ಪ್ರಧಾನಮಂತ್ರಿ ಭಾರತದ ಆಡಳಿತ ವ್ಯವಸ್ಥೆಯ ಕೇಂದ್ರೀಯ ಶಕ್ತಿಯಾಗಿದೆ. ಕೇಂದ್ರ ಮಂತ್ರಿಮಂಡಲದ ನೇತೃತ್ವ ವಹಿಸುವ ಮೂಲಕ ದೇಶದ ಆಡಳಿತವನ್ನು ಸರಾಗವಾಗಿ ನಡೆಸುವ ಹೊಣೆಗಾರಿಕೆ ಇವರ ಮೇಲಿದೆ. ಸಂವಿಧಾನದ ಅನೇಕ ವಿಧಿಗಳು ಪ್ರಧಾನಮಂತ್ರಿಗೆ ವಿಶಿಷ್ಟ ಅಧಿಕಾರಗಳನ್ನು ನೀಡಿವೆ.
ಪ್ರಧಾನ ಮಂತ್ರಿ ಕೇಂದ್ರ ಮಂತ್ರಿ ಮಂಡಲದ ನಕ್ಷತ್ರದೊಳಗಿನ ಚಂದ್ರನಂತೆ ಈತನ ಕಾರ್ಯಗಳು ಈ ಕೆಳಗಿನಂತಿವೆ:
1. ಕೇಂದ್ರ ಮಂತ್ರಿ ಮಂಡಲದ ರಚನೆ: (Formation of Central Minister)
ಸಂವಿಧಾನದ 74ನೇ ವಿಧಿಯ ಪ್ರಕಾರ ಪ್ರಧಾನಮಂತ್ರಿ ನೇತೃತ್ವದ ಕೇಂದ್ರ ಮಂತ್ರಿಮಂಡಲ ಇರಬೇಕೆಂದು ಹೇಳಿದೆ. ಪ್ರಧಾನಮಂತ್ರಿಯ ಮೊದಲ ಕಾರ್ಯವೆಂದರೆ ಮಂತ್ರಿಮಂಡಲ ರಚನೆ. ರಾಷ್ಟ್ರಪತಿಗಳಿಂದ ಪ್ರಧಾನಮಂತ್ರಿಯಾಗಲು ಆಹ್ವಾನ ಬಂದ ನಂತರ ಪ್ರಧಾನಮಂತ್ರಿ ಆದವರು ತನ್ನ ಮಂತ್ರಿಮಂಡಲದಲ್ಲಿ ಇರಬೇಕಾದ ಸಚಿವರ ಪಟ್ಟಿಯನ್ನು ತಯಾರಿಸಿ ಪ್ರಮಾಣವಚನ ನೀಡುವುದಕ್ಕಾಗಿ ರಾಷ್ಟ್ರಪತಿಗೆ ಸಲ್ಲಿಸುತ್ತಾರೆ. ನಂತರ ರಾಷ್ಟ್ರಪತಿಗಳು ಪ್ರಮಾಣವಚನ ನೀಡುವುದರ ಮೂಲಕ ಸಚಿವರನ್ನು ನೇಮಕ ಮಾಡುತ್ತಾರೆ. ತಮಗೆ ನಿಷ್ಠರಾದವರನ್ನೇ ಪ್ರಧಾನಿಗಳು ಮಂತ್ರಿಗಳನ್ನಾಗಿ ನೇಮಿಸುತ್ತಾರೆ. ಜೊತೆಗೆ ಪಕ್ಷಕ್ಕಾಗಿ ದುಡಿದ ದಕ್ಷತೆ ಮತ್ತು ಪ್ರಾಮಾಣಿಕ ವ್ಯಕ್ತಿಗಳಿಗೆ ಆದ್ಯತೆ ನೀಡುತ್ತಾರೆ. ಇದರೊಂದಿಗೆ ಜಾತಿವಾರು, ಪ್ರಾದೇಶಿಕತೆ, ರಾಜ್ಯ, ಜನಾಂಗ ಹಾಗೂ ಭಾಷೆಗಳಿಗೆ ಪ್ರಾಧಾನ್ಯತೆಯನ್ನು ನೀಡುವ ಮೂಲಕ ಮಂತ್ರಿಗಳನ್ನು ನೇಮಿಸುವ ಪರಮಾಧಿಕಾರ ಪ್ರಧಾನ ಮಂತ್ರಿಗಳಿಗಿದೆ. ಮಂತ್ರಿ ಮಂಡಳದ ಗಾತ್ರ ಎಷ್ಟಿರಬೇಕೆಂಬುದನ್ನು ಪ್ರಧಾನಮಂತ್ರಿ ನಿರ್ಧರಿಸುತ್ತಾರೆ. ಆದ್ದರಿಂದ ಪ್ರಧಾನಿಯನ್ನು ʻʻಕಿಂಗ್ ಮೇಕರ್ʼʼ ಚಕ್ರದೊಳಗಿನ ಚಕ್ರ ʻʻಸರ್ಕಾರದ ನೀತಿ ರಚನೆಯ ಆಯಸ್ಕಾಂತʼʼ ಎಂದು ಕರೆಯಲಾಗಿದೆ.
2. ಖಾತೆಗಳ ಹಂಚಿಕೆ:
ಪ್ರಧಾನಮಂತ್ರಿ ತನ್ನ ಮಂತ್ರಿ ಮಂಡಲದ ರಚನೆಯ ನಂತರ ಮಾಡುವ ಮತ್ತೊಂದು ಕೆಲಸವೆಂದರೆ ಖಾತೆಗಳ ಹಂಚಿಕೆಯ ಪ್ರಹಸನ. ಈ ಖಾತೆಗಳ ಹಂಚಿಕೆಯಲ್ಲಿ ಪ್ರಧಾನಿ ಸರ್ವಸ್ವತಂತ್ರರಾಗಿರುತ್ತಾರೆ. ಆಯಾಮಂತ್ರಿಯ ವಿಶ್ವಾಸಾರ್ಹತೆ, ಸಾಮರ್ಥ್ಯ, ಶಿಕ್ಷಣ, ಅನುಭವ, ಚಾರಿತ್ರ್ಯವನ್ನು ಗಣನೆಗೆ ತೆಗೆದುಕೊಂಡು ಖಾತೆಗಳನ್ನು ಹಂಚುತ್ತಾರೆ. ಕೆಲವು ವೇಳೆ ರಾಜಕೀಯ ಒತ್ತಡದಿಂದಾಗಿ ಕೆಲವರಿಗೆ ಅವರಿಷ್ಟ ಪಟ್ಟ ಖಾತೆಗಳನ್ನು ನೀಡಬೇಕಾಗುತ್ತದೆ. 1967 ರಲ್ಲಿ ಇಂದಿರಾಗಾಂಧಿಯವರು ಮುರಾರ್ಜಿ ದೇಸಾಯಿ ಅವರಿಗೆ ಗೃಹ ಖಾತೆ ಕೊಡಲು ಇಷ್ಟವಿಲ್ಲದಿದ್ದರೂ ಅರ್ಥ ಖಾತೆಯನ್ನು ಕೊಡಬೇಕಾಯಿತು. 1977 ರಲ್ಲಿ ಚರಣಸಿಂಗ್ ಮೊದಲ ಬಾರಿಗೆ ಕೇಂದ್ರದಲ್ಲಿ ಮಂತ್ರಿ ಆದಾಗ ಅವರಿಗೆ ಗೃಹ ಖಾತೆ ನೀಡಲಾಯಿತು. ನೆಹರು ದಕ್ಷರಿಗೆ ಉತ್ತಮ ಖಾತೆಗಳನ್ನು ನೀಡಿದರೆ ಇಂದಿರಾಗಾಂಧಿ ಅದನ್ನು ಪಾಲಿಸಲಿಲ್ಲ. ಆಂಧ್ರಪ್ರದೇಶದ ಮುಲ್ಕಿ ಸಮಸ್ಯೆಯನ್ನು ಬಗೆಹರಿಸದ ಪಿ.ವಿ ನರಸಿಂಹರಾವ್ ಅವರನ್ನು ವಿದೇಶಾಂಗ ಮಂತ್ರಿ ಆಗಿ ಮಾಡಲಾಯಿತು. ಹೀಗೆ ಅಧಕ್ಷರಿಗೆ ಉತ್ತಮ ಖಾತೆಗಳು ದೊರತಾಗ ಅನುಭವದ ಕೊರತೆಯಿಂದ ಆಡಳಿತ ಯಂತ್ರ ಕುಸಿದು ಬೀಳುವ ಸಂಭವ ಹೆಚ್ಚಾಗಿ ಕಂಡುಬರುತ್ತದೆ.
3. ಮಂತ್ರಿಮಂಡಲದ ಪುನರ್ ರಚನೆ:
ಸಾಮಾನ್ಯವಾಗಿ ಪ್ರಧಾನಮಂತ್ರಿಯೇ ಮಂತ್ರಿ ಮಂಡಲದ ಕೇಂದ್ರ ಬಿಂದುವಾಗಿದ್ದು ಆಕಾಶದಲ್ಲಿ ಪ್ರಜ್ವಲಿಸುತ್ತಿರುವ ನಕ್ಷತ್ರಗಳ ನಡುವಿನ ಚಂದ್ರನಂತೆ ಕಂಗೊಳಿಸುತ್ತಾನೆ ಎಂದು ಹೇಳಬಹುದು. ಹೀಗಾಗಿ ಮಂತ್ರಿಮಂಡಲದ ಜವಾಬ್ದಾರಿಯನ್ನು ಆತನೇ ಹೊತ್ತುಕೊಂಡಿರುತ್ತಾನೆ. ಮಂತ್ರಿ ಮಂಡಳದ ರಚನೆಯಿಂದ ಹಿಡಿದು ಮಂತ್ರಿಗಳನ್ನು ವಜಾಗೊಳಿಸುವ ಸಂಪೂರ್ಣ ಅಧಿಕಾರ ಅವನ ಹಿಡಿತದಲ್ಲಿ ಇರುತ್ತದೆ. ಅಸಮರ್ಥತೆ ಭ್ರಷ್ಟಾಚಾರ, ಅವಿಧೇಯತೆ ಮುಂತಾದ ಕಾರಣಗಳಿಂದ ಮಂತ್ರಿಯೊಬ್ಬನಿಂದ ರಾಜೀನಾಮೆ ಪಡೆದು ಆ ಖಾತೆಯನ್ನು ಬೇರೊಬ್ಬನಿಗೆ ವಹಿಸಿಕೊಡುಬಹುದು. ಜೊತೆಗೆ ಮಂತ್ರಿಗಳ ಖಾತೆಯನ್ನು ಅದಲು ಬದಲು ಮಾಡುವ ಅಧಿಕಾರ ಪ್ರಧಾನಮಂತ್ರಿಗೆ ಇದೆ.
4. ಸಚಿವ ಸಂಪುಟದ ಮುಖ್ಯಸ್ಥ:
ಕೇಂದ್ರ ಶಾಸಕಾಂಗದ ಸಂಪುಟದ ಮಂತ್ರಿಗಳನ್ನು ಸಚಿವರು ಎಂದು ಕರೆಯುತ್ತಾರೆ. ಈ ಸಚಿವರನ್ನು ಒಳಗೊಂಡ ಸಮಿತಿಯನ್ನು ಸಚಿವ ಸಂಪುಟ ಸಮಿತಿ ಎಂದು ಹೆಸರಿಸಲಾಗಿದೆ. ಈ ಸಚಿವ ಸಂಪುಟದ ಸಮಿತಿಯ ಸಭೆಯನ್ನು ಪ್ರಧಾನಮಂತ್ರಿಗಳ ನೇತೃತ್ವದಲ್ಲಿ ಏರ್ಪಡಿಸಲಾಗುತ್ತದೆ. ಸಚಿವ ಸಂಪುಟವನ್ನು ಕರೆಯುವ ಮತ್ತು ಸಭೆಯಲ್ಲಿ ನಡೆದ ತೀರ್ಮಾನಗಳನ್ನು ಪ್ರಕಟಿಸುವ ಅಂತಿಮ ಅಧಿಕಾರ ಪ್ರಧಾನಿಗಿದೆ. ಸಚಿವರ ಕಾರ್ಯ ವೈಖರಿಯನ್ನು ಹೊಗಳುವ ಮತ್ತು ದೋಷಗಳು ಕಂಡು ಬಂದಾಗ ತಿದ್ದುಪಡಿ ಮಾಡಿಕೊಳ್ಳುವಂತೆ ಸೂಚಿಸುವ ಕೆಲಸವನ್ನು ಪ್ರಧಾನಿ ಮಾಡಬೇಕಾಗುತ್ತದೆ.
5. ಸರ್ಕಾರದ ಮುಖಂಡ:
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಯಾವುದೇ ಪಕ್ಷದ ಸರ್ಕಾರವಿದ್ದರೂ ಅದು ಜನರ ಮತ್ತು ವಿರೋಧ ಪಕ್ಷಗಳ ವಿಮರ್ಶೆಗೆ ಒಳಗಾಗಬೇಕಾಗುತ್ತದೆ. ಸರ್ಕಾರದ ವಿವಿಧ ಯೋಜನೆಗಳು, ಜನರಿಗೆ ಅದು ಕೊಡುವ ಭರವಸೆಗಳು ಹಾಗೂ ಕೈಗೆತ್ತಿಕೊಳ್ಳುವ ಕಾರ್ಯಗಳಿಂದ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿರುವುದನ್ನು ಯಾವುದೇ ವಿರೋಧ ಪಕ್ಷವಾದರೂ ಅದನ್ನು ಸಹಿಸುವುದಿಲ್ಲ. ಹೀಗಾಗಿ ಪ್ರಧಾನಿಯಾದವರು ಸಂಸತ್ತಿನ ಒಳಗೆ ಮತ್ತು ಹೊರಗೆ ಸರ್ಕಾರ ಕೈಗೊಂಡಿರುವ ತೀರ್ಮಾನಗಳನ್ನು ತರ್ಕಬದ್ದ ವಿವರಣೆಗಳ ಮೂಲಕ ಉತ್ತರಗಳನ್ನು ನೀಡುತ್ತಾ ಸರ್ಕಾರದ ಸಾಧನೆಗಳನ್ನು ಸಮರ್ಥಿಸಿಕೊಳ್ಳಬೇಕು. 17 ವರ್ಷಗಳ ಅಧಿಕಾರ ಅವಧಿಯಲ್ಲಿ ಜವಹರಲಾಲ್ ನೆಹರು ಯೋಜನಾ ಪದ್ಧತಿಯ ಮೂಲಕ ದೇಶದಲ್ಲಿ ಏಕತೆಯನ್ನು ತರಲು ಪ್ರಯತ್ನಿಸಿದರೆ, ಕೇವಲ 18 ತಿಂಗಳ ಅವಧಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಪ್ರಯತ್ನಿಸಿದರು. 1964 ರಲ್ಲಿ ಇಂದಿರಾಗಾಂಧಿ 14 ಬ್ಯಾಂಕುಗಳ ರಾಷ್ಟ್ರೀಕರಣಗೊಳಿಸಿದರು. ಗ್ರಾಮೀಣಾಭಿವೃದ್ಧಿಗೆ ಬುನಾದಿ ಹಾಕಿದವರು. ಪಿ ವಿ ನರಸಿಂಹರಾವ್. 1998ರಲ್ಲಿ ಪೋಕರಾನ್ ಮರುಭೂಮಿಯಲ್ಲಿ ಅಣುಸ್ಫೋಟಕ್ಕೆ ಅನುಮತಿ ನೀಡಿದವರು ವಾಜಪೇಯಿ.
6. ಹೊಂದಾಣಿಕೆ ಮತ್ತು ಮೇಲ್ವಿಚಾರಣೆ:
ಸರ್ಕಾರದ ಆಡಳಿತ ಯಂತ್ರ ಸುಗಮವಾಗಿ ನಡೆಯುವಲ್ಲಿ ಹಲವಾರು ತೊಂದರೆ ತಾಪತ್ರೆಯಗಳು ಕಂಡುಬರುತ್ತವೆ. ಹೀಗಾಗಿ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯಗಳನ್ನು ಒಂದುಗೂಡಿಸಿ ಆಡಳಿತವನ್ನು ನಡೆಸಿಕೊಂಡು ಹೋಗುವಲ್ಲಿ ಪ್ರಧಾನಮಂತ್ರಿಯ ಪಾತ್ರ ಹಿರಿದಾಗಿದೆ. ಜೊತೆಗೆ ಅದರಲ್ಲಿ ಅವರ ಸಾಮರ್ಥ್ಯವೂ ಅಡಗಿದೆ. ಪ್ರಧಾನಮಂತ್ರಿ ಮಂತ್ರಿ ಮಂಡಲದ ಒಂದು ತಂಡವನ್ನು ಆಯ್ದುಕೊಂಡ ನಂತರ ಆ ತಂಡವು ವಿಚಲಿತವಾಗದಂತೆ ಅದನ್ನು ಹಾಗೆ ಉಳಿಸಿಕೊಂಡು ಹೋಗಬೇಕು. ಸರ್ಕಾರದ ಗುರಿ ಮತ್ತು ಉದ್ದೇಶಗಳನ್ನು ಕಾಪಾಡುವ ಸಲುವಾಗಿ ಮಂತ್ರಿ ಮಂಡಲದ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು ಕಂಡುಬರುತ್ತವೆ. ಆಗ ಪ್ರಧಾನಮಂತ್ರಿ ಮಧ್ಯಪ್ರವೇಶಸಿ ಮಾತುಕತೆಗಳ ಮೂಲಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಬೇಕು. ಇಡೀ ಮಂತ್ರಾಲಯದ ಮೇಲೆ ಪ್ರಧಾನಿಗೆ ಹಿಡಿತವಿರುವ ಕಾರಣ ಅದರ ಮೇಲ್ವಿಚಾರಣೆಯ ಜವಾಬ್ದಾರಿ ಅವರಿಗಿದ್ದು ಕಾಲಕಾಲಕ್ಕೆ ಅದರ ಪರಿಶೀಲನೆ ಮಾಡಿ ಸರಿದಾರಿಗೆ ತರಬೇಕು. ಮಂತ್ರಿಗಳು ತಮ್ಮ ಇಲಾಖೆಯನ್ನು ಎಷ್ಟೇ ಮತುವರ್ಜಿ ವಹಿಸಿ ನೋಡಿಕೊಳ್ಳುತ್ತಿದ್ದರೂ ಸರಿಯಾದ ಮೇಲ್ವಿಚಾರಣೆ ಇಲ್ಲದೆ ಹೋದರೆ ನಾವಿಕ ನಿಲ್ಲದ ಹಡಗಿನಂತಾಗುತ್ತದೆ. ಆಡಳಿತ ಯಂತ್ರ ಸುಗಮವಾಗಿ ನಡೆಯಲು ಪ್ರಧಾನಿ ಆಗಾಗ ಅವರ ಮೇಲೆ ನಿಗಾ ಇಡಬೇಕಾದುದು ಅಗತ್ಯವಾಗಿದೆ. ಯಾವುದಾದರು ಇಲಾಖೆಯ ಆಡಳಿತದಲ್ಲಿ ದೋಷ ಕಂಡು ಬಂದರೆ ಕೂಡಲೇ ಮಧ್ಯಪ್ರವೇಶಿಸಿ ದೋಷ ನಿವಾರಣೆಗೆ ಸಲಹೆ ನೀಡಬೇಕು. ಅದು ಪ್ರಧಾನಿಯ ಮುಖ್ಯ ಕೆಲಸವಾಗಿದೆ.
7. ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿ:
ಪ್ರಧಾನ ಮಂತ್ರಿ ರಾಷ್ಟ್ರಪತಿ ಹಾಗೂ ಮಂತ್ರಿಮಂಡಲದ ನಡುವಿನ ಕೊಂಡಿಯಂತೆ ಕಾರ್ಯನಿರ್ವಹಿಸುತ್ತಾರೆ. ಸಂವಿಧಾನದ 78ನೇ ವಿಧಿಯ ಅನ್ವಯ ಮಂತ್ರಿ ಮಂಡಲ ತೆಗೆದುಕೊಂಡ ತೀರ್ಮಾನಗಳನ್ನು ಪ್ರಧಾನಿ ರಾಷ್ಟ್ರಪತಿಗೆ ತಿಳಿಸಬೇಕು. ಮಂತ್ರಿಯೊಬ್ಬರು ವೈಯಕ್ತಿಕವಾಗಿ ತೆಗೆದುಕೊಂಡ ನಿರ್ಧಾರಗಳನ್ನು ಮಂತ್ರಿಮಂಡಲ ಚರ್ಚೆ ಮಾಡಬೇಕೆಂದು ರಾಷ್ಟ್ರಪತಿ ಸಲಹೆ ನೀಡಿದರೆ. ಪ್ರಧಾನಿ ಅಂತಹ ತೀರ್ಮಾನಗಳನ್ನು ಮಂತ್ರಿಮಂಡಲದ ಮುಂದೆ ತರಬೇಕು. ರಾಷ್ಟ್ರಪತಿಗಳು ಸಂವಿಧಾನದ ರಕ್ಷಕರಾಗಿರುವುದರಿಂದ ಮಂತ್ರಿಮಂಡಲ ಸಂವಿಧಾನಕ್ಕನುಗುಣವಾಗಿ ಕೆಲಸ ನಿರ್ವಹಿಸಬೇಕು ಎಂಬುದು ಅವರ ಆಶಯವಾಗಿದೆ. ಈ ಕಾರಣದಿಂದ ಪ್ರಧಾನಿ ಹಾಗೂ ರಾಷ್ಟ್ರಪತಿಗಳ ನಡುವೆ ಪರಸ್ಪರ ಹೊಂದಾಣಿಕೆ ಇರಬೇಕು. ಸಾಮಾನ್ಯವಾಗಿ ವಾರಕ್ಕೊಮ್ಮೆ ಅಥವಾ ಎರಡು ವಾರಕ್ಕೊಮ್ಮೆ ಪ್ರಧಾನಮಂತ್ರಿ ರಾಷ್ಟ್ರಪತಿಗಳನ್ನು ಭೇಟಿಯಾಗುತ್ತಾರೆ.
ಜವಹರಲಾಲ್ ನೆಹರು ಅವರು ರಾಷ್ಟ್ರಪತಿ ಅವರನ್ನು ಪ್ರತಿ ಸೋಮವಾರ ಮತ್ತು ಮಂತ್ರಿಮಂಡಲದ ಸದಸ್ಯರು ತಿಂಗಳಿಗೊಮ್ಮೆ ರಾಷ್ಟ್ರಪತಿಯನ್ನು ಭೇಟಿ ಮಾಡುತ್ತಿದ್ದರು. ಶಾಸ್ತ್ರೀಯವರು ಎರಡು ವಾರಕ್ಕೊಮ್ಮೆ ಭೇಟಿ, ಹಾಗೆಯೇ ದೇಸಾಯಿ ಮತ್ತು ಇಂದಿರಾಗಾಂಧಿ ಇದನ್ನೇ ಮುಂದುವರಿಸಿಕೊಂಡು ಬಂದರು. ಆದರೆ ರಾಜೀವ್ ಗಾಂಧಿ ಜೇಲ್‌ಸಿಂಗರನ್ನು ಭೇಟಿ ಮಾಡುವ ಸಂಪ್ರದಾಯವನ್ನು ಮುಂದುವರಿಸಲಿಲ್ಲ. ಆರ್ ವೆಂಕಟರಾಮನ್ ರಾಷ್ಟ್ರಪತಿ ಆದಾಗ ರಾಜೀವ್ ಗಾಂಧಿ ಆಗಾಗ ರಾಷ್ಟ್ರಪತಿಗಳನ್ನು ಭೇಟಿ ಮಾಡುತ್ತಿದ್ದರು. ನಂತರ ವಾಜಪೇಯಿ ಮತ್ತು ಮನಮೋಹನ್ ಸಿಂಗರ ಕಾಲದಲ್ಲೂ ರಾಷ್ಟ್ರಪತಿ ಭೇಟಿ ಮುಂದುವರೆಯಿತು.
8. ಲೋಕಸಭೆಯ ವಿಸರ್ಜನಾಧಿಕಾರಗಳು:
ಪ್ರಧಾನಮಂತ್ರಿಯ ಇಚ್ಛೆಯ ಮೇರೆಗೆ ಲೋಕಸಭಾಸದಸ್ಯರು ಲೋಕಸಭೆಯಲ್ಲಿರುತ್ತಾರೆ. ಏಕೆಂದರೆ ಅವಧಿ ಮುನ್ನವೇ ಪ್ರಧಾನಮಂತ್ರಿಯು ಲೋಕಸಭೆಯನ್ನು ವಿಸರ್ಜಿಸಬಹುದು. ಹಾಗೆ ಮಾಡಲು ಅವರು ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಬಹುದು ಕ್ಯಾಬಿನೆಟ್‌ನಲ್ಲಿ ತೀವ್ರ ಭಿನ್ನಾಭಿಪ್ರಾಯಗಳು ತಲೆದೂರಿದಾಗ ಅಥವಾ ಸರ್ಕಾರದ ಮಸೂದೆಗಳು ಸಂಸತ್ತಿನಲ್ಲಿ ಸೋಲನ್ನು ಅನುಭವಿಸಿದಾಗ ಪ್ರಧಾನಮಂತ್ರಿ ಲೋಕಸಭೆಯ ವಿಸರ್ಜನೆಗೆ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಬಹುದು. ಉದಾಹರಣೆ ಲೋಕಸಭೆಯಲ್ಲಿ ವಿಶ್ವಾಸ ಮತ ಕಳೆದುಕೊಂಡ ವಾಜಪೇಯಿ ಸರಕಾರವು 12ನೇ ಲೋಕಸಭೆಯ ವಿಸರ್ಜನೆಗಾಗಿ ರಾಷ್ಟ್ರಪತಿಗೆ ಶಿಫಾರಸ್ಸು ಮಾಡಿತು. 2004ರಲ್ಲಿ ಚುನಾವಣೆಯಲ್ಲಿ ವಾಜಪೇಯಿ ಸರ್ಕಾರವು ಅವಧಿಗೆ ಮುನ್ನವೇ ಲೋಕಸಭೆಯ ವಿಸರ್ಜನೆಗೆ ಶಿಫಾರಸ್ಸು ಮಾಡಿತು.
9. ನೇಮಕಾತಿ ಪ್ರಾಧಿಕಾರ:
ರಾಷ್ಟ್ರಪತಿಗಳು ನಾಗರಿಕ, ಸೈನಿಕ, ನ್ಯಾಯಿಕ ಹಾಗೂ ರಾಯಭಾರಿ ಕ್ಷೇತ್ರಗಳ ಉನ್ನತ ಸ್ಥಾನಗಳಿಗೆ ನೇಮಕಾತಿ ಮಾಡುವ ಅಧಿಕಾರವನ್ನು ಹೊಂದಿದ್ದರೂ ಪ್ರಧಾನಮಂತ್ರಿಗಳ ಶಿಫಾರಸ್ಸು ಇಲ್ಲದೆ ಅವರು ಮುಂದುವರೆಯುವಂತಿಲ್ಲ. ಮುಖ್ಯ ಚುನಾವಣಾ ಅಧಿಕಾರಿಗಳು, ರಾಜ್ಯಪಾಲರು, ರಕ್ಷಣಾ ಬಲಗಳ ಮುಖ್ಯಸ್ಥರು, ಉಚ್ಛ ಹಾಗೂ ಸರ್ವೋಚ್ಚ ನ್ಯಾಯಾಲಯಗಳ ನ್ಯಾಯಾಧೀಶರು, ರಾಯಭಾರಿಗಳು ಮುಂತಾದವರನ್ನು ನೇಮಕ ಮಾಡಲು ಪ್ರಧಾನಿಗಳು ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡುತ್ತಾರೆ.
10. ವಿಶೇಷ ಅಧಿಕಾರಗಳು:
ಪ್ರಧಾನಮಂತ್ರಿಗಳು ಕೇಂದ್ರ ಸಂಸತ್ತಿನ ಮುಖ್ಯಸ್ಥರಾಗಿರುವ ಕಾರಣ ವಿದೇಶಾಂಗ ವ್ಯವಹಾರ, ರಾಷ್ಟ್ರ ರಕ್ಷಣೆ ಮತ್ತು ಆರ್ಥಿಕ ವಿಷಯಗಳಲ್ಲಿ ಅವರಿಗೆ ಸಂಪೂರ್ಣ ಅಧಿಕಾರವಿರುತ್ತದೆ. ಪ್ರಧಾನ ಮಂತ್ರಿ ಆಡುವ ಪ್ರತಿಯೊಂದು ಮಾತುಗಳು ಹಾಗೂ ಮಾಡುವ ಪ್ರತಿ ಕಾರ್ಯಗಳನ್ನು ಭಾರತ ದೇಶ ಅಷ್ಟೇ ಅಲ್ಲದೆ ಇಡೀ ವಿಶ್ವವೇ ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ಹಾಗಾಗಿ ಪ್ರಧಾನಿಯವರು ಕಣ್ಣಲ್ಲಿ ಕಣ್ಣಾಗಿ ನಡೆದುಕೊಳ್ಳಬೇಕಾಗುತ್ತದೆ. ಉದಾಹರಣೆ: ಪಂಚಶೀಲ ಒಪ್ಪಂದ ಮಾಡಿಕೊಳ್ಳುವಾಗ ನೆಹರು ಅವರ ಪಾತ್ರ, ತಾಸ್ಕೇಂಡ್ ಒಪ್ಪಂದದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪಾತ್ರ, ಭಾರತ ಸೋವಿಯತ್ ಒಪ್ಪಂದದಲ್ಲಿ ಇಂದಿರಾಗಾಂಧಿಯವರ ಪಾತ್ರ, ಭಾರತ ಶ್ರೀಲಂಕಾ ಒಪ್ಪಂದದಲ್ಲಿ ರಾಜೀವ್ ಗಾಂಧಿ ಅವರ ಪಾತ್ರ, ಅವಿಸ್ಮರಣೀಯವಾಗಿದೆ. ಇನ್ನೂ ರಕ್ಷಣಾ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಗಳು ರಕ್ಷಣಾ ಸಚಿವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ರಾಷ್ಟ್ರ ರಕ್ಷಣಾ ವಿಷಯದಲ್ಲಿ ಧಕ್ಕೆ ಉಂಟಾದರೆ ತಕ್ಷಣ ಕಾರ್ಯ ಮಗ್ನರಾಗುತ್ತಾರೆ. ಉದಾಹರಣೆ 1965 ಮತ್ತು 1971ರ ಯುದ್ಧಗಳಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಇಂದಿರಾಗಾಂಧಿ ಅನುಕ್ರಮವಾಗಿ ನಾಯಕತ್ವ ವಹಿಸಿದ್ದರು. 1971ರ ಸಮಯದಲ್ಲಿ ಇಂದಿರಾಗಾಂಧಿ ಯುದ್ಧ ವೆಚ್ಚಕ್ಕಾಗಿ ಜನರಿಂದ ಹಣ, ಬಟ್ಟೆ ಹಾಗೂ ಧಾನ್ಯಗಳನ್ನು ಸಂಗ್ರಹಿಸಿದರು.
ಪ್ರಧಾನ ಮಂತ್ರಿ ಆರ್ಥಿಕ ಹಾಗೂ ಹಣಕಾಸಿನ ವಿಷಯಗಳಲ್ಲಿ ವಿಶೇಷ ತಜ್ಞರಲ್ಲದಿದ್ದರೂ ಆರ್ಥಿಕ ಬೆಳವಣಿಗೆಗಳಾದ ಬೆಲೆ ಏರಿಕೆ, ಉತ್ಪಾದನೆ, ಕೈಗಾರಿಕಾ ಅಭಿವೃದ್ಧಿ ಇತ್ಯಾದಿ ವಿಷಯಗಳ ಬಗ್ಗೆ ಸಾಕಷ್ಟು ಗಮನಹರಿಸುತ್ತಾರೆ. ಉದಾಹರಣೆ 20 ಅಂಶಗಳ ಕಾರ್ಯಕ್ರಮ ರೂಪಗೊಳ್ಳಲು ಇಂದಿರಾಗಾಂಧಿ ಕಾರಣರಾದರೆ, ಭಾರತದ ಅರ್ಥವ್ಯವಸ್ಥೆಯನ್ನು ಉದಾರಿಕರಣದ ಮೂಲಕ ವಿಶ್ವ ಆರ್ಥಿಕ ವ್ಯವಸ್ಥೆಯೊಡನೆ ಸೇರಿಸುವಲ್ಲಿ ಪಿ.ವಿ ನರಸಿಂಹ ರಾವ್ ಕಾರಣರಾದರು. ಹೀಗಾಗಿ ಪ್ರಧಾನಮಂತ್ರಿ ರಾಷ್ಟ್ರದ ಪ್ರಮುಖ ಆಂತರಿಕ ಹಾಗೂ ಬಾಹ್ಯ ನೀತಿಗಳ ಉಗಮ ಬಿಂದು ಎಂದು ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅಭಿಪ್ರಾಯಪಟ್ಟಿದ್ದಾರೆ.
11. ಅಂತರಾಷ್ಟ್ರೀಯ ಸಂಬಂಧಗಳ ವಕ್ತಾರ:
ಪ್ರಧಾನಮಂತ್ರಿ ಅಂತರಾಷ್ಟ್ರೀಯ ಸಂಬಂಧಗಳಲ್ಲಿ ದೇಶವನ್ನು ಪ್ರತಿನಿಧಿಸುತ್ತಾರೆ. ಕಾಮನ್‌ವೆಲ್ತ್ ಆಫ್ ನೇಷನ್ಸ್, ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘ, ಬ್ರಿಕ್ಸ್ ಹಾಗೂ ವಿಶ್ವಸಂಸ್ಥೆ ಮುಂತಾದ ಅಂತರಾಷ್ಟ್ರೀಯ ಸಂಸ್ಥೆಗಳ ಸಭೆಗಳಲ್ಲಿ ಪ್ರಧಾನಿ ಖುದ್ದಾಗಿ ದೇಶದ ಪರವಾಗಿ ಭಾಗವಹಿಸುತ್ತಾರೆ. ಸಂಬಂಧಗಳನ್ನು ಗಟ್ಟಿಗೊಳಿಸಲು ವಿದೇಶಗಳಿಗೆ ಭೇಟಿ ನೀಡುತ್ತಾರೆ. ವಿದೇಶಿ ನಾಯಕರು ಭಾರತಕ್ಕೆ ಆಗಮಿಸಿದರೆ ಅವರನ್ನು ಆದರದಿಂದ ಸ್ವಾಗತಿಸುತ್ತಾರೆ. ವಿದೇಶಿ ರಾಯಭಾರಿಗಳೊಂದಿಗೆ ಯಾವಾಗಲೂ ನಿಕಟ ಸಂಪರ್ಕದಲ್ಲಿ ಇರುತ್ತಾರೆ.
ಉಪಸಂಹಾರ
ಒಟ್ಟಾರೆ, ಪ್ರಧಾನಮಂತ್ರಿ ಭಾರತದ ಆಡಳಿತ ವ್ಯವಸ್ಥೆಯ ನಡುಬಿಂದು ಎಂದು ಹೇಳಬಹುದು. ಮಂತ್ರಿಮಂಡಲದ ರಚನೆ, ನೀತಿ ರೂಪಣೆ, ಸಂಸತ್ತಿನ ನಾಯಕತ್ವ ಮತ್ತು ಅಂತರಾಷ್ಟ್ರೀಯ ಪ್ರತಿನಿಧಿತ್ವ ಎಲ್ಲವೂ ಅವರ ಜವಾಬ್ದಾರಿಯಾಗಿದೆ. ಸಮರ್ಥ ಹಾಗೂ ದೃಢ ನಾಯಕತ್ವವಿದ್ದಾಗ ಮಾತ್ರ ದೇಶವು ಶಾಂತಿ, ಪ್ರಗತಿ ಮತ್ತು ಸ್ಥಿರತೆಯನ್ನು ಸಾಧಿಸಬಹುದು. ಆದ್ದರಿಂದ ಪ್ರಧಾನಮಂತ್ರಿಯ ಅಧಿಕಾರಗಳು ಮತ್ತು ಕಾರ್ಯಗಳು ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖವಾಗಿವೆ.