ಶಿವಾಜಿಯ ಮರಣದ ನಂತರ ಪೇಳ್ವೆಗಳು ಮರಾಠ ಸಾಮ್ರಾಜ್ಯದ ನಿಜವಾದ ಸಾರ್ವಭೌಮರಾಗಿ ಏಳಿಗೆಗೆ ಬಂದಿದ್ದು, ಮರಾಠ ಇತಿಹಾಸದಲ್ಲಿ ಪ್ರಮುಖವಾದುದು. ಈತನ ಮರಣಾನಂತರ ಉತ್ತರಾಧಿಕಾರಕ್ಕಾಗಿ ನಡೆದ ಹೋರಾಟಗಳು ಆತನ ಉತ್ತರಾಧಿಕಾರಿಗಳನ್ನು ಅನಾವಶ್ಯಕವಾಗಿ ದುರ್ಬಲಗೊಳಿಸಿದವು. ಮೊಗಲ್ ಸಾಮ್ರಾಟ ಔರಂಗಜೇಬನು ಸಾಂಬಾಜಿಯನ್ನು ಕೊಲೆಮಾಡಿದುದು ಮರಾಠರಲ್ಲಿ ಐಕ್ಯತೆ ಉಂಟಾಗಲು ಸಹಾಯಕವಾಯಿತು. ಆದರೆ ಈ ಐಕ್ಯತೆ ಶಾಶ್ವತವಾಗಿ ಉಳಿಯಲಿಲ್ಲ. ಮೊಗಲರ ಬಂಧನದಿಂದ ಬಿಡುಗಡೆಯಾದ ಸಾಹು ಕ್ರಿ.ಶ. 1708ರಲ್ಲಿ ಸತಾರದಲ್ಲಿ ಭತ್ರಪತಿಯಾಗಿ ಅಧಿಕಾರಕ್ಕೆ ಬಂದನು. ಆದರೆ ಈತ ಅಷ್ಟು ಸಮರ್ಥನಾದ ರಾಜನಾಗಿರಲಿಲ್ಲ. ಈತನು ಅಧಿಕಾರಕ್ಕೆ ಬಂದ ವೇಳೆಯಲ್ಲಿ ರಾಜ್ಯಾದ್ಯಂತ ಅನಾಯಕತ್ವ ಮತ್ತು ಅರಾಜಕತೆ ತಲೆದೋರಿತ್ತು. ಈತ ತನ್ನ ವೈಯಕ್ತಿಕ ಗುಣಗಳಿಂದ ಕೆಲವರನ್ನು ತನ್ನ ಕಡೆಗೆ ಒಲಿಸಿಕೊಂಡಿದ್ದನು. ಆದರೆ ಇವನಿಗೆ ಶಿವಾಜಿಯಷ್ಟು ಶಕ್ತಿ ಸಾಮರ್ಥ್ಯವಿರಲಿಲ್ಲ. ಇವನು ಸೋಮಾರಿ ಮತ್ತು ಆಲಸಿಯೂ ಆಗಿದ್ದು, ವಿಲಾಸ ಜೀವನವನ್ನು ಆರಿಸಿಕೊಂಡನು. ಆಡಳಿತವನ್ನು ಸಂಪೂರ್ಣವಾಗಿ ತನ್ನ ಅಧಿಕಾರಿಗಳಿಗೆ ಅತಿಮುಖ್ಯವಾಗಿ ಪ್ರಧಾನಮಂತ್ರಿಗಳಾಗಿದ್ದ ಪೇಕ್ಷೆಗಳಿಗೆ ವಹಿಸಿಕೊಟ್ಟನು. ಈ ರೀತಿ ಅರಸನ ನಿರಾಶಕ್ತಿ ಮತ್ತು ಆಸಮರ್ಥತೆಗಳು, ಸಾರ್ವಭೌಮ ಅಧಿಕಾರವು ಪೇಶ್ವೆಯವರಿಗೆ ವರ್ಗಾವಣೆಯಾಗಲು ಮತ್ತು ಅವರು ಮರಾಠ ರಾಜಕೀಯದಲ್ಲಿ ಪ್ರಧಾನ್ಯತೆ ಗಳಿಸಲು ಕಾರಣವಾಯಿತು.
ಬಾಲಾಜಿ ವಿಶ್ವನಾಥ : ಇವನು ಮೊದಲ ಪೇಳ್ವೆಯಾಗಿದ್ದು ಸಿಕ್ಕ ಸದವಕಾಶವನ್ನು ಉಪಯೋಗಿಸಿಕೊಂಡು ಮರಾಠ ರಾಜಕೀಯದಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ಮಾರ್ಪಟ್ಟನು. ಕ್ರಿ.ಶ. 1713ರಲ್ಲಿ ಸಾಹು ಇವನನ್ನು ಪೇಶ್ವೆಯನ್ನಾಗಿ ನೇಮಕ ಮಾಡಿದನು. ಇವನು ಅಧಿಕಾರಕ್ಕೆ ಬರಲು ಮೂಲ ಕಾರಣ ಈತನಲ್ಲಿದ್ದ ವೈಯಕ್ತಿಕ ಪ್ರತಿಭೆ ಮತ್ತು ಶಕ್ತಿ ಸಾಮರ್ಥ್ಯ. ತನ್ನ ಚಾಣಾಕ್ಷತನದಿಂದ ಅತ್ಯಲ್ಪ ಕಾಲದಲ್ಲಿಯೇ ಸಾಹುವನ್ನು ನಾಮಮಾತ್ರ ಅರಸನನ್ನಾಗಿ ಮಾಡಿ ತಾನೇ ನಿಜವಾದ ಅರಸನಾದನು. ಪೇಶ್ವೆ ಅಧಿಕಾರವು ವಂಶಪಾರಂಪರ್ಯವಾಗುವಂತೆ ಮಾಡಿದನು. ಈತನೊಂದಿಗೆ ಪೇಶ್ವೆಯವರು ಆಳ್ವಿಕೆ ಆರಂಭವಾಯಿತು.
ವಿಶ್ವನಾಥನು ಉತ್ತಮ ಆಡಳಿತಗಾರನಾಗಿದ್ದನು. ರಾಜನೈಪುಣ್ಯತೆಯನ್ನು ಹೊಂದಿದ್ದನು. ಇವನು ಪ್ರಧಾನಿಯಾಗಿ ಆಳ್ವಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ರಾಜ್ಯದ ಶಾಂತಿಗೆ ಧಕ್ಕೆ ಉಂಟುಮಾಡುತ್ತಿದ್ದ ದಂಗೆಕೋರರನ್ನು ಅಡಗಿಸಿದನು. ಅಷ್ಠಪ್ರಧಾನ ಪದ್ಧತಿಯನ್ನು ಪುನಃ ಜಾರಿಗೆ ತಂದನು. ಆದರೆ ಎಲ್ಲಾ ಅಧಿಕಾರವನ್ನು ತನ್ನ ಕೈಯಲ್ಲಿಯೇ ಕೇಂದ್ರೀಕರಿಸಿಕೊಂಡನು. ಮೊಗಲ್ ಸಾಮ್ರಾಜ್ಯದ ಆಂತರಿಕ ಕಾರ್ಯ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ನಡೆಸಿ ಮರಾಠರಿಗೆ ಹಲವು ರಿಯಾಯಿತಿಗಳನ್ನು ದೊರಕಿಸಿಕೊಟ್ಟನು. ಮೊಗಲರೊಂದಿಗೆ ಮೈತ್ರಿ ಮಾಡಿಕೊಂಡು ದಖ್ಖನ್ನಿನ ನಾಲ್ಕು ಸುಭಗಳಲ್ಲಿ ಚೌತ್ ಮತ್ತು ಸರ್ದೆಶ್ ಮುಖಿ ತೆರಿಗೆಗಳನ್ನು ವಸೂಲಿ ಮಾಡುವ ಅಧಿಕಾರವನ್ನು ಮರಾಠರಿಗೆ ದೊರಕಿಸಿಕೊಟ್ಟನು. ಕ್ರಿ.ಶ. 1719ರಲ್ಲಿ ಬಾಲಾಜಿ ವಿಶ್ವನಾಥನು ಮೊಗಲರ ಉತ್ತರಾಧಿಕಾರ ಯುದ್ಧದಲ್ಲಿ ಯಶಸ್ವಿಯಾಗಿ ಭಾಗವಹಿಸಿದ್ದನು. ಇದು ಇತಿಹಾಸದಲ್ಲಿ ಪ್ರಾಮುಖ್ಯತೆ ಗಳಿಸಿದೆ. ಇದು ಮರಾಠರ ಘನತೆಯನ್ನು ಹೆಚ್ಚಿಸಿತು. ಅಲ್ಲದೆ ಮಹತ್ವಾಕಾಂಕ್ಷೆಯನ್ನು ಇಮ್ಮಡಿಗೊಳಿಸಿತು. ಅವರು ಸ್ವತಂತ್ರ ಸಾಮ್ರಾಜ್ಯದ ಕನಸನ್ನು ಕಟ್ಟುವುದಕ್ಕೆ ಹಾದಿಯನ್ನು ಸುಗಮಗೊಳಿಸಿತು. ದೆಹಲಿಯ ಚಕ್ರವರ್ತಿಯು ಅವರ ಕೈಗೊಂಬೆಯಾದನು. ವಿಶ್ವನಾಥನು ಸ್ವತಂತ್ರ ಮರಾಠ ಸಾಮ್ರಾಜ್ಯದ ಅಸ್ತಿಭಾರ ನೀತಿಯನ್ನು ಈ ಯಶಸ್ವಿನ ಮೇಲೆ ರೂಪಿಸಿದ. ತತ್ಪರಿಣಾಮವಾಗಿ ಮರಾಠರ ಪ್ರಾಬಲ್ಯ ಹೆಚ್ಚಿದುದಲ್ಲದೆ ಮರಾಠ ರಾಜ್ಯದ ಉತ್ಕರ್ಷಕ್ಕೆ ಕಾರಣವಾಯಿತು. ಈ ಎಲ್ಲಾ ಯಶಸ್ಸಿನ ನಡುವೆ ವಿಶ್ವನಾಥನು ಕ್ರಿ.ಶ. 1720ರಲ್ಲಿ ಮರಣಹೊಂದಿದನು.
ಒಂದನೇ ಬಾಜಿರಾಯ : ಬಾಲಾಜಿ ವಿಶ್ವನಾಥನ ಸಾವಿನ ನಂತರ ಆತನ ಪುತ್ರನಾದ ಒಂದನೇ ಬಾಜಿರಾಯನು ಅಧಿಕಾರಕ್ಕೆ ಬಂದನು. ಇವನು ಪೇಶ್ವೆಗಳಲ್ಲಿ ಪ್ರಮುಖನು ಬಾಲ್ಯದಲ್ಲಿಯೇ ತನ್ನ ತಂದೆಯೊಡನೆ ಸೈನಿಕ ವಿದ್ಯೆಯನ್ನು ಕಲಿತುಕೊಂಡಿದ್ದನು. ತತ್ಪರಿಣಾಮವಾಗಿ ಈತನಿಗೆ ಯುದ್ಧವಿದ್ಯೆ ಮತ್ತು ರಾಜಕಾರಣದಲ್ಲಿ ಸಾಕಷ್ಟು ಅನುಭವವಿತ್ತು. ಇವನು ವೀರಯೋಧ ಮಾತ್ರವಲ್ಲದೆ ಅತ್ಯುತ್ತಮ ರಾಜನೀತಿ ನಿಪುಣನಾಗಿದ್ದ. ಈತ ಮೊಗಲ್ ಸಾಮ್ರಾಜ್ಯ ಅವನತಿಯತ್ತ ಸಾಗಿದ್ದ ಸಂದರ್ಭದಲ್ಲಿ, ಅದರ ಸಮಾಧಿಯ ಮೇಲೆ ಮರಾಠ ಸಾಮ್ರಾಜ್ಯವನ್ನು ನಿರ್ಮಿಸಬೇಕೆಂಬ ಕನಸನ್ನು ಕಂಡನು. ಈ ಉದ್ದೇಶಕ್ಕಾಗಿಯೇ ಹಿಂದೂ ನಾಯಕರನ್ನು ಒಗ್ಗೂಡಿಸಲು ಪ್ರಯತ್ನಿಸಿದನು. ಹಿಂದೂ ನಾಯಕರ ಬೆಂಬಲ ಮತ್ತು ಸಹಕಾರಗಳನ್ನು ಪಡೆಯುವ ಸಲುವಾಗಿ ಒಂದನೇ ಬಾಜಿರಾಯನು ʻಹಿಂದೂ-ಪಾದ್-ಪಾದ್‌ಶಾಯಿ ಅಥವಾ ಹಿಂದೂ ಸಾಮ್ರಾಜ್ಯದ ಸಿದ್ಧಾಂತವನ್ನು ಬೋಧಿಸಿದ. ಕ್ರಿ.ಶ. 1724 ರಲ್ಲಿ ಮಾಳ್ವದ ಮೇಲೆ ಧಾಳಿ ಮಾಡಿ ಅದನ್ನು ಆಕ್ರಮಿಸಿಕೊಂಡನು. ಆದರೆ ಈ ಆಕ್ರಮಣವನ್ನು ಕೆಲವರು ವಿರೋಧಿಸಿದಾಗ ಆ ವಿರೋಧಿಗಳನ್ನು ಹತ್ತಿಕ್ಕಿದನು. ಕ್ರಿ.ಶ. 1731ರಲ್ಲಿ ಹೈದರಾಬಾದಿನ ನಿಜಾಂ-ಉಲ್-ಮುಲ್ಕನೊಂದಿಗೆ ಮೈತ್ರಿ ಮಾಡಿಕೊಂಡು ಉತ್ತರದಲ್ಲಿ ರಾಜ್ಯ ವಿಸ್ತಾರಕ್ಕೆ ಅವಕಾಶಗಿಟ್ಟಿಸಿಕೊಂಡನು.
ಮೊಗಲ್ ಸಾಮ್ರಾಟನು ನಿಜಾಂ-ಉಲ್-ಮುಲ್ಕನ ಸಹಾಯವನ್ನು ಕೋರಿದ್ದರಿಂದ ಕ್ರಿ.ಶ. 1737 ರಲ್ಲಿ ಮುಲ್ಕನು ಈ ಹಿಂದಿನ ಮರಾಠರೊಂದಿಗಿನ ಒಪ್ಪಂದವನ್ನು ಮುರಿದು ಬಾಜಿರಾಯನ ವಿರುದ್ಧ ಯುದ್ಧಕ್ಕಿಳದನು. ಭೂಪಾಲ್ ಹತ್ತಿರ ನಡೆದ ಯುದ್ಧದಲ್ಲಿ ನಿಜಾಂ-ಉಲ್-ಮುಲ್ಕನು ಸೋತು ಶರಣಾದನು. ಸೋತ ಮುಲ್ಕನು ಮಾಳ್ವ, ನರ್ಮದ ಮತ್ತು ಚಂಬಲ್ ನದಿಗಳ ಮಧ್ಯಬಾಗದ ಪ್ರದೇಶದ ಮೇಲೆ ಸಾರ್ವಭೌಮತ್ವವನ್ನು, ಅಲ್ಲದೆ ಯುದ್ಧದ ವೆಚ್ಚಕ್ಕಾಗಿ 50 ಲಕ್ಷ ರೂಪಾಯಿಗಳನ್ನು ದೆಹಲಿಯ ಚಕ್ರವರ್ತಿಯಿಂದ ಕೊಡಿಸಲು ಒಪ್ಪಿದ. ಕ್ರಿ.ಶ. 1739ರಲ್ಲಿ ಮರಾಠರು ಪೋರ್ಚುಗೀಸರಿಂದ ಸಾಲೈಟ್ ಮತ್ತು ಬೇಸಿನ್‌ಗಳನ್ನು ವಶಪಡಿಸಿಕೊಂಡರು. ಕ್ರಿ.ಶ. 1740ರಲ್ಲಿ ಬಾಜಿರಾಯನು ಆಕಾಲಿಕ ಸಾವಿಗೆ ಒಳಗಾದನು. ಈತನ ಮರಣದಿಂದಾಗಿ ಮರಾಠರಿಗೆ ತುಂಬಲಾರದ ನಷ್ಟವಾಯಿತು. ಒಂದನೇ ಬಾಜಿರಾಯನು ತನ್ನ ವೈಯಕ್ತಿಕ ಜೀವನದಲ್ಲಿ ಕೆಲವು ನ್ಯೂನ್ಯತೆಗಳನ್ನು ಹೊಂದಿದ್ದರೂ ಸಹ ವೀರಯೋಧನು ಮತ್ತು ಪ್ರಖ್ಯಾತ ರಾಜನೀತಿ ನಿಪುಣನಾಗಿದ್ದು, ಮರಾಠ ಸಾಮ್ರಾಜ್ಯಕ್ಕೆ ಅತ್ಯುತ್ತಮ ಸೇವೆ ಸಲ್ಲಿಸಿದನು. ಈತನ ಕಾಲದಲ್ಲಿ ಮರಾಠ ಸಾಮ್ರಾಜ್ಯ ವಿಸ್ತಾರವಾಯಿತು.
ಬಾಲಾಜಿ ಬಾಜೀರಾಯ : (1740-1761) : ಒಂದನೇ ಬಾಜೀರಾಯನ ಮರಣಾನಂತರ ಆತನ ಪುತ್ರನಾದ ಬಾಲಾಜಿ ಬಾಜೀರಾಯನು ಪೇಳ್ವೆಯಾಗಿ ಅಧಿಕಾರಕ್ಕೆ ಬಂದನು. ಈತನಿಗೆ ಇವನ ತಂದೆಯಂತಹ ಶ್ರೇಷ್ಠ ಪ್ರತಿಭೆಯಿರಲಿಲ್ಲ. ಆದಾಗ್ಯೂ ಈತನಲ್ಲಿ ಶಕ್ತಿ ಸಾಮರ್ಥ್ಯಗಳು ಕಡಿಮೆ ಇರಲಿಲ್ಲ. ತನ್ನ ತಂದೆಯಂತೆ ಈತನೂ ಸಹ ರಾಜ್ಯದ ವಿಸ್ತರಣೆಯಲ್ಲಿ ಹಲವು ಸಮರ್ಥ ಅಧಿಕಾರಿಗಳ ಸೇವೆಯನ್ನು ದೊರಕಿಸಿಕೊಂಡನು.
ಬಾಲಾಜಿ ಬಾಜಿರಾಯನು ತನ್ನ ಅಜ್ಞಾನದಿಂದ ಎರಡು ವಿಷಯಗಳಲ್ಲಿ ತನ್ನ ತಂದೆಯ ನೀತಿಯನ್ನು ಬಿಟ್ಟು ಅಡ್ಡದಾರಿ ಹಿಡಿದನು. ಒಂದನೆಯದಾಗಿ ಸೇನೆಯು ಈತನ ಕಾಲದಲ್ಲಿ ಸಂಪೂರ್ಣವಾಗಿ ಬದಲಾವಣೆ ಹೊಂದಿತು. ಒಂದನೇ ಬಾಜಿರಾಯನು ಕುದುರೆ ಸವಾರರ ಸಂಖ್ಯೆಯನ್ನು ಹೆಚ್ಚಿಸಿದರೂ ಸಹ ಹಳೆಯ ಯುದ್ಧ ವಿಧಾನವನ್ನು ಕೈಬಿಡಲಿಲ್ಲ. ಆದರೆ ಬಾಲಾಜಿ ಬಾಜಿರಾಯನು ವಿದೇಶೀ ಯುದ್ಧ ವಿಧಾನವನ್ನು ಜಾರಿಗೆ ತರುವ ಉದ್ದೇಶದಿಂದ ಸೈನ್ಯದಲ್ಲಿನ ಸಂಪ್ರದಾಯವನ್ನು ಮುರಿದು ಕೈಗೆ ಸಿಕ್ಕ ಕೂಲಿ ಸೈನಿಕರನ್ನು ಸೇರಿಸಿಕೊಂಡನು. ತತ್ಪರಿಣಾಮವಾಗಿ ಸೈನ್ಯವು ತನ್ನ ರಾಷ್ಟ್ರೀಯ ಲಕ್ಷಣವನ್ನು ಕಳೆದುಕೊಂಡಿತು. ಈ ಹೊರಗಿನ ಸೈನಿಕರನ್ನು ಶಿಸ್ತಿಗೆ ಮತ್ತು ಹತೋಟಿಗೆ ಒಳಪಡಿಸುವುದು ಕಷ್ಟವಾಯಿತು. ಭಾಗಶ: ಹಳೆಯ ಯುದ್ಧ ಪದ್ಧತಿಯನ್ನು ಬಿಟ್ಟು ಬಿಡಲಾಯಿತು. ಎರಡನೆಯದಾಗಿ ಬಾಲಾಜಿ ಬಾಜಿರಾಯನು ತನ್ನ ತಂದೆಯ ಉದ್ದೇಶವಾದ ಹಿಂದೂ ನಾಯಕರನ್ನೆಲ್ಲ ಒಂದೆಡೆ ಸೇರಿಸುವ ಅರ್ಥಾತ್ ಹಿಂದೂ-ಪಾದ್-ಪಾದಶಾಹಿ ಯನ್ನು ಏರ್ಪಡಿಸುವ ಗುರಿಯನ್ನು ಉದ್ದೇಶಪೂರ್ವಕವಾಗಿ ಬಿಟ್ಟುಕೊಟ್ಟನು. ಈತನ ಅನುಯಾಯಿಗಳು ಹಿಂದಿನಂತೆ ಕಲಹ ಕಚ್ಚಾಟಗಳಲ್ಲಿ ಮತ್ತು ಆಕ್ರಮಣಗಳಲ್ಲಿ ತೊಡಗಿದರು. ಹಿಂದೂ ಮುಸ್ಲಿಮರೆನ್ನದೆ ಧಾಳಿನಡೆಸಿ ರಜಪೂತರ ಮತ್ತು ಇತರ ಹಿಂದೂ ನಾಯಕರ ಸಹಾನುಭೂತಿಯನ್ನು ಕಳೆದುಕೊಂಡರು. ತತ್ಪರಿಣಾಮವಾಗಿ ಮರಾಠ ಸಾಮ್ರಾಜ್ಯವು ಅಖಿಲ ಭಾರತ ರಾಷ್ಟ್ರೀಯತೆಯನ್ನು ಪ್ರತಿನಿಧಿಸುವ ಹಕ್ಕನ್ನು ಕಳೆದುಕೊಂಡಿತು.
ಬಾಲಾಜಿ ಬಾಜಿರಾಯನ ನೀತಿಯ ಲೋಪದೋಷಗಳು ತಕ್ಷಣವೇ ಯಾವ ಪರಿಣಾಮವನ್ನುಂಟುಮಾಡಲಿಲ್ಲ. ಉತ್ತರ ಮತ್ತು ದಕ್ಷಿಣ ಭಾರತಗಳಲ್ಲಿ ಮರಾಠರ ಪ್ರಾಬಲ್ಯ ನಿರಂತರವಾಗಿ ಮುಂದುವರಿಯಿತು. ಕೃಷ್ಣಾನದಿಯ ದಕ್ಷಿಣ ರಾಜ್ಯಗಳಿಂದ ಬಲತ್ಕಾರವಾಗಿ ಕಷ್ಟ ಕಾಣಿಕೆಗಳನ್ನು ವಸೂಲಿ ಮಾಡಿದ್ದಲ್ಲದೆ, ಮರಾಜರು ಬಿದನೂರು ಮತ್ತು ಮೈಸೂರು ರಾಜ್ಯಗಳಿಗೆ ಮುತ್ತಿಗೆ ಹಾಕಿದರು. ಆದರೆ ಅವರ ಮುನ್ನಡೆಗೆ ಸ್ವಲ್ಪ ಕಾಲ ತಡೆಯಾಯಿತು. ಕ್ರಿ.ಶ. 1760ರಲ್ಲಿ ಪೇಶ್ವೆಯ ಸಂಬಂಧಿಯಾದ ಸದಾಶಿವರಾಯನು ಹೈದರಾಬಾದಿನ ನಿಜಾಮನನ್ನು ಅಪಜಯಗೊಳಿಸಿದನು. ಸೋತ ನಿಜಾಮನು ಬಿಜಾಪುರ ಪ್ರಾಂತ, ಔರಂಗಾಬಾದಿನ ಎಲ್ಲ ಪ್ರದೇಶ ಮತ್ತು ದೌಲತಾಬಾದಿನ ಕೋಟೆಯೂ ಸೇರಿದಂತೆ ಹಲವಾರು ಕೋಟೆಗಳನ್ನು ಮರಾಠರಿಗೆ ಬಿಟ್ಟುಕೊಟ್ಟನು. ತತ್ಪರಿಣಾಮವಾಗಿ ಮರಾಠರ ಅಧಿಪತ್ಯ ಇನ್ನೂ ಹೆಚ್ಚಾಯಿತು.
ಕ್ರಿ.ಶ. 1753ರಲ್ಲಿ ಹೋಳ್ಕರ್ ಮತ್ತು ರಘುನಾಥರಾಯರನ್ನು ಉತ್ತರ ಭಾರತಕ್ಕೆ ಸೇನಾ ಸಮೇತ ಕಳುಹಿಸಲಾಯಿತು. ತತ್ಪರಿಣಾಮವಾಗಿ ದೋಆಬ್ ಪ್ರಾಂತ್ಯದಲ್ಲಿ ಮರಾಠ ಸಾರ್ವಭೌಮತ್ವವನ್ನು ಪುನು ಸ್ಥಾಪಿಸಲಾಯಿತು. ಕ್ರಿ.ಶ. 1757ರ ಆಗಸ್ಟ್‌ನಲ್ಲಿ ದೆಹಲಿಗೆ ಮುತ್ತಿಗೆ ಹಾಕಿ ನಜೀಬ್-ಉದ್-ದೌಲನನ್ನು ಶರಣಾಗತನಾಗುವಂತೆ ಮಾಡಿದರು. ಅಲ್ಲದೆ ದೆಹಲಿಯನ್ನು ನಂಬಿಕೆಗೆ ಅರ್ಹನಾದ ವಜೀರ್ ಇಮಾದನಿಗೆ ವಹಿಸಲಾಯಿತು, ಕ್ರಿ.ಶ. 1758 ರಲ್ಲಿ ಪಂಜಾಬಿಗೆ ಮುತ್ತಿಗೆ ಹಾಕಿ ಲಾಹೋರ್ ಮತ್ತು ಸರ್ ಹಿಂದ್‌ಗಳನ್ನು ವಶಪಡಿಸಿಕೊಂಡು, ಅದೀನಬೇಗ್ ಖಾನ್ ಎಂಬುವವನನ್ನು ಪಂಜಾಬಿನ ರಾಜ್ಯಪಾಲನನ್ನಾಗಿ ಮಾಡಲಾಯಿತು. ಈತ ಮರಾಠರಿಗೆ ವರ್ಷಕ್ಕೆ 75 ಲಕ್ಷ ರೂಪಾಯಿ ಕಷ್ಟವನ್ನು ನೀಡಲು ಒಪ್ಪಿಕೊಂಡನು. ಈ ರೀತಿ ರಘುನಾಥರಾಯನ ನೀತಿಯು ಮರಾಠ ಸಾಮ್ರಾಜ್ಯವನ್ನು ವಿಸ್ತರಿಸಿತು.
ಉಪಸಂಹಾರ
ಪೇಶ್ವೆಗಳ ಕಾಲದಲ್ಲಿ ಮರಾಠ ಸಾಮ್ರಾಜ್ಯವು ರಾಜಕೀಯ ಮತ್ತು ಸೈನಿಕವಾಗಿ ಬಹಳಷ್ಟು ವಿಸ್ತಾರವಾಯಿತು. ವಿಶೇಷವಾಗಿ ಬಾಲಾಜಿ ವಿಶ್ವನಾಥ ಮತ್ತು ಬಾಜೀರಾಯರ ನಾಯಕತ್ವ ಮರಾಠ ಸಾಮ್ರಾಜ್ಯದ ಶಕ್ತಿಯನ್ನು ಹೆಚ್ಚಿಸಿತು. ಆದರೆ ನಂತರದ ಆಡಳಿತದಲ್ಲಿ ಉಂಟಾದ ನೀತಿ ದೋಷಗಳು ಮತ್ತು ಒಳಕಲಹಗಳು ಸಾಮ್ರಾಜ್ಯದ ದುರ್ಬಲತೆಗೆ ಕಾರಣವಾದವು. ಆದರೂ ಪೇಶ್ವೆಗಳ ಆಡಳಿತ ಮರಾಠ ಇತಿಹಾಸದಲ್ಲಿ ಮಹತ್ವದ ಅಧ್ಯಾಯವಾಗಿ ಉಳಿದಿದೆ.