ಮಾನವ ಆರೋಗ್ಯ ಹಾಗೂ ಪರಿಸರದ ನಡುವೆ ಅವಿನಾಭಾವ ಸಂಬಂಧ ಇದೆ. ಏಕೆಂದರೆ ಪರಿಸರದಲ್ಲಿ ಆಗುವ ಯಾವುದೇ ಬದಲಾವಣೆಗಳು ಮಾನವನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಅಂದರೆ ಮಾನವನ ಆರೋಗ್ಯದ ಗುಣಮಟ್ಟ ಹಾಗೂ ಪರಿಸರದ ಗುಣಮಟ್ಟಗಳ ನಡುವೆ ಪ್ರತ್ಯಕ್ಷ ಸಂಬಂಧವಿದೆ. ನಮ್ಮ ಆರೋಗ್ಯವನ್ನು ಹೇಗೆ ಮುತುವರ್ಜಿಯಿಂದ ಕಾಪಾಡಿಕೊಂಡು ಬರುತ್ತೇವೆಯೋ ಹಾಗೇ ಪರಿಸರದ ಗುಣಮಟ್ಟವನ್ನು ಕಾಪಾಡಿಕೊಂಡು ಬರಬೇಕು. ಮಾಲಿನ್ಯರಹಿತ ಪರಿಸರವಿದ್ದರೆ ಮಾನವ ಯಾವ ಆಸ್ಪತ್ರೆಗಳಿಗೂ ಹೋಗುವ ಅಗತ್ಯತೆಗಳು ಇರುವುದಿಲ್ಲ. ಸಾಮಾನ್ಯವಾಗಿ ಆರೋಗ್ಯವೆಂದರೆ ʻʻಒಬ್ಬ ವ್ಯಕ್ತಿ ಯಾವುದೇ ರೋಗವಿಲ್ಲದೆ ದೈಹಿಕವಾಗಿ ಸುಸ್ಥಿಯಲ್ಲಿ ಇರುತ್ತಾನೋ ಅವನನ್ನು ಆರೋಗ್ಯವಂತ ಮನುಷ್ಯ ಎಂದು ಕರೆಯಬಹುದು. ಮಾನವನ ಆರೋಗ್ಯ ನಾವು ಸೇವಿಸುವ ಆಹಾರ, ರಸಾಯನಿಕ ವಸ್ತುಗಳು, ಮಾನಸಿಕ ಸ್ವಸ್ಥತೆ ಹಾಗೂ ಪರಿಸರದ ಪ್ರಭಾವದ ಮೇಲೆ ಅವಲಂಬಿಸಿರುತ್ತದೆ. ಪರಿಸರ ಮಾಲಿನ್ಯದ ವೈಪರಿತ್ಯವು ಮಾನವನಿಗೆ ಹಲವಾರು ರೋಗಗಳನ್ನು ಹರಡಿ ಅವನ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ತಾನು ಪರಿಸರವನ್ನು ಹಾಳು ಮಾಡಿದರೆ ಪರಿಸರ ತನ್ನನ್ನು ಹಾಳುಮಾಡುತ್ತದೆ ಎಂಬುದನ್ನು ಮಾನವನು ಅರಿತುಕೊಳ್ಳಬೇಕಾಗಿದೆ. ಪರಿಸರಕ್ಕೆ ಧಕ್ಕೆ ತಂದರೆ ತನಗೆ ಧಕ್ಕೆಯನ್ನು ತಂದುಕೊಂಡಂತೆ ಪರಿಸರವನ್ನು ಉಳಿಸಿದರೆ ತಾನು ಉಳಿದುಕೊಂಡಂತೆ, ಶುದ್ಧ, ಸ್ವಚ್ಛ ಹಾಗೂ ಸಮತೋಲನಯುಕ್ತ ಪರಿಸರವಿದ್ದರೆ ಮಾನವನಿಗೆ ಯಾವುದೇ ಚಿಕಿತ್ಸೆಯ ಅವಶ್ಯಕತೆ ಬರುವುದಿಲ್ಲ. ಪರಿಸರ ಹಾಗೂ ಮಾನವನ ಆರೋಗ್ಯಕ್ಕೆ ಸಂಬಂಧಪಟ್ಟ ವಿವರಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ. 

1. ವಾಯು ಮಾಲಿನ್ಯ ಮತ್ತು ಆರೋಗ್ಯ: ಭಾರತದಲ್ಲಿ ಹೆಚ್ಚುತ್ತಿರುವ ಕೈಗಾರಿಕೆಗಳು, ನಗರೀಕರಣ, ಅತಿಯಾದ ವಾಹನಗಳ ದಟ್ಟಣೆ, ಗಣಿಗಾರಿಕೆ, ಮೊದಲಾದವುಗಳಿಂದ ಹೊರಬರುವ ಗಂಧಕದ ಆಕ್ಸೈಡ್, ನೈಟ್ರೋಜನ್ ಡೈ ಆಕ್ಸೈಡ್‌ನಂತಹ ಮಾಲಿನ್ಯಕಾರಕಗಳು ಶಾಖೋತ್ಪನ್ನ ಘಟಕಗಳಿಂದ ಹೊರಬರುವ ಧೂಳು ಅಥವಾ ಬೂದಿಯ ಕಣಗಳು ಇತ್ಯಾದಿ ಮಾನವನಿಗೆ ಹಲವಾರು ರೋಗಗಳು ಬರುವಂತೆ ಮಾಡುತ್ತವೆ. ವಾಯುಮಾಲಿನ್ಯ ಸಾಮಾನ್ಯವಾಗಿ ನಗರ ಹಾಗೂ ಕೈಗಾರಿಕಾ ಪ್ರದೇಶಗಳಲ್ಲಿ ಕಂಡುಬರುತ್ತದೆ. ಹೀಗಾಗಿ ನಗರವಾಸಿಗಳು ಶ್ವಾಸಕೋಶಿ ಸಂಬಂಧಿ ಕಾಯಿಲೆಗಳು, ಅಸ್ತಮಾ, ಅಲರ್ಜಿ, ಕೆಮ್ಮು, ನೆಗಡಿ, ಕ್ಷಯ, ಶ್ವಾಸಕೋಶದ ಕ್ಯಾನ್ಸರ್, ನ್ಯೂಮೋನಿಯಾ ಗಂಟಲು ಬೇನೆ, ಚರ್ಮರೋಗ ರಕ್ತಸ್ರಾವ ಮುಂತಾದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಬೆಂಗಳೂರು ನಗರದಲ್ಲಿ ಕೈಗೊಂಡ ಅಧ್ಯಯನದಿಂದ ವಾಹನ ದಟ್ಟಣೆ ಅಧಿಕವಾದ ಕಾರಣ ಅಲ್ಲಿನ ಶಾಲಾ ಮಕ್ಕಳಲ್ಲಿ ಅಸ್ತಮಾ ಹಾಗೂ ಉಸಿರಾಟದ ಸಮಸ್ಯೆಗಳ ಪ್ರಕರಣಗಳು ಬೇರೆ ಪ್ರದೇಶದ ಮಕ್ಕಳಿಗಿಂತಲೂ ಹೆಚ್ಚು ಕಂಡು ಬಂದಿವೆ. ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಟ್ರಾಫಿಕ್ ಪೊಲೀಸರು ಉಸಿರಾಟದ ತೊಂದರೆಯಿಂದ ಬಳಲುತ್ತಾರೆ. ಕಾರ್ಬನ್ ಮೊನಾಕ್ಸೈಡ್, ಸೀಸಗಳಂತಹ ವಿಷಕಾರಿ ವಸ್ತುಗಳು ದೇಹವನ್ನು ಸೇರಿದಾಗ ದೇಹದ ಕೆಲವು ಭಾಗಗಳು ಹಾನಿಗೊಳಗಾಗುತ್ತದೆ.  ಬೆಂಜಿನ್ ಎನ್ನುವ ರಸಾಯನಿಕ ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುತ್ತದೆ.

ಹಳ್ಳಿಗಳ ಕೆಲ ಮಹಿಳೆಯರು ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಕಾರಣ ಸೌದೆ ಒಲೆ ಹಾಗೂ ಸೀಮೆಎಣ್ಣೆ ಸ್ಟೌ ಇತ್ಯಾದಿಗಳಿಂದ ಹೊರಬರುವ ಹೊಗೆಯ ಸೇವನೆಯೇ ಆಗಿದೆ. ಮನೆಯ ಒಳಗಿನ ಮಲಿನತೆಯಿಂದ ಉಸಿರಾಟದ ತೊಂದರೆ, ತಲೆಸುತ್ತು, ಎಂಪೈಸಿಯಾ, ಉಸಿರುಗಟ್ಟುವಿಕೆ, ಶ್ವಾಸಕೋಶದಂತಹ ಸಮಸ್ಯೆಗಳು ಉಲ್ಬಣಿಸುತ್ತವೆ .

ಬೀಡಿ ಹಾಗೂ ಸಿಗರೇಟ್‌ಗಳಿಂದ ಬಿಡುವ ಹೊಗೆಯು ಅಪಾಯಕಾರಿ ರೋಗಗಳನ್ನು ತರುತ್ತದೆ. ಈ ಹೊಗೆಯ ಸೇವನೆಯಿಂದ ಅಸ್ತಮಾದಿಂದ ಹಿಡಿದು ಕ್ಷಯರೋಗಿನವರೆಗಿನ ತೊಂದರೆಗಳು ಕಾಣಿಸಬಹುದು. ಗರ್ಭಿಣಿಯರು ಈ ಹೊಗೆಯನ್ನು ಸೇವಿಸಿದರೆ ಗರ್ಭದಲ್ಲಿರುವ ಮಗುವಿಗೂ ದುಷ್ಪರಿಣಾಮ ಉಂಟಾಗುತ್ತದೆ.

2. ಜಲಮಾಲಿನ್ಯ ಮತ್ತು ಆರೋಗ್ಯ:

ಕೈಗಾರಿಕೆಗಳ ತ್ಯಾಜ್ಯಗಳು, ರಸಾಯನಿಕಗಳು, ಕೀಟನಾಶಕಗಳು ಕಲುಷಿತ ನೀರು, ರಸ ಗೊಬ್ಬರಗಳಂತಹ ಕೃಷಿ ರಸಾಯನಿಕಗಳು,  ಮಲ-ಮೂತ್ರಗಳಂತಹ ಕೊಳಚೆ ವಸ್ತುಗಳು ಇತ್ಯಾದಿಗಳು ಶುದ್ಧವಾದ ನೀರಿನೊಂದಿಗೆ ಸೇರಿಕೊಂಡರೆ ನೀರು ಮಲಿನವಾಗುತ್ತದೆ. ಈ ಮಲಿನವಾದ ನೀರನ್ನು ಸೇವಿಸಿದಾಗ ಅಪಾಯಕಾರಿಯಾದ ರಸಾಯನಿಕಗಳು ದೇಹದೊಳಗೆ ಸೇರಿಕೊಳ್ಳುತ್ತವೆ. ಇದರಿಂದ ವಿಚಿತ್ರವಾದ ರೋಗಗಳು ಕಾಣಿಸಿಕೊಳ್ಳುತ್ತವೆ. ಉದಾ: ಕರುಳಿನ ಸೋಂಕುಗಳು, ವಾಂತಿಭೇದಿ, ಟೈಪಾಯಿಡ್‌, ಕಾಮಾಲೆ, ಕಾಲರಾ, ಕ್ಯಾನ್ಸರ್, ಅತಿಸಾರ, ವಿಷಮ ಶೀತಜ್ವರ, ಡೆಂಗ್ಯೂ, ಚಿಕನ್ ಗುನ್ಯಾ, ಹೆಪಾಟೈಟಸ್ ʻಬಿʼ ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ ಜೊತೆಗೆ ಕರೋನಾ ಎಂಬ ಹೊಸ ಕಾಯಿಲೆ ಕಾಣಿಸಿಕೊಂಡು ಇಡೀ ಜಗತನ್ನೇ ತಲ್ಲಣಗೊಳಿಸಿತು. ಈ ರೋಗದಿಂದ ಲಕ್ಷಾಂತರ ಜನರು ಸಾವಿಗೀಡಾದರು. ಫ್ಲೋರೈಡ್ ಮಿಶ್ರಿತ ನೀರು ಕುಡಿಯುವುದರಿಂದ ಅಂಗವಿಕಲತೆ ಹಾಗೂ ಮೂಳೆಗೆ ಸಂಬಂಧಿಸಿದ ಕಾಯಿಲೆಗಳು ಬರುತ್ತವೆ. ನಿಂತ ನೀರಿನಿಂದ ಮಲೇರಿಯಾ ಹರಡುತ್ತದೆ. ಕೇರಳದ ಕಾಸರಗೋಡು ಜಿಲ್ಲೆಯ ಹಲವು ಭಾಗಗಳಲ್ಲಿ ಗೇರು ಬೆಳೆಗೆ ಸತತ ʻʻಎಂಡೋಸಲ್ಪಾನ್‌ʼʼ ಎಂಬ ಕೀಟನಾಶಕವನ್ನು ಬಳಸುತ್ತಿದ್ದ ಪರಿಣಾಮವಾಗಿ ಅಲ್ಲಿನ ಬಾವಿ, ನದಿ ಹಾಗೂ ಅಂತರ್ಜಲದಲ್ಲಿ ಎಂಡೋಸಲ್ಪಾನ್‌ ಸೇರಿಕೊಂಡಿದ್ದು ಹಲವು ರೀತಿಯ ಬುದ್ಧಿಮಾಂದ್ಯ ಮತ್ತು ವಿಕಲಾಂಗ ಮಕ್ಕಳು ಹುಟ್ಟಿವೆ. ಪಂಜಾಬಿನ ಭಟಿಂಡಾ ಮತ್ತು ಇತರೆ ಜಿಲ್ಲೆಗಳಲ್ಲಿ ರೈತರು ತಮ್ಮ ಕೃಷಿ ಭೂಮಿಗೆ ಕೀಟನಾಶಕಗಳ ಪ್ರಮಾಣವನ್ನು ಹೆಚ್ಚು ಬಳಕೆ ಮಾಡಿದ ಕಾರಣ ಅಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.

 3. ಮಣ್ಣು ಮಾಲಿನ್ಯ ಹಾಗೂ ಆರೋಗ್ಯ:

ಇಂದು ವಿವಿಧ ಘನ, ದ್ರವ ಹಾಗೂ ಅನಿಲ ರೂಪದ ತ್ಯಾಜ್ಯ ವಸ್ತುಗಳನ್ನು ಹೊರ ಹಾಕುವುದರಿಂದ ಮಣ್ಣು ಮಲಿನವಾಗುತ್ತದೆ. ಉದಾ:  ಕಸ, ಕೊಳಚೆ ಕಸಗಳು, ನೀರು, ವಿಷಕಾರಿ ರಸಾಯನಿಕ ವಸ್ತುಗಳು, ಪ್ಲಾಸ್ಟಿಕ್ ಲೋಹದ ತುಣುಕುಗಳು ರಬ್ಬರ್ ವಸ್ತುಗಳು, ಟೀ ಕಪ್‌ಗಳು, ಚಾಕಲೇಟ್ ಕವರ್‌ಗಳು, ಐಸ್‌ಕ್ರೀಂ ಕಪ್‌ಗಳು ಮುಂತಾದವುಗಳು ಮಣ್ಣನ್ನು ಮಲಿನಗೊಳಿಸುತ್ತವೆ. ಇದರಿಂದ ಕ್ಯಾನ್ಸರ್, ಹೆಪಾಟೈಟಸ್ ಬಿ, ಕಾಲರಾ, ಆಮಶಂಕೆ ಮುಂತಾದ ರೋಗಗಳು ಹರಡುತ್ತವೆ. ಮಲಿನಗೊಂಡ ಮಣ್ಣಿನಿಂದ ತರಕಾರಿ ಬೆಳೆದರೆ ಅದನ್ನು ಸೇವಿಸುವ ಜನರು ಹಲವಾರು ರೋಗಗಳಿಗೆ ಬಲಿಯಾಗುತ್ತಾರೆ.

4. ಆಸ್ಪತ್ರೆ ತ್ಯಾಜ್ಯ ಹಾಗೂ ಆರೋಗ್ಯ:

ಆಸ್ಪತ್ರೆಗಳಲ್ಲಿ ಉಪಯೋಗಿಸಿದ ಚುಚ್ಚುಮದ್ದು, ಬ್ಯಾಂಡೇಜ್ ಬಟ್ಟೆಗಳು, ಸೋಂಕುಪೂರಿತ ವಾರ್ಡ್‌ಗಳ ತ್ಯಾಜ್ಯ, ಚಿಕಿತ್ಸಾಲಯ ಪ್ರಯೋಗಾಲಯ, ಸಂಶೋಧನಾಲಯ ಪ್ರಸೂತಿ ಕೊಠಡಿಗಳು, ಬ್ಲಡ್ ಬ್ಯಾಂಕ್‌ಗಳು, ಐಸಿಯು, ಫಾರ್ಮಸಿ, ಇಂಜೆಕ್ಷನ್ ಕೊಠಡಿಗಳು, ಡಯಾಲಿಸಿಸ್ ಕೊಠಡಿಗಳು, ವಿಕಿರಣ ಕೊಠಡಿಗಳ ತ್ಯಾಜ್ಯ ವಸ್ತುಗಳು, ಅವಯವಗಳು ಅಂಗಾಂಶಗಳು, ರಕ್ತ, ದೇಹದ ದ್ರವಗಳು, ಡ್ರೆಸ್ಸಿಂಗ್, ಧೂಳಾದ ಹತ್ತಿಗಳು, ಪ್ಲಾಸ್ಟಿಕ್‌ಗಳು, ಸೂಜಿ, ದಾರಗಳು, ಕತ್ತರಿಸಿದ ಎಸೆದ ಮಾನವನ ಅಂಗಾಗಳು, ಹೆರಿಗೆ, ಗರ್ಭಪಾತ ಇತ್ಯಾದಿ ತ್ಯಾಜ್ಯಗಳು ಹಲವು ರೋಗಗಳಿಗೆ ಕಾರಣವಾಗಿವೆ. ಆಸ್ಪತ್ರೆಯ ಸಿಬ್ಬಂದಿ ಹಾಗೂ ನಗರಪಾಲಿಕೆ ನೌಕರರು ಇಂತಹ ಅಪಾಯಗಳಿಗೆ ಸಿಲುಕುತ್ತಾರೆ.

5. ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಆರೋಗ್ಯ:

ನಗರ ತ್ಯಾಜ್ಯ ವಸ್ತುಗಳಲ್ಲಿ ಹೆಚ್ಚು ಅಪಾಯಕಾರಿ ರೋಗಗಳು ಕಂಡುಬರುತ್ತವೆ, ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳಲ್ಲಿ 6.25% ನಷ್ಟು ಪ್ಲಾಸ್ಟಿಕ್ ಉತ್ಪನ್ನಗಳಿವೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಸಾಮಾನ್ಯವಾಗಿ ಸುಡುವ ಮೂಲಕ ನಾಶ ಮಾಡಲಾಗುತ್ತದೆ. ಆದರೆ ಪ್ಲಾಸ್ಟಿಕ್ ಉರಿಯುವಾಗ ಉತ್ಪತ್ತಿಯಾಗುವ ವಿಷಕಾರಿ ಅನಿಲಗಳು ಕಣ್ಣುರಿ ಹಾಗೂ ಲುಕೇಮಿಯಾದಂತಹ ಕ್ಯಾನ್ಸರ್‌ಗೆ ಕಾರಣವಾಗುತ್ತದೆ.

6. ಶಬ್ದ ಮಾಲಿನ್ಯ ಹಾಗೂ ಆರೋಗ್ಯ:

ಶಬ್ದ ಮಾಲಿನ್ಯ ಅಧಿಕ ಪ್ರಮಾಣದಲ್ಲಿ ಕಂಡು ಬಂದರೆ ಶ್ರವಣದೋಷ ಉಂಟಾಗುತ್ತದೆ. ಮತ್ತು ರಕ್ತದ ಒತ್ತಡ, ನಿದ್ರಾಹೀನತೆ, ಹೃದಯ ಕಾಯಿಲೆ, ಮಾನಸಿಕ ಕಾಯಿಲೆ, ಜ್ಞಾಪಕ ಶಕ್ತಿ ಕುಂಟಿತ ಹಾಗೂ ಮನೋವ್ಯಾಕುಲತೆ ಮುಂತಾದ ಆರೋಗ್ಯ ಸಂಬಂಧಿತ ಸಮಸ್ಯೆಗಳು ಉಭವಿಸುತ್ತವೆ.

7. ವಿಕಿರಣ ಮತ್ತು ಆರೋಗ್ಯ:

ಅತಿ ನೇರಳೆ ಪರಮಾಣು ವಿಕಿರಣಗಳು ಹೊರಹೊಮ್ಮಿ ದೇಹದ ಜೀವಕೋಶಗಳಲ್ಲಿ ಬದಲಾವಣೆಯನ್ನು ಉಂಟು ಮಾಡುವ ಮೂಲಕ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಉದಾ:  ಕ್ಯಾನ್ಸರ್, ಕ್ಷಯರೋಗ, ಶ್ವಾಸಕೋಶ ತೊಂದರೆ, ಚರ್ಮರೋಗ ತಲೆಸುತ್ತುವಿಕೆ ಹಾಗೂ ಕೂದಲು ಉದುರುವಿಕೆ ಮುಂತಾದ ರೋಗಗಳು ಕಂಡುಬರುತ್ತವೆ.

8. ಓಝೋನ್ ಹಾಗೂ ಆರೋಗ್ಯ:

ಓಜೋನ್ ಪದರು ತೆಳುವಾಗುವುದರಿಂದ ಭೂಮಿಯ ಮೇಲೆ ಪ್ರತಿಫಲನಗೊಳ್ಳುವ ಅಪಾಯಕಾರಿ ನೇರಳಾತೀತ ಕಿರಣಗಳು ಚರ್ಮದ ಕ್ಯಾನ್ಸರ್, ತಲೆ ಕೂದಲು ಉದುರುವಿಕೆ, ಚರ್ಮರೋಗ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ.

9. ಅತಿಹೆಚ್ಚಿನ ಜನಸಂಖ್ಯೆಯು ಕಲ್ಯಾಣದ ಮೇಲೆ ಪ್ರಭಾವ:

ಅತಿಹೆಚ್ಚಿನ ಜನಸಂಖ್ಯೆಯು ದೇಶದಲ್ಲಿ ಶಿಕ್ಷಣ ಮಟ್ಟದ ಕುಸಿತಕ್ಕೆ ಕಾರಣವಾಗುತ್ತದೆ. ಅನಕ್ಷರತೆಯಿಂದ ಮಾನವ ಕಲ್ಯಾಣ ಸಾಧ್ಯವಾಗುವುದಿಲ್ಲ ಸ್ತ್ರೀಯರಿಗೆ ಉತ್ತಮ ಶಿಕ್ಷಣವನ್ನು ನೀಡುವುದರ ಮೂಲಕ ಸಮಾಜದಲ್ಲಿ ಅವರ ಸ್ಥಾನಮಾನವನ್ನು ಉತ್ತಮ ಪಡಿಸಿದರೆ ಮಾತ್ರ ಜನಸಂಖ್ಯಾ ಹೆಚ್ಚಳದಲ್ಲಿ ನಿಯಂತ್ರವನ್ನು ಸಾಧಿಸಿ ಆ ಮೂಲಕ ಮಾನವ ಕಲ್ಯಾಣವನ್ನು ಸಾಧಿಸಬಹುದು. ಸ್ತ್ರೀ ಸಬಲೀಕರಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಇದರಿಂದ ಹೆಣ್ಣು ಭ್ರೂಣ ಹತ್ಯೆ, ಹೆಣ್ಣು ಶಿಶು ಹತ್ಯೆ, ವರದಕ್ಷಿಣೆ ಸಾವು, ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.10. ಜನಸಂಖ್ಯಾ ಶಿಕ್ಷಣ:

ಮಾನವ ಆರೋಗ್ಯ ಹಾಗೂ ಕಲ್ಯಾಣಕ್ಕಾಗಿ ಜನಸಂಖ್ಯಾ ನಿಯಂತ್ರಣ ಯೋಜನೆಯಲ್ಲಿ ಮತ್ತೊಂದು ಪ್ರಮುಖ ಅಂಶ ಜನಸಂಖ್ಯಾ ಶಿಕ್ಷಣ ಈ ಶಿಕ್ಷಣದ ಮೂಲಕ.

  1.  ದೇಶದ ಪ್ರಸ್ತುತ ಜನಸಂಖ್ಯೆಯ ಕುರಿತು ಸಮಗ್ರವಾಗಿ ಮಾಹಿತಿ ನೀಡುವುದು.
  2.  ಜನಸಂಖ್ಯೆಯ ಬೆಳವಣಿಗೆಗೆ ಕಾರಣ ಮತ್ತು ಅದರ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವುದು.
  3.  ಪರಿಸರ ಕಾಳಜಿ ಹಾಗೂ ವೈಯಕ್ತಿಕ ಶುಚಿತ್ವದ ಬಗ್ಗೆ ಜ್ಞಾನವನ್ನುಂಟು ಮಾಡುವುದು.
  4.  ಕೌಟುಂಬಿಕ ಜೀವನದ ಮಟ್ಟದಲ್ಲಿ ಸುಧಾರಣೆಯನ್ನು ತರುವುದು.