’ ಎಂದು ಕರೆಯಲಾಯಿತು. ಇವರು ಯಾವಾಗಲೂ ರಾಜರನ್ನು ಹೊಗಳಿ ಬರೆಯಬೇಕಿತ್ತು. ಕೆಲವು ಸಲ ಇವರು ದೂತಾವಾಸದ ಕೆಲಸವನ್ನು ನಿರ್ವಹಿಸಬೇಕಿತ್ತು. ರಜಪೂತ ವರ್ಗದಲ್ಲಿನ ಹುಟ್ಟು ಸಾವು ಇತ್ಯಾದಿಗಳ ಮಾಹಿತಿಯನ್ನು ದಾಖಲು ಮಾಡಿಕೊಳ್ಳುವ ಕಾಯಕ ಇವರದಾಗಿತ್ತು.

ಸ್ತ್ರೀಯರ ಸ್ಥಾನಮಾನ:

ರಜಪೂತ ಸಮಾಜದಲ್ಲಿ ಮಹಿಳೆಯರು ಹೆಚ್ಚು ಸ್ವಾತಂತ್ರ್ಯವನ್ನು ಹೊಂದಿದ್ದರು. ಇವರು ರಜಪೂತ ಸಂಸ್ಕೃತಿಯ ಉನ್ನತ ಆಧಾರ ಸ್ತಂಭಗಳಾಗಿದ್ದರು.

ಸ್ತ್ರೀಯರಿಗೆ ಸಮಾಜದಲ್ಲಿ ಗೌರವಯುತವಾದ ಸ್ಥಾನಮಾನಗಳನ್ನು ನೀಡಲಾಗಿತ್ತು. ಸ್ತ್ರೀಯರಲ್ಲಿ ಅಪಾರವಾದ ದೇಶಭಕ್ತಿ ಇದ್ದಿತು. ಪುರುಷರಂತೆ ಸ್ತ್ರೀಯರಿಗೂ ವಿದ್ಯಾಭ್ಯಾಸದ ಸೌಕರ್ಯಗಳನ್ನು ನೀಡಲಾಗಿತ್ತು. ಹೀಗಾಗಿ ಅವರು ವಿದ್ಯಾವಂತರಾಗಿದ್ದಲ್ಲದೆ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿಯೂ ಕ್ರಿಯಾಶೀಲರಾಗಿ ಭಾಗವಹಿಸುತ್ತಿದ್ದರು. ವಿದ್ಯೆಯ ಜೊತೆಗೆ ಸಂಗೀತ, ನೃತ್ಯ, ಕಲೆ ಹಾಗೂ ಲಲಿತ ಕಲೆಗಳಲ್ಲಿ ಪರಿಣತಿಯನ್ನು ಪಡೆದಿದ್ದರು. ರಜಪೂತರ ಕಾಲದಲ್ಲಿ ಆನೇಕ ಸ್ತ್ರೀಯರು ಕವಿಗಳಾಗಿ ಸಾಹಿತಿಗಳಾಗಿ ಹಾಗು ಬರಹಗಾರ್ತಿಯರಾಗಿ ತಮ್ಮನ್ನು ಗುರುತಿಸಿಕೊಂಡಿದ್ದರು. ಅಂತವರಲ್ಲಿ ಪ್ರಮುಖರಾದವರೆಂದರೆ, ಇಂದುಲೇಖಾ, ಮರುಳಾ, ಶೀಲ, ಪದ್ಮಶೀಲ, ಸುಭದ್ರ, ಲಕ್ಷ್ಮಿ, ವಿಜ್ಜಿಕಾ, ಮೋರಿಕಾ, ಮಪಲ್ಯ, ಮದಾಲಸ ಮುಂತಾದವರು. ರಾಜಶೇಖರನ ಪತ್ನಿ ‘ಆವಂತಿಸುಂದರಿ’ ಬಹುದೊಡ್ಡ ಸಂಸ್ಕೃತ ಪಂಡಿತೆಯಾಗಿದ್ದಳು. ಸೋಲಂಕಿ ದೊರೆ ವಿಕ್ರಮಾದಿತ್ಯನ ಸೋದರಿ ಅಕ್ಕಾದೇವಿಯು ಆಡಳಿತದಲ್ಲಿ ನಿಪುಣೆಯಾಗಿದ್ದು, ನಾಲ್ಕು ಪ್ರಾಂತಗಳ ಆಡಳಿತವನ್ನು ನಿರ್ವಹಿಸಿದ್ದಳು. ಸ್ವತಃ ತಾನೇ ಯುದ್ಧ ಭೂಮಿಗೆ ತೆರಳಿ ಯುದ್ಧದ ನಾಯಕತ್ವವನ್ನು ವಹಿಸುತ್ತಿದ್ದಳು. ಅಬ್ದುರಿಸಿ ಬರೆದಂತೆ ಅನೇಕ ಸ್ತ್ರೀಯರು ಸಂಸ್ಕೃತ ಭಾಷೆಯನ್ನು ಓದಲು ಹಾಗೂ ಬರೆಯಲು ಕಲಿತಿದ್ದರು. ಅದು ಅಲ್ಲದೆ ನೃತ್ಯ, ಸಂಗೀತ ಹಾಗೂ ಭಾವಚಿತ್ರ ರಚನೆಯಲ್ಲಿ ಪ್ರವೀಣರಾಗಿದ್ದರು. ಪುರುಷರ ಜೊತೆ ಅನೇಕ ಸಲ ವಾದ ಮಾಡಿ ಅವರನ್ನು ಸೋಲಿಸುತ್ತಿದ್ದರು. ರಜಪೂತ ಹೆಣ್ಣುಮಕ್ಕಳು ತಮ್ಮ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಹೊಂದಿದ್ದರು.

ವಿದೇಶಿಯರ ದಾಳಿ ಹೆಚ್ಚಾದಂತೆ ರಜಪೂತ ಸಮಾಜದಲ್ಲಿ ಅನೇಕ ಸಾಮಾಜಿಕ ಪಿಡುಗುಗಳು ಕಾಣಿಸಿಕೊಂಡವು. ಮುಸಲ್ಮಾನರ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ರಜಪೂತ ಮಹಿಳೆಯರು ಸಾಮೂಹಿಕ ಅಗ್ನಿ ಪ್ರವೇಶ ಅಥವಾ ಜೋಹಾರ್ ಪದ್ಧತಿಯನ್ನು ಅನುಸರಿಸಲಾರಂಭಿಸಿದರು. ಗಂಡನ ಸಾವಿನ ನಂತರ ವಿಧವತ್ವವನ್ನು ತಪ್ಪಿಸಿಕೊಳ್ಳಲು ಅವಳು ಗಂಡನ ಚಿತೆಯಲ್ಲಿ ಅಗ್ನಿಪ್ರವೇಶ ಮಾಡುವ ಮೂಲಕ ಸತಿ ಪದ್ಧತಿಗೆ ಚಾಲನೆ ನೀಡಿದಳು. ಆ ಕಾಲದಲ್ಲಿ ಬಾಲ್ಯವಿವಾಹ ಜಾರಿಯಲ್ಲಿ ಇರಲಿಲ್ಲ. ಆದರೆ, ಮುಸಲ್ಮಾನರ ದಾಳಿಯ ಪರಿಣಾಮವಾಗಿ ಬಾಲ್ಯ ವಿವಾಹ ಪದ್ಧತಿಯೂ ಜಾರಿಗೆ ಬಂದಿತು. ಹೆಣ್ಣು ಮಗುವಿನ ಹತ್ಯೆಯಂತಹ ಪದ್ಧತಿ ಜಾರಿಗೆ ಬಂದಿತು. ವಿಧವಾ ವಿವಾಹ ಅಷ್ಟೊಂದು ಪ್ರಚಲಿತವಾಗಿರಲಿಲ್ಲ. ವಿಧವೆಯರಿಗೆ ಸಮಾಜದಲ್ಲಿ ಯಾವುದೇ ರೀತಿಯ ಸ್ಥಾನಮಾನವನ್ನು ನೀಡಿರಲಿಲ್ಲ.

ಜೆನಾನಾದಲ್ಲಿರುವ ರಜಪೂತ ಸ್ತ್ರೀ

ಈ ಚಿತ್ರವು ರಾಜಮಹಲಿನ ಜೆನಾನಾದೊಳಗಿನ ಪೂತ ಸ್ತ್ರೀಯ ಖಾಸಗಿ ಜೀವನವನ್ನು ಚಿತ್ರಿಸುತ್ತದೆ. ಶಾಂತ ಹಾಗೂ ಸಂಯಮಿತ ಭಂಗಿಯಲ್ಲಿ ಕುಳಿತಿರುವ ಆಕೆಯು ಜಪುತ ವರ್ಗದ ಸಂಸ್ಕೃತಿಯಲ್ಲಿ ಮೌಲ್ಯವಾದ ಗೌರವ, ನಿಯಂತ್ರಣ ಮತ್ತು ಆಂತರಿಕ ಬಲವನ್ನು ಪ್ರತಿಬಿಂಬಿಸುತ್ತದೆ. ಅಲಂಕಾರಿಕ ವಸ್ತ್ರಗಳು, ಪಾರದರ್ಶಕ ಒಡವೆ ಮತ್ತು ಸೊಗಸಾದ ಆಭರಣಗಳು ಆಕೆಯ ರಾಜಕೀಯ ಸ್ಥಾನಮಾನ ಹಾಗೂ ಪರ್ದಾ ಪದ್ಧತಿಯನ್ನು ಸೂಚಿಸುತ್ತವೆ. ಹಿನ್ನಲೆಯಲ್ಲಿ ಕಾಣುವ ಸೂಕ್ಷ್ಮ ಕೆತ್ತನೆಯ ಕಮಾನು ಪೂತ ವಾಸ್ತುಶಿಲ್ಪದ ವೈಭವವನ್ನು ತೋರಿಸುತ್ತದೆ. ಸುಗಂಧ ದ್ರವ್ಯಗಳು, ಅಲಂಕಾರ ಸಾಮಗ್ರಿಗಳು ಮತ್ತು ಹುಕ್ಕಾ ಸಂಸ್ಕೃತಿಯ ದಿನಚರಿಯನ್ನು ಸೂಚಿಸುತ್ತವೆ. ಹಿನ್ನಲೆಯಲ್ಲಿ ಇರುವ ಸಹಾಯಕಿ ಮಹಿಳೆ ಜೆನಾನಾದೊಳಗಿನ ಗೌಪ್ಯತೆ ಮತ್ತು ಸಹವಾಸವನ್ನು ಒತ್ತಿಹೇಳುತ್ತದೆ.