ಈ ಕಾಯಿದೆಯನ್ನು ಪರಿಸರ ರಕ್ಷಣೆ ಹಾಗೂ ಅದಕ್ಕೆ ಸಂಬಂಧಿಸಿದ ವಿಷಯಗಳು ಮತ್ತು ಪರಿಸರವನ್ನು ಉತ್ತಮಪಡಿಸುವಿಕೆಯ ದೃಷ್ಟಿಯಿಂದ ಜಾರಿಗೆ ತರಲಾಯಿತು. ಪರಿಸರ ಸಂರಕ್ಷಣಾ ಕಾಯಿದೆಯು 1986 ನವೆಂಬರ್ 19ರಂದು ಶ್ರೀಮತಿ ದಿವಂಗತ ಇಂದಿರಾಗಾಂಧಿಯವರ ಜನ್ಮದಿನದ ಪ್ರಯುಕ್ತ ಜಾರಿಗೆ ಬಂದಿತು. ಈ ಕಾಯಿದೆಯಲ್ಲಿ 4 ಪ್ರಮುಖ ಅಧ್ಯಾಯಗಳು ಇವೆ. 26 ಭಾಗಗಳು ಇವೆ. ಈ ಕಾಯಿದೆಯಲ್ಲಿ ಪರಿಸರ ಮಾಲಿನ್ಯ, ಮಾನವ ಹಾಗೂ ಇತರ ಜೀವಿಗಳಿಗೆ ಹಾನಿಯನ್ನುಂಟು ಮಾಡುವ ಅಪಾಯಕಾರಿ ವಸ್ತುಗಳು ಎಂಬ ಮೂರು ಶಬ್ಧಗಳ ಕುರಿತು ವಿವರಿಸಲಾಗಿದೆ.
ಪರಿಸರ: ಪರಿಸರ ಎಂಬ ಪದವು ನೀರು ಗಾಳಿ ಹಾಗೂ ಭೂಮಿಗಳ ನಡುವಿನ ಸಂಬಂಧ ಈ ಮೂರು ಘಟಕಗಳೊಂದಿಗೆ ಮಾನವ ಹಾಗೂ ಇತರೆ ಪ್ರಾಣಿಗಳು ಸಸ್ಯಗಳು ಹಾಗೂ ಸೂಕ್ಷ್ಮಾಣು ಜೀವಿಗಳು ಹೊಂದಿರುವ ಸಂಬಂಧ.
ಪರಿಸರ ಮಾಲಿನ್ಯ: ಪರಿಸರ ಇಂದು ಹೆಚ್ಚು ಮಲಿನಕಾರಕವಾಗಿದೆ.
ಅಪಾಯಕಾರಿ ಅಂಶ: ಯಾವುದೇ ಅನಿಲ ಮತ್ತು ಅದರ ರಸಾಯನಿಕ ಅಥವಾ ಭೌತಿಕ ರಸಾಯನಿಕ ಗುಣಗಳಿಂದ ಅಥವಾ ಅವುಗಳನ್ನು ಬಳಸಿದಾಗ ಮಾನವನಿಗೆ ಅಥವಾ ಇತರ ಜೀವ ಜಂತುಗಳಿಗೆ ಸಸ್ಯಗಳಿಗೆ ಅಥವಾ ಸೂಕ್ಷ್ಮಾಣು ಜೀವಿಗಳಿಗೆ ಹಾನಿಯನ್ನು ಉಂಟು ಮಾಡುವಂತಿದ್ದರೆ ಅದು ಅಪಾಯಕಾರಿ ವಸ್ತುವಾಗುತ್ತದೆ. ಈ ಕಾಯಿದೆಯು ಕೇಂದ್ರ ಸರ್ಕಾರಕ್ಕೆ ಈ ಕೆಳಕಂಡ ಉದ್ದೇಶಗಳಿಗಾಗಿ ಅಗತ್ಯ ಕ್ರಮಕೈಗೊಳ್ಳಲು ಅಧಿಕಾರ ನೀಡಿತು.
ಪರಿಸರವನ್ನು ರಕ್ಷಿಸುವುದು ಹಾಗೂ ಅದರ ಸುಧಾರಣೆಗಾಗಿ ಕ್ರಮಗಳನ್ನು ಕೈಗೊಳ್ಳುವಂತೆ, ಕೇಂದ್ರ ಸರ್ಕಾರಕ್ಕೆ ಅಧಿಕಾರವನ್ನು ನೀಡುತ್ತದೆ. ಜೊತೆಗೆ ಅಧಿಕಾರಿಗಳ ನೇಮಕ ಮತ್ತು ಅವರು ನಿರ್ವಹಿಸುವ ಕಾರ್ಯ ಸೂಚಿಯನ್ನು ನಿರ್ದೇಶಿಸುತ್ತದೆ.
ಕೇಂದ್ರ ಸರ್ಕಾರದ ಸಾಮಾನ್ಯ ಅಧಿಕಾರಗಳು:
- ಪರಿಸರ ಮಾಲಿನ್ಯವನ್ನು ತಡೆಗಟ್ಟುವುದು, ನಿಯಂತ್ರಿಸುವುದು ಮತ್ತು ಕಡಿಮೆ ಮಾಡುವುದು. ಇದನ್ನು ರಾಷ್ಟ್ರದಾದ್ಯಂತ ಜಾರಿಗೆ ತಂದು ವಿವಿಧ ರೀತಿಯಲ್ಲಿ ಪರಿಸರದ ಗುಣಮಟ್ಟವನ್ನು ಕಾಪಾಡುವುದು.
- ಪರಿಸರಕ್ಕೆ ಧಕ್ಕೆ ಬಾರದ ಉತ್ತಮ ಗುಣಮಟ್ಟದ ವಸ್ತುಗಳನ್ನು ಬಳಕೆ ಮಾಡುವುದು.
- ಪರಿಸರ ಸಂರಕ್ಷಣಾ ಕಾಯಿದೆಯನ್ನು ಉಲ್ಲಂಘನೆ ಮಾಡಿ ಪರಿಸರ ಮಾಲಿನ್ಯದಲ್ಲಿ ತೊಡಗುವವರಿಗೆ ದಂಡ ಮತ್ತು ಕಾರಾಗೃಹ ಶಿಕ್ಷೆಯನ್ನು ವಿಧಿಸುವುದು.
- ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಪದಾರ್ಥ ಹಾಗೂ ಸ್ಥೂಲ ಪದಾರ್ಥಗಳನ್ನು ಉತ್ಪಾದನೆ ಮಾಡುವ ಕಾರ್ಯವಿಧಾನವನ್ನು ಪರೀಕ್ಷೆಗೆ ಒಳಪಡಿಸುವುದು.
- ಪರಿಸರ ಮಾಲಿನ್ಯಕ್ಕೆ ಕಾರಣವನ್ನು ಸಂಶೋಧನೆಯ ಮೂಲಕ ಗೊತ್ತುಪಡಿಸಿಕೊಳ್ಳುವುದು ಮತ್ತು ಮಾಲಿನ್ಯವನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳುವುದು.
- ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ ಪ್ರಯೋಗ ಶಾಲೆಯನ್ನು ತೆರೆಯುವುದು.
- ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಕೈಪಿಡಿ ಹಾಗೂ ಮಾರ್ಗದರ್ಶಿ ನಿಯಮಗಳು ಪಟ್ಟಿಯನ್ನು ತಯಾರಿಸುವುದು.
- ಈ ಕಾಯಿದೆಯ ಪ್ರಕಾರ ಯಾವುದೇ ಕೈಗಾರಿಕೋದ್ಯಮಿ ಪರಿಸರಕ್ಕೆ ಧಕ್ಕೆ ತರುವಂತಹ ತ್ಯಾಜ್ಯಗಳನ್ನು ನಿಗದಿಪಡಿಸಿದ ಪ್ರಮಾಣಕ್ಕಿಂತ ಹೆಚ್ಚು ಬಿಡುಗಡೆ ಮಾಡುವಂತಿಲ್ಲ.
ಈ ಕಾಯಿದೆಯ ಪ್ರಕಾರ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರಗಳು ಕೈಗೊಳ್ಳಬೇಕಾದ ಕ್ರಮಗಳು ಈ ಕೆಳಗಿನಂತಿವೆ.
- ಅಪಾಯಕಾರಿ ವಸ್ತುಗಳ ನಿರ್ವಹಣೆ ಹಾಗೂ ರಕ್ಷಣೆ ಮಾಡುವುದು.
- ರಾಜ್ಯ ಉದ್ಯಮಗಳು ತ್ಯಾಜ್ಯ ವಸ್ತುಗಳನ್ನು ವಿಸರ್ಜಿಸುವುದಕ್ಕೆ ಮುಂಚೆ ಅವುಗಳನ್ನು ಪರೀಕ್ಷೆಗೆ ಒಳಪಡಿಸುವುದು ಹಾಗೂ ನಂತರ ಆದೇಶಿಸುವುದು.
- ಅಪಾಯಕಾರಿ ವಸ್ತುಗಳನ್ನು ಉಪಯೋಗಿಸುವಾಗ ಅನುಸರಿಸಬೇಕಾದ ನಿಯಮಗಳ ಕುರಿತು ಕ್ರಮ ಜರುಗಿಸುವುದು.
- ಕೈಗಾರಿಕೆಗಳು ತಮ್ಮ ತ್ಯಾಜ್ಯ ವಸ್ತುಗಳನ್ನು ಪುನರ್‌ಬಳಕೆ ಮಾಡುವಂತೆ ಪ್ರೋತ್ಸಾಹ ನೀಡುವುದು.
- ಕೈಗಾರಿಕೆಗಳಲ್ಲಿ ಮಾಲಿನ್ಯಕಾರಕಗಳನ್ನು ಮಿತಿಗೊಳಿಸುವುದಕ್ಕಾಗಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲು ಉದ್ಯಮಿಗಳಿಗೆ ಉತ್ತೇಜನ ನೀಡುವುದು.
- ಪರಿಸರ ಮಾಲಿನ್ಯದ ಮಾಹಿತಿಯನ್ನು ಸಂಗ್ರಹಿಸುವುದು ಮತ್ತು ವಿತರಿಸುವುದು.
- ಕೈಗಾರಿಕೆಗಳಿಂದ ಸಾಗರ, ಸಮುದ್ರ, ಸರೋವರ, ನದಿ, ಕೆರೆಗಳಿಗೆ, ತ್ಯಾಜ್ಯ ವಸ್ತುಗಳು ಸೇರದಂತೆ ಕ್ರಮ ವಹಿಸುವಂತೆ ಕೈಗಾರಿಕೋದ್ಯಮಿಗಳಿಗೆ ಎಚ್ಚರಿಕೆ ನೀಡುವುದು.
- ಈ ಕುರಿತು ಪ್ರಾಧಿಕಾರಿ ಹಾಗೂ ನಿಯೋಗಗಳಿಗೆ ಮಾಹಿತಿ ನೀಡುವುದು.
- ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಕೈಪಿಡಿ ಹಾಗೂ ಪುಸ್ತಕಗಳನ್ನು ರಚಿಸಿ ಹಂಚುವುದು.
- ಅಪಾಯಕಾರಿ ವಸ್ತುಗಳನ್ನು ನಿರ್ವಹಿಸುತ್ತಿರುವ ವ್ಯಕ್ತಿಗಳು ರಕ್ಷಣಾ ವಿಧಾನಗಳನ್ನು ಪಾಲಿಸುವಂತೆ ಮಾರ್ಗದರ್ಶನ ನೀಡುವುದು.
ಉಪಸಂಹಾರ
ಪರಿಸರ ಸಂರಕ್ಷಣಾ ಕಾಯಿದೆ 1986 ಭಾರತದಲ್ಲಿ ಪರಿಸರ ರಕ್ಷಣೆಗೆ ಮೈಲುಗಲ್ಲಾಗಿದೆ. ಈ ಕಾಯಿದೆಯ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಪರಿಸರ ಮಾಲಿನ್ಯವನ್ನು ತಡೆಯಲು ಅಗತ್ಯವಾದ ಅಧಿಕಾರ ಮತ್ತು ಜವಾಬ್ದಾರಿಗಳನ್ನು ನೀಡಲಾಗಿದೆ. ಕೈಗಾರಿಕೆಗಳು ಹಾಗೂ ನಾಗರಿಕರು ಪರಿಸರ ಸ್ನೇಹಿ ಕ್ರಮಗಳನ್ನು ಅನುಸರಿಸುವುದು ಈ ಕಾಯಿದೆಯ ಮುಖ್ಯ ಉದ್ದೇಶವಾಗಿದೆ. ಪರಿಸರವನ್ನು ರಕ್ಷಿಸುವುದು ಕೇವಲ ಸರ್ಕಾರದ ಕರ್ತವ್ಯವಲ್ಲ, ಪ್ರತಿಯೊಬ್ಬ ನಾಗರಿಕನ ನೈತಿಕ ಜವಾಬ್ದಾರಿಯೂ ಹೌದು. ಜಾಗೃತಿ ಮತ್ತು ಪಾಲನೆ ಮೂಲಕ ಮಾತ್ರ ಸ್ವಚ್ಛ ಹಾಗೂ ಸುರಕ್ಷಿತ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಬಹುದು