ಉನ್ನತ ಮೊಗಲ್ ಚಕ್ರವರ್ತಿಗಳಲ್ಲಿ ಕಟ್ಟಕಡೆಯವನಾದ ಔರಂಗಜೇಬ್, ಕ್ರಿ.ಶ.1658 ರಲ್ಲಿ ತನ್ನ ತಂದೆ ಷಹಜಹಾನನನ್ನು ಬಂಧನದಲ್ಲಿರಿಸಿ ಅಧಿಕಾರಕ್ಕೆ ಬಂದನು. ಕಾರ್ಯದಕ್ಷತೆಗೆ, ಸೈನಿಕ ಕೌಶಲ್ಯಕ್ಕೆ, ಅಸಮಾನ್ಯ ಬುದ್ಧಿಶಕ್ತಿಗೆ, ಧರ್ಮನಿಷ್ಠೆಗೆ ಹೆಸರಾಗಿದ್ದ ಔರಂಗಜೇಬ್ ತಾನು ಪಾಲಿಸಿದ ಕೆಲವೊಂದು ನೀತಿಗಳಿಂದಾಗಿ ಮತ್ತು ತೆಗೆದುಕೊಂಡ ತೀರ್ಮಾನಗಳಿಂದಾಗಿ ಮೊಗಲ್ ಸಾಮ್ರಾಜ್ಯದ ಅವನತಿಗೆ ಮತ್ತು ಪತನಕ್ಕೆ ಕಾರಣನಾದನು. ಅವನ ನೀತಿಗಳಲ್ಲಿ ಪ್ರಮುಖವೆಂದರೆ ಆತನ ಧಾರ್ಮಿಕ ನೀತಿ ಮತ್ತು ದಖ್ಖನ್ ನೀತಿ.
ಧಾರ್ಮಿಕ ನೀತಿ : ಔರಂಗಜೇಬನು ಪಾಲಿಸಿದ ನೀತಿಗಳಲ್ಲಿ ಅತ್ಯಂತ ದುಷ್ಪರಿಣಾಮಕಾರಿ ನೀತಿಯೆಂದರೆ ಅವನ ಧಾರ್ಮಿಕ ನೀತಿ ಅವನ ಧರ್ಮದ್ವೇಷದ ಧರ್ಮಾಂಧ ನೀತಿ, ಆತನ ಧಾರ್ಮಿಕ ನೀತಿ ಹಲವು ಇತಿಹಾಸಕಾರರ ತೀವ್ರವಾದ ಟೀಕೆಗೆ ಗುರಿಯಾಗಿದೆ. ಈತ ತನ್ನ ಧಾರ್ಮಿಕ ನೀತಿಯಿಂದ ತನ್ನ ಮತ್ತು ತನ್ನ ಸಾಮ್ರಾಜ್ಯದ ಪತನಕ್ಕೆ ಕಾರಣನಾದ. ಅಕ್ಬರನು ತನ್ನ ಉದಾರ ಧಾರ್ಮಿಕ ನೀತಿಯಿಂದ ಮೊಗಲ್ ಸಾಮ್ರಾಜ್ಯದ ನಿರ್ಮಾಣಕ್ಕೆ ಕಾರಣನಾಗಿದ್ದಲ್ಲಿ ಔರಂಗಜೇಬನು ತನ್ನ ಧರ್ಮಾಂಧ ನೀತಿಯಿಂದಾಗಿ ಅದರ ನಿರ್ನಾಮಕ್ಕೆ ಕಾರಣನಾದ.
ಔರಂಗಜೇಬನೊಬ್ಬ ನಿಷ್ಠಾವಂತ, ಸಂಪ್ರದಾಯಸ್ಥ ಸುನ್ನೀ ಮುಸಲ್ಮಾನ ಅಕ್ಬರನ ರಾಷ್ಟ್ರೀಯ ನೀತಿ ಈತನಿಗೆ ಒಗ್ಗದ ಕಷಾಯ. ಸಾಮ್ರಾಜ್ಯವನ್ನು ಇಸ್ಲಾಂ ಕಾನೂನು ಸಂಹಿತೆಯ ಆಧಾರದ ಮೇಲೆ ನಿಲ್ಲಿಸುವುದು ಈತನ ಮುಖ್ಯ ಗುರಿಯಾಗಿತ್ತು. ಭಾರತೀಯರನ್ನು ಇಸ್ಲಾಮಿಗೆ ಮತಾಂತರಗೊಳಿಸುವುದು ಮತ್ತು ಅವರ ಮೂರ್ತಿಪುಂಜೆಯನ್ನು ನಿರ್ಮೂಲನ ಮಾಡುವುದು ಈತನ ಯೋಜನೆಯಾಗಿತ್ತು, ಈ ದೃಷ್ಟಿಯಿಂದ ಇವನು ಅಕ್ಬರನ ಧಾರ್ಮಿಕ ಸಹಿಷ್ಣುತಾ ನೀತಿಯನ್ನು ಬದಿಗೊತ್ತಿ ಧರ್ಮಾಂಧವಾಗಿ ವರ್ತಿಸತೊಡಗಿದ್ದು ಕಂಡು ಬರುತ್ತದೆ. ಈತನ ವಕ್ರದೃಷ್ಟಿಗೆ ಬಿದ್ದ ಯಾವ ಹಿಂದೂ ದೇವಾಲಯವೂ ಉಳಿಯಲಿಲ್ಲ. ಮತಾಂತರವನ್ನು ಹೆಚ್ಚಿಸಲು ಹಿಂದೂ ದೇವಾಲಯ ಮತ್ತು ಪಾಠಶಾಲೆಗಳನ್ನು ನಿರ್ನಾಮ ಮಾಡತೊಡಗಿದನು. ಇದಕ್ಕಾಗಿ ನಿಷ್ಠಾವಂತ ಕಾರ್ಯಕರ್ತರಿಗೆ ಬಹುಮಾನಗಳನ್ನು ಕೊಡುವ ಪರಿಪಾಠವನ್ನು ಕೈಕೊಂಡ. ಹಿಂದೂಗಳ ಹಬ್ಬ ಹರಿದಿನಗಳ ಆಚರಣೆ ಮತ್ತು ಪುಣ್ಯಕ್ಷೇತ್ರಗಳ ಯಾತ್ರೆಗಳನ್ನು ರದ್ದು ಗೊಳಿಸಿದನು.
ತನ್ನ ವಂಶದ ಹಿಂದಿನ ಅದಸರುಗಳು ಕುರಾನಿನ ಕಾನೂನುಗಳನ್ನು ತಿರಸ್ಕರಿಸುವ ಮುಖಾಂತರ ಅವರು ದೊಡ್ಡ ಪ್ರಮಾದವನ್ನೆಸಗಿದರೆಂದು ಔರಂಗಜೇಬ್ ಭಾವಿಸಿದ್ದನು. ಮುತ್ಸದ್ದಿಯಾಗಿದ್ದ ಅಕ್ಬರನು ಇಸ್ಲಾಂ ಧರ್ಮದ ರಾಜ ಪ್ರಭುತ್ವದ ತತ್ವವನ್ನು ಕೈಬಿಟ್ಟು ಹಿಂದೂ ಸಾರ್ವಭೌಮತ್ವದ ಆದರ್ಶವನ್ನು ಪಾಲಿಸಿದ್ದ. ಇಸ್ಲಾಂ ಧರ್ಮವು ಪಡೆದಿದ್ದ ವಿಶೇಷ ಸ್ಥಾನಮಾನವನ್ನು ಕೊನೆಗಾಣಿಸಿ, ತನ್ನ ಸಾಮ್ರಾಜ್ಯಕ್ಕೆ ಧರ್ಮ, ನಿರಪೇಕ್ಷತೆಯ ವಿಕಾಲ ಬುನಾದಿಯನ್ನು ನೀಡಿದ್ದನು. ಆದರೆ ಔರಂಗಜೇಬನು ಆಕ್ಟರನು ನಿರ್ಮಿಸಿದ್ದ ವಿಶಾಲ ತಳಹದಿಯ ಅಡಿಪಾಯವನ್ನೇ ಕಿತ್ತೊಗೆದು, ಮೊಗಲ್ ಸಾಮ್ರಾಜ್ಯದ ಪತನಕ್ಕೆ ಕಾರಣನಾದನು.
ಅಧಿಕಾರಕ್ಕೆ ಬಂದ ಪ್ರಾರಂಭದಲ್ಲಿ ಸುನ್ನಿ ಪಂಥದ ಅಭಿವೃದ್ಧಿಗಾಗಿ ಹಲವು ಕ್ರಮಕೈಗೊಂಡ ಔರಂಗಜೇಬನು ಇನ್ನು ಸಾಮ್ರಾಜ್ಯದ ಅಧಿಕೃತ ಧರ್ಮವನ್ನಾಗಿ ಅಂಗೀಕರಿಸಿದನು. ಮುಸ್ಲಿಂಯೇತರರನ್ನು ಇಸ್ಲಾಂ ಧರ್ಮಕ್ಕೆ ಸೇರಿಸುವ ಮತ್ತು ಸಾಮ್ರಾಜ್ಯದ ಆಡಳಿತವನ್ನು ಕುರಾನಿನ ಕಾನೂನು ಪ್ರಕಾರ ಜರುಗಿಸುವ ವಿಧಾನಗಳನ್ನು ಅನುಸರಿಸಿದನು. ಇಡೀ ದೇಶವನ್ನು ಜಯಿಸುವವರೆಗೆ ಮತ್ತು ದೇಶದಲ್ಲಿನ ಎಲ್ಲ ಜನತೆ ಇಸ್ಲಾಂ ಧರ್ಮ ಸ್ವೀಕರಿಸುವವರೆಗೆ ಮುಸ್ಲಿಂಯೇತರರ ಮೇಲೆ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಕಟ್ಟುಪಾಡುಗಳನ್ನು ಹೇರಿ ಪ್ರತಿನಿತ್ಯವೂ ಅವರಿಗೆ ತಮ್ಮ ಕೀಳುಮಟ್ಟದ ನೆನಪುಂಟಾಗುವಂತೆ ಮಾಡುವುದು ಇವನ ಉದ್ದೇಶವಾಗಿತ್ತು. ಇಸ್ಲಾಂಗೆ ಮತಾಂತರ ಹೊಂದಿದವರಿಗೆ ಸಾಮಾಜಿಕ ಗೌರವ. ರಾಜಕೀಯ ಪ್ರಾಧಾನ್ಯತೆ ಮತ್ತು ಆರ್ಥಿಕ ಸಹಾಯಗಳು ದೊರೆಯುವಂತೆ ಮಾಡಿದನು.
ಇಸ್ಲಾಂ ಧರ್ಮವನ್ನು ಸಾಮ್ರಾಜ್ಯದ ಅಧಿಕೃತ ಧರ್ಮವನ್ನಾಗಿ ಅಂಗೀಕರಿಸಿದ ನಂತರ ಔರಂಗಜೇಬನು ಮುಸ್ಲಿಂಯೇತರರ ಪದ್ಧತಿಗಳನ್ನು ತೆಗೆದು ಹಾಕಿ ಅವುಗಳ ಸ್ಥಾನದಲ್ಲಿ ಇಸ್ಲಾಮಿನ ಪದ್ಧತಿಗಳನ್ನು ಜಾರಿಗೆ ತರಲು ಪ್ರಯತ್ನಿಸಿದನು. ಜನ್ಮದಿನದಂದು ಮತ್ತು ಸಿಂಹಾಸನಾರೋಹಣ ದಿನದಂದು ನಡೆಸುತ್ತಿದ್ದ ತುಲಾಭಾರವನ್ನು ರದ್ದುಮಾಡಿದ. ಪ್ರತಿದಿನ ಚಕ್ರವರ್ತಿಗಳು ಜನತೆಗೆ ನೀಡುತ್ತಿದ್ದ ಜರೋಖ ದರ್ಶನ ನಿಲ್ಲಿಸಿದ. ಸಂಗೀತದ ಮೇಲೆ ನಿಷೇಧ ಹಾಕಿ ಸಂಗೀತಗಾರರನ್ನು ಆಸ್ಥಾನದಿಂದ ಹೊರಗಟ್ಟಿದ. ಜ್ಯೋತಿಷಿಗಳ ಮೇಲೆ ನಿಷೇಧ ಹಾಕಿದ. ನೃತ್ಯ ಗಾರ್ತಿಯರು ಮತ್ತು ವೇಶ್ಯೆಯರ ಮೇಲೆ ನಿರ್ಬಂಧ ಹಾಕಿ ಅವರು ಮದುವೆಯಾಗುವಂತೆ ಇಲ್ಲದೆ ಸಾಮ್ರಾಜ್ಯ ಬಿಟ್ಟು ಹೋಗುವಂತೆ ಆಜ್ಞೆಮಾಡಿದ. ಪಾನ ನಿಷೇಧ ಜಾರಿಗೆ ತಂದ. ಅಫೀಮಿನ ಬಳಕೆ ನಿಷೇಧಿಸಿದ. ಜೂಜಿನ ಮೇಲೆ ನಿರ್ಬಂಧ ಹೇರಿದ. ಆದರೆ ಇವೆಲ್ಲ ಬಹಿರಂಗವಾಗಿ ನಿಷೇಧವಾದರೂ ಗುಪ್ತವಾಗಿ ಮುಂದುವರೆದಿದ್ದವು. ಕಾರಣ ಇವೆಲ್ಲ ಆಗಿನ ಕಾಲದ ಜನ ಜೀವನದ ಅವಿಭಾಜ್ಯ ಅಂಗವಾಗಿದ್ದವು. ಹಿಂದೂಗಳ ಪವಿತ್ರ ಹಬ್ಬಗಳಾದ ಹೋಳಿ, ದೀಪಾವಳಿ, ದಸರಾ ಹಬ್ಬಗಳ ಆಚರಣೆ ನಿಲ್ಲಿಸಿದ. ಹಿಂದೂ ರೀತಿಯ ನಮಸ್ಕಾರಗಳನ್ನು ರದ್ದುಪಡಿಸಿ, ಮುಸ್ಲಿಂ ರೀತಿಯ ʻಸಲಾಂ ಅಲೆಕುಮ್ ‘ಜಾರಿಗೆ ತಂದನು. ಹೋಳಿ ಹಬ್ಬದ ಅಶ್ಲೀಲ ಹಾಡುಗಳನ್ನು ಮೊಹರಂ ಮೆರವಣಿಗೆಗಳನ್ನು ಮತ್ತು ಸಹಗಮನ ಪದ್ಧತಿಗಳನ್ನು ನಿಷೇಧಿಸಿದನು.
ಇಸ್ಲಾಂ ಧರ್ಮಾಧಿಕಾರಿಗಳು ತಮ್ಮ ಕ್ಷೇತ್ರಗಳಲ್ಲಿ ಸಂಚರಿಸಿ ಹಿಂದೂ ದೇವಾಲಯ ಮತ್ತು ಪೂಜಾಸ್ಥಾನಗಳನ್ನು ನಾಶಪಡಿಸಿದರು. ಬನಾರಸ್ ವಿಶ್ವನಾಥದೇವಾಲಯ, ಮಧುರೆಯ ಕೇಶವದೇವಾಲಯ, ಸೋಮನಾಥದೇವಾಲಯ ಇತ್ಯಾದಿ ಸುಪ್ರಸಿದ್ಧ ಹಿಂದೂ ಮಂದಿರಗಳನ್ನು ನೆಲಸಮ ಮಾಡಲಾಯಿತು..
ಹಿಂದೂಗಳ ಎಲ್ಲಾ ಮಾರಾಟದ ವಸ್ತುಗಳ ಬೆಲೆಯ ಮೇಲೆ 5% ರಂತೆ ತೆರಿಗೆ ವಿಧಿಸಿದನು. ಆದರೆ ಮುಸ್ಲಿಂರು ಶೇಕಡದಂತೆ ಎರಡುವರೆಯಂತೆ ತೆರಿಗೆ ನೀಡುತ್ತಿದ್ದರು. ಕ್ರಿ.ಶ. 1667ರ ನಂತರ ಮುಸ್ಲಿಂರು ಇದನ್ನು ಕೊಡುವಂತಿರಲಿಲ್ಲ. ಸರಕಾರಿ ಹುದ್ದೆಗಳಲ್ಲಿದ್ದ ಹಿಂದೂಗಳನ್ನು ತೆಗೆದು ಹಾಕಿ ಅವರ ಸ್ಥಾನದಲ್ಲಿ ಮುಸ್ಲಿಂರನ್ನು ಸೇರಿಸಿದನು.
ಔರಂಗಜೇಬನು ಹಿಂದೂಗಳನ್ನು ಇಸ್ಲಾಂ ಧರ್ಮಕ್ಕೆ ಪರಿವರ್ತಿಸಲು ಅವರ ಮೇಲೆ ಅಧಿಕ ಒತ್ತಡ ಹೇರಿದನು. ಅಕ್ಬರ ಕಾಲದಲ್ಲಿ ರದ್ದಾಗಿದ್ದ ʻಜೆಸಿಯಾ’ ತಲೆಗಂದಾಯವನ್ನು ಹಿಂದೂಗಳ ಮೇಲೆ ಹೇರಿದ. ಇದರ ವಿರುದ್ಧ ಹಿಂದೂಗಳು ಪ್ರತಿಭಟಿಸಿದಾಗ ಅವರನ್ನು ಅತ್ಯಂತ ಹೀನಾಯವಾದ ರೀತಿಯಲ್ಲಿ ನಡೆಸಿಕೊಂಡು ಅವರ ಪ್ರತಿಭಟನೆಯನ್ನು ಅಡಗಿಸಲಾಯಿತು. ಮನುಸ್ಸಿ ಎಂಬ ಸಮಕಾಲೀನ ಬರಹಗಾರ ಹೇಳುವಂತೆ “ಈ ತೆರಿಗೆಯನ್ನು ಕೊಡಲಾಗದ ಹಿಂದೂಗಳು ತೆರಿಗೆ ವಸೂಲಿ ಅಧಿಕಾರಿಗಳ ಕ್ರೋಧವನ್ನು ಸಹಿಸಲಾಗದೆ ಮುಸ್ಲಿಮರಾಗಿ ಮತಾಂತರಗೊಂಡರು. ಇದರಿಂದ ಔರಂಗಜೇಬನು ಸಂತೋಷಗೊಂಡನು” ಜಿಸಿಯಾ ತಲೆಗಂದಾಯವೇ ಅಲ್ಲದೆ ಹಿಂದೂಗಳ ಮೇಲೆ ಇನ್ನೂ ಹಲವಾರು ನಿರ್ಬಂಧ ಹೇರಲಾಗಿತ್ತು. ಹಬ್ಬಗಳಲ್ಲಿ ಬಾಣ, ಬಿರುಸು, ಪಟಾಕಿಗಳನ್ನು ನಿಷೇಧಿಸಿ, ಹಿಂದೂಗಳು ಮುಸ್ಲಿಂರ ಉಡುಗೆತೊಡುಗೆಗಳನ್ನು ತೊಡದಂತೆ ಮಾಡಿದ. ರಜಪೂತರು ಮತ್ತು ಮರಾಠರನ್ನು ಬಿಟ್ಟು ಬೇರೆ ಹಿಂದೂಗಳು ಪಲ್ಲಕ್ಕಿ ಮತ್ತು ಕುದುರೆಗಳಲ್ಲಿ ಹೋಗುವುದನ್ನು ನಿಷೇಧಿಸಿದೆ.
ಈ ಮೇಲ್ಕಂಡ ಅನ್ಯಾಯಕರವಾದ ಧಾರ್ಮಿಕ ಧೋರಣೆಯಿಂದ ಕಷ್ಟನಷ್ಟಗಳಿಗೆ ಬಲಿಯಾದ ಹಿಂದೂಗಳು ಔರಂಗಜೇಬನ ವಿರುದ್ಧ ದಂಗೆಯೆದ್ದರು. ಹಿಂದೂಗಳ ತೀವ್ರ ಪ್ರತಿಭಟನೆಯು ಮೊಗಲ್ ಸಾಮ್ರಾಜ್ಯದ ಅಡಿಪಾಯವನ್ನು ಅಲ್ಲಾಡಿಸಿತು. ಸುನ್ನೀ ಧರ್ಮಾಂಧನಾಗಿದ್ದ ಈತ ಶಿಯಾ ಮುಸಲ್ಮಾನರನ್ನು “ಶವಭಕ್ಷಕ ರಾಕ್ಷಸರು” ಎಂದು ಬಣ್ಣಿಸುತ್ತಿದ್ದನು. ಒಟ್ಟಿನಲ್ಲಿ ಔರಂಗಜೇಬನ ಧರ್ಮಾಂಧತೆಯ ಧೋರಣೆಯು ಮೊಗಲ್ ಸಾಮ್ರಾಜ್ಯದ ಭದ್ರತೆಯನ್ನು ನಾಶಪಡಿಸಿತು.
ಔರಂಗಜೇಬನ ಹಿಂದೂ ವಿರೋಧಿ ನೀತಿಯಿಂದಾಗಿ ಸಾಮ್ರಾಜ್ಯದ ಬಹುಸಂಖ್ಯಾತ ಹಿಂದೂಗಳು ಆತೃಪ್ತಿಗೆ ಒಳಗಾಗಿ ಸಾಮ್ರಾಜ್ಯದಾದ್ಯಂತ ಬಂಡಾಯವೆದ್ದರು. ರಾಜಸ್ಥಾನ, ಮಾಳವ, ಬುಂದೇಲಖಂಡ ಮತ್ತು ಖಾನ್ ದೇಶಗಳಲ್ಲಿಯ ಹಿಂದೂಗಳು ಔರಂಗಜೇಬನ ಮತಾಂತರ ನೀತಿಯನ್ನು ಪ್ರಬಲವಾಗಿ ಪ್ರತಿಭಟಿಸಿದರು. ಅಂತಹ ದಂಗೆಗಳಲ್ಲಿ ಪ್ರಥಮ ಮತ್ತು ಪರಿಣಾಮಕಾರಿಯಾದುದೆಂದರೆ ಮಥುರಾದ ಜಾಟರ ಬಂಡಾಯ, ಗೋಕುಲನ ನೇತೃತದಲ್ಲಿ ಸಂಭವಿಸಿದ ಜಾಟರ ದಂಗೆ ತತ್‌ಕ್ಷಣ ಹತ್ತಿಕ್ಕುವಷ್ಟು ಸುಲಭವಾದುದಾಗಿರಲಿಲ್ಲ. ಈ ಬಂಡಾಯ ಮೊಗಲ್ ಸಾಮ್ರಾಜ್ಯದ ಅವನತಿಗೆ ಒಂದು ಮಹತ್ವದ ಕಾರಣವಾಯಿತು. ಏಕೆಂದರೆ ಆನಂತರ ಗೋಕುಲನ ಸ್ಥಾನದಲ್ಲಿ ಬಂದ ರಾಜರಾಮ್ ಮುಂತಾದವರು ಔರಂಗಜೇಬನ ಕೊನೆಯದಿನಗಳವರೆಗೂ ಬಂಡಾಯ ಮುಂದುವರಿಸಿದರು. ಇದು ಮೊಗಲ್ ಆರಸನ ಧರ್ಮಾಂಧತೆಯ ನೀತಿಗೆ ಹಾಕಿದ ಮೊದಲ ಕೊಡಲಿ ಪೆಟ್ಟಾಗಿ ಪರಿಣಮಿಸಿತು. ಇದೇ ರೀತಿಯಲ್ಲಿ ಬುಂದೇಲದ ರಜಪೂತರು, ಮೇವಾಡದ ಮತ್ತು ನರ್ನೋತ ಜಿಲ್ಲೆಗಳ ಹಿಂದೂ ಪಂಗಡದ ಸತ್ನಾಮಿಗಳು, ಸಿಬ್ಬರು ಮೊದಲಾದವರು ಸ್ವತಂತ್ರರಾಗುವ ಹವಣಿಕೆ ನಡೆಸಿ ಔರಂಗಜೇಬನಿಗೆ ಕಂಟಕಪ್ರಾಯರಾದರು. ಔರಂಗಜೇಬನ ಅಧಿಕಾರಿ ಮತ್ತು ಒಬ್ಬ ಸತ್ನಾಮಿ ನಡುವಿನ ಜಗಳವೇ ಸತ್ನಾಮಿ ಬಂಡಾಯಕ್ಕೆ ಪ್ರಮುಖ ಕಾರಣವಾಗಿತ್ತು. ಈ ಬಂಡಾಯದಲ್ಲಿ ಸತ್ನಾಮಿಗಳು ಪರಾಭವ ಹೊಂದಿ, 200 ಸತ್ನಾಮಿಗಳು ಮರಣಹೊಂದಿದರು, ಉಳಿದವರು ಶರಣಾಗತರಾದರು.
ಔರಂಗಜೇಬನ ಧಾರ್ಮಿಕ ಅಸಹಿಷ್ಣುತೆಯಿಂದಾಗಿ ಕ್ರೋದಗೊಂಡವರಲ್ಲಿ ಸಿಬ್ಬರು ಪ್ರಮುಖರು. ಸಿಖ್ಖರ ಗುರು ತೇಜ್ ಬಹದ್ದೂರನನ್ನು ಕೊಲೆ ಮಾಡಿದ ಔರಂಗಜೇಬ್ ಸಿಖ್ಖರ ಕೋಪಕ್ಕೆ ಕಾರಣನಾದ. ತೇಜ್ ಬಹದ್ದೂರ್ ಇಸ್ಲಾಂಗೆ ಮತಾಂತರವಾಗದೆ ಇದ್ದುದೆ ಅವನ ಕೋಪಕ್ಕೆ ಕಾರಣವಾಗಿತ್ತು. ಮತಾಂತರ ಇಲ್ಲವೆ ಸಾವು ಇವೆರಡರಲ್ಲಿ ಯಾವುದನ್ನಾದರೂ ಆರಿಸಿಕೊಳ್ಳಬಹುದೆಂಬ ಔರಂಗಜೇಬನ ಸಲಹೆ ಮೇರೆಗೆ ತೇಜ್ ಬಹದ್ದೂರ್ ಎರಡನೆಯದನ್ನು ಆರಿಸಿ ಕೊಂಡರೆಂಬುದಾಗಿ ಹೇಳಲಾಗಿದೆ. ಇದರಿಂದ ಕ್ರೋದಗೊಂಡ ಸಿಬ್ಬರು ಔರಂಗಜೇಬನ ವಿರುದ್ಧ ತಿರುಗಿ ಬಿದ್ದರು. ಈ ರೀತಿ ಪ್ರೇರೇಪಿತರಾದ ಸಿಬ್ಬರು ಒಂದು ಒಕ್ಕೂಟವನ್ನೇ ರಚಿಸಿಕೊಂಡು ಮೊಗಲರ ಅಸ್ತಿತ್ವವನ್ನೆ ನಾಶ ಮಾಡುವ ಪಣ ತೊಟ್ಟು ಹೋರಾಡಿದರು.
ತನ್ನ ಮತಾಂಧತೆಯಿಂದ ರಜಪೂತರ ಶತೃತ್ವಕ್ಕೆ ಕಾರಣವಾದ ಔರಂಗಜೇಬನ ಅವಿವೇಕದ ನೀತಿ ಅನೇಕ ಅನಾಹುತಗಳಿಗೆ ಎಡೆಮಾಡಿತು. ರಜಪೂತರ ದ್ವೇಷ ಕಟ್ಟಿಕೊಂಡು ಕೊನೆಗೆ ಅದನ್ನು ವಿರೋಧಿಸಿದ ಔರಂಗಜೇಬನ ಪುತ್ರ ಯುವರಾಜ ಅಕ್ಬರ ತಂದೆಯ ವಿರುದ್ಧ ರಜಪೂತರ ಕಡೆ ಸೇರಿಕೊಳ್ಳಬೇಕಾಯಿತು.
ಒಟ್ಟಿನಲ್ಲಿ ಔರಂಗಜೇಬ್ ತನ್ನ ಧಾರ್ಮಿಕ ನೀತಿಯ ಮೂಲಕ ಮೊಗಲ್ ಸಾಮ್ರಾಜ್ಯದ ಸಮಾಧಿಯನ್ನು ನಿರ್ಮಾಣಮಾಡಿದ. ಮೊಗಲ್ ಸಾಮ್ರಾಜ್ಯದ ಪತನದಲ್ಲಿ ಈತನ ಧಾರ್ಮಿಕ ನೀತಿ ಪ್ರಮುಖ ಪಾತ್ರವಹಿಸಿತು.
ಔರಂಗಜೇಬನ ದಖ್ಖನ್ ನೀತಿ
ಔರಂಗಜೇಬನ ದಖ್ಖನ್ ನೀತಿಯೂ ಸಹ ಆತನ ಧಾರ್ಮಿಕ ನೀತಿಯಷ್ಟೇ ವಿನಾಶಕಾರಿ ನೀತಿ ಆಗಿದ್ದಿತು. ಇತಿಹಾಸಕಾರರು ಆತನ ದಖ್ಖನ್ ನೀತಿಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಇವನ ದಖ್ಖನ್ ನೀತಿ ಮತ್ತೊಮ್ಮೆ ಅವನ ಮತ್ತು ಅವನ ಸಾಮ್ರಾಜ್ಯದ ಪತನಕ್ಕೆ ಮುಖ್ಯ ಕಾರಣವಾಯಿತು. ಔರಂಗಜೇಬ್ ತನ್ನ ಆಳ್ವಿಕೆಯ ಮೊದಲ ಅರ್ಧಭಾಗದಲ್ಲಿ ಉತ್ತರಭಾಗವನ್ನು ತನ್ನ ಎಲ್ಲಾ ಚಟುವಟಿಕೆಗಳ ಕೇಂದ್ರವನ್ನಾಗಿ ಮಾಡಿಕೊಂಡಿದ್ದ. ತತ್ಪರಿಣಾಮವಾಗಿ ಆತನಿಗೆ ದಕ್ಷಣ ಭಾರತದ ಅಂದರೆ ದಖ್ಖನ್ನಿನ ಬಗ್ಗೆ ಗಮನಕೊಡಲಾಗಲಿಲ್ಲ. ಈ ಸದವಕಾಶವನ್ನು ಉಪಯೋಗಿಸಿಕೊಂಡು ಶಿವಾಜಿಯು ದಕ್ಷಿಣ ಭಾರತದಲ್ಲಿ ಸ್ವತಂತ್ರ ರಾಜ್ಯವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾದ. ಆದರೆ ದಖ್ಖನ್ನಿನ ಬಿಜಾಪುರ ಮತ್ತು ಗೋಲ್ಕಂಡ ರಾಜ್ಯಗಳು ಈ ಪರಿಸ್ಥಿತಿಯ ಲಾಭ ಪಡೆಯಲಾಗಲಿಲ್ಲ. ಇದಕ್ಕೆ ಕಾರಣ ಅವುಗಳ ಆಂತರಿಕ ಪರಿಸ್ಥಿತಿ.
ಔರಂಗಜೇಬನು ತನ್ನ ಜೀವಿತದ ಕೊನೆಯ ವರ್ಷಗಳನ್ನು ದಖ್ಖನ್ನಿನಲ್ಲಿ ಕಳೆದನು. ಈ ದೀರ್ಘಾವಧಿಯಲ್ಲಿ ಈತನಿಗೆ ವಿರಾಮ ಮತ್ತು ಮಾನಸಿಕ ಸ್ವಾಸ್ಥ್ಯ ಸಿಗಲಿಲ್ಲ. ಔರಂಗಜೇಬ್ ದಖನ್ನಿಗೆ ಬರುವುದಕ್ಕೆ ಮೂರು ಮುಖ್ಯ ಉದ್ದೇಶಗಳಿದ್ದವು. ಅವುಗಳೆಂದರೆ:-
1.ತನ್ನ ಪುತ್ರ ಅಕ್ಬರನನ್ನು ಬಂಧಿಸಿ ಶಿಸುವುದು.
2.ತನ್ನ ಪುತ್ರ ಅಕ್ಬರನಿಗೆ ಆಶ್ರಯ ಕೊಟ್ಟಿದ್ದ ಮರಾಠರನ್ನು ಹತ್ತಿಕ್ಕುವುದು.
- ದಖ್ಖನ್ನಿನ ಶಿಯಾ ರಾಜ್ಯಗಳಾದ ಬಿಜಾಪುರ ಮತ್ತು ಗೋಲ್ಕಂಡಗಳ ಅಸ್ಥಿತ್ವ ಅಂತ್ಯಗೊಳಿಸುವುದು.
ಈ ಗುರಿಸಾಧನೆಯಲ್ಲಿ ಔರಂಗಜೇಬನಿಗೆ ದೊರೆತಿದ್ದು ಮಿಶ್ರ ಯಶಸ್ಸು, ಆತ ಅಕ್ಬರನ್ನು ಹಿಡಿದು ಶಿಕ್ಷಿಸಲಾಗಲಿಲ್ಲ. ಅಕ್ಬರ ತಪ್ಪಿಸಿಕೊಂಡು ಪರ್ಶಿಯಾಕ್ಕೆ ಓಡಿಹೋದ. ತತ್ಪರಿಣಾಮವಾಗಿ ಔರಂಗಜೇಬನ ಸಿಟ್ಟು ಆತನಿಗೆ ಆಶ್ರಯ ನೀಡಿದ್ದ ಸಂಬಾಜಿಯ ವಿರುದ್ಧ ತಿರುಗಿತು. ಸಂಬಾಜಿಯನ್ನು ಹಿಡಿದು ಕೊಲೆ ಮಾಡುವುದರಲ್ಲಿ ಯಶಸ್ವಿಯಾದ, ಆದರೆ ಮರಾಠರನ್ನು ಸಂಪೂರ್ಣವಾಗಿ ಸದೆಬಡಿಯಲಾಗಲಿಲ್ಲ. ಶಿಯಾ ರಾಜ್ಯಗಳಾದ ಬಿಜಾಪುರ ಮತ್ತು ಗೋಲ್ಕಂಡಗಳನ್ನು ಜಯಿಸುವಲ್ಲಿ ಆತ ಯಶಸ್ಸು ಕಂಡಿದ್ದ. ಆದರೆ ಈ ಎಲ್ಲಾ ಕಾರ್ಯಕ್ಕೆ ಆತನಿಗೆ 25 ವರ್ಷ ಬೇಕಾಯಿತು. ಆದರೆ ಈ ಸಾಧನೆ ಅಂತಿಮವಾಗಿ ಶೂನ್ಯವಾಗಿ ಮಾರ್ಪಟ್ಟಿತು. ಈತನ ಸಾಮ್ರಾಜ್ಯ ಅವ್ಯವಸ್ಥೆಯ ಅಂಧಕಾರದಲ್ಲಿ ಮುಳುಗಿತು. ವೃದ್ಧ ಸಾಮ್ರಾಟನು ತನಗರಿವಿಲ್ಲದೆ ತನ್ನ ದಖ್ಖನ್ ನೀತಿಯ ಮುಖಾಂತರ ತನ್ನ ಮತ್ತು ತನ್ನ ಸಾಮ್ರಾಜ್ಯದ ಸಮಾಧಿ ತೋಡಿದ.
ಮನ್ಸಬ್ದಾರಿ ಪದ್ಧತಿ
ಮೊಗಲ್ ಸೈನ್ಯದ ಸಂಘಟನೆಯಲ್ಲಿನ ದೋಷಗಳನ್ನು ನಿವಾರಿಸಲು ಅಕ್ಷರನು ಹಲವು ಕ್ರಮಗಳನ್ನು ಕೈಗೊಂಡನು. ಅದೇ ಮನ್ಸಬ್ದಾರಿ ಪದ್ಧತಿ. ಮನ್ಸಬ್ ಎಂಬ ಶಬ್ದ ಆರೇಬಿಕ್ ಮೂಲವನ್ನು ಹೊಂದಿದ್ದು, ಇದರ ಅರ್ಥ ದರ್ಜೆ, ವರ್ಗ ಅಥವಾ ಪದವಿ ಎಂದಾಗುತ್ತದೆ. ಮನ್ಸಬ್ದಾರ್ ಎಂದರೆ ಸಾಮ್ರಾಜ್ಯದ ಸೇವೆಯಲ್ಲಿರುವ ಅಧಿಕಾರಿ. ಅಕ್ಬರನ ಕಾಲದಲ್ಲಿ ರೂಪುಗೊಂಡ ಈ ವ್ಯವಸ್ಥೆಯಲ್ಲಿ ಸೈನಿಕ ಮತ್ತು ನಾಗರೀಕ ಅಧಿಕಾರಿಗಳಲ್ಲಿ ಯಾವುದೇ ವ್ಯತ್ಯಾಸ ಮತ್ತು ಪ್ರತ್ಯೇಕತೆ ಇರಲಿಲ್ಲ. ಅಧಿಕಾರಿಗೂ ಆತನದೇ ಆದ ದರ್ಜೆಯಿದ್ದು ಆತನನ್ನು ಆ ದರ್ಜೆಯ ಮನ್ಸಬ್ದಾರನೆಂದು ಕರೆಯಲಾಗುತ್ತಿತ್ತು.
ವಿ.ಎ. ಸ್ಮಿತ್‌ರವರ ಪ್ರಕಾರ ಅಕ್ಬರ ಇದರ ನಿರ್ಮಾಪಕನಲ್ಲ. ಇದು ಬಾಬರ್ ಮತ್ತು ಹುಮಾಯೂನರ ಕಾಲದಲ್ಲಿಯೇ ಜಾರಿಯಲ್ಲಿತ್ತು. ಇದು ಪರ್ಶಿಯಾದಿಂದ ಬಂದ ವ್ಯವಸ್ತೆಯಾಗಿತ್ತು. ಆದರೆ ಡಾ|| ಈಶ್ವರೀಪ್ರಸಾದ್ ಮತ್ತು ಆರ್.ಎಸ್. ಕರ್ಮ ಪ್ರಕಾರ ಈ ವ್ಯವಸ್ಥೆಯ ನಿಜವಾದ ನಿರ್ಮಾಪಕ ಅಕ್ಬರ , ಇದುನ್ನು ವ್ಯವಸ್ಥಿತವಾಗಿ ಜಾರಿಗೆ ತಂದ ಕೀರ್ತಿ ಅಕ್ಷನನಿಗೆ ಸಲ್ಲಬೇಕೆಂಬುದು ಇದರ ವಾದ.
ಮನ್ಸಬ್‌ದಾರರಲ್ಲಿ ಅನೇಕ ಶ್ರೇಣಿಗಳಿದ್ದವು. ಅಬುಲ್ ಫಜಲ್ ಪ್ರಕಾರ. 33 ದರ್ಜೆ ಅಥವಾ ವರ್ಗಗಳಿದ್ದವು. ಈ ದರ್ಜೆ 10 ರಿಂದ ಪ್ರಾರಂಭವಾಗಿ 10,000 ದವರೆಗೆ ಇದ್ದಿತು. ಈತನ ಆಳ್ವಿಕೆಯ ಕೊನೆಯಲ್ಲಿ ಈ ಸಂಖ್ಯೆಯನ್ನು 12,000 ಕ್ಕೆ ಏರಿಸಲಾಯಿತು.
ಅಕ್ಬರ್ ಇದನ್ನು ಜಾರಿಗೆ ತಂದ ಪ್ರಾರಂಭದಲ್ಲಿ 10 ರಿಂದ 10,000 ದವರೆಗೆ ಒಟ್ಟು 3 ದರ್ಜೆಗಳ ಮನ್ನಬ್ಬಾರರಿದ್ದರು. ಇಲ್ಲಿ ಸಂಖ್ಯೆಯು ಪ್ರತಿಯೊಬ್ಬ ಮನ್ನಬ್ಬಾರನು ಸಾಮ್ರಾಜ್ಯದ ಸೇನೆಗೆ ಸಲ್ಲಿಸಬೇಕಾಗಿದ್ದ ಶಸ್ತ್ರಾಸ್ತ್ರ, ಕುದುರೆ ಸವಾರರ ಸಂಖ್ಯೆಯನ್ನು ಸೂಚಿಸುತ್ತಿತ್ತು. ಮತ್ತು ಪ್ರತಿಯೊಬ್ಬ ಅಧಿಕಾರಿಯ ದರ್ಜೆ ಹಾಗೂ ವೇತನ ಇವುಗಳನ್ನು ನಿರ್ದೇಶಿಸುತ್ತಿತ್ತು. ಸಾಮಾನ್ಯವಾಗಿ ಮನ್ಸಾಬ್ದಾರರು ತಮ್ಮ ದರ್ಜೆಯ ಸಂಖ್ಯೆಯಷ್ಟೇ ಕುದುರೆ ಸವಾರರನ್ನು ಇಟ್ಟುಕೊಳ್ಳಬೇಕೆಂಬ ನಿಯಮವಿರಲಿಲ್ಲ.
ಪ್ರತಿಯೊಬ್ಬ ಮನ್ಸಾಬ್ದಾರನಿಗೆ ಇಂತಹುದೇ ಕೆಲಸ ಅಥವಾ ಹಯದ್ದೆ ಕೊಡಬೇಕೆಂಬ ನಿಯಮವಿರಲಿಲ್ಲ. ಚಕ್ರವರ್ತಿಯು ಕಾಲಕಾಲಕ್ಕೆ ಸೂಚಿಸಿದ ಕೆಲಸಗಳನ್ನು ಅವರು ಮಾಡುತ್ತಿದ್ದರು. ಮನ್ಸಬ್ದಾರರನ್ನು ನೇಮಕಮಾಡಲು, ಬಡ್ತಿ ನೀಡಲು ಮತ್ತು ತೆಗೆದುಹಾಕಲು ಯಾವ ನಿಯಮಾವಳಿಗಳೂ ಇರಲಿಲ್ಲ. ಇವರ ನೇಮಕಾತಿ ಮತ್ತು ಬಡ್ತಿ ಅರಸರ ತೀರ್ಮಾನವನ್ನು ಅವಲಂಬಿಸಿತ್ತು. ಮನ್ನಬ್ಬಾರರಿಗೆ ನಿರ್ಧಿಷ್ಟ ವೇತನ ಶ್ರೇಣಿಗಳಿದ್ದವು. ಇದನ್ನು ನಗದು ಹಣ ಇಲ್ಲವೆ ಜಹಾಗೀರಿನ ಮುಖಾಂತರ ನೀಡಲಾಗುತ್ತಿತ್ತು. ಅಕ್ಬರನ ಕಾಲದಲ್ಲಿ ನಗದು ವೇತನ ಕೊಡಲಾಗುತ್ತಿತ್ತು. ಸ್ಮಿತ್, ಇರ್ವಿನ್ ಇತ್ಯಾದಿ ಆಂಗ್ಲ ಚರಿತ್ರೆಕಾರರು ಮನ್ಸಬ್ಬಾರರಿಗೆ ವರ್ಷವಿಡೀ ಸಂಬಳ ನೀಡುತ್ತಿರಲಿಲ್ಲವೆಂದು ಹೇಳಿದ್ದಾರೆ. ಆದರೆ ಇದಕ್ಕೆ ಯಾವುದೇ ಆಧಾರಗಳಿಲ್ಲ.
ಮನ್ಸಬ್ದಾರರಿಗೆ ಅಧಿಕ ಸಂಬಳ ದೊರೆಯುತ್ತಿತ್ತು. ಅವರ ವೆಚ್ಚವೆಲ್ಲ ಕಳೆದ ನಂತರವೂ ಅವರಲ್ಲಿ ಹೆಚ್ಚು ಹಣ ಉಳಿಯುತ್ತಿತ್ತು. ಅವರು ಅತ್ಯಂತ ಶ್ರೀಮಂತ ಜೀವನ ನಡೆಸುತ್ತಿದ್ದರು. ಆದರೆ ಮನ್ಸಬ್ದಾರಿ ದರ್ಜೆ ವಂಶಪಾರಂಪರ್ಯ ವಾಗಿರಲಿಲ್ಲ. ಅವರ ಮರಣದ ನಂತರವೇ ಅವರ ಸಂಪತ್ತು, ಭೂಮಿ ಇತ್ಯಾದಿಗಳು ಸಾಮ್ರಾಜ್ಯಕ್ಕೆ ಸೇರುತ್ತಿದ್ದವು.
ಮನ್ಸಬ್ದಾರಿ ದರ್ಜೆಗಳಲ್ಲಿ ಎರಡು ವರ್ಗಗಳಿದ್ದವು. ಅವುಗಳೆಂದರೆ ʻಜಾಟ್’ ಮತ್ತು ‘ಸವಾರ್’. ಇವುಗಳ ನಿಜವಾದ ಸ್ವರೂಪದ ಬಗ್ಗೆ ಚರಿತ್ರಕಾರರಲ್ಲಿ ಭಿನ್ನಾಭಿಪ್ರಾಯಗಳಿವೆ. ಡಾ|| ಎ.ಎಲ್. ಶ್ರೀವಾತ್ಸವರ ಅಭಿಪ್ರಾಯದಂತೆ ಅಕ್ಬರ ಈ ಪದ್ಧತಿ ಜಾರಿಗೆ ತಂದಾಗ ಮನ್ನಬ್ದಾರನ ದರ್ಜೆ ಮತ್ತು ಅವನು ಇಡಬೇಕಾದ ಸೈನಿಕರು, ಕುದುರೆ, ಆನೆ ಇತ್ಯಾದಿ ಸಂಖ್ಯೆಗಳಲ್ಲಿ ಯಾವುದೇ ವ್ಯತ್ಯಾಸ ಇರಲಿಲ್ಲ. ಆದರೆ ಮನ್ನಬ್ಬಾರರು ಈ ಸಂಖ್ಯೆಯನ್ನು ಪಾಲಿಸದೆ ಹೋದಾಗ ಅದರಲ್ಲಿ ರಿಯಾಯಿತಿ ನೀಡಿದನು. ಅವರಿಗಾಗಿಯೇ ಜಾಟ್ ಮತ್ತು ಸವಾರ್ ಎಂಬ ಪ್ರತ್ಯೇಕ ವರ್ಗ ನಿರ್ಮಿಸಿದನು. ಇದರಂತೆ ಜಾಟ್ ದರ್ಜೆಯ ಮನ್ನಬ್ದಾರರು ಅವರ ಸಂಖ್ಯೆಯ ಕುದುರೆ, ಆನೆ ಮತ್ತು ಸಾಗಣೆಯ ಪ್ರಾಣಿಗಳನ್ನು ಹೊಂದಬೇಕಾಗಿದ್ದಿತೇ ಏನು ಕುದುರೆ ಸವಾರರನ್ನಲ್ಲ. ಅಂತೆಯೇ ಸವಾರ್ ದರ್ಜೆಯ ಮನ್ನಬ್ದಾರರು ತಮ್ಮ ನಿಗದಿತ ಸಂಖ್ಯೆ ಕುದುರೆ ಸವಾರರನ್ನು ಮಾತ್ರ ಇಟ್ಟುಕೊಳ್ಳಬೇಕಾಯಿತು. ಅಕ್ಷರನ ಉತ್ತರಾಧಿಕಾರಿಗಳ ಕಾಲದಲ್ಲಿ ಈ ಕಾನೂನು ಸಡಿಲಗೊಂಡಿತು. ಔರಂಗಜೇಬನ ತರುವಾಯ ಮನ್ಸಬ್ದಾರಿ ಹುದ್ದೆಗಳು ಕೇವಲ ಗೌರವದ ಸಂಕೇತವಾದವು.
ದೋಷಗಳು :
- ಮನ್ಸಬ್ದಾರಿ ಪದ್ಧತಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿತ್ತು. ಸೈನಿಕರನ್ನು ಒಟ್ಟಾಗಿ ತೋರಿಸುವ ಮತ್ತು ಮುದ್ರೆ ಹಾಕುವ ವ್ಯವಸ್ಥೆ ಇದ್ದರೂ ಬಹಳಷ್ಟು ಮನ್ಸಬ್ದಾರರು ತಮ್ಮ ನಿಗದಿತ ಸಂಖ್ಯೆಯ ಸವಾರರನ್ನು ಇಟ್ಟುಕೊಂಡಿರಲಿಲ್ಲ.
- ಸೈನಿಕರನ್ನು ನೇಮಿಸಿಕೊಳ್ಳುವವರು ಹಾಗೂ ಸಂಬಳವನ್ನು ಕೊಡುವವರು ಮನ್ಸಬ್ದಾರರೇ. ಆದ್ದರಿಂದ ಸೈನಿಕರ ನಿಷ್ಠೆ ಅವರಿಗಿತ್ತೇ ಹೊರತು ಚಕ್ರವರ್ತಿಗಿರಲಿಲ್ಲ. ಸೈನಿಕರು ಮತ್ತು ಚಕ್ರವರ್ತಿಯ ನಡುವಿನ ಈ ಕಂದರವು ಮುಂದೆ ಮೊಗಲರ ಸರ್ಕಾರಕ್ಕೆ ಅಪಾಯವನ್ನುಂಟುಮಾಡಿತು.
- ಮನ್ಸಬ್ದಾರರು ತಮ್ಮ ವೈಯಕ್ತಿಕ ಲಾಭ ಮತ್ತು ಹಿತಾಸಕ್ತಿಗಳಲ್ಲಿ ಮಗ್ನರಾಗಿ ಸಾಮ್ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಿದರು.
- ಮನ್ಸಬ್ದಾರರನ್ನು ಸೈನಿಕ ಸೇವೆಗೆ ಮಾತ್ರವೇ ಅಲ್ಲದೇ ನಾಗರಿಕ ಸೇವೆಗೂ ನೇಮಕ ಮಾಡುತ್ತಿದ್ದುದು ಇದರ ಇನ್ನೊಂದು ದೋಷವಾಗಿತ್ತು.
- ಮನ್ಸಬ್ದಾರರು ತಮ್ಮ ವೇತನ ಮತ್ತು ಸೌಲತ್ತುಗಳಿಂದ ಸಂತೃಪ್ತರಾಗಿದ್ದು, ಸೈನಿಕರ ಶಿಕ್ಷಣಕ್ಕಾಗಲಿ ಇಲ್ಲವೆ ಯುದ್ಧಕಲೆಯಲ್ಲಿ ಹೊಸ ಆವಿಷ್ಕಾರಕ್ಕಾಗಲೀ ಗಮನ ಹರಿಸಲಿಲ್ಲ.
ಉಪಸಂಹಾರ
ಔರಂಗಜೇಬನ ಧಾರ್ಮಿಕ ಮತ್ತು ದಖ್ಖನ್ ನೀತಿಗಳು ಮೊಗಲ್ ಸಾಮ್ರಾಜ್ಯದ ಸ್ಥಿರತೆಯನ್ನು ಕುಂದಿಸಿದವು. ಧಾರ್ಮಿಕ ಅಸಹಿಷ್ಣುತೆ ಮತ್ತು ನಿರಂತರ ಯುದ್ಧಗಳು ಸಾಮ್ರಾಜ್ಯದ ಆರ್ಥಿಕ ಮತ್ತು ರಾಜಕೀಯ ಶಕ್ತಿಯನ್ನು ದುರ್ಬಲಗೊಳಿಸಿದವು. ಇದರ ಪರಿಣಾಮವಾಗಿ ಹಲವು ಪ್ರಾಂತ್ಯಗಳಲ್ಲಿ ಬಂಡಾಯಗಳು ಉಂಟಾಗಿ ಸಾಮ್ರಾಜ್ಯದ ಪತನಕ್ಕೆ ದಾರಿ ಮಾಡಿಕೊಟ್ಟವು. ಆದ್ದರಿಂದ ಔರಂಗಜೇಬನ ಆಡಳಿತವು ಮೊಗಲ್ ಇತಿಹಾಸದಲ್ಲಿ ಮಹತ್ವದ ತಿರುವಾಗಿ ಪರಿಗಣಿಸಲಾಗಿದೆ.