ಇಡೀ ಭೂಮಂಡಲವನ್ನು ಆವರಿಸಿರುವ ಪರಿಸರವು ಅಂತರಾಷ್ಟ್ರೀಯ ಸಂಪನ್ಮೂಲವಾಗಿದೆ. ಪರಿಸರವು ಯಾವುದೇ ಭಾಗದಲ್ಲಿ ಮಲಿನಗೊಂಡರೂ ಅದರ ಪರಿಣಾಮ ಪ್ರಪಂಚದ ಎಲ್ಲಾ ದೇಶಗಳ ಮೇಲೆ ಉಂಟಾಗುತ್ತದೆ. ಸಾಗರ, ಸಮುದ್ರ, ಅಂತರಾಷ್ಟ್ರೀಯ ನದಿಗಳು, ಗಾಳಿ ಮೊದಲಾದವುಗಳು ಇಡೀ ವಿಶ್ವಕ್ಕೆ ಸಂಬಂಧಿಸಿವೆ. ಹೀಗಾಗಿ ಪರಿಸರ ಮಾಲಿನ್ಯ ಎಲ್ಲಾ ದೇಶಗಳ ವ್ಯಾಪ್ತಿಗೆ ಒಳಪಡುವುದರಿಂದ ಜಗತ್ತಿನ ಎಲ್ಲಾ ದೇಶಗಳು ಪರಿಸರ ರಕ್ಷಣೆಗಾಗಿ ಟೊಂಕ ಕಟ್ಟಿನಿಂತಿವೆ. ಇದಕ್ಕೆ ಎಲ್ಲಾ ದೇಶಗಳ ಒಪ್ಪಿಗೆಯು ಇದೆ ಪರಿಸರ ರಕ್ಷಣೆಗಾಗಿ ವಿಶ್ವದ ವಿವಿಧ ದೇಶಗಳು ಹಲವಾರು ಒಪ್ಪಂದಗಳನ್ನು ಸಹ ಮಾಡಿಕೊಂಡಿವೆ. ಅವುಗಳಲ್ಲಿ ಪ್ರಮುಖವಾದವುಗಳು ಈ ಕೆಳಗಿನಂತಿವೆ.
1. ಮಾಂಟ್ರಿಯಲ್ ಶಿಷ್ಟಾಚಾರ:
ದಿನೇ ದಿನೇ ಓಜೋನ್ ಪದರು ನಾಶಗೊಳ್ಳುತ್ತಿರುವುದರಿಂದ ಆತಂಕಗೊಂಡ ವಿಶ್ವದ ಅನೇಕ ದೇಶಗಳು 1987ರಲ್ಲಿ ಪರಿಸರವನ್ನು ರಕ್ಷಿಸುವ ಸಲುವಾಗಿ ಜಾಗತಿಕ ಸಮಾವೇಶವನ್ನು ಕೆನಡಾದ ಮಾಂಟ್ರಿಯಲ್ನಲ್ಲಿ ಹಮ್ಮಿಕೊಂಡವು. ಈ ಸಮಾವೇಶದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳು ಓಜೋನ್ ವಿನಾಶಕ ವಸ್ತುಗಳನ್ನು ಕ್ರಮೇಣವಾಗಿ ಕಿತ್ತು ಹಾಕಲು ನಿರ್ಣಯವನ್ನು ತೆಗೆದುಕೊಂಡವು. ವೈದ್ಯಕೀಯ ಅಥವಾ ಸಂಶೋಧನಾ ಕ್ಷೇತ್ರವನ್ನು ಹೊರತುಪಡಿಸಿ ಅವುಗಳ ಬಳಕೆಯನ್ನು ಕಡಿಮೆಗೊಳಿಸಲಾಯಿತು. ಹೀಗಾಗಿ ಇದನ್ನು ʻʻಮಾಂಟ್ರಿಯಲ್ ಶಿಷ್ಟಾಚಾರʼʼ ಎಂದು ಕರೆಯುತ್ತಾರೆ. ಮಾಂಟ್ರಿಯಲ್ ಶಿಷ್ಟಾಚಾರವೆಂದರೆ ಓಝೋನ್ ಪದರಿಗೆ ಹಾನಿಯನ್ನು ಉಂಟುಮಾಡುವಂತಹ ಯಾವುದೇ ಮಲಿನಕಾರಕ ವಸ್ತುಗಳನ್ನು ಉಪಯೋಗಿಸುವುದಿಲ್ಲ ಎಂಬ ಪ್ರತಿಜ್ಞೆ ಮಾಡುವುದು ಎಂದರ್ಥ. ಇದು 1989 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಜಗತ್ತಿನ ಬಹುತೇಕ ದೇಶಗಳು ಮಾಂಟ್ರಿಯಲ್ ಶಿಷ್ಟಾಚಾರವನ್ನು ಒಪ್ಪಿಕೊಂಡಿದೆ. 1990ರ ಲಂಡನ್ ಸಮಾವೇಶದಲ್ಲಿ ಮಾಂಟ್ರಿಯಲ್ ಶಿಷ್ಟಾಚಾರಕ್ಕೆ ತಿದ್ದುಪಡಿ ಮಾಡಲಾಯಿತು. ಇದರ ಪ್ರಕಾರ ಅಭಿವೃದ್ಧಿಯನ್ನು ಹೊಂದಿದ ದೇಶಗಳು ನೀಡಿದ ಕೊಡುಗೆಯಿಂದ ಬಹುಪಕ್ಷಿಯ ನಿಧಿಯನ್ನು ಆರಂಭಿಸಲಾಯಿತು. ಈ ನಿಧಿಯನ್ನು ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಓಜೋನ್ ಪದರು ವಿನಾಶದ ವಸ್ತುಗಳ ಬದಲಾಗಿ ಪರ್ಯಾಯ ರಸಾಯನಿಕಗಳನ್ನು ಉತ್ಪಾದಿಸುವ ತಂತ್ರಜ್ಞಾನಕ್ಕೆ ಬಳಕೆ ಮಾಡಬಹುದುದಾಗಿದೆ.
ಭಾರತವು 1992 ರಲ್ಲಿ ಮಾಂಟ್ರಿಯಲ್ ಶಿಷ್ಟಾಚಾರಕ್ಕೆ ಸಹಿ ಹಾಕಿತು. ತದನಂತರ 1998ರ ಅರಣ್ಯ ಸಚಿವಾಲಯದ ನಿಬಂಧನೆಗಳ ಪ್ರಕಾರ 2003 ಫೆಬ್ರವರಿ ಹೊತ್ತಿಗೆ ವಿನಾಶಗಳ ಬಳಕೆಯನ್ನು ಸಲ್ಲಿಸಬೇಕಿತ್ತು. ಆ ಪ್ರಕಾರ ಹ್ಯಾಲೋಜೀನ್ ಬಳಕೆಯನ್ನು ಸ್ಥಗಿತಗೊಳಿಸಿ ಸಿ. ಎಫ್. ಸಿ. ಗಳನ್ನು ಕಡಿಮೆಗೊಳಿಸಿದೆ. ಮಾಂಟ್ರಿಯಲ್ ಶಿಷ್ಟಾಚಾರವು ಈಗಾಗಲೇ ಎಂಟು ಬಾರಿ ತಿದ್ದುಪಡಿಗೆ ಒಳಪಟ್ಟಿರುವುದರಿಂದ ಈ ಶಿಷ್ಟಾಚಾರ ಯಶಸ್ವಿಯಾಗಿದೆ. ಈ ಒಪ್ಪಂದವು 2050 ರ ವೇಳೆಗೆ ಓಝೋನ್ ಪದರದ ಮೂಲಸ್ಥಿತಿಯನ್ನು ಮರುಸ್ಥಾಪಿಸುವಲ್ಲಿ ಸಫಲತೆಯನ್ನು ಕಾಣುವತ್ತ ಹೆಜ್ಜೆ ಹಾಕಿದೆ.
2. ಕ್ಯೂಟೋ ಶಿಷ್ಟಾಚಾರ
ಹಸಿರು ಮನೆ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದರ ಬಗ್ಗೆ ಹಲವು ದೇಶಗಳ ಪ್ರಮುಖ ಅಂತರಾಷ್ಟ್ರೀಯ ಒಪ್ಪಂದವೇ ಕ್ಯೂಟೊ ಶಿಷ್ಟಾಚಾರ. ಹವಾಮಾನ ಬದಲಾವಣೆ ಕುರಿತು ವಿಶ್ವಸಂಸ್ಥೆಯ ಚೌಕಟ್ಟು ಸಮಾವೇಶದ ಅಡಿಯಲ್ಲಿ ಕ್ಯೂಟೊ ಶಿಷ್ಟಾಚಾರವು 1997 ಡಿಸೆಂಬರ್ 11ರಂದು ಅಂಗೀಕಾರವಾಯಿತು. ವಿಶ್ವದ 192 ದೇಶಗಳು ಈ ಒಪ್ಪಂದಕ್ಕೆ 2005 ಫೆಬ್ರವರಿ 16ರಂದು ಇದು ಕಾರ್ಯರೂಪಕ್ಕೆ ಬಂದಿತು. ಈ ಒಪ್ಪಂದದ ಮೂಲ ಗುರಿ ಎಂದರೆ ವಾಯುಮಂಡಲದಲ್ಲಿನ ಹಸಿರು ಮನೆ ಅನಿಲಗಳ ಪ್ರಮಾಣವನ್ನು ಕಡಿಮೆಗೊಳಿಸಿ ವಿಶ್ವ ತಾಪಮಾನ ಹೆಚ್ಚಳ ಹಾಗೂ ಅದರಿಂದ ಉಂಟಾಗುವ ಬದಲಾವಣೆಗಳನ್ನು ತಡೆಗಟ್ಟುವುದಾಗಿದೆ. ಇದಕ್ಕೆ ಕಾರಣವಾಗಿರುವಂತೆ ಮುಖ್ಯ ಹಸಿರು ಮನೆ ಅನಿಲಗಳೆಂದರೆ ಇಂಗಾಲದ ಡೈಆಕ್ಸೈಡ್ CO2, ಮೀಥೇನ್ CH4, ನೈಟ್ರಸ್ ಆಕ್ಸೈಡ್ NO2, ಹೈಡ್ರೋ ಫ್ಲೋರೋ ಕಾರ್ಬನ್ಗಳು CFCs, ಫರ್ ಫ್ಲೋರೋ ಕಾರ್ಬನ್ PFCs, ಸಲ್ಫರ್ ಹೆಕ್ಸಾ ಫ್ಲೋರೈಡ್ SF6 ಇವುಗಳು ಹೊರ ಸೂಸುವ ಅನಿಲಗಳನ್ನು ತಗ್ಗಿಸುವ ತೀರ್ಮಾನ ಕೈಗೊಳ್ಳಲಾಯಿತು. ಈ ಒಪ್ಪಂದದಲ್ಲಿ 2012ರ ವೇಳೆಗೆ 1990ರ ಇಂಗಾಲಾಮ್ಲ ಬಿಡುಗಡೆಗಿಂತ ಶೇ 8 ರಿಂದ 10ರಷ್ಟು ಪ್ರಮಾಣವನ್ನು ಮಿತಿಗೊಳಿಸುವಂತೆ ಸೂಚಿಸಲಾಯಿತು. ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಅರಣ್ಯ ಬೆಳೆಸುವಂತೆ ಸೂಚಿಸಲಾಯಿತು. ಈ ವಿಷಯದಲ್ಲಿ ಅಭಿವೃದ್ಧಿ ಹೊಂದಿದ ಹಾಗೂ ಹೊಂದುತ್ತಿರುವ ದೇಶಗಳ ನಡುವೆ ಒಮ್ಮತದ ನಿರ್ಧಾರದಲ್ಲಿ ಭಿನ್ನಾಭಿಪ್ರಾಯಗಳು ಕಂಡು ಬಂದವು. ಆದರೂ 2050ರ ವೇಳೆಗೆ ಹಸಿರು ಮನೆ ಅನಿಲಗಳ ಹರಡುವಿಕೆಯ ಪ್ರಮಾಣವನ್ನು ತಗ್ಗಿಸಲು ಬಹುಪಾಲು ದೇಶಗಳು ಒಪ್ಪಿಕೊಂಡವು.
3. ಜೀವ ವೈವಿಧ್ಯತೆ ಸಮ್ಮೇಳನ:
ಇದೊಂದು ಅಂತರಾಷ್ಟ್ರೀಯ ಸಮಾವೇಶವಾಗಿದ್ದು ಜೈವಿಕ ವೈವಿಧ್ಯತೆಯನ್ನು ಕಾಪಾಡುವುದು ಇದರ ಗುರಿಯಾಗಿದೆ. ಜೀವವೈವಿಧ್ಯತೆ ಸಮಾವೇಶ ಬ್ರೆಜಿಲ್ನ ರೆಯೋಡಿ ಜನೈರೋ ನಗರದಲ್ಲಿ ವಿಶ್ವಸಂಸ್ಥೆಯ ಎನ್ವಿರಾನ್ಮೆಂಟ್ ಪ್ರೋಗ್ರಾಮ್ (UNEP) ಆಯೋಜನೆ ಮಾಡಿದ್ದು ರಯೋ ಸಮಿತಿನಲ್ಲಿ ವಿಶ್ವದ ದೇಶಗಳು ಸಹಿ ಹಾಕಿದ ಅತಿ ಮುಖ್ಯ ಒಡಂಬಡಿಕೆಯಾಗಿದೆ. ಇದು 1993ರಲ್ಲಿ ಜಾರಿಗೆ ಬಂದಿದ್ದು ಈ ಒಪ್ಪಂದಕ್ಕೆ ಪೂರಕವಾಗಿ ಕಾರ್ಟಿಜೀನಾ ಹಾಗೂ ನಗೋಯ ಪ್ರೋಟೋಕಾಲ್ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಈ ಒಪ್ಪಂದದ ಉದ್ದೇಶಗಳೆಂದರೆ ಜೀವ ವೈವಿಧ್ಯ ಘಟಕಗಳ ಸುಸ್ಥಿರ ಬಳಕೆ. ಜೈವಿಕ ಸಂಪನ್ಮೂಲಗಳ ನ್ಯಾಯಯುತ ಹಾಗೂ ಸಮಾನ ಹಂಚಿಕೆ ನಂತರ 1994ರಲ್ಲಿ ಜೀವವೈವಿಧ್ಯತೆಯ ಪ್ರಥಮ ಸಮಾವೇಶ ಬಹುಮಾಸದಲ್ಲಿ ಜರುಗಿತು.
4. ಕಾರ್ಟೀಜಿನಾ ಶಿಷ್ಟಾಚಾರ:
ಕಾರ್ಟಿಜಿನಾ ಶಿಷ್ಟಾಚಾರರು ಜೀವ ವೈವಿಧ್ಯತೆಯ ಪೂರಕವಾಗಿ ಜಾರಿಗೆ ಬಂದಿತು. ಇದು ಜೈವಿಕ ಒಪ್ಪಂದದ ಮೇಲಿನ ಸಮಾವೇಶವಾಗಿದೆ. ಜೀವಿಗಳಿಗೆ ಒದಗಬಹುದಾದ ಅಪಾಯವನ್ನು ತಪ್ಪಿಸಲು 2003 ಸೆಪ್ಟೆಂಬರ್ 11ರಂದು ಕಾರ್ಟಿಜಿನಾ ಶಿಷ್ಟಾಚಾರ ಜಾರಿಗೆ ಬಂದಿತು. ಇದು ಕುಲಾಂತರಿ ಜೀವಿಗಳನ್ನು ಆಮದು ಮಾಡಿಕೊಳ್ಳುವ ಜೀವಿಗಳಿಗೆ ಎಲ್ಲಾ ರೀತಿಯ ಉಚಿತ ಮಾಹಿತಿಯನ್ನು ಒದಗಿಸುತ್ತದೆ.
5. ರಸಾಯನಿಕ ಅಸ್ತ್ರ ನಿರ್ಬಂಧನ ಒಕ್ಕೂಟ:
ದೈಹಿಕ ಹೋರಾಟದ ಬದಲು ರಸಾಯನಿಕ ವಸ್ತುಗಳನ್ನು ಬಳಸಿ ಉದ್ದೇಶಪೂರ್ವಕವಾಗಿ ನಾಗರೀಕ ಪ್ರಾಣಹಾನಿ, ಆಸ್ತಿಪಾಸ್ತಿ ಹಾನಿ, ಹಾಗೂ ಆರೋಗ್ಯ ಹಾನಿ ಉಂಟು ಮಾಡುವುದನ್ನು ರಸಾಯನಿಕ ಅಸ್ತ್ರ ಎಂದು ಕರೆಯುವರು. ವಿಷಪೂರಿತ ರಸಾಯನಿಕಗಳನ್ನು ಇದಕ್ಕಾಗಿಯೇ ಬಳಕೆ ಮಾಡಲಾಗುತ್ತದೆ. ಈ ಒಕ್ಕೂಟದ ಒಪ್ಪಂದವು 1993 ಸಮಾವೇಶಗೊಂಡಿತು. ಇದರಲ್ಲಿ 165 ದೇಶಗಳು ಭಾಗವಹಿಸಿದ್ದವು ಹಾಗೂ ಒಪ್ಪಿಗೆಯನ್ನು ಸೂಚಿಸಿದವು. 1997ರಲ್ಲಿ ಜಾರಿಗೆ ಬಂದಿತು. ಈ ಒಪ್ಪಂದದ ಪ್ರಕಾರ.
- ಪ್ರಪಂಚದ ಯಾವುದೇ ರಾಷ್ಟ್ರವು ಅಣ್ವಸ್ತ್ರ ಅಭಿವೃದ್ಧಿ, ಉತ್ಪಾದನೆ, ಸಂಗ್ರಹಣೆ, ಅಣ್ವಸ್ತ್ರಗಳನ್ನು ಇರಿಸಿಕೊಳ್ಳುವಂತಿಲ್ಲ.
- ರಸಾಯನಿಕ ಅಸ್ತ್ರಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡುವುದನ್ನು ನಿರ್ಬಂಧಿಸಿದೆ.
- ರಸಾಯನಿಕ ಅಸ್ತ್ರಗಳನ್ನು ಬಳಕೆ ಮಾಡುವುದನ್ನು ತಡೆಗಟ್ಟಲಾಗಿದೆ.
- ಒಕ್ಕೂಟ ನಿರ್ಬಂಧಿತ ವಸ್ತುಗಳನ್ನು ಬಳಸುವಂತಿಲ್ಲ.
ಇದರ ಕೇಂದ್ರ ಕಚೇರಿ ನೆದರ್ಲ್ಯಾಂಡ್ನ ಹೇಗ್ ಎಂಬಲ್ಲಿದೆ. ಈ ಕಚೇರಿಯ ಕಾರ್ಯವೈಖರಿಯನ್ನು ಕಂಡು 2013ರಲ್ಲಿ ಅದಕ್ಕೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ಭಾರತ ಈ ಒಕ್ಕೂಟದ ಸದಸ್ಯ ದೇಶವಾಗಿದೆ. 2000 ದಲ್ಲಿ ಭಾರತವು ʻʻದಿ ಕೆಮಿಕಲ್ ವೆಪೆನ್ಸ್ ಕನ್ವೆನ್ಸನಲ್ ಆಕ್ಟ್ನ್ನು ಜಾರಿಗೆ ತಂದಿದೆ.
ಉಪಸಂಹಾರ
ಅಂತರಾಷ್ಟ್ರೀಯ ಒಪ್ಪಂದಗಳು ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಮಾಂಟ್ರಿಯಲ್ ಮತ್ತು ಕ್ಯೂಟೋ ಶಿಷ್ಟಾಚಾರಗಳಂತಹ ಒಪ್ಪಂದಗಳು ಜಾಗತಿಕ ಪರಿಸರ ಸಮಸ್ಯೆಗಳನ್ನು ತಗ್ಗಿಸುವ ದಿಕ್ಕಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಸೂಚಿಸಿವೆ. ಜೀವ ವೈವಿಧ್ಯತೆ ಸಮ್ಮೇಳನ ಹಾಗೂ ಕಾರ್ಟಿಜಿನಾ ಶಿಷ್ಟಾಚಾರಗಳು ಪ್ರಕೃತಿ ಸಂಪತ್ತಿನ ಸುಸ್ಥಿರ ಬಳಕೆಗೆ ಮಾರ್ಗದರ್ಶನ ನೀಡುತ್ತವೆ. ರಸಾಯನಿಕ ಅಸ್ತ್ರ ನಿರ್ಬಂಧನ ಒಕ್ಕೂಟವು ಮಾನವ ಜೀವ ರಕ್ಷಣೆಗೆ ಸಹಕಾರಿಯಾಗಿದೆ. ಈ ಒಪ್ಪಂದಗಳನ್ನು ಯಶಸ್ವಿಯಾಗಿ ಜಾರಿಗೆ ತರುವುದು ಪ್ರತಿಯೊಂದು ರಾಷ್ಟ್ರದ ಜವಾಬ್ದಾರಿಯಾಗಿದೆ.