ಜೀವವೈವಿಧ್ಯತೆ ಎಂದರೆ ಭೂಮಿಯ ಮೇಲಿನ ಸಸ್ಯ, ಪ್ರಾಣಿ ಮತ್ತು ಸೂಕ್ಷ್ಮ ಜೀವಿಗಳ ವೈವಿಧ್ಯಮಯ ಅಸ್ತಿತ್ವ. ಈ ವೈವಿಧ್ಯತೆ ಪ್ರಕೃತಿಯ ಸಮತೋಲನವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದರೆ ಮಾನವನ ಅತಿಯಾದ ಅಭಿವೃದ್ಧಿ ಚಟುವಟಿಕೆಗಳಿಂದ ಇಂದು ಜೀವವೈವಿಧ್ಯತೆ ಗಂಭೀರ ಅಪಾಯವನ್ನು ಎದುರಿಸುತ್ತಿದೆ. ಇದರ ಪರಿಣಾಮವಾಗಿ ಅನೇಕ ಜೀವ ಪ್ರಭೇದಗಳು ಅಳಿವಿನ ಅಂಚಿಗೆ ತಲುಪಿವೆ.
1. ವಾಸಸ್ಥಾನದ ನಷ್ಟ: (habitat loss)
ಮಾನವನಾದಿಯಾಗಿ ಪ್ರತಿಯೊಂದು ಜೀವಿಯು ಒಂದು ಸೂಕ್ತವಾದ ಪ್ರದೇಶಕ್ಕೆ ಹೊಂದಿಕೊಂಡು ಜೀವಿಸುತ್ತದೆ. ಅಲ್ಲಿ ಅವುಗಳು ನಿರ್ದಿಷ್ಟ ಆಹಾರವನ್ನು ಪಡೆದುಕೊಳ್ಳುತ್ತವೆ. ಒಂದು ವೇಳೆ ವಾಸಸ್ಥಳವು ಬದಲಾವಣೆ ಆದರೆ ಆ ಪ್ರದೇಶದಲ್ಲಿ ಹೊಂದಿಕೊಂಡು ಬಾಳಲು ಯತ್ನಿಸುತ್ತವೆ. ಈ ಹೊಂದಾಣಿಕೆ ದೀರ್ಘಕಾಲವನ್ನು ತೆಗೆದುಕೊಳ್ಳಬಹುದು. ಒಂದು ವೇಳೆ ಹೊಂದಾಣಿಕೆ ಸಾಧ್ಯವಾಗದಿದ್ದರೆ ಈ ಪ್ರಭೇದಗಳು ನಾಶವಾಗುತ್ತವೆ. ಮಾನವನ ಹಲವಾರು ಅಭಿವೃದ್ಧಿಪರ ಯೋಜನೆಗಳು ಉದಾ: ಮನೆಗಳನ್ನು ಕಟ್ಟುವುದು, ರಸ್ತೆ ನಿರ್ಮಾಣ, ದನ ಕರುಗಳನ್ನು ಮೇಯಿಸುವುದು, ಕೃಷಿ ಭೂಮಿಯನ್ನು ನಿರ್ಮಾಣ ಮಾಡುವುದು, ನಗರಗಳನ್ನು ನಿರ್ಮಿಸುವುದು, ಪಶು ಪಾಲನೆ, ಅರಣ್ಯಗಳನ್ನು ಕಡಿಯುವುದು ಮುಂತಾದ ಕಾರ್ಯಗಳನ್ನು ಕೈಗೊಂಡರೆ ಜೀವ ವೈವಿಧ್ಯತೆ ಅವನತಿಯ ಹಾದಿಯನ್ನು ತುಳಿಯುತ್ತದೆ. ಸ್ವಾತಂತ್ರ ಬಂದ ನಂತರ ಭಾರತದಲ್ಲಿ 4697 ದಶಲಕ್ಷ ಹೆಕ್ಟರ್ ಭೂಮಿಯನ್ನು ವಿವಿಧ ಉದ್ದೇಶಗಳಿಗಾಗಿ ಬಳಕೆ ಮಾಡಲಾಗಿದೆ. ಸುಮಾರು 70,000 ಹೆಕ್ಟರ್ ಭೂಮಿಯನ್ನು ಒತ್ತುವರಿ ಮಾಡಲಾಗಿದೆ. 4.97 ದಶಲಕ್ಷ ಹೆಕ್ಟರ್ ಭೂಮಿಯನ್ನು ಅರಣ್ಯದಿಂದ ಕೃಷಿಗಾಗಿ ಪರಿವರ್ತಿಸಲಾಗಿದೆ. ಜಲಾಶಯಗಳ ನಿರ್ಮಾಣಕ್ಕಾಗಿ 5,20,000 ಹೆಕ್ಟೇರ್ ಭೂಮಿಯನ್ನು, ಕೈಗಾರಿಕೆಗಳ ಸ್ಥಾಪನೆಗೆ 1,40,00 ಹೆಕ್ಟರ್ ಭೂಮಿಯನ್ನು, ವಿದ್ಯುತ್ ಲೈನ್ ಹಾಗೂ ರಸ್ತೆ ನಿರ್ಮಾಣ, 60,000 ಹೆಕ್ಟರ್ ಭೂಮಿಯನ್ನು ಗೃಹ ನಿರ್ಮಾಣಕ್ಕಾಗಿ ಬಳಸಲಾಗಿದೆ. ಇದೆಲ್ಲವೂ ಕಾಡುಗಳ ನಾಶದಿಂದ ಆದ ಪರಿಣಾಮಗಳಾಗಿವೆ. ಅತಿಯಾದ ಕಾಡುಗಳ ನಾಶದಿಂದ ಹುಲಿ, ಚಿರತೆ, ಆನೆ, ನರಿಗಳು, ತೋಳ, ಸಿಂಹದಂತಹ ಪ್ರಾಣಿಗಳು ಆಹಾರವನ್ನು ಅರಸಿ ನಗರಗಳಿಗೆ ಲಗ್ಗೆ ಇಡುತ್ತಿರುವ ದೃಶ್ಯಗಳನ್ನು ನಾವಿಂದು ಎಲ್ಲ ಕಡೆಗಳಲ್ಲಿಯೂ ಕಾಣುತ್ತಿದ್ದೇವೆ. ಹೆಬ್ಬಾವು, ಕಾಳಿಂಗ ಸರ್ಪ, ನಾಗರಹಾವು, ಕೆರೆ ಹಾವು ಮುಂತಾದವುಗಳು ನಗರಗಳಿಗೆ ಪ್ರವೇಶಿಸಿ ಎಲ್ಲೆಂದರಲ್ಲಿ ಮನೆಯ ಬಾಗಿಲಗಳ ಹಾಗೂ ಮನೆಯ ಮುಂದಿನ ಹೂವಿನ ಪಾಟ್ಗಳಲ್ಲಿ ಆಶ್ರಯ ಪಡೆದುಕೊಂಡಿರುವುದು ಸಾಮಾನ್ಯ ಸಂಗತಿಯಾಗಿದೆ.
2. ವನ್ಯಜೀವಿಗಳ ಬೇಟೆಯಾಡುವಿಕೆ:
ಭೂಮಿಯ ಮೇಲಿನ ವನ್ಯಜೀವಿಗಳ ಸಂತತಿಯ ನಾಶವಾಗುವಿಕೆ ಇಂದಿನ ದಿನಗಳಲ್ಲಿ ಮಿತಿಮೀರಿದೆ. ಇದಕ್ಕೆ ಮೂಲ ಕಾರಣವೆಂದರೆ ವನ್ಯಜೀವಿಗಳ ಬೇಟೆಯಾಡುವಿಕೆ. ಸರ್ಕಾರಗಳು ಪ್ರಾಣಿಗಳ ಬೇಟೆಗೆ ಎಷ್ಟೇ ನಿಷೇಧವನ್ನು ಹೇರಿದ್ದರೂ ಕಳ್ಳತನದಲ್ಲಿ ಬೇಟೆಯಾಡುವುದನ್ನು ಜನರು ನಿಲ್ಲಿಸಿಲ್ಲ. 19ನೇ ಶತಮಾನದ ಪೂರ್ವಾರ್ಧದಲ್ಲಿ ಭಾರತದಲ್ಲಿ ವನ್ಯಜೀವಿ ಸಂಪತ್ತು ಅಪಾರವಾಗಿತ್ತು. ಹಾಗಾಗಿ ದೇಶ ನೈಸರ್ಗಿಕ ಸಂಪತ್ತಿನಿಂದ ತುಂಬಿ ತುಳುಕುತ್ತಿತ್ತು. ಪ್ರಾಚೀನ ಕಾಲದಲ್ಲಿ ರಾಜ ಮಹಾರಾಜರು ಪ್ರಾಣಿಗಳ ಬೇಟೆಗಾರಿಕೆಯನ್ನು ಒಂದು ವಿನೋದ ಎಂಬಂತೆ ಪರಿಗಣಿಸಿದ್ದರು. ಪರಿಣಾಮವಾಗಿ ಸಾವಿರಾರು ಆನೆಗಳು, ಹುಲಿಗಳು, ಕೋಣಗಳು, ಜಿಂಕೆಗಳು ಮಹಾರಾಜರ ವ್ಯಾಮೋಹಕ್ಕೆ ಸಿಲುಕಿ ಸರ್ವನಾಶವಾದವು. ಪ್ರಸ್ತುತ ವಿವಿಧ ಮೂಲಗಳಿಂದ ಮಾನವರು ಪ್ರಾಣಿಗಳನ್ನು ಬೇಟೆಯಾಡಲು ತೊಡಗಿದ್ದಾರೆ. ಪ್ರಾಣಿಗಳ ಚರ್ಮ, ಕೊಂಬು, ಮಾಂಸ, ತೈಲಗಳಿಗಾಗಿ ಪ್ರಾಣಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಹೀಗಾಗಿ ಎರಡು ಕೊಂಬಿನ ಖಡ್ಗ ಮೃಗ, ಕಾಡು ಕತ್ತೆ, ಏಷ್ಯಾದ ಸಿಂಹ, ಕಾಶ್ಮೀರಿನ ಸಾರಂಗ, ಬಾತುಕೋಳಿ, ಬಕ ಪಕ್ಷಿ, ಬಸ್ಟರ್ಡ್, ಬಿಳಿ ರೆಕ್ಕೆಯ ಮರಬಾತು ಕೋಳಿ ಮುಂತಾದವುಗಳು ಕಣ್ಮರೆಯಾಗಿವೆ. ಹುಲಿಗಳು, ಸಿಂಹ, ಚಿರತೆ, ಕಾಡೆಮ್ಮೆ, ಕಾಡುಕೋಣ, ಜಿಂಕೆಗಳು ಅಳಿವಿನ ಅಂಚಿಕೆ ಬಂದು ತಲುಪಿವೆ. ಯಾವುದೇ ಒಂದು ಗಂಡು ಪ್ರಾಣಿ ಕಡಿಮೆಯಾದರೂ ಸಂತಾನೋತ್ಪತ್ತಿಯ ಅಭಾವವನ್ನು ಎದುರಿಸಬೇಕಾಗುತ್ತದೆ.
3. ಮಾನವ ವನ್ಯಜೀವಿ ಸಂಘರ್ಷಗಳು: (Man wildlife conflict)
ಇಂದಿನ ಲಕ್ಷಾಂತರ ಜೀವ ವೈವಿಧ್ಯತೆಗಳ ನಾಶಕ್ಕೆ ಮಾನವನೇ ಪರೋಕ್ಷವಾಗಿ ಕಾರಣನಾಗಿದ್ದಾನೆ. ಇವನ ಅತಿಯಾದ ದುರಾಸೆ ಹಾಗೂ ಪರಿಸರದ ಮೇಲಿನ ವ್ಯಾಮೋಹ ಮುಂತಾದ ಕಾರಣಗಳಿಂದ ಪರಿಸರದ ಮೇಲೆ ಮಾನವನ ಹಸ್ತಕ್ಷೇಪ ದಿನೇ ದಿನೇ ಹೆಚ್ಚುತ್ತಿದೆ. ಇದರಿಂದಾಗಿ ಜೀವ ವೈವಿಧ್ಯತೆಯ ಉಳಿವಿನಲ್ಲಿ ಏರುಪೇರು ಕಂಡುಬಂದಿದೆ. ಹಲವು ಪ್ರಭೇದಗಳು ನಾಶಗೊಂಡು ವಿನಾಶದ ಅಂಚಿನಲ್ಲಿವೆ. ಕಾಡುಗಳನ್ನು ಕಡಿದು ವ್ಯವಸಾಯ ಭೂಮಿಯನ್ನು ತಯಾರು ಮಾಡುವುದು, ನದಿಗಳನ್ನು ಮುಚ್ಚುವುದು, ಕೈಗಾರಿಕೆಗಳು, ಅಣೆಕಟ್ಟುಗಳು, ರಸ್ತೆಗಳು, ರೈಲು ಮಾರ್ಗಗಳು, ಸೇತುವೆಗಳು, ವಸತಿ ನಿವೇಶನಗಳ ನಿರ್ಮಾಣ ಮುಂತಾದ ಕಾರಣಗಳಿಗಾಗಿ ಕಾಡುಗಳು ಹುಲ್ಲುಗಾವಲುಗಳು, ಚೌಗು ಪ್ರದೇಶಗಳು, ನದಿ ತೀರಗಳು, ಬೆಟ್ಟದ ಇಳಿಜಾರು ಪ್ರದೇಶಗಳನ್ನು ನಿತ್ಯವೂ ಮಾನವ ಆಕ್ರಮಿಸುತ್ತಲೇ ಇದ್ದಾನೆ. ಈ ಕಾರಣದಿಂದ ಕಾಡಿನಲ್ಲಿರುವ ಜೀವವೈವಿಧ್ಯಗಳು ಆಹಾರವಿಲ್ಲದೆ ಕೊರಗುತ್ತವೆ. ಮತ್ತು ಆಹಾರವನ್ನು ಅರಸಿ ನಗರಗಳಿಗೆ ಲಗ್ಗೆ ಇಡುತ್ತವೆ. ಬೇಸಿಗೆಯಲ್ಲಿ ಆಹಾರ ಮತ್ತು ನೀರಿನ ಕೊರತೆಯಿಂದ ಕಾಡು ಮೃಗಗಳು, ಹಾವು ಮತ್ತು ಇತರೆ ಜೀವಿಗಳು ನೆರೆಯ ವಸತಿ ಸಮುಚ್ಚಯಗಳಿಗೆ ಲಗ್ಗೆ ಇಡುತ್ತವೆ. ಮುಂಬೈ, ಮೈಸೂರಿನಂತಹ ನಗರಗಳಿಗೂ ಚಿರತೆಗಳು ಬಂದು ದಾಳಿ ಮಾಡಿದ ಉದಾಹರಣೆಗಳು ಇವೆ. ಹೀಗಾಗಿ ಕಾಡಿನಂಚಿನಲ್ಲಿರುವ ಜನರ ಮತ್ತು ವನ್ಯಜೀವಿಗಳ ನಡುವೆ ನಿರಂತರವಾಗಿ ಸಂಘರ್ಷಗಳು ನಡೆಯುತ್ತಿವೆ. ನಗರ ಜನರ ಹಾಗೂ ಚಿರತೆ, ಹುಲಿ, ಕರಡಿ ಹಾಗೂ ಹಾವುಗಳ ನಡುವಿನ ಹೋರಾಟ ಮುಂದುವರೆದಿದೆ. ಭಾರತದಲ್ಲಿ ಈ ಸಮಸ್ಯೆ ಮಿತಿಮೀರಿದೆ. ರೈತರು ಮೈಚಳಿ ಬಿಟ್ಟು ತಮ್ಮ ತೋಟ, ಹೊಲ-ಗದ್ದೆಗಳಿಗೆ ಹೋಗುವಂತಿಲ್ಲ. ದನಗಾಹಿಗಳ ಮೇಲೆ ಚಿರತೆ, ಹುಲಿಗಳು ಎರಗಿದ ಉದಾಹರಣೆಗಳು ಇವೆ. ಕಾಡಾನೆಗಳ ದಾಳಿ ಮಾನವನ ಮೇಲೆ ನಿರಂತರವಾಗಿ ನಡೆಯುತ್ತಲೇ ಇದೆ. ಇದಕ್ಕೆ ಮಾನವನ ಸ್ವಯಂಕೃತ ಅಪರಾಧವೇ ಕಾರಣ ಎಂದರು ತಪ್ಪಲ್ಲ. ಕಾಡುಗಳ ನಾಶ ಹೀಗೆಯೇ ಮುಂದುವರೆದರೆ ಹಾಡು ಹಗಲೇ ವನ್ಯಮೃಗಗಳು, ಹಾವು, ಚೇಳುಗಳು ವಸತಿ ಸಮುಚ್ಚಯದಲ್ಲಿ ಬಂದು ವಾಸಿಸುವ ದಿನಗಳು ದೂರ ಉಳಿದಿಲ್ಲವೆಂದು ಹೇಳಬಹುದು.
ಹುಲಿ, ಚಿರತೆ, ಆನೆಗಳು ಹಾಗೂ ತೋಳ ಮುಂತಾದ ಪ್ರಾಣಿಗಳು ಮಾನವನ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿವೆ. ಆಹಾರಕ್ಕಾಗಿ ಮನುಷ್ಯನನ್ನೇ ತಿನ್ನುವ ಹಂತಕ್ಕೆ ಬಂದಿವೆ. ಹೀಗಾಗಿ ಇದನ್ನು ಜೈವಿಕ ಅಕ್ರಮಣ ಎಂದು ಕರೆಯಬಹುದಾಗಿದೆ. ಕರ್ನಾಟಕದ ಸಂಡೂರಿನಲ್ಲಿ ಕರಡಿಗಳ ಸಂತತಿ ಹೆಚ್ಚಿದ್ದು ಕಾಡಿಗೆ ಹೋದ ಜನರ ಮೇಲೆ ಕರಡಿಗಳು ಆಗಾಗ ಆಕ್ರಮಣ ಮಾಡಿದ ಸುದ್ದಿಗಳನ್ನು ಪತ್ರಿಕೆಗಳಲ್ಲಿ ಓದುತ್ತೇವೆ.
4. ಅನುವಂಶಿಯ ಮಾಲಿನ್ಯ: (Genetic pollution)
ಅನುವಂಶಿಯ ಮಾಲಿನ್ಯದಿಂದ ಸ್ಥಳೀಯ ಪ್ರಭೇದಗಳು ವಿನಾಶದತ್ತ ಸಾಗುತ್ತಿವೆ. ಅನುವಂಶೀಯ ಮಾಲಿನ್ಯದ ಪರಿಣಾಮವಾಗಿ ಜೀವ ಪ್ರಭೇದದ ಜೀನ್ ಕಣಜವು ನಿಷ್ಕ್ರಿಯಗೊಳ್ಳುತ್ತದೆ.
5. ಹವಾಮಾನದ ಬದಲಾವಣೆ: (Climate change)
ವಿಪರೀತ ತಾಪಮಾನ ಒಂದು ಕಡೆ ವಿಪರೀತ ಶೀತ ವಲಯ ಇನ್ನೊಂದು ಕಡೆ ಅರೆ ಮಳೆಗಾಲ ಹಾಗೂ ಅತಿಯಾದ ಮಳೆಗಾಲ ಮತ್ತೊಂದು ಕಡೆ ಇದ್ದು ಭೂ ಮಂಡಲವು ಅಸಮತೋಲನದಿಂದ ಕೂಡಿದೆ. ಹೀಗೆ ಹವಾಮಾನದಲ್ಲಿ ಏರುಪೇರು ಕಂಡುಬರುವುದರಿಂದ ಜೀವ ಪ್ರಭೇದಗಳು ಹಾಗೂ ಪರಿಸರ ವ್ಯವಸ್ಥೆಯನ್ನು ಗಂಡಾಂತರದಲ್ಲಿ ಸಿಲುಕಿಸಿದೆ. ಸಸ್ಯವರ್ಗ ಹಾಗು ಪ್ರಾಣಿ ಸಂಸ್ಕೃತಿಯ ಮೇಲೆ ಈ ಹವಾಮಾನದ ಪ್ರಭಾವ ಹೆಚ್ಚಾದರೆ ಅವುಗಳು ಸಹ ವಿನಾಶಕ್ಕೆ ತಳ್ಳಲ್ಪಡುತ್ತವೆ. ವಾಯುಮಂಡಲದಲ್ಲಿ ಹೆಚ್ಚುತ್ತಿರುವ co2 ಪ್ರಮಾಣ ಸಸ್ಯಗಳ ರಚನೆಯ ಮೇಲೆ ಖಚಿತವಾಗಿ ಪರಿಣಾಮ ಬೀರುತ್ತದೆ.
ಉಪಸಂಹಾರ
ಜೀವವೈವಿಧ್ಯತೆಯ ನಾಶವು ಪ್ರಕೃತಿಯ ಸಮತೋಲನವನ್ನು ಭಂಗಪಡಿಸುವ ಅತ್ಯಂತ ಗಂಭೀರ ಸಮಸ್ಯೆಯಾಗಿದೆ. ವಾಸಸ್ಥಾನದ ನಷ್ಟ, ವನ್ಯಜೀವಿಗಳ ಬೇಟೆ, ಮಾನವ–ವನ್ಯಜೀವಿ ಸಂಘರ್ಷ, ಅನುವಂಶಿಯ ಮಾಲಿನ್ಯ ಹಾಗೂ ಹವಾಮಾನ ಬದಲಾವಣೆಗಳು ಜೀವಜಗತ್ತನ್ನು ಅಳಿವಿನ ಅಂಚಿಗೆ ತಳ್ಳುತ್ತಿವೆ. ಈ ಸಮಸ್ಯೆಗೆ ಮಾನವನೇ ಪ್ರಮುಖ ಕಾರಣವಾಗಿರುವುದರಿಂದ ಪರಿಹಾರವೂ ಮಾನವನಿಂದಲೇ ಬರಬೇಕು. ಪರಿಸರ ಸಂರಕ್ಷಣೆ, ಅರಣ್ಯ ರಕ್ಷಣೆ ಮತ್ತು ಜಾಗೃತಿಯ ಮೂಲಕ ಮಾತ್ರ ಜೀವವೈವಿಧ್ಯತೆಯನ್ನು ಉಳಿಸಿಕೊಳ್ಳಲು ಸಾಧ್ಯ. ಇಂದಿನ ಎಚ್ಚರಿಕೆಯ ನಡೆ ನಾಳೆಯ ಜೀವಜಗತ್ತಿನ ಭವಿಷ್ಯವನ್ನು ರಕ್ಷಿಸುತ್ತದೆ.