ಮುಕ್ತ ಹಾಗೂ ಪಾರದರ್ಶಕತೆಯಿಂದ ಚುನಾವಣೆಗಳನ್ನು ನಡೆಸಲು ಅನುಕೂಲವಾಗುವಂತೆ ಸ್ವತಂತ್ರ ಚುನಾವಣಾ ಆಯೋಗವನ್ನು ಭಾರತದ ಸಂವಿಧಾನ ರಚನಾಕಾರರು ಸಂವಿಧಾನದಲ್ಲಿ ಅಳವಡಿಸಿದರು. ರಾಜಕೀಯದಿಂದ ಚುನಾವಣೆಯನ್ನು ದೂರವಿಡಲು ಅಗತ್ಯವಾದ ಅಧಿಕಾರ ಕಾರ್ಯಗಳನ್ನು ಚುನಾವಣಾ ಆಯೋಗಕ್ಕೆ ನೀಡಿದರು. ಅದರ ಫಲವಾಗಿ ಇಂದು ಚುನಾವಣೆಗಳು ನ್ಯಾಯ ಸಮ್ಮತವಾಗಿ ನಡೆದುಕೊಂಡು ಬರುತ್ತವೆ. ಚುನಾವಣಾ ಅಧಿಕಾರಗಳ ಕಾರ್ಯಗಳು ಈ ಕೆಳಗಿನಂತಿವೆ.

1. ವಿವಿಧ ಚುನಾವಣೆಗಳ ನಿರ್ವಹಣೆ ನಿರ್ದೇಶನ ಹಾಗೂ ನಿಯಂತ್ರಣ ಮಾಡುವುದು:

ಭಾರತದ ಸಂವಿಧಾನದ 324ನೇ ವಿಧಿಯ ಪ್ರಕಾರ ಚುನಾವಣಾ ಪ್ರಕ್ರಿಯೆಯ ಸಂಪೂರ್ಣ ಜವಾಬ್ದಾರಿಯನ್ನು ಚುನಾವಣಾ ಆಯೋಗ ಹೊತ್ತಿದೆ. ʻʻಚುನಾವಣಾ ಆಯೋಗದ ಸಚಿವಾಲಯದ ಕೇಂದ್ರ ಕಚೇರಿ ನವದೆಹಲಿಯಲ್ಲಿದೆ. ಅದಕ್ಕೆ ನಿರ್ವಚನ ಸದನ ಎಂದು ಕರೆಯಲಾಗುತ್ತದೆ.ʼʼ ಇಲ್ಲಿ ಒಬ್ಬರು ಮುಖ್ಯ ಮತ್ತು ಇಬ್ಬರು ಉಪಚುನಾವಣಾಧಿಕಾರಿಗಳು ಇರುತ್ತಾರೆ. ಚುನಾವಣಾ ಆಯೋಗವು ಭಾರತದ ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳ ಚುನಾವಣೆಗಳನ್ನು ನಡೆಸುವ ಹೊಣೆಗಾರಿಕೆಯನ್ನು ಪಡೆದಿದೆ. ಇದರೊಂದಿಗೆ ರಾಷ್ಟ್ರಪತಿ, ಉಪರಾಷ್ಟ್ರಪತಿ ಹುದ್ದೆಗಳ ನಿರ್ವಹಣೆಯು ಸಹ ಚುನಾವಣಾ ಆಯೋಗದ ಹೆಗಲಮೇಲಿದೆ. ಮತದಾರರ ಪಟ್ಟಿ ತಯಾರಿಕೆ, ಚುನಾವಣಾ ವೇಳಾಪಟ್ಟಿಯ ಸಿದ್ಧತೆ, ಮತಗಳ ಎಣಿಕೆ ಮೊದಲಾದ ಪ್ರಕ್ರಿಯೆಗಳನ್ನು ನಿರ್ದೇಶಿಸುವ ಮತ್ತು ನಿಯಂತ್ರಿಸುವ ಕೆಲಸವನ್ನು ಆಯೋಗ ಮಾಡುತ್ತದೆ.

2. ಚುನಾವಣಾ ಕ್ಷೇತ್ರಗಳ ಗಡಿ ನಿರ್ಧರಿಸುವುದು:

ಸಂಸತ್ತು ಕಾಲ ಕಾಲಕ್ಕೆ ಕಾನೂನುಗಳನ್ನು ಪಾಸು ಮಾಡುತ್ತದೆ. ಆ ಪ್ರಕಾರ ಮತಕ್ಷೇತ್ರಗಳ ಮರು ವಿಂಗಡಣಾ ಆಯೋಗ ಸಿದ್ಧತೆಗಳನ್ನು ಮಾಡಿಕೊಂಡು ಇತ್ತೀಚಿನ ಜನಗಣತಿಯ ಅಂಕಿ ಅಂಶಗಳ ಆಧಾರದ ಮೇಲೆ ದೇಶದ ಪ್ರತಿಯೊಂದು ಲೋಕಸಭಾ ಹಾಗೂ ವಿಧಾನಸಭಾ ಮತಕ್ಷೇತ್ರಗಳ ಗಡಿಗಳನ್ನು ಬದಲಿಸುತ್ತದೆ. ಮತಕ್ಷೇತ್ರಗಳಲ್ಲಿ ಆದ ಜನಸಂಖ್ಯಾ ಬೆಳವಣಿಗೆ ಅಥವಾ ಮತಕ್ಷೇತ್ರಗಳ ವ್ಯತ್ಯಾಸಗಳನ್ನು ಹೋಗಲಾಡಿಸಿ ಸಮಸ್ಯೆಗೆ ಇಂಬು ಕೊಡದ ಹಾಗೆ ಸಮಾನ ಅವಕಾಶವನ್ನು ಕಲ್ಪಿಸಿ ಕೊಡಬೇಕಾದದ್ದು ಚುನಾವಣಾ ಆಯೋಗದ ಕರ್ತವ್ಯವಾಗಿದೆ. ಕ್ಷೇತ್ರ ಪುನರ್ವಿಂಗಡಣಾ ಆಯೋಗದ ಶಿಫಾರಸ್ಸಿನ ಆಧಾರದ ಮೇಲೆಯೇ ಚುನಾವಣಾ ಆಯೋಗ ಗಡಿಗಳನ್ನು ಗುರುತಿಸುತ್ತದೆ.

3. ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು:

ದೇಶದ ಎಲ್ಲಾ ಮತದಾರರ ಹೆಸರುಗಳನ್ನು ಒಳಗೊಂಡ ಮತದಾರರ ಪಟ್ಟಿಯನ್ನು ತಯಾರಿಸುವುದು ಚುನಾವಣಾ ಆಯೋಗದ ಮತ್ತೊಂದು ಹೆಜ್ಜೆಯಾಗಿದೆ. ಈ ಹಂತದಲ್ಲಿ ಅರ್ಹ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದಲ್ಲಿ ಅಂತವರನ್ನು ಅರ್ಹ ಮತದಾರ ಎಂದು ಪರಿಗಣಿಸುವುದಿಲ್ಲವಾದ್ದರಿಂದ ಮತದಾನ ಮಾಡಲು ಅವರಿಗೆ ಅವಕಾಶ ನೀಡುವಂತಿಲ್ಲ. ಮತದಾರರ ಪಟ್ಟಿಯನ್ನು ಆಯೋಗವು ಕಾಲಕಾಲಕ್ಕೆ ಪರಿಷ್ಕರಿಸಿ ಪ್ರಕಟಿಸಬೇಕು. ಒಂದು ನಿರ್ದಿಷ್ಟ ಸಮಯದಲ್ಲಿ ಮತದಾರನ ಪಟ್ಟಿಯಲ್ಲಿ ತಮ್ಮ ಹೆಸರು ಬಿಟ್ಟು ಹೋಗಿದ್ದರೆ ಅಥವಾ ಮೃತರಾದವರ ಹೆಸರು ಮತದಾರರ ಪಟ್ಟಿಯಲ್ಲಿಯೇ ಇದ್ದಿದ್ದರೆ ಅದಕ್ಕೆ ವಿರೋಧ ವ್ಯಕ್ತಪಡಿಸಬಹುದು. ಆಗ ಮತದಾರರ ಹೆಸರನ್ನು ಸೇರಿಸುವ ಮತ್ತು ಕೈಬಿಡುವ ಪ್ರಕ್ರಿಯೆಯನ್ನು ಮಾಡಲಾಗುತ್ತದೆ.

4. ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವುದು:

ಚುನಾವಣಾ ಆಯೋಗವು ರಾಷ್ಟ್ರಪತಿಗಳ ಶಿಫಾರಸಿನ ಮೇಲೆ ಚುನಾವಣೆಗಳನ್ನು ಘೋಷಣೆ ಮಾಡುತ್ತದೆ. ರಾಷ್ಟ್ರಪತಿಗಳು ಆದೇಶ ನೀಡಿದ ನಂತರವೇ ಆಯೋಗವು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೊಡನೆ ಸಮಾಲೋಚಿಸಿ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುತ್ತದೆ. ಈ ವೇಳಾಪಟ್ಟಿಯಲ್ಲಿ ನಾಮಪತ್ರವನ್ನು ಸಲ್ಲಿಸುವ ದಿನಾಂಕ ನಾಮಪತ್ರಗಳ ಪರಿಶೀಲನೆ ಹಾಗೂ ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವ ದಿನಾಂಕಗಳ ವಿವರಗಳಿರುತ್ತವೆ.

5. ಪಕ್ಷಗಳ ನೋಂದಣಿ ಹಾಗು ಚಿನ್ಹೆಗಳ ಹಂಚಿಕೆ:

ರಾಜಕೀಯ ಪಕ್ಷಗಳು ತಮ್ಮ ಪಕ್ಷವನ್ನು ಚುನಾವಣಾ ಆಯೋಗದಲ್ಲಿ ನೋಂದಾಯಿಸಿಕೊಳ್ಳಲು ಆಯೋಗವು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುತ್ತದೆ. ಜೊತೆಗೆ  ನೋಂದಾವಣೆಗೊಂಡ ರಾಜಕೀಯ ಪಕ್ಷಗಳಿಗೆ ಸೂಕ್ತವಾದ ಮತ್ತು ನಿರ್ದಿಷ್ಟವಾದ ಚುನಾವಣಾ ಚಿಹ್ನೆಗಳನ್ನು ನೀಡುತ್ತದೆ. ಭಾರತವು ಅನಕ್ಷರತೆಯನ್ನು ಹೊಂದಿದ ದೇಶವಾಗಿದ್ದು ಇಂದಿಗೂ ಬಹುಪಾಲು ಮತದಾರರು ಓದು ಬರಹ ಬಾರದೆ ಇರುವವರು ಇದ್ದಾರೆ. ಅಂತವರಿಗೆ ಈ ಚಿಹ್ನೆಗಳು ಮತದಾನ ಮಾಡುವಲ್ಲಿ ಸಹಾಯಕವಾಗುತ್ತದೆ. ಈ ಕಾರಣದಿಂದ ದೇಶದ ಚುನಾವಣೆಗೆ ಸ್ಪರ್ಧಿಸುವ ಎಲ್ಲಾ ಪಕ್ಷಗಳಿಗೆ ಚುನಾವಣಾ ಚಿಹ್ನೆಗಳನ್ನು ನೀಡುವುದು ಅನಿವಾರ್ಯವಾಗಿದೆ. 1951 ರ ಪ್ರಜಾಪ್ರತಿನಿಧಿ ಕಾಯಿದೆ ೫(೧) ನೇ  ವಿಧಿಯ ಅನ್ವಯ ಭಾರತದ ಪ್ರತಿ ರಾಜಕೀಯ ಪಕ್ಷಕ್ಕೆ ಚುನಾವಣಾ ಚಿಹ್ನೆಯನ್ನು ವಿತರಿಸುವ ಅಧಿಕಾರವನ್ನು ಚುನಾವಣಾ ಆಯೋಗ ಪಡೆದಿದೆ. ಚುನಾವಣಾ ಚಿಹ್ನೆಗಳ ಹಂಚಿಕೆಯ ಕುರಿತು ನ್ಯಾಯಾಲಯದಲ್ಲಿ ಪ್ರಶ್ನೆಗಳು ಎದ್ದಾಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಚುನಾವಣಾ ಆಯೋಗಕ್ಕೆ ಅಧಿಕಾರ ಇದೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿತು.

6. ಮರು ಚುನಾವಣೆಗೆ ಆದೇಶಿಸುವ ಅಧಿಕಾರ:

ಸಂವಿಧಾನದ 324ನೇ ವಿಧಿಯ ಪ್ರಕಾರ ದೇಶದ ವಿವಿಧ ಚುನಾವಣೆಗಳ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಚುನಾವಣಾ ಆಯೋಗವು ಅಗತ್ಯವಾದರೆ ಮರುಚುನಾವಣೆಯನ್ನು ನಡೆಸಲು ಅಧಿಕಾರವನ್ನು ಪಡೆದಿದೆ. ಚುನಾವಣೆಗಳು ನಡೆದು ಮತಎಣಿಕೆಯಾದ ಮೇಲೆಯೂ ಚುನಾವಣಾ ಪ್ರಕ್ರಿಯೆ ಸಮರ್ಪಕವಾಗಿಲ್ಲವೆಂದು ಪಕ್ಷಗಳು  ಮರುಚುನಾವಣೆಗೆ ಆದೇಶಿಸುವ ಅಧಿಕಾರ ಪಡೆದಿವೆ. ಮತದಾನದ ದಿನದಂದು ವಿಪರೀತ ಮಳೆ ಬಂದು ಪ್ರಕೃತಿ ವಿಕೋಪಗಳುಂಟಾದಾಗ, ನೈಸರ್ಗಿಕ ಕಾರಣದಿಂದ, ಮತಗಟ್ಟೆಯನ್ನು ವಶಪಡಿಸಿಕೊಳ್ಳುವುದು, ಮತದಾರರಿಗೆ ಬೆದರಿಕೆ ಹಾಕುವುದು ಮತ್ತು ಮತದಾರರ ಪಟ್ಟಿಯಲ್ಲಿನ ಗಂಭೀರ ದೋಷಗಳ ಕಾರಣದಿಂದ ಮತ ಚಲಾಯಿಸಲು ಸಾಧ್ಯವಾಗದಿದ್ದರೆ ಆಯೋಗವು ಮರುಚುನಾವಣೆಗೆ ಆದೇಶ ನೀಡಬಹುದು. ಹಾಗೆಯೇ ಮತ ಎಣಿಕೆಯ ಸಮಯದಲ್ಲಿ ಪರಿಸ್ಥಿತಿ ಕೈಮೀರಿ ಹೋದರೆ ಅಥವಾ ಮತಯಂತ್ರಗಳ ನಾಶದಂತಹ ಘಟನೆಗಳು ನಡೆದರೆ ಆಯೋಗ ಮರು ಚುನಾವಣೆಗೆ ಆದೇಶಿಸಬಹುದು. ಅಧಿಕಾರ ಮುಗಿಯುವ ಮುಂಚೆ ಮರಣಹೊಂದುವುದು, ರಾಜೀನಾಮೆ ನೀಡುವುದು ಅಥವಾ ಅನರ್ಹತೆಯ ಕಾರಣಗಳಿಂದ ಆ ಪ್ರದೇಶದ ತೆರವಾದ ಹುದ್ದೆಗೆ ಮರು ಚುನಾವಣೆ ಮಾಡುವುದು ಆಯೋಗದ ಕರ್ತವ್ಯವಾಗಿದೆ. ಈ ರೀತಿಯ ಚುನಾವಣೆಗಳನ್ನು ʻʻಉಪಚುನಾವಣೆ ಎಂದು ಕರೆಯಲಾಗುತ್ತದೆ.ʼʼ

7. ಚುನಾವಣೆಯನ್ನು ಮುಂದೂಡುವ ಅಧಿಕಾರ: 

ಸಾಮಾನ್ಯವಾಗಿ ಪ್ರತಿ ಐದು ವರ್ಷಗಳಿಗೆ ಒಮ್ಮೆ ಕೇಂದ್ರ ಹಾಗೂ ರಾಜ್ಯ ಚುನಾವಣೆಗಳನ್ನು ಮುಕ್ತ ಹಾಗೂ ಪಾರದರ್ಶಕವಾಗಿ ನಡೆಸುವ ಜವಾಬ್ದಾರಿಯನ್ನು ಚುನಾವಣಾ ಆಯೋಗ ಹೊಂದಿದೆ. ಆದರೆ ಕೇಂದ್ರ ಹಾಗೂ ರಾಜ್ಯಗಳಲ್ಲಿ ಚುನಾವಣೆಗಳನ್ನು ನಡೆಸಲು ಪೂರಕ ವಾತಾವರಣ ಇಲ್ಲದಿದ್ದರೆ ಚುನಾವಣೆಯನ್ನು ಮುಂದೂಡುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ. ಭಯೋತ್ಪಾದಕ ಚಟುವಟಿಕೆಗಳು ಮತ್ತು ಭೂಕಂಪ, ಅತಿವೃಷ್ಟಿಗಳು ಆಯೋಗದ ಚುನಾವಣಾ ಮುಂದೂಡಿಕೆಗೆ ಕಾರಣವಾಗಬಹುದು.

8. ಚುನಾವಣಾ ವೆಚ್ಚದ ಮಾಹಿತಿ ಪಡೆಯುವ ಅಧಿಕಾರ: 

ಪ್ರಜಾಪ್ರಭುತ್ವ ಭಾರತ ದೇಶದಲ್ಲಿ ಚುನಾವಣೆಗಳು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ಶುದ್ಧವಾಗಿ ನಡೆಯಬೇಕೆಂಬುದು ಎಲ್ಲರ ಆಶಯವಾಗಿದೆ. ಆದರೆ ಪ್ರಸ್ತುತ ಭಾರತದಲ್ಲಿ ಈ ರೀತಿಯ ಚುನಾವಣೆಗಳು ನಡೆಯದಿರುವುದು ಒಂದು ದುಃಖಕರ ಸಂಗತಿ ಎಂದು ಹೇಳಬಹುದು. ಇಂದು ಅಭ್ಯರ್ಥಿಗಳ ಗೆಲುವು ಹಣದ ಹೊಳೆಯನ್ನು ಹರಿಸುವುದರ ಮೂಲಕ ಅವಲಂಬಿಸಿದೆ ಎನ್ನುವಂತಾಗಿದೆ. ಶ್ರೀಮಂತ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಬೇಕಾ ಬಿಟ್ಟಿ ಹಣವನ್ನು ಚೆಲ್ಲುವುದರ ಮೂಲಕ ತಮ್ಮ ಅಭ್ಯರ್ಥಿಗಳು ಗೆಲ್ಲಿಸುವುದನ್ನು ನಾವಿಂದು ಕಾಣುತ್ತಿದ್ದೇವೆ. ಕೆಲವು ಪಕ್ಷಗಳಂತೂ ಶ್ರೀಮಂತ ಅಭ್ಯರ್ಥಿಗಳನ್ನೇ ಹುಡುಕಿ ಚುನಾವಣಾ ಕಣಕ್ಕೆ ಇಳಿಸುವುದನ್ನು ನೋಡುತ್ತಿದ್ದೇವೆ. ಪ್ರಸ್ತುತ ಚುನಾವಣೆಗಳು ʻʻಹಣವನ್ನು ಚೆಲ್ಲು ಹಣವನ್ನು ಮಾಡಿಕೊಳ್ಳುʼʼ ಎಂಬ ತತ್ವಗಳನ್ನು ಅನುಸರಿಸಿದಂತೆ ಕಾಣುತ್ತದೆ. ಚುನಾವಣೆ ಎನ್ನುವುದು ಒಂದು ಉದ್ಯಮವಾಗಿದೆ ಪರಿಣಮಿಸಿದೆ. ಇನ್ನೂ ಬಡ ರಾಜಕೀಯ ಪಕ್ಷಗಳು ಚುನಾವಣಾ ಕಣದಿಂದ ದೂರವೇ ಉಳಿಯುವಂತಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವೊಂದರಲ್ಲಿ ಸರ್ವೋಚ್ಚ ನ್ಯಾಯಾಲಯವು ಚುನಾವಣಾ ಆಯೋಗಕ್ಕೆ ಚುನಾವಣಾ ವೆಚ್ಚಗಳ ಕುರಿತು ಮಾಹಿತಿ ಪಡೆಯುವ ಹಕ್ಕಿದೆ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿತು.

9. ಆಯವ್ಯಯವನ್ನು ನಿರ್ಧರಿಸುವ ಅಧಿಕಾರ: 

ಚುನಾವಣಾ ಆಯೋಗವು ಒಂದು ಸಂವಿಧಾನಾತ್ಮಕವಾದ ಸ್ವತಂತ್ರವಾದ ಸಂಸ್ಥೆ. ಈ ಆಯೋಗದಲ್ಲಿ ಒಬ್ಬ ಮುಖ್ಯ ಆಯುಕ್ತರು ಹಾಗೂ ಉಪ ಆಯುಕ್ತರೊಡನೆ ವಿವಿಧ ದರ್ಜೆಯ ನೂರಾರು ಸಿಬ್ಬಂದಿಗಳುಳ್ಳ ಕಾರ್ಯಾಲಯವಿದೆ. ಇದರೊಂದಿಗೆ ಪ್ರಾದೇಶಿಕ ಚುನಾವಣೆ ಆಯೋಗಗಳು ಮುಖ್ಯ ಚುನಾವಣಾ ಅಧಿಕಾರಿಗಳೊಡನೆ ಅಗತ್ಯ ಸಿಬ್ಬಂದಿಯನ್ನು ಹೊಂದಿರುತ್ತವೆ. ಅಲ್ಲದೆ ಚುನಾವಣಾ ಆಯೋಗವು ಚುನಾವಣೆಗಳ ನಿರ್ವಹಣೆಗೆ ಅಪಾರ ಆರ್ಥಿಕ ಸಂಪನ್ಮೂಲಗಳನ್ನು ವೆಚ್ಚ ಮಾಡಬೇಕಾಗುತ್ತದೆ. ಚುನಾವಣಾ ಆಯೋಗ ನೀಡುವ ಹಣಕಾಸಿನ ವೆಚ್ಚಗಳಿಗೆ ಕೇಂದ್ರ ಹಣಕಾಸು ಆಯೋಗವು ಅನುಮೋದನೆಯನ್ನು ನೀಡುತ್ತದೆ. ಸಾಮಾನ್ಯವಾಗಿ ಲೋಕಸಭಾ ಚುನಾವಣೆಗೆ ಕೇಂದ್ರ ಸರ್ಕಾರವು ವೆಚ್ಚವನ್ನು ಭರಿಸಿದರೆ ರಾಜ್ಯ ಚುನಾವಣೆಗಳಿಗೆ ರಾಜ್ಯ ಸರ್ಕಾರವು ಹಣಕಾಸಿನ ವೆಚ್ಚವನ್ನು ಭರಿಸಬೇಕಾಗುತ್ತದೆ.

10. ಅಭ್ಯರ್ಥಿಗಳನ್ನು ಅನರ್ಹಗೊಳಿಸುವ ಅಧಿಕಾರ:

ಚುನಾವಣೆಗಳು ಮುಕ್ತಾಯವಾದ ನಂತರ ಚುನಾಯಿತ ಪ್ರತಿನಿಧಿಯು ಚುನಾವಣಾ ಅಕ್ರಮಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹೂಡಬಹುದು. ಆಗ ನ್ಯಾಯಾಲಯಗಳು ನಿರ್ದಿಷ್ಟ ಚುನಾಯಿತ ಪ್ರತಿನಿಧಿಯು ಅನರ್ಹಗೊಳ್ಳಲು ಸೂಕ್ತನೇ ಹಾಗೂ ಯಾವ ಕಾರಣಗಳಿಗಾಗಿ ಎಂಬುದರ ಕುರಿತಂತೆ ಅಭಿಪ್ರಾಯ ನೀಡಲು ಆಯೋಗಕ್ಕೆ ಸೂಚಿಸುತ್ತವೆ. ಆಯೋಗವು ನ್ಯಾಯಾಲಯಗಳಿಗೆ ಕಾರಣ ನೀಡಿದರೆ ಅವನ ಅನರ್ಹತೆಯನ್ನು ನಿರ್ಧರಿಸುತ್ತದೆ.

11.  ರಾಜಕೀಯ ಅಪರಾಧಿಕರಣವನ್ನು ನಿಯಂತ್ರಿಸುವುದು:

ಚುನಾವಣಾ ಆಯೋಗವು ರಾಜಕೀಯದಲ್ಲಿನ ಅಪರಾಧಗಳ ಕುರಿತು ಒಂದು ಹದ್ದಿನ ಕಣ್ಣನ್ನು ಇಟ್ಟಿರುತ್ತದೆ. ರಾಜಕೀಯ ಕ್ಷೇತ್ರದ ಅಪರಾಧಗಳು ಚುನಾವಣಾ ಮುಕ್ತತೆಗೆ ಭಂಗ ತರುತ್ತವೆ ಎಂದು ಗೋಚರಿಸಿದರೆ ತಕ್ಷಣವೇ ಆಯೋಗವು ಎಚ್ಚೆತ್ತುಕೊಂಡು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವುದು. ಮಾದರಿ ಚುನಾವಣೆ ನಡೆಸಲು ಚುನಾವಣಾ ವೆಚ್ಚಗಳನ್ನು ನಿರ್ಬಂಧಿಸಲು, ಅಪರಾಧಿಗಳು ಚುನಾವಣೆಗೆ ಸ್ಪರ್ಧಿಸದಂತೆ ತಡೆಯಲು ಮತ್ತು ಚುನಾವಣಾ ಸುಧಾರಣೆಗೆ ಕ್ರಮ ಜರುಗಿಸಲು ಕ್ರಮ ಕೈಗೊಳ್ಳುವ ಅಧಿಕಾರವನ್ನು ಆಯೋಗ ಹೊಂದಿದೆ.

ಉಪಸಂಹಾರ

ಚುನಾವಣಾ ಆಯೋಗವು ಭಾರತದ ಪ್ರಜಾಪ್ರಭುತ್ವದ ಬಲವಾದ ಅಸ್ತಂಭವಾಗಿದೆ. ನಿಷ್ಪಕ್ಷಪಾತ ಹಾಗೂ ಪಾರದರ್ಶಕ ಚುನಾವಣೆಯನ್ನು ನಡೆಸುವ ಮೂಲಕ ಜನರ ವಿಶ್ವಾಸವನ್ನು ಗಳಿಸಿದೆ. ಚುನಾವಣಾ ಸುಧಾರಣೆಗಳು ಮತ್ತು ಕಟ್ಟುನಿಟ್ಟಿನ ನಿಯಮಾವಳಿಗಳ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಿಕೊಳ್ಳುತ್ತಿದೆ. ಆದ್ದರಿಂದ ಚುನಾವಣಾ ಆಯೋಗದ ಕಾರ್ಯಪಟುತೆಯು ದೇಶದ ಜನತಂತ್ರದ ಯಶಸ್ಸಿಗೆ ಅವಿಭಾಜ್ಯವಾಗಿದೆ.