ಮೊಗಲರು ವಿವಿಧ ಮೂಲಗಳಿಂದ ಆರ್ಥಿಕ ಆದಾಯಗಳನ್ನು ಪಡೆಯುತ್ತಿದ್ದರು. ಭೂಕಂದಾಯ, ತೆರಿಗೆ, ಗಣಿಗಾರಿಕೆ, ಧಾಳಿ ಮತ್ತು ಕೊಳ್ಳೆಗಳು, ಸೋತ ಅರಸರು ತುಂಬಿಕೊಡುವ ಪರಿಹಾರಧನ, ತಲೆಗಂದಾಯ ಮುಂತಾದವು ಇವರ ಆದಾಯದ ಮೂಲಗಳಾಗಿದ್ದವು. ಇದರಲ್ಲಿ ಭೂಕಂದಾಯ ಪ್ರಮುಖ ಮತ್ತು ಲಾಭದಾಯಕ ಆಗಿತ್ತು. ಶೇರ್‌ಷಾ ತನ್ನ ಕಾಲದಲ್ಲಿ ಉತ್ತಮವಾದ ಕಂದಾಯ ವ್ಯವಸ್ಥೆಯನ್ನು ಜಾರಿಗೆ ತಂದಿದ್ದ. ಆದರೆ ನಂತರ ಕಂದಾಯ ವ್ಯವಸ್ಥೆ ಹದಗೆಟ್ಟಿತು. ಇದರ ಪ್ರಾಮುಖ್ಯತೆ ತಿಳಿದಿದ್ದ ಅಕ್ಬರ್ ಕಂದಾಯ ವ್ಯವಸ್ಥೆಯ ಪುನರ್ ಸಂಘಟನೆಗೆ ಶ್ರಮಿಸಿದ.
ಕ್ರಿ.ಶ.1582 ರಲ್ಲಿ ಅಕ್ಬರನು ತೋದರಮಲ್ಲನನ್ನು ಅರ್ಥಮಂತ್ರಿಯಾಗಿ ನೇಮಿಸಿದ. ತೋದರಮಲ್ಲನು ಜಾರಿಗೆ ತಂದ ಸುಧಾರಣೆಗಳಿಂದ ಸಾಮ್ರಾಜ್ಯಕ್ಕೆ ಆಗಾಧ ಪ್ರಮಾಣದಲ್ಲಿ ಲಾಭ ಉಂಟಾಯಿತು. ಈ ವ್ಯವಸ್ಥೆ ಮೊಗಲರ ಕಾಲದುದ್ದಕ್ಕೂ ಮುಂದುವರೆದವು. ಅದನ್ನು ʻದಹಸಾಲಿ ಪದ್ಧತಿ’ ಎಂದು ಕರೆಯಲಾಯಿತು. ಈ ಪದ್ಧತಿಯ ಬಗ್ಗೆ ಚರಿತ್ರಕಾರರು ವಿವಿಧ ಬಗೆಯ ವಿವರಣೆ ನೀಡಿದ್ದರೂ ಅದರ ಮುಖ್ಯಾಂಶಗಳು ಈ ಕೆಳಗಿನಂತಿವೆ.
- ರಾಜ್ಯದ ಎಲ್ಲಾ ಭೂಮಿಯನ್ನು ವ್ಯವಸ್ಥಿತವಾಗಿ ಅಳತೆ ಮಾಡುವದು. ಇದಕ್ಕಾಗಿ ಸೆಣಬಿನ ಹಗ್ಗಕ್ಕೆ ಬದಲಾಗಿ ಬೊಂಬಿನ: ಗಳವನ್ನು ಬಳಸುವುದು,
- ಈ ರೀತಿ ಅಳತೆ ಮಾಡಿದ ಭೂಮಿಯನ್ನು ‘ಬಿಘ’ ಎಂದು ವಿಭಜಿಸುವುದು. (ಒಂದು ಬಿಘ ಎಂದರೆ 60×60 ಗಜ)
- ಭೂಮಿಯನ್ನು ಅದರ ಮಣ್ಣಿನ ಸಾರಕ್ಕೆ ಅನುಗುಣವಾಗಿ ನಾಲ್ಕು ವರ್ಗಗಳಾಗಿ ವಿಭಜಿಸಲಾಯಿತು. ಅವುಗಳೆಂದರೆ:
ಪೋಲಾಜ್- ಪ್ರತಿವರ್ಷವೂ ವ್ಯವಸಾಯ ಮಾಡಲು ಯೋಗ್ಯವಾದ ಭೂಮಿ.
ಪರೌತಿ- ಮಣ್ಣಿನ ಸಾರ ಮರಳಿ ಪಡೆಯುವುದಕ್ಕಾಗಿ ಬಿಟ್ಟು ಬಿಟ್ಟು ಸಾಗುವಳಿ ಮಾಡುವ ಭೂಮಿ.
ಚಚರ್ – ಮೂರು ಅಥವಾ ನಾಲ್ಕು ವರ್ಷಗಳಲ್ಲಿ ಒಂದು ಬಾರಿ ಉಳುಮೆ ಮಾಡುವ ಭೂಮಿ.
ಬಂಜರು- ಕೃಷಿ ಯೋಗ್ಯವಲ್ಲದ ಭೂಮಿ.
ಈ ಮೇಲಿನ ವರ್ಗಿಕರಣವನ್ನು ಅನುಸರಿಸಿ ಭೂಮಿಯ ಕಂದಾಯವನ್ನು ನಿಗಧಿಪಡಿಸಲಾಗುತ್ತಿತ್ತು.
- ಕೃಷಿಯೋಗ್ಯ ಭೂಮಿಯನ್ನು ಆಳೆದು, ಅದರ ಫಸಲಿನ ಸರಾಸರಿ ವಾರ್ಷಿಕ ಆದಾಯವನ್ನು ತೆರಿಗೆ ನಿರ್ಧಾರಕ್ಕಾಗಿ ಗಣನೆಗೆ ತೆಗೆದುಕೊಳ್ಳಲಾಯಿತು.
- ರೈತ ತನ್ನ ಉತ್ಪಾದನೆಯ ಮೂರನೆ ಒಂದು ಭಾಗವನ್ನು ತೆರಿಗೆಯ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಸಲು ಆಜ್ಞೆ ಮಾಡಲಾಯಿತು.
- ಕೃಷಿ ಮಾಡುವ ಪ್ರದೇಶಕ್ಕೆ ಮಾತ್ರವೇ ರೈತರು ತೆರಿಗೆಯನ್ನು ನೀಡಬೇಕಿತ್ತು. ಈ ವ್ಯವಸ್ಥೆಯನ್ನು ಜಬ್ತಿಪದ್ಧತಿಯೆಂದು ಹೆಸರು.
- ತೆರಿಗೆಯನ್ನು ಹಣ ಅಥವಾ ವಸ್ತುಗಳ ರೂಪದಲ್ಲಿ ಸಲ್ಲಿಸುವ ಸ್ವಾತಂತ್ರ್ಯ ರೈತರಿಗಿತ್ತು.
- ರಾಜ್ಯದ ಅಧಿಕಾರಿಗಳು ಭೂಮಿಯ ವರ್ಗೀಕರಣ, ಅದರ ಹುಟ್ಟುವಳಿ, ಮಾರುಕಟ್ಟೆಯ ಬೆಲೆ ಮುಂತಾದವುಗಳ ಕುರಿತು ವಿವರವಾದ ದಾಖಲೆ ಇಡಬೇಕಾಗಿತ್ತು.
- ಅಕ್ಬರನು ಜಾರಿಗೆ ತಂದ ಪದ್ಧತಿ ರೈತವಾರಿ ಪದ್ಧತಿಯಾಗಿತ್ತು. ಇದರಲ್ಲಿ ರೈತರ ಭೂಮಿಯ ಹಕ್ಕನ್ನು ಮಾನ್ಯಮಾಡಲಾಗಿತ್ತು. ಸರಕಾರ ರೈತರೊಂದಿಗೆ ನೇರವಾಗಿ ವ್ಯವಹರಿಸುವ ಪದ್ಧತಿ ಜಾರಿಗೆ ಬಂದಿತು.
- ರೈತರಿಗೆ ಅವರ ಭೂಮಿ ಮತ್ತು ಕಂದಾಯದ ವಿವರ ನೀಡುವ ಪಟ್ಟಾಗಳನ್ನು ಕೊಡಲಾಗಿತ್ತು.
- ಬರಗಾಲ, ಪ್ರವಾಹ ಇತ್ಯಾದಿ ಪ್ರಕೃತಿಯ ವೈಪರಿತ್ಯಗಳ ಕಾಲದಲ್ಲಿ ರಿಯಾಯಿತಿಗಳನ್ನು ಮತ್ತು ಸಾಲಗಳನ್ನು ರೈತರಿಗೆ ನೀಡಲಾಗುತ್ತಿತ್ತು.
ಅಮಲ್‌ಗುಜಾರ್‌ನು ಅನೇಕ ಅಧೀನ ಅಧಿಕಾರಿಗಳ ಸಹಾಯದಿಂದ ಕಂದಾಯವನ್ನು ಸಂಗ್ರಹಿಸುತ್ತಿದ್ದ. ಗ್ರಾಮದ ಮುಖ್ಯಸ್ಥನಾದ ಮಕದ್ದಂ, ಅಲ್ಲಿನ ಪಟ್ಟಾರೀ ಇವರಲ್ಲದೆ ಕುನುಂಗೋ, ಬಿತಿಕ್ಚೀ, ಪೊತೆದಾರ-ಇವರೆಲ್ಲರ ಸಹಾಯದಿಂದ ಪರಗಣಗಳ ಮುಖ್ಯಸ್ಥ ತೆರಿಗೆ ವಸೂಲಿಮಾಡುತ್ತಿದ್ದ. ತೆರಿಗೆ ಸಂಗ್ರಹಿಸುವ ಕಾಲದಲ್ಲಿ ಅಧಿಕಾರಿಗಳು ರೈತರನ್ನು ಪೀಡಿಸಕೂಡದೆಂಬ ರಾಜಾಜ್ಞೆ ಜಾರಿಯಲ್ಲಿತ್ತು. ಆದರೆ ಗಡಿಪ್ರಾಂತ್ಯಗಳ ಅಧಿಕಾರಿಗಳು ಭ್ರಷ್ಟರಾಗಿ ಜನತೆಯನ್ನು ಕಾಡುತ್ತಿದ್ದರು. ಹಾಗೂ ಅರಸರಿಗೆ ಕೆಟ್ಟ ಹೆಸರನ್ನು ತರುತ್ತಿದ್ದರು. ಷಹಜಹಾನ್ ಮತ್ತು ಔರಂಗಜೇಬರ ಕಾಲದಲ್ಲಿ ಇಂತಹ ಅಧಿಕಾರಿಗಳ ವರ್ತನೆ ಬಯಲಾದಾಗ ಅವರಿಗೆ ಶಿಕ್ಷೆ ಕೊಟ್ಟು ಕೆಲಸದಿಂದ ವಜ ಮಾಡಲಾಯಿತು.
ಉಪಸಂಹಾರ
ಮೊಗಲ್ ಕಾಲದ ಕಂದಾಯ ವ್ಯವಸ್ಥೆ ರಾಜ್ಯದ ಆರ್ಥಿಕ ಬಲವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿತು. ಅಕ್ಬರ್ ಮತ್ತು ರಾಜಾ ತೋದರಮಲ್ಲ ಜಾರಿಗೆ ತಂದ ದಹಸಾಲಿ ಪದ್ಧತಿ ಭೂಮಿಯ ಅಳತೆ, ವರ್ಗೀಕರಣ ಮತ್ತು ತೆರಿಗೆ ಸಂಗ್ರಹಣೆಯನ್ನು ಕ್ರಮಬದ್ಧಗೊಳಿಸಿತು. ಇದರ ಮೂಲಕ ರೈತರ ಹಕ್ಕುಗಳನ್ನು ಮಾನ್ಯಗೊಳಿಸುವ ವ್ಯವಸ್ಥೆಯೂ ರೂಪುಗೊಂಡಿತು ಮತ್ತು ಮೊಗಲ್ ಆಡಳಿತಕ್ಕೆ ಸ್ಥಿರವಾದ ಆದಾಯ ದೊರೆಯಿತು.