ಮಣ್ಣಿನ ಸವಕಳಿ, ಭೂಕಂಪ, ಭೂಕುಸಿತ, ಜ್ವಾಲಾಮುಖಿ, ಖನಿಜಗಳು, ಸಸ್ಯಗಳು, ಪ್ರಾಣಿ ಹಾಗೂ ಸಸ್ಯಗಳ ಕೊಳೆತ ಪದಾರ್ಥಗಳು, ನದಿ, ಸಾಗರ ಹಾಗೂ ಸಮುದ್ರಗಳಲ್ಲಿ ಸೇರಿ ಜಲಮಾಲಿನ್ಯವನ್ನು ಉಂಟುಮಾಡುತ್ತವೆ. ನಿಕ್ಕಲ್‌, ಸೀಸ, ಕೋಬಾಲ್ಡ್‌ ಹಾಗೂ ಪಾದರಸ ಸಹ ಜಲಮಾಲಿನ್ಯಕ್ಕೆ ಕಾರಣಗಳಾಗಿವೆ. ಜಲಮಾಲಿನ್ಯದ ಮೂಲಗಳು ಅಥವಾ ಕಾರಣಗಳು. ಈ ಕೆಳಗಿನಂತಿವೆ.

1. ಸಮುದಾಯ ಮಾಲಿನ್ಯಗಳು: ಮಾನವ ಸಮುದಾಯದ ಹೇಯ ಕೃತ್ಯದಿಂದ ಜಲಮಾಲಿನ್ಯ ಹೆಚ್ಚು ಕಂಡುಬರುತ್ತದೆ. ಮನೆಗಳಿಂದ ಹೊರಬರುವ ತ್ಯಾಜ್ಯ, ವಾಣಿಜ್ಯಕೈಗಾರಿಕಾ ತ್ಯಾಜ್ಯಗಳು, ಸಾರ್ವಜನಿಕ ಚರಂಡಿನೀರು, ಈ ಚರಂಡಿಯಲ್ಲಿ ಮಾನವ ಮತ್ತು ಪ್ರಾಣಿಗಳ ಮಲಮೂತ್ರಗಳು, ಆಹಾರದ ಉಳಿಯುವಿಕೆ, ಕೊಳೆಯುವಿಕೆ, ಸಾಬೂನು ನೀರು ಸ್ನಾನದಿಂದ ಬಳಸಿದ ನೀರು, ಬಟ್ಟೆಯನ್ನು ತೊಳೆದ ನೀರು ಮುಂತಾದವುಗಳು ನದಿ, ಹಳ್ಳ,ಕೆರೆ, ಸರೋವರ ಹಾಗೂ ಸಾಗರವನ್ನು ಸೇರಿ ಜಲಮಲಿನಗೊಳಿಸುವುದು.

2. ನಗರ ಹಾಗೂ ಪಟ್ಟಣಗಳ ನೀರು:  ಇಂದು ನಗರ ಹಾಗೂ ಪಟ್ಟಣಗಳು ದಿನೇ ದಿನೇ ಬೆಳೆಯುತ್ತಿರುವುದರಿಂದ ಆ ಪ್ರದೇಶಗಳು ಹೆಚ್ಚು ಕೊಳಗೇರಿಗಳಾಗಿರುತ್ತವೆ. ಹೋಟೆಲ್‌ಗಳು, ಅಂಗಡಿಗಳು, ಗ್ಯಾರೇಜ್, ಮೀನುಮಾರುಕಟ್ಟೆ, ತರಕಾರಿ ಮಾರುಕಟ್ಟೆಗಳು ಮುಂತಾದವುಗಳಿಂದ ಸಂಗ್ರಹ ಗೊಂಡ ಚಿಂದಿ ಕಾಗದ, ಬಟ್ಟೆ, ಪ್ಲಾಸ್ಟಿಕ್, ಮೀನು ಹಾಗೂ ತರಕಾರಿಗಳ ತ್ಯಾಜ್ಯ ವಸ್ತುಗಳು ಹಾಗೂ ಪ್ರಾಣಿಗಳ ಮಾಂಸವನ್ನು ಕತ್ತರಿಸಿದ ನೀರು ಮುಂತಾದವುಗಳು ಚರಂಡಿ ಅಥವಾ ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ಜಲಮಾಲಿನ್ಯಕ್ಕೆ ಕಾರಣವಾಗುತ್ತದೆ.

3. ಕೈಗಾರಿಕೆಗಳ ಮಾಲಿನ್ಯ:  ದೇಶದಾದ್ಯಂತ ಸಾವಿರಾರು ಕೈಗಾರಿಕೆಗಳು ಸ್ಥಾಪನೆಯಾಗಿವೆ. ಈ ಕೈಗಾರಿಕೆಗಳು ಸಾಮಾನ್ಯವಾಗಿ ನದಿಗಳ ದಂಡೆಯ ಮೇಲೆ ನಿರ್ಮಾಣವಾದ ಕಾರಣ ಅವುಗಳು ಹೊರಬಿಡುವ ತ್ಯಾಜ್ಯಗಳು ನದಿಗಳ ನೀರಿನಲ್ಲಿ  ಸೇರಿಹೋಗುತ್ತವೆ. ಉದಾ:  ಮರದ ತಿರುಳು, ಕಾಗದ ತಯಾರಿಕೆ, ರಾಸಾಯನಿಕ ಹಾಗೂ ಪೆಟ್ರೋ ರಸಾಯನಿಕ ಕೈಗಾರಿಕೆಗಳು, ತೈಲ ಶುದ್ಧೀಕರಣ ಕೇಂದ್ರಗಳು, ಲೋಹ ಕೈಗಾರಿಕೆ, ಆಹಾರ ಸಂರಕ್ಷಣಾ ಕೇಂದ್ರಗಳು, ಕಬ್ಬು ಹಾಗೂ ಸಕ್ಕರೆ ಕಾರ್ಖಾನೆಗಳು, ಬಟ್ಟೆಗಿರಣಿಗಳು, ಡಿಸ್ಟಿಲರೀಸ್‌, ಸಾಬೂನು ತಯಾರಿಕಾ ಕಾರ್ಖಾನೆ, ಟೂತ್‌ಪೇಸ್ಟ್ ತಯಾರಿಕಾ ಕಾರ್ಖಾನೆ, ಮುಂತಾದವುಗಳು ಪ್ರತಿದಿನ ಹರಿಬಿಡುವ ತ್ಯಾಜ್ಯಗಳಿಗೆ ಲೆಕ್ಕವಿಲ್ಲ. ಇದರಿಂದ ಭಾರತದ ಶೇಕಡ 90ರಷ್ಟು ನದಿಗಳು ಮಲಿನಗೊಂಡಿವೆ.

4. ಕೃಷಿಯ ಮೂಲಗಳು: ಸಸ್ಯ ಪೋಷಕಾಂಶಗಳನ್ನು ಹೊಂದಿರುವ ಗೊಬ್ಬರಗಳು, ನೈಟ್ರೋಜನ್, ಪಾಸ್ಪರಸ್ ಹಾಗೂ ಪೊಟ್ಯಾಶಿಯಂ ಗೊಬ್ಬರಗಳು ನದಿ ನೀರನ್ನು ಸೇರುವುದು. ಕೀಟನಾಶಕಗಳು, ಶಿಲೀಂದ್ರಗಳು, ಸಸ್ಯನಾಶಕಗಳು, ಸಾವಯವ ಪಾಸ್ಪೇಟಗಳು, ಕಾರ್ಬೋನೇಟ್‌ಗಳು, ರಸಾಯನಿಕಗಳು, ಕ್ಲೋರಿನೇಟೆಡ್‌  ಹೈಡ್ರೋಕಾರ್ಬನ್‌ಗಳು ಮುಂತಾದವುಗಳು. ಪ್ರಾಣಿಗಳ ತ್ಯಾಜ್ಯವಾದ ಮಲ, ಮೂತ್ರ, ಕೋಳಿ ಫಾರಂಗಳ ತ್ಯಾಜ್ಯ ಹಾಗೂ ಕಸಾಯಿಖಾನೆಗಳ ತ್ಯಾಜ್ಯ ನೀರಿನ ಮೂಲಗಳನ್ನು ಸೇರಿ ಜಲ ಮಾಲಿನ್ಯವನ್ನು ಉಂಟುಮಾಡುತ್ತವೆ.

5. ಉಷ್ಣ ವಿದ್ಯುತ್ ಸ್ಥಾವರಗಳಿಂದ ಮಾಲಿನ್ಯ:  ಉಷ್ಣವಿದ್ಯುತ್‌ ಸ್ಥಾವರಗಳು ಹಾಗೂ ಇತರೆ ವಿದ್ಯುತ್‌ ಘಟಕಗಳಿಂದ ಕಾಯ್ದ ನೀರನ್ನು ಹೊರಗಡೆ ಬಿಡುವುದರಿಂದ ಆ ನೀರು ಶುದ್ಧ ನೀರಿನ ಜೊತೆಗೆ ವಿಲೀನಗೊಂಡಾಗ ನದಿ ನೀರು ಹೆಚ್ಚು ತಾಪಮಾನಕ್ಕೆ ಒಳಗಾಗುತ್ತದೆ. ನೀರಿನಲ್ಲಿದ್ದ ಮೀನುಗಳು ಹಾಗೂ ಇತರೆ ಜಲಚರಗಳು ಸಾವಿಗೀಡಾಗುತ್ತವೆ. ಇತ್ತೀಚಿಗೆ ಈ ಸಮಸ್ಯೆ ಬಹಳ ಗಂಭೀರವಾಗಿದ್ದು ಜಲಚರ ವ್ಯವಸ್ಥೆಗೆ ಮಾರಕವಾಗಿದೆ.

6.ಅಂತರ್ಜಲ ಮಾಲಿನ್ಯ ಮೂಲಗಳು: ನಗರ ಪ್ರದೇಶಗಳ ಕೈಗಾರಿಕೆಗಳು ಹಾಗೂ ಪುರಸಭೆಯ ತ್ಯಾಜ್ಯಗಳು ಹಾಗೂ ತ್ಯಾಜ್ಯಜಲದ ಕಾಲುವೆಯ ಸೋರಿಕೆಯಿಂದ ಅಂತರ್ಜಲ ನೀರಿನ ಮಾಲಿನ್ಯ ಹೆಚ್ಚಾಗಿ ಕಂಡುಬರುತ್ತಿದೆ.

7. ತೈಲ ಸೋರಿಕೆ ಮೂಲಗಳು : ಪ್ರಸ್ತುತ ದಿನಗಳಲ್ಲಿ ಸಮುದ್ರದಲ್ಲಿ ತೈಲ ಸೋರಿಕೆಯಿಂದ ನೀರು ಮಲಿನಗೊಳ್ಳುವುದು ಸಾಮಾನ್ಯವಾಗಿದೆ. ಸಮುದ್ರಯಾನದಿಂದ ವಿಸರ್ಜನೆಯಾಗುವ ತೈಲಗಳು, ಗ್ರೀಸ್‌, ಸಾಬೂನು, ಕಸ, ವಿಕೀರಣ ತ್ಯಾಜ್ಯ, ಸಾಗರದ ತೈಲ, ಗಣಿಗಾರಿಕೆ, ತೈಲಸೋರಿಕೆಗಳು ಸಾಗರದ ಮಾಲಿನ್ಯಕ್ಕೆ ಕಾರವಾಗಿದೆ. ಸಮುದ್ರದ ತೀರದಾಚೆ ತೈಲಬಾವಿಗಳ ತೋಡುವ ಕಾರ್ಯಾಚರಣೆಯಿಂದ ಜಲಮಾಲಿನ್ಯವಾಗುತ್ತದೆ.

8. ವಿಕೀರಣ ವಸ್ತು : ದೇಶದಲ್ಲಿ ಆಗಾಗ ಅಣುಬಾಂಬುಗಳ ಪರೀಕ್ಷೆಗಳು ನಡೆಯುತ್ತವೆ. ಆಗ ವಿಕೀರಣಶೀಲ ವಸ್ತುಗಳು ವಾಯುಮಂಡಲದಲ್ಲಿ ವ್ಯಾಪಕವಾಗಿ ಹರಡಿ ಅವು ನಂತರ ಮಳೆಯ ರೀತಿಯಲ್ಲಿ ಭೂಮಿಯ ಮೇಲೆ ಬೀಳುತ್ತವೆ. ಆನಂತರ ಅವುಗಳು ನದಿಯ ಸೇರಿ ಜಲಮಾಲಿನ್ಯಕ್ಕೆ ಕಾರಣವಾಗುತ್ತವೆ.

9. ಒಳನಾಡಿನ ಜಲ ಮಾಲಿನ್ಯ ಮೂಲಗಳು: ಜನಸಂಖ್ಯಾ ಬೆಳವಣಿಗೆ, ಕೈಗಾರಿಕಾ ಅಭಿವೃದ್ಧಿ, ನಗರಗಳ ಬೆಳವಣಿಗೆಯಿಂದ ಜಲ ಮಾಲಿನ್ಯವು ಒಂದು ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದೆ. ಒಳನಾಡಿನ ಜಲಮೂಲಗಳು ಅತೀವವಾಗಿ ಮಲಿನಗೊಂಡಿವೆ. ಸಕ್ಕರೆ ಕಾರ್ಖಾನೆ, ಡಿಸ್ಟಿಲರಿಸ್ ಕಾರ್ಖಾನೆ, ರೇಷ್ಮೆ, ಗ್ಲಿಸರಿನ್, ಡಿಡಿಟಿ, ರಸಾಯನಿಕ, ರಸಗೊಬ್ಬರ, ರಬ್ಬರ್, ಕಾಗದ, ಸಿಮೆಂಟ್, ಚರ್ಮ ಹದ ಮಾಡುವ ಹಾಗೂ ಬಣ್ಣ ತಯಾರಿಕಾ ಕಾರ್ಖಾನೆಗಳಿಂದ ಹೊರಬರುವ ಕೊಳಚೆ ಹಾಗೂ ತ್ಯಾಜ್ಯ ವಸ್ತುಗಳು, ಸಮೀಪದ ಕೆರೆ, ಸರೋವರ, ನದಿ, ಹೊಂಡಗಳಲ್ಲಿ ಸೇರಿ ಜಲಮಾಲಿನ್ಯವನ್ನು ಉಂಟುಮಾಡುತ್ತದೆ. ಉದಾ: ಕರ್ನಾಟಕದ ಕಪಿಲಾ ಹಾಗೂ ತುಂಗಭದ್ರಾ ನದಿಗಳು ಗಣನೀಯವಾಗಿ ಮಲಿನಗೊಂಡಿವೆ. ತುಂಗಭದ್ರಾ ನದಿಗೆ ಹರಿಹರದ ಪಾಲಿ ಫೈಬರ್ ಕಾರ್ಖಾನೆಯ ತ್ಯಾಜ್ಯ ವಸ್ತುಗಳನ್ನು ಬಿಡುವುದರಿಂದ ಆ ನೀರು ಕುಡಿಯಲು ಯೋಗ್ಯವಾಗಿಲ್ಲ. ಕಾರವಾರದ ಸಮೀಪ ಬಿಣಗದಲ್ಲಿ ಒಂದು ಕಾಸ್ಟಿಕ್ ಸೋಡಾ ಕಾರ್ಖಾನೆ ಇದೆ. ಇದರ ತ್ಯಾಜ್ಯ ಸಮುದ್ರಕ್ಕೆ ಸೇರುವುದರಿಂದ ಆ ನೀರು ಮಾಲಿನ್ಯಯುಕ್ತವಾಗಿದೆ. ಭದ್ರಾವತಿಯ ಹತ್ತಿರ ಭದ್ರಾ ನದಿಯ ಗತಿಯೂ ಇದೇ ರೀತಿ ಆಗಿದೆ. ಧರ್ಮಸ್ಥಳದ ನೇತ್ರಾವತಿ ಪೂರ್ಣಕಲುಷಿತಗೊಂಡಿದೆ. ತುಂಗಭದ್ರಾನದಿಯೂ ಮಾಲಿನ್ಯಕಾರಕವಾಗಿದ್ದು ನದಿಯ ದಂಡೆಯಲ್ಲಿ ಸ್ನಾನ ಮಾಡಿದ ಹಳೆ ಬಟ್ಟೆಗಳು, ಪ್ಲಾಸ್ಟಿಕ್ ಬಾಟಲ್‌ಗಳು, ಹರಿದ ಚಪ್ಪಲಿಗಳು, ಕಸ ಕಡ್ಡಿಗಳು, ರಾಶಿ ರಾಶಿ ಆಗಿ ಬಿದ್ದಿದೆ. ಮಳೆಗಾಲದಲ್ಲಿ ಇವುಗಳು ನದಿಯನ್ನು ಸೇರಿದಾಗ ನದಿಯ ನೀರು ಮಲಿನಗೊಳ್ಳುತ್ತದೆ. ಬೆಂಗಳೂರು ನಗರದ ಮೂಲಕ ಹರಿಯುತ್ತಿದ್ದ ವೃಷಭಾವತಿ ನದಿಯು ಇಂದು ನಗರದ ಒಳ ಚರಂಡಿ ನೀರನ್ನು ಹೊರ ಹಾಕುವ ಮಾರ್ಗವಾಗಿದೆ. ವೃಷಭಾವತಿ ಅದೊಂದು ನದಿಯಂತೆ ಕಾಣುವುದಿಲ್ಲ. ಅದನ್ನು ನದಿಯಾಗಿ ಗುರುತಿಸುವುದು ಕಷ್ಟ. ಅಷ್ಟೊಂದು ಮಲಿನವಾಗಿ ಚರಂಡಿಯ ಹಾಗೆ ಕಂಡುಬರುತ್ತದೆ.

ಭಾರತದ ಪರಿಸ್ಥಿತಿ:  ಭಾರತದ ಬಹುತೇಕ ನದಿಗಳು ಶೇಕಡ 70ರಷ್ಟು ಮಲಿನಗೊಂಡು ಹಾನಿಕಾರಕವಾಗಿವೆ ಎಂಬುದು ವಿಜ್ಞಾನಿಗಳ ಅಭಿಮತವಾಗಿದೆ.

ಭಾರತದ ಅತ್ಯಂತ ಪವಿತ್ರವಾದ ನದಿ ಎಂದು ಹೆಸರಾಗಿದ್ದ ಗಂಗಾ ನದಿಯ ನೀರು ಉತ್ತರ ಭಾರತದ ಎಲ್ಲಾ ನದಿಗಳಿಗಿಂತ ಮಲಿನವಾಗಿದೆ. ʻʻಗಂಗಾಸ್ನಾನಂ ತುಂಗಾಪಾನಂʼʼ ಎಂಬ ನಾಣ್ಣುಡಿಗೆ ಇಂದು ಬೆಂಕಿ ಬಿದ್ದಿದೆ. ಈ ನದಿಯ ಇಕ್ಕೆಲುಗಳಲ್ಲಿ ಸಾವಿರಾರು ಯಾತ್ರಾ ಸ್ಥಳಗಳು, ಕೈಗಾರಿಕಾ ಕೇಂದ್ರಗಳು ಹಾಗೂ ನಗರಗಳು ಬೆಳೆದಿವೆ. ಅವುಗಳಿಂದ ಹೊರ ಬರುತ್ತಿರುವ ಹೊಲಸು ನೀರು ಗಂಗಾನದಿಯನ್ನು ಸೇರಿ ಅಕ್ಷರಶಃ ಗಂಗಾ ನದಿಯನ್ನು ಒಳಚರಂಡಿಯಾಗಿಸಿವೆ. ಗಂಗಾ ನದಿಯ ದಂಡೆಯ ಮೇಲೆ ನಿರ್ಮಾಣವಾಗಿರುವ ಹೆಣಗಳನ್ನು ಸುಡುವ ತಾಣಗಳು, ಹೆಣಗಳನ್ನು ಸುಡಲೆಂದೇ ರಾಶಿ ಹಾಕಿರುವ ಕಟ್ಟಿಗೆಗಳು, ಸತ್ತ ಪ್ರಾಣಿಗಳಿಂದ ವಿಸರ್ಜಿಸಲಾಗುವ ಕೊಳಕುಗಳು ನೀರನ್ನು ಮಲಿನಗೊಳಿಸಿವೆ. ನದಿಯ ದಡದಲ್ಲಿಯೇ ಹೆಣಗಳನ್ನು ಸುಡುವುದು ಇಲ್ಲವೇ ಅರ್ಧಬೆಂದ ಹೆಣಗಳನ್ನು ನದಿಯಲ್ಲಿ ಬಿಡುವುದು. ಧಾರ್ಮಿಕ ನಂಬಿಕೆಯಿಂದ ತೇಲಿ ಬಿಡುವ ವಸ್ತುಗಳು ನದಿಯ ದಂಡೆಯಲ್ಲಿ ರಾಶಿಯಾಗಿ ಬಂದು ಬೀಳುತ್ತವೆ. ಇದರ ಜೊತೆಗೆ ಹೆಣಗಳನ್ನು ಒಂದು ಚಪ್ಪಟೆಯಾದ ಕಲ್ಲಿನ ಮೇಲೆ ಇಟ್ಟು ಅವುಗಳನ್ನು ನದಿಗಳ ಮಧ್ಯ ಭಾಗದಲ್ಲಿ ತೆಗೆದುಕೊಂಡು ಹೋಗಿ ಬಿಡುವುದು ಮುಂತಾದವುಗಳಿಂದ ನದಿಯ ನೀರಿನ ಮಟ್ಟ ಹೆಚ್ಚಾಗಿದೆ. ಸುತ್ತಲಿನ ಪ್ರದೇಶಗಳ ಕಸ ಕಡ್ಡಿ ಹೆಣವನ್ನು ಸುಟ್ಟ ಬೂದಿ ಹಾಗೂ ಇತರೆ ತ್ಯಾಜ್ಯ ವಸ್ತುಗಳು ನದಿಯನ್ನು ಸೇರುತ್ತದೆ. ಹೀಗೆ ವಿವಿಧ ಮೂಲಗಳಿಂದ ಪ್ರತಿದಿನ ನದಿಯಲ್ಲಿ 10 ದಶಲಕ್ಷ ಟನ್ ಕೊಳಕು ಸೇರುತ್ತದೆ.

ಇನ್ನು ತಾಜ್‌ಮಹಲ್ ಸುತ್ತಲೂ ಹರಿಯುತ್ತಿರುವ ಯಮುನಾ ನದಿಯ ಸ್ಥಿತಿಯಂತೂ ಹೇಳತೀರದು. ಈ ನದಿಯು ದೆಹಲಿಯಿಂದ 48 ಕಿ.ಮೀ ದೂರದಲ್ಲಿದ್ದು ದಿನವೊಂದಕ್ಕೆ 200 ಮಿಲಿಯನ್ ಲೀಟರ್‌ನಷ್ಟು ಚರಂಡಿ ನೀರನ್ನು ತನ್ನೊಂದಿಗೆ ಹೊತ್ತುಕೊಂಡು ಹೋಗುತ್ತಿದೆಯಂದರೆ ಯಮುನೆ ಎಷ್ಟೊಂದು ಕಲುಷಿತಗೊಂಡಿದ್ದಾಳೆ ಎಂಬುದನ್ನು ಊಹಿಸಿಕೊಳ್ಳಿ. ಇದರೊಂದಿಗೆ ಕಾರ್ಖಾನೆಗಳ ಕೊಳಚೆ ನೀರು ಹಾಗೂ ಅರ್ಧ ಮಿಲಿಯನ್ ಲೀಟರ್ ಡಿ.ಡಿ.ಟಿ. ಭರಿತ ಕಲ್ಮಶ ನದಿಯನ್ನು ಸೇರಿಕೊಳ್ಳುತ್ತದೆ.

ಚಂಬಲ್ ನದಿಯು ಸಹ ರಾಸಾಯನಿಕ ಗೊಬ್ಬರ ಕಾರ್ಖಾನೆ, ವಿದ್ಯುತ್ ಕೇಂದ್ರ ಹಾಗೂ ಶಾಖ ವಿದ್ಯುತ್ ಕೇಂದ್ರಗಳಿಂದ ವಿಸರ್ಜನೆಗೊಳ್ಳುವ ರಾಸಾಯನಿಕ ವಸ್ತುಗಳಿಂದ ಮಲಿನವಾಗಿದೆ.  ಹೂಗ್ಲಿ ನದಿಯು ಸೆಣಬಿನ ಕಾರ್ಖಾನೆ, ಬಟ್ಟೆ ಕಾರ್ಖಾನೆ, ಚರ್ಮಹದಮಾಡುವ ಹಾಗೂ ಕಾಗದ ಕಾರ್ಖಾನೆಗಳಿಂದ ಬಿಡುವ ತ್ಯಾಜ್ಯದಿಂದ ಮಲಿನಗೊಂಡಿದೆ. ಹೃದ್ರಾಬಾದನ ಮೂಸಿನದಿಯು ಇಂದು ದೊಡ್ಡ ಚರಂಡಿಯಾಗಿದೆ. ಗುಜರಾತಿನ ʻವಾಪಿʼ ಕೈಗಾರಿಕಾ ವಲಯ ರಸಾಯನಿಕ ನೀರಿನಿಂದ ಅಂತರ್ಜಲ ಮಲಿನವಾಗಿದೆ.

ಉಪಸಂಹಾರ

ಜಲಮಾಲಿನ್ಯವು ಮಾನವನ ಅಜಾಗರೂಕತೆ ಮತ್ತು ಅತಿಯಾದ ಅಭಿವೃದ್ಧಿಯ ಪರಿಣಾಮವಾಗಿ ಉಂಟಾಗುತ್ತಿರುವ ಗಂಭೀರ ಪರಿಸರ ಸಮಸ್ಯೆಯಾಗಿದೆ. ಶುದ್ಧ ನೀರಿನ ಕೊರತೆ ಮಾನವ ಆರೋಗ್ಯ, ಕೃಷಿ ಹಾಗೂ ಜೀವ ವೈವಿಧ್ಯಕ್ಕೆ ಅಪಾಯವನ್ನುಂಟುಮಾಡುತ್ತಿದೆ. ಕೈಗಾರಿಕಾ ತ್ಯಾಜ್ಯ ನಿಯಂತ್ರಣ, ಶುದ್ಧೀಕರಣ ಘಟಕಗಳ ಸ್ಥಾಪನೆ ಹಾಗೂ ಜನಜಾಗೃತಿ ಅತ್ಯಂತ ಅಗತ್ಯವಾಗಿದೆ. ಸರ್ಕಾರ, ಸಮಾಜ ಮತ್ತು ಪ್ರತಿಯೊಬ್ಬ ನಾಗರಿಕರು ಜವಾಬ್ದಾರಿಯಿಂದ ನಡೆದುಕೊಂಡಾಗ ಮಾತ್ರ ಜಲಮಾಲಿನ್ಯವನ್ನು ಕಡಿಮೆ ಮಾಡಬಹುದು. ಶುದ್ಧ ನೀರನ್ನು ಉಳಿಸುವುದು ನಮ್ಮ ಭವಿಷ್ಯವನ್ನು ಉಳಿಸುವುದಕ್ಕೆ ಸಮಾನವಾಗಿದೆ.