ಕ್ರಿ.ಶ. 1453ರಲ್ಲಿ ಕಾನ್ಸ್ಟಾಂಟಿನೋಪಲ್ ನಗರವು ತುರ್ಕಿಯ ವಶವಾದ ನಂತರ ಭಾರತ ಮುಂತಾದ ರಾಷ್ಟ್ರಗಳಿಗೆ ನೂತನ ಜಲಮಾರ್ಗವನ್ನು ಕಂಡುಹಿಡಿಯುವುದು ಐರೋಪ್ಯ ರಾಷ್ಟ್ರಗಳಿಗೆ ಅನಿವಾರ್ಯವಾಯಿತು. ಈ ರೀತಿಯ ಭೌಗೋಳಿಕ ಸಂಶೋಧನೆಗಳ ಕೀರ್ತಿ ಪೋರ್ಚುಗಲ್ಲಿಗೆ ಸಲ್ಲಬೇಕು. “ನಾವಿಕ ಅರಸು” ಎಂದು ಪ್ರಸಿದ್ದಿ ಹೊಂದಿದ್ದ ಹೆನ್ರಿಯು ಭಾರತಕ್ಕೆ ಸಮುದ್ರಮಾರ್ಗವನ್ನು ಕಂಡುಹಿಡಿಯಲು ಕೈಗೊಂಡ ಸಾಹಸ ಕೃತ್ಯಗಳಿಗೆ ಪ್ರೋತ್ಸಾಹ ನೀಡಿದನು. ಕ್ರಿ.ಶ. 1487ರಲ್ಲಿ ಬಾರ್ಥಲೋಮಿಯ ಡಯಾಸ್ ಎಂಬ ನಾವಿಕನು ಗುಡ್ಹೋಪ್ ಭೂಶಿರವನ್ನು ಸುತ್ತು ಹಾಕಿದನು. ಹತ್ತು ವರ್ಷಗಳ ನಂತರ ಮೂರು ಚಿಕ್ಕ ಹಡಗುಗಳೊಂದಿಗೆ ಡಯಾಸನ ಮಾರ್ಗವನ್ನು ಅನುಸರಿಸಿದ ವಾಸ್ಕೋಡಿಗಾಮ ಕ್ರಿ.ಶ. 1498 ಮೇ 17 ರಂದು ಭಾರತದ ಪಶ್ಚಿಮ ಕರಾವಳಿಯಲ್ಲಿನ ಕಲ್ಲಿಕೋಟೆಯನ್ನು ತಲುಪಿದನು. ಈ ಘಟನೆ ಚರಿತ್ರೆಯ ದಿಕ್ಕನ್ನೇ ಬದಲಾಯಿಸಿತು. ಕಲ್ಲಿಕೋಟೆಯ ದೊರೆ ಜಾಮೋರಿನ್ನಿಂದ ವಾಸ್ಕೋಡಿಗಾಮನಿಗೆ ಸಿಕ್ಕ ಸ್ವಾಗತವು ಪ್ರೋತ್ಸಾಹದಾಯಕವಾಗಿತ್ತು. ಈ ಭೌಗೋಳಿಕ ಸಂಶೋಧನೆಯ ಲಾಭವನ್ನು ಮೊದಲು ಪೋರ್ಚುಗೀಸರು ಅನಂತರ ಡಚ್, ಫ್ರೆಂಚ್ ಮತ್ತು ಇಂಗ್ಲೀಷರು ಪಡೆದರು.
ಪೋರ್ಚುಗೀಸರು
ಕ್ರಿ.ಶ. 1502 ರಲ್ಲಿ ವಾಸ್ಕೋಡಿಗಾಮನು ದ್ವಿತೀಯ ಬಾರಿಗೆ ಭಾರತಕ್ಕೆ ಬಂದನು. ಈತ ಕೊಚ್ಚಿನ್ಲ್ಲಿ ವ್ಯಾಪಾರ ಕೇಂದ್ರವನ್ನು ಸ್ಥಾಪಿಸಿ ಅದರ ರಕ್ಷಣೆಗೆ ಸಣ್ಣ ನೌಕಾಪಡೆಯನ್ನು ಬಿಟ್ಟು ಸ್ವದೇಶಕ್ಕೆ ಮರಳಿದನು. ಈತ ಸ್ವದೇಶಕ್ಕೆ ಮರಳಿದ ನಂತರ ಪೋರ್ಚುಗೀಸರು ಕಲ್ಲಿಕೋಟೆ ಮತ್ತು ಕಣ್ಣನೂರುಗಳಲ್ಲಿ ವ್ಯಾಪಾರ ಕೋಠಿಗಳನ್ನು ಸ್ಥಾಪಿಸಿದರು. ಕ್ರಿ.ಶ. 1500ರಲ್ಲಿ ಕೆಬ್ರಾಲ್ ಎಂಬಾತನು 13 ಹಡಗುಗಳನ್ನೊಳಗೊಂಡಿದ್ದ ನೌಕಾಪಡೆಯ ಸಮೇತ ಭಾರತಕ್ಕೆ ಆಗಮಿಸಿದನು. ಪೋರ್ಚುಗೀಸರು ದುರಾಸೆಯಿಂದ ಅರಬ್ ಮುಂತಾದ ವಿದೇಶೀಯರ ವ್ಯಾಪಾರಕ್ಕೆ ಧಕ್ಕೆ ತಂದರು. ತತ್ಪರಿಣಾಮವಾಗಿ ಕೊಚ್ಚಿನ್ ದೊರೆ ಜಾಮೋರಿನ್ನೊಂದಿಗೆ ಘರ್ಷಣೆಯಾಯಿತು.
ಫ್ರಾನ್ಸಿಸ್ಕೋಡಿ ಅಲ್ಮೀಡ : ಭಾರತದಲ್ಲಿ ಪೋರ್ಚುಗೀಸರ ಆಸ್ತಿಪಾಸ್ತಿಗಳ ರಕ್ಷಣೆಗಾಗಿ ಪೋರ್ಚುಗಲ್ ಸರ್ಕಾರವು ಫ್ರಾನ್ಸಿಸ್ಕೋ ಡಿ ಅಲ್ಮೀಡ ಎಂಬುವನನ್ನು ತನ್ನ ಪ್ರಥಮ ಗೌರ್ನರ್ ಆಗಿ ನೇಮಿಸಿತು. ಈತ ಅಂಜದೀಪ, ಕಣ್ಣಾನೂರು ಮತ್ತು ಕೊಚ್ಚಿನ್ಗಳಲ್ಲಿ ಕೋಟೆಗಳನ್ನು ಕಟ್ಟಿಸಿದನು. ಈತ ಕೊಚ್ಚಿನ್ ಅರಸನನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡನು. ಇವನ ಅವಧಿಯಲ್ಲಿ ಜಾಮೋರಿನ್ನನ ವಿರುದ್ಧ ಹೋರಾಟ ಮುಂದುವರೆಯಿತು. ಡಿಯುವಿನ ಹತ್ತಿರ ಈಜಿಪ್ಟಿನ ಸುಲ್ತಾನನ ನೌಕೆಯನ್ನು ಸೋಲಿಸಿ ವಿಜಯವನ್ನು ಸಂಪಾದಿಸಿದನು. ಇವನು ಸಾಮ್ರಾಜ್ಯ ಸ್ಥಾಪಿಸುವ ಬದಲು ವಾಣಿಜ್ಯ, ವ್ಯಾಪಾರಗಳಿಗಾಗಿ ಸಮುದ್ರದ ಮೇಲೆ ಪರಮಾಧಿಕಾರವನ್ನು ಹೊಂದಿರುವ ʻನೀಲಿಜಲನೀತಿ ಯನ್ನು ಅನುಸರಿಸಿದನು. ಈತನ ಆಳ್ವಿಕೆ ಕ್ರಿ.ಶ. 1509ರಲ್ಲಿ ಅಂತ್ಯಗೊಂಡಿತು.
ಅಲ್ಬುಕರ್ಕ್ (1509-1515) : ಭಾರತದಲ್ಲಿ ಪೋರ್ಚುಗೀಸ್ ವ್ಯವಹಾರಗಳನ್ನು ನೋಡಿಕೊಳ್ಳಲು ಕ್ರಿ.ಶ.1509ರಲ್ಲಿ ಗೌವರ್ನರ್ ಆಗಿ ಅಲ್ಬುಕರ್ಕ್ ಆಗಮಿಸಿದನು. ಈತನ ಕಾಲದಲ್ಲಿ ಪೋರ್ಚುಗೀಸರ ಅಧಿಪತ್ಯ ವಿಶಾಲವಾಗಿ ಬೆಳೆಯಿತು. ಕ್ರಿ.ಶ. 1510ರಲ್ಲಿ ಈತ ಬಿಜಾಪುರದ ಸುಲ್ತಾನನಿಂದ ಗೋವಾವನ್ನು ವಶಪಡಿಸಿಕೊಂಡನು. ಇದನ್ನು ಕೋಟೆಕೊತ್ತಲಗಳಿಂದ ಭದ್ರಪಡಿಸಿ ಪೋರ್ಚುಗೀಸರ ಆಡಳಿತ ಮತ್ತು ವ್ಯಾಪಾರ ಕೇಂದ್ರವನ್ನಾಗಿ ಮಾಡಿದನು. ಕ್ರಿ.ಶ. 1511ರಲ್ಲಿ ಮಲಕ್ಕಾವನ್ನು ವಶಪಡಿಸಿಕೊಂಡನು. ಅಲ್ಲದೆ ಓರ್ಮುಜ್ ಮೇಲೆ ಪೋರ್ಚುಗೀಸರ ಸಾರ್ವಭೌಮತ್ವವನ್ನು ಏರ್ಪಡಿಸಿದನು. ಇವನು ಕ್ರಿ.ಶ. 1515ರಲ್ಲಿ ಮರಣಹೊಂದಿದನು.
ಅಲ್ಬುಕರ್ಕ್ ಭಾರತಕ್ಕೆ ಬಂದ ಪೋರ್ಚುಗೀಸ್ ಅಧಿಕಾರಿಗಳಲ್ಲಿ ಅತ್ಯಂತ ಸಮರ್ಥನಾದವನು. ಈತನನ್ನು ಭಾರತದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ನಿರ್ಮಾಪಕನೆಂದು ಕರೆಯಲಾಗಿದೆ. ಆಡಳಿತದ ಸುವ್ಯವಸ್ಥೆಗಾಗಿ ಇವನು ಹಿಂದೂಗಳ ಸೇವೆಯನ್ನು ಉಪಯೋಗಿಸಿಕೊಂಡನು. ಮುಸ್ಲಿಮರನ್ನು ದ್ವೇಷಿಸುತ್ತಿದ್ದನು. ತನ್ನ ಅಧಿಕಾರ ವ್ಯಾಪ್ತಿಗೆ ಸೇರಿದ ಪ್ರದೇಶದಲ್ಲಿ ಸತಿ ಸಹಗಮನ ಪದ್ಧತಿಯನ್ನು ತೆಗೆದು ಹಾಕಿದನು. ತನ್ನ ದೇಶಿಯರು ಭಾರತೀಯ ಸ್ತ್ರೀಯರನ್ನು ವಿವಾಹವಾಗಲು ಪ್ರೋತ್ಸಾಹಿಸಿದನು.
ಅಲ್ಬುಕರ್ಕನ ಉತ್ತರಾಧಿಕಾರಿಗಳು ಡಿಯು, ಡಾಮನ್, ಸಾಲ್ಸೆಟ್, ಬೇಸಿನ್, ಚೌಲ್, ಬೊಂಬಾಯಿ, ಸಾಂತೋಮ್ ಮತ್ತು ಬಂಗಾಳದ ಹೂಗಳಲ್ಲಿ ವಸಾಹತುಗಳನ್ನು ಸ್ಥಾಪಿಸಿದರು. ಸಿಂಹಳ ದ್ವೀಪವು ಇವರ ವಶವಾಯಿತು. ಕ್ರಿ.ಶ. 16ನೇ ಶತಮಾನದ ಅಂತ್ಯದವರೆಗೂ ಪೋರ್ಚುಗೀಸರ ಪ್ರಾಬಲ್ಯವು ಯಾವುದೇ ತೊಂದರೆ ಇಲ್ಲದೆ ಮುಂದುವರೆಯಿತು. 17ನೇ ಶತಮಾನದಲ್ಲಿ ಇವರ ವಸಾಹತುಗಳು ಒಂದಾದ ಮೇಲೊಂದರಂತೆ ಪೋರ್ಚುಗೀಸರ ಹಿಡಿತಕ್ಕೊಳಪಟ್ಟವು. ತದನಂತರ ಬ್ರಿಟಿಷರು ಇವುಗಳನ್ನು ವಶಪಡಿಸಿಕೊಂಡರು. ಮರಾಠರು ಕ್ರಿ.ಶ. 1739ರಲ್ಲಿ ಸಾಲ್ಸೆಟ್ ಮತ್ತು ಬೇಸಿನ್ಗಳನ್ನು ವಶಪಡಿಸಿಕೊಂಡರು. ಕ್ರಿ.ಶ. 1961ರವರೆಗೆ ಗೋವಾ, ಡಿಯು, ಡಾಮನ್ಗಳು ಪೋರ್ಚುಗೀಸರ ವಶದಲ್ಲಿದ್ದವು.
ಡಚ್ಚರು
ಪೋರ್ಚುಗೀಸರು ಪೌರಾತ್ಯ ರಾಜ್ಯಗಳಲ್ಲಿ ಲಾಭದಾಯಕ ವ್ಯಾಪಾರವನ್ನು ನಡೆಸುತ್ತಿದ್ದುದು ಹಲವು ಯೂರೋಪಿಯನ್ನರ ಗಮನವನ್ನು ಆಕರ್ಷಿಸಿತು. ಈ ರೀತಿ ಪೋರ್ಚುಗೀಸರೊಂದಿಗೆ ವ್ಯಾಪಾರ ಕ್ಷೇತ್ರದಲ್ಲಿ ಪೈಪೋಟಿ ನಡೆಸಲು ಪ್ರಾರಂಭದಲ್ಲಿ ಮುಂದೆ ಬಂದವರು ಡಚ್ಚರು. ಇವರು ಕ್ರಿ.ಶ. 1602ರಲ್ಲಿ ʻʻಡಚ್ ಈಸ್ಟ್ ಇಂಡಿಯಾ ಕಂಪನಿʼʼ ಯನ್ನು ಸ್ಥಾಪಿಸಿಕೊಂಡು ವ್ಯಾಪಾರಕ್ಕಿಳಿದರು. ಇವರು ಸಾಂಬಾರು ಪದಾರ್ಥಗಳಿಗೆ ಪ್ರಖ್ಯಾತವಾಗಿದ್ದ ಈಸ್ಟ್ ಇಂಡೀಸ್ ದ್ವೀಪಗಳತ್ತ ತಮ್ಮ ಗಮನವನ್ನು ಕೇಂದ್ರೀಕರಿಸಿದರು. ಜಕಾರ್ತವನ್ನು ಕ್ರಿ.ಶ. 1619ರಲ್ಲಿ ವಶಪಡಿಸಿಕೊಂಡರು. ಕಾಲಾನಂತರದಲ್ಲಿ ಜಾವಾ, ಸುಮಾತ್ರ, ಬೋರ್ನಿಯಾ ಮತ್ತು ಮಲಕ್ಕಾ ಮುಂತಾದ ಕಡೆಗಳಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸಿದರು. ಕ್ರಿ.ಶ. 1641ರಲ್ಲಿ ಪೋರ್ಚುಗೀಸರಿಂದ ಮಲಕ್ಕಾವನ್ನು ವಶಪಡಿಸಿಕೊಂಡರು. ಅಲ್ಲದೆ 1658ರಲ್ಲಿ ಸಿಲೋನನ್ನು ಪೋರ್ಚುಗೀಸರಿಂದ ವಶಪಡಿಸಿಕೊಂಡರು.
ಮಚಲೀಪಟ್ಟಣವು ಭಾರತದಲ್ಲಿ ಡಚ್ಚರ ಮೊದಲ ವಸಾಹತುವಾಗಿತ್ತು. ಮದ್ರಾಸಿನ ಹತ್ತಿರ ಪುಲಿಕಾಟಿನಲ್ಲಿ ಕ್ರಿ.ಶ. 1601ರಲ್ಲಿ ವಸಾಹತುವನ್ನು ಸ್ಥಾಪಿಸಿದರು. ಕ್ರಿ.ಶ. 1616ರಲ್ಲಿ ಸೂರತ್ನಲ್ಲಿ ವ್ಯಾಪಾರಿ ಮಳಿಗೆಯನ್ನು ಸ್ಥಾಪಿಸಿದರು. ತದನಂತರ ಬ್ರೋಚ್, ಕ್ಯಾಂಬೆ ಮತ್ತು ಅಹಮದಾಬಾದ್ಗಳಲ್ಲಿ ವ್ಯಾಪಾರ ಕೋಠಿಗಳನ್ನು ಸ್ಥಾಪಿಸಿದರು. ಪೂರ್ವದಲ್ಲಿ ಚಿನ್ಸುರಾ, ಕಾಸಿಂ ಬಜಾರ್ ಮತ್ತು ಪಾಟ್ನಾದಲ್ಲಿ ವ್ಯಾಪಾರಿ ನೆಲೆಗಳನ್ನು ಹೊಂದಿದ್ದರು. ದಕ್ಷಿಣದಲ್ಲಿ ನಾಗಪಟ್ಟಣ, ಕೊಚ್ಚಿನ್, ಕಣ್ಣಾನೂರ್ ಮತ್ತು ಕ್ವಿಲಾನ್ನಲ್ಲಿ ವಸಾಹತುಗಳನ್ನು ಸ್ಥಾಪಿಸಿದರು.
ಭಾರತದಲ್ಲಿ ಪೋರ್ಚುಗೀಸರ ಪ್ರಾಬಲ್ಯವನ್ನು ಡಚ್ಚರು ಮುರಿದರು. ಪೋರ್ಚುಗೀಸರಂತೆ ಇವರು ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ ಹೊಂದಿರಲಿಲ್ಲ. ವ್ಯಾಪಾರ ಇವರ ಮುಖ್ಯ ಉದ್ದೇಶವಾಗಿತ್ತು. ಕಾಲಾನಂತರದಲ್ಲಿ ಇವರು ಇಂಗ್ಲೀಷರಿಗೆ ತಮ್ಮ ನೆಲೆಗಳನ್ನು ಬಿಟ್ಟುಕೊಡಬೇಕಾಯಿತು.
ಇಂಗ್ಲೀಷರು
ಭಾರತದಲ್ಲಿ ಪೋರ್ಚುಗೀಸರೊಂದಿಗೆ ವ್ಯಾಪಾರ ಸ್ಪರ್ಧೆಗೆ ಇಳಿದವರಲ್ಲಿ ಇಂಗ್ಲೀಷರು ಪ್ರಮುಖರು. ಕ್ರಿ.ಶ. 1600ರಲ್ಲಿ ಇಂಗ್ಲೆಂಡಿನ ರಾಣಿ ಎಲಿಜಬೆತ್ತಳು ಭಾರತ ಮತ್ತು ಪೌರ್ವಾತ್ಯ ರಾಷ್ಟ್ರಗಳೊಡನೆ ವ್ಯಾಪಾರ ನಡೆಸಲು ಕಂಪನಿಯೊಂದನ್ನು ಸ್ಥಾಪಿಸಲು ಇಂಗ್ಲೆಂಡಿನ ವರ್ತಕರಿಗೆ ಸನ್ನದನ್ನು ನೀಡಿದಳು. ಅದರ ಫಲವಾಗಿ ಕ್ರಿ.ಶ. 1600ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಅಸ್ತಿತ್ವಕ್ಕೆ ಬಂದಿತು. ಇದಕ್ಕೆ ಪೌರ್ವಾತ್ಯ ರಾಷ್ಟ್ರಗಳ ವ್ಯಾಪಾರದ ಮೇಲೆ ಏಕಸ್ವಾಮ್ಯದ ಹಕ್ಕು ದೊರಕಿತು.
ಕ್ರಿ.ಶ.1608ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಭಾರತದಲ್ಲಿ ವ್ಯಾಪಾರದ ಕೋಠಿಗಳನ್ನು ಸ್ಥಾಪಿಸಲು ಮೊಟ್ಟಮೊದಲ ಪ್ರಯತ್ನ ನಡೆಸಿತು. ಕಂಪನಿಯು ಜಹಾಂಗೀರನ ಆಸ್ಥಾನಕ್ಕೆ ಕ್ಯಾಪ್ಟನ್ ಹಾಕಿನ್ಸನನ್ನು ವ್ಯಾಪಾರದ ರಿಯಾಯಿತಿಗಳನ್ನು ಪಡೆದುಕೊಳ್ಳಲು ಕಳುಹಿಸಿತು. ಸೂರತ್ ಪಟ್ಟಣದ ವ್ಯಾಪಾರಗಾರರ ವಿರೋಧ ಮತ್ತು ಪೋರ್ಚುಗೀಸರ ನಡವಳಿಕೆಗಳಿಂದಾಗಿ ಇಂಗ್ಲೀಷ್ ಕಂಪನಿಗೆ ಹೆಚ್ಚಿನ ಪ್ರಯೋಜನವಾಗಲಿಲ್ಲ. ಕ್ರಿ.ಶ.1613ರಲ್ಲಿ ಜಹಾಂಗೀರನು ಸೂರತ್ ಪಟ್ಟಣದಲ್ಲಿ ಕಂಪನಿಗೆ ವ್ಯಾಪಾರ ಕೋಠಿ ನಿರ್ಮಿಸಲು ಅನುಮತಿ ನೀಡಿದನು. ನಂತರ ಕಂಪನಿಯು ಹೆಚ್ಚಿನ ರಿಯಾಯಿತಿಗಳನ್ನು ದೊರಕಿಸಿಕೊಳ್ಳುವ ಉದ್ದೇಶದಿಂದಾಗಿ ಇಂಗ್ಲೆಂಡಿನ ಅರಸ ಒಂದನೇ ಜೇಮ್ಸ್ನ ಅಧಿಕೃತ ರಾಯಭಾರಿಯಾದ ಸರ್ ಥಾಮಸ್ರೋನನ್ನು ಜಹಾಂಗೀರನ ಆಸ್ಥಾನಕ್ಕೆ ಕಳುಹಿಸಿಕೊಟ್ಟಿತು. ಇವನು ಕ್ರಿ.ಶ. 1615ರಲ್ಲಿ ತನ್ನ ರಾಯಭಾರದ ಮೂಲಕ ಜಹಾಂಗೀರನಿಂದ ಆಗ್ರಾ, ಆಹ್ಮದಾಬಾದ್ ಮತ್ತು ಬೋಚ್ಗಳಲ್ಲಿ ವ್ಯಾಪಾರ ಕೋಠಿಗಳನ್ನು ಸ್ಥಾಪಿಸಲು ಅನುಮತಿ ಪಡೆದುಕೊಂಡನು. ಇಂಗ್ಲೆಂಡಿನ ಅರಸ 2 ನೇ ಚಾರ್ಲ್ಸ್ ಪೋರ್ಚ್ಗಲ್ ರಾಣಿ ಕ್ಯಾಥರಿನ್ಳನ್ನು ಮದುವೆಯಾಗಿದ್ದರಿಂದ ಬಳುವಳಿಯಾಗಿ ಬಂದಿದ್ದ ಬೊಂಬಾಯಿಯನ್ನು ಕಂಪನಿಗೆ ವರ್ಗಾಯಿಸಿದನು. ಕಾಲಾನಂತರದಲ್ಲಿ ಬೊಂಬಾಯಿ ಬ್ರಿಟಿಷರ ಸಂಪದ್ಭರಿತ ವ್ಯಾಪಾರ ಕೇಂದ್ರ ಮತ್ತು ಪ್ರಮುಖ ರೇವುಪಟ್ಟಣವಾಗಿ ಬೆಳೆಯಿತು.
ದಕ್ಷಿಣದಲ್ಲಿ ಇಂಗ್ಲೀಷ್ ಕಂಪನಿಯು ಮದ್ರಾಸ್ ಮತ್ತು ಮಚಲೀಪಟ್ಟಣಗಳಲ್ಲಿ ವ್ಯಾಪಾರದ ಕೋಠಿಗಳನ್ನು ಸ್ಥಾಪಿಸಿತು. ನಂತರ ಬಂಗಾಳದಲ್ಲಿ ತಮ್ಮ ಚಟುವಟಿಕೆಗಳನ್ನು ವಿಸ್ತರಿಸಿ, ಹೂಗ್ಲಿ, ಹರಿಹರಪುರ, ಪಾಟ್ನ ಮತ್ತು ಕಾಸಿಂಬಜಾರ್ಗಳಲ್ಲಿ ವ್ಯಾಪಾರ ಕೇಂದ್ರಗಳನ್ನು ಸ್ಥಾಪಿಸಿದರು. ಈ ರೀತಿ ಇಂಗ್ಲೀಷರು ಹಂತ ಹಂತವಾಗಿ ಭಾರತದಲ್ಲಿ ವ್ಯಾಪಾರದ ಹಿಡಿತವನ್ನು ಸಾಧಿಸತೊಡಗಿದರು. ಈ ನಡುವೆ ಭಾರತದಲ್ಲಿನ ಗೊಂದಲ, ಅಸ್ಥಿರತೆ ಮತ್ತು ಹದಗೆಟ್ಟ ರಾಜಕೀಯ ಪರಿಸ್ಥಿತಿಯ ಸುಸಂದರ್ಭದ ಸದುಪಯೋಗವನ್ನು ಪಡೆದುಕೊಂಡು ರಾಜಕೀಯ ಅಧಿಕಾರವನ್ನು ಸ್ಥಾಪಿಸಲು ಪ್ರಯತ್ನಿಸಿದರು.
ಫ್ರೆಂಚರು
ಯುರೋಪಿನ ಹಲವಾರು ರಾಷ್ಟ್ರಗಳು ಭಾರತದೊಂದಿಗೆ ಲಾಭದಾಯಕವಾದ ವಾಣಿಜ್ಯ ಸಂಪರ್ಕವನ್ನು ಏರ್ಪಡಿಸುವಲ್ಲಿ ಪಡೆದ ಯಶಸ್ಸಿನಿಂದ ಫ್ರೆಂಚರೂ ಪ್ರಭಾವಿತರಾದರು. ಕ್ರಿ.ಶ.1664ರಲ್ಲಿ 14ನೇ ಲೂಯಿಯ ಅರ್ಥಮಂತ್ರಿ ಕೋಲ್ಬರ್ಟ್ನು ನೀಡಿದ ಪ್ರೋತ್ಸಾಹದಿಂದ ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಅಸ್ತಿತ್ವಕ್ಕೆ ಬಂದಿತು. ಸ್ವಲ್ಪ ಕಾಲದಲ್ಲಿಯೇ ಫ್ರೆಂಚರು ಭಾರತದಲ್ಲಿ ಹಲವು ವ್ಯಾಪಾರ ಕೇಂದ್ರಗಳನ್ನು ಸ್ಥಾಪಿಸಿದರು. ಇವುಗಳಲ್ಲಿ ಮುಖ್ಯವಾದವುಗಳು ಸೂರತ್, ಮಚಲೀಪಟ್ಟಣ, ಮಾಹೆ, ಕಾರೈಕಲ್, ಪಾಂಡಿಚೇರಿ ಮತ್ತು ಚಂದ್ರನಾಗೂರು. ಫ್ರೆಂಚರ ಪ್ರಮುಖ ವಾಣಿಜ್ಯ ರಾಜಕೀಯ ಕೇಂದ್ರ ಪಾಂಡಿಚೇರಿ. ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯೂ ಸಹ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಂತೆ ಭಾರತದಲ್ಲಿ ಮೊದಲಿಗೆ ವ್ಯಾಪಾರದಲ್ಲಿ ಮಾತ್ರ ಆಸಕ್ತಿ ಹೊಂದಿತ್ತು. ಆದರೆ ಕಾಲಾನಂತರದಲ್ಲಿ ಇಲ್ಲಿನ ಪರಿಸ್ಥಿತಿಗೆ ತಕ್ಕಂತೆ ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯ ಉದ್ದೇಶಗಳು ರಾಜಕೀಯ ಉದ್ದೇಶವಾಗಿ ಪರಿವರ್ತಿತವಾದವು. (ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಂತೆ) ಈ ಎರಡು ಕಂಪನಿಗಳಲ್ಲಿದ್ದ ವ್ಯಾಪಾರಿಕ ಸ್ಪರ್ಧೆಯು ಸ್ವಾಭಾವಿಕವಾಗಿ ರಾಜಕೀಯ ವಲಯಕ್ಕೂ ವಿಸ್ತರಿಸಿತು. ಇದರ ಪರಿಣಾಮವೇ ಕ್ರಿ.ಶ. 18ನೇ ಶತಮಾನದಲ್ಲಿ ಬ್ರಿಟಿಷರು ಮತ್ತು ಫ್ರೆಂಚರ ನಡುವೆ ನಡೆದ ತೀವ್ರವಾದ ಹೋರಾಟಗಳು.
ಉಪಸಂಹಾರ
ಯುರೋಪಿಯನ್ನರ ಆಗಮನವು ಭಾರತದ ಇತಿಹಾಸದಲ್ಲಿ ಮಹತ್ವದ ತಿರುವಾಗಿತ್ತು. ಆರಂಭದಲ್ಲಿ ವ್ಯಾಪಾರ ಉದ್ದೇಶದಿಂದ ಬಂದ ಪೋರ್ಚುಗೀಸರು, ಡಚ್ಚರು, ಇಂಗ್ಲೀಷರು ಮತ್ತು ಫ್ರೆಂಚರು ನಂತರ ರಾಜಕೀಯ ಅಧಿಕಾರವನ್ನು ಪಡೆಯಲು ಪ್ರಯತ್ನಿಸಿದರು. ಈ ಸ್ಪರ್ಧೆಯ ಪರಿಣಾಮವಾಗಿ ಭಾರತದಲ್ಲಿ ಯುರೋಪಿಯನ್ ಪ್ರಭಾವ ಹೆಚ್ಚಾಯಿತು ಮತ್ತು ಕೊನೆಗೆ ಬ್ರಿಟಿಷರ ಆಡಳಿತ ಸ್ಥಾಪನೆಯಾಯಿತು.