ಶಾಸಕಾಂಗ ಹಾಗೂ ಕಾರ್ಯಾಂಗ ಹೇಗೆ ಪ್ರಮುಖವಾದವುಗಳೋ ಹಾಗೆಯೇ ನ್ಯಾಯಾಂಗವು ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿದೆ. ದೇಶದ ಕಾನೂನು ಹಾಗೂ ಸಂವಿಧಾನವನ್ನು ಅರ್ಥೈಸಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿ ಸರಿಯಾದ ನ್ಯಾಯವನ್ನು ಒದಗಿಸಿಕೊಡುವಲ್ಲಿ ನ್ಯಾಯಾಂಗದ ಪಾತ್ರ ಪ್ರಮುಖವಾದದು. ಭಾರತೀಯ ಸಂವಿಧಾನವು ಲಿಖಿತ ರೂಪದಲ್ಲಿ ಇದ್ದು ಉಳಿದೆರಡು ಅಂಗಗಳನ್ನು ಸರಿದಾರಿಗೆ ತರುವಲ್ಲಿ ನ್ಯಾಯಾಂಗ ಶ್ರಮಿಸುತ್ತದೆ. ಪ್ರಜೆಗಳ ಮೂಲಭೂತ ಹಕ್ಕುಗಳ ರಕ್ಷಣೆಯಲ್ಲಿಯೂ ನ್ಯಾಯಾಂಗದ ಪಾತ್ರ ದೊಡ್ಡದು. ಸಂವಿಧಾನವನ್ನು ಬೆಂಬಲಿಸಿ ಸಾಮಾಜಿಕ ಬದಲಾವಣೆಯನ್ನು ತರುವಲ್ಲಿ ನ್ಯಾಯಾಂಗದ ತೀರ್ಪುಗಳು ಸಹಕಾರಿ. ನ್ಯಾಯಾಂಗದ ವಿಮರ್ಶಾಧಿಕಾರವನ್ನು ಅಮೇರಿಕದಿಂದ ಎರವಲು ಪಡೆಯಲಾಗಿದೆ. 18೦3 ರಲ್ಲಿ ಮಾರ್ಬರಿ ಮತ್ತು ಮ್ಯಾಡಿಸನ್ ಮೊಕದ್ದಮೆಯ ಸಮಯದಲ್ಲಿ ನ್ಯಾಯ ಮೂರ್ತಿ ಜಾನ್ ಮಾರ್ಷಲ್ ಮೊಟ್ಟಮೊದಲು ನ್ಯಾಯಾಂಗ ವಿಮರ್ಶಾಧಿಕಾರವನ್ನು ಪ್ರತಿಪಾದಿಸಿದರು. ಮುಂದೆ ಲಿಖಿತ ಸಂವಿಧಾನದಲ್ಲಿ ಏಕ ಪರಿಕಲ್ಪನೆಯನ್ನು ಅಮೆರಿಕ ಅಳವಡಿಸಿಕೊಂಡಿತು. ಭಾರತದ ಸಂವಿಧಾನದಲ್ಲಿ ಈ ಶಬ್ದವನ್ನು ಬಳಸಿಲ್ಲವಾದರೂ ನ್ಯಾಯಾಧೀಶರು ಸಂವಿಧಾನಿಕ ಅವಕಾಶವನ್ನು ಬಳಸಿಕೊಂಡು ವಿಮರ್ಶಾಧಿಕಾರವನ್ನು ಚಲಾಯಿಸುತ್ತಿದ್ದಾರೆ.

ನ್ಯಾಯಾಂಗ ವಿಮರ್ಶಾಧಿಕಾರದ ಅರ್ಥ: (Meaning of the Power of Judicial Reviws)              

ಶಾಸಕಾಂಗ ಹಾಗೂ ಕಾರ್ಯಾಂಗದ ಶಾಸನಗಳು ಮತ್ತು ಆದೇಶಗಳು ಸಂವಿಧಾನಕ್ಕೆ ಪೂರಕವಾಗಿವೆಯೇ  ಎಂಬುದನ್ನು ಪರಿಶೀಲಿಸಿ ಒಂದು ವೇಳೆ ವಿರುದ್ಧವಾಗಿವೆ ಎಂದು ಕಂಡುಬಂದರೆ ಅವುಗಳನ್ನು ರದ್ದುಗೊಳಿಸುವ ನ್ಯಾಯಾಧೀಶರ ಅಧಿಕಾರವನ್ನು ನ್ಯಾಯಾಂಗದ ವಿಮರ್ಶೆ ಎಂದು ಕರೆಯಲಾಗಿದೆ. ಶಾಸನಗಳಿಂದ ಸಂವಿಧಾನಾತ್ಮಕತೆಯನ್ನು ರಕ್ಷಿಸಲು ನ್ಯಾಯಾಂಗ ವಿಮರ್ಶಾಧಿಕಾರವು ಅನಿವಾರ್ಯ ಎಂದು ಎಂ.ವಿ ಪೈಲಿ ಹೇಳಿದ್ದಾರೆ ಶಾಸಕಾಂಗದ ಸಾರ್ವಭೌಮತ್ವದಿಂದ ಸಾಂವಿಧಾನಿಕ ಸಾರ್ವಭೌಮತ್ವವನ್ನು ಸಂರಕ್ಷಿಸುವ ಸಾಧನ ಎಂಬುದು ಜಸ್ಟಿನ್ ಮುಖರ್ಜಿಯವರ ಅಭಿಪ್ರಾಯವಾಗಿದೆ.

ನ್ಯಾಯಾಂಗ ವಿಮರ್ಶಾಧಿಕಾರದ ವ್ಯಾಪ್ತಿ: (Scope of the Power of Judicial Review)

 ನ್ಯಾಯಾಂಗ ವಿಮರ್ಶಾಧಿಕಾರದ ವ್ಯಾಪ್ತಿ ಈ ಕೆಳಗಿನಂತಿವೆ.

  1. ಸಂವಿಧಾನ ತಿದ್ದುಪಡಿಗೆ ಸಂಬಂಧಿಸಿದ ಕಾಯಿದೆಗಳು.
  2. ರಾಷ್ಟ್ರೀಕೃತ ಸಂಸ್ಥೆಗಳು ತೆಗೆದುಕೊಂಡ ನಿರ್ಧಾರಗಳು.
  3. ಕೇಂದ್ರ ಕಾರ್ಯಾಂಗ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಹೊರಡಿಸಿದ ಆದೇಶಗಳು ಸುತ್ತೋಲೆಗಳು ಹಾಗೂ ನಿರ್ಧಾರಗಳು.
  4. ಸಂಸತ್ತು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಶಾಸಕಾಂಗಗಳು ಹೊರಡಿಸಿದ ಶಾಸನಗಳು.

ನ್ಯಾಯಾಂಗ ವಿಮರ್ಶಾಧಿಕಾರದ ಮಿತಿಗಳು: (Limitation of the Power of Judicial Review)

ನ್ಯಾಯಾಂಗ ವಿಮರ್ಶೆಗಳು ಸಂವಿಧಾನದ ಭಾಗವಾಗಿದ್ದರೂ ಪ್ರಜೆಗಳು ಅವುಗಳನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸುವಂತಿಲ್ಲ. ನ್ಯಾಯಾಲಯಗಳ ಮೇಲೆ ಸಂವಿಧಾನವೇ ಕೆಲವೊಂದು ಮಿತಿಗಳನ್ನು ಏರಿದೆ ಅವುಗಳೆಂದರೆ.

  1. ಸಂವಿಧಾನದ ನಾಲ್ಕನೇ ಭಾಗದಲ್ಲಿನ ರಾಜ್ಯ ನಿರ್ದೇಶಕ ತತ್ವಗಳು.
  2. ಸಂವಿಧಾನದ 163ನೇ ವಿಧಿಯ ಪ್ರಕಾರ ರಾಜ್ಯ ಮಂತ್ರಿಮಂಡಲದಿಂದ ರಾಜ್ಯಪಾಲರು ಪಡೆಯುವ ಸಲಹೆಗಳು.
  3. ಸಂವಿಧಾನದ 122 ಹಾಗೂ 212ನೇ ವಿಧಿಯ ಅನ್ವಯ ಕ್ರಮವಾಗಿ ಸಂಸತ್ತು ಹಾಗೂ ರಾಜ್ಯ ಶಾಸಕಾಂಗಗಳ ಸಭಾಧ್ಯಕ್ಷರು ಹಾಗೂ ಅವರ ಕಾರ್ಯಕಲಾಪಗಳು.
  4. ಚುನಾವಣಾ ಮತಕ್ಷೇತ್ರಗಳ ಪುನರ್ ವಿಂಗಡನ ಆಯೋಗ ಹಾಗೂ ಸ್ಥಾನಗಳ ಹಂಚಿಕೆ.
  5. ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸಲಾದ ಶಾಸನಗಳು.

ಉಪಸಂಹಾರ

ಒಟ್ಟಾರೆ, ನ್ಯಾಯಾಂಗ ವಿಮರ್ಶಾಧಿಕಾರವು ಸಂವಿಧಾನದ ರಕ್ಷಣೆಗೆ ಹಾಗೂ ಪ್ರಜಾಪ್ರಭುತ್ವದ ಸ್ಥಿರತೆಗೆ ಅಗತ್ಯವಾದ ಶಕ್ತಿ ಆಗಿದೆ. ಇದು ಸರ್ಕಾರದ ಮೂರು ಅಂಗಗಳ ಮೇಲೆ ಸಮತೋಲನ ಸಾಧಿಸುತ್ತದೆ. ಆದರೆ ಸಂವಿಧಾನವು ವಿಧಿಸಿರುವ ಮಿತಿಗಳನ್ನು ಗೌರವಿಸುವುದು ಕೂಡ ಅವಶ್ಯಕವಾಗಿದೆ. ಹೀಗಾಗಿ ನ್ಯಾಯಾಂಗ ವಿಮರ್ಶಾಧಿಕಾರವು ಹಕ್ಕು ಮತ್ತು ಜವಾಬ್ದಾರಿಗಳ ಸಮನ್ವಯದ ಪ್ರತಿರೂಪವಾಗಿದೆ.