ನಾಗರಿಕತೆ ಬೆಳೆದಂತೆಲ್ಲಾ ಹಾಗೂ ಜನಸಂಖ್ಯೆ ಹೆಚ್ಚಳದಿಂದ ಮಾನವನ ಬೇಕು ಬೇಡಗಳು ಹೆಚ್ಚುತ್ತವೆ. ಈ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಆತ ಅರಣ್ಯನಾಶದಂತಹ ಕೃತ್ಯವನ್ನು ಎಸೆಗುತ್ತಾನೆ. ಈ ಕಾರಣದಿಂದ ಪ್ರಾಣಿ ಪಕ್ಷಿಗಳಿಗೆ ತಮಗೆ ಬೇಕಾದ ಆಹಾರ ಸಿಗದಿದ್ದಾಗ ನಗರಗಳಿಗೆ ಲಗ್ಗೆ ಇಡುತ್ತವೆ. ಈ ಕ್ರಿಯೆ ನಿರಂತರವಾಗಿ ನಡೆಯುತ್ತದೆ ಇದನ್ನೇ ಮಾನವ-ವನ್ಯಜೀವಿ ಸಂಘರ್ಷ ಎಂದು ಕರೆಯಲಾಗಿದೆ. ಇದೊಂದು ವಿಚಿತ್ರವಾದ ಘಟನೆ ಎಂದು ಅನಿಸಿದರು ವಾಸ್ತವ ಸಂಗತಿಯೂ ಹೌದು. ವ್ಯವಸಾಯ ಬೆಳೆ ನಾಶ, ಸಾಕುಪ್ರಾಣಿ ಹಾಗೂ ಮಾನವನ ಮೇಲೆ ವನ್ಯಜೀವಿಗಳಿಂದ ಆಕ್ರಮಣ ಸಾಕಷ್ಟು ಪ್ರಮಾಣದಲ್ಲಿ ಸಾವು ನೋವು ಮುಂತಾದ ಘಟನೆಗಳು ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ವರದಿಯಾಗುತ್ತಲೇ ಇರುತ್ತವೆ. ಅದನ್ನು ನಾವು ನೋಡುತ್ತೇವೆ ಹಾಗೂ ಪತ್ರಿಕೆಗಳಲ್ಲಿ ವರದಿಯಾಗುವುದನ್ನು ಓದುತ್ತೇವೆ. ಎಷ್ಟೋ ಸಂದರ್ಭದಲ್ಲಿ ವನ್ಯ ಪ್ರಾಣಿಗಳಿಂದ ಮಾನವನಿಗೆ ಹಾಗೂ ಆತನ ಆಸ್ತಿಪಾಸ್ತಿಗಳಿಗೆ ಹಾನಿ ಉಂಟಾಗುತ್ತದೆ. ಆಗ ಮಾನವ- ವನ್ಯಜೀವಿಗಳ ನಡುವೆ ಒಂದು ರೀತಿ ಸಂಘರ್ಷ ಆರಂಭವಾಗುತ್ತದೆ.

ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾರಣಗಳು:

  1. ಏರುತ್ತಿರುವ ಜನಸಂಖ್ಯೆಯಿಂದ ಅರಣ್ಯ ನಾಶದ ಪ್ರಮಾಣ ಹೆಚ್ಚಾಗಿದೆ. ಹೀಗೆ ಅರಣ್ಯನಾಶದಿಂದ ಅರಣ್ಯವನ್ನೇ ನಂಬಿ ಬದುಕುತ್ತಿದ್ದ ವನ್ಯಜೀವಿಗಳು ಕಂಗಾಲಾಗಿವೆ. ಬೇರೆ ದಾರಿ ಇಲ್ಲದೆ ಅವುಗಳು ಕಾಡನ್ನು ಬಿಟ್ಟು ನಗರಗಳಿಗೆ ಪ್ರವೇಶ ಮಾಡುತ್ತವೆ. ಆಹಾರಕ್ಕಾಗಿ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತವೆ. ಆಗ ಮಾನವ ಮತ್ತು ವನ್ಯಜೀವಿಗಳ ನಡುವೆ ಸಂಘರ್ಷ ಏರ್ಪಡುತ್ತದೆ.
  2. ಬರ, ಕ್ಷಾಮ, ಕಾಡಿಗೆಬೆಂಕಿ ಮುಂತಾದ ಸಂದರ್ಭಗಳಲ್ಲಿ ಕಾಡಿನಲ್ಲಿ ಆಹಾರದ ಕೊರತೆ ಕಂಡುಬಂದಾಗ ಬೇರೆ ಗತಿ ಇಲ್ಲದೆ ವನ್ಯಜೀವಿಗಳು ಹತ್ತಿರದ ಕೃಷಿ ಭೂಮಿಗೆ ದಾಳಿ ಮಾಡಿ ಬೆಳೆಯನ್ನು ಹಾನಿಮಾಡುತ್ತವೆ. ಇದರಿಂದ ನೊಂದ ರೈತನು ಪ್ರಾಣಿಗಳ ಮೇಲೆ ದಾಳಿ ಮಾಡಿ ಅವುಗಳನ್ನು ಸಾಯಿಸುತ್ತಾನೆ.
  3. ಕಾಡಿನ ಮೂಲಕ ಹಾಯ್ದು ಹೋಗುವ ರಸ್ತೆ, ರೈಲು ಮಾರ್ಗ ಹಾಗೂ ವಿದ್ಯುತ್ ಲೈನುಗಳು ಮುಂತಾದವುಗಳು ಅರಣ್ಯವನ್ನು ವಿಭಜಿಸಿದೆ. ಆಗ ವನ್ಯಜೀವಿಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಆಹಾರ ಮತ್ತು ನೀರಿಗಾಗಿ ವಲಸೆ ಹೋಗುವ ಸಂದರ್ಭಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ಏರ್ಪಡುತ್ತದೆ.
  4. ಮಾನವ ವನ್ಯ ಪ್ರಾಣಿಗಳನ್ನು ಕೀಟಲೆ ಮಾಡುವುದು ಮತ್ತು ಅವುಗಳನ್ನು ಕಲ್ಲಿನಿಂದ ಹೊಡೆದು ಗಾಯಗೊಳಿಸುವುದು ಮುಂತಾದ ಸಾಹಸಕ್ಕೆ ಕೈ ಹಾಕಿದಾಗ ರೊಚ್ಚಿಗೆದ್ದ ವನ್ಯ ಜೀವಿಗಳು ಮಾನವನ ಮೇಲೆ ದಾಳಿ ಮಾಡುತ್ತವೆ.
  5. ಕೃಷಿಕರು ಕಾಡು ಪ್ರಾಣಿಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ತಮ್ಮ ಗದ್ದೆಗಳ ಸುತ್ತಲೂ ವಿದ್ಯುತ್ ತಂತಿ ಬೇಲಿಯನ್ನು ಹಾಕುವುದು, ಬಲೆಗಳನ್ನು ಅಳವಡಿಸುವುದು ಹಾಗೂ ಸ್ಫೋಟಗಳನ್ನು ಬಳಸುವುದರಿಂದ ಕಾಡು ಪ್ರಾಣಿಗಳು ಸಾಯುತ್ತವೆ.
  6. ಕಾಡಿನಲ್ಲಿ ಹಲವಾರು ಬಗೆಯ ಕಳೆ ವ್ಯಾಪಕವಾಗಿ ಬೆಳೆದಿದೆ. ಇದರಿಂದ ಹುಲ್ಲಿನ ದೊರೆಯುವಿಕೆ ಕಡಿಮೆಯಾಗಿ ಸಸ್ಯಹಾರಿ ಪ್ರಾಣಿಗಳು ಹತ್ತಿರದ ವ್ಯವಸಾಯ ಪ್ರದೇಶಗಳಿಗೆ ದಾಳಿ ಮಾಡಿ ಬೆಳೆಗಳನ್ನು ನಾಶಗೊಳಿಸುತ್ತವೆ.
  7. ಜನಸಂಖ್ಯೆಯ ಬೆಳವಣಿಗೆಯಿಂದಾಗಿ ಮಾನವನ ವಸತಿ ನಿಲಯಗಳು ಹಾಗೂ ವ್ಯವಸಾಯ ಕ್ಷೇತ್ರಗಳು ಕಾಡಿನ ಅಂಚಿನವರೆಗೆ ವಿಸ್ತರಿಸಿವೆ. ಇದರಿಂದ ವನ್ಯಜೀವಿಗಳು ವ್ಯವಸಾಯ ಪ್ರದೇಶಗಳಿಗೆ ದಾಳಿ ಮಾಡುವುದು ಸಹಜಕ್ರಿಯೆಯಾಗಿದೆ.
  8. ಮೇವಿನ ಕೊರತೆಯ ಜೊತೆಗೆ ನೀರಿನ ಕೊರತೆಯೂ ಸಹ ಇಂದು ಕಂಡುಬರುತ್ತಿದೆ ಕಾಡಿನಲ್ಲಿನ ಜಲ ಮೂಲಗಳೆಲ್ಲ ಬತ್ತಿ ಹೋಗುತ್ತಿವೆ. ಇದರಿಂದ ವನ್ಯಜೀವಿಗಳು ನೀರಿಗಾಗಿ ನಗರ ಪ್ರದೇಶಗಳ ಕಡೆಗೆ ಬರುವುದು ಸಾಮಾನ್ಯವಾಗಿದೆ.
  9. ಸಾಕು ಪ್ರಾಣಿಗಳಾದ ಹಸು, ನಾಯಿ, ಕುರಿ ಮುಂತಾದವುಗಳು ಹಲವು ಬಾರಿ ವನ್ಯಜೀವಿಗಳ ಆಹಾರವಾಗಿ ಸಾಕಿದವರಿಗೆ ನಷ್ಟವಾಗುವುದರಿಂದ ಕೋಪಗೊಂಡು ರೈತರು ಕಾಡು ಪ್ರಾಣಿಗಳನ್ನು ಕೊಲ್ಲುತ್ತಾರೆ.
  10. ಮಾನವ-ವನ್ಯಜೀವಿ ಸಂಘರ್ಷಗಳಿಂದ ವನ್ಯಜೀವಿಗಳು ನಾಶವಾಗಬಹುದು ಇಲ್ಲವೇ ಅವುಗಳು ಸಾಯಬಹುದು.

ಪರಿಹಾರೋಪಾಯಗಳು: 

  1. ವನ್ಯ ಪ್ರಾಣಿಗಳ ನೀರಿನ ಕೊರತೆಯನ್ನು ಹೋಗಲಾಡಿಸಲು ಸಂಬಂಧಿಸಿದ ಅರಣ್ಯ ಇಲಾಖೆಯವರು ಕಾಡಿನ ನಡುವೆ ಪರ್ಯಾಯವಾಗಿ ಆಹಾರ ಮತ್ತು ನೀರಿನ ಸೌಲಭ್ಯಗಳನ್ನು ಒದಗಿಸಬೇಕು.
  2. ಕಾಡಿನ ಅಂಚಿನಲ್ಲಿ ರೈತರು ವನ್ಯ ಪ್ರಾಣಿಗಳಿಗೆ ಬೇಡವಾದ ಆಹಾರ ಪದಾರ್ಥಗಳನ್ನು ಬೆಳೆಸುವುದು.
  3. ವಿದ್ಯುತ್ ತಂತಿ ಬೇಲಿಯ ಬದಲಾಗಿ ಸೌರವಿದ್ಯುತ್ ತಂತಿ ಬೇಲಿಯನ್ನು ಅಳವಡಿಸುವುದು.
  4. ಮಾನವ ವನ್ಯಜೀವಿ ಸಂಘರ್ಷಗಳನ್ನು ತಡೆಯುವುದಕ್ಕಾಗಿ ಅರಣ್ಯ ಸಿಬ್ಬಂದಿಗೆ ಸುಸಜ್ಜಿತವಾದ ಉಪಕರಣಗಳು ಹಾಗೂ ವಾಹನ ಸೌಲಭ್ಯಗಳನ್ನು ನೀಡಬೇಕು.
  5. ರೈತನಬೆಳೆ ನಾಶವಾದಾಗ ಸರ್ಕಾರ ಬೆಳೆನಾಶ ಪರಿಹಾರವನ್ನು ನೀಡಬೇಕು.
  6. ವಲಸೆ ಹೋಗುವ ಪ್ರಾಣಿಗಳಿಗೆ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಬೇಕು.
  7. ಕಾಡು ಪ್ರಾಣಿಗಳು ಕೃಷಿ ಭೂಮಿಗಳಿಗೆ ಕಾಲಿಡದಂತೆ ತಡೆಯಲು ಮದ್ಯ ಕಂದಕವನ್ನು ನಿರ್ಮಿಸಬೇಕು.
  8. ಸಾಮಾನ್ಯವಾಗಿ ಸೂರ್ಯ ಮುಳುಗುವ ಸಮಯದಲ್ಲಿ ಕಾಡುಪ್ರಾಣಿಗಳು ಬೇಟೆಯಾಡುತ್ತವೆ.  ಆ ಸಮಯದಲ್ಲಿ ಸಾಕು ಪ್ರಾಣಿಗಳನ್ನು ಹೊರಗಡೆ ಬಿಡದಂತೆ ಕ್ರಮ ಕೈಗೊಳ್ಳಬೇಕು.

ಉಪಸಂಹಾರ

ಮಾನವ–ವನ್ಯಜೀವಿ ಸಂಘರ್ಷವು ಇಂದಿನ ಗಂಭೀರ ಪರಿಸರ ಸಮಸ್ಯೆಯಾಗಿದೆ. ಇದಕ್ಕೆ ಮಾನವನ ಅಜಾಗರೂಕತೆ, ಅರಣ್ಯ ನಾಶ ಹಾಗೂ ಪ್ರಕೃತಿ ಸಂಪನ್ಮೂಲಗಳ ಅತಿಯಾದ ದುರುಪಯೋಗವೇ ಪ್ರಮುಖ ಕಾರಣಗಳಾಗಿವೆ. ವನ್ಯಜೀವಿ ಸಂರಕ್ಷಣೆ ಹಾಗೂ ಮಾನವನ ಸುರಕ್ಷತೆ ಎರಡನ್ನೂ ಸಮತೋಲನದಲ್ಲಿ ಕಾಯ್ದುಕೊಳ್ಳುವುದು ಅತ್ಯಗತ್ಯವಾಗಿದೆ. ಸರ್ಕಾರ, ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರು ಒಟ್ಟಾಗಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದರೆ ಮಾತ್ರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ಪ್ರಕೃತಿಯನ್ನು ಉಳಿಸುವುದೇ ಮಾನವ ಬದುಕನ್ನು ಉಳಿಸುವ ಮಾರ್ಗವಾಗಿದೆ.